May 16, 2021

ಸೂರ್ಯಕುಮಾರಿಯ ಮದುವೆ

ವೇದಗಳಲ್ಲಿ ಬರುವ ಕಥೆಗಳು.
ತಪಸ್ಸಿದ್ದರೆ ಎಲ್ಲಿ ಹೇಗೆ ಬೇಕಿದ್ದರೂ ಮುನ್ನಡೆಯಬಹುದು

"ಸೂರ್ಯಕುಮಾರಿಯ ಮದುವೆ "

ಸರ್ವದೇವತೆಗಳನ್ನು ಪ್ರಜಾಪತಿಯು ಸೃಷ್ಟಿಸಿ,
ಅವರನ್ನೆಲ್ಲ ಪುತ್ರವಾತ್ಸಲ್ಯದಿಂದಲೇ ಕಾಣುತ್ತಿದ್ದನು.ಅವರಲ್ಲಿ ಸೂರ್ಯನ ಮಗಳಾದ ಸೂರ್ಯಕುಮಾರಿಯ ಮೇಲೆ ಅತಿ ಹೆಚ್ಚು ಪ್ರೀತಿಯಿದ್ದು ಅಚ್ಚುಮೆಚ್ಚಿನವಳಾಗಿದ್ದಳು. ಅರೆಗಳಿಗೆಯೂ ಅವಳಿಂದ ಅಗಲುತ್ತಿರಲಿಲ್ಲ.ಅವಳ ಹೆಸರು ಸೂರ್ಯದೇವಿ ಎಂದಿದ್ದರೂ ಕೆಲವರು ಸೂರ್ಯಕುಮಾರಿ,
ಸೂರ್ಯಸಾವಿತ್ರಿ,ಸೀತಾಸಾವಿತ್ರಿ,ಎಂದು ಕರೆಯುತ್ತಿದ್ದರು.
ಸೂರ್ಯನ ಪುತ್ರಿಯಾದುದರಿಂದ ಅವಳ ಮೈಕಾಂತಿಯು ಬಂಗಾರದ ಬಣ್ಣದಿಂದ ಶೋಭಿಸುತ್ತಿತ್ತು.
ಹೀಗೆ ಎಲ್ಲರ ಕಣ್ಮಣಿಯಾಗಿದ್ದವಳು ಬೆಳೆದು ದೊಡ್ಡವಳಾದಾಗ ಮಾತ್ರ ಪ್ರಜಾಪತಿಗೆ "ತೇಜಸ್ವಿನಿಯೂ,ಅಪೂರ್ವ ಸುಂದರಿಯೂ ಆದ ಇವಳಿಗೆ ಯೋಗ್ಯ ಪತಿ ಯಾರು?" ಎಂಬ ಚಿಂತೆಯಾಯಿತು.
ಒಮ್ಮೆ ಅವಳ ದೃಷ್ಟಿಯು ಸೋಮರಾಜನ (ಚಂದ್ರ) ಮೇಲೆ ಬಿದ್ದಿತು.ಬೆಳ್ಳಿಯಂತೆ ಲಕಲಕನೆ ಹೊಳೆಯುವ ಮೈಕಾಂತಿ,ತೇಜಸ್ಸು,ತುಂಬಿ ಉಕ್ಕುತ್ತಿರುವ ಯೌವನದೊಂದಿಗಿನ ಮುಖಕಾಂತಿಯನ್ನು ನೋಡಿ ಚಂದ್ರನಿಗೆ ಮಾರುಹೋಗಿ,ತಾನು ಮದುವೆಯಾಗುವುದಾದರೆ ಚಂದ್ರನೊಂದಿಗೆ ಮಾತ್ರ ಎಂದು ನಿರ್ಧರಿಸಿಯೂ ಬಿಟ್ಟಳು! 
ಅದರೆ ಚಂದ್ರನು ಅದಾಗಲೇ ಪ್ರಜಾಪತಿಯ ಮತ್ತೋರ್ವ ಮಗಳು ಶ್ರದ್ಧೆಯಲ್ಲಿ ಅನುರಕ್ತನಾಗಿ,
ಅವಳನ್ನೇ ವಿವಾಹ ಮಾಡಿಕೊಳ್ಳಬೇಕೆಂದುಕೊಂಡಿದ್ದನು.
ಈ ವಿಚಾರ ಸೂರ್ಯಕುಮಾರಿಗೆ ಗೊತ್ತಿರಲಿಲ್ಲ.
ಅವಳು ಪ್ರಜಾಪತಿಯ ಬಳಿ ದಿಟ್ಟತನದಿಂದ ತನ್ನ ಮನದಿಂಗಿತವನ್ನು
ಹೇಳಿದಳು.
ಆಗ ಮಾತ್ರ ಪ್ರಜಾಪತಿಗೆ ದ್ವಂದ್ವವಾಯಿತು.ಏಕೆಂದರೆ ಚಂದ್ರನು ತನ್ನ ಮಗಳು ಶ್ರದ್ಧೆಯಲ್ಲಿ ಅನುರಕ್ತನಾಗಿರುವ ವಿಷಯ ಅವನಿಗೆ ತಿಳಿದಿತ್ತು.
ಚಂದ್ರನೊಂದಿಗೆ ಇಬ್ಬರನ್ನೂ ಜೊತೆಗಿಟ್ಟಂತೆ ಕಲ್ಪಿಸಿಕೊಂಡು,ಇವರಲ್ಲಿ ಯಾರು ಚಂದ್ರನಿಗೆ ಸೂಕ್ತ ಎಂದು ತುಲನೆ ಮಾಡಿದಾಗ,
"ಸೂರ್ಯಕುಮಾರಿ-ಚಂದ್ರರು ಜೋಡಿಯಾದರೆ ಬಂಗಾರಕ್ಕೆ ಒಪ್ಪ ಹಾಕಿದಂತಾಗುವುದು" ಎನಿಸಿ,ವಿಳಂಬ ಮಾಡದೆ ಕೂಡಲೇ "ಸ್ಥಾಗರ" ಎಂಬ ವನಸ್ಪತಿಯ ಗಂಧವನ್ನು ಮಂತ್ರಿಸಿ ಸೂರ್ಯಕುಮಾರಿಯ ಎರಡೂ ಕಪೋಲಗಳಿಗೆ ಲೇಪಿಸಿದನು.
ಮಂತ್ರಿಸಿದ ಗಂಧಲೇಪನದಿಂದ ಸೂರ್ಯಕುಮಾರಿಯು ನೋಡುವವರಿಗೆ ಅತ್ಯಂತ ಆಕರ್ಷಕವಾಗಿ,
ಮನಮೋಹಕಳಾಗಿ ಕಾಣಿಸುವಂತಾದಳು.

ಒಂದು ದಿನ ಚಂದ್ರನೂ ಅವಳನ್ನು ನೋಡಿ ಮೋಹಗೊಂಡು,ಶ್ರದ್ಧೆಯನ್ನು ಮರೆತು,ಇವಳಲ್ಲಿ ಅನುರಕ್ತನಾಗಿ,ಪ್ರೀತಿಯಿಂದ ಮಾತನಾಡತೊಡಗಿದನು.ಚಂದ್ರನಲ್ಲಾದ ಬದಲಾವಣೆಯನ್ನು ಕಂಡು ಅವಳಿಗೆ ಬಹಳ ಸಂತಸವಾಯಿತು.
ಒಮ್ಮೆ ಹಿಗೆಯೇ ಮಾತನಾಡುತ್ತಿದ್ದಾಗ ಅವಳ ದೃಷ್ಟಿಯು ಚಂದ್ರನ ಮುಚ್ಚಿದ್ದ ಮುಷ್ಟಿಯ ಕಡೆಗೆ ಹೋಗಿ,ಸ್ತ್ರೀ ಸಹಜ ಚಾಂಚಲ್ಯದಿಂದ "ಪ್ರಿಯ! ಆ ನಿನ್ನ ಮುಷ್ಟಿಯೊಳಗೆ ಏನಿದೆ? ಅದೇಕೆ ಅದನ್ನು ಅಷ್ಟು ಭದ್ರವಾಗಿ ಮುಚ್ಚಿಕೊಂಡಿರುವೆ? ತೋರಿಸು" ಎಂದಳು.

ಚಂದ್ರನು ಸೂರ್ಯಕುಮಾರಿಯ ಮಾತಿಗೆ,"ಮುಷ್ಟಿಯೊಳಗಿರುವುದನ್ನು ಬಿಚ್ಚಿ ತೋರಿಸಲು ಸಾಧ್ಯವಿಲ್ಲ" ಎಂದು ಹೇಳಿಬಿಟ್ಟನು.
ಅವನ ಮಾತು ಕೇಳಿ ಅವಳಿಗೆ ತುಂಬ ಸಿಟ್ಟು ಬಂದಿತು.ಅವಳು ಅಚ್ಛೆಯಿಂದ ಬೆಳೆದವಳು.ಈವರೆಗೆ ಯಾರೂ ಹೀಗೆ ನಿಷ್ಠುರವಾದ ಉತ್ತರ ಕೊಟ್ಟಿರಲಿಲ್ಲ.ಅವಳಿಗದು ಅವಮಾನವೆನಿಸಿತು.
ಮುಂದೇನೂ ವಿಚಾರ ಮಾಡದೆ,"ನಿನ್ನ ಮುಷ್ಟಿಯಲ್ಲಿದ್ದುದನ್ನು ತೋರಿಸಿ ನನಗೆ ಕೊಡದ ಹೊರತು ನಾನು ನಿನ್ನನ್ನು ಮದುವೆಯಾಗುವುದಿಲ್ಲ" ಎಂದುಬಿಟ್ಟಳು.
ಅವಳ ಮಾತು ಕೇಳಿ ಚಂದ್ರನಿಗೆ ದಿಕ್ಕೇ ತೋಚದಂತಾಗಿ,ಅವಳನ್ನು ಕಳೆದುಕೊಳ್ಳಲು ಇಚ್ಚಿಸದೆ,
ಭದ್ರಮುಷ್ಟಿಯನ್ನು ಬಿಚ್ಚಿ  ತೋರಿಸಿ,ಅದರೊಳಗಿದ್ದುದನ್ನು ಕೊಟ್ಟನು.
ಮುಷ್ಟಿಯೊಳಗೆ ಋಗ್ವೇದ,ಯಜುರ್ವೇದ,
ಸಾಮವೇದಗಳಿದ್ದವು.
ವೇದಗಳನ್ನು ಪಡೆದು ಅವಳು ಸೂರ್ಯಸಾವಿತ್ರಿ,
ವೇದಮಂತ್ರಗಳ ದೇವತೆಯೂ ಆದಳು.
ನಂತರ ಅವಳು ಸ್ವತಃ ರಚಿಸಿದ ಮಂತ್ರಗಳಲ್ಲಿ,ತನ್ನ ಮದುವೆಯನ್ನು ವರ್ಣಿಸಿದ್ದು,ಆ ಮಂತ್ರಗಳನ್ನು ಈಗಲೂ ವಿವಾಹ ವಿಧಿಯಲ್ಲಿ ಉಚ್ಚರಿಸಲ್ಪಡುತ್ತಿವೆ.

ಸೂರ್ಯಕುಮಾರಿಯು ವೇದಗಳನ್ನು ಪಡೆದಮೇಲೆ ಚಂದ್ರನೊಂದಿಗೆ ಮದುವೆಯಾಗಲು ಒಪ್ಪಿದಳು.ಅವರ ಲಗ್ನದ ಸಿದ್ಧತೆಯಾಗಿ,ಎಲ್ಲ ದೇವತೆಗಳೂ ಆಗಮಿಸಿದರು.ಶುಭ ಮುಹೂರ್ತದಲ್ಲಿ ವಿವಾಹ ನೆರವೇರಿ,ಚಂದ್ರನೊಂದಿಗೆ ಇರಲು ರಥವೇರಿ ಪತಿಗೃಹಕ್ಕೆ ಹೊರಟಳು.
ಮಾರ್ಗ ಮಧ್ಯದಲ್ಲಿ ವಿಶ್ವಾವಸು ಎಂಬ ಗಂಧರ್ವನು ಅವಳನ್ನು ನಿಲ್ಲಿಸಿ,"ಹೇ ಸುಂದರೀ! ನಾನು ನಿನ್ನಲ್ಲಿ ಮೋಹಿತನಾಗಿದ್ದೇನೆ.
ಕೃಪೆದೋರಿ ನನ್ನನ್ನು ಮದುವೆಯಾಗು" ಎಂದು ಕೇಳಿದನು.
"ಹೇ ವಿಶ್ವಾವಸು! ನನ್ನ ಮದುವೆ ಈಗಾಗಲೇ ಚಂದ್ರನೊಂದಿಗೆ ಆಗಿದೆ.ಪತಿಗೃಹಕ್ಕೆ ಹೊರಟಿದ್ದೇನೆ.
ವಿವಾಹಿತಳಾದ ನಾನು ನಿನ್ನನ್ನು ಹೇಗೆ ವರಿಸಲಿ?ನನ್ನನ್ನು ಹೋಗಗೊಡು" ಎಂದು ಪ್ರಾರ್ಥಿಸಿದಳು.
ವೀಶ್ವಾವಸುವು ಅವಳು ವಿವಾಹಿತೆ ಎಂದು ತಿಳಿದಮೇಲೆ ಶುಭಕೋರಿ ಹೋಗಲುಬಿಟ್ಟನು.
ಸೂರ್ಯಕುಮಾರಿಯು ಪತಿಗೃಹ ಸೇರಿ ಚಂದ್ರನೊಂದಿಗೆ ಸುಖವಾಗಿದ್ದಳು.

No comments:

Post a Comment

If you have any doubts. please let me know...