May 6, 2021

ತದ್ವಿಷ್ಣೋಃ ಪರಮಂಪದಂ __ಮೇಧಾತಿಥಿ

ತದ್ವಿಷ್ಣೋಃ ಪರಮಂಪದಂ 

ಮೇಧಾತಿಥಿ ಎನ್ನುವ ಋಷಿ ಕಣ್ವ ಮಹರ್ಷಿಯ ಮಗ ಎನ್ನುವುದು ಅನೇಕ ಸೂಕ್ತಗಳಿಂದ ತಿಳಿದು ಬರುತ್ತದೆ. ಈ ಋಷಿಯು ದೃಷ್ಟಾರನಾಗಿರುವ ಈ ಒಂದು ಸೂಕ್ತದಲ್ಲಿ ಅಶ್ವಿನೀ ದೇವತೆಗಳಿಂದ ಹಿಡಿದು ಅನೇಕ ದೇವತೆಗಳನ್ನು ಸ್ತುತಿಸುವುದು ಕಂಡು ಬರುತ್ತದೆ. ಅಂತಹ ಒಂದು ದೇವತೆಯ ಕುರಿತು ಮಾತ್ರ ನಾನಿಲ್ಲಿ ಬರೆಯುತ್ತಿದ್ದೇನೆ. 
’ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ’
ಈ ಋಕ್ಕಿನಲ್ಲಿ ವಿಷ್ಣುವಿನ ವಿಷಯವು ಮೊದಲಬಾರಿಗೆ ಉಲ್ಲೇಖವಾಗಿದೆ. ವಿಷ್ಣುವಿನ ವಿಷಯವಾಗಿ ಪುರಾಣಗಳಲ್ಲಿ ಮತ್ತು ವೇದಾಂತಗಳಲ್ಲಿ ವಿಶೇಷವಾಗಿದ್ದರೂ ಸಹ ಋಗ್ವೇದದಲ್ಲಿ ವಿಷ್ಣು ಪರವಾದ ಸೂಕ್ತಗಳು ಕೇವಲ ಐದು ಮಾತ್ರ ಇವೆ. ಇದಲ್ಲದೆ ಅನೇಕ ಕಡೆ ಇತರ ದೇವತೆಗಳೊಡನೆ ಮುಖ್ಯವಾಗಿ ಇಂದ್ರನೊಡನೆ ವಿಷ್ಣುವಿನ ಹೆಸರು ಅಲ್ಲಲ್ಲಿ ಪ್ರಸ್ತಾಪವಾಗಿದೆ. ವಿಷ್ಣುವಿನ ಮುಖ್ಯ ಪರಾಕ್ರಮವು ಮೂರು ಪದಗಳಿಂದ ಸ್ವರ್ಗ ಅಂತರಿಕ್ಷ ಭೂಮಿಗಳಲ್ಲಿ ಇರುವವು ಎನ್ನಲಾಗುತ್ತದೆ. ಇದಲ್ಲದೆ ವಿಷ್ಣುವಿನ ಪರಮಪದವೆಂಬ ಸ್ಥಾನವು ಅತ್ಯಂತ ಶ್ರೇಷ್ಠವೆಂದು ಹೇಳಲ್ಪಟ್ಟಿದೆ.

ಋಗ್ವೇದದಲ್ಲಿ ಇತರ ದೇವತೆಗಳಿಗಿಂತ ಇಂದ್ರನೊಡನೆ ವಿಷ್ಣುವಿನ ಒಡನಾಟ ಹೆಚ್ಚು. ಇಂದ್ರನು ವೃತ್ರ ಸಂಹಾರ ಕಾಲದಲ್ಲಿ ವಿಷ್ಣುವಿನ ಸಹಾಯವನ್ನು ಅಪೇಕ್ಷಿಸುತ್ತಾನೆ. ಯಜುರ್ವೇದದಲ್ಲಿ ವಿಷ್ಣುವಿನ ವಿಷಯವು ನಾನಾ ರೀತಿಯಲ್ಲಿ ವರ್ಣಿತವಾಗಿದೆ. ವಿಷ್ಣುವು ಯಜ್ಞಕ್ಕೂ ಮತ್ತು ಪರ್ವತಗಳಿಗೂ ಸಮಾನ ಅಧಿಪತಿಯೆಂದೂ, ಯಜ್ಞಸ್ವರೂಪ, ದೇವತೆಗಳಿಗೆಲ್ಲಾ ಮುಂದಾಳೆಂದೂ ವಿವರಿಸುವ ಅನೇಕ ಮಂತ್ರಗಳಿವೆ. 
ವಿಷ್ಣು ಅಥ ಯದ್ವಿತೋ ಭವತಿ ತದ್ವಿಷ್ಣುರ್ಭವತಿ, ವಿಷ್ಣುರ್ವಿಶತೇರ್ವಾ ವ್ಯತ್ಯೋತೇರ್ನಾ | ಎಲ್ಲವನ್ನೂ ವ್ಯಾಪಿಸಿರುವುದರಿಂದ ಅಥವಾ ಎಲ್ಲವನ್ನೂ ಪ್ರವೇಶಿಸಿ ವ್ಯಾಪಿಸುವುದರಿಂದ ಅಥವಾ ತನ್ನ ರಶ್ಮಿಗಳಿಂದ ಸರ್ವವನ್ನೂ ವ್ಯಾಪಿಸಿರುವವನಾದ್ದರಿಂದ ವಿಷ್ಣುವೆಂದು ಹೆಸರು. ಆದುದರಿಂದ ವಿಷ್ಣುವೆಂದರೆ ಆದಿತ್ಯನೆಂದೂ ಹೇಳಬಹುದು ಎಂದು ವಿಷ್ಣು ಶಬ್ದದ ವಿವರಣೆ. ಅಂದರೆ ಸೂರ್ಯನನ್ನು ವಿಷ್ಣು ಎಂದು ಸಹ ಕರೆಯಲಾಗಿದೆ ಎಂದು ತಿಳಿದಂತಾಯಿತು. 

ಇದಂ ವಿಷ್ಣುರ್ವಿ ಚಕ್ರಮೇ ತ್ರೇಧಾ ನಿ ದಧೇ ಪದಂ | ಸಮೂಳಮಸ್ಯ ಪಾಂಸುರೇ || 
ಈ ಋಕ್ಕಿಗೆ ಉದಾಹರಣೆಯಾಗಿ ಪುರಾಣದ ದೃಷ್ಟಾಂತವನ್ನು ತೆಗೆದುಕೊಳ್ಳುವೆ. ಅಲ್ಲಿ ಬಲಿ ಚಕ್ರವರ್ತಿಯ ಕಥೆ ಬರುತ್ತದೆ. 
ಪ್ರಹ್ಲಾದನಿಗೆ ವಿರೋಚನ ಎನ್ನುವ ಮಗನಿದ್ದ. ಆತನ ಮಗನೇ ಬಲಿ ಎಂದು ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ. ಬಲಿ ಇಂದ್ರನಿಂದ ಕೊಲ್ಲಲ್ಪಟ್ಟು, ಮರಳಿ ಶುಕ್ರಾಚಾರ್ಯರ ಮೃತಸಂಜೀವಿನೀ ಪ್ರಭಾವದಿಂದ ಬದುಕಿ ವಿಶ್ವಜಿತ್ತೆಂಬ ಯಾಗವನ್ನು ಮಾಡುತ್ತಾನೆ, ಅಗ್ನಿಯ ಮೂಲಕ ರಥ, ಅಶ್ವ, ಧ್ವಜಗಳನ್ನೂ, ತನ್ನ ಅಜ್ಜನಾದ ಪ್ರಹ್ಲಾದನಿಂದ ದಿವ್ಯಧನುಸ್ಸಾದ ಅಕ್ಷಯತೂಣೀರಗಳನ್ನೂ ಪಡೆದು ಇಂದ್ರನ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿ, ಸ್ವರ್ಗವನ್ನು ವಶಪಡಿಸಿಕೊಂಡ ಎಂದು ಭಾಗವತದ ಎಂಟನೇ ಸ್ಕಂದದಲ್ಲಿ ಬರುತ್ತದೆ. ನರ್ಮದಾ ತೀರದಲ್ಲಿ ಬಲಿ ಅಶ್ವಮೇಧ ಯಾಗ ಮಾಡುತ್ತಾನೆ. ಈ ವಿಷಯ ದೇವತೆಗಳಿಗೆ ತಿಳಿದು, ದೇವತೆಗಳ ಮೊರೆಯನ್ನು ಕೇಳಿ ವಿಷ್ಣು ಅದಿತಿ ದೇವಿಯಲ್ಲಿ ವಾಮನರೂಪದಿಂದ ಅವತರಿಸಿ ಉಪನಯನಾನಂತರ ಬಲಿ ಚಕ್ರವರ್ತಿಯ ಬಳಿಗೆ ಬಂದ. ಬಲಿ ಚಕ್ರವರ್ತಿ ವಾಮನನನ್ನು ಆದರದಿಂದ ಬರಮಾಡಿಕೊಂಡು ಪೂಜಿಸಿದಾಗ, ಬಲಿ ದಾನವಾಗಿ ಏನು ಬೇಕು ಎಂದು ಕೇಳಿದಾಗ ವಾಮನ ಬಲಿಯಲ್ಲಿ ಮೂರಡಿ ಭೂಮಿಯನ್ನು ಕೇಳುತ್ತಾನೆ, ಆಗ ಶುಕ್ರಾಚಾರ್ಯ ಕೊಡಬೇಡವೆಂದು ಪರಿಪರಿಯಾಗಿ ಕೇಳಿಕೊಂಡರೂ ದಾನ ಕೊಡುತ್ತಾನೆ. ದಾನವನ್ನು ಪಡೆದ ವಾಮನ ಭೂಮ್ಯಂತರಿಕ್ಷಗಳನ್ನು ಎರಡು ಅಡಿಗಳಿಂದ ಅಳೆದು ಮೂರನೆಯ ಅಡಿಯನ್ನು ಬಲಿಯ ತಲೆಯಮೇಲಿಟ್ಟು ಆತನನ್ನು ಪಾತಾಳಕ್ಕೆ ಮೆಟ್ಟುತ್ತಾನೆ ಎಂದು ಭಾಗವತದಲ್ಲಿ ಬರುತ್ತದೆ. 

ಬಲಿ ಚಕ್ರವರ್ತಿಗೆ ಕೋಟರೆಯೆಂಬ ಮತ್ತೊಬ್ಬ ಹೆಂಡತಿಯಿದ್ದಳು. ಈತನಿಗೆ ಬಾಣ, ಧೃತರಾಷ್ಟ್ರ, ಸೂರ್ಯ, ಚಂದ್ರ, ಚಂದ್ರಾಂಶು ತಾಪನ, ನಿಕುಂಭನಾಭ, ಗುರ್ವಕ್ಷ, ಕುಕ್ಷಿ, ಭೀಮ, ವಿಭೀಷಣ ಮೊದಲಾದ ಅನೇಕ ಮಂದಿ ಮಕ್ಕಳಿದ್ದರು. ವಿಷ್ಣು ಬಲಿಯನ್ನು ರಸಾತಲಕ್ಕೆ ಕಳಿಸುವಾಗ ಬಲಿ ಖಿನ್ನನಾಗುತ್ತಾನೆ. ಖಿನ್ನನಾದ ಬಲಿಯನ್ನು ಕಂಡು “ಶ್ರೋತ್ರಿಯನಿಲ್ಲದ ಶ್ರಾದ್ಧ, ಶ್ರದ್ದೆಯಿಲ್ಲದ ದಾನ, ವಿಧಿಹೀನವಾದ ಯಜ್ಞ, ಶೌಚವಿಲ್ಲದ ದೇವ ಬ್ರಾಹ್ಮಣ ಪೂಜಾವ್ರತಗಳು, ಗುರುಭಕ್ತಿಯಿಲ್ಲದೆ ಮಾಡಿದ ಕರ್ಮ, ಈ ಐದು ವಿಧದಿಂದಲೂ ಬರತಕ್ಕ ಪುಣ್ಯಾಂಶ ಆಯಾ ಕಾರ್ಯಗಳನ್ನು ಮಾಡಿದವರಿಗೆ ಸಲ್ಲುವುದಿಲ್ಲ. ಆ ಫಲ ಸಂಪೂರ್ಣವಾಗಿ ನಿನಗೇ ಸಲ್ಲುವುದು ಎಂಬುದಾಗಿ ಬಲಿ ಚಕ್ರವರ್ತಿಗೆ ವರವನ್ನಿತ್ತ ಎನ್ನುವುದಾಗಿ ದೇವಿಭಾಗವತದಲ್ಲಿ ಬರುತ್ತದೆ. ಇನ್ನು ಬೇರೊಂದು ದೃಷ್ಟಿಯಿಂದ ಇದೇ ಕಥೆ :

ಪುರಾಣಗಳಲ್ಲಿ ಹೇಳಿರುವ ಕಥೆಯಂತೆ, ಬಲಿಚಕ್ರವರ್ತಿಯೆಂಬ ಅಸುರನು ದೇವತೆಗಳನ್ನು ಗೆದ್ದು ರಾಜ್ಯಭಾರ ಮಾಡುತ್ತಿರುವಾಗ ಸೋತುಹೋದ ದೇವತೆಗಳು ವಿಷ್ಣುವಿನಲ್ಲಿ ಮೊರೆಯಿಡಲು ವಿಷ್ಣುವು ಅವರನ್ನು ಸಂರಕ್ಷಿಸುವುದಕ್ಕಾಗಿ ವಾಮನಾವತಾರವನ್ನು ಮಾಡಿ ಬಲಿಚಕ್ರವರ್ತಿಯು ಯಾಗದೀಕ್ಷೆಯನ್ನು ಕೈಗೊಂಡಿರುವಾಗ ಅವನಲ್ಲಿಗೆ ಹೋಗಿ ತನಗೆ ಮೂರು ಪಾದದಷ್ಟು ಭೂಮಿಯನ್ನು ಕೊಡಬೇಕೆಂದು ಕೇಳಲು ಅದಕ್ಕೆ ಬಲಿಯು ಸಮ್ಮತಿಸಿ ಅದರಂತೆ ಕೊಡುವೆನೆಂದು ಹೇಳಿದನು. ಬಳಿಕ ವಾಮನಾವತಾರಿಯಾದ ವಿಷ್ಣುವು ತ್ರಿವಿಕ್ರಮಾವತಾರವನ್ನು ತಾಳಿ ಎಂದರೆ ಭೂಮ್ಯಂತರಿಕ್ಷಗಳೆಲ್ಲಾ ವ್ಯಾಪಿಸುವಂತೆ ಬೃಹದಾಕಾರವನ್ನು ತಾಳಿ ಒಂದು ಪಾದದಿಂದ ಭೂಮಿಯೆಲ್ಲವನ್ನೂ ಮತ್ತೊಂದು ಪಾದದಿಂದ ಅಂತರಿಕ್ಷವನ್ನೂ ಆಕ್ರಮಿಸಿ ಮೂರನೇ ಪಾದವನ್ನು ಎಲ್ಲಿಡಲೆಂದು ಬಲಿಯನ್ನು ಕೇಳಲು ಆ ರಾಜನು ಸತ್ಯಸಂಧನಾದುದರಿಂದ ಮೂರನೇ ಪಾದವನ್ನು ಬೇರೆ ಸ್ಥಳವಿಲ್ಲದ್ದರಿಂದ ತನ್ನ ತಲೆಯ ಮೇಲೆ ಇಟ್ಟು ಅನುಗ್ರಹಿಸಬೇಕೆಂದು ಪ್ರಾರ್ಥಿಸಲು ಅದರಂತೆ ತ್ರಿವಿಕ್ರಮನು ತನ್ನ ಮೂರನೆಯ ಪಾದವನ್ನು ಬಲಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಲೋಕಕ್ಕೆ ಹೋಗಿ ಅಲ್ಲಿ ರಾಜ್ಯಭಾರ ಮಾಡುತ್ತಾ ಸುಖದಿಂದಿರುವಂತೆ ಮಾಡಿ ಅವನಿಗೆ ಬೇಕಾದ ವರವನ್ನು ಕೊಟ್ಟನೆಂದು ವಿಸ್ತಾರವಾದ ವರ್ಣನೆ ಬರುತ್ತದೆ.
ಈ ಋಕ್ಕಿನಲ್ಲಿ ವಿಷ್ಣುವು ತ್ರಿವಿಕ್ರಮಾವತಾರ ಮಾಡಿ ಈ ಜಗತ್ತನ್ನು ಮೂರು ವಿಧವಾದ ಪಾದಗಳನ್ನಿಟ್ಟು ಆಕ್ರಮಿಸಿದನು. ಆ ವಿಷ್ಣುವಿನ ಧೂಲಿಯುಕ್ತವಾದ ಪಾದಸ್ಥಾನದಲ್ಲಿ ಈ ಜಗತ್ತು ಮುಚ್ಚಿ ಹೋಗಿ ಕಾಣದಾಂತಾಯಿತು ಎನ್ನುವಲ್ಲಿನ ವಿವರಣೆಗೆ ಇದಂ ವಿಷ್ಣೋರ್ವಿಚಕ್ರಮೇ ಎನ್ನಲಾಗಿದೆ. ವಿಷ್ಣು ಈ ಜಗತ್ತನ್ನು ಮೂರು ವಿಧವಾಗಿ ವಿಭಾಗಿಸಲು ಮೂರು ಪಾದಗಳನ್ನಿಟ್ಟು ಭೂಮಿ ಅಂತರಿಕ್ಷ ಮತ್ತು ಸ್ವರ್ಗ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ’ತ್ರೇಧಾ’ ಎನ್ನುವುದು ಭೂಮಿಯಲ್ಲಿ ರಶ್ಮಿಗಳ ಮೂಲಕವೂ, ಅಂತರಿಕ್ಷದಲ್ಲಿ ವಿದ್ಯತಾಗ್ನಿಯಿಂದಲೂ ಮತ್ತು ಸ್ವರ್ಗದಲ್ಲಿ ಸೂರ್ಯಮಂಡಲದಿಂದಲೂ ಮಹಾ ವಿಷ್ಣು ಪ್ರಕಟವಾಗುತ್ತಾನೆ.

ತದ್ವಿಷ್ಣೋಃ ಪರಮಂಪದಂ ಸದಾ ಪಶ್ಯಂತಿ ಸೂರಯಃ |
ದಿವೀವ ಚಕ್ಷುರಾತತಂ ಎಂದು ಹೇಳಲಾಗಿದೆ. 
ಸೂರಯಃ ಎಂದು ಹೇಳುವಲ್ಲಿ ಪ್ರಾಜ್ಞರಾದವರು ಅಥವಾ ವಿದ್ವಾಂಸ ಜನರು ಮಹಾವಿಷ್ಣುವಿನ ಕುರಿತಾಗಿ ಹೇಳುವಾಗ, ವಿಸ್ತಾರವಾದ ಆಕಾಶದಲ್ಲಿ ನೆಟ್ಟ ದೃಷ್ಟಿಯು ಹೇಗೆ ವಿಸ್ತಾರವಾಗಿ ಎಲ್ಲವನ್ನೂ ನೋಡುವಂತೆ ವಿದ್ವಾಂಸರಾದ ಜನರು ವಿಷ್ಣುಪದ ಎನ್ನುವ ಸ್ವರ್ಗಲೋಕ ಅಥವಾ ವೈಕುಂಠವನ್ನು ಯಾವಾಗಲೂ ನೋಡುತ್ತಿರುತ್ತಾರೆ ಎನ್ನುವುದನ್ನು ಹೇಳಲಾಗಿದೆ. ಅಂದರೆ ಮಹಾವಿಷ್ಣುವು ಮೂರುಲೋಕಗಳನ್ನು ವ್ಯಾಪಿಸಿ ಜಗತ್ತಿನ ರಕ್ಷಣೆಯಲ್ಲಿ ಪ್ರಮುಖ ದೇವನಾಗಿದ್ದಾನೆ ಅದನ್ನು ಅರಿತು ಕೊಳ್ಳುವವರು ಸೂರಿಗಳು ಅಥವಾ ಸೂರಯಃ ಎಂದಿರುವುದು.
ತದ್ವಿಪ್ರಾಸೋ ವಿಪನ್ಯವೋ ಜಾಗೃವಾಂಸಃ ಸಮಿಂಧತೇ | ವಿಷ್ಣೋರ್ಯತ್ಪರಮಂ ಪದಂ || ೨ ||
ಇಲ್ಲಿ ವಿಪ್ರಾಸಃ ಎಂದು ಬಂದಿರುವುದು ಬುದ್ಧಿವಂತರಾದ ಜನರನ್ನು ಕುರಿತಾಗಿ, ವೀವೇಕವನ್ನು ಹೊಂದಿರುವ ಜ್ಞಾನವಂತರಾದ ಜನರು ವಿಷ್ಣುವಿನ ಶ್ರೇಷ್ಠವಾದ ಸ್ಥಾನವನ್ನು ಸ್ತೋತ್ರಗಳಿಂದ ಸ್ತುತಿಸುತ್ತಾರೆ ಎನ್ನುವ ಅರ್ಥವನ್ನು ಈ ಋಕ್ಕು ಕೊಡುತ್ತದೆ. ಜಾಗೃವಾಂಸಃ ಎಂದರೆ ಜಾಗರೂಕರು, ಎಚ್ಚರಿಕೆಯಿಂದ ಇರುವವರು ಎನ್ನುವ ಅರ್ಥವನ್ನು ಧ್ವನಿಸುತ್ತದೆ.

ಉತ್ಕೃಷ್ಟವಾದ ಸ್ಥಾನವನ್ನು ಕುರಿತಾಗಿ ಹೇಳುವಾಗ ಪರಮಂ ಪದಂ ಎನ್ನಲಾಗಿದೆ. ವಿಷ್ಣುಪದವನ್ನು ಸಾಯಣಾಚಾರ್ಯರು ಸ್ವರ್ಗವೆಂದು ಅರ್ಥ ಮಾಡಿರುವರು. ಇನ್ನು ಕೆಲವರು ಪುರಾಣಗಳಲ್ಲಿ ವಿಷ್ಣುವಿನ ಪರಮಪದವೆಂದರೆ ವೈಕುಂಠಲೋಕವೆಂದು ಅಭಿಪ್ರಾಯ ಪಡುವರು. ಆದರೆ ಪುರಾಣ ಪ್ರಸಿದ್ಧವಾದ ಆ ಅರ್ಥವು ಇಲ್ಲಿ ಸರಿ ಬರುವುದಿಲ್ಲ. ಇಲ್ಲಿ ವಿಷ್ಣುಪದವೆಂದರೆ ಭೂಮಿ ಸ್ವರ್ಗ ಮತ್ತು ಅಂತರಿಕ್ಷ ಸೇರಿದ ತ್ರಿಲೋಕ ಅಥವಾ ತ್ರಿವಿಕ್ರಮ ಲೋಕ. ಅದಕ್ಕಾಗಿಯೇ ವಿಷ್ಣು ವಾಮನನಾಗಿ ಬೃಹದಾಕಾರ ತ್ರಿವಿಕ್ರಮನಾಗಿದ್ದು. ಆತನ ಅದೃಶ್ಯವೂ ತ್ರಿವಿಕ್ರಮದಲ್ಲಿಯೇ ಆಗಿದ್ದು ಅಂದರೆ ಮೂರೂ ಲೋಕವನ್ನು ಒಂದು ಅಗಾಧ ಶಕ್ತಿ ಸೆಳೆದುಕೊಂಡ ತತ್ವ ಇಲ್ಲಿದೆ. 

#ಇದಂ_ವಿಷ್ಣುರ್ವಿ_ಚಕ್ರಮೇ

No comments:

Post a Comment

If you have any doubts. please let me know...