May 5, 2021

ಯಥಾಪರಾಧ ದಂಡಾನಾಂ...

#ಶಿಕ್ಷೆಯ_ಜೊತೆ_ದಂಡವೂ_ನ್ಯಾಯವೇ

ಈ ಕೋವಿಡ್ ಹಾವಳಿಯ ಕಾಲದಲ್ಲಿ  ಮುಖಕ್ಕೆ ಮಾಸ್ಕ್ ಹಾಕದೇ ಉಢಾಫೆ ಮಾಡಿ ದಂಡ ಕಟ್ಟಿಸಿಕೊಂಡದ್ದಕ್ಕೆ ಈ ಹಿಂದೆ ವಾರ್ತಾ ವಾಚಕರೊಬ್ಬರು ಅವರದ್ದೇ ವ್ಯಾಖ್ಯಾನ ಕೊಡುತ್ತಿದ್ದರು. ದಂಡದ ಮಿತಿ ಜಾಸ್ತಿ ಆಯ್ತು. ದಂಡಕಟ್ಟಿಸಿಕೊಂಡ ಮೇಲೆ ರಶೀದಿ ಹಿಡಿದುಕೊಂಡು ಹೋದರೆ ಕೋವಿಡ್ ಬರಲ್ವಾ ಇತ್ಯಾದಿಗಳನ್ನು ಜನರು ಕೇಳುತ್ತಾರೆ ಎಂದು ಹೇಳುತ್ತಾ ತಮ್ಮ ಅಭಿಪ್ರಾಯ ಕೊಡುತ್ತಾ, ದುಬಾರಿ ದಂಡ ವಸೂಲಿ ಮಾಡಿದ ನಂತರ ಒಂದು ಮಾಸ್ಕನ್ನಾದರೂ ಕೊಡಬೇಕಾಗಿತ್ತು ಎನ್ನುವುದು ಅವರ ಅಭಿಪ್ರಾಯ. ಆಗ ಅವರ ಮಾತು ಬಾಲಿಶ ಅನ್ನಿಸಿತು. ನ್ಯಾಯಾಲಯದಲ್ಲಿ ತೀರ್ಪು ಕೊಡುವಾಗ ಅಪರಾಧಿಗಳಿಗೆ ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲಾಗುತ್ತದೆ. ಆದರೆ ದಂಡ ಕಟ್ಟಲಿಕ್ಕಾಗದಿದ್ದರೆ ಹೆಚ್ಚುವರಿ ಶಿಕ್ಷೆಯ ಆಜ್ಞೆಯಾಗುತ್ತದೆಯೇ ಹೊರತು ಉಡುಗೊರೆ ಕೊಟ್ಟು ಕಳಿಸುವುದಿಲ್ಲ. ಈಗ ಟಿ ವಿ ವಾರ್ತೆಗಳನ್ನು ನೋಡುತ್ತಿದ್ದರೆ ತಮಗೇ ಸಂಪೂರ್ಣ ದೇಶದ ಜವಾಬ್ದಾರಿಯೋ ಅಧಿಕಾರವನ್ನೋ ಕೊಟ್ಟ ರೀತಿ ವರ್ತಿಸುವುದು ಕಾಣುತ್ತದೆ. ಇರಬೇಕಾದದ್ದು ಕಾಳಜಿಯೇ ಹೊರತು ದರ್ಪವೂ ಅಲ್ಲ ನ್ಯಾಯದಾನವೂ ಅಲ್ಲ. ಈ ಭಾವಕ್ಕಾಗಿ ನನ್ನ ಮನಸ್ಸಿನ ಬರಹ ಇದು. 

ದಂಡ ಎನ್ನುವುದಕ್ಕೆ ಅನೇಕ ಅರ್ಥಗಳಿವೆ. ’ಯಥಾಪರಾಧ ದಂಡಾನಾಂ’ ಎಂದು ಅನೇಕ ಕಡೆಗಳಲ್ಲಿ ಉಪಯೋಗವಾಗಿದೆ. ಅಂದರೆ ಸಾಮಾನ್ಯವಾಗಿ ಈ ಪದ ಬಳಕೆ ಬರುವುದು ನ್ಯಾಯ ಕೊಡುವ ಸಂದರ್ಭಗಳಲ್ಲಿ. ರಾಜನಾದವ ತನ್ನ ಆಸ್ಥಾನದಲ್ಲಿ ನ್ಯಾಯ ವಿವೇಚನೆ ಮಾಡುತ್ತಿದ್ದಾಗ ಹೇಗೆ ಅಪರಾಧ ಎಸಗುತ್ತಿದ್ದರೋ ಅದಕ್ಕೆ ಸರಿಯಾದ ದಂಡವಿಧಿಸುತ್ತಿದ್ದರು. ಅಪರಾಧಿಯ ಅಪರಾಧದ ತೀವ್ರತೆಯನ್ನು ಗಮನಿಸಿ ವಿಧಿಸುತ್ತಿದ್ದ ಶಿಕ್ಷೆಯೂ ದಂಡವೇ. 

ಸಾಮಾನ್ಯವಾಗಿ ದಂಡ ಪ್ರಕ್ರಿಯೆ ಇರುವುದು ನ್ಯಾಯಸ್ಥಾನದಲ್ಲಿ ಕ್ರಿಮಿನಲ್ ಮೊಕದ್ದಮೆಗಳಿಗೆ ಹೊರತು ಸಿವಿಲ್‌ನಲ್ಲಿ ಅಲ್ಲ. ಆದುದರಿಂದ ದಂಡ ಪ್ರಕ್ರಿಯೆಯೂ ಕ್ರಿಮಿನಲ್ ಅಪರಾಧಗಳಿಗೆ ಹಾಕಲ್ಪಡುತ್ತದೆ. ’ದಂಡಂ ದಂಡ್ಯೇಷು ಪಾತಯೇತ್’ ಎಂದು ಮನುಸ್ಮೃತಿಯಲ್ಲಿ ಹೇಳಿದೆ. ಅಂದರೆ ಶಿಕ್ಷೆಯ ಜೊತೆ ಜೊತೆಗೆ ದಂಡವನ್ನು ಸಹ ವಿಧಿಸಬೇಕು ಎಂದು. ’ದಂಡೀಂ ಪ್ರಶಂಸಂತಿ ನಿತ್ಯಂ ರಾಷ್ಟ್ರಾಭಿವೃದ್ಧಯೇ’ ಎಂದು ಮನುಸ್ಮೃತಿಯಲ್ಲಿ ಹೇಳಿರುವುದು ನ್ಯಾಯದಾನವನ್ನು ಮಾಡಿ ದಂಡ ವಿಧಿಸುವ ದಂಡಿಯು ರಾಷ್ಟ್ರದ ಅಭಿವೃದ್ಧಿಗೂ ಅವಶ್ಯವೆನ್ನಿಸುವುದರಿಂದ ಸದಾಕಾಲ ನ್ಯಾಯಾಧೀಶರನ್ನು ನಾವು ಸ್ತುತಿಸಬೇಕು ಎನ್ನುವುದು ಚಾಣಕ್ಯನ ನೀತಿಯನ್ನು ನೆನಪಿಸುತ್ತದೆ. ಅಂದರೆ ರಾಜ್ಯದ ಕೋಶವು ತುಂಬಿದ್ದು ರಾಜ್ಯದಲ್ಲಿ ಸುಭಿಕ್ಷೆ ನೆಲೆಸುವುದು ದಂಡದ ಸಂಗ್ರಹದಿಂದ ಎನ್ನುವುದನ್ನೇ ’ಕೋಶಮೂಲೋ ದಂಡಃ’ ಎಂದಿರುವುದು.

ಇನ್ನು ರಾಜ ಅಥವಾ ನ್ಯಾಯಾಧೀಶರು ಅಪರಾಧಿಗಳಿಗೆ ದಂಡ ವಿಧಿಸಬಹುದಂತೆ ಆದರೆ ಸೈನಿಕರಿಗೆ ? ಸೈನಿಕರು ದೇಶರಕ್ಷಣೆ ಮಾಡುವವರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ದೇಶ ರಕ್ಷಣೆಗೆ ಒದಗುವವರು. ಅದಕ್ಕಾಗಿಯೇ ’ತಸ್ಯ ದಂಡವತೋ ದಂಡಃ ಸ್ವದೇಹಾನ್ನ ವ್ಯಶಿಷ್ಯತ’ ಎಂದಿರುವುದು. ಅವರ ದೇಹವೇ ದಂಡದಂತೆ ಕೆಲಸ ಮಾಡುತ್ತದೆ. ಅವರು ಎಸಗಿರುವ ತಪ್ಪನ್ನು ಗಮನಿಸಿ ದಂಡ ವಿಧಿಸಬೇಕು. ಇನ್ನು ರಾಮಾಯಣ ಮತ್ತು ಮಹಾಭಾರತದಲ್ಲಿಯಂತೂ ದಂಡ ಎನ್ನುವುದು ಸಾಮರ್ಥ್ಯ ಅಥವಾ ಸೈನ್ಯಕ್ಕೆ. ಇನ್ನು ನಮ್ಮ ಮನೋ ನಿಗ್ರಹವನ್ನೂ ಸಹ ದಂಡದಿಂದ ಗುರುತಿಸಲಾಗಿದೆ. 

ವಾಗ್ದಂಡೋಥ ಮನೋದಂಡಃ ಕಾಯದಂಡಸ್ತಥೈವ ಚ |
ಯಸ್ಯೈತೇ ನಿಹಿತಾ ಬುದ್ಧೌ ತ್ರಿದಂಡೀತಿ ಸ ಉಚ್ಯತೇ || ಮನುಸ್ಮೃತಿ 12 : 1 ರಲ್ಲಿ ಮನಸ್ಸಿನ ಹಿಡಿತ, ಮಾತಿನಲ್ಲೂ ಹಿಡಿತ, ಮತ್ತು ಶರೀರದಲ್ಲೂ ಹಿಡಿತ ಸಾಧಿಸಿದವನೇ ತ್ರಿದಂಡಿ ಎಂದು ಪರಿಗಣಿಸಲ್ಪಡುತ್ತಾನೆ ಎನ್ನುವ ಮಾತು ಬರುತ್ತದೆ. ಯೋಗಸೂತ್ರದಲ್ಲಿ ದಂಡಾಸನ, ದಂಡಕಾಸನ ಎಂದು ಬರುತ್ತದೆ ಅಂದರೆ ಅದೊಂದು ಸ್ಥಿತಿ, ಅದೇ ರೀತಿ ದಂಡಾಧಿಪಃ ಎಂದು ಮನುಸ್ಮೃತಿಯಲ್ಲಿ ಕರೆಸಿಕೊಳ್ಳುವುದು ಈಗಿನ ನ್ಯಾಯಾಧೀಶರನ್ನು. ಇನ್ನು ’ದಂಡಾಹತಮ್’ ಎನ್ನುವುದು ಮಜ್ಜಿಗೆಗೆ. ’ದೇಶ ಕಾಲ ವಯ ಶಕ್ತಿ ಸಂಚಿಂತ್ಯ ದಂಡಕರ್ಮಣಿ’ ವಾಸಿಸುವ ಪ್ರದೇಶ, ಅಂದಿನ ಕಾಲ, ಅಪರಾಧಿಯ ವಯಸ್ಸು ಮತ್ತು, ಆತನ ದೈಹಿಕ ಸಾಮರ್ಥ್ಯವನ್ನು ಗಮನದಲ್ಲಿರಿಸಿಕೊಂಡು ನ್ಯಾಯವನ್ನು ಕೊಡಬೇಕು ಮತ್ತು ಶಿಕ್ಷೆಯನ್ನು ನಿಗದಿಪಡಿಸಿ ದಂಡವನ್ನು ಹಾಕಬೇಕು ಎನ್ನುವುದು ಯಾಜ್ಞವಲ್ಕ್ಯ  ೨:೨೭೫,  ಕಲಿತಂ ನ್ಯಾಯಂ ಎಂದು ಒಂದಿದೆ. ಅದು ಒಮ್ಮೆ ಮಾಡಿದ ತಪ್ಪನ್ನು ಪುನಃ ಪುನಃ ಮಾಡುವುದು ಅದು ಘೋರವಾದ ಅಪರಾಧವಾಗಿದ್ದು ಅದಕ್ಕೆ ದಂಡದ ಪ್ರಮಾಣವೇ ಜಾಸ್ತಿ. ಇನ್ನು ಅರ್ಥಶಾಸ್ತ್ರದಲ್ಲಿ ಚಾಣಕ್ಯ ನ್ಯಾಯಾಂಗ ದಂಡ ಅಥವಾ ಶಿಕ್ಷೆಯನ್ನು ಹೇಳಿದರೆ ಅದೇ ಅರ್ಥಶಾಸ್ತ್ರದಲ್ಲಿ ವಾಗ್ದಂಡವನ್ನು ಸಹ ಹೇಳುತ್ತಾನೆ. ಇನ್ನು ಶಾಸನಗಳಲ್ಲಿ ದಂಡವನ್ನು ಸುಂಕ ಅಥವಾ ಶುಲ್ಕ ಎಂದು ಕರೆದಿದ್ದು ಯಾತ್ರಾಸುಂಕ, ಬಾಲವಣ ಅರವಣ, ಮನೆವಣ, ಬಳ್ಳಿಗವರ್ತೆ ಇತ್ಯಾದಿ ಎಲ್ಲವೂ ತೆರಿಗೆಯ ರೂಪದ ದಂಡವೇ ಆಗಿದೆ. ಅಂದರೆ ಸಾಮಾನ್ಯವಾಗಿ ನ್ಯಾಯಾಂಗದಲ್ಲಿ ದಂಡ ಪ್ರಮುಖ ಅಂಗವಾಗಿದ್ದರೆ, ಆಡಳಿತದಲ್ಲಿ ಆದಾಯದ ಮೂಲ ಎನ್ನಿಸಿಕೊಳ್ಳುತ್ತದೆ. ಇನ್ನು ನಮ್ಮ ಕನ್ನಡದಲ್ಲಿ ದಂಡ ಎಂದರೆ ಕೋಲುಗಳನ್ನು ದಂಡ ಎನ್ನುತ್ತೇವೆ. ಅದೆಲ್ಲಕ್ಕೂ ಮಿಗಿಲಾಗಿ ಕೂಳಿಗ್ ದಂಡ ಎನ್ನುವ ಪದ ವ್ಯರ್ಥ ಎನ್ನುವ ಅರ್ಥವನ್ನು ಕೊಡುತ್ತದೆ. 

’ದಂಡಾ ಇವೇದ್ಗೋ ಅಜನಾಸ’ ಎನ್ನುವ ಋಗ್ವೇದದ 7ನೇ ಮಂಡಲದ 33ನೇ ಸೂಕ್ತದಲ್ಲಿ ಕೋಲುಗಳನ್ನು ನಿರ್ದೇಶಿಸುತ್ತದೆ ಆದರೆ ಅದೂ ಸಹ ಶಿಕ್ಷೆಯನ್ನು ಕೊಡುವ ದಂಡವನ್ನೇ ಹೇಳುತ್ತದೆ. ವಶಿಷ್ಠ ಮತ್ತು ಅವರ ಮಕ್ಕಳ ಸಂವಾದದಲ್ಲಿ ಬರುವ ಋಕ್ ಇದು. ಐತರೇಯ ಬ್ರಾಹ್ಮಣ, ಶತಪಥ ಬ್ರಾಹ್ಮಣ, ಆಶ್ವಲಾಯನ ಗೃಹ್ಯ ಸೂತ್ರ, ಸಾಂಖಾಯನ ಗೃಹ್ಯಸೂತ್ರಗಳಲ್ಲಿ ಶಿಕ್ಷೆಯನ್ನು ವಿಧಿಸುವ ಪರಿಮಾಣ ಎಮದು ಹೇಳುತ್ತಾ ಆಜ್ಷಾ ಎನ್ನುವುದು ದಂಡವನ್ನು ಜಾರಿಗೊಳಿಸುವುದಾದ್ದರಿಂದ ಆಜ್ಞಾ ಪದ ನ್ಯಾಯಾಂಗದಲ್ಲಿ ಹೆಚ್ಚು ಪ್ರಸ್ತುತ ಎಮದಿದೆ. ಇನ್ನು ಶಾಂಖಾಯನ ಆರಣ್ಯಕ(8:9)ದಲ್ಲಿ ಸಂಗೀತದ ಒಂದು ಉಪಕರಣ ಎಂದು ಹೇಳಿದೆ. ದಂಡಕಂದಕ ಎನ್ನುವ ಒಂದು ಬೇರು ಅನೇಕ ಔಷಧೀಯ ಗುಣಗಳನ್ನು ಹೊಂದಿದೆಯಂತೆ. ಯಾರು ದಂಡದ ಆಜ್ಞೆಯನ್ನು ಜಾರಿಗೊಳಿಸುತ್ತಾರೋ ಅವರನ್ನು ದಂಡಕರ್ತೃ ಎಂದು ಕರೆಯಲಾಗುತ್ತದೆ. ಇನ್ನು ಕನ್ನಡ ಶಾಸನಗಳಲ್ಲಿ ದೋರ್ದಂಡ ಎಂದು ಹೇಳಿದ್ದು ಅದು ಕೈ ಅಥವಾ ಬುಜಬಲವನ್ನು ಹೇಳುತ್ತಿದೆ. ಹೀಗೇ ದಂಡ ಎನ್ನುವುದು ಯಾವತ್ತೂ ದಂಡವೇ. ಅಂದರೆ ದಂಡ ಕಟ್ಟುವುದು ಎಂದರೆ ಅಪರಾಧಮಾಡಿದ್ದು ಒಪ್ಪಿಕೊಂಡಹಾಗೇ ಮತ್ತು ಅದು ಕಟ್ಟಿರುವುದಕ್ಕೆ ಪ್ರತಿಫಲಾಪೇಕ್ಷೆಯೇ ಇನ್ನೊಂದು ಅಪರಾಧವಾಗುತ್ತದೆ.

#ಯಥಾಪರಾಧ_ದಂಡಾನಾಂ
ಸದ್ಯೋಜಾತರು

No comments:

Post a Comment

If you have any doubts. please let me know...