May 18, 2021

ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ ಹನುಮಂತ:- ಭಾಗ-೦೨

ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ  ಹನುಮಂತ:- ಭಾಗ-೦೨

ಹನುಮಂತ ಜನನ ರಾಮಯಣ.

ಸನಾತನ ಧರ್ಮವನ್ನು ಪರಿಪಾಲಿಸುವವರಿಗೆ ರಾಮಾಯಣ ಮತ್ತು ಪುರಾಣಮಹಾಭಾರತಗಳು ಧರ್ಮಬೋಧಿಸುವ ಮೂಲ ಗ್ರಂಥಗಳಾಗಿವೆ.ಆದರೂ ಈ ಸನಾತನ ಧರ್ಮವನ್ನು ಅನುಸರಿಸುವ ಧರ್ಮಿಗಳನ್ನು ಏತಕ್ಕಾಗಿ ಮನಸೋ ಇಚ್ಛೆ ಮೂದಲಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾದರೇ ಇಂದಿಗೆ ಉಪಲಬ್ಧವಿರುವ ಈ ಗ್ರಂಥಗಳನ್ನೇ ಆಮೂಲಾಗ್ರ ಅಧ್ಯಯನ ಮಾಡಿದರೇ ನಮಗೆ ಉತ್ತರ ಸಿಗುತ್ತದೆ. 

ಪಂಥೀಯ ಮತೀಯ ದ್ವೇಷಗಳನ್ನು  ಮೈದುಂಬಿಕೊಂಡು ಈ ದಿವ್ಯಗ್ರಂಥಗಳನ್ನು ತಮ್ಮ ಕುಪಾಂಡಿತ್ಯದಿಂದ ಆತ್ಯಂತಿಕವಾಗಿ ಹೊಲಗೆಡಸಿ , ದೇವತೆಗಳನ್ನೇ ಅತ್ಯಾಚಾರಿಗಳಾಗಿ ಮಾಡಿದ್ದೂ ಅಲ್ಲದೇ ಇಂಥ ದುರ್ಮೇಧಗಳನ್ನು ಪ್ರಮಾಣವಾಗಿ ಬಳಸುತ್ತಿರುವವರ ದುರ್ಮೇಧಿಗಳಾದ ಹಿರಣ್ಯಕಶಿಪುವಿನ ವಂಶಸ್ಥರನ್ನು ಈ ಸನಾತನ ಧರ್ಮಗಳಲ್ಲಿ ಹುಟ್ಟುಹಾಕಿರುವ ದುರ್ಮೇಧಗಳ ಸಹಿತ  ನಿರ್ಮೂಲನಮಾಡದೇ ಇದ್ದರೇ ಇಡೀ ಸನಾತಾನ ಧರ್ಮವೇ ಕೊರೋನಾ ಎಂಬ ವೈರಾಣುಗಳಿಗಿಂತ ಅತೀ ಹೆಚ್ಚಿನದಾದ ಅಪಾಯ ಎದುರಿಸುವದು ಕಟ್ಟಿಟ್ಟಬುತ್ತಿ. ದುರ್ಮೇಧಿಗಳೂ ನಿತ್ಯನಾರಕಿಗಳೂ ಆದ ಇವರ  ಅನುಯಾಯಿಗಳಲ್ಲಿರುವ ಹುಟ್ಟುಕುರುಡುತನ ಎಂದಿಗೇ ದೂರವಾಗುವದೋ ಅಥವಾ ಇದರಲ್ಲೇ ಅವಸಾನ ಹೊಂದುವರೋ ಆ ಭಗವಂತನೇ ಬಲ್ಲ.  ಇಂಥವರು ಸ್ವಮತದ ಅಧ್ಯಯನ ಮಾಡಿದರೇ ದಿಗ್ಭ್ರಾಂತಿ ನಿಶ್ಚಯ.ಆದ್ದರಿಂದಲೇ ಇವರ ಅಂಜುಬುರುಕುತನದಿಂದ ಪರಮತಗಳ ದೂಷಣೆ ಅವ್ಯಾಹತವಾಗಿ ರೂಢಿಸಿಕೊಂಡುಬಿಟ್ಟಿದ್ದಾರೆ.ಆದರೂ ನೈಜವಾದ ಸನಾತನ ಧರ್ಮವನ್ನು ಉಳಿಸುವದಕ್ಕೆ ನನ್ನ ಕೈಲಾದ ಪ್ರಯತ್ನಮಾಡುತ್ತೇನೆ.ಈ ದಿವ್ಯಗ್ರಂಥಗಳು ಇಷ್ಟುಮಟ್ಟಿಗೆ ಕಲುಷಿತವಾಗಿರುವದು, ಕಲಿಯುಗದ ಅವನತಿ ಸೂಚಕವಾಗಿದೆ.

ವೇದಗಳಲ್ಲು ಹೇಳಿರುವ ಮರುದ್ದೇವತೆಗಳ ಗುಣಗಳೂ ರಾಮಾಯಣದಲ್ಲಿ ಪ್ರತಿಬಿಂಬಿಸಿರುವ ಹನುಮಂತನ ಸಾಮರ್ಥ್ಯವನ್ನೂ ಹೊಂದಿಕೆ ಮಾಡಿನೋಡೋಣ.ಮೊದಲಿಗೆ ಹನುಮಂತನ ಜನ್ಮದ ವಿಷಯ ನೋಡೋಣ.

ರಾಮಾಯಣ ಬಾಲಕಾಂಡ :- ೧೭

ಮಾರುತಸ್ಯಾತ್ಮಜಃ ಶ್ರೀಮಾನ್ ಹನುಮಾನ್ನಾಮ ವಾನರಃ | ವಜ್ರಸಂಹನನೋಪೇತೋ ವೈನತೇಯಸಮೋ ಜವೇ || ೧೬ || 

ಕ್ಷಿಪ್ತಮಿನ್ದ್ರೇಣ ತೇ ವಜ್ರಂ ಕ್ರೋಧಾವಿಷ್ಟೇನ ಧೀಮತಾ | ತತಃ ಶೈಲಾಗ್ರಶಿಖರೇ ವಾಮೋ ಹನುರಭಜ್ಯತ | ತತೋ ಹಿ ನಾಮಧೇಯಂ ತೇ ಹನುಮಾನಿತಿ ಕೀರ್ತ್ಯತೇ ||೪.೦೬೫.೦೨೨||

ಬ್ರಹ್ಮನ ಆದೇಶದ ಮೇರೆಗೆ ಇಂದ್ರ,ಸೂರ್ಯ,ಅಗ್ನಿ,ವಾಯು ಮೊದಲಾದ ದೇವತೆಗಳು ವಾನರ ಸ್ತ್ರೀಯರಲ್ಲಿ ತಂತಮ್ಮ ಅಂಶಗಳಿಂದ ಹುಟ್ಟಿದರು.

ಮರುತ ಅರ್ಥಾತ್ ವಾಯುವಿನ(**ತುಂಡು** ಈ ಪದವು ಕೆಲವರಿಗೆ ಆಪ್ಯಾಯಮಾನವಾಗಿದೆ)  ಅಂಶದಿಂದ ಹನುಮಂತನೆಂಬುವನು ಹುಟ್ಟಿದನು.ಇವನು ತನ್ನ ಶಕ್ತಿಸಾಮರ್ಥ್ಯಗಳಲ್ಲಿ ವೈನತೇಯನ ಸಮನೇ ಆಗಿದ್ದನು.

ಒಮ್ಮೆ ಈತನು ಕುಪಿತನಾದ ಇಂದ್ರನ ವಜ್ರಾಯುಧದಿಂದ ಕಪೋಲ-ದವಡೆಯ ಮೇಲೆ ಹೊಡೆಯಲ್ಪಟ್ಟವಾನಾಗಿ ಅವನು ಹನುಮಂತ ಎಂಬ ಹೆಸರಾಯಿತು.

*ಅಯೋನಿಜರಾಗಿ* ಎಂಬುದಾಗಿ ಪಾರ್ವತಿಯಿಂದ ಶಪಿಸಲ್ಪಟ್ಟ ದೇವತೆಗಳು ಅರ್ಥಾತ್ ಅವರು *ತೇ=ದೇವತೆಗಳು , ಸರ್ವೇ= ಎಲ್ಲರೂ  ಅಪ್ರಜಾಃ= ಸಂತಾನಹೀನರು* ಎಂಬ ವಾಕ್ಯದಂತೆ ತಾವೇ ಸಂತಾನ ಉಂಟುಮಾಡಲು ಅಸಮರ್ಥರಾದರು. ಅವರು ಗಂಧರ್ವಕನ್ಯೆ ,ಮನುಷ್ಯಕನ್ಯೆ, ಯಕ್ಷಿಣಿ , ದೈತ್ಯಕನ್ಯೆಯರು ಅಥವಾ  ಅಪ್ಸರೆಯರ ಯೋನಿಗಳಲ್ಲಿ , ಪರಪುರುಷರ ವೀರ್ಯಗಳಲ್ಲಿ ಅರ್ಥಾತ್ ದೇವತೆಗಳ ಹೊರತುಪಡಿಸಿ  ಯಕ್ಷ, ಕಿನ್ನರ,ಗಂಧರ್ವ,ಮನುಷ್ಯರೇ ಮುಂತಾದವರಲ್ಲಿ  ಅಂಶರೂಪದಲ್ಲಿ ಸೇರಿಕೊಳ್ಳಬಲ್ಲರೇ ಹೊರತು ತಮ್ಮಂತೆ ದೇವತೆಗಳನ್ನು ಸೃಷ್ಟಿಮಾಡಲು ಅಸಮರ್ಥರು.ಇವರು ಯಾರಿಗೂ ಯಾವ ಫಲಗಳನ್ನೂ ಕೊಡಲೂ ಅಸಮರ್ಥರು ಎಂಬ ಶ್ರುತಿವಾಕ್ಯವೂ ಇದೆ.

ಮೇಲಿನವಾಲ್ಮೀಕಿ ರಾಮಾಯಣದ ಶ್ಲೋಕದಲ್ಲಿ *ಮಾರುತಸ್ಯಾತ್ಮಜ* ಎಂಬಲ್ಲಿ ಮಾರುತ ಅರ್ಥಾತ್ ವಾಯುವಿನ ಅಂಶ ಎಂಬುದಾಗಿಯೇ ತಿಳಿಯಬೇಕೇ ಹೊರತು ವಾಯುವೇ ಮೊದಲಾದ ದೇವತೆಗಳು ಸ್ವವೀರ್ಯ ರಹಿತರಾದ್ದರಿಂದ ವಾಯುವಿನ ವೀರ್ಯದಿಂದ ಹುಟ್ಟಿದವನು ಎಂಬುದಾಗಿ ತಿಳಿಯಬಾರದು.ಆದ್ದರಿಂದ ಮೇಲಿನ ಶ್ಲೋಕಕ್ಕೆ ವೇದವ್ಯಾಸರ ಮಹಾಭಾರತದಲ್ಲಿ ಹನುಮಂತನ ವಾಕ್ಯದ ಮೂಲಕವೇ ಅರ್ಥೈಸಬೇಕು.

ಮಹಾಭಾರತ:

ಅಹಂ ಕೇಶರಿಣಃ ಕ್ಷೇತ್ರೇ ವಾಯುನಾ ಜಗದಾಯುನಾ | ಜಾತಃ ಕಮಲಪತ್ರಾಕ್ಷ ಹನೂಮಾನ್ನಾಮ ವಾನರಃ ||೦೩.೧೪೭.೨೭||

ಹೇ ಕಮಲದಂತೆ ಕಣ್ಣುಗಳುಳ್ಳ ರಾಮನೇ ,  ಹನುಂಮಂತನೆಂಬ  ವಾನರನಾದ ನಾನು ಕೇಸರೀ ಎಂಬ ವಾನರನ ವೀರ್ಯದಿಂದ , ಜಗತ್ತಿಗೆ ಉಸಿರಾಟದ ಮೂಲಕ ಆಯುಷ್ಯವನ್ನು ನೀಡುವಂಥ ವಾಯುವಿನ ಅನುಗ್ರಹದಿಂದ ಅರ್ಥಾತ್ ವಾಯ್ವಾಂಶದಿಂದ ಹುಟ್ಟಿದೆನು. 

ರಾಮಾಯಣದಲ್ಲೇ ಕಿಷ್ಕಿಂಧಾಕಾಂಡದಲ್ಲಿ ಜಾಂಬವಂತನಿಂದ ಹೇಳಲ್ಪಟ್ಟ ಹನುಮಂತನ ಚರಿತ್ರೆ ನೋಡೋಣ.ಮುಂದಿನ ಸಂಚಿಕೆಯಲ್ಲಿ ಮಹಾಭಾರತದಲ್ಲೂ ಪ್ರಕ್ಷಿಪ್ತ ರೂಪದಲ್ಲಿರುವ  ಇದೇ ಕಥೆಯ ಅಪಭ್ರಂಶವನ್ನು ನೋಡೋಣ. 

ಸೂಚನೆ:- 

ರ್ವಾಲ್ಮೀಕಿಯ ಅನುಯಾಯಿಗಳು ರಾಮಾಯಣದ ಕಥೆಯನ್ನು ನಂಬಿಕೊಳ್ಳಿ ,ವ್ಯಾಸರಲ್ಲಿ ನಂಬಿಕೆ ಇರುವವರು ಮಹಾಭಾರತದ ಕಥೆಯನ್ನು ನಂಬಿಕೊಳ್ಳಿ. 

ನಾನು ಈ ಎರಡೂ ಇತಿಹಾಸಗಳಲ್ಲಿನ ಮುಖ್ಯಭಾಗವನ್ನು ಆರಿಸಿಕೊಂಡು ಆ ಮುಖ್ಯಭಾಗವನ್ನು ವೇದಗಳಲ್ಲಿ ಉಲ್ಲೇಖವಾಗಿರುವ ಅರ್ಥವಾದದೊಡನೆ ಸೇರಿಸಿಕೊಂಡು ಈ ಕಥೆಯು ನೈಜಧರ್ಮದ ಸಂಕೇತಾವಾಗಿರುವಂತೆ ತಿಳಿಸುವ ಪ್ರಯತ್ನಮಾಡುತ್ತೇನೆ.  

ರಾಮಾಯಣ ಕಿಷ್ಕಿಂಧಾಕಾಂಡ:- ಸರ್ಗ ೬೫- ಶ್ಲೋಕ ಸಂಖ್ಯೆ ೦೭ ರಿಂದ ೨೨

ಅಪ್ಸರಾಪ್ಸರಸಾಂ ಶ್ರೇಷ್ಠಾ ವಿಖ್ಯಾತಾ ಪುಞ್ಜಿಕಸ್ಥಲಾ | ಅಂಜನೇತಿ ಪರಿಖ್ಯಾತಾ ಪತ್ನೀ ಕೇಸರಿಣೋ ಹರೇಃ || ೪.೦೬೫.೦೦೮ ||

ಸಮುದ್ರೋಲ್ಲಂಘನ ಸಮಯದಲ್ಲಿ ಶಾಂತಚಿತ್ತನಾಗಿ ಕುಳಿತಿದ್ದ , ತನ್ನ ಸಾಮರ್ಥ್ಯದ ವಿಸ್ಮೃತಿಯನ್ನು ಹೊಂದಿದ್ದ ಹನುಮಂತನನ್ನು ಕುರಿತು ಜಾಂಬವಂತನು ಅವನ ಪೂರ್ವಚರಿತ್ರೆ ಹಾಗೂ ಅವತಾರದ ಕಾರಣವನ್ನು ಹೇಳುತ್ತಾನೆ.

ಪುಂಜಿಕಸ್ಥಲಾ ಎಂಬ ಅಪ್ಸರೆಯು ಕಾರಣಾಂತರದಲ್ಲಿ ( ಮುಂದಿನ ಸಂಚಿಕೆಯಲ್ಲಿ ಈ ಕಾರಣದ ವಿಮರ್ಶೆ ಮಾಡುತ್ತೇನೆ.)  ಒಂದಾನೊಂದು ಕಾಲದಲ್ಲಿ ಭೂಮಿಯಲ್ಲಿ ಕೇಶರೀ ಎಂಬ ವಾನರ ರಾಜನಿಗೆ  ಅಂಜನಾ ಎಂಬ ಹೆಸರಿನ ಪತ್ನಿಯಾಗಿದ್ದಳು.  

ಅಭಿಶಾಪಾದಭೂತ್ತಾತ ವಾನರೀ ಕಾಮರೂಪಿಣೀ | ದುಹಿತಾ ವಾನರೇನ್ದ್ರಸ್ಯ ಕುಞ್ಜರಸ್ಯ ಮಹಾತ್ಮನಃ || ೪.೦೬೫.೦೦೯ || 

ಯಾವುದಾದರೊಂದು ಶಾಪದಿಂದ ಕಾಮರೂಪದ ವಾನರ ಸ್ತ್ರೀಯಾಗಿ ಕುಂಜರ ಎಂಬ ವಾನರ ರಾಜನ ಮಗಳಾಗಿ ಹುಟ್ಟಿದ್ದಳು.

ಕಪಿತ್ವೇ ಚಾರುಸರ್ವಾಙ್ಗೀ ಕದಾ ಚಿತ್ಕಾಮರೂಪಿಣೀ | ಮಾನುಷಂ ವಿಗ್ರಹಂ ಕೃತ್ವಾ ಯೌವನೋತ್ತಮಶಾಲಿನೀ || ೪.೦೬೫.೦೧೦ || 

ಇವಳಾದರೋ ತನ್ನ ಅಪ್ಸರತ್ವಾ ಗುಣದಿಂದ ಮನುಷ್ಯಳ ರೂಪವನ್ನು ತಾಳಿ ಸರ್ವಾಲಂಕಾರ ಭೂಷಣಳಾಗಿ , ತನ್ನ ಯೌವ್ವನವನ್ನು ಮೆರೆಯುತ್ತಾ ಅಲೆದಾಡುತ್ತಿದ್ದಳು.

ಅಚರತ್ಪರ್ವತಸ್ಯಾಗ್ರೇ ಪ್ರಾವೃಡಮ್ಬುದಸಂನಿಭೇ | ವಿಚಿತ್ರಮಾಲ್ಯಾಭರಣಾ ಮಹಾರ್ಹಕ್ಷೌಮವಾಸಿನೀ ||  ೪.೦೬೫.೦೧೧ || 

ವಿಚಿತ್ರವಾದ ಆಭರಣಗಳನ್ನೂ ಬಟ್ಟೆಯನ್ನೂ ಧರಿಸಿದ್ದ ಇವಳು  ಪರ್ವತಶಿಖರಗಳಿಗೆ ಹೊಂದುಕೊಂಡಿರುಂಥ ವರ್ಷಮೇಘದಂತೆ ಸಂಚರಿಸುತ್ತಿದ್ದಳು.   

 

ತಸ್ಯಾ ವಸ್ತ್ರಂ ವಿಶಾಲಾಕ್ಷ್ಯಾಃ ಪೀತಂ ರಕ್ತದಶಂ ಶುಭಮ್ | ಸ್ಥಿತಾಯಾಃ ಪರ್ವತಸ್ಯಾಗ್ರೇ ಮಾರುತೋಽಪಹರಚ್ಛನೈಃ || ೪.೦೬೫.೦೧೨||

ವಿಶಾಲಾಕ್ಷಿಯೂ ,ಕೆಂಪುರೇಷ್ಮೆಬಟ್ಟೆಯುಟ್ಟಿರುವದರಿಂದ ಶುಭವನ್ನುಂಟುಮಾಡುವಳಂತೆಯೂ ಕಾಣಿಸುತ್ತಿದ್ದ ಇವಳನ್ನು ಕಂಡು ವಾಯು ದೇವನು ಮೋಹಿತನಾಗಿ ತನ್ನ ಮೃದುವಾದ ಬೀಸುವಿಕೆಯಿಂದ ಅವಳನ್ನು ವಿವಸ್ತ್ರಮಾಡಿದನು.

ಸ ದದರ್ಶ ತತಸ್ತಸ್ಯಾ ವೃತ್ತಾವೂರೂ ಸುಸಂಹತೌ | ಸ್ತನೌ ಚ ಪೀನೌ ಸಹಿತೌ ಸುಜಾತಂ ಚಾರು ಚಾನನಮ್ || ೪.೦೬೫.೦೧೩ ||

ಯೌವ್ವನದಿಂದ ತುಂಬಿತುಳುಕುತ್ತಿದ್ದ ಅವಳ ಅಂಗಸೌಷ್ಟವಗಳನ್ನು , ಅದನ್ನು ಪ್ರದರ್ಶಸಲು ಉತ್ಸುಕಳಾಗಿರುವಳೋ ಎಂಬ ಮುಖಭಾವವನ್ನೂ ನೋಡಿದನು. 

 

ತಾಂ ವಿಶಾಲಾಯತಶ್ರೋಣೀಂ ತನುಮಧ್ಯಾಂ ಯಶಸ್ವಿನೀಮ್ | ದೃಷ್ಟ್ವೈವ ಶುಭಸರ್ವಾಗ್ನೀಂ ಪವನಃ ಕಾಮಮೋಹಿತಃ || ೪.೦೬೫.೦೧೪ || 

ವಿಶಾಲವಾಗಿಯೂ ಎತ್ತರವಾಗಿಯೂ ಇದ್ದ ಅವಳ ಕಟಿಪ್ರದೇಶದಲ್ಲಿ ಕಂಡರೂ ಕಾಣದಂತಿದ್ದ ತೆಳುವಾದ ಸೊಂಟವನ್ನು ನೋಡಿದೊಡನೆಯೇ  ವಾಯುದೇವನು ಕಾಮಪೀಡೆಯಿಂದ ನರಳಿದನು.

ಸ ತಾಂ ಭುಜಾಭ್ಯಾಂ ಪೀನಾಭ್ಯಾಂ ಪರ್ಯಷ್ವಜತ ಮಾರುತಃ | ಮನ್ಮಥಾವಿಷ್ಟಸರ್ವಾಙ್ಗೋ ಗತಾತ್ಮಾ ತಾಮನಿನ್ದಿತಾಮ್ || ೪.೦೬೫.೦೧೫ ||

ಎಲ್ಲಾ ಅಂಗಗಳನ್ನೂ ಆಕ್ರಮಿಸಿದ್ದ ಕಾಮದೇವನ ಹೊಡೆತಕ್ಕೆ ನಲುಗಿದ ವಾಯುದೇವನು ಅನಿಂದಿತಳಾದ ಅಂಜನಾದೇವಿಯನ್ನು ತನ್ನ ಬಾಹುಗಳಿಂದ ಆವರಿಸಿಕೊಂಡುಬಿಟ್ಟನು. 

ಸಾ ತು ತತ್ರೈವ ಸಂಭ್ರಾನ್ತಾ ಸುವೃತ್ತಾ ವಾಕ್ಯಮಬ್ರವೀತ್ | ಏಕಪತ್ನೀವ್ರತಮಿದಂ ಕೋ ನಾಶಯಿತುಮಿಚ್ಛತಿ || ೪.೦೬೫.೦೧೬ ||

ಏಕಾಏಕೀ ತನಗರಿವಿಲ್ಲದಿರುವಂತೇ ಪರ ಪುರುಷನಿಂದ ಆವರಿಸಲ್ಪಟ್ಟಾ ಅಂಜನಾದೇವಿಯು ದಿಗ್ಭ್ರಾಂತಿಯಿಂದ *ಏಕಪತ್ನೀವ್ರತಸ್ಥಳಾದ ಅರ್ಥಾತ್  ಒಬ್ಬನಿಗೇ ಹೆಂಡತಿಯಾಗಿರುತ್ತೇನೆ ಎಂಬುದಾಗಿ ಪ್ರಮಾಣಮಾಡಿಕೊಂಡಿರುವ( ಒಬ್ಬಳನ್ನೇ ಮದುವೆಯಾಗುತ್ತೇನೆ ಎಂಬುದಾಗಿ ಕೇಸರಿಯ ಏಕಪತ್ನೀವ್ರತವನ್ನೂ ಹೇಳಬಹುದು)  ಈ ವ್ರತವನ್ನು ನಾಶಮಾಡಲು  ಪ್ರಯತ್ನಿಸುತ್ತಿರುವ ನೀನು ಯಾರು ? ಎಂಬುದಾಗಿ ಉದ್ಗಾರಮಾಡಿದಳು.

ಅಞ್ಜನಾಯಾ ವಚಃ ಶ್ರುತ್ವಾ ಮಾರುತಃ ಪ್ರತ್ಯಭಾಷತ | ನ ತ್ವಾಂ ಹಿಂಸಾಮಿ ಸುಶ್ರೋಣಿ ಮಾ ಭೂತ್ತೇ ಸುಭಗೇ ಭಯಮ್ || ೪.೦೬೫.೦೧೭ ||

ಅಂಜನಾದೇವಿಯ ಮಾತುಗಳನ್ನು ಕೇಳಿದ ಕಾಮಪೀಡೀತನಾದ ವಾಯುದೇವನು *ನಾನು ನಿನ್ನನ್ನು ಹಿಂಸಿಸುವದಿಲ್ಲ. ನಿನ್ನ ಪಾತಿವ್ರತ್ಯಕ್ಕೂ ನಾನು ಹಾನಿಮಾಡುವದಿಲ್ಲ. ನನ್ನಿಂದ ಭಯಭೀತಳಾಗದಿರು* ಎಂದನು

  

ಮನಸಾಸ್ಮಿ ಗತೋ ಯತ್ತ್ವಾಂ ಪರಿಷ್ವಜ್ಯ ಯಶಸ್ವಿನಿ | ವೀರ್ಯವಾನ್ ಬುದ್ಧಿಸಂಪನ್ನಃ ಪುತ್ರಸ್ತವ ಭವಿಷ್ಯತಿ || ೪.೦೬೫.೦೧೮  ||

ನಾನು ಯಶೋವಂತಳಾದ ನಿನ್ನನ್ನು ಮನಸ್ಸಿನಮೂಲಕ ಪ್ರವೇಶಮಾಡಿಕೊಂಡೇ ನಿನ್ನಲ್ಲಿ ಈ ಆಲಿಂಗನದ ಭಾವವನ್ನು ಉಂಟುಮಾಡಿದ್ದೇನೆ.ನನ್ನ ಮನಸ್ಸಿನ ವಾಸನೆಯ ಮೂಲಕ ಉಂಟಾದ ಅಂಶದ ಪ್ರಭಾವದಿಂದ ಮುಂದೆ ನಿನ್ನಲ್ಲಿ ನನ್ನಷ್ಟೇ ಶಕ್ತಿಯುಳ್ಳ , ಬುದ್ಧಿವಂತನಾದ ಮಗನನ್ನು ನೀನು ಪಡೆಯುತ್ತಿಯೇ.

ಅಭ್ಯುತ್ಥಿತಂ ತತಃ ಸೂರ್ಯಂ ಬಾಲೋ ದೃಷ್ಟ್ವಾ ಮಹಾವನೇ | ಫಲಂ ಚೇತಿ ಜಿಘೃಕ್ಷುಸ್ತ್ವಮುತ್ಪ್ಲುತ್ಯಾಭ್ಯಪತೋ ದಿವಮ್ || ೪.೦೬೫.೦೧೯ ||

ನಂತರ ಅಂಜನಾ ದೇವಿಯು ನಿನ್ನನ್ನು ಹಡೆದಳು. ಜಾಂಬವಂತನು ಹೇಳುತ್ತಾನೆ ,ಆದ್ದರಿಂದಲೇ ನಿನ್ನನ್ನು ವಾಯುಪುತ್ರ ಎಂಬುದಾಗಿ ಕರೆಯುತ್ತಾರೆ. ಒಮ್ಮೆ ನೀನು ಬಾಲಕನಾಗಿದ್ದಾಗ ಸಂಧ್ಯಾಕಾಲದ ತಾಮ್ರವರ್ಣದ ಸೂರ್ಯನನ್ನು ನೋಡೀ ಅದನ್ನು ಫಲವೆಂದು ತಿಳಿದು ಆ ಫಲವನ್ನು ಸವಿಯ ಬೇಕೆಂದು ಆಕಾಶಕ್ಕೆ ನೆಗೆದುಬಿಟ್ಟೆ. 

ಶತಾನಿ ತ್ರೀಣಿ ಗತ್ವಾಥ ಯೋಜನಾನಾಂ ಮಹಾಕಪೇ | ತೇಜಸಾ ತಸ್ಯ ನಿರ್ಧೂತೋ ನ ವಿಷಾದಂ ತತೋ ಗತಃ || ೪. ೦೬೫.೦೨೦ ||

ಮುನ್ನೂರು ಯೋಜನಗಳಷ್ಟು ಎತ್ತರ ಹಾರಿದಾಗ ಸೂರ್ಯನ ತೀಕ್ಷ್ಣ ಹಾಗೂ ಪ್ರಜ್ವಲವಾದ ತೇಜಸ್ಸಿನಿಂದ ನಿನಗೆ ಸ್ವಲ್ಪವೂ ಆಯಾಸವಾಗಲಿಲ್ಲ. 

  

ತಾವದಾಪತತಸ್ತೂರ್ಣಮನ್ತರಿಕ್ಷಂ ಮಹಾಕಪೇ | ಕ್ಷಿಪ್ತಮಿನ್ದ್ರೇಣ ತೇ ವಜ್ರಂ ಕ್ರೋಧಾವಿಷ್ಟೇನ ಧೀಮತಾ || ೪.೦೬೫.೦೨೧ ||

ಸೂರ್ಯನಕಡೆಗೆ ಅತೀವೇಗದಿಂದ ಹೋಗುತ್ತಿದ್ದ ನಿನ್ನನ್ನು ಕಂಡ ಇಂದ್ರನು ಕೋಪದಿಂದ ತನ್ನ ವಜ್ರಾಯುಧವನ್ನು ನಿನ್ನ ಮೇಲೆ ಪ್ರಯೋಗಿಸಿದನು.

ತತಃ ಶೈಲಾಗ್ರಶಿಖರೇ ವಾಮೋ ಹನುರಭಜ್ಯತ | ತತೋ ಹಿ ನಾಮಧೇಯಂ ತೇ ಹನುಮಾನಿತಿ ಕೀರ್ತ್ಯತೇ || ೪.೦೬೫.೦೨೨ ||

ವಜ್ರಾಯುಧವು  ನಿನ್ನ ಕೆಳದವಡೆಯ ಮೇಲೆ ಪ್ರಹಾರಮಾಡಿತು. ಹೊಡೆತದಿಂದ ನೀನು ಪರ್ವತದ ಮೇಲಿಂದ ಉರುಳುತ್ತಾ ಕೆಳಗೆ ಬಿದ್ದೆ. ಆದ್ದರಿಂದಲೇ ನಿನಗೆ ಹನುಮಂತನೆಂಬ ಹೆಸರು.

ಕಥೆಯ ಸಾರಾಂಶ.:- 

ಸಮುದ್ರೋಲ್ಲಂಘನ ಸಮಯದಲ್ಲಿ ಶಾಂತಚಿತ್ತನಾಗಿ ಕುಳಿತಿದ್ದ , ತನ್ನ ಸಾಮರ್ಥ್ಯದ ವಿಸ್ಮೃತಿಯನ್ನು ಹೊಂದಿದ್ದ ಹನುಮಂತನನ್ನು ಕುರಿತು ಜಾಂಬವಂತನು ಅವನ ಪೂರ್ವಚರಿತ್ರೆ ಹಾಗೂ ಅವತಾರದ ಕಾರಣವನ್ನು ಹೇಳುತ್ತಾನೆ.

ಪುಂಜಿಕಸ್ಥಲಾ ಎಂಬ ಅಪ್ಸರೆಯು ಕಾರಣಾಂತರದಲ್ಲಿ ( ಮುಂದಿನ ಸಂಚಿಕೆಯಲ್ಲಿ ಈ ಕಾರಣದ ವಿಮರ್ಶೆ ಮಾಡುತ್ತೇನೆ.)  ಒಂದಾನೊಂದು ಕಾಲದಲ್ಲಿ ಭೂಮಿಯಲ್ಲಿ ಕೇಶರೀ ಎಂಬ ವಾನರ ರಾಜನಿಗೆ  ಅಂಜನಾ ಎಂಬ ಹೆಸರಿನ ಪತ್ನಿಯಾಗಿದ್ದಳು.ಯಾವುದಾದರೊಂದು ಶಾಪದಿಂದ ಕಾಮರೂಪದ ವಾನರ ಸ್ತ್ರೀಯಾಗಿ ಕುಂಜರ ಎಂಬ ವಾನರ ರಾಜನ ಮಗಳಾಗಿ ಹುಟ್ಟಿದ್ದಳು.ಇವಳಾದರೋ ತನ್ನ ಅಪ್ಸರತ್ವಾ ಗುಣದಿಂದ ಮನುಷ್ಯಳ ರೂಪವನ್ನು ತಾಳಿ ಸರ್ವಾಲಂಕಾರ ಭೂಷಣಳಾಗಿ , ತನ್ನ ಯೌವ್ವನವನ್ನು ಮೆರೆಯುತ್ತಾ ಅಲೆದಾಡುತ್ತಿದ್ದಳು.ವಿಚಿತ್ರವಾದ ಆಭರಣಗಳನ್ನೂ ಬಟ್ಟೆಯನ್ನೂ ಧರಿಸಿದ್ದ ಇವಳು ಪರ್ವತಶಿಖರಗಳಿಗೆ ಹೊಂದುಕೊಂಡಿರುಂಥ ವರ್ಷಮೇಘದಂತೆ ಸಂಚರಿಸುತ್ತಿದ್ದಳು.ವಿಶಾಲಾಕ್ಷಿಯೂ ,ಕೆಂಪುರೇಷ್ಮೆಬಟ್ಟೆಯುಟ್ಟಿರುವದರಿಂದ ಶುಭವನ್ನುಂಟುಮಾಡುವಳಂತೆಯೂ ಕಾಣಿಸುತ್ತಿದ್ದ ಇವಳನ್ನು ಕಂಡು ವಾಯು ದೇವನು ಮೋಹಿತನಾಗಿ ತನ್ನ ಮೃದುವಾದ ಬೀಸುವಿಕೆಯಿಂದ ಅವಳನ್ನು ವಿವಸ್ತ್ರಮಾಡಿದನು.ಯೌವ್ವನದಿಂದ ತುಂಬಿತುಳುಕುತ್ತಿದ್ದ ಅವಳ ಅಂಗಸೌಷ್ಟವಗಳನ್ನು , ಅದನ್ನು ಪ್ರದರ್ಶಸಲು ಉತ್ಸುಕಳಾಗಿರುವಳೋ ಎಂಬ ಮುಖಭಾವವನ್ನೂ ನೋಡಿದನು. ವಿಶಾಲವಾಗಿಯೂ ಎತ್ತರವಾಗಿಯೂ ಇದ್ದ ಅವಳ ಕಟಿಪ್ರದೇಶದಲ್ಲಿ ಕಂಡರೂ ಕಾಣದಂತಿದ್ದ ತೆಳುವಾದ ಸೊಂಟವನ್ನು ನೋಡಿದೊಡನೆಯೇ  ವಾಯುದೇವನು ಕಾಮಪೀಡೆಯಿಂದ ನರಳಿದನು.ಎಲ್ಲಾ ಅಂಗಗಳನ್ನೂ ಆಕ್ರಮಿಸಿದ್ದ ಕಾಮದೇವನ ಹೊಡೆತಕ್ಕೆ ನಲುಗಿದ ವಾಯುದೇವನು ಅನಿಂದಿತಳಾದ ಅಂಜನಾದೇವಿಯನ್ನು ತನ್ನ ಬಾಹುಗಳಿಂದ ಆವರಿಸಿಕೊಂಡುಬಿಟ್ಟನು. ಏಕಾಏಕೀ ತನಗರಿವಿಲ್ಲದಿರುವಂತೇ ಪರ ಪುರುಷನಿಂದ ಆವರಿಸಲ್ಪಟ್ಟಾ ಅಂಜನಾದೇವಿಯು ದಿಗ್ಭ್ರಾಂತಿಯಿಂದ *ಏಕಪತ್ನೀವ್ರತಸ್ಥಳಾದ ಅರ್ಥಾತ್  ಒಬ್ಬನಿಗೇ ಹೆಂಡತಿಯಾಗಿರುತ್ತೇನೆ ಎಂಬುದಾಗಿ ಪ್ರಮಾಣಮಾಡಿಕೊಂಡಿರುವ( ಒಬ್ಬಳನ್ನೇ ಮದುವೆಯಾಗುತ್ತೇನೆ ಎಂಬುದಾಗಿ ಕೇಸರಿಯ ಏಕಪತ್ನೀವ್ರತವನ್ನೂ ಹೇಳಬಹುದು)  ಈ ವ್ರತವನ್ನು ನಾಶಮಾಡಲು  ಪ್ರಯತ್ನಿಸುತ್ತಿರುವ ನೀನು ಯಾರು ? ಎಂಬುದಾಗಿ ಉದ್ಗಾರಮಾಡಿದಳು.ಅಂಜನಾದೇವಿಯ ಮಾತುಗಳನ್ನು ಕೇಳಿದ ಕಾಮಪೀಡೀತನಾದ ವಾಯುದೇವನು *ನಾನು ನಿನ್ನನ್ನು ಹಿಂಸಿಸುವದಿಲ್ಲ. ನಿನ್ನ ಪಾತಿವ್ರತ್ಯಕ್ಕೂ ನಾನು ಹಾನಿಮಾಡುವದಿಲ್ಲ. ನನ್ನಿಂದ ಭಯಭೀತಳಾಗದಿರು* ಎಂದನು.ಯಶೋವಂತಳದ ನಿನ್ನನ್ನು ಮನಸ್ಸಿನ ಮೂಲಕ ಪ್ರವೇಶಮಾಡಿಕೊಂಡೇ ನಿನ್ನಲ್ಲಿ ಈ ಆಲಿಂಗನದ ಭಾವವನ್ನು ಉಂಟುಮಾಡಿದ್ದೇನೆ(ಪರಕಾಯ ಪ್ರವೇಶ) .ನನ್ನ ಮನಸ್ಸಿನ ವಾಸನೆಯ ಮೂಲಕ ಉಂಟಾದ ಅಂಶದ ಪ್ರಭಾವದಿಂದ ಮುಂದೆ ನಿನ್ನಲ್ಲಿ ನನ್ನಷ್ಟೇ ಶಕ್ತಿಯುಳ್ಳ , ಬುದ್ಧಿವಂತನಾದ ಮಗನನ್ನು ನೀನು ಪಡೆಯುತ್ತಿಯೇ. ನಂತರ ಅಂಜನಾ ದೇವಿಯು ನಿನ್ನನ್ನು ಹಡೆದಳು. ಜಾಂಬವಂತನು ಹೇಳುತ್ತಾನೆ ,ಆದ್ದರಿಂದಲೇ ನಿನ್ನನ್ನು ವಾಯುಪುತ್ರ ಎಂಬುದಾಗಿ ಕರೆಯುತ್ತಾರೆ. ಒಮ್ಮೆ ನೀನು ಬಾಲಕನಾಗಿದ್ದಾಗ ಸಂಧ್ಯಾಕಾಲದ ತಾಮ್ರವರ್ಣದ ಸೂರ್ಯನನ್ನು ನೋಡೀ ಅದನ್ನು ಫಲವೆಂದು ತಿಳಿದು ಆ ಫಲವನ್ನು ಸವಿಯ ಬೇಕೆಂದು ಆಕಾಶಕ್ಕೆ ನೆಗೆದುಬಿಟ್ಟೆ. ಮುನ್ನೂರು ಯೋಜನಗಳಷ್ಟು ಎತ್ತರ ಹಾರಿದಾಗ ಸೂರ್ಯನ ತೀಕ್ಷ್ಣ ಹಾಗೂ ಪ್ರಜ್ವಲವಾದ ತೇಜಸ್ಸಿನಿಂದ ನಿನಗೆ ಸ್ವಲ್ಪವೂ ಆಯಾಸವಾಗಲಿಲ್ಲ. ಸೂರ್ಯನಕಡೆಗೆ ಅತೀವೇಗದಿಂದ ಹೋಗುತ್ತಿದ್ದ ನಿನ್ನನ್ನು ಕಂಡ ಇಂದ್ರನು ಕೋಪದಿಂದ ತನ್ನ ವಜ್ರಾಯುಧವನ್ನು ನಿನ್ನ ಮೇಲೆ ಪ್ರಯೋಗಿಸಿದನು.ವಜ್ರಾಯುಧವು  ನಿನ್ನ ಕೆಳದವಡೆಯ ಮೇಲೆ ಪ್ರಹಾರಮಾಡಿತು. ಹೊಡೆತದಿಂದ ನೀನು ಪರ್ವತದ ಮೇಲಿಂದ ಉರುಳುತ್ತಾ ಕೆಳಗೆ ಬಿದ್ದೆ. ಆದ್ದರಿಂದಲೇ ನಿನಗೆ ಹನುಮಂತನೆಂಬ ಹೆಸರು.

ಇನ್ನು ಮುಂದೆ ಇಂದ್ರನ ಕಾರ್ಯದಿಂದ ವಾಯು ಕೋಪಗೊಂಡು ತನ್ನ ಚಲನೆಯನ್ನು ನಿಲ್ಲಿಸಿ ಅಲ್ಲೋಲಕಲ್ಲೋಲ ಉಂಟುಮಾಡಿದನು ಎಂಬುಗಾಗಿ ಕಥೆಯು ಮುಂದುವರೆಯುತ್ತದೆ. ಮುಂದಿನ ಭಾಗದಲ್ಲಿ ಮಹಾಭಾರತದಲ್ಲಿರುವ ಇದೇ ಕಥೆಯ ಅಪಭ್ರಂಶಭಾಗವನ್ನು ತಿಳಿಸಿಕೊಡುತ್ತೇನೆ. 

ಹರಿ ಓಮ್ ತತ್ ಸತ್

ಸತ್ಯಪ್ರಕಾಶ.

ಮುಂದಿನ ಭಾಗ 

ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ  ಹನುಮಂತ:- ಭಾಗ-೦೩

ಹನುಮಂತ ಜನನ ಮಹಾಭಾರತ ಹಾಗೂ ಇತರ ರಾಮಾಯಣಗಳಲ್ಲಿರುವ ವಿಷಯ.

No comments:

Post a Comment

If you have any doubts. please let me know...