May 14, 2021

ಸಹನಾವವತು.....ಮಾ ವಿದ್ವಿಷಾವಹೈ

3 ಕಠೋಪನಿಷತ್
ಪ್ರಸಿದ್ಧ ಶಾಂತಿಮಂತ್ರವಾದ ಸಹನಾವವತು.....ಮಾ ವಿದ್ವಿಷಾವಹೈ. ಓಂ ಶಾಂತಿಃ, ಶಾಂತಿಃ ಶಾಂತಿಃ ಎಂಬ ಮಂತ್ರವು ಕಠೋಪನಿಷತ್ತಿಗೆ ಸೇರಿದುದು. ಕೃಷ್ಣ ಯಜುರ್ವೇದಲ್ಲಿನ ಕಠ ಶಾಖೆಯಿಂದ ಬಂದಿರುವ ಇದನ್ನು ಅದರ ದಾರ್ಶನಿಕ ಋಷಿ ಕಠನ ಹೆಸರಿನಲ್ಲಿ ಸಂಬೋಧಿಸಲಾಗಿದೆ. ಹೀಗಾಗಿ ಇದನ್ನು ಕಾಠಕೋಪನಿಷತ್ತು ಎನ್ನುವುದೂ ಇದೆ. ಈ ಉಪನಿಷತ್ ಸಾರವು ಯಮ ನಚಿಕೇತರ ಸಂವಾದದ ರೂಪದಲ್ಲಿದೆ. ಉಪನಿಷತ್ತುಗಳಲ್ಲಿ ಬರುವ ಕಥಾನಕಗಳಲ್ಲಿ ಪರಿಚಿತವಿರುವ ಒಂದು ಸುಂದರ ಕಥೆ ನಚೀಕೇತನದು.
ಕಠೋಪನಿಷತ್ತಿನ ಸಂರಚನೆಯನ್ನು ಗಮನಿಸುವುದಾದರೆ, ಇದರಲ್ಲಿ ಎರಡು ಅಧ್ಯಾಯಗಳಿವೆ. ಪ್ರತಿ ಅಧ್ಯಾಯದಲ್ಲಿ ಮೂರು ವಲ್ಲಿಗಳಿವೆ. ಮೊದಲನೆಯ ವಲ್ಲಿಯಲ್ಲಿ ನಚೀಕೇತನ ಕಥೆಯನ್ನು ನಿರೂಪಿಸಲಾಗಿದೆ. ಮೊದಲು ಕಥೆಯನ್ನು ನೋಡಿ ನಂತರ ಕಠೋಪನಿಷತ್ತಿನ ಸಾರಭಾಗಗಳನ್ನು ತಿಳಿಯೋಣ.
ನಚೀಕೇತ ಚಿಕ್ಕ ವಯಸ್ಸಿನವನು, ಬಾಲಕ. ನ ಕಿಂಚಿತ್ ಕೇತಃ – ನಚಿಕೇತ. ಎಂದರೆ ಆತನ ಹೆಸರಿನ ಅರ್ಥವೆಂದರೆ ಏನನ್ನೂ ಮಾಡದವ. ಆದರೆ ಆತ ಆಲಸಿಯಲ್ಲ, ಶ್ರಮಜೀವಿ. ಆತನ ತಂದೆಯ ಹೆಸರು ವಾಜಶ್ರವಸ್.  ಸ್ವಭಾವತಃ ಆತನು ಮಹಾ ಕೋಪಿಷ್ಠ, ಜಿಪುಣ ಬುದ್ಧಿಯವ. ಆತ ಹಮ್ಮಿಕೊಂಡಿದ್ದ ಯಾಗದ ಹೆಸರು ವಿಶ್ವಜಿತ್ ಯಾಗ. ಆತನ ಯಜ್ಞದ ಮೂಲ ಅಂಶವಾಗಿ, ಆತನು ಸರ್ವಸ್ವವನ್ನೂ ದಾನಮಾಡಬೇಕಿತ್ತು. ಇಷ್ಟಾಗಿಯೂ ಯಾಗಕ್ಕೆ ಇರುವ ಹೆಸರು ವಿಶ್ವಜಿತ್ – ಎಂದರೆ ವಿಶ್ವವನ್ನೇ ಗೆಲ್ಲುವ ಮಹತ್ವಾಕಾಂಕ್ಷೆಯು ಕೈಗೂಡಿದ ನಂತರ ಅಹಂಭಾವವಂತೂ ಬಂದೇ ಬರುತ್ತದೆಯಲ್ಲವೆ. ಮೊದಲು ಅದನ್ನು ಆತ ತ್ಯಜಿಸಬೇಕಿತ್ತು. ಅವನ ಉದ್ದೇಶವೇ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರುವ ಉದ್ದೇಶದಿಂದ ಕೂಡಿತ್ತಲ್ಲವೆ.  
ಇದರಲ್ಲೊಂದು ಚಿಕ್ಕ ವ್ಯಾವಹಾರಿಕ ನೀತಿಯೂ ಇದೆ. ದೊಡ್ಡದೊಂದು ಯಾಗವನ್ನು ಹಮ್ಮಿಕೊಳ್ಳುವುದು ದೊಡ್ಡದಲ್ಲ. ಅದರ ನಿರ್ವಹಣೆಗೆ ಬೇಕಿರುವ ಅಂಶಗಳನ್ನು ಪೂರೈಸುವ ಸಾಮರ್ಥ್ಯ, ಮನಸ್ಸು, ಆರ್ಥಿಕ ಸಬಲತೆ ಇರಬೇಕಾದುದೂ ಮುಖ್ಯವಾಗುತ್ತದೆ. ಯಜ್ಞದಲ್ಲಿ ದಾನಗಳಿಗೆ ಹೆಚ್ಚಿನ ಮಹತ್ವವಿದೆಯಷ್ಟೆ. ವಾಜಶ್ರವಸ್ ಗೋದಾನಕ್ಕೆಂದು ನೀಡಿದ ಹಸುಗಳೆಲ್ಲವೂ ಮುದಿ, ಬರಡು. ಇದನ್ನು ನೋಡುತ್ತಿದ್ದ ನಚಿಕೇತನಿಗೆ ಸಮ್ಮತವಾಗಲಿಲ್ಲ. ಮಾಡುತ್ತಿರುವ ಯಾಗದ ಫಲವು ಇಂಥ ದಾನ ಮಾಡುವುದರಿಂದ ಹೇಗೆ ತಾನೇ ಲಭಿಸೀತು. ಇವುಗಳ ಬದಲು ನನ್ನನ್ನಾದರೂ ದಾನ ಮಾಡಿದರೆ, ನಾನು ದಾನ ತೆಗೆದುಕೊಂಡವರ ಸೇವೆ ಮಾಡಿಕೊಂಡು, ತಂದೆಗೆ ಪುಣ್ಯದ ಸಂಪಾದನೆಯಾದರೂ ಮಾಡುತ್ತೇನೆ ಎಂಬುದು ಆತ ಉದ್ದೇಶ. ಅದಲ್ಲದೆ, ಮಹಾ ಕೋಪಿಷ್ಠನಾದ ತಂದೆಗೆ, ಆತನು ಮಾಡುತ್ತಿರುವುದು ಸೂಕ್ತವಲ್ಲವೆಂದು ಮಗನಾದ ತಾನು ಬುದ್ಧಿ ಹೇಳಲಾದೀತೆ ಎಂಬ ಸೌಜನ್ಯ ಒಂದೆಡೆ. 
(ಮುಂದುವರೆಯುವುದು)

No comments:

Post a Comment

If you have any doubts. please let me know...