ದೇಹಕ್ಕೆ ಬರುವ ತಕ್ಮನ್ ಎನ್ನುವ ಜ್ವರ.
ನಮ್ಮ ದೇಹಕ್ಕೆ ರೋಗಗಳು ಅಂಟಿಕೊಳ್ಳುವುದು ದೇಹದ ಬಗ್ಗೆ ನಮಗಿರುವ ಕಾಲಜಿಯ ಕೊರತೆ. ಮಲಿನವಾಗಿದ್ದ ದೇಹವನ್ನು ತೊಳೆದುಕೊಳ್ಳದೇ ಹೊರಗಿನಿಂದ ಬಂದು ಕೈ ಕಾಲುಗಳನ್ನು ತೊಳೆಯದೇ ಆಹಾರ ಸೇವಿಸುವುದು ಕಾರಣವಾಗಿದೆ. ಇಂದಿನ ಶೋಕಿಯಲ್ಲಿ ತಾಮ್ರದ ಪಾತ್ರೆ ನೀರುಕುಡಿಯಲು ಬಂದಿದೆ. ಆದರೆ ಕೈ ಕಾಲು ತೊಳೆದು ಶುಚಿಯಾಗಿ ಕುಡಿಯುವ ಅಭ್ಯಾಸ ನಿಂತಿದೆ. ಮನೆಯ ಈಶಾನ್ಯದಲ್ಲಿ ನೀರಿರಬೇಕು ಎನ್ನುವ ವಾಸ್ತುಶಾಸ್ತ್ರವನ್ನು ನಂಬುತ್ತೇವೆ. ಆದರೆ ಅದೇ ನೀರಿನಿಂದ ಕೈಕಾಲು ತೊಳೆದು ಮನೆಯ ಒಳಗೆ ಪ್ರವೇಶ ಮಾಡಬೇಕೆಂದರೆ ಅದು ಅಸಹ್ಯವಾಗುತ್ತದೆ. ಇಂತಹ ಪರಿಸ್ಥಿತಿಯ ಚಿಕ್ಕ ಅವಲೋಕನ ಇದು.
ಹಿಂದೊಮ್ಮೆ ವಿಚಿತ್ರವಾದ ಜ್ವರದಂತಹ ಬಾಧೆಯೊಂದು ಕಾಣಿಸಿಕೊಂಡಿತ್ತು. ಎಷ್ಟು ವಿಪರೀತವಾಗಿ ಸುಡುತ್ತಿತ್ತು ಎನ್ನುವುದು ಈ ಒಂದು ಸೂಕ್ತದಿಂದ ಗೊತ್ತಾಗುತ್ತದೆ. ಈ ರೋಗ ಮುಂದೆಂದೂ ಈ ಹೆಸರಿನಿಂದ ಕಾಣಿಸಿಕೊಂಡ ಉದಾಹರಣೆಗಳು ಸಿಗುತ್ತಿಲ್ಲ. ಹಿಂದೆಯೂ ಸಹ ಬಂದ ಕುರುಹಿಲ್ಲ. ತಕ್ಮ ರೋಗ ಎಂದು ಕರೆಸಿಕೊಂಡ ಈ ರೋಗ ಕೇವಲ ಜ್ವರ ಮಾತ್ರವಲ್ಲದೇ ಚರ್ಮವನ್ನು ಹಾಳುಮಾಡುತ್ತಿತ್ತಂತೆ. ಈ ಸೂಕ್ತದಲ್ಲಿ ಆ ರೋಗದ ಕುರಿತಾಗಿಯೇ ಹೇಳಲಾಗಿದೆ. ಅಗ್ನಿಯನ್ನು, ಸೋಮದೇವನನ್ನು, ಮೋಡಗಳ ಸೃಷ್ಟಿಕರ್ತ ವರುಣನನ್ನು, ಇಂದ್ರನನ್ನೂ ಸ್ತುತಿಸುತ್ತಾ ಯಜ್ಞವೇದಿಯಲ್ಲಿ ದರ್ಭೆಗಳಿಂದ ಸುತ್ತುವರಿದು ವನಸ್ಪತಿಗಳ ಸಮಿತ್ತುಗಳಿಂದ ಉರಿಯುತ್ತಿರುವ ಈ ಅಗ್ನಿಯ ಶಾಖದಿಂದ ಜ್ವರತಾಪ ಕಡಿಮೆಯಾಗಿ ದೂರ ಹೋಗಲಿ ಎನ್ನಲಾಗಿರುವುದನ್ನು ಅಗ್ನಿಸ್ತಕ್ಮಾನಮಪ ಬಾಧತಾಮಿತಃ ಎನ್ನುವಲ್ಲಿ ಹೇಳಲಾಗಿದೆ. ಇನ್ನು ಮುಂದಿನ ಮಂತ್ರದಲ್ಲಿ ಈ ಜ್ವರ ನಮ್ಮ ಜೀವನವನ್ನೇ ಶೋಚನೀಯ ಪರಿಸ್ಥಿತಿಗೆ ತಂದೊಡ್ಡುತ್ತದೆ. ಈ ಜ್ವರ ಬೆಂಕಿಯಂತೆ ಸುಟ್ಟು ಮನುಷ್ಯರನ್ನು ನರಳುವಂತೆ ಮಾಡಿ ಹಿಂಸಿಸುತ್ತದೆ. ಇಂತಹ ಹಿಂಸಾಕಾರಕ ಜ್ವರವೇ ನಿನ್ನ ತಾಪವು ಮಂದವಾಗಿ ನೀನು ಅತ್ಯಂತ ದೂರಕ್ಕೆ ಹೋಗಿ ದುರ್ಬಲನಾಗು ಎಂದು ಕೇಳಿಕೊಳ್ಳುವುದನ್ನು ಅಧಾ ಹಿ ತಕ್ಮನ್ನರಸೋ ಹಿ ಭೂಯಾ ಅಧಾ ನ್ಯ ಧರಾವಾ ಪರೇಹಿ ಎಂದಿರುವುದು.
ಜ್ವರದ ತಾಪವನ್ನು ಈ ಮಂತ್ರದಲ್ಲಿ ಗಮನಿಸಬಹುದು. ಅಂದರೆ ಜ್ವರದ ತಾಪವು ಕಡಿಮೆಯಾಗಿ ಅಧೋ ಬಾಗದಿಂದ ಹೊರಟುಹೋಗಲಿ ಎನ್ನಲಾಗಿದೆ. ಹಾಗೆಂದರೆ ಮನುಷ್ಯನ ದೇಹದ ಅಧೋಭಾಗದಿಂದ ಜ್ವರವು ಹೊರಟುಹೋಗಬೇಕು. ಜ್ವರವೇ ಮೊದಲಾದ ವ್ಯಾಧಿಗಳು ಮನುಷ್ಯನ ವಿಸರ್ಜನಾ ಭಾಗದಿಂದ ಹೊರಹೋಗುತ್ತದೆ ಎನ್ನುವುದೇ ಇಲ್ಲಿ ಅಧಾ ನ್ಯ ಧರಾವಾ ಪರೇಹಿ ಎನ್ನಲಾಗಿದೆ. ಬೆವರು ಮತ್ತು ಮಲಮೂತ್ರಾದಿಗಳ ಮೂಲಕ ಜ್ವರದ ತಾಪವು ಕಡಿಮೆಯಾಗುತ್ತವೆ ಎನ್ನುವುದು ತಿಳಿಯುತ್ತದೆ.
ಅಗ್ನಿದೇವನೇ ನೀನು ಕೆಂಪಾಗಿ, ರಕ್ತವರ್ಣನಾಗಿಯೂ, ಅತ್ಯಂತ ಶಕ್ತಶಾಲಿಯಾಗಿರುವವನು. ನೀನು ಉದ್ದಾರಕನೂ ಹೌದು ವಿನಾಶಕನೂ ಹೌದು. ನೀನು ಜ್ವರದ ತಾಪವನ್ನು ಕೆಳಮುಖವಾಗಿ ಹರಿಸಿ ಆ ರೋಗವನ್ನು ಅಧೋಭಾಗದಿಂದ ದೂರಕ್ಕೆ ಹಾಕು ಎಂದು ಯಃ ಪರುಷಃ ಪಾರುಷೇಯೋಽವಧ್ವಂಸ ಇವಾರುಣಃ | ತಕ್ಮಾನಂ ವಿಶ್ವಧಾವೀರ್ಯಾಧರಾಞ್ಚಂ ಪರಾ ಸುವ || ಎನ್ನುವುದು ಈ ಮಂತ್ರದಲ್ಲಿ.
ಈ ಜ್ವರದ ಉಪಶಮನಕ್ಕೆ ಗಿಡಮೂಲಿಕೆಯ ಔಷಧಗಳಿವೆ. ಈ ಮೂಲಿಕೆಗಳಿಂದ ರೋಗ ಗುಣವಾಗುತ್ತದೆ. ಮಾನವರ ಮುಷ್ಟಿಯಿಂದಲೇ ನಾಶವಾಗುವ ಈ ಜ್ವರ ಹೆಚ್ಚು ಮಳೆಬೀಳುವ ಪ್ರದೇಶದಲ್ಲಿ ಆಗಾಗ ಕಂಡು ಬರುತ್ತದೆ ಎನ್ನುವುದನ್ನು ಶಕಮ್ಭರಸ್ಯ ಮುಷ್ಟಿಹಾ ಪುನರೇತು ಮಹಾವೃಷಾನ್ ಎನ್ನಲಾಗಿದೆ. ಪ್ರಾಯಶಃ ಈ ಜ್ವರ ಈಗಿನ ಮಲೇರಿಯಾ ರೀತಿಯದ್ದು ಇರಬಹುದು. ಹೆಚ್ಚು ಮಳೆ ಬೀಳುವಲ್ಲಿಯೇ ಮಲೇರಿಯಾ ಜಾಸ್ತಿ ತೊಂದರೆ ಕೊಡುತ್ತದೆ. ಈ ತಕ್ಮ ಜ್ವರವು ಅನ್ಯ ಆಹಾರ ಪದ್ಧತಿಗಿಂತ ಸಸ್ಯಾಹಾರ ಪದ್ಧತಿಯಿಂದ ಶೀಘ್ರವಾಗಿ ಹೊಂದುವುದರಿಂದ ಪಥ್ಯಾಹಾರವೇ ಇದಕ್ಕೆ ಪ್ರಬಲವಾದ ಮದ್ದು. ಸಸ್ಯಾಹಾರವನ್ನೆ ಬಳಸಿ ರೋಗನಿರೋಧಕ ಶಕ್ತಿಯನ್ನು ವರ್ಧಿಸಿಕೊಳ್ಳಬೇಕು ಎನ್ನಲಾಗಿದೆ.
ಅತ್ಯಂತ ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಮೂಂಜ್ ಎನ್ನುವ ಹುಲ್ಲಿನಲ್ಲಿ ಈ ವೈರಾಣುಗಳು ಉತ್ಪತ್ತಿಯಾಗುವುದರಿಂದ ಅಂತಹ ಪ್ರದೇಶದಿಂದ ಈ ರೋಗ ಹುಟ್ಟಿದೆ ಮತ್ತು ಬಾಲ್ಹೀಕ ಈ ರೋಗದ ತವರು ಎಂದು ಓಕೋ ಅಸ್ಯ ಮೂಜವನ್ತ ಓಕೋ ಅಸ್ಯ ಮಹಾವೃಷಾಃ | ಯಾವಜ್ಜಾತಸ್ತಕ್ಮಸ್ತಾವಾನಸಿ ಬಲ್ಹಿಕೇಷು ನ್ಯೋಚರಃ || ಈ ಮಂತ್ರ ಹೇಳುತ್ತದೆ.
ಇನ್ನು ಈ ಜ್ವರದಿಂದ ದೇಹದ ಅಂಗಾಂಗಗಳು ವಿರೂಪ ಹೊಂದುತ್ತವೆಯಂತೆ. ಸರ್ಪಗಳಂತೆ ಅತ್ಯಂತ ದುಃಖಮಯ ಜೀವನ ಮಾನವನದ್ದಾಗುತ್ತದೆ. ಈ ಒಂದು ನಿರ್ದಿಷ್ಟವಾದ ರೋಗವು ನಮ್ಮಿಂದ ದೂರವಾಗಿ ಕಷ್ಮಲ ಪ್ರದೇಶದಲ್ಲಿ ಸಿಡಿಲಿನಂತೆ ಹೋಗಲಿ ಎನ್ನುವ ಅರ್ಥವನ್ನು ಈ ಮುಂದಿನ ಮಂತ್ರ ಹೇಳುತ್ತದೆ. ತಕ್ಮನ್ ವ್ಯಾಲ ವಿ ಗದ ವ್ಯಙ್ಗ ಭೂರಿ ಯಾವಯ’ ಈ ತಕ್ಮನ್ ಎನ್ನುವ ಜ್ವರವು ವಿಷದಿಂದ ಕೂಡಿದೆ ಮತ್ತು ಅತ್ಯಂತ ತ್ರಾಸದಾಯಕವಾಗಿದ್ದು, ಇದನ್ನು ಔಷಧ ಶಾಸ್ತ್ರದಲ್ಲಿ ವ್ಯಾಲ ಮತ್ತು ವ್ಯಂಗ ಎಂದು ಕರೆಯಲಾಗಿದ್ದು, ಇದು ನಮ್ಮ ಪರಿಸರ ಮತ್ತು ನಮ್ಮ ದೇಹ ಶುಚಿಯಾಗಿದ್ದರೆ ಬರುವುದಿಲ್ಲ. ಖಾಯಿಲೆಗಳು ಹುಟ್ಟುವುದೇ ಮಲಿನದಿಂದ ಎನ್ನುವ ಅಭಿಪ್ರಾಯವನ್ನು ಈ ಮಂತ್ರಗಳು ನೀಡುತ್ತವೆ.
#ಅಥರ್ವದ_
ಸದ್ಯೋಜಾತರು
No comments:
Post a Comment
If you have any doubts. please let me know...