ಸುಸ್ಥಿತಿಯ ಅಂಗಾಂಗದಾನ ಶ್ರೇಷ್ಠ ಪರಂಪರೆ
ಋಗ್ವೇದದಲ್ಲಿ ಮೈನಂ ಎನ್ನುವ ಸೂಕ್ತವೊಂದಿದೆ. ಆಗಾಗ ಈ ಸೂಕ್ತದ ನೆನಪಾಗುತ್ತದೆ. ಯಮನ ಮಗ ದಮನ ಎನ್ನುವವನೇ ಈ ಸೂಕ್ತದ ದೃಷ್ಟಾರ. ಇಲ್ಲಿ ಅಗ್ನಿಯನ್ನು ಸ್ತುತಿಸುತ್ತಾನೆ.
’ಮೈನಮಗ್ನೇ ವಿ ದಹೋ ಮಾಭಿ ಶೋಚೋ ಮಾಸ್ಯ ತ್ವಚಂ ಚಿಕ್ಷಿಪೋ ಮಾ ಶರೀರಂ’ ಎಂದು ಆರಂಭವಾಗುವ ಸೂಕ್ತದಲ್ಲಿ ಅಗ್ನಿಯನ್ನು ಕುರಿತಾಗಿ ಪ್ರಾರ್ಥಿಸುತ್ತಾ ಹೇ ಅಗ್ನಿಯೇ ನಿನ್ನ ಗುಣವೇ ಸುಡುವುದು. ಈ ಪ್ರೇತವನ್ನು ತುಂಬಾ ಹಿಂಸೆಯನ್ನೂ ಕೊಡಬಾರದು. ಪ್ರೇತಕ್ಕೆ ಸಂಪೂರ್ಣವಾಗಿ ಹಿಂಸೆಯೂ ಆಗಬಾರದು. ಈ ಪ್ರೇತದ ಶರೀರವನ್ನಾಗಲೀ ಅಥವಾ ಚರ್ಮವನ್ನಾಗಲೀ ಚದುರಿಸಬೇಡ. ಎಲ್ಲೆಡೆ ಅದು ಹೋಗಬಾರದು. ನೀನು ಯಾವಾಗ ಈ ಶರೀರವನ್ನು ಪಕ್ವವನ್ನಾಗಿ ಮಾಡುವೆಯೋ ಕೂಡಲೇ ಪ್ರೇತವನ್ನು ಪಿತೃಲೋಕಕ್ಕೆ ಕಳುಹಿಸಿಕೊಡು ಎನ್ನುತ್ತಾನೆ. ಅಂದರೆ ಶವವನ್ನು ಸುಡುವ ಕಾಲದಲ್ಲಿ ಅದರ ಅವಯವಗಳು ಚದುರಬಾರದು ಎನ್ನುವ ಆಶಯ. ಮುಂದಿನ ಋಕ್ಕಿನಲ್ಲಿ ಈ ಪ್ರೇತ ಪಿತೃಲೋಕಕ್ಕೆ ಹೋಗುವಾಗ ದೇಹರಹಿತವಾಗಿ ಹೋಗುವುದರಿಂದ ದೇವತೆಗಳಿಗೆ ಅಧೀನವಾಗಿ ಬಿಡುತ್ತದೆ. ದಹನವಾದ ನಂತರ ಶರೀರಕ್ಕೆ ಅಸ್ತಿತ್ವ ಇಲ್ಲ. ಆದರೆ ಪ್ರೇತ ಪಿತೃಲೋಕಕ್ಕೆ ಹೋಗಿ ದೇವತೆಗಳ ಅಧೀನವಾದಾಗ ಸಹ ಪ್ರೇತ ನಮ್ಮ ಅಧೀನದಲ್ಲಿ ಸಹ ಇಲ್ಲ. ಅಂದರೆ ಆ ಪಿತೃರೂಪಿಗೂ ನಮಗೂ ನೇರವಾದ ಸಂಬಂಧ ಇಲ್ಲ. ಆ ಪಿತೃ ನಮಗೆ ಹಿತವನ್ನು ಬಯಸಿ ಆಶೀರ್ವದಿಸಬಹುದು. ಆದರೆ ಇಲ್ಲಿ ಪಿತೃರೂಪಿ ಚಿಕ್ಕವನಾದರೂ ಆತನ ವಯಸ್ಸು ಗಣನೆಗೆ ಬಾರದು. ಯಾಕೆಂದರೆ ಪಿತೃರೂಪಿಯು ಇರುವುದು ಭೂಮಿಯಲ್ಲಲ್ಲ.
ಮುಂದೆ ಅದೇ ದಮನ ಮಹರ್ಷಿ ಕೇಳಿಕೊಳ್ಳುವ ಅಂಶ ಬಹಳ ಮಹತ್ವದ್ದು.
ಸೂರ್ಯಂ ಚಕ್ಷುರ್ಗಚ್ಛತು ವಾತಮಾತ್ಮಾ ದ್ಯಾಂ ಚ ಗಚ್ಛ ಪೃಥಿವೀಂ ಚ ಧರ್ಮಣಾ |
ಅಪೋ ವಾ ಗಚ್ಛ ಯದಿ ತತ್ರ ತೇ ಹಿತಮೋಷಧೀಷು ಪ್ರತಿ ತಿಷ್ಠಾ ಶರೀರೈಃ ||
ಹೇ ಪ್ರೇತವೇ ನಿನ್ನ ಕಣ್ಣುಗಳೆರಡೂ ಸೂರ್ಯನನ್ನು ಸೇರಲಿ. ನಿನ್ನ ಶರೀರಕ್ಕೆ ಚೈತನ್ಯ ಒದಗಿಸಿದ ಪ್ರಾಣವು ವಾಯುವನ್ನು ಸೇರಲಿ. ನಿನ್ನ ಕರ್ಮಕ್ಕನುಸಾರವಾಗಿ ನೀನು ದೇವಲೋಕವನ್ನೋ ಅಥವಾ ಇದೇ ಭೂಮಿಯನ್ನೋ ಸೇರಿಕೋ. ಅನುಕೂಲವಾದಲ್ಲಿ ನೀನು ಅಂತರಿಕ್ಷದಲ್ಲಿ ನೆಲೆಸು. ಹಿತಮೋಷಧೀಷು ಪ್ರತಿ ತಿಷ್ಠಾ ಶರೀರೈಃ ನಿನ್ನ ದೇಹದ ಅವಯವಗಳು ಓಷಧಿಗಳಲ್ಲಿ(ಸಸ್ಯಗಳಲ್ಲಿ) ನೆಲೆಸಲಿ. ಇಲ್ಲಿ ಅನೇಕ ಅಂಶಗಳನ್ನು ಗಮನಿಸಬೇಕು. ಬರಿಗಣ್ಣಿನಿಂದ ಸೂರ್ಯನನ್ನು ನೋಡುವುದಾದರೆ ಬೆಳಗಿನ ಉಷಸ್ಸಿನ ಸೂರ್ಯನನ್ನು ನೋಡಬೇಕು ಮತ್ತು ಅಸ್ತಮಾನದ ಸೂರ್ಯನನ್ನು ನೋಡಬೇಕು. ನೆತ್ತಿಯ ಮೇಲಕ್ಕೆ ಬಂದ ಪ್ರಖರನಾದ ಸೂರ್ಯನನ್ನು ನೋಡ ಬಾರದು. ಅದು ಸಾಧ್ಯವೂ ಇಲ್ಲ. ಕಣ್ಣು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದು ಗ್ರಹಣ ಕಾಲದಲ್ಲೂ ಹೇಳಲಾಗುತ್ತದೆ. ಇಂದಿನ ವೈದ್ಯಕೀಯ ವಿಜ್ಞಾನವೂ ಬರಿಗಣ್ಣಿನಿಂದ ಸೂರ್ಯಗ್ರಹನ ನೋಡಬಾರದು ಎಂದೇ ಹೇಳುತ್ತದೆ. ಅಂದರೆ ಸೂರ್ಯನಿಗೂ ಕಣ್ಣಿಗೂ ನೇರವಾದ ಸಂಬಂದವಿದೆ. ಸೂರ್ಯ ನಮ್ಮ ನೇತ್ರಗಳನ್ನು ಸುಸ್ಥಿತಿಯಲ್ಲಿಡಬಲ್ಲ ಎಂದು ಅರ್ಥ. ಇನ್ನು ಮೃತ ಶರೀರದಲ್ಲಿನ ಪ್ರಾಣ ಹೋಗುವುದು ದಹನದಲ್ಲಿ ಎನ್ನುವುದನ್ನೇ ಪ್ರಾಣವು ವಾಯುವಿನಲ್ಲಿ ಸೇರಲಿ ಎಂದಿರುವುದು. ದಮನ ಎನ್ನುವ ಋಷಿ ಒಮ್ಮೆ ಯಾಗವೊಂದನ್ನು ನೆರವೇರಿಸುತ್ತಿದ್ದ. ಯಜ್ಞದ ಯಜಮಾನ ಯಾಗದ ಪೂರ್ಣಾಹುತಿಗೂ ಮುನ್ನವೇ ದೀಕ್ಷೆಯಲ್ಲಿರುವಾಗಲೇ ಮೃತನಾದ. ಆಗ ಈ ಋಷಿ ಈ ಋಕ್ಕುಗಳನ್ನು ಪಡೆದು ಯಜಮಾನನ ಅಪರಕ್ರಿಯೆಯನ್ನೂ ಮಾಡಿಸಿದ. ಇಂದಿಗೂ ಯಜ್ಞದ ಮಧ್ಯದಲ್ಲಿ ಯಜಮಾನ ಮೃತನಾದಲ್ಲಿ ಇದೇ ಸೂಕ್ತಗಳನ್ನು ಉಪಯೋಗಿಸಬೇಕು. ಇಲ್ಲಿ ಇನ್ನೊಂದು ಮಹತ್ವವನ್ನು ಗಮನಿಸಬಹುದು. ಋಷಿಯು ಸೂಕ್ಷ್ಮವಾಗಿ ನಮ್ಮ ದೇಹದ ಅಂಗಾಂಗಗಲನ್ನು ದಾನಮಾಡುವುದನ್ನು ಕಾಣಬಹುದು. ಅದು ಸೂರ್ಯ ಎಂದು ಇದ್ದರೂ ದಹನಕ್ಕೂ ಮೊದಲೇ ಈ ಶರೀರದ ಅಂಗಾಂಗಗಳು ಸಹ ಇನ್ನೊಬ್ಬರಿಗೆ ಸೇರಿದ್ದು ಎನ್ನುವುದೇ ಈ ಸೂಕ್ತದ ಮಹತ್ವ ಪಡೆಯುತ್ತದೆ. ಅಂಗಾಂಗ ದಾನ ಎಂದು ನೇರವಾಗಿ ಋಷಿಯು ಹೇಳಿರದಿದ್ದರೂ ಕಣ್ಣುಗಳನ್ನು ಸೂರ್ಯನಿಗೆ ದಾನಮಾಡಿದಂತೆಯೇ ಅಲ್ಲವೇ. ಇನ್ನು ಪ್ರಾಣವಾಯುವಿರುವುದು ಹೃದಯದಲ್ಲಿ ಅಲ್ಲವೆ. ನಮ್ಮ ಅವಯವಗಳೆಲ್ಲ ಪ್ರಕೃತಿಗೆ ಸೇರಲಿ ಎನ್ನುವ ಮಹದಾಕಾಂಕ್ಷೆಯ ಈ ಋಷಿಯ ಚಿಂತನೆ ಅದೆಷ್ಟು ಮಹತ್ವದ್ದು. ’ಅಜೋ ಭಾಗಸ್ತಪಸಾ ತಂ ತಪಸ್ವ’ ಎನ್ನುವ ಮುಂದಿನ ಮಂತ್ರವಂತೂ ಅದೆಷ್ಟು ವಿಷಯ ಒಳಗೊಂಡಿದೆ. ಸುಸ್ಥಿತಿಯಲ್ಲಿರುವ ಶವದ ಅಂಗವು ಉಪಯೋಗಕ್ಕೆ ಬರಲಿ. ಆದರೆ ನಿಷ್ಕ್ರಿಯಗೊಂಡ ಅಥವಾ ನಷ್ಟವಾಗಿರುವ ಅಂಗಗಳನ್ನು ದಹಿಸು ಎನ್ನುವಲ್ಲಿ ಸತ್ತ ನಂತರವೂ ಹಾನಿಗೊಳಗಾಗದ ಅಂಗವನ್ನು ದಾನಮಾಡಬಹುದು ಎನ್ನುವ ಅಂಶ ಅಡಕವಾದಂತೆ ಅನ್ನಿಸುತ್ತದೆ.
ಹಾಗಾದರೆ ಮೃತದೇಹದ ಕೆಲವೊಂದು ಅಂಗಾಂಗಗಳನ್ನು ದಾನ ಮಾಡುವುದು ಸಹ ವೈದಿಕ ಮಾರ್ಗವೇ, ಒಂದು ದೇಹ ಚೈತನ್ಯ ಕಳೆದುಕೊಂಡಾಗ ಮಿಕ್ಕ ಜೀವಿಗಳಿಗೆ ಆಸರೆಯಾದರೆ ಸಾರ್ಥಕ ಜೀವನ.
#ಕಾಲಯಾನದಿಂದ
ಸದ್ಯೋಜಾತರು
No comments:
Post a Comment
If you have any doubts. please let me know...