ವೇದಕಾಲದಲ್ಲಿ ನಿರಾಕಾರ ದೇವರ ಪೂಜೆ ಇತ್ತು, ಆಕಾರವನ್ನು ಎಲ್ಲಿಯೂ ಹೇಳಿಲ್ಲ ಎನ್ನುವ ಮಾತಿದೆ. ಸಂಪೂರ್ಣವಾಗಿ ಪ್ರಕೃತಿಯ ಆರಾಧನೆಯೇ ವೇದಗಳಲ್ಲಿ ಅಡಗಿದೆ ಎನ್ನುವುದು ಸಹ ವಿದ್ವದ್ವಲಯದಲ್ಲಿರುವ ಚರ್ಚೆಗಳೋ ಅಥವಾ ಅನಿಸಿಕೆಯೋ, ಅಭಿಪ್ರಾಯಗಳೋ ಇರಬಹುದು. ಇಲ್ಲಿ ಅದರ ಕುರಿತಾಗಿ ನಾನು ಹೇಳುತ್ತಲೂ ಇಲ್ಲ. ಇಲ್ಲಿ ನಾನು ಹೇಳುವುದು ಕೇವಲ ಒಂದು ಶಬ್ದದ ಕುರಿತು. ಆದು ಶಿಲ್ಪ!. ಈ ಶಿಲ್ಪ ಎನ್ನುವ ಪದ ಯಾವಾಗಿನಿಂದ ಬಳಕೆಗೆ ಬಂತು. ಇದರ ಪ್ರಾಚೀನತೆಯ ಕುರಿತಾಗಷ್ಟೇ ಸೀಮಿತವೇ ಹೊರತು ಅದಕ್ಕೂ ಹೊರತಾದದ್ದಲ್ಲ.
ವೇದಗಳಲ್ಲಿ ರಥ ನಿರ್ಮಾಣ ಆದದ್ದರ ಕುರಿತಾದ ಮಾಹಿತಿಗಳಿವೆ. ಮೂರು ಚಕ್ರದ ರಥವನ್ನು ಸಹ ಮಾಡಿದ್ದನ್ನೂ ನಾನು ಈ ಮೊದಲೊಮ್ಮೆ ಬರೆದಾಗಿದೆ. ಯೂಪಸ್ತಂಭದ ನಿರ್ಮಾಣವನ್ನು ಮಾಡುತ್ತಿದ್ದರು. ಯಜ್ಞಗಳ ಆಹುತಿಗೆ ಬೇಕಾದ ಸೃಕ್‌ಸ್ರುವಾಗಳನ್ನು ಮಾಡುತ್ತಿದ್ದರು. ಇನ್ನು ಮೊನ್ನೆಯಷ್ಟೇ ಬಾರ್ಲಿ ಅಥವಾ ಅರಳಿನಹಿಟ್ಟಿನ ಪೇಯವೊಂದನ್ನು ಪಾತ್ರೆಯೊಂದರಲ್ಲಿ ಮಾಡುತ್ತಿದ್ದುದರ ವಿಷಯವನ್ನೂ ಬರೆದಿದ್ದೆ. ಅಂದರೆ ಆ ಕಾಲಕ್ಕಾಗಲೇ ಆಕಾರಗಳ ನಿರ್ಮಾಣವಾಗುತ್ತಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಶಿಲ್ಪ ? ಈ ಶಿಲ್ಪದ ಕುರಿತಾಗಿ ಸ್ವಲ್ಪ ಗಮನಿಸುವೆ.
ಋಗ್ವೇದದ ೯ನೇ ಮಂಡಲದಲ್ಲಿ ಸಮಿದ್ಧಃ ಎನ್ನುವ ಸೂಕ್ತವೊಂದಿದೆ. ಕಶ್ಯಪನ ವಂಶೀಯನಾದ ಅಥವಾ ಕಶ್ಯಪನ ಮಗನಾದ ಅಸಿತ ಅಥವಾ ದೇವಲ ಎನ್ನುವ ಋಷಿಯು ಹನ್ನೊಂದು ದೇವತೆಗಳನ್ನು ಸ್ತುತಿಸುತ್ತಾ ದೃಷ್ಟಾರನೆನ್ನಿಸಿಕೊಂಡ ಮಂತ್ರದಲ್ಲಿಯೇ ಮೊದಲಬಾರಿಗೆ ಶಿಲ್ಪ ಎನ್ನುವ ಪದ ಪ್ರಯೋಗವಾಗುತ್ತದೆ. ಇಲ್ಲಿ ಸಮಿದ್ಧೋ ವಿಶ್ವತಸ್ಪತಿ ಎಂದು ಮೊದಲ ಋಕ್ಕಿನ ಆರಂಭವಾಗುತ್ತದೆ. ಸಮಿದ್ಧವನ್ನು ಸಮ್ಯಗ್ದೀಪ್ತೋ ಎಂದು ಬಾಷ್ಯಕಾರರು ಕರೆದಿದ್ದಾರೆ. ಅತ್ಯಂತ ಹೆಚ್ಚು ಪ್ರಕಾಶಮಾನವಾದ ಮತ್ತು ವಿಶ್ವಕ್ಕೆ ಒಳಿತನ್ನು ಬಯಸುವ ಶ್ರೇಷ್ಠವಾದ ಸೋಮವು ಕನಿಕ್ರದತ್ ಅಂದರೆ ಶಬ್ದ ಮಾಡುತ್ತಾ ದೇವತೆಗಳಿಗೆ ತೃಪ್ತಿಯನ್ನುಂಟುಮಾಡಿ ಯಜ್ಞದಲ್ಲಿ ಪ್ರಕಾಶಿಸುತ್ತದೆ ಎನ್ನುವ ಅರ್ಥವಿದೆ. ಇಲ್ಲಿಂದ ಆರನೇ ಋಕ್ಕಿಗೆ ನೇರವಾಗಿ ಹೋಗುವೆ.
ಸುಶಿಲ್ಪೇ ಬೃಹತೀ ಮಹೀ ಪವಮಾನೋ ವೃಷಣ್ಯತಿ |ನಕ್ತೋಷಾಸಾ ನ ದರ್ಶತೇ|| ಎನ್ನುವ ಈ ಮಂತ್ರ ನಕ್ತೋ ಉಷಸಾ ಎನ್ನುವ ದೇವತೆಯನ್ನು ಕುರಿತಾದದ್ದು. ಇಲ್ಲಿ ಆರಂಭವಾಗುವುದೇ ಶಿಲ್ಪದಿಂದ. ಸುಶಿಲ್ಪೇ ಎನ್ನುವುದನ್ನು ಭಾಷ್ಯಕಾರರು ಸುರೂಪೇ ಎಂದು ಹೇಳಿದ್ದಾರೆ. ಎಂದರೆ ಶ್ರೇಷ್ಠವಾದ ಆಕಾರವನ್ನು ಹೊಂದಿರುರುವವರು ಎಂದು ಅರ್ಥೈಸಿದ್ದಾರೆ. ಅಂದರೆ ಇಲ್ಲಿ ರಾತ್ರಿ ಮತ್ತು ಹಗಲಿನ ಅಭಿಮಾನಿ ದೇವತೆಗಳನ್ನು ಪವಮಾನ ಸೋಮನು ಅಪೇಕ್ಷಿಸುವ ಕುರಿತಾಗಿ ಹೇಳಿದ್ದರೂ ಈ ಹಗಲು ಮತ್ತು ರಾತ್ರಿಯ ಅಭಿಮಾನ ದೇವತೆಗಳ ಆಕಾರವನ್ನು ಹೊಗಳಿದ್ದು ಸಿಗುತ್ತದೆ. ಶಿಲ್ಪ ಶಬ್ದದ ಮೊದಲ ಉಲ್ಲೇಖ ಇದೇ ಇರಬಹುದು ಎನ್ನುವ ಅಭಿಪ್ರಾಯ ನನ್ನದು.
ಯೇಭಿಃ ಶಿಲ್ಪೈಃ ಪಪ್ರಥಾನಮದೃಂಹತ್ | ಯೇಭಿರ್ದ್ಯಾಮಭ್ಯಪಿಶತ್ ಎನ್ನುವ ತೈತ್ತಿರೀಯ ಬ್ರಾಹ್ಮಣದ ೨:೭:೧೫:೨ರಲ್ಲಿ ಶಿಲ್ಪದ ಕುರಿತಾಗಿ ಹೇಳಲಾಗಿದೆ. ದಿವಃ ಶಿಲ್ಪಮವತತಂ ಪೃಥಿವ್ಯಾಃ ಕಕುಭಿಃಶ್ರಿತಮ್ ಎನ್ನುವುದಾಗಿ ತೈತ್ತಿರೀಯ ಬ್ರಾಹ್ಮಣದ ೩:೩:೨:೧ರಲ್ಲಿ ಹೇಳಲಾಗಿದೆ. ಯದ್ವೈ ಪ್ರತಿರೂಪಂ ತಚ್ಛಿಲ್ಪಂ ಎಂದು ಶತಪಥ ಬ್ರಾಹ್ಮಣ ೩:೨:೧:೫ರಲ್ಲಿ ಶಿಲ್ಪವು ರೂಪದ ಪ್ರತಿರೂಪದಂತಿರುವುದು ಎಂದು ಬಣ್ಣಿಸುತ್ತದೆ. ಸರ್ವಶಿಲ್ಪ ಪ್ರವರ್ತಕ ಎಂದು ವಿಶ್ವಕರ್ಮ ಮತ್ತು ಮಯನಿಗೆ ಮಹಾಭಾರತ ಹೇಳುತ್ತದೆ. ಇನ್ನು ರಾಮಾಯಣದಿಂದ ಹಿಡಿದು ಮಿಕ್ಕೆಲ್ಲಾ ಪುರಾಣಗಳಲ್ಲೂ ಶಿಲ್ಪವನ್ನು ಹೇಳಲಾಗಿದ್ದರೂ ಅದೊಂದು ಕಲೆಯ ಗುಂಪಿಗೆ ಸೇರಿದ್ದು ವಾತ್ಸ್ಯಾಯನನ ಕಾಲಕ್ಕೆ.
#ಪ್ರತಿರೂಪ_ಶಿಲ್ಪ
ಸದ್ಯೋಜಾತರು
No comments:
Post a Comment
If you have any doubts. please let me know...