ಆಗಮಗಳು ಆಗಮವೆಂದರೆ ಶಾಸ್ತ್ರ ಅಥವಾ ವೇದವೆಂದು ಸಾಮಾನ್ಯಾರ್ಥ. ಭಗವಂತನೇ ನಿರ್ಮಿಸಿರುವನೆಂದು ನಂಬುವ ವಿಶಿಷ್ಟ ಧಾರ್ಮಿಕ ಮೂಲ ಗ್ರಂಥಗಳಿಗೆ ಆಗಮಗಳೆನ್ನುವುದು ಆಯಾ ಸಂಪ್ರದಾಯಗಳ ರೂಢಿ. ಪರಮಾತ್ಮನ ಉಪಾಸನೆಯನ್ನು ಹೇಗೆ ಮಾಡಬೇಕು, ಯಾವ ಆಚಾರದಲ್ಲಿ ನಿಷ್ಠೆಯಿರಬೇಕು, ಯಾವುದು ಪುಣ್ಯ, ಯಾವುದು ಪಾಪ, ಈ ಜಗತ್ತಿನ ಸೃಷ್ಟಿ, ಸ್ಥಿತಿ ಲಯಗಳ ರಹಸ್ಯವೇನು, ಎಂಬ ಪ್ರಶ್ನೆಗಳಿಗೆ ಪರಂಪರಾಗತ ಉತ್ತರಗಳನ್ನು ಪ್ರಮಾಣಬದ್ಧವಾಗಿ ಅರುಹುವ ಪವಿತ್ರಗ್ರಂಥಗಳೇ ಆಗಮಗಳೆನ್ನಬಹುದು. ಋಗ್ವೇದ ಸಂಹಿತೆಯಲ್ಲಿ ಬರುವ ಇಂದ್ರಾಗ್ನಿ ಸ್ತೋತ್ರಗಳ ಕಾಲದಲ್ಲಿ ಒಂದು ರೀತಿಯ ಬಹುದೇವತಾವಾದವೇ ಗೋಚರಿಸುವುದೆಂದು ಆಧುನಿಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಅದಾದ ನಂತರ ಬರುವ ಬ್ರಾಹ್ಮಣ ಗ್ರಂಥಗಳಲ್ಲಿ ಬಹು ಜಟಿಲವಾದ ಪರಿಷ್ಕøತ ಯಜ್ಞಗಳ ಪ್ರಕ್ರಿಯೆ ಕಾಣುತ್ತದೆ. ಕಲ್ಪಸೂತ್ರಗಳಲ್ಲೂ ಯಜ್ಞನಿರ್ವಚನಕ್ಕೆ ಪ್ರಾಶಸ್ತ್ಯ. ಉಪನಿಷತ್ತುಗಳಲ್ಲಿ ಮೋಕ್ಷೋಪದೇಶದ ಗುರಿಯಿದ್ದು ಬ್ರಹ್ಮಮೀಮಾಂಸೆ ಬರುತ್ತದೆ. ಇವೆಲ್ಲ ವೈದಿಕ ಸಾಹಿತ್ಯದ ಪ್ರಕಾರಗಳು. ಅಪೌರುಷೇಯ ವೇದ ಸಾಹಿತ್ಯವನ್ನು ವಿಶೇಷ ವಿಪಕ್ಷೆಯಿಲ್ಲದಾಗ ಮಾತ್ರ ಆಗಮ ಇಲ್ಲವೆ ನಿಗಮಗಳೆನ್ನಬಹುದು. ಆದರೆ ವೇದೋತ್ತರ ಕಾಲದ ಶಿವ, ವಿಷ್ಣು, ಶಕ್ತಿ, ಇತ್ಯಾದಿ ಉಪಾಸ್ಯ ದೇವತೆಗಳ ವಿಶಿಷ್ಟೋಪಾಸನೆಯನ್ನು ಕುರಿತ ರಚನೆಗಳಿಗೆ ಮಾತ್ರ ಆಗಮಗಳೆಂದು ಹೇಳುವುದು ಗ್ರಂಥಕಾರರ ರೂಢಿ. ಈ ದೃಷ್ಟಿಯಿಂದ ಉಪಾಸ್ಯ ದೇವತಾ ಭೇದಗಳನ್ನು ಲಕ್ಷ್ಯದಲ್ಲಿಟ್ಟು ಶೈವಾಗಮ, ವೈಷ್ಣವಾಗಮ, ಶಾಕ್ತಾಗಮ, ಜೈನಾಗಮ ಎಂಬ ಮುಖ್ಯ ಶೀರ್ಷಿಕೆಗಳನ್ನು ಆಗಮಗಳನ್ನು ಇಲ್ಲಿ ವಿವೇಚಿಸಬಹುದು. ಶೈವ, ವೈಷ್ಣವ ಮತ್ತು ಶಾಕ್ತಾಗಮಗಳು ವೈದಿಕವಾದರೆ ಜೈನಾಗಮ ಅವೈದಿಕ. ವೈದಿಕಾಗಮಗಳು ಸೃಷ್ಟಿ ಭಗವಂತನಿಂದಾಯಿತೆಂಬುದನ್ನು ಒಪ್ಪುತ್ತವೆ. ಜೈನಾಗಮ ಒಪ್ಪುವುದಿಲ್ಲ.
ಮಹಾಭಾರತದ ಕಾಲಕ್ಕೆ ಆಗಲೇ ಕೆಲವು ವೈಷ್ಣವಾಗಮಗಳು ಅಸ್ತಿತ್ವದಲ್ಲಿದ್ದವೆಂದು ತಿಳಿಯುತ್ತವೆ. ಏಕಾಂತ ಅಥವಾ ಪಾಂಚರಾತ್ರ ಭಾಗವತ ಪ್ರಕ್ರಿಯೆಗಳು ಅಲ್ಲಲ್ಲಿ ನಿರ್ದಿಷ್ಟವಾಗಿರುವುದರಿಂದ ಒಬ್ಬನೇ ಜಗತ್ತಿನ ಕರ್ತ ಮತ್ತು ಪ್ರಭುವೆನ್ನುವುದು ಎಲ್ಲ ವೈದಿಕಾಗಮಗಳ ಸಮಾನಾಂಶ. ಆಗಮ ತತ್ತ್ವವನ್ನು ಸಾಮಾನ್ಯವಾಗಿ ಏಕದೇವತಾಪಾರಮ್ಯವಾದವೆನ್ನಬಹುದು. ಪರದೈವ ಶಿವನೆಂದು ಶೈವಾಗಮಗಳು ವಿಷ್ಣು ಅಥವಾ ನಾರಾಯಣನೆಂದು ವೈಷ್ಣವಾಗಮಗಳೂ ಪರಾಶಕ್ತಿಯೆಂದು ಶಾಕ್ತಾಗಮಗಳೂ ಸಾರುತ್ತವೆ. ಬಂಧನಕ್ಕೆ ಕಾರಣಗಳನ್ನೂ ಮೋಕ್ಷ ಪ್ರಾಪ್ತಿಗೆ ಉಪಾಯ ಅಥವಾ ಸಾಧಕಗಳನ್ನು ವಿವೇಚಿಸುತ್ತವೆ. ಉಪಾಸನೆಗೆ ಅಂಗವಾಗಿ ದೇವತಾ ಪ್ರತೀಕಗಳಾದ ಮೂರ್ತಿಗಳು ಹೇಗಿರಬೇಕು, ದೇವಸ್ಥಾನಗಳನ್ನು ಹೇಗೆ ಕಟ್ಟಬೇಕು, ಪರಿವಾರದೇವತೆಗಳು ಯಾರು, ಅವರ ಮೂರ್ತಿಗಳ ಲಕ್ಷಣ ಹಾಗೂ ಪ್ರತಿಷ್ಠಾ ವಿಧಾನಗಳೇನು, ಜಪಯೋಗ್ಯವಾದ ಮಂತ್ರಗಳ ಸ್ವರೂಪ, ಪುರಶ್ಚರಣಕ್ರಮ, ಗುರುಮಹಿಮೆ, ದೀಕ್ಷಾವಿಧಾನಗಳು ನಿತ್ಯಜೀವನದಲ್ಲಿ ಸಾಧಕನ ಆಚಾರದ ಬಗೆಗೆ ವಿವರಗಳು, ಉಪಾಸನಾಕ್ರಮಗಳು, ಪೂಜೋಪಯೋಗಿ ಸಾಮಗ್ರಿಗಳು, ಲಿಂಗ, ಸಾಲಿಗ್ರಾಮ, ಇತ್ಯಾದಿಗಳ ಲಕ್ಷಣಗಳು ಇವೇ ಮೊದಲಾಗಿ ಧಾರ್ಮಿಕಾಚರಣೆಗೆ ವಿಶ್ವಕೋಶವೆನಿಸುವಂತೆ ಆಗಮಗ್ರಂಥಗಳ ವಿಷಯ ಬಾಹುಲ್ಯ ಪಸರಿಸಿದೆ. ಪ್ರಾಚೀನ ವೇದಗಳಲ್ಲಿ ದೇವಸ್ಥಾನಗಳ ಇಲ್ಲವೆ ಮೂರ್ತಿ ಪೂಜೆಯ ಗಂಧವೂ ಇಲ್ಲ. ಆದರೆ ಆಗಮಗಳಲ್ಲಿ ಅವುಗಳದೇ ಪ್ರಾಧಾನ್ಯ. ಇದನ್ನು ಗಮನಿಸಿದ ಆಧುನಿಕ ವಿದ್ವಾಂಸರು ವೇದಪೂರ್ವವಾದ ಆರ್ಯೇತರ ಎಂದರೆ ದ್ರಾವಿಡ ಸಂಸ್ಕøತಿಗೂ ವೈದಿಕ ಆರ್ಯ ಸಂಸ್ಕøತಿಗೂ ಸಮ್ಮಿಶ್ರಣವುಂಟಾದುದರ ಪರಿಣಾಮವೇ ಆಗಮಗಳ ಉಗಮಕ್ಕೆ ಮೂಲವೆಂದು ಭಾವಿಸುತ್ತಾರೆ. ವೇದೋತ್ತರ ಕಾಲದಲ್ಲಿ ಭಾರತಕ್ಕೆ ವಲಸೆ ಬಂದ ಶಕ, ಹೂಣ, ಯವನ, ಪಾರಸಿಕ, ಮಗಾ ಮುಂತಾದ ವಿದೇಶಿಯರೂ ಹಿಂದೂ ಮತದಲ್ಲಿ ಸೇರ್ಪಡೆಗೊಳ್ಳಲು ಆಗಮೋಕ್ತಧರ್ಮ ಸಹಾಯಕವಾದಂತೆ ತಾನೂ ಕಾಲಕ್ರಮದಲ್ಲಿ ಪರಿವರ್ತನೆಗಳನ್ನು ಪಡೆದುದನ್ನು ನೋಡುತ್ತೇವೆ. ಸೂರ್ಯೋಪಾಸನೆ, ಸ್ಕಂದ ಪೂಜೆಗಳ ವಿಕಾಸದಲ್ಲಿ ವಿದೇಶೀಯ ಪ್ರಭಾವ ಸ್ಪಷ್ಟವಾಗಿದೆ. ವೇದಾಂತದ ಪ್ರಕ್ರಿಯೆಗೂ ಆಗಮೋಕ್ತ ಸಿದ್ಧಾಂತಕ್ಕೂ ತತ್ತ್ವವಿಷಯದಲ್ಲಿ ಸಾಮ್ಯವುಂಟು. ಅದ್ವೈತ, ದ್ವೈತ, ದ್ವೈತಾದ್ವೈತ - ಈ ಮೂರು ವಿಚಾರಧಾರೆಗಳು ಆಗಮದಲ್ಲಿ ಕಾಣುತ್ತಿದ್ದು ಆಚಾರತ್ರಯರ ದುದ್ಗ್ರಂಥಗಳಲ್ಲಿ ಉಪನಿಷತ್ತತ್ತ್ವನ್ನು ಪುನರಾಲೋಚಿಸಲು ಪ್ರೇರಣೆಯನ್ನಿತ್ತಿವೆ. ಒಮ್ಮೊಮ್ಮೆ ವೇದಾಂತಿಗಳು ಆಗಮಗಳನ್ನು ವೇದಬಾಹ್ಯವೆಂದು ದೂರುವುದೂ ಆಗಮಿಕರು ವೇದವನ್ನು ಮೋಕ್ಷೋಪಯೋಗಿಯಲ್ಲದ ಯಜ್ಞವಾದವೆಂದು ತಿರಸ್ಕರಿಸುವುದೂ ಕಾಣಬರುವುದುಂಟು. ಮೋಕ್ಷಸಾಧನೆ ಹಾಗೂ ಸಾಕ್ಷಾತ್ಕಾರಕ್ಕಾಗಿ ಹೊರಟ ಆಗಮಗಳು ಕೆಲವೊಮ್ಮೆ ಹತ್ತಿರದ ದಾರಿಗಳೆಂದು ಉಗ್ರ ಹಾಗೂ ಆಕ್ಷೇಪಾರ್ಹ ಆಚಾರಗಳಿಗೂ ಅವಕಾಶವಿತ್ತಿರುವುದನ್ನು ನೋಡುತ್ತೇವೆ. ಕೆಲವೊಂದು ಶೈವ ಹಾಗೂ ಶಾಕ್ತಮತಗಳಲ್ಲಿ ಕಾಪಾಲಿಕ ಕೌಲ ಇತ್ಯಾದಿ ಮಾಂಸ, ಮದ್ಯ, ಮತ್ಸ್ಯ, ಮುದ್ರಾ, ಮೈಥುನ ಮುಂತಾದ ವಾಮಾಚಾರಗಳೂ ಘೋರ ನರಬಲಿಯೇ ಮುಂತಾದ ಹಿಂಸಾಚಾರಗಳೂ ಮುಂದಾದ ಕಾರಣ ಸಾಮಾಜಿಕ ಬಹಿಷ್ಕಾರಕ್ಕೂ ಪಾತ್ರವಾದವು.
ಮುಖ್ಯವಾಗಿ ವೈದಿಕಾಗಮಗಳಲ್ಲಿ ಶೈವಾಗಮ, ವೈಷ್ಣವಾಗಮ, ಶಕ್ತಾಗಮಗಳು ಪ್ರಸಿದ್ಧವಾಗಿವೆ. ಇಂದಿನವರೆಗೂ ಭಾರತದ ವಿವಿಧ ಧರ್ಮಪಂಥಗಳವರಲ್ಲಿ ಅಷ್ಟಿಷ್ಟು ಆಚರಣೆಯಲ್ಲುಳಿದಿವೆ. ಕಾಲದಿಂದ ಕಾಲಕ್ಕೆ ವಿಕಾಸಗೊಂಡ ಪರಿಷ್ಕøತವಾಗಿವೆ. ತಮಿಳುನಾಡಿನ ಶೈವಸಿದ್ಧಾಂತ, ಕರ್ನಾಟಕದ ವೀರಶೈವಧರ್ಮ, ಕಾಶ್ಮೀರದ ಪ್ರತ್ಯಬಿಜ್ಞಾ ಶಾಸ್ತ್ರ, ಇವು ಶೈವಾಗಮಗಳಿಂದ ಪ್ರೇರಿತವಾದ ಜನಪ್ರಿಯ ಧರ್ಮಗಳು. ಶ್ರೀವೈಷ್ಣವರ ವಿವಿಧ ಸಂಪ್ರದಾಯಗಳಿಗೆ ಪಾಂಚರಾತ್ರಾಗಮಗಳೇ ಮೂಲ. ಹಾಗೆಯೇ ಶ್ರೀವಿದ್ಯಾ ಮುಂತಾದ ಮಂತ್ರೋಪಾಸನಾ ಕ್ರಿಯೆಗಳಿಗೆಲ್ಲ ಶಾಕ್ತಾಗಮಗಳೇ ಆಧಾರ. ಶಂಕರಾದ್ವೈತ ಸಂಪ್ರದಾಯದಲ್ಲೂ ಕೆಲ ಮಟ್ಟಿಗೆ ಶಾಕ್ತ ಆಗಮಾಚರಣೆ ಸೇರಿಕೊಂಡಿದೆ. ಆದುದರಿಂದ ಪರಿಷ್ಕøತ ಹಿಂದೂ ಧರ್ಮಕ್ಕೆ ಆಗಮಗಳೇ ಮೊದಲು ಎನ್ನುವಂತಿದೆ. ಆಗಮಗಳಲ್ಲಿ ಕೆಲವು ಕ್ರಿಸ್ತಶಕಾರಂಭದ ವೇಳೆಗೇ ಹುಟ್ಟಿರಬಹುದಾದರೂ ಕ್ರಿ.ಶ. ಎಂಟನೆಯ ಶತಮಾನದವರೆಗೂ ಬೆಳೆಯುತ್ತಿದ್ದಂತೆ ಕಾಣುತ್ತದೆ. ಕಾಲದಿಂದ ಕಾಲಕ್ಕೆ ಅವು ಬೆಳೆದೂ ಇರಬೇಕು. ಕ್ರಿ.ಶ.ಐದನೆಯ ಶತಮಾನದ್ದೆಂದು ಹೇಳಲಾಗಿರುವ ಕಂಚಿ ಕೈಲಾಸನಾಥ ದೇವಾಲಯದಲ್ಲಿ ಪಲ್ಲವ ರಾಜನಾದ ರಾಜಸಿಂಹವರ್ಮ ತಾನು ಇಪ್ಪತ್ತೆಂಟು ಶೈವಾಗಮಗಳ ಭಕ್ತನೆಂದುಕೊಂಡಿರುವ ಶಿಲಾಶಾಸನವಿದೆ. ಕೆಲವು ಆಗಮೋಕ್ತ ಆಂಶಗಳು ವಾಯುವೀಯ ಸಂಹಿತೆಯೇ ಮುಂತಾದ ಪುರಾಣಗಳಲ್ಲಿಯೂ ದೊರೆಯುತ್ತವೆ.
ಶೈವಾಗಮನಗಳಲ್ಲಿ ಕಾಮಿನಾದಕ, ಯೋಗಜ, ಚಿಂತ್ಯ, ಕಾರಣ, ಅಜಿತ, ದೀಪ್ತ, ಸೂಕ್ಷ್ಮ, ಸಾಹಸ್ರಕ, ಅಂಶುಮಾನ ಮತ್ತು ಸುಪ್ರಭ ಈ ಹತ್ತು ಸಾಕ್ಷಾತ್ ಶಿವಪ್ರಣೀತಗಳೆಂದೂ ಮಿಕ್ಕ ಹದಿನೆಂಟು ವಿಜಯ, ನಿಶ್ವಾಸ, ಸ್ವಾಯಂಭುವ ಇತ್ಯಾದಿ ಅಷ್ಟಾದಶರುದ್ರರಿಗೆ ಉಪದಿಷ್ಟವಾದುದರಿಂದ ರೌದ್ರಾಗಮವೆಂದೂ ನಾಮಾಂತರ ಪಡೆದಿವೆ. ಇವೆಲ್ಲವೂ ಇನ್ನೂ ಮುದ್ರಿತವಾಗಿರುವುದಿಲ್ಲ. ಕೆಲವು ಆಗಮಗಳ ಭಾಗಗಳು ಮಾತ್ರ ಸಿಕ್ಕಿವೆ. ಎಷ್ಟೊ ಹಸ್ತ ಪ್ರತಿಗಳಲ್ಲೇ ಉಳಿದಿವೆ.
ಆಗಮಗಳೆಲ್ಲ ಸಾಮಾನ್ಯವಾಗಿ ನಾಲ್ಕು ಪಾದಗಳಲ್ಲಿ ವಿಭಕ್ತವಾಗಿರುತ್ತವೆ. 1. ವಿದ್ಯಾ ಅಥವಾ ಜ್ಞಾನಪಾದ. 2. ಯೋಗಪಾದ. 3. ಕ್ರಿಯಾಪಾದ. 4. ಚರ್ಯಾಪಾದ. ಕ್ರಿಯಾ ಮತ್ತು ಚರ್ಯಾಪಾದಗಳೇ ಗಾತ್ರದಲ್ಲಿ ವಿಸ್ತøತವಾಗಿ ದೇವಾಲಯಗಳ ನಿರ್ಮಾಣವಿಧಿ, ಪೂಜಾಕ್ರಮಗಳು, ಮೂರ್ತಿ ಪ್ರತಿಷ್ಠಾವಿಧಾನಗಳು, ಧಾರ್ಮಿಕ ಸಂಪ್ರದಾಯಗಳು ಇವುಗಳ ವಿವರಣೆಗೇ ಮೀಸಲಾಗಿದೆ. ಮಿಕ್ಕ ಜ್ಞಾನ ಹಾಗೂ ಯೋಗಪಾದಗಳಲ್ಲಿ ತಾತ್ತ್ವಿಕ ವಿವೇಚನೆ, ಸೃಷ್ಠಿ ಪ್ರಕ್ರಿಯೆ, ಮೋಕ್ಷ ಸಾಧನೆಗಳ ನಿರ್ದೇಶನಗಳೂ ಮಿಕ್ಕ ವಿಷಯಗಳ ನಡುವೆ ಬರುತ್ತವೆ. ಕಾಮಿಕಾಗಮದ ಜ್ಞಾನ ಕಾಂಡದ ತತ್ತ್ವನಿರೂಪಣೆಯನ್ನಿಲ್ಲಿ ಸಂಗ್ರಹಿಸಿದೆ:
ಶಿವ ಅನಾದಿ, ಅನಂತ, ಸರ್ವಜ್ಞ ಮತ್ತು ಸರ್ವಶಕ್ತ. ಆತನೇ ಜಗತ್ತಿಗೆ ನಿಮಿತ್ತ ಕಾರಣ. ತನ್ನಲ್ಲಿಯೇ ಅಂತರ್ಗತವಾಗಿರುವ ಶಕ್ತಿ ಚಿದ್ರೂಪನಾದ ಶಿವನಿಗೂ ಅಚಿದ್ರೂಪವಾದ ಸೃಷ್ಠಿಗೂ ಮಧ್ಯವರ್ತಿಯಾದ ತತ್ತ್ವ. ಎಲ್ಲ ಜೀವರುಗಳ ಬಂಧನಕ್ಕೂ ಮತ್ತು ಬಿಡುಗಡೆಗೂ ಈ ಶಕ್ತಿಯೇ ಕಾರಣ. ಇದನ್ನೇ ಮಾಹೇಶ್ವರೀ ಶಕ್ತಿ ಎಂದೂ ಕರೆದಿದ್ದಾರೆ. ಆತ್ಮನನ್ನೂ ಅಣವ, ಮಾಯಾ ಮತ್ತು ಕಾರ್ಮಿಕ ಮಲಗಳೆಂಬ ಮುಪ್ಪುರಿಪಾಶ ಬಂಧಿಸಿದೆ. ಆತ್ಮನ ಆನಂದ ಸ್ವರೂಪವನ್ನು ನಾಶಗೊಳಿಸಿ, ಬಂಧನಕ್ಕೆ ಗುರಿಪಡಿಸಿ, ಅವನನ್ನು ಪಶುವನ್ನಾಗಿ ಮಾಡುತ್ತದೆ. ಈ ಪಾಶ ಶಿವ ತನ್ನ ಅನುಗ್ರಹ ಶಕ್ತಿಯಿಂದ ಈ ಪಾಶವನ್ನು ಕತ್ತರಿಸಿ ಉದ್ಧಾರ ಮಾಡುವ ಪಶುಪತಿ. ಜೀವ ಈ ಪಾಶದಿಂದ ಬಿಡುಗಡೆ ಪಡೆದಾಗಲೇ ಶಿವ ಜೀವರ ಸಾಮರಸ್ಯ ಸಿದ್ಧಿಸುತ್ತದೆ. ಇದೇ ಮೋಕ್ಷ.
ವೈಷ್ಣವಾಗಮಗಳಲ್ಲಿ ಪಾಂಚಾರಾತ್ರ, ವೈಖಾನಸ ಎಂಬ ಎರಡು ವಿಭಾಗಗಳಿವೆ. ಇಲ್ಲಿ ಆಗಮ ಗ್ರಂಥಗಳಿಗೆ ಪ್ರಾಯಿಕವಾಗಿ ಸಂಹಿತೆಯೆಂಬ ನಾಮಾಂತರವುಂಟು. ಇಲ್ಲಿ ವಿಷ್ಣುವೇ ಪರಮದೈವ. ಭಗವಂತನೇ ಸಾಕ್ಷಾತ್ತಾಗಿ ಅನಂತ, ಗರುಡ, ವಿಷ್ವಕ್ಸೇನ, ಬ್ರಹ್ಮ ಮತ್ತು ಇಂದ್ರನಿಗೆ ಐದು ರಾತ್ರಿಗಳಲ್ಲಿ ಉಪದೇಶಿಸಿದ ಶಾಸ್ತ್ರವೇ ಪಾಂಚರಾತ್ರ ಅಥವಾ ಭಗವಚ್ಛಾಸ್ತ್ರ. ಇದು ನಾರದ, ಸನಕ, ಶಾಂಡಿಲ್ಯಾದಿಗಳಿಂದ ಭೂಲೋಕಕ್ಕೆ ಬಂದು ಪ್ರಚಾರವಾಯಿತೆನ್ನುತ್ತಾರೆ. ಭಗವಂತ ತನ್ನ ಪರರೂಪಿನಿಂದ ವೈಕುಂಠದಲ್ಲಿರುವಂತೆ ಚರ್ತುವ್ರ್ಯೂಹನಾಗಿಯೂ ಮೂರ್ತಿಗಳಲ್ಲಿ ಅರ್ಚಾವತಾರನಾಗಿಯೂ ಇರುವನೆಂದು ಹೇಳಿಕೆ. ಕಪಿಂಜಲ ಸಂಹಿತೆ, ವಿಷ್ಣು ಸಂಹಿತೆ, ಹಯಶೀರ್ಷ ಸಂಹಿತೆ, ಶಾಂಡಿಲ್ಯ ಸಂಹಿತೆ ಮುಂತಾದವು ಪ್ರಾಚೀನ ಪಾಂಚರಾತ್ರ ಸಂಹಿತೆಗಳು. ಅಹಿರ್ಬುಧ್ನ್ಯ ಸಂಹಿತೆ, ಜಯಾಖ್ಯ ಸಂಹಿತೆ ಇತ್ಯಾದಿಗಳು ಅಚ್ಚಾಗಿವೆ. ಅಹಿರ್ಬುಧ್ನ್ಯ ಸಂಹಿತೆಯಲ್ಲಿ ಸಾಂಖ್ಯದರ್ಶನದ ಅರವತ್ತು ಪ್ರಮೇಯಗಳು ಷಷ್ಠಿ ತಂತ್ರವೆಂದು ನಿರ್ದಿಷ್ಟವಾಗಿವೆ. ಇವು ಪ್ರಾಚೀನ ಶಾಂಖ್ಯದ ಸ್ವರೂಪವೆಂದು ಭಾವಿಸುವುದುಂಟು. ವೈಖಾನಸ ಸಂಹಿತೆಗಳಲ್ಲಿ ಅತ್ರಿ, ಮರೀಚಿ, ಕಾಶ್ಯಪ, ಭೃಗು ಇವರ ಹೆಸರಿನಿಂದ ಪ್ರಸಿದ್ಧವಾದ ಸಂಹಿತೆಗಳಿವೆ. ತಿರುಮಲೆಯಲ್ಲಿರುವ ಶ್ರೀನಿವಾಸ ದೇವಸ್ಥಾನ ವೈಖಾನಸ ಸಂಪ್ರದಾಯಕ್ಕೆ ಸೇರಿದ್ದು. ದೇವಾಲಯದಲ್ಲಿ ಆಗಮೋಕ್ತವಾಗಿ ವಿಷ್ಣುವಿನ ಅರ್ಚನೆ ಮಾಡಿದರೆ ಅಗ್ನಿಹೋತ್ರ ಫಲವೇ ಬರುವುದೆಂದು ಕಾಶ್ಯಪ ಸಂಹಿತೆ ಹೇಳುತ್ತದೆ. ಭಕ್ತಿಯೇ ಪರಮ ಪುರಷಾರ್ಥ, ದುಃಖತ್ರಯ ಜಾಲಭೇದಿನಿ, ಸುಖಚಿಂತಾಮಣಿಪ್ರದಾ, ಕೃಷ್ಣಾವೈತರಣೀಯಾನ, ಶುಭಪ್ರದಾ ಎಂದು ಮುಂತಾಗಿ ವರ್ಣಿಸಲ್ಪಟ್ಟಿದೆ. ಭಗವಂತನ ಪರಾತ್ಪರ ರೂಪ ಬ್ರಹ್ಮಾದಿಗಳಿಗೂ ಅಗೋಚರ. ಅದರ ಸ್ಥೂಲ ಅರ್ಚಾವತಾರರೂಪ ಸಕಲ ಮಾನವರಿಗೂ ಗೋಚರ. ಇದು ಭಕ್ತಿಮುಕ್ತಿಪ್ರದವೆನ್ನಲಾಗಿದೆ. ವೈಖಾನಸಾಗಮ ಸೌಮ್ಯವೆಂದೂ ಗ್ರಾಮ, ನಗರ, ಪತ್ತನ ಮುಂತಾದೆಡೆಗಳಲ್ಲಿ ದೇವಾಲಯ ನಿರ್ಮಾಣ ಹಾಗೂ ಪೂಜೆಗೆ ಯೋಗ್ಯವೆಂದು ಹೇಳಿ ಪಾಂಚರಾತ್ರಾಗಮ ಆಗ್ನೇಯವಾದ್ದರಿಂದ ನದಿತೀರ, ಅದ್ರಿ, ವನಪ್ರದೇಶಗಳಲ್ಲಿ ಭಗವದಾರಾಧನೆಗೆ ಯೋಗ್ಯವೆಂದು ತಿಳಿಸುತ್ತದೆ. ಅಭಿಗಮನ (ದೇವಾಲಯಕ್ಕೆ ಹೋಗುವುದು), ಉಪಾದಾನ(ಪೂಜಾ ಸಾಮಗ್ರಿಯ ಸಂಗ್ರಹ), ಇಜ್ಯಾ(ಪೂಜೆ), ಸ್ವಾಧ್ಯಾಯ(ವೇದಾಧ್ಯಯನ), ಯೋಗ(ಧ್ಯಾನ), ಇವು ಆಗಮೋಕ್ತ ನಿತ್ಯವಿಧಿಗಳು.
ಶಂಕರಾಚಾರ್ಯರು ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ವೇದಾಂತಕ್ಕೆ ಅಸಮ್ಮತವಾದ ಅಂಶಗಳನ್ನು ಶೈವ ಹಾಗೂ ಪಾಂಚರಾತ್ರ ಆಗಮಗಳೆರಡರಲ್ಲೂ ತೋರಿಸಿದರೆ ರಾಮಾನುಜಾಚಾರ್ಯರು ಪಾಂಚರಾತ್ರತತ್ತ್ವವೇ ಬಾದರಾಯಣನಿಗೆ ಅಭಿಮತ ಸಿದ್ಧಾಂತವೆಂದು ಸಾಧಿಸಿದ್ದಾರೆ. ಮಧ್ವಾಚಾರ್ಯರೂ ತಂತ್ರಸಾರಾಗಮವೆಂಬ ಭಾಗವನ್ನು ತಮ್ಮ ಆಧಾರಗ್ರಂಥವಾಗಿ ತಿಳಿಸಿದ್ದಾರೆ. ಯಾಮುನಾಚಾರ್ಯರು ಆಗಮಪ್ರಾಮಾಣ್ಯವೆಂಬ ಗ್ರಂಥವನ್ನೇ ರಚಿಸಿದ್ದಾರೆ. ವೈಷ್ಣವಾಗಮದಲ್ಲಿ ವಿಷ್ಣು ಶಕ್ತಿಯಾದ ಲಕ್ಷ್ಮಿಗೆ ವಿಶಿಷ್ಟ ಸ್ಥಾನವನ್ನು ಕಲ್ಪಿಸಲಾಗಿದೆ. ಲಕ್ಷ್ಮೀ ಸಮೇತನಾದ ನಾರಾಯಣನ ಉಪಾಸನೆಯನ್ನು ವಿಧಿಸಲಾಗಿದೆ.
ಶಾಕ್ತಾಗಮಗಳಲ್ಲಿ ಪರಶಿವನ ಶಕ್ತಿಯೇ ಉಪಾಸ್ಯದೇವತೆ. ತಾತ್ತ್ವಿಕ ವಿಚಾರಗಳಲ್ಲಿ ಶೈವಾಗಮದ ಪ್ರಕ್ರಿಯೆಯೇ ಇಲ್ಲೂ ಅನ್ವಯಿಸುತ್ತದೆ. ದೇಹಾಂತರ್ಗತ ಷಟ್ಚಕ್ರನಿರೂಪಣೆ, ಯೋಗಮಾರ್ಗದಿಂದ ಅಮೃತತ್ವ ಪ್ರಾಪ್ತಿ ಇವು ಎರಡಕ್ಕೂ ಸಮಾನ. ಶಕ್ತಿ ವ್ಯತಿರಿಕ್ತವಾದ ಶಕ್ತಿಮಂತನನ್ನೇ ಇವರು ಒಪ್ಪುವುದಿಲ್ಲ. ಶಕ್ತಿ ಮಂತ ಅಥವಾ ಶಿವಶಕ್ತಿಯ ಉಪಾಧಿ ಹೀನ ಪರಮಾವಸ್ಥೆ ಮಾತ್ರವೆಂದು ಇವರ ಅಭಿಪ್ರಾಯ. ಶಕ್ತಿಹೀನ ಶಿವ ಶಿವನೇ ಸರಿಯೆಂಬ ಉಕ್ತಿಗಳೂ ಸಿಕ್ಕುತ್ತವೆ. ಸೌಂದರ್ಯಲಹರೀ ಸ್ತೋತ್ರದಲ್ಲಿ ಶಾಕ್ತ ಪ್ರಕ್ರಿಯೆ, ಬಿಂದು, ತ್ರಿಕೋಣಾದಿ ಶ್ರೀಚಕ್ರ ನಿರೂಪಣೆ, ಷೋಡಷಾಕ್ಷರೀ ಮಹಿಮೆ ಎಲ್ಲವೂ ಬಂದಿದ್ದು ಇದು ಶಂಕರಾಚಾರ್ಯ ರಚಿತವೆಂಬ ಪ್ರತೀತಿಯುಂಟು. ಅಂತರ್ಮುಖ ಚಕ್ರಪೂಜೆ ಸಮಯ ಅಥವಾ ದಕ್ಷಿಣ ಮಾರ್ಗವೆಂದು ಬಹಿರ್ಮುಖ ಚಕ್ರಪೂಜೆ ಕಾಲ ಮಾರ್ಗವೆಂದೂ ಶಾಕ್ತರಲ್ಲಿ ಮಾರ್ಗ ಭೇದಗಳಿವೆ. ಶುಭಾಗಮಗಳ ಸಂಖ್ಯೆ ಐದೆಂದೂ ಕಾಲಾಗಮಗಳು ಅರವತ್ತುನಾಲ್ಕೆಂದೂ ಹೇಳುವುದುಂಟು. ಶಾಕ್ತ ಆಗಮಗಳಿಗೆ `ತಂತ್ರ ವೆಂದೂ ನಾಮಾಂತರವುಂಟು. ಇಂದ್ರಜಾಲ ವಶೀಕರಣಾದಿ ಸಿದ್ಧಿಗಳೂ ಶಾಕ್ತಾಗಮೋಕ್ತ ಗೂಡೋಪಾಸನೆಗಳಿಂದ ಶಕ್ಯವೆಂದು ನಂಬುತ್ತಾರೆ. ಕುಲಾರ್ಣವ ತಂತ್ರ, ಮಹಾನಿರ್ವಾಣ ತಂತ್ರ ಮುಂತಾದವು ಅಚ್ಚಾಗಿವೆ. ಶಿವಾದ್ವೈತದಂತೆ ಇಲ್ಲೂ ತಾತ್ತ್ವಿಕವಾಗಿ ಅದ್ವೈತವೇ ಪರತತ್ತ್ವವೆನ್ನುವ ತಂತ್ರಗಳೇ ಹೆಚ್ಚು, ಅಲ್ಲಲ್ಲಿ ಶಕ್ತಿ ವಿಶಿಷ್ಟಾದ್ವೈತದ ಛಾಯೆಯೂ ಉಂಟು.
ಜೈನಾಗಮದಲ್ಲಿ ಅರ್ಹಂತರೂ ಸಿದ್ಧರೂ ಆರಾಧ್ಯರು. ಗಣಧರ, ಉಪಾಧ್ಯಾಯ, ಸರ್ವಸಾಧು, ಪರಮೇಷ್ಠಿಗಳೂ, ಗುರುಗಳು ಜಿನಮುಖೋದ್ಭೂತವಾದ ಸ್ಯಾದ್ವಾದವೇ ತತ್ತ್ವ. ಜೈನರ ಪವಿತ್ರ ಆಗಮಗಳು ಅರ್ಧಮಾಗಧೀ ಭಾಷೆಯಲ್ಲಿವೆ; ಜಿನ ಭಾರತೀ ಪ್ರತಿಷ್ಠೆ ಮತ್ತು ಪೂಜಾ ಕ್ರಮಗಳು ಸಂಸ್ಕøತದ ಅಕಲಂಕಸಂಹಿತೆ, ನೇಮಿಚಂದ್ರನ ಪ್ರತಿಷಾತಿಲಕ, ಜಿನಸೇನನ ಆದಿಪುರಾಣ ಮುಂತಾದ ಗ್ರಂಥಗಳಲ್ಲಿ ವರ್ಣಿತವಾಗಿವೆ. ಅನೇಕ ಅಂಗೋಪಾಂಗಗಳಿಂದ ಕೂಡಿರುವ ಜೈನಾಗಮದಲ್ಲಿ ಏಳನೆಯದಾದ ಉಪಾಸಕಾಧ್ಯಾಯನಾಂಗದಲ್ಲಿ ದೇವತಾಪ್ರತಿಷ್ಠೆ, ಪೂಜಾಕಲ್ಪ, ಶ್ರಾವಕಾಚಾರ, ಯತ್ಯಾಚಾರ ಇತ್ಯಾದಿಗಳಿಗೆ ಅವಕಾಶ ದೊರೆತಿವೆ.
ಹೀಗೆ ಭಾರತೀಯ ಧರ್ಮಗಳ ವಿಕಾಸದಲ್ಲಿ ಆಗಮಗಳ ಸ್ಥಾನ ಹೆಚ್ಚಿನದು. (ಕೆ.ಕೆ.) ಆಗಮಗಳಲ್ಲಿ ಶಿಲ್ಪಶಾಸ್ತ್ರಕ್ಕೆ ಸೇರಿದ ಅತಿ ಮುಖ್ಯವೂ ಅತಿ ಪ್ರಾಚೀನವೂ ಆದವುಗಳೆಂದರೆ -- ಮಾನಸಾರಾಗಮ, ಅಂಶುಮದ್ಭೇದಾಗಮ, ಸುಪ್ರಭೇದಾಗಮಗಳು. ಇವುಗಳಲ್ಲಿ ವಾಸ್ತುಶಿಲ್ಪ (ದೇವಾಲಯ ಮತ್ತಿತರ ಕಟ್ಟಡಗಳ ನಿರ್ಮಾಣ), ದೇವತೆಗಳು ಮತ್ತು ಮನುಷ್ಯರು (ಚಕ್ರವರ್ತಿಗಳು, ಮಹಾರಾಜರು, ರಾಜರು, ಮಂಡಲೇಶ್ವರರು) ಉನ್ನತ ಅಂತಸ್ತಿನವರು ಇವರೆಲ್ಲರ ಅಂತಸ್ತುಗಳಿಗೆ ಅನುಗುಣವಾದ ತಾಳ ಪ್ರಮಾಣ, ವಿಗ್ರಹರಚನೆ, ವಿಗ್ರಹಗಳ ಕೈಯಲ್ಲಿರುವ ಚಿಹ್ನೆಗಳು, ಭಂಗಿಗಳು, ಮುದ್ರೆಗಳು, ಮುಕುಟಗಳು, ದೈವಿಕಾಭರಣಾಲಂಕಾರ, ಕಿರೀಟಗಳ ರಚನೆ, ಜಟಾವಿಧಾನ, ಮುಕುಟಗಳ ವಿಧಾನ, ಕೇಶಾಲಂಕಾರ ಧಮ್ಮಿಲ್ಲ ಕರಂಡ, ಮುಕುಟ, ಪುಷ್ಪಪಟ್ಟಾ ಮುಂತಾದುವು. ಇವನ್ನು ವಿವರಣೆಸಹಿತ ವರ್ಣಿಸಲಾಗಿದೆ. ಈ ನೇಮಗಳನ್ನು ಅನುಸರಿಸಿ ಇತ್ತೀಚಿನ ಶಿಲ್ಪಶಾಸ್ತ್ರಗಳು ಅಂದರೆ ಕಾಶ್ಯಪಶಿಲ್ಪ, ಭೃಗುಶಿಲ್ಪ, ಮಾಯಾಶಿಲ್ಪ, ಶುಕ್ರನೀತಿಸಾರ, ಬೃಹದ್ದೇಶಿ, ಶಿಲ್ಪರತ್ನ, ಪಾಂಚರಾತ್ರ, ಸಮರಾಂಗಣ ಸೂತ್ರಧಾರಾ, ವೈಖಾನ ಮುಂತಾಗಿ ಒಟ್ಟಿಗೆ 90 ಕೃತಿಗಳು ರಚಿತವಾಗಿವೆ. (ಪಿ.ಎಸ್.)
No comments:
Post a Comment
If you have any doubts. please let me know...