ಏತದ್ದೇಶ ಪ್ರಸೂತಸ್ಯ ಸಕಾಶಾದಗ್ರಜನ್ಮನಃ
ಜಗತ್ತಿನ ಯಾವ ದೇಶವೂ ಸಹ ತನ್ನ ನೆಲವನ್ನು ತಾಯಿ ಎಂದು ಒಪ್ಪಿಕೊಂಡಿರದ ಕಾಲದಲ್ಲಿ ಇಡೀ ಭೂ ಮಂಡಲವನ್ನೇ ತನ್ನ ತಾಯಿ ಮತ್ತು ಆ ತಾಯಿಯ ಮಕ್ಕಳು ನಾವು ಎಂದು ಪರ್ಜನ್ಯನು ಹೇಳುವುದು ನಮ್ಮ ಅಥರ್ವ ವೇದದ ಭೂಮಿಸೂಕ್ತದಲ್ಲಿ ಸಿಗುತ್ತದೆ. ಅಲ್ಲಿ ತಾಸು ನೋ ದೇಹ್ಯಭಿ ನಃ ಪವಸ್ವ ಮಾತಾ ಭೂಮಿಃ ಪುತ್ರೋsಹಂ ಪೃಥಿವ್ಯಾಃ | ಅಥರ್ವ ವೇದ ೧೦ : ೧ : ೧೨ ಅಂದರೆ, ಭೂಮಿ ಎನ್ನುವುದು ತಾಯಿಯಾಗಿದ್ದರೆ, ಪರ್ಜನ್ಯನು ತಂದೆ ಎಂದು ಸ್ಪಷ್ಟವಾಗಿ ಹೇಳಿದ್ದು ಪರ್ಜನ್ಯ ಅವರಿಬ್ಬರ ಮಕ್ಕಳು ಮಳೆ ಮತ್ತು ಮಳೆಯನ್ನಾಶ್ರಯಿಸಿದ ಜೀವಿಗಳು ಎಂದು ಹೇಳಲಾಗಿದೆ. ಇಂತಹ ನುಡಿಗಟ್ಟುಗಳು ಮತ್ತು ಆ ರೀತಿಯ ಭಾವನೆಗಳು ಈ ನೆಲದ ಸಂಸ್ಕಾರದಿಂದ ಬರತಕ್ಕವು. ಇದನ್ನೇ ಮನು ಸ್ಮೃತಿಯಲ್ಲಿ
ಏತದ್ದೇಶ ಪ್ರಸೂತಸ್ಯ ಸಕಾಶಾದಗ್ರಜನ್ಮನಃ |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ || ಮನು : ೨ : ೨೦ ತಾವು ಮಾಡಿರತಕ್ಕ ಪೂರ್ವ ಜನ್ಮದ ಪುಣ್ಯದ ಫಲದಿಂದ ಈ ಜನ್ಮದಲ್ಲಿ ಮನುಷ್ಯರಾಗಿ ಈ ಪುಣ್ಯ ಭೂಮಿಯಲ್ಲಿ ಹುಟ್ಟುತ್ತಾರೆ ಎಂದಿರುವುದು ಈ ಭೂಮಿಯ ಮಹತ್ವ ತಿಳಿಸುತ್ತದೆ.
ಇನ್ನು ಯಜುರ್ವೇದ ನಮಗೆ ಮೊದಲು ರಾಷ್ಟ್ರಗೀತೆಯನ್ನು ಕೊಟ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆ ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾ ರಾಷ್ಟ್ರೇ ರಾಜನ್ಯಃ ಶೂರ
ಇಷವ್ಯೋsತಿವ್ಯಾಧೀ ಮಹಾರಥೋ ಜಾಯತಾಂ ದೋಗ್ಧ್ರೀ ಧೇನುರ್ವೋಧಾನಡ್ವಾನಾಶುಃ
ಸಪ್ತಿಃ ಪುರಂಧಿರ್ಯೋಷಾ ಜಿಷ್ಣೂ ರಥೇಷ್ಠಾಃ ಸಭೇಯೋ ಯುವಾಸ್ಯ ಯಜಮಾನಸ್ಯ
ವೀರೋ ಜಾಯತಾಂ ನಿಕಾಮೇ ನಿಕಾಮೇ ನಃ ಪರ್ಜನ್ಯೋ ವರ್ಷತು ಫಲವತ್ಯೋ ನ
ಓಷಧಯಃ ಪಚ್ಯಂತಾಂ ಯೋಗಕ್ಷೇಮೋ ನಃ ಕಲ್ಪತಾಮ್ ||
ಯಜುರ್ವೇದದ ಈ ಮಂತ್ರ ಅದೆಷ್ಟು ಅರ್ಥವತ್ತಾಗಿ ನಮ್ಮ ಜನ ಮತ್ತು ನಮ್ಮ ನೆಲವನ್ನು ಹೊಗಳಿ ಸಮೃದ್ಧವಾಗಿರಲಿ ಎಂದು ಹೇಳುತ್ತದೆ.
ಓ ಪರಮಾತ್ಮನೇ(ದೇವನೇ) ನಮ್ಮ ಈ ರಾಷ್ಟ್ರದಲ್ಲಿ ಬ್ರಹ್ಮತೇಜಸ್ಸಿನಿಂದ ಕೂಡಿದ ಬ್ರಾಹ್ಮಣನು(ಬ್ರಾಹ್ಮಣ ಎನ್ನುವುದು ಇಲ್ಲಿ ಜಾತಿವಾಚಕವಲ್ಲ, ಕರ್ಮ ಮತ್ತು ಆಚಾರದ ದೃಷ್ಟಿಯಿಂದ) ಕಾಲ ಕಾಲಕ್ಕೂ ಹುಟ್ಟಿ ಬರುತ್ತಿರಲಿ. ಕ್ಷತ್ರಿಯನಾದವನು ತನ್ನ ಕ್ಷಾತ್ರ ತೇಜಸ್ಸಿನಿಂದ ಕೂಡಿದವನಾಗಿ ಮತ್ತು ಶೂರನೂ ಶಸ್ತ್ರಾಸ್ತ್ರ ಪ್ರಯೋಗಗಳಲ್ಲಿ ನಿಪುಣನೂ, ರೋಗರುಜಿನಗಳಿಲ್ಲದವನಾಗಿಯೂ, ಮಹಾರಥಿಯಾಗಿ ಜನ್ಮವೆತ್ತಿ ಬರುತ್ತಿರಲಿ. ಗೋವುಗಳು ಯಥೇಷ್ಟವಾಗಿ ಹಾಲು ಕೊಡುತ್ತಿರಲಿ. ಎತ್ತುಗಳು ಹೊರೆ ಹೊರಲು ಸಮರ್ಥವಾಗಿರಲಿ. ಕುದುರೆಗಳು ವೇಗವಾಗಿ ಓಡುವಂತಾಗಲಿ. ನಾರಿಯು ತನ್ನ ಉತ್ತರದಾಯಿತ್ವವನ್ನು ಸಮರ್ಥವಾಗಿ ನಿರ್ವಹಿಸುವವಳಾಗಿರಲಿ. ಈ ಶುಭಕರ್ಮಕರ್ತನ ಪುತ್ರನು ಜಯಶಾಲಿಯೂ, ಉತ್ತಮ ರಥಿಕನೂ, ಸಭೆಯಲ್ಲಿ ಕುಳಿತುಕೊಳ್ಳಲು(ಸಭೆಯಲ್ಲಿ ಆಸೀನರಾಗಲು) ಅರ್ಹನೂ, ಉತ್ಸಾಹಶಾಲಿಯೂ ಆಗಿರಲಿ. ನಮಗಾಗಿ ಓಷಧಿಯು(ಈ ಗಿಡ ಮರ ಬಳ್ಳಿಗಳು), ಫಲಭರಿತವಾಗಿ ಪಕ್ವವಾಗಲಿ. ನಮಗೆ ಯೋಗಕ್ಷೇಮವು ಸದಾ ಸಿದ್ಧಿಸಲಿ. ಎನ್ನುವುದು ಎಂತಹ ಉದಾತ್ತತೆಯನ್ನು ಪ್ರತಿಬಿಂಬಿಸುತ್ತದೆ. ಇದು ಈ ನೆಲದ ಮೊದಲ ವೈದಿಕ ರಾಷ್ಟ್ರಗೀತೆ. ಇಲ್ಲಿ ಸ್ವಂತದ್ದನ್ನು ಯಾವುದನ್ನೂ ಆಶಿಸದೇ ಬೇರೆಯವರಿಗಾಗಿ ಮತ್ತು ಈ ನೆಲಕ್ಕಾಗಿ ಎಲ್ಲವನ್ನೂ ಈ ಯಜುರ್ವೇದದ ಸೂಕ್ತಕಾರರು ಕೇಳಿಕೊಳ್ಳುತ್ತಾರೆ.
ಈ ನೆಲದ ರಾಜಕೀಯ ಮತ್ತು ಧಾರ್ಮಿಕ ಸಹಿಷ್ಣುತೆ ಪ್ರಪಂಚದ ಇತರ ದೇಶಗಳಿಗೆ ಮಾದರಿಯಾಗಿತ್ತು ಎನ್ನುವುದು
ಭಾರತ ಎನ್ನುವ ಮೂರಕ್ಷದಲ್ಲಿ ಅಡಗಿತ್ತು ಅದನ್ನೊಮ್ಮೆ ಗಮನಿಸೋಣ.
ರಾಮಾಯಣದಲ್ಲಿ ದಶರಥನಿಗೆ ಕೈಕೇಯಿಯಲ್ಲಿ ಜನಿಸಿದವ ಭರತ. ಇಡಿ ರಾಮಾಯಣದ ಕೇಂದ್ರ ಬಿಂದು ಈತ. ಮಂಥರೆಯ ಮಾತನ್ನು ಕೇಳದೇ ಹೋಗಿದ್ದರೆ ರಾಮಾಯಣದ ಕಥೆ ಮುಂದುವರಿಯುತ್ತಿರಲಿಲ್ಲವೇನೋ. ಅದೇನೇ ಇರಲಿ. ಭರತ ಎನ್ನುವ ಹೆಸರು ರಾಮಾಯಣದಲ್ಲಿ ಸಿಗುವುದು ಇಲ್ಲಿಯೇ.
ಮಹಾಭಾರತದಲ್ಲಿ ಪುರುವಂಶದ ದುಷ್ಯಂತ ಮತ್ತು ಶಕುಂತಲೆಗೆ ಮಗನಾಗಿ ಜನಿಸುವವನೇ ಭರತ ಎನ್ನುವ ಉಲ್ಲೇಖ ಆದಿಪರ್ವ, ವಿರಾಟಪರ್ವ ಮತ್ತು ದ್ರೋಣ ಪರ್ವದಲ್ಲಿ ಸಿಗುತ್ತದೆ.
ದುಷ್ಯಂತನು ತನ್ನ ಪತ್ನಿಯಾದ ಶಕುಂತಲೆಯಲ್ಲಿ ಭರತನೆಂಬ ಪುತ್ರನನ್ನು ಪಡೆಯುತ್ತಾನೆ. ಈ ಭರತನು ಮಹಾವಿದ್ವಾಂಸನಾಗಿದ್ದ. ಪುರುವಿನ ವಂಶವು ಮುಂದೆ ಶಾಕುಂತಲನ ಶಕ್ತಿ-ಪರಾಕ್ರಮಗಳಿಂದಾಗಿ ಭರತವಂಶವೆಂಬ ಹೆಸರನ್ನು ಗಳಿಸಿ ಬಹಳ ಪ್ರಖ್ಯಾತವಾಗುತ್ತದೆ. ಭಾರತದ ರಾಜಕೀಯ ಚಿತ್ರಣ ಇಲ್ಲಿಂದ ಆರಂಭವಾಗುತ್ತದೆ. ಭರತನು ತನ್ನ ಮೂವರು ಹೆಂಡಿರಲ್ಲಿ ಒಂಬತ್ತು ಮಂದಿ ಮಕ್ಕಳನ್ನು ಪಡೆಯುತ್ತಾನೆ. ಆದರೆ ಅವರಲ್ಲಿ ಆತನಿಗೆ ತನ್ನ ನಂತರ ರಾಜ್ಯವನ್ನು ಆಳಲು ಸಮರ್ಥರಾದ ಮಕ್ಕಳು ಕಾಣಿಸುವುದಿಲ್ಲ. ಅವರಾರೂ ತನ್ನ ನಂತರ ಪಟ್ಟಕ್ಕೆ ಬರಲು ಸಮರ್ಥರಲ್ಲ ಎಂದು ಭಾವಿಸಿ ಭರತನು ಆ ಒಂಬತ್ತು ಮಂದಿ ಮಕ್ಕಳನ್ನೂ ತಿರಸ್ಕರಿಸುತ್ತಾನೆ. ಅದರಿಂದ ಕುಪಿತರಾದ ಭರತನ ಹೆಂಡತಿಯರು ತಮ್ಮ ಮಕ್ಕಳನ್ನೇ ಸಂಹರಿಸುತ್ತಾರೆ. ಅದರಿಂದಾಗಿ ಭರತನು ಸಂತಾನ ಹೀನನಾಗುತ್ತಾನೆ. ಪುತ್ರಪ್ರಾಪ್ತಿಗಾಗಿ ಅನೇಕಾನೇಕ ಯಜ್ಞ ಯಾಗಾದಿಗಳನ್ನು ಮಾಡಿ ಭರದ್ವಾಜರ ಅನುಗ್ರಹದಿಂದ ಭುಮನ್ಯುವೆಂಬ ಪುತ್ರನನ್ನು ಪಡೆಯುತ್ತಾನೆ. ಸತ್ಪುತ್ರವಂತನಾದೆನೆಂದು ಸಂತುಷ್ಟನಾದ ಭರತನು ಭುಮನ್ಯುವನ್ನು ಯುವರಾಜನನ್ನಾಗಿ ಮಾಡುತ್ತಾನೆ. ಇದೇ ಭರತ ಎನ್ನುವವನೇ ಮುಂದೆ ಭಾರತ ಎನ್ನುವ ಹೆಸರಿಗೂ ಮೂಲನಾಗುತ್ತಾನೆ ಎನ್ನುವ ಮಾತೂ ಇದೆ.
ಹಿಂದೆ ಋಷಭದೇವ ಎನ್ನುವವನೊಬ್ಬನಿದ್ದ ಆತನಿಗೆ ಜಯಂತಿ ಎನ್ನುವ ಮಡದಿ ಇದ್ದಳು. ಸಚ್ಚಾರಿತ್ರವಂತರು, ಅಪ್ರತಿಮ ದೇಶಭಕ್ತರೂ ಪ್ರಜಾಪಾಲಕರಾಗಿದ್ದ ಅವರಿಗೆ ಜನಿಸಿದ ಮಗನೇ ಭರತ. ಈತ ಪಾಲಿಸಿದ ಭೂಭಾಗವನ್ನು ಭರತಖಂಡ ಎಂದು ಕರೆಯಲಾಯಿತು ಎನ್ನುವುದು ಭಾಗವತ ಮತ್ತು ವಿಷ್ಣುಪುರಾಣದಲ್ಲಿನ ಉಲ್ಲೇಖ. ಭರತಖಂಡ ಮಾತ್ರವಲ್ಲದೇ ಅಜನಾಭವರ್ಷ ಎನ್ನುವುದಾಗಿಯೂ ಕರೆಯಲಾಗಿದೆ.
ಅಯಂತು ತೇ ನವಮಸ್ತೇಷಾಂ ದ್ವೀಪಸ್ಸಾಗರ ಸಂವೃತಃ |
ಯೋಜನಾನಾಂ ಸಹಸ್ರಂತು ದ್ವೀಪೋಯಂ ದಕ್ಷಿಣೋತ್ತರಃ ||
ಆಯತಸ್ತು ಕುಮಾರೀತಃ ಗಂಗಾಯಾಃ ಪ್ರವಹಾವಧಿಃ |
ತಿರ್ಯಗೂರ್ಧ್ವಂತು ವಿಸ್ತೀರ್ಣಃ ಸಹಸ್ರಾಣಿ ದಶೈವತು |
ದ್ವಿಪೋಹ್ಯುಪನಿವಿಷ್ಟೋಯಂ ಮ್ಲೇಚ್ಛೈರಂತೇತು ಸರ್ವತಃ ||
ಇದು ಮತ್ಸ್ಯಪುರಾಣದ ಮಾತು. ಕನ್ಯಾಕುಮಾರಿಯಿಂದ ಹಿಮಾಲಯದ ತನಕ ವ್ಯಾಪಿಸಿರುವ ಈ ದೇಶ ಪೂರ್ವ ಪಶ್ಚಿಮದ ಸಮುದ್ರಗಳ ನಡುವೆ ಇದೆ. ಕ್ರಮೇಣ ಇದು ಮೇಚ್ಚರ ಆಕ್ರಮಣಕ್ಕೆ ಗುರಿಯಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ.
ಪ್ರಿಯವ್ರತ ರಾಜನ ಮಗನಾದ ಅಗ್ನೀಧ್ರ ಎನ್ನುವವನಿಗೆ ಮಗನಾಗಿ ಜನಿಸುವವನು ಅಜನಾಭ ಎನ್ನುವವನು. ಈತನು ಪಾಲಿಸುವ ಜಂಬೂದ್ವೀಪದ ಒಂದು ಪ್ರದೇಶವನ್ನು ಅಜನಾಭವರ್ಷ ಎಂದು ಕರೆಯಲಾಗಿದೆ. ಆದರೆ ಇವೆಲ್ಲಕ್ಕೂ ಮಿಗಿಲಾದ ಮತ್ತು ನನ್ನ ಮನಸ್ಸನ್ನು ಹಿಡಿದಿರುವುದು ಭಾರತದ ಪ್ರಾಚೀನತೆ.
ಭಾರತೀಳೇ ಸರಸ್ವತಿ ಯಾ ವಃ ಸರ್ವಾ ಉಪಬ್ರುವೇ |
ತಾ ನ ಶ್ಚೋದಯತ ಶ್ರಿಯೇ || ಇದು ಋಗ್ವೇದದ ಒಂದನೇ ಮಂಡಲದಲ್ಲಿ ಬರುವ ಋಕ್ಕು. "ಹೇ ಭಾರತೀ, ಇಳಾ, ಸರಸ್ವತೀ ಎಂಬ ಮೂರು ಲೋಕಗಳ ಅಧಿದೇವತೆಗಳೇ, ನಿಮ್ಮೆಲ್ಲರನ್ನೂ ಸಮೀಪಿಸಿ ಸ್ತುತಿಸುತ್ತೇನೆ. ನೀವೆಲ್ಲರೂ ಸಂಪತ್ತನ್ನು ಪಡೆಯುವುದಕ್ಕಾಗಿ ನಮ್ಮನ್ನು ಪ್ರೇರೇಪಿಸಿ. ಎನ್ನುವ ಅರ್ಥವನ್ನು ಇದು ಧ್ವನಿಸುತ್ತದೆ. ಇಲ್ಲಿ ಈ ಮೂರೂ ದೇವತೆಗಳನ್ನು ಯಜ್ಞಕ್ಕೆ ಪ್ರಾರ್ಥಿಸಲಾಗಿದೆ.
ಋಗ್ವೇದದ ಒಂದನೇ ಮಂಡಲದಲಿ ಭಾರತೀ. ಇಳಾ ಮತ್ತು ಸರಸ್ವತಿಯರನ್ನು ತಿಸ್ರೋ ದೇವೀ ಎನ್ನುವುದಾಗಿಯೇ ಕರೆಯಲಾಗಿದೆ. ಇದರಲ್ಲಿ ಭಾರತಿಗೆ ಹೋತ್ರಾ ಮತ್ತು ಶುಚಿಃ ಮತ್ತು ಅರ್ಪಿತಾ ಎನ್ನುವುದಾಗಿ ಹೇಳಲಾಗಿದೆ. ಈ ತಿಸ್ರೋ ದೇವತೆಗಳು ಅಗ್ನಿಯನ್ನು ಪ್ರತಿಬಿಂಬಿಸುತ್ತವೆ.
ನಿರುಕ್ತದಲ್ಲಿ "ಏತು ನೋ ಯಜ್ಞಂ ಭಾರತೀ ಕ್ಷಿಪ್ರಂ | ಭರತ ಆದಿತ್ಯಸ್ತಸ್ಯ ಭಾ ಇಳಾಚ ಎನ್ನಲಾಗಿದೆ. ಭ ಎಂದರೆ ಸೂರ್ಯನನ್ನು ನಿರ್ದೇಶಿಸಲಾಗಿದೆ. ರತ ಎನ್ನುವುದು ಪ್ರಭೆಯನ್ನು ನಿರ್ದೇಶಿಸುತ್ತದೆ. ಅಂದರೆ ಪ್ರಭಾರೂಪವಾದ ದೇವತೆ ಈಕೆ. ಈ ತಿಸ್ರೋ ದೇವತೆಗಳಲ್ಲಿ ಇಳಾ ಪಾರ್ಥಿವಾಗ್ನಿಯನ್ನು ಅಲಂಕರಿಸಿ ಆಕ್ರಮಿಸಿಕೊಂಡಳು, ಸರಸ್ವತಿಯು ಮಧ್ಯವನ್ನಾಕ್ರಮಿಸಿದಳು. ಭಾರತಿಯು ದೇವಲೋಕವನ್ನು ಪಡೆದುಕೊಂಡಳು ಎಂದು ಬೃಹದ್ದೇಶಿಯಲ್ಲಿ ಹೇಳಲಾಗಿದೆ. ಅಂದರೆ ಭೂಮಿ ಅಂತರಿಕ್ಷ ಮತ್ತು ಸ್ವರ್ಗವನ್ನು ಒಬ್ಬೊಬ್ಬರು ಸ್ವೀಕರಿಸಿಕೊಂಡರು. "ಇಳಾ ಸರಸ್ವತೀ ಮಹಿ" ಎಂದು ವೇದದಲ್ಲಿ ಬರುವುದು ಇಲ್ಲಿ ಮಹೀ ಎನ್ನುವುದು ಭಾರತಿ ಎನ್ನುವುದರ ವಿಶೇಷಣ ಎನ್ನಲಾಗಿದೆ.
ಭರತಃ ಆದಿತ್ಯಸ್ತಸ್ಯ ಭಾ ಎನ್ನುವದನ್ನು ಗಮನಿಸಿದರೆ ಇಲ್ಲಿ ಭರತ ಎನ್ನುವುದು ಸೂರ್ಯನಿಗೆ. ಜಗತ್ತಿನ ಪ್ರತಿಯೊಂದು ಪ್ರಾಣಿ ಪಕ್ಷಿಗಳೆಲ್ಲವನ್ನೂ ಚೆತನಾ ಸ್ವರೂಪರಂತೆ ಮಾಡುವವನೇ ಭರತ ಅವನೇ ಸೂರ್ಯ. ಈತ ಮಳೆಯ ಮತ್ತು ಅದರ ನೀರಿನಿಂದಲೂ ಜನರ ಅಭಿವೃದ್ಧಿಯನ್ನು ಮಾಡುವಂತವನು ಆದುದರಿಂದಲೇ ಭರತ ಎನ್ನುವುದಾಗಿ ಕರೆಯಲಾಗಿದೆ. ತಸ್ಯ ಭಾ ಎಂದರೆ ಅವನ ಪ್ರಕಾಶಕ್ಕೆ ಎಂದು ಅಂದರೆ ಸೂರ್ಯನ ಪ್ರಕಾಶವನ್ನು ಇಲ್ಲಿ ಭಾ ಎಂದು ಕರೆಯಲಾಗಿದೆ. "ಇಳಾ ಮನುಷ್ಯದಿಹ ಚೇತಯಮಾನಾ" ಅಂದರೆ ಇಳಾ ಎನ್ನುವವಳು ತಿಳಿದಿರುವವಳು ಎನ್ನುವುದಾಗಿ ಅರ್ಥ. ಅಂದರೆ ಹೇಗೆ ಹಸಿದ ಮನುಷ್ಯ ತನ್ನ ಆಹಾರ ಸಿಕ್ಕಿದೊಡನೆ ಅವಸರದಿಂದ ಬಂದು ಸ್ವೀಕರಿಸುತ್ತಾನೋ ಅದೇ ರೀತಿ ಈ ಇಳಾ ಅಗ್ನಿಗೆ ಸಮರ್ಪಿಸುವ ಆಹುತಿಯನ್ನು ಬೇಗನೇ ಬಂದು ಸ್ವೀಕರಿಸುತ್ತಾಳೆ ಎನ್ನುವ ಅರ್ಥ.
ಹೀಗೇ ಭಾರತೀ ಎಂದರೆ ದ್ವಾದಶಾದಿತ್ಯರಲ್ಲಿ ಒಬ್ಬನು. ಆದಿತ್ಯನ ದೀಪ್ತಿಗೆ ಭಾ ಎಂದು ಹೆಸರು ಆದುದರಿಂದ ಭಾರತಿ ಎಂದರೆ ಸೂರ್ಯನ ಪ್ರಕಾಶ ಮತ್ತು ಸೂರ್ಯ ಮಂಡಲದಲ್ಲಿನ ಅಗ್ನಿಯನ್ನು ಕುರಿತಾಗಿ ಹೇಳಿರುವುದು ಎನ್ನುವ ಅರ್ಥ. ಇಲ್ಲಿ ಇನ್ನೊಂದು ಗಮನಿಸ ಬೇಕಾದ ಸಂಗತಿ ಎಂದರೆ, ನಮಗೆ ಕಾಣಿಸುವ ಸೂರ್ಯನಲ್ಲದೇ ಇನ್ನೂ ಹನ್ನೊಂದು ಸೂರ್ಯರಿದ್ದಾರೆ ಎನ್ನುವ ಅಂಶ. ಇದು ಇಂದಿನ ಆಧುನಿಕ ವಿಜ್ಞಾನವೂ ಹೌದೆನ್ನುತ್ತದೆ.
ಇಳಾ ಎಂದರೆ ಭೂಮಿಯನ್ನು ಕುರಿತಾಗಿ ಹೇಳಿರುವುದು. "ಮನುಷ್ವತ್ ಚೇತಯಂತೀ" ಎಂದರೆ ಮನುಷ್ಯರಿಗೆ ಭೂಮಿಯ ಮೇಲಿನ ಅನ್ನಾದಿ ಆಹಾರಗಳನ್ನು ಸಂಪತ್ತು ಮತ್ತು ಶಾಂತಿಯನ್ನು ಕೊಡುವುದರಿಂದ ಇವಳು ಭೂಮಿಯಲ್ಲಿನ ಅಗ್ನಿ.(ಇಲ್ಲಿ ಅಗ್ನಿ ಎನ್ನುವುದನ್ನು ಕನ್ನಡದ ಬೆಂಕಿಗೆ ಸೀಮಿತಗೊಳಿಸಿಕೊಳ್ಳಬಾರದು. ಅಗ್ನಿ ಎನ್ನುವುದು ಶಕ್ತಿಗೆ)
ಸರಸ್ವತೀ ಎನ್ನುವವಳು ಅಂತರಿಕ್ಷದ ಸಿಡಿಲು ಮತ್ತು ಮಿಂಚು ಗುಡುಗುಗಳಿಗೆ ಅಧಿದೇವತೆಯಾದ್ದರಿಂದ ಅಲ್ಲಿನ ಅಗ್ನಿಯೆಂದು ಹೇಳಲಾಗಿದೆ. ಅಗ್ನಿ ಅಥವಾ ಸೂರ್ಯ (ಶಕ್ತಿ) ಭೂಮಿಗೆ ಅನಿವಾರ್ಯ ಸಕಲ ಚರಾಚರ ವಸ್ತುಗಳು ಜೀವಿಗಳೂ ಸಹ ಈ ಶಕ್ತಿಯನ್ನು ಅವಲಂಬಿಸಿವೆ. ಇಂತಹ ಶಕ್ತಿ ಭಾರತ. ಈ ಹೆಸರೇ ಅತ್ಯಂತ ಸುಂದರ. ಈ ಸುಂದರ ಹೆಸರಿನಲ್ಲಿಯೇ ಸೂರ್ಯನಂತಹ ಪ್ರಭೆ ಹೊಂದಿದೆ. ಸೂರ್ಯನ ಶಕ್ತಿ ಈ ಭಾರತಕ್ಕಿದೆ. ಸೂರ್ಯನಿಲ್ಲದೇ ಹೇಗೆ ಭೂಮಿ ಇಲ್ಲವೋ ಅದೇ ರೀತಿ ಭಾರತವಿಲ್ಲದ ವಿಶ್ವ ಇರಲಿಕ್ಕಿಲ್ಲ. ಇಡಿಯ ಜಗತ್ತನ್ನು ಹಿಡಿದಿಡುವ ಮತ್ತು ಇಡೀ ಜಗತ್ತಿಗೆ ಬೆಳಕನ್ನು ಕೊಡುವ ಶಕ್ತಿ ಈ ಭಾರತಕ್ಕಿದೆ. ಹೌದು ನಮ್ಮ ದೇಶಕ್ಕೆ ಭಾರತ ಎನ್ನುವ ಹೆಸರು ಬಂದಿರುವುದು ಇಲ್ಲಿ ಆಳಿದ ರಾಜರುಗಳಿಂದ ಇರಬಹುದು ಆದರೆ ಜಗತ್ತಿಗೆ ಶಕ್ತಿಯನ್ನೊದಗಿಸುವ ಭಾರತ ನನ್ನ ಕಣ್ಣಿಗೆ ಕಾಣಿಸುವುದು ಇಂತಹ ಸೂರ್ಯನಾರಾಯಣನಿಂದಲೇ.
ಸದ್ಯೋಜಾತರು
No comments:
Post a Comment
If you have any doubts. please let me know...