~ಗೃಹಪ್ರವೇಶದಲ್ಲಿ ವಾಸ್ತುಶಾಂತಿಯನ್ನು ಏಕೆ ಮಾಡಬೇಕು?~
ಭೂಮಿಯನ್ನೇ ಮುಳುಗಿಸಹೊರಟಿದ್ದವ ದುಷ್ಠ ಹಿರಣ್ಯಾಕ್ಷ. ಕರುಣಾಳು ದೇವ ವರಾಹನಾಗಿ ಬಂದು ಧರೆಯನ್ನುದ್ಧರಿಸಿದ. ಭೂಮಿಯನ್ನು ಮತ್ತೆ ಕಕ್ಷೆಯಲ್ಲಿಟ್ಟ. ಆಗ ವರಾಹದೇವ ಬೆವರ ಹನಿಗಳನ್ನು ಭೂಮಿಗೆ ಸಿಡಿಸಿದ. ಮೂರು ಸ್ವೇದ ಬಿಂದುವಿನಿಂದ ಮೂವರು ಆವಿರ್ಭವಿಸಿದರು.
• ಒಬ್ಬ ಪೀತವರ್ಣದ ನರಕಾಸುರ.
• ಇನ್ದನೋರ್ವ ಕೆಂಪುಬಣ್ಣದ ಮಂಗಳ, ಕುಜ.
• ಮತ್ತೊಬ್ಬ ಕಪ್ಪುಬಣ್ಣದ ವಾಸ್ತುಪುರುಷ.
ಈ ಮೂವರೂ ಭೂಮಾತೆಯ ತನುಜರು. ಭೂವರಾಹನ ಮಕ್ಕಳು. ಆಚಾರ್ಯರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ಹೇಳಿದರು. ‘ವಾಸ್ತುರ್ವ –ರಾಹಸ್ಯ ಹರೇಃ ಸುತಃ’ ವಾಸ್ತುಪುರುಷನು ವರಾಹರೂಪೀ ಶ್ರೀಹರಿಯ ಮಗ ಎಂದು.
‘ಅಂಧಕಾಸುರ ಸಂಗ್ರಾಮದಲ್ಲಿ ಶಿವನಿಂದಾಗಿ ಆವಿರ್ಭವಿಸಿದ ವಾಸ್ತುಪುರುಷ ನೋರ್ವನಿದ್ದಾನೆ.
ಕಶ್ಯಪಗೃಹಿಣಿಯಾದ ಸಿಂಹಿಕೆಯಲ್ಲಿ ಹುಟ್ಟಿದ ವಾಸ್ತು ಮತ್ತೊಬ್ಬನಿದ್ದಾನೆ. ಪುರಾಣಗಳಲ್ಲಿ ಈ ಬಗ್ಗೆ ಮಾಹಿತಿಯಿದೆ.
ವರಾಹಸುತನಾದ ಪ್ರಧಾನ ವಾಸ್ತುವಿನ ಸಹಚರರಿವರು.
ಪ್ರಾಸಾದದ ಹಾಗೂ ಸ್ವಗೃಹದ ಸುತ್ತಮುತ್ತಲಿನ ಪ್ರಾಕಾರ ಮೊದಲಾದ ಉಪವಿಭಾಗಗಳಿಗೆ ಸಂಬಂಧಿಸಿದವರು.
ವಾಸ್ತು ಪುರುಷನು ಭೂಮಿಯ ಮಗನಾಗಿ ಸಚ್ಚೇತನವಾಗಿದ್ದರೂ ನರಕಾಸುರನಂತೆ ಅಸುರಾವೇಶಕ್ಕೆ ಒಳಗಾಗಿ ಬಿಟ್ಟ. ಜಗತ್ಪೀಡಕನಾಗಿ ದೇವಲೋಕಕ್ಕೂ ಲಗ್ಗೆಯಿಟ್ಟ.
ದೇವೇಂದ್ರನು ವಜ್ರಾಯುಧದಿಂದ ಬಡಿದು ಭೂಮಿಯಲ್ಲಿ ಬೀಳಿಸಿಬಿಟ್ಟ.
ಭೂಮಿಯಲ್ಲಿ ಬೋರಲಾಗಿ ಬಿದ್ದ ವಾಸ್ತು. ಈಶಾನ್ಯಕ್ಕೆ ತಲೆ, ನೈರ್ಋತ್ಯಕ್ಕೆ ಕಾಲು, ಕೆದರಿದ ಕೂದಲು, ಕರ್ರಗಿನ ದೊರಗು ಮೈ, ಕೆಂಗಡರಿಂದ ಕಣ್ಣು, ಜೋಡಿಸಿದ ಎರಡು ಕೈ, ಬೋರಲು ಬಿದ್ದೂ ಕೈ ಮುಗಿದ ವಾಸ್ತುವಿನ ಮೇಲೆ ಬ್ರಹ್ಮಾದಿದೇವತೆಗಳು ಬಂದು ಕುಳಿತರು. ವಾಸ್ತುವಿನ ಅದೃಷ್ಟ ದೊಡ್ಡದು. ಇವರ ಸ್ಪರ್ಶಮಾತ್ರದಿಂದ ವಾಸ್ತುವಿನಲ್ಲಿದ್ದ ಅಸುರ ಬೇಸ್ತುಬಿದ್ದ.
ವಾಸ್ತು ಶುದ್ಧನಾದ. ಅಸುರಾವೇಶ ತೊಲಗಿತು.
ಕೈಮುಗಿದು ದೇವತೆಗಳಲ್ಲಿ ವಿನಂತಿಸಿದ. ‘ನನ್ನನ್ನು ಉದ್ಧರಿಸಿರಿ. ನನಗೊಂದು ಕರ್ತವ್ಯಕರ್ಮ ಆದೇಶಿಸಿರಿ’.
ದೇವತೆಗಳೆಂದರು “ಹೊಟ್ಟೆ ಹೊರೆಯುವುದಕ್ಕಾಗಿ ದೇವತೆಗಳೆಡೆ ದಂಡೆತ್ತಿ ಬರಬೇಡ. ನೀನು ನೆಲದ ಮಗ. ಈ ಭೂತಲಯದಲ್ಲಿಯೇ ಸ್ಥಿರನಾಗಿ ನೆಲಸು. ಭೂಮಿಯನ್ನು ಅಗೆಯುವ ಮಂದಿ ನಿನ್ನನ್ನು ಆರಾಧಿಸುತ್ತಾರೆ.
ನಿನ್ನ ಮೇಲೆ ಸನ್ನಿಹಿತರಾದ ನಮ್ಮನ್ನು ಆಹುತಿಯನ್ನಿತ್ತು ಪೂಜಿಸುತ್ತಾರೆ. ಅವರು ಮಾಡುವ ಈ ಪೂಜೆ, ಹೋಮ, ಬಲಿಪ್ರದಾನಗಳಿಂದ ನಿನ್ನ ಜೀವನ.
ಇದಕ್ಕೆ ಪ್ರತಿಯಾಗಿ ನೀನು ಅವರ ನೆಲದಲ್ಲಿ
• ಸ್ಥಿರನಾಗು,
• ಶಿವನಾಗು,
• ಶುಭನಾಗು.
ಅವರ ಗೃಹವು ಶಾಂತಿ -ನೆಮ್ಮದಿಗಳಿಗೆ ತವರಾಗುವಂತೆ ನೋಡಿಕೋ. ರೋಗ ರುಜಿನಗಳಿಗೆ ಆಸಪದವಾಗದಂತೆ ರಕ್ಷೆಯಾಗು. ನೂತನಗೃಹಾದಿಗಳನ್ನು ನಿರ್ಮಿಸಿ ಈ ಬಗೆಯ ಪೂಜೆ ನಡೆಸದೆ ಒಂದೊಮ್ಮೆ ಅಲ್ಲಿ ವಾಸಿಸ ತೊಡಗಿದರೆ ಆ ಗೃಹವೇ ನಿನಗೆ ಆಹಾರ”
ಗೃಹಪ್ರವೇಶಾದಿ ಸಂದರ್ಭಗಳಲ್ಲಿ ವಾಸ್ತುಪೂಜೆಯನ್ನು ಖಡ್ಡಾಯವಾಗಿ ನಡೆಸತಕ್ಕದು ಎಂಬುದನ್ನು ಪುರಾಣಗಳು ಹೇಳುವ ಪರಿಯಿದು.
_ಸಂಗ್ರಹ: ಶ್ರೀ ವೇ ಚನ್ನೇಶಯ್ಯ ಶಾಸ್ತ್ರಿಗಳು ಹಿರೇಕೆರೂರ_
No comments:
Post a Comment
If you have any doubts. please let me know...