ರಾಮಾಯಣದ ಉತ್ತರಕಾಂಡದ ೪೩ನೆಯ ಸರ್ಗದಲ್ಲಿ ಬರುವ ಈ ಉಲ್ಲೇಖ ನಮ್ಮ ಬುದ್ಧಿ ಜೀವಿಗಳಿಗೆ ಯಾಕೆ ಗೋಚರಿಸುತ್ತಿಲ್ಲ ? ಇದನ್ನೇ ತಿರುಚಿ ರಾಮ ಹೆಂಡತಿಯನ್ನು ನಿಷ್ಕರುಣೆಯಿಂದ ಕಾಡಿಗೆ ಅಟ್ಟಿದ ಎನ್ನುವ ಕೂಗು ಯಾಕೆ ?? ಈ ಕಥೆಯಲ್ಲಿ ಎಲ್ಲಿಯೂ ರಾಮ ಕ್ರೋಧದಿಂದ ಸೀತೆಯನ್ನು ಕಾಡಿಗೆ ಬಿಟ್ಟಿಲ್ಲ. ಆತ ಅಲ್ಲಿಯೂ ಆಶ್ರಮದಲ್ಲಿ ಬಿಡಲು ತಿಳಿಸಿದ. ಆದರೆ ಆತ ನಿಜ ಕಾರಣವನ್ನು ಸೀತೆಗೂ ತಿಳಿಸಿಲ್ಲ, ಮತ್ತು ಲಕ್ಷ್ಮಣನೂ ತಿಳಿಸಿಲ್ಲ, ರಾಮ ನೊಂದುಕೊಳ್ಳುತ್ತಾನೆ. ಮರುಗುತ್ತಾನೆ. ಅಳುತ್ತಾನೆ ವ್ಯಾಕುಲನಾಗುತ್ತಾನೆ. ತನ್ನ ಪ್ರಜೆಗಳ ಹಿತದೃಷ್ಟಿಯನ್ನು ಕಾಣುತ್ತಾನೆ. ಹಾಗಾದರೆ ಬಾಯಿಗೆ ಬಂದಂತೆ ಕೂಗುವವರಿಗೆ ಏನನ್ನೋಣ ?
ತತ್ರೋಪವಿಷ್ಟಂ ರಾಜಾನಮುಪಾಸನ್ತೇ ವಿಚಕ್ಷಣಾಃ |
ಕಥಾನಾಂ ಬಹುರೂಪಾಣಾಂ ಹಾಸ್ಯಕಾರಾಃ ಸಮನ್ತತಃ || ರಾಮನು ತನ್ನ ಅರಮನೆಯ ಮಧ್ಯದ ಕೊಠಡಿಯಲ್ಲಿ ಕುಳಿತಿದ್ದ. ಆತನ ಪರಿವಾರದವರು ಆಪ್ತೇಷ್ಟರು ಕುಳಿತಿದ್ದರು. ವಿವಿಧ ಕಥೆಗಳನ್ನು ಹೇಳುವುದರಲ್ಲಿ ನಿಪುಣರಾದ ಹಾಸ್ಯ ಮತ್ತು ವಿನೋದಗಳನ್ನು ಮಾಡುವ ಸ್ನೇಹಿತರು ಕುಳಿತುಕೊಳ್ಳುತ್ತಾರೆ. ವಿಜಯ, ಮಧುಮತ್ತ, ಕಾಶ್ಯಪ, ಮಂಗಲ, ಕುಲ, ಸುರಾಜಿ, ಕಾಲಿಯ, ಭದ್ರ, ದಂತವಕ್ತ್ರ ಮತ್ತು ಸುಮಾಗಧ ಮೊದಲಾದ ಸ್ನೇಹಿತರು ಶ್ರೀರಾಮನನ್ನು ಸುತ್ತುವರಿದು ಕುಳಿತಿದ್ದರು. ಎಲ್ಲರೂ ಹಾಸ್ಯಭರಿತ ಕಥೆಗಳನ್ನು ಹೇಳುತ್ತಿದ್ದರು. ಹೀಗೆ ಕಥೆಯನ್ನು ಹೇಳುತ್ತಿದ್ದ ಸಂದರ್ಭದಲ್ಲಿ ಶ್ರೀರಾಮನು ಭದ್ರನೆಂಬುವವನನ್ನು ಪ್ರಶ್ನಿಸುತ್ತಾನೆ : “ಭದ್ರ ! ಅಯೋಧ್ಯೆಯಲ್ಲಿ ಮತ್ತು ನಮ್ಮ ರಾಷ್ಟ್ರದ ಇತರೆಡೆಗಳಲ್ಲಿ ಯಾವ ವಿಶೇಷವಾದ ಕಥೆಯನ್ನು ಜನರು ಪರಸ್ಪರವಾಗಿ ಆಡಿಕೊಳ್ಳುತ್ತಿದ್ದಾರೆ? ನಮ್ಮಲ್ಲಿರುವ ಹಳ್ಳಿಗಳಲ್ಲಿ ನನ್ನ ವಿಷಯವಾಗಿ ಹಾಗೂ ಸೀತೆಯ ವಿಷಯವಾಗಿ, ಭರತ, ಲಕ್ಷ್ಮಣ, ಶತ್ರುಘ್ನರ ವಿಷಯವಾಗಿ ಮತ್ತು ತಾಯಿ ಕೈಕೇಯಿಯ ವಿಷಯವಾಗಿ ಏನೆಂದು ಮಾತನಾಡಿಕೊಳ್ಳುತ್ತಿದ್ದಾರೆ ? ಎಂದು ಪ್ರಶ್ನಿಸುತ್ತಾನೆ.
ವಕ್ತವ್ಯತಾಂ ಚ ರಾಜಾನೋ ವನೇ ರಾಜ್ಯೇ ವ್ರಜನ್ತಿ ಚ || ಒಂದು ವೇಳೆ ರಾಜನು ಆಚಾರ ವಿಚಾರಗಳಿಂದ ಹೀನನಾಗಿ ಬಿಟ್ಟರೆ ಅವನು ತನ್ನ ರಾಜ್ಯದಲ್ಲಿ ಮತ್ತು ಋಷಿ, ಮುನಿಗಳು ವಾಸಮಾಡುವ ಆಶ್ರಮಗಳಲ್ಲಿಯೂ ನಿಂದೆಯ ಮಾತುಗಳಿಗೆ ಗುರಿಯಾಗುತ್ತಾನೆ. ಅವನು ಮಾಡಿರಬಹುದಾದ ಕೆಟ್ಟ ಕೆಲಸಗಳನ್ನೇ ಜನರು ಯಾವಾಗಲೂ ಚರ್ಚಿಸುತ್ತಿರುತ್ತಾರೆ.” ಶ್ರೀರಾಮನು ಹೀಗೆ ಕೇಳಲು ಭದ್ರನು ಹೇಳುತ್ತಾನೆ : “ಮಹಾರಾಜ ! ನಿನ್ನ ವಿಷಯದಲ್ಲಿ ನಾಗರಿಕರು ಒಳ್ಳೆಯ ಮಾತನ್ನೇ ಆಡಿಕೊಳ್ಳುತ್ತಿದ್ದಾರೆ. ರಾವಣವಧೆಯ ಕುರಿತಾಗಿ ನೀನು ಸಾಧಿಸಿದ ವಿಜಯದಿಂದ ಜನರು ಪ್ರಶಂಸೆ ಮಾಡುತ್ತಿದ್ದಾರೆ.” ಭದ್ರನ ಮಾತನ್ನು ಕೇಳಿ ಶ್ರೀರಾಮನು ಪುನಃ ಮತ್ತೇನು ಹೇಳಿದರು ಅದು ಶುಭವಾಗಿರಲಿ ಅಶುಭವಾಗಿರಲಿ ನಿರ್ದಾಕ್ಷಿಣ್ಯದಿಂದ ಹೇಳು ಎನ್ನುತ್ತಾನೆ. ಶುಭವಾದುದನ್ನು ಅವರು ಹೇಳಿದ್ದರೆ ಅದನ್ನೇ ನಾನು ಮುಂದುವರಿಸುತ್ತೇನೆ. ಅಶುಭವಾದುದನ್ನು ಹೇಳಿದ್ದರೆ ಅವರ ಅಭಿಪ್ರಾಯದಂತೆ ಅಂತಹ ಕಾರ್ಯವನ್ನು ಪರಿತ್ಯಜಿಸುತ್ತೇನೆ. ನಿಶ್ಚಿಂತನಾಗಿ ನಿರ್ಭಯನಾಗಿ ಯಾವ ವಿಧವಾದ ಆತಂಕವೂ ಇಲ್ಲದೇ ಎಲ್ಲ ವಿಷಯಗಳನ್ನೂ ಹೇಳು ಎನ್ನುತ್ತಾನೆ. ಅದಕ್ಕೆ ಪ್ರತಿಯಾಗಿ ಭದ್ರನು ಹೀಗೆ ಹೇಳುತ್ತಾನೆ.
ದುಷ್ಕರಂ ಕೃತವಾನ್ರಾಮಃ ಸಮುದ್ರೇ ಸೇತುಬನ್ಧನಮ್ |
ಅಶ್ರುತಂ ಪೂರ್ವಕೈಃ ಕೈಶ್ಚಿದ್ದೇವೈರಪಿ ಸದಾನವೈಃ || “ಶ್ರೀರಾಮನು ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಿ ಅದ್ಭುತವಾದ ಮತ್ತು ಅತಿಕಷ್ಟವಾದ ಕಾರ್ಯವನ್ನು ಮಾಡಿದ್ದಾನೆ. ಹಿಂದಿನ ಯಾವ ರಾಜರೂ, ದೇವ ದಾನವರೂ ಇಂತಹ ಕಾರ್ಯವನ್ನು ಮಾಡಿರುವುದನ್ನು ನಾವು ಕೇಳಿಲ್ಲ. ದೇವ ದಾನವ ಯಕ್ಷ, ಗಂಧರ್ವರಿಂದಲೂ ಎದುರಿಸಲು ಅಸಾಧ್ಯನಾಗಿದ್ದ ರಾವಣನು ಸೈನ್ಯದೊಡನೆಯೂ ವಾಹನದೊಡನೆಯೂ ಶ್ರೀರಾಮನಿಂದ ಹತನಾದನು. ಋಕ್ಷ ವಾನರ ರಾಕ್ಷಸರೂ ಶ್ರೀರಾಮನಿಗೆ ಅಧೀನರಾದರು.
ಹತ್ವಾ ಚ ರಾವಣಂ ಸಂಖ್ಯೇ ಸೀತಾಮಾಹೃತ್ಯ ರಾಘವಃ |
ಅಮರ್ಷಂ ಪೃಷ್ಠತಃ ಕೃತ್ವಾ ಸ್ವವೇಶ್ಮ ಪುನರಾನಯತ್ || ಆದರೆ ಇಲ್ಲೊಂದು ದೋಷವಿದೆ. ಯುದ್ಧದಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿ ಸೀತೆಯನ್ನೇನೋ ಅರಮನೆಗೆ ಕರೆತಂದನು. ಆದರೆ ಶ್ರೀರಾಮನ ಮನಸ್ಸಿನಲ್ಲಿ ಸೀತೆಯ ಚಾರಿತ್ರ್ಯದ ವಿಷಯವಾಗಿ ಕೋಪವಾಗಲೀ ಸಂದೇಹವಾಗಲೀ ಉಂಟಾಗಲೇ ಇಲ್ಲ.
ಅಸ್ಮಾಕಮಪಿ ದಾರೇಷು ಸಹನೀಯಂ ಭವಿಷ್ಯತಿ |
ಯಥಾ ಹಿ ಕುರುತೇ ರಾಜಾ ಪ್ರಜಾಸ್ತಮನುವರ್ತತೇ || ಸೀತಾಸಮಾಗಮದಿಂದ ಅವನಿಗೆ ಎಂತಹ ಸುಖವು ಸಿಕ್ಕಿತು ? ರಾವಣನಾದರೂ ಸೀತೆಯನ್ನು ಬಲಾತ್ಕಾರದಿಂದ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅಪಹರಿಸಿಕೊಂಡು ಲಂಕೆಗೆ ಹೋದ. ಅಲ್ಲಿ ತನ್ನ ಅಂತಃಪುರದ ಕ್ರೀಡಾವನವಾಗಿದ್ದ ಅಶೋಕವನದಲ್ಲಿ ಅವಳನ್ನು ಇಟ್ಟಿದ್ದನು. ಹೀಗೆ ಅವಳು ಬಹಳ ದಿವಸಗಳವರೆಗೆ ರಾಕ್ಷಸರ ವಶದಲ್ಲಿಯೇ ಇದ್ದಳು. ಅಂತಹವಳನ್ನೇಕೆ ಶ್ರೀರಾಮನು ನಿಂದೆಗೆ ಗುರಿಪಡಿಸಲಿಲ್ಲ ? ನಮ್ಮ ಹೆಂಡತಿಯರ ವಿಷಯದಲ್ಲೂ ಅಂಥಾದ್ದನ್ನು ಸಹಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ : ರಾಜನು ಹೇಗೆ ಮಾಡಿದರೆ ಪ್ರಜೆಗಳೂ ಹಾಗೆಯೇ ಮಾಡುತ್ತಾರೆ. ಮಹಾರಾಜ ! ಹೀಗೆ ನಗರದಲ್ಲಿರುವ ಮತ್ತು ಹಳ್ಳಿಗಳಲ್ಲಿರುವ ಜನರು ಅನೇಕ ಪ್ರಕಾರವಾಗಿ ಮಾತನಾಡಿಕೊಳ್ಳುತ್ತಿದ್ದಾರೆ.” ಎನ್ನುತ್ತಾನೆ. ಭದ್ರನು ಹೇಳಿದ ಮಾತನ್ನು ಕೇಳಿ ಶ್ರೀರಾಮನು ಪರಮದುಃಖಿತನಾಗಿ ಉಳಿದೆಲ್ಲವರೊಡನೆ ಹೇಳುತ್ತಾನೆ. "ಮಿತ್ರರೇ ಈ ವಿಷಯ ದಲ್ಲಿ ನಿಮ್ಮ ಅಭಿಪ್ರಾಯವೇನು ? ಈ ಮಾತು ಎಷ್ಟು ಸತ್ಯವಾಗಿದೆ ? ಎಂಬುದನ್ನು ಹೇಳಿರಿ.”ಶ್ರೀರಾಮನ ಮಾತಿಗೆ ಎಲ್ಲ ಜನರೂ "‘ಏವಮೇತತ್ ನ ಸಂಶಯಃ’ ಭದ್ರನು ಹೇಳಿದುದು ವಾಸ್ತವವಾಗಿದೆ. ಇದರಲ್ಲಾವ ಸಂಶಯವೂ ಇಲ್ಲ. ಪ್ರಜೆಗಳೆಲ್ಲರೂ ಹೀಗೆ ಆಡಿಕೊಳ್ಳುತ್ತಿರುವುದಂತೂ ನಿಜ.” ಶ್ರೀರಾಮನು ಎಲ್ಲರಿಂದಲೂ ಇದೇ ಮಾತನ್ನು ಕೇಳಿ ಅವರೆಲ್ಲರನ್ನೂ ಅವರವರ ಮನೆಗಳಿಗೆ ಕಳುಹಿಸಿಕೊಟ್ಟನು.
ಎಲ್ಲರನ್ನೂ ಕಳುಹಿಸಿಕೊಟ್ಟನಂತರ ಶ್ರೀರಾಮನು ಮುಂದೆ ತಾನು ಮಾಡಬೇಕಾಗಿರುವ ಕಾರ್ಯವನ್ನು ನಿಶ್ಚಯಿಸಿ ಹತ್ತಿರದಲ್ಲಿದ್ದ ದ್ವಾರ ಪಾಲಕನಿಗೆ ಹೇಳುತ್ತಾನೆ. “ದ್ವಾರಪಾಲಕನೇ ಲಕ್ಷ್ಮಣನನ್ನೂ, ಭರತನನ್ನೂ, ಶತ್ರುಘ್ನನನ್ನೂ ಕರೆದುಕೊಂಡು ಬಾ.ಎನ್ನುತ್ತಾನೆ. ” ದ್ವಾರಪಾಲಕನು ಲಕ್ಷ್ಮಣನ ಮನೆಗೆ ಹೋಗಿ :
ದ್ರಷ್ಟುಮಿಚ್ಛತಿ ರಾಜಾ ತ್ವಾಂ ಗಮ್ಯತಾಂ ತತ್ರ ಮಾ ಚಿರಮ್ || “ರಾಜಕುಮಾರನೇ ! ಮಹಾರಾಜನು ನಿನ್ನನ್ನು ನೋಡಲು ಅಪೇಕ್ಷಿಸಿದ್ದಾನೆ. ತಡಮಾಡದೆ ರಾಜನ ಬಳಿಗೆ ಹೋಗು.ಲಕ್ಷ್ಮಣನು ಶ್ರೀರಾಮನ ಅರಮನೆಗೆ ಧಾವಿಸುತ್ತಾನೆ. ದ್ವಾರಪಾಲಕನು ಭರತನ ಅರಮನೆಗೆ “ರಾಜಾ ತ್ವಾಂ ದ್ರಷ್ಟುಮಿಚ್ಛತಿ" ರಾಜನು ನಿನ್ನನ್ನು ನೋಡಲು ಬಯಸಿದ್ದಾನೆ” ಎಂದು ಹೇಳಿದನು. ಭರತನು ಕಾಲ್ನಡಿಗೆಯಲ್ಲಿಯೇ ಶ್ರೀರಾಮನ ಅರಮನೆಗೆ ತೆರಳುತ್ತಾನೆ. ದ್ವಾರಪಾಲಕನು ಶತ್ರುಘ್ನನ ಅರಮನೆಗೆ ಬಂದು "ಏಹ್ಯಾಗಚ್ಛ ರಘುಶ್ರೇಷ್ಠ ರಾಜಾ ತ್ವಾಂ ದ್ರಷ್ಟುಮಿಚ್ಛತಿ | ಗತೋ ಹಿ ಲಕ್ಷ್ಮಣಃ ಪೂರ್ವಂ ಭರತಶ್ಚ ಮಹಾಯಶಾಃ ||೯|| ಮಹಾರಾಜನಾದ ಶ್ರೀರಾಮನು ನಿನ್ನನ್ನು ನೋಡಲು ಬಯಸಿದ್ದಾನೆ. ಲಕ್ಷ್ಮಣ, ಭರತ ಈಗಾಗಲೇ ಹೋಗಿದ್ದಾರೆ. ಆದುದರಿಂದ ನೀನೂ ಹೊರಟುಬಿಡು.” ಎನ್ನುತ್ತಾನೆ. ದ್ವಾರಪಾಲಕನ ಮಾತನ್ನು ಕೇಳಿ ರಾಮನಿದ್ದೆಡೆಗೆ ಧಾವಿಸುತ್ತಾನೆ. ರಾಜಕುಮಾರರೆಲ್ಲರೂ ಆಗಮಿಸಿರುವುದನ್ನು ಕೇಳಿ ಚಿಂತಾಕ್ರಾಂತನಾಗಿದ್ದ ಶ್ರೀರಾಮನು ಪ್ರಭಾಶೂನ್ಯನಾಗಿದ್ದ. ಶ್ರೀರಾಮನ ಎರಡು ಕಣ್ಣುಗಳೂ ಕಂಬನಿಯಿಂದ ತುಂಬಿಕೊಂಡಿದ್ದುವು. ಶ್ರೀರಾಮನ ಮುಖವನ್ನು ಎಲ್ಲರೂ ನೋಡಿದರು. ಅವರೆಲ್ಲರೂ ಶ್ರೀರಾಮನ ಪಾದಗಳನ್ನು ತಲೆಗಳಿಂದ ಮುಟ್ಟಿ ನಮಸ್ಕರಿಸಿ ಆಜ್ಞೆಯನ್ನು ನಿರೀಕ್ಷಿಸುತ್ತಾ ನಿಂತರು. ಶ್ರೀರಾಮನು ಕಣ್ಣೀರು ಸುರಿಸುತ್ತಲೇ ಸಿಂಹಾಸನದಿಂದ ಮೇಲೆದ್ದು ಒಬ್ಬೊಬ್ಬರನ್ನಾಗಿ ತಬ್ಬಿಕೊಂಡು ಎಲ್ಲರಿಗೂ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಹೇಳಿ ಮೂವರೂ ಆಸನಾರೂಢರಾದ ನಂತರ ಹೇಳತೊಡಗಿದನು :
ಭವನ್ತೋ ಮಮ ಸರ್ವಸ್ವಂ ಭವನ್ತೋ ಜೀವಿತಂ ಮಮ |
ಭವದ್ಭಿಶ್ಚ ಕೃತಂ ರಾಜ್ಯಂ ಪಾಲಯಾಮಿ ನರೇಶ್ವರಾಃ || “ನೀವೇ ನನ್ನ ಸರ್ವಸ್ವವೂ. ನೀವೇ ನನ್ನ ಜೀವಿತವೂ. ನೀವು ಸಂಪಾದಿಸಿರುವ ಈ ರಾಜ್ಯವನ್ನು ನಾನು ಪರಿಪಾಲನೆ ಮಾಡುತ್ತಿದ್ದೇನೆ. ನೀವೆಲ್ಲರೂ ಎಲ್ಲ ಶಾಸ್ತ್ರಾರ್ಥಗಳನ್ನೂ ಬಲ್ಲವರು. ಒಳ್ಳೆಯ ಬುದ್ಧಿಯುಳ್ಳವರು. ಶಾಸ್ತ್ರಗಳಲ್ಲಿ ಹೇಳಿರುವಂತೆ ನಡೆದುಕೊಳ್ಳುವವರು. ಈಗ ನಾನು ನನಗೆ ಸಂಬಂಧಿಸಿದಂತೆ ಸಮಸ್ಯೆಯೊಂದನ್ನು ನಿಮ್ಮ ಮುಂದಿಡುತ್ತಿದ್ದೇನೆ. ನೀವೆಲ್ಲರೂ ಸೇರಿ ನನ್ನ ಸಮಸ್ಯೆಗೆ ಒಂದು ಮಾರ್ಗವನ್ನು ಹುಡುಕಬೇಕಾಗಿದೆ.” ಶ್ರೀರಾಮನು ಹೀಗೆ ಹೇಳಲು ಅವನು ಹೇಳುತ್ತಿರುವುದನ್ನೇ ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತಿದ್ದ ಮೂವರು ತಮ್ಮಂದಿರೂ ಉದ್ವಿಗ್ನಚಿತ್ತರಾಗಿ ರಾಜನೇನು ಹೇಳಲಿರುವನೆಂಬುದನ್ನು ಕಾತರದಿಂದ ನಿರೀಕ್ಷಿಸುತ್ತಿದ್ದರು.
ಪೌರಾಪವಾದಃ ಸುಮಹಾಂಸ್ತಥಾ ಜನಪದಸ್ಯ ಚ |
ವರ್ತತೇ ಮಯಿ ಬೀಭತ್ಸಾ ಸಾ ಮೇ ಮರ್ಮಾಣಿ ಕೃನ್ತತಿ || ಪಟ್ಟಣಿಗರೂ ಮತ್ತು ಪ್ರಾಂತೀಯಜನರೂ ನಮ್ಮ ವಿಷಯದಲ್ಲಿ ಕುತ್ಸಿತವಾದ ಭಾವನೆಯನ್ನು ಹೊಂದಿದ್ದಾರೆ. ಇದು ನನ್ನ ಮರ್ಮಸ್ಥಾನ ಕತ್ತರಿಸಿ ಹಾಕುತ್ತಿದೆ.
ಅಹಂ ಕಿಲ ಕುಲೇ ಜಾತ ಇಕ್ಷ್ವಾಕೂಣಾಂ ಮಹಾತ್ಮನಾಮ್ | ಸೀತಾಪಿ ಸತ್ಕುಲೇ ಜಾತಾ ಜನಕಾನಾಂ ಮಹಾತ್ಮನಾಮ್ ||೪|| ನಾನಾದರೋ ಮಹಾತ್ಮರಾದ ಇಕ್ಷ್ವಾಕುಗಳ ಶ್ರೇಷ್ಠರಾದ ಕುಲದಲ್ಲಿ ಜನಿಸಿದವನು. ಅಂತೆಯೇ ಸೀತೆಯೂ ಮಹಾತ್ಮರಾದ ಜನಕನ ಉತ್ತಮ ಕುಲದಲ್ಲಿ ಹುಟ್ಟಿದವಳು. ಲಕ್ಷ್ಮಣ ! ನಿರ್ಜನವಾಗಿದ್ದ ದಂಡಕಾರಣ್ಯದಲ್ಲಿ ಸೀತೆಯನ್ನು ರಾವಣನು ಅಪಹರಿಸಿದ ವಿಷಯವೂ ನಾನು ರಾವಣನನ್ನು ಸಂಹರಿಸಿ ಪತಿವ್ರತೆಯಾದ ಸೀತೆಯನ್ನು ಕರೆತಂದ ವಿಷಯವೂ ನಿನಗೆ ತಿಳಿದಿದೆ. ರಾವಣನ ಅರಮನೆಯಲ್ಲಿಯೇ ಬಹಳ ದಿವಸಗಳವರೆಗೆ ವಾಸವಾಗಿದ್ದ ಸೀತೆಯನ್ನು ಹೇಗೆ ಕರೆದೊಯ್ಯಲೆಂಬ ಬುದ್ಧಿಯು ನನಗೆ ಅಲ್ಲಿಯೇ ಹುಟ್ಟಿದ್ದಿತು. ತಾನು ಪರಿಶುದ್ಧಳೆಂಬ ವಿಶ್ವಾಸವನ್ನು ಹುಟ್ಟಿಸುವ ಸಲುವಾಗಿ ಸೀತೆಯು ನಿನ್ನೆದುರಿನಲ್ಲಿಯೇ ಅಗ್ನಿಪ್ರವೇಶ ಮಾಡಿದಳು. ನಿನ್ನೆದುರಿನಲ್ಲಿ ಮತ್ತು ಎಲ್ಲ ದೇವತೆಗಳ ಸಮಕ್ಷದಲ್ಲಿ ಅಗ್ನಿದೇವನು ಪ್ರತ್ಯಕ್ಷನಾಗಿ ಮೈಥಿಲಿಯು ನಿಷ್ಪಾಪಳೆಂದು ಹೇಳಿದನು. ಆಕಾಶದಲ್ಲಿ ಸಂಚರಿಸುವ ವಾಯುವೂ ಮತ್ತು ಚಂದ್ರಾದಿತ್ಯರು ಕೂಡ ದೇವತೆಗಳ ಮತ್ತು ಋಷಿಗಳ ಸನ್ನಿಧಿಯಲ್ಲಿ ಸೀತೆಯು ನಿಷ್ಪಾಪಿ ಎಂದು ಸಾರಿ ಹೇಳಿದನು. ಹೀಗೆ ಎಲ್ಲರೂ ನಿಶ್ಚಯಮಾಡಿ ಸೀತಾದೇವಿಯು ಪವಿತ್ರಳೆಂದು ಹೇಳಿದ ಅತ್ಯಂತ ಶುದ್ಧ ಚಾರಿತ್ರಳಾದ ಸೀತಾದೇವಿಯನ್ನು ಲಂಕೆಯಲ್ಲಿ ದೇವ ಗಂಧರ್ವರ ಸಮ್ಮುಖದಲ್ಲಿ ಇಂದ್ರನೇ ನನ್ನ ವಶಕ್ಕೊಪ್ಪಿಸಿದನು. ಈ ಕಾರಣದಿಂದಲೇ ನಾನು ಸೀತೆಯನ್ನು ಅಯೋಧ್ಯೆಗೆ ಕರೆತಂದೆ. ಆದರೆ ಸೀತೆಯ ವಿಷಯವಾಗಿ ಉವಾಗಿ ಅಪವಾದ ಹರಡಿಬಿಟ್ಟಿದೆ. ಪುರವಾಸಿಗಳೂ ಮತ್ತು ದೇಶವಾಸಿಗಳೂ ನನ್ನ ಮೇಲೆ ಮಹತ್ತರವಾದ ಆಪಾದನೆಯನ್ನೂ ಹೊರೆಸುತ್ತಿದ್ದಾರೆ. ಇದು ನನ್ನ ಮನಸ್ಸಿನಲ್ಲಿ ಮಹತ್ತರವಾದ ವ್ಯಥೆಯನ್ನುಂಟುಮಾಡಿದೆ.
ಅಕೀರ್ತಿರ್ಯಸ್ಯ ಗೀಯೇತ ಲೋಕೇ ಭೂತಸ್ಯ ಕಸ್ಯಚಿತ್ | ಪತತ್ಯೇವಾಧಮಾನ್ ಲೋಕಾನ್ ಯಾವಚ್ಛಬ್ದಃ ಪ್ರಕೀರ್ತ್ಯತೇ ||
ಯಾವ ಪ್ರಾಣಿಯ ಅಪಕೀರ್ತಿಯು ಲೋಕದಲ್ಲಿ ಚರ್ಚೆಗೆ ವಿಷಯ ವಾಗುವುದೋ -ಅಂತಹವನು ತನ್ನ ಅಪಕೀರ್ತಿಯ ಚರ್ಚೆಯು ಲೋಕದಲ್ಲಿ ನಡೆಯುತ್ತಿರುವವರೆಗೂ ನರಕದಲ್ಲಿ ಬಿದ್ದಿರಬೇಕಾಗುತ್ತದೆ.
ಅಪಕೀರ್ತಿ ಅಥವಾ ಅಪವಾದ ಬಂದಲ್ಲಿ ನಾನು ಪ್ರಾಣಗಳನ್ನಾದರೂ ತೊರೆದೇನು. ನಿಮ್ಮನ್ನಾದರೂ ಪರಿತ್ಯಜಿಸಿಯೇನು. ಹೀಗಿರುವಾಗ ಸೀತೆಯ ತ್ಯಾಗದಲ್ಲಿ ಹೇಳುವುದೇನಿದೆ. ಇದಕ್ಕಿಂತಲೂ ಅಧಿಕತರವಾದ ದುಃಖವನ್ನು ನಾನು ಹಿಂದೆಂದೂ ಅನುಭವಿಸಿದ ಸ್ಮರಣೆಯು ನನಗಿಲ್ಲ. ಲಕ್ಷ್ಮಣ ! ನೀನು ನಾಳೆ ಬೆಳಗಾಗುತ್ತಲೇ ಸುಮಂತ್ರನೇ ಸಾರಥಿಯಾಗಿರುವ ರಥದಲ್ಲಿ ಸೀತೆಯನ್ನು ಕುಳ್ಳಿರಿಸಿಕೊಂಡು ನಮ್ಮ ರಾಜ್ಯದ ಗಡಿಯಿಂದಾಚೆಗೆ ಬಿಟ್ಟು ಬಾ. ಗಂಗಾನದಿಯ ಆಚೆಯ ದಡದಲ್ಲಿ ಮಹಾತ್ಮರಾದ ವಾಲ್ಮೀಕಿಗಳ ದಿವ್ಯಾಶ್ರಮವಿದೆ.
ತಮಸಾನದೀತೀರದಲ್ಲಿರುವ ಆ ದಿವ್ಯಾಶ್ರಮದಲ್ಲಿ ನೀನು ಅವಳನ್ನು ಬಿಟ್ಟು ಶೀಘ್ರವಾಗಿ ಬಂದುಬಿಡು. ಹಾಗಾದರೆ ಇಲ್ಲಿ ರಾಮನ ಯಾವ ಭಾವನೆ ವ್ಯಕ್ತವಾಗುತ್ತದೆ.? ನಾನು ಇತಿಹಾಸದಲ್ಲಿ ಇದೇ ಭಾವನೆಗಳನ್ನು ಕಪ್ಪೆ ಅರಭಟ್ಟನ ಶಾಸನದಲ್ಲಿಯೂ ಕಾಣುತ್ತೇನೆ.
#ಉತ್ತರಕಾಂಡ
ಸದ್ಯೋಜಾತರು
No comments:
Post a Comment
If you have any doubts. please let me know...