ನವೋನವೋ ಭವತಿ ಜಾಯಮಾನೋಹ್ನಾಂ ಕೇತುರುಷ ಸಾಮೇತ್ಯಗ್ರಂ |
ಭಾಗಂ ದೇವೇಭ್ಯೋ ವಿ ದಧಾತ್ಯಾನ್ಪ್ರಚಂದ್ರಮಾಸ್ತಿರತೇ ದೀರ್ಘಮಾಯುಃ ||
ಈ ಜಗತ್ತಿನಲ್ಲಿ ಸಂಗೀತ ಆರಂಭವಾಗಿದ್ದು ವೇದಗಳಿಂದ. ಋಗ್ವೇದದಲ್ಲಿ ಸಹ ಸಂಗೀತ ಉಪಕರಣಗಳ ಉಲ್ಲೇಖ ಸಿಗುತ್ತದೆ. ಇನ್ನು ಯಜುರ್ವೇದದಲ್ಲಿ ಸಂಗೀತದ ಛಾಯೆ ಕಾಣಿಸಿದರೂ ರಾಗಗಳ ಒಂದು ಜೋಡಣೆ ಸಾಮವೇದದಲ್ಲಿ. ಹೀಗೇ ಅತ್ಯಂತ ಪ್ರಾಚೀನ ಕಾಲದ ಜನರಿಂದ ಬಳುವಳಿಯಾಗಿ ಬಂದ ಸಂಗೀತ ಆಸ್ವಾದಿಸದ ಜನ ಇಲ್ಲವೇ ಇಲ್ಲವೇನೋ ಎನ್ನುವಷ್ಟು ವಿರಳ. ಸಂಗೀತ ಎಂದಾಕ್ಷಣ ಒಂದು ಪರಂಪರೆಯ ನೆಲಗಟ್ಟು ಕಾಣಿಸಿಕೊಳ್ಳುತ್ತದೆ. ನಾನು ಹಿಂದುಸ್ಥಾನಿ ಮತ್ತು ಕರ್ನಾಟಕ ಶೈಲಿಯ ಸಂಗೀತವನ್ನೂ ಇಷ್ಟಪಡುವವನು. ಅದರಲ್ಲೂ ನನಗೆ ಕರ್ನಾಟಕ ಸಂಗೀತದ ರಾಗಗಳಲ್ಲಿ ಅತ್ಯಂತ ಹೆಚ್ಚು ಇಷ್ಟವಾಗಿದ್ದು ಬಹುದಾರಿ ರಾಗ. ಅದು ಯಾಕೋ ಈ ರಾಗದ ಹಾಡುಗಳನ್ನು ಕೇಳುತ್ತಿದ್ದರೆ ಪುನಃ ಪುನಃ ಕೇಳಬೇಕು, ಕೇಳುತ್ತಾ ಇರಬೇಕು ಅನ್ನಿಸುತ್ತದೆ. ಕರನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲಿ ಶ್ರೀ ಶ್ಯಾಮಶಾಸ್ತ್ರಿಗಳು, ಮುತ್ತುಸ್ವಾಮಿ ದೀಕ್ಷಿತರ ಜೊತೆ ಜೊತೆಗೆ ಗುರುತಿಸಿಕೊಂಡವರು ಶ್ರೀ ತ್ಯಾಗರಾಜರು. ಈ ತ್ಯಾಗರಾಜರು ಈ ರಾಗವನ್ನು ಬೆಳಕಿಗೆ ತಂದವರು ಎನ್ನುವ ಉಲ್ಲೇಖಗಳು ಹಲವೆಡೆ ದೊರಕುತ್ತವೆ.
ಕರ್ನಾಟಕ ಸಂಗೀತದಲ್ಲಿ ಆರೋಹಣ ಮತ್ತು ಅವರೋಹಣಗಳಲ್ಲಿ ಏಳೂ ಸ್ವರಗಳನ್ನು ಹೊಂದಿರುವ ರಾಗಗಳನ್ನು ಸಂಪೂರ್ಣ ರಾಗಗಳು ಎಂದು ಕರೆಯಲಾಗುತ್ತದೆ. ಸಂಪೂರ್ಣ ರಾಗಗಳನ್ನು ಮೇಳಕರ್ತ ವ್ಯವಸ್ಥೆಯಲ್ಲಿ ವರ್ಗೀಕರಿಸಲಾಗಿದೆ. ಒಟ್ಟು ೭೨ ಮೇಳಕರ್ತ ರಾಗಗಳಿವೆ. ಇವುಗಳ ಕುರಿತು ನಾನೇನೂ ಹೆಚ್ಚು ಬರೆಯಲಾರೆ.
ಕರ್ನಾಟಕ ಸಂಗೀತದ ೨೮ನೇ ಮೇಳಕರ್ತ ಹರಿಕಾಂಭೋಜಿಯ ಷಾಡವ ಔಡವ ಜನ್ಯರಾಗ ಇದು. ಇದರ ಸ್ವರ ಸ್ಥಾನದಲ್ಲಿ ಷಡ್ಜ, ಪಂಚಮ, ಅಂತರಗಾಂಧಾರ, ಶುದ್ಧಮಧ್ಯಮ, ಚತುಶ್ರುತಿ ಧೈವತ, ಮತ್ತು ಕೈಶಿಕೀನಿಷಾದ ಸೇರಿವೆ. ಇದೊಂದು ಸಾರ್ವಕಾಲಿಕ ರಾಗ ಎಂದು ಪ್ರಸಿದ್ಧಿ ಪಡೆದಿದೆ. ಈ ರಾಗದ ಬ್ರೋವಬಾರಮ ಎನ್ನುವ ರಚನೆ ತ್ಯಾಗರಾಜರದ್ದು. ಅದು ಪುನಃ ಪುನಃ ಕೇಳಿಸಿಕೊಳ್ಳುತ್ತದೆ. ಅಷ್ಟು ಸಂತೋಷವನ್ನು ಕೊಡುತ್ತದೆ.
ಹರಿಕಾಂಭೋಜಿಮೇಲಾಚ್ಚ ಬಹುದಾರೀ ಹ್ಯಜಾಯತ |
ಸನ್ಯಾಸಂ ಸಾಂಶಕಂ ಚೈವ ಸಷಡ್ಜಗ್ರಹಮುಚ್ಯತೇ ||
ರಿವರ್ಜ್ಯವಕ್ರಮಾರೋಹೇ ಪೂರ್ಣವಕ್ರಾವರೋಹಕಮ್ |
ಸಗಮಾಧಪಧಾನೀಸಾ ಸನಿಪಾಮಗಸಾನಿಸಾ || ಸಂಗೀತ ಚೂಡಾಮಣಿಯ ಶ್ಲೋಕ ಬಹುದಾರೀ ರಾಗದ ಛಾಯೆಯನ್ನು ಹೇಳುತ್ತದೆ.
ಇಲ್ಲಿ ನಾನು ಈಗ ಹಾಕಿರುವ ಹಾಡು ’ಭಜಮಾನಸ ವಿಘ್ನೇಶ್ವರಮನಿಷಮ್’ ಎನ್ನುವುದು. ಹಾಡಿರುವವರು ಡಾ. ದೀಪ್ತಿ ನವರತ್ನ. Deepti Navaratna
ಡಾ. ದೀಪ್ತಿ ನವರತ್ನ ಹಾಡುಗಾರಿಕೆಯಲ್ಲಿ ಅಪ್ರತಿಮ ಸಾಹಸಿಗರು. ಎಂ ಎಸ್ ಸುಬ್ಬುಲಕ್ಷ್ಮೀಯವರ ಕುರಿತಾಗಿಯೇ ಒಂದು ಆಲ್ಬಂ ಅನ್ನು ಹೊರತಂದದ್ದಲ್ಲದೇ ಮೈಸೂರು ಜಯಚಮರಾಜ ಒಡೆಯರ್ ಅವರ ಕೃತಿಗಳನ್ನಾಧರಿಸಿ ಮತ್ತು ಅವರ ಕುರಿತಾಗಿಯೂ ಒಂದು ಆಲ್ಬಂ ಹೊರತಂದಿದ್ದಾರೆ.
ಸದ್ಯೋಜಾತರು
No comments:
Post a Comment
If you have any doubts. please let me know...