ಒಬ್ಬ ರೈತನಿಗೆ ಎರಡು ಗಂಡು ಮಕ್ಕಳು. ದೊಡ್ಡವ ಗುಡ್ಡ.ಎರಡನೆಯವ ಗಿಡ್ಡ. ಆ ರೈತನಿಗೆ ಸ್ವಂತ ಆಸ್ತಿ ಎಂದರೆ ಒಂದು ಗುಡಿಸಲು,ಹಾಲು ನೀಡುವ ಎಮ್ಮೆ, ಒಂದು ಕಂಬಳಿ.ಇಷ್ಟೇ ಆಸ್ತಿ.ರೈತನ ಹೆಂಡತಿ ತೀರಿಕೊಂಡು ಮಕ್ಕಳು ಬಾಲ್ಯದಿಂದಲೇ ತಾಯಿ ಇಲ್ಲದ ತಬ್ಬಲಿಗಳು.
ಒಂದು ದಿನ ಬಡ ರೈತನೂ ತೀರ್ಕೊಂಡ. ಮಕ್ಕಳಿಗೆ ಯಾರೂ ಇಲ್ಲವೆಂದಾಯ್ತು.ಪ್ರಾಯಕ್ಕೆ ಬಂದಿದ್ದರೂ ಇನ್ನೂ ಮದುವೆ ಆಗಿರಲಿಲ್ಲ. ಗುಡ್ಡ ಸ್ವಲ್ಪ ಕಂತ್ರಿ ಬುದ್ಧಿವಂತ.ಗಿಡ್ಡ ಮುಗ್ದ ಯುವಕ.
ಕೊನೆಗೆ ಅಣ್ಣ ತಮ್ಮಂದಿರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಶುರುವಾಯ್ತು.ಆಗ ಅಣ್ಣ ಊರ ಪಠೇಲರೊಡನೆ ಒಂದು ಸಂಚಿನ ಪಂಚಾತಿಗೆ ಮಾಡಿಸಿ ಆಸ್ತಿಯ ಪಾಲು ಮಾಡಿಸಿಕೊಂಡ. ಪಂಚಾತಿಕೆಯ ಒಪ್ಪಂದ ಹೀಗಿತ್ತು.
೧ ಮನೆಯಲ್ಲಿ ಎರಡು ಭಾಗ.ಅರ್ಧ ಅಣ್ಣನಿಗೆ,ಅರ್ಧ ತಮ್ಮನಿಗೆ.
೨. ಇನ್ನು ಎಮ್ಮೆಯ ವಿಚಾರ.ಅದರಲ್ಲೂ ಎಮ್ಮೆಗೆ ಹುಲ್ಲು ತಿನ್ನಿಸುವ ಎದುರು ಭಾಗದ ಅರ್ಧ ತಮ್ಮ ಗಿಡ್ಡನಿಗೆ.ಹಿಂಬಾಗದ ಹಾಲು ನೀಡುವ ಕೆಚ್ಚಲಿನ ಭಾಗ ಅಣ್ಣನಿಗೆ.
೩. ನಂತರ ಕಂಬಳಿಯ ಪಾಲು.ಹರಿದರೆ ಯಾರಿಗೂ ಪ್ರಯೋಜನ ಇರಲ್ಲ.ಅದಕ್ಕಾಗಿ ಹಗಲು ಕಂಬಳಿಯ ಉಪಯೋಗ ಗಿಡ್ಡನಿಗೆ.ರಾತ್ರಿಗೆ ಅಣ್ಣನಿಗೆ. ಮುಗಿಯಿತಾ ಪಾಲುಪಟ್ಟೀ?
ಅರ್ಧ ಮನೆಯಲ್ಲಿ ಅಣ್ಣ,ಅರ್ಧ ಮನೆಯಲ್ಲಿ ತಮ್ಮ ವಾಸವಾದರು.ಪಾತ್ರೆಗಳೂ ಪಾಲಾಗಿದ್ದವು. ತಮ್ಮನಿಗೆ ಎಮ್ಮೆಗೆ ಹುಲ್ಲು ತಿನ್ನುವ ಭಾಗ ಆದದ್ದರಿಂದ ತಮ್ಮ ಹುಲ್ಲು ಹಾಕಬೇಕಾಗಿತ್ತು.ಆದರೆ ಹಾಲು ಇರುವ ಭಾಗ ಅಣ್ಣನಿಗೆ.ಅದನ್ನು ಅಣ್ಣನೇ ಮಾರೋದು, ಕುಡಿಯೋದು ಮಾಡುತ್ತಿದ್ದ. ಕಂಬಳಿಯೋ? ಸೆಖೆಗಾಗಲ.ಹಗಲು ಯಾಕೆ ಕಂಬಳಿ?.ತಮ್ಮ ತಲೆಯಡಿಗಿಟ್ಟು ಮಲಗಿ ಅನುಭವಿಸಿದ.ಅಣ್ಣ ರಾತ್ರಿ ಚಳಿಗೆ ಹೊದ್ದು ಮಲಗಿದ.
ದಿನದಿಂದ ದಿನಕ್ಕೆ ಗಿಡ್ಡ ಸೊರಗುತ್ತಾ ಹೋದ.ಅಣ್ಣನಲ್ಲಿ ಈ ವಿಚಾರ ಹೇಳಿದರೆ,' ಅಯ್ಯೋ ಪಾಲಾಗುವಾಗ ನೀನೇ ಒಪ್ಪಿಕೊಂಡಿದ್ದಿಯಲ್ವಾ? ಇನ್ನೇನಿದೆ ತಕರಾರು? ಪಠೇಲರೂ ಅದನ್ನೇ ಹೇಳುತ್ತಾರೆ.
ಕೊನೆಗೆ ಪಕ್ಕದ ಮನೆಯ ಹಿರಿಯ ಅಜ್ಜಿಯೊಂದು ಗಿಡ್ಡನ ಕಿವಿಗೆ ಏನೋ ಊದಿಬಿಟ್ಟಿತು.
ಮರುದಿನ ಅಜ್ಜಿಯ ಸಲಹೆಯಂತೆ ಗಿಡ್ಡ ನಡ್ಕೊಂಡ. ಅಣ್ಣ ಹಾಲು ಹಿಂಡುವಾಗ ತಮ್ಮ ಗಿಡ್ಡ ತನ್ನ ಭಾಗದ ಎಮ್ಮೆಯ ಮುಖಕ್ಕೆ ಹೊಡೆಯೋದು ಮಾಡುತ್ತಿದ್ದ. ಎಮ್ಮೆ ನೆಗೆತಕ್ಕೆ ಹಾಲಿನ ಪಾತ್ರೆ ಬಿದ್ದೂ ಹೋಗ್ತದೆ,ಅಣ್ಣನ ಮುಸುಡಿಗೂ ಎಮ್ಮೆ ಒದೆತ! ಕಂಬಳಿ! ಆಗ ಸೆಖೆ ಜಾಸ್ತಿ.ಗಿಡ್ಡ ಕಂಬಳಿಯನ್ನು ಒದ್ದೆ ಮಾಡಿ ತಲೆಯಡಿಗೆ ಇಟ್ಟುಕೊಂಡು ಹಗಲು ನೆಮ್ಮದಿಯಿಂದ ನಿದ್ದೆ ಮಾಡಿದ.ರಾತ್ರಿ ಒದ್ದೆ ಕಂಬಳಿಯಲ್ಲಿ ಇನ್ನೂ ಚಳಿ ಜಾಸ್ತಿಯಾಯ್ತು ಅಣ್ಣನಿಗೆ.ಕೊನೆಗೆ ತಮ್ಮನೊಂದಿಗೆ ಕಲಹಕ್ಕಿಳಿದ ಅಣ್ಣ.ಅಲ್ಲಣ್ಣಾ ಪಂಚಾತಿಕೆ ಪ್ರಕಾರ ಅಂತ ನೀನೇ ಹೇಳಿದ್ದಲ್ವಾ? ಕಂಬಳಿ ಒದ್ದೆ ಮಾಡಬಾರದು,ಎಮ್ಮೆಯ ಮೂತಿಗೆ ಹೊಡೆಯಬಾರದು ಎಂದು ಕಾಗದ ಪತ್ರದಲ್ಲಿ ಬರೆದಿದೆಯಾ' ಎಂದು ಅಜ್ಜಿಯ ಬುದ್ಧಿವಂತಿಕೆಯಿಂದ ರೋಪ್ ಹೊಡೆದ ತಮ್ಮ.ಹೀಗೇ ವಾರ ಕಳೆದಾಗ ಅಣ್ಣನಿಗೆ ಬುದ್ಧಿ ಬಂತು.ಆಗೊಮ್ಮೆ ಅಜ್ಜಿ ಬಂತು.'ಅಯ್ಯಾ ಮಕ್ಕಳ್ರಾ.ಒಂದಾಗಿ ಬಾಳಿ.ಯಾವ ಕರ್ಮಕ್ಕೆ ನಿಮಗೆ ಪಾಲು.ಅರ್ಧ ಎಮ್ಮೆ,ಹಗಲು ಕಂಬಳಿ? ಏನಿದು ಪಂಚಾತಿಕೆ.ನಿಮ್ಮ ಅಪ್ಪ ಧಾರಾಳ ಭೂಮಿ ಮಾಡಿದ್ದರೆ ಅದೊಂದು ಲೆಕ್ಕ ಬೇರೆ. ಸತ್ತು ಹೋಗುವ ಎಮ್ಮೆ,ಹರಿದು ಹೋಗುವ ಕಂಬಳಿಯನ್ನು ಪಾಲು ಮಾಡಿಕೊಟ್ಟ ಆ ಮುಠ್ಠಾಳ ಪಠೇಲನಿಗೆ ಬುದ್ಧಿ ಇಲ್ಲ.ಇಬ್ರನ್ನೂ ದುಡಿಸಿಕೊಂಡು ಲಾಭ ಪಡೆದ .ನಾಳೆಯಿಂದ ನೀವಿಬ್ರೂ ಒಂದಾಗಿ ಇದ್ದದನ್ನು ಹಂಚಿಕೊಂಡು,ಕೂಲಿ ನಾಲಿ ಮಾಡ್ಕೊಂಡು ಬದುಕ್ರೋ' ಎಂದು ಅಜ್ಜಿ ಹೇಳಿದಾಗ ಅಣ್ಣ ಕಣ್ಣೀರು ಹಾಕಿ ತಮ್ಮನನ್ನು ಅಪ್ಪಿಕೊಂಡ.ಇಬ್ರೂ ಒಂದಾಗಿ ಬಾಳಿದ್ರು.
No comments:
Post a Comment
If you have any doubts. please let me know...