ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಮ್ | ಲೋಚನಾಭ್ಯಾಂ ವಿಹೀನಸ್ಯ ದರ್ಪಣ: ಕಿಂ ಕರಿಷ್ಯತಿ |
ಅಂದರೆ, ಯಾವಾತನಿಗೆ ಸ್ವಯಂ ಪ್ರಜ್ಞೆ ಇರುವುದಿಲ್ಲವೋ, ಅವನಿಗೆ ಶಾಸ್ತ್ರವು ಏನನ್ನು ತಾನೇ ಮಾಡುತ್ತದೆ. ೨ ಕಣ್ಣುಗಳೂ ಇಲ್ಲದವನಿಗೆ ಕನ್ನಡಿಯು ತಾನೇ ಏನನ್ನು ಮಾಡುತ್ತದೆ. ಮನುಷ್ಯನಿಗೆ ಶಾಸ್ತ್ರಜ್ಞಾನವು ಅತ್ಯವಶ್ಯಕ, ಸ್ವಂತ ಬುದ್ಧಿಯಿಂದ ಶಾಸ್ತ್ರವನ್ನು ವಿವೇಚಿಸಿ, ಮುಕ್ತವಾಗಿ ಒಪ್ಪಿಕೊಳ್ಳುವಂತಹ ಮನೋಧರ್ಮವನ್ನು ಬೆಳಸಿಕೊಳ್ಳಬೇಕು. ಶಾಸ್ತ್ರಗಳು ಮನುಷ್ಯರಿಗೆ ಒಳಿತನ್ನು ಮಾಡುವುದಕ್ಕಾಗಿಯೇ ಹೊರಟಿವೆ. ಶಾಸ್ತ್ರಗ್ರಂಥಗಳು ಋಷಿಗಳ ತಪಸ್ಸಿನ ಫಲರೂಪಗಳು. ಮುಮುಕ್ಷುಗಳಿಗೆ ಇವು ದಾರಿದೀಪಗಳಾಗಿವೆ. ಮೋಕ್ಷವು ಒಂದೆರಡು ಜನ್ಮಗಳಲ್ಲಿ ಸಿದ್ಧಿಸುವಂತಹದ್ದಲ್ಲ,
ಮನುಷ್ಯನು ಅದನ್ನು ಪಡೆಯಲು ಪ್ರತಿಜನ್ಮದಲ್ಲಿಯೂ ಪ್ರಯತ್ನಶೀಲನಾಗಿರಬೇಕು. ಹೀಗೆ ಪ್ರಯತ್ನಶೀಲನಾಗಬೇಕಾದರೆ ಶಾಸ್ತ್ರಗಳು ಅತ್ಯವಶ್ಯಕ. ಅವುಗಳನ್ನು ಧಿಕ್ಕರಿಸಿದರೆ, ಕುರುಡನು ಕನ್ನಡಿಯನ್ನು ತಿರಸ್ಕರಿಸಿದಂತೆ ಆಗುತ್ತದೆ. ಸರ್ವಸ್ಯ ಲೋಚನಂ ಶಾಸ್ತ್ರಂ - ಎನ್ನುವಂತೆ ನಮ್ಮ ಬದುಕಿನ ಸಾರ್ಥಕತೆಗೆ ಶಾಸ್ತ್ರವೆಂಬ ಕಣ್ಣು ಬೇಕು, ಅದಿಲ್ಲದಿದ್ದರೆ ಅವನು ಕುರುಡನೇ ಸರಿ.
'ಅವಶ್ಯಂ ಪಿತರಾಚಾರಂ!' ಹೌದು ಕರ್ಮಮಾರ್ಗದ ವಿಷಯದಲ್ಲಿ ಅವಶ್ಯವಾಗಿ ನಮ್ಮ ಪಿತೃಗಳ ಆಚಾರವನ್ನು, ನಡವಳಿಕೆಗಳನ್ನು ಅನುಸರಿಸಬೇಕು, ಅದೇ ಸಂಪ್ರದಾಯ-ಆಚಾರ. ಆದರೆ ಯಾವ ಪಿತೃಗಳ?, ಅಂದರೆ ಕರ್ಮಪಿತೃಗಳಾದ ಋಷಿಗಳ ವಚನಗಳನ್ನು ಮೊದಲು ಅಧ್ಯಯನ ಮಾಡಿ, ಹಾಗೆಯೇ ಅರ್ಥಜ್ಞಾನ ತಿಳಿದು, ನಂತರ ನಿಷ್ಕಾಮವಾಗಿ ಕರ್ಮಾಚರಣೆಯನ್ನು ಮಾಡಿದರೆ, ಅದರಿಂದ ಚಿತ್ತಶುದ್ಧಿ, ತನ್ಮೂಲಕ ಶಿವಜ್ಞಾನ, ಬ್ರಹ್ಮಜ್ಞಾನ (ಸಚ್ಚಿದಾನಂದ ಸ್ವರೂಪ) ಪ್ರಾಪ್ತಿಯಾಗುತ್ತದೆ.
ಸಂ.. ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ
No comments:
Post a Comment
If you have any doubts. please let me know...