June 24, 2021

ಇಮಂ ಮೇ ಗಂಗೇ ಯಮುನೇ ಸರಸ್ವತೀ


ಸರಸ್ವತಿಗೆ ನದೀ ಎನ್ನುವ ಪೂಜ್ಯಭಾವನೆಯೊಂದಿಗೆ ಅಂತರಿಕ್ಷದಲ್ಲಿರುವ ವಾಗ್ದೇವತೆ ಎಂದು ಸಹ ಭಾವಿಸುತ್ತೇವೆ. ಋಗ್ವೇದ ಒಂದರಲ್ಲಿಯೇ ಸರಸ್ವತಿಯನ್ನು ಕುರಿತು ಅನೇಕ ಬಾರಿ ಹೇಳಲಾಗಿದೆ. ಹತ್ತನೇ ಮಂಡಲದ ೭೫ನೇ ಸೂಕ್ತವಂತೂ ನದೀ ಸೂಕ್ತ ಎಂದೇ ಕರೆಸಿಕೊಂಡಿದೆ. ಋಗ್ವೇದದಲ್ಲಿ ಅನೇಕ ನದಿಗಳ ಹೆಸರುಗಳ ಉಲ್ಲೇಖ ಸಿಗುತ್ತಿದ್ದರೂ ಸಹ ಪ್ರಮುಖವಾಗಿ ಸರಸ್ವತೀ, ಸಿಂಧೂ ಮತ್ತು ಸರಯೂ ನದಿ ಹೆಚ್ಚು ಕಡೆ ಉಲ್ಲೇಖಿತವಾಗಿದೆ. ನದೀ ಸೂಕ್ತದಲ್ಲಿ ಎಲ್ಲಾ ನದಿಗಳ ಹೆಸರು ಪಠಿತವಾಗದೇ ಇದ್ದರೂ ಸರಸ್ವತೀ ಸಿಂಧು ಮತ್ತು ಸರಯೂ ಪಠಿತವಾಗಿದೆ. ನದೀ ಎನ್ನುವುದಕ್ಕೆ ಯಾಸ್ಕ ಮಹರ್ಷಿಗಳು ಹೇಳುವುದು "ನದ್ಯಃ ಕಸ್ಮಾನ್ನದನಾ ಭವಂತಿ ಶಬ್ದವತ್ಯಃ" ಎಂದು ಹರಿಯುವಾಗ ಇವುಗಳು ಜುಳು ಜುಳು ಶಬ್ದಮಾಡುವುದರಿಂದ ನದನಾಃ - ನದ್ಯಃ ಎಂದು ಕರೆಯಲ್ಪಡುತ್ತವೆ ಎನ್ನುತ್ತಾರೆ. ನದಿಗೆ ಪರ್ಯಾಯವಾಚಿ ಪದವಾಗಿ ೩೭ ಶಬ್ದಗಳನ್ನು ನಿರುಕ್ತಕಾರರು ಕಂಡುಕೊಂಡಿದ್ದಾರೆ. ಇವುಗಳಲ್ಲಿ ಊರ್ಜಸ್ವತ್ಯಃ, ಸರಸ್ವತ್ಯಃ, ತರಸ್ವತ್ಯಃ ಹರಸ್ವತ್ಯಃ ರೋಧಸ್ವತ್ಯಃ ನನಗೆ ತುಂಬಾ ಇಷ್ಟವಾದ ಹೆಸರುಗಳು. ಎಲ್ಲವೂ ಬಹುವಚನದಲ್ಲಿ ನಿರ್ದೇಶಿತವಾಗಿವೆ. ಸರಯೂ ಸಿಂಧು ಮತ್ತು ಸರಸ್ವತೀ ನದಿಗಳು ತುಂಬಿ ಹರಿಯುತ್ತಿದ್ದ ನದಿಗಳಾಗಿದ್ದವಂತೆ. ವೇದಗಳಲ್ಲಿ ಕಾಣಬರುವ ಪಣಿಗಳೆನ್ನುವ ಜನಾಂಗದವರು ಗೋವುಗಳನ್ನು ಕದ್ದೊಯ್ದಾಗ ಅದನ್ನು ಬಿಡಿಸಿತರಲು ಸರಮೆ ಎನ್ನುವ ದೇವ ನಾಯಿಯೊಂದು ನದಿಯೊಂದನ್ನು ದಾಟಿ ಅವರಿದ್ದಲ್ಲಿ ತೆರಳುವ ಪ್ರಸಂಗದಲ್ಲಿ ನೀನು ಹೇಗೆ ರಸಾ ನದಿಯನ್ನು ದಾಟಿ ಬಂದೆ ಎಂದು ಆಶ್ಚರ್ಯದಿಂದ ಪಣಿಗಳು ಕೇಳುತ್ತಾರೆ. ಅಂದರೆ ಇಲ್ಲಿ ರಸಾ ಎನ್ನುವ ನದಿಯೊಂದು ಅತ್ಯಂತ ರಭಸ ಮತ್ತು ಆಳವನ್ನು ಹೊಂದಿದ್ದು ಕಂಡು ಬರುತ್ತದೆ. ಇದನ್ನೇ ಹತ್ತನೇ ಮಂಡಲದ ನೂರ ಎಂಟನೇ ಸೂಕ್ತದಲ್ಲಿ "ಕಾಸ್ಮೇಹಿತಿಃ ಕಾ ಪರಿತಕ್ಮ್ಯಾಸೀತ್ಕಥಂ ರಸಾಯಾ ಅತರಃ ಪಯಾಂಸಿ" ಎನ್ನಲಾಗಿದೆ. ಅಂದರೆ ಅಂತಹ ನೀರಿನಿಂದ ತುಂಬಿ ಹರಿಯುತ್ತಿದ್ದ ನೀರಿನಿಂದ ಹೇಗೆ ಬಂದಿರಬಹುದೆನ್ನುವ ಆಶ್ಚರ್ಯ ಕಾಡುತ್ತದೆ. 

ಕಣ್ವ ಋಷಿಗೆ ಶೋಭರಿ ಎನ್ನುವ ಒಬ್ಬ ಮಗನಿದ್ದ. ಅವನು ಇದೇ ಸರಸ್ವತೀ ನದಿಯ ದಡದಲ್ಲಿ ಚಿತ್ರ ಎನ್ನುವ ರಾಜನು ಯಾಗ ಒಂದನ್ನು ಮಾಡಿ ದಾನವನ್ನು ಮಾಡಿದ ಪ್ರಂಶಸೆಯನ್ನು ಎಂಟನೇ ಮಂಡಲದಲ್ಲಿ ೨೧ನೇ ಸೂಕ್ತದಲ್ಲಿ ಹೇಳಿದ್ದಾನೆ. ಆದರೆ ಬೃಹದ್ದೇವತಾದಲ್ಲಿ ಚಿತ್ರರಾಜನು ಯಾಗ ಮಾಡಿದ್ದು ಕುರುಕ್ಷೇತ್ರದಲ್ಲಿ ಎಂದು ಬಂದಿರುವುದರಿಂದ ಸರಸ್ವತಿ ಕುರುಕ್ಷೇತ್ರಕ್ಕೆ ಸಮೀಪದಲ್ಲಿಯೇ ಹರಿದಿರಬೇಕು. 

ಇಮಂ ಮೇ ಗಂಗೇ ಯಮುನೇ ಸರಸ್ವತೀ ಶುತುದ್ರಿ ಸ್ತೋಮಂ ಸಚತಾ ಪರುಷ್ಣ್ಯಾ |
ಅಸಿಕ್ನ್ಯಾ ಮರುದ್ವೃಧೇ ವಿತಸ್ತಯಾರ್ಜೀಕೀಯೇ ಶೃಣುಹ್ಯಾ ಸುಷೋಮಯಾ ||
ಈ ಮುಖ್ಯ ನದಿಗಳ ಜೊತೆಗೆ ಉಪನದಿಗಳನ್ನೂ ಸ್ತುತಿಸಲಾಗಿದೆ ಇದರಲ್ಲಿ. ಗಂಗೆ, ಯಮುನೆ, ಸರಸ್ವತಿ, ಶುತುದ್ರಿ, ಪರುಷ್ಣಿ, ಅಸಿಕ್ನಿ, ಮರುದ್ವೃಧೇ, ವಿತಸ್ತೀ, ಆರ್ಜೀಕೀ, ಸುಷೋಮಾ ಹೀಗೆ ಹತ್ತು ನದಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. 
ಗಮ್ಲೃ ಎನ್ನುವ ಮೂಲ ಧಾತುವಿನಿಂದ ಹುಟ್ಟಿರುವ ಗಂಗೆ ಎನ್ನುವ ಹೆಸರಿಗೆ ಪ್ರವಹಿಸುವಂತವಳು ಎನ್ನುವ ಅರ್ಥವಿದೆ. ಯಮುನೆ ಅತ್ಯಂತ ಶಾಂತ ಸ್ವಭಾವದ ನದಿ. ಪ್ರವಾಹ ಕಾಣಿಸುವುದೇ ಇಲ್ಲ. ಅದಕ್ಕೇ ಅದನ್ನು ಯಮುನಾ ಎನ್ನಲಾಗಿದೆ. ಅತ್ಯಂತ ವೇಗವಾಗಿ ಪ್ರವಹಿಸುವುದರಿಂದ ಅದನ್ನು ಶುತುದ್ರಿ ಎನ್ನಲಾಗಿದೆ. ಇರಾವತಿ ನದಿಯನ್ನೇ ಪರುಷ್ಣಿ ಎಂದು ಕರೆಯುವುದು ಇದು ಅನೇಕ ಮೂಲಿಕೆಗಳಿಂದ ಕೂಡಿರುವುದರಿಂದ ಪರುಷ್ಣಿಯಾಗಿದೆ. ಅಸಿಕ್ನಿಯ ನೀರು ಕಪ್ಪಾಗಿದೆ ಅದಕ್ಕೇ ಕಪ್ಪಾದ ನೀರನ್ನು ಹೊಂದಿದ ಅಸಿಕ್ನೀ. ಎಲ್ಲಾ ಉಪನದಿ ಮತ್ತು ಗಾಳಿಯಿಂದ ತುಂಬಿ ಹರಿಯುವ ನದಿ ಮರುದ್ವೃಧೇ. ಋಜುಕ ಎನ್ನುವ ದೇಶದಲ್ಲಿ ಹುಟ್ಟಿ ಹರಿಯುವುದರಿಂದ ಆರ್ಜೀಕೀಯಾ ಎನ್ನಲಾಗಿದೆ ಇದು ಎತ್ತರದ ದಂಡೆಗಳನ್ನು ಹೊಂದಿದ್ದರಿಂದ ವಿತಸ್ತಾ ಎಂದು ಕರೆಯಲಾಗುತ್ತದೆ. 
ಒಮ್ಮೆ ವಶಿಷ್ಠ ಮಹರ್ಶಿಯ ಮಕ್ಕಳೆಲ್ಲಾ ಸಾವಿಗೀಡಾಗುತ್ತಾರೆ ಆಗ ಜುಗುಪ್ಸಿತರಾದ ವಶಿಷ್ಠ ತನ್ನನ್ನು ಹಗ್ಗದಿಂದ ಬಂಧಿಸಿ ಈ ನದಿಗೆ ಧುಮುಕಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಆದರೆ ಈ ನದಿ ಅವರ ಹಗ್ಗವನ್ನು ಬಿಡಿಸಿ ಬಂಧಮುಕ್ತನನ್ನಾಗಿಸಿ ಬದುಕಿಸುತ್ತದೆ ಅದಕ್ಕೆ ಅದನ್ನು ವಿಪಾಶಾ ಎಂದೂ ಕರೆಯಲಾಗುತ್ತದೆ ಎನ್ನುವ ಇತಿಹಾಸವಿದೆ. ಹೀಗೇ ನದಿಗಳ ಹೆಸರು ಅವುಗಳ ಮೂಲ ಸ್ವರೂಪವನ್ನೂ ನಿರ್ದೇಶಿಸುತ್ತವೆ. 
ಎಂಟನೇ ಮಂಡಲದ ೨೧ನೇ ಸೂಕ್ತದಲ್ಲಿ "ಚಿತ್ರಾ ಇದ್ರಾಜಾ ರಾಜಕಾ ಇದನ್ಯಕೇ ಯಕೇ ಸರಸ್ವತೀ ಮನು" ಚಿತ್ರ ಎನ್ನುವ ರಾಜ ಅನೇಕ ಅಂದರೆ ನೂರಾರು ಜನ ರಾಜರೊಂದಿಗೆ ಸರಸ್ವತೀ ನಡಿ ದಡದಲ್ಲಿದ್ದನಂತೆ. ಅಲ್ಲಿ ದೊಡ್ಡ ಯಾಗವೊಂದನ್ನು ಮಾಡಿ ಸಾವಿರಾರು ದಾನಗಳನ್ನು ಜನರಿಗೆ ಕೊಟ್ಟ ಎನ್ನುವುದಾಗಿ ಹೇಳಿದ್ದು ಗಮನಿಸಿದರೆ ಸರಸ್ವತೀ ನದೀ ದಡದಲ್ಲಿ ಜನವಸತಿ ಅಗಾಧವಾಗಿದ್ದು ಕಂಡು ಬರುತ್ತದೆ.

ಸರಸ್ವತ್ಯಭಿನೋ ನೇಷಿ ವಸ್ಯೋ ಮಾಪ ಸ್ಫರೀಃ ಪಯಸಾ ಮಾ ನ ಆ ಧಕ್ | ಎಂದು ಆರನೇ ಮಂಡಲದಲ್ಲಿ ಬರುತ್ತದೆ. ಸರಸ್ವತೀ ನದೀ ತಟದಲ್ಲಿ ವಾಸಿಸುತ್ತಿದ್ದ ಜನ ಸರಸ್ವತಿಯನ್ನು ಕುರಿತಾಗಿ ನೀನು ಉಕ್ಕಿ ಹರಿದು ಪ್ರವಾಹ ಬಂದು ನಮ್ಮ ವಸತಿಗಳನ್ನು ಹಾಳು ಮಾಡಬೇಡ. ನಮ್ಮ ವಾಸ್ತವ್ಯವನ್ನು ಅಭದ್ರವಾದ ಯಾವುದೋ ಒಂದು ಕ್ಷೇತ್ರಕ್ಕೆ ಒಯ್ಯಬೇಡ ಎಂದು ಕೇಳಿಕೊಳ್ಳುತ್ತಾರೆ. 

ಸರಸ್ವತಿಗೆ ಏಳು ಜನ ಅಕ್ಕ ತಂಗಿಯರಂತೆ ಅದನ್ನು ಋಗ್ವೇದದ ಆರನೇ ಮಂಡಲದ ಅರವತ್ತೊಂದನೆ ಸೂಕ್ತದಲ್ಲಿ ಅತ್ಯಂತ ಮಾರ್ಮಿಕವಾಗಿ ಹೇಳಲಾಗಿದೆ. 
ಉತ ನಃ ಪ್ರಿಯಾ ಪ್ರಿಯಾ ಸು ಸಪ್ತ ಸ್ವಸಾ ಸುಜುಷ್ಟಾ |
ಸರಸ್ವತೀ ಸ್ತೋಮ್ಯಾ ಭೂತ್ || ನಮಗೆಲ್ಲಾ ಯಾರು ಅತ್ಯಂತ ಪ್ರೀತಿ ಪಾತ್ರರೋ ಅಂತವರ ಮಧ್ಯೇ ನೀನು ಹೆಚ್ಚು ಪ್ರೀತಿಗೆ ಅರ್ಹಳಾದವಳೋ, ಗಂಗೆಯೇ ಮೊದಲಾದ ಏಳುಜನ ಸಹೋದರಿಯರನ್ನು ಹೊಂದಿರುವವಳೂ ಅನೇಕ ಮಹರ್ಷಿಗಳಿಂದ ಸೇವಿತಳಾದವಳೂ ಆದ ಸರಸ್ವತಿಯೇ ನಮಗೆ ದಿನವೂ ಸ್ತುತಿಗೆ ಅರ್ಹಳಾಗಿರು ಎಂದು ಕೇಳಿಕೊಳ್ಳಲಾಗಿದೆ. 
ಇಂತಹ ಮೈದುಂಬಿ ಹರಿಯುತ್ತಿದ್ದ ಸರಸ್ವತಿ, ಪೂಜ್ಯಳಾದ ಸರಸ್ವತಿ ಕಣ್ಮರೆಯಾದದ್ದು ಪುರಾಣದ ಕಾಲದಲ್ಲಿ. ಋಗ್ವೇದದಲ್ಲಿ ಸುಮಾರು ೯೯ ನದಿಗಳ ಕುರಿತಾದ ಉಲ್ಲೇಖ ಕಾಣ ಸಿಗುತ್ತದೆ. ಇವುಗಳಲ್ಲಿ ೩೧ ನದಿಗಳಿಗೆ ಪ್ರತ್ಯೇಕವಾದ ಹೆಸರುಗಳಿವೆ. ಸೂಕ್ತಗಳಲ್ಲಿ ೨೫ ನದಿಗಳನ್ನು ಹೇಳಲಾಗಿದೆ. ಸುಮಾರು ಕಡಿಮೆ ಎಂದರೂ ೬೫ ಕ್ಕೂ ಹೆಚ್ಚುಬಾರಿ ಋಗ್ವೇದದಲ್ಲಿ ಸರಸ್ವತಿಯ ಉಲ್ಲೇಖ ಸಿಗುತ್ತದೆ. ಆದರೆ ಸರಸ್ವತಿಯ ಕುರಿತು ಬರುವ ಉಲ್ಲೇಖಗಳೆಲ್ಲವನ್ನೂ ನದಿ ಎಂದು ತೆಗೆದುಕೊಳ್ಳುವಂತಿಲ್ಲ. ವಾಗ್ದೇವತೆಯಾಗಿಯೂ ಆಕಾಶಾಭಿಮಾನಿ ದೇವತೆಯಾಗಿಯೂ ನೋಡಲಾಗಿದೆ.

#ನದೀ_ಸರಸ್ವತಿ
ಸದ್ಯೋಜಾತರು

No comments:

Post a Comment

If you have any doubts. please let me know...