.
ಅಂಗೀರಸನ ಮಗನಾದ ಬೃಹಸ್ಪತಿಯು ಜ್ಞಾನವನ್ನೇ ದೇವತೆಯನ್ನಾಗಿ ಸ್ತುತಿಸುವ ಸೂಕ್ತದಲ್ಲಿ ಬೃಹಸ್ಪತೇ ಸೂಕ್ತ ಎಂದೇ ಋಗ್ವೇದದದಲ್ಲಿ ಕರೆಯಲಾಗಿದೆ. ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ವಾಚಮಕ್ರತ ಎಂದು ಬರುವ ಎರಡನೇ ಋಕ್ಕನ್ನು ಮಾತ್ರ ಗಮನಿಸುವೆ. ಇಲ್ಲಿ ಸಕ್ತು ಎನ್ನುವ ಪದ ಪ್ರಯೋಗವಾಗಿದೆ.
ಸಕ್ತು ಎನ್ನುವುದು ಒಂದು ಧಾನ್ಯಕ್ಕೆ ಇರುವ ಹೆಸರು. ಅಂದರೆ ಈ ಧಾನ್ಯವನ್ನು ಋಗ್ವೇದ ಭಾಷ್ಯದಲ್ಲಿ ಯವ ಎನ್ನುವ ಧಾನ್ಯವನ್ನು ಕುರಿತಾಗಿ ಹೇಳಿದ್ದಾರೆ. ಅಂದರೆ ಬಾರ್ಲಿ ಎನ್ನುವ ಧಾನ್ಯವನ್ನು ಕುರಿತಾಗಿ. ಇಲ್ಲಿ ತಿತಉ ಎಂದರೆ ಸಾರಣೆ ಅಥವಾ ಶೋಧಿಸುವ ಸಲಕರಣೆ. ಧಾನ್ಯ ಅಥವಾ ಹಿಟ್ಟನ್ನು ಸಾರಣೆಯಲ್ಲಿ ಹಾಕಿ ಶೋಧಿಸುವದನ್ನೇ ಪುನಂತಃ ಎನ್ನಲಾಗಿದೆ. ಯಾವುದಾದರೂ ಲೋಹವನ್ನು ಬಳಸಿ ಅದರ ತಗಡಿಗೆ ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಿ ಸುತ್ತಲೂ ಚರ್ಮದಿಂದ ಸುತ್ತುವುದನ್ನು ತಿತಉ ಎನ್ನಲಾಗುತ್ತದೆ. ತಿಲಮಾತ್ರದಷ್ಟು ಚಿಕ್ಕ ರಂಧ್ರಗಳಿರುವುದರಿಂದಲೂ ಸಹ ತಿತಉ ಎಂದು ಕರೆಯಲಾಗಿದೆ. ಸಚತೇ ದುರ್ಧಾವೋ ಭವತಿ ಇತಿ ಸಕ್ತುಃ ಈ ಸಕ್ತು ಎನ್ನುವ ಧಾನ್ಯವು ಶೋಧಿಸಿ ತೆಗೆಯುವುದು ಸಹ ಅತ್ಯಂತ ಕಷ್ಟಕರ ಮತ್ತು ಈ ಸಕ್ತುವನ್ನು ನೀರಿನಿಂದ ತೊಳೆದರೆ ಅದು ಒಂದಕ್ಕೊಂದು ಅಂಟಿಕೊಳ್ಳುತ್ತಂತೆ. ಅದನ್ನು ತೊಳೆದು ಉಪಯೋಗಿಸುವುದೇ ಕಷ್ಟದ ಕೆಲಸ ಎನ್ನಲಾಗಿದೆ. ಇನ್ನೊಂದು ವಿಷೇಶವೆಂದರೆ ನೀರು ತಾಗಿದಾಕ್ಷಣ ಅದು ವಿಕಸಿತವಾಗಿ ದೊಡ್ಡದಾಗುತ್ತದಂತೆ. ಹೀಗಾಗಿಯೇ ವಿಕಸಿತ ಎನ್ನುವ ಶಬ್ದವೇ ಹಿಂದುಮುಂದಾಗಿ ಸಕ್ತು ಎನ್ನುವ ಪದ ಉಂಟಾಗಿದೆ ಎನ್ನುವ ಅಭಿಪ್ರಾಯವೂ ಭಾಷ್ಯಕಾರರದ್ದು.
ಜರಡಿಯಲ್ಲಿ ಯವಧಾನ್ಯವನ್ನು ಹಾಕಿ ಸೋಸಿ ಶುದ್ಧವಾದದ್ದನ್ನು ಪಡೆಯುವಂತೆ ಬುದ್ಧಿವಂತಾರದ ಜನ ಮನಸ್ಸೆಂಬ ಜರಡಿಯಲ್ಲಿ ವಾಕ್ಯವೆಂಬ ಧಾನ್ಯವನ್ನು ಹಾಕಿ ಧಾನ್ಯವೆಂಬ ಚಲನೆಯಿಂದ ವಾಕ್ಯವು ಶುದ್ಧವಾಗುವುದು ಎಂದರೆ ಬುದ್ಧಿವಂತರ ಮಾತುಗಳು ಚೆನ್ನಾಗಿ ಆಲೋಚಿಸಲ್ಪಟ್ಟಿರುತ್ತವೆ. ಎಂದರೆ ಸೋಸಲು ಕಷ್ಟವಾಗುವುದೂ ಚೂಪಾದ ಉಗುರಿದ್ದರೂ ಆಯ್ದುಕೊಳ್ಳಲು ಸಾಧ್ಯವಾಗದೇ ಇರುವ ಧಾನ್ಯದಂತೆ ಅತ್ಯಂತ ಜಾಣ್ಮೆಯನ್ನು ಮೆರೆಯುವ ಗುಣ ಇರುವುದು ಬುದ್ಧಿವಂತರಲ್ಲಿ ಮಾತ್ರ ಎನ್ನುವುದು ಈ ಋಕ್ಕಿನ ಭಾವಾರ್ಥ.
ಯವತ್ವಂ ಯದ್ವೈಕಂಕತಂ ಮಂಥಿ ಪಾತ್ರಂ ಭವತಿ ಸಕ್ತುಭಿಃ ಎಂದು ತೈತ್ತಿರೀಯ ಸಂಹಿತೆಯ ೬:೪:೧೦:೬ರಲ್ಲಿ ಬರುತ್ತದೆ.
ಇಲ್ಲಿನ ವಿವರಣೆ ಭಾಷ್ಯಕಾರರದು ಬಹಳ ಮಹತ್ವ ಪಡೆಯುತ್ತದೆ. ಇಲ್ಲಿ ಈ ಸಕ್ತು ಎನ್ನುವುದು ಬತ್ತವನ್ನು ಹುರಿದಾಗ ಅರಳಿ ಅದು ಹೊಟ್ಟು ಕಳಚಿ ಬಂದ ಲಾಜಾ ಅಥವಾ ಹೊದಲು ಎಂದು ನಮ್ಮಲ್ಲಿ ಕರೆಯುತ್ತೇವೆ ಅಥವಾ ಅರಳು ಎಂದು ಸಹ ಕರೆಯಲಾಗುತ್ತೇವೆ. ಮಂಥಿಪಾತ್ರ ಎಂದರೆ ಸೋಮರಸವನ್ನು ಹಿಂಡುವ ಪಾತ್ರ. ಅದರಲ್ಲಿ ತಯಾರಿಸುವ ಪೇಯ ಒಂದರ ಕುರಿತಾಗಿದೆ. ಈ ಪೇಯ ಅತ್ಯಂತ ರುಚಿಕರವಾಗಿದ್ದು. ಶಕ್ತ್ತಿಭರಿತವಾಗಿದೆ ಎನ್ನುವುದು ಒಂದು ಕಡೆಯಾದರೆ. ಇನ್ನೊಂದು ಅರ್ಥದಲ್ಲಿ ಇದೇ ಸಕ್ತು ಎನ್ನುವುದು ಯವ ಅಥವಾ ಬಾರ್ಲಿಗೆ ಹೇಳಿದ್ದು, ಈ ಬಾರ್ಲಿಯನ್ನು ಹುಡಿಯನ್ನಾಗಿಮಾಡಿ ಅದರಿಂದ ತಯಾರಸಿಸುವ ಪೇಯವೊಂದು ಮನುಷ್ಯನ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದಂತೆ. ಅಲ್ಲದೇ ಇದು ಒಂದು ರೀತಿಯಲ್ಲಿ ಮತ್ತು ಭರಿಸುವಂತಿರುತ್ತದೆ ಮತ್ತು ಇದರ ಸೇವನೆಯಿಂದ ವೀರ್ಯವೃದ್ಧಿಯಾಗುತ್ತದೆ ಎನ್ನಲಾಗಿದೆ. ಅದೇನೇ ಇರಲಿ ಸಕ್ತು ಎನ್ನುವುದು ಅರಳು ಅಥವಾ ಬಾರ್ಲಿಯನ್ನು ಕುರಿತಾಗಿ ಹೇಳಿರುವುದು ತಿಳಿಯುತ್ತದೆ.
ಯವತ್ವಂ ಯದ್ವೈಕಂಕತಂ ಮಂಥಿ ಪಾತ್ರಂ ಭವತಿ ಸಕ್ತುಭಿಃ ಪಾಲಾಶದಂತಹ ಒಂದು ಮರದಿಂದ ಮಾಡಿದ ಪಾತ್ರೆಯಲ್ಲಿ ಎನ್ನುವುದನ್ನೇ ಇಲ್ಲಿ ವಿಕಂಕತ ಎಂದು ಹೇಳಿರುವುದು. ಯವದಿಂದ ಕೂಡಿರುವ ಅರಳಿನ ಹುಡಿಯನ್ನು ಸೋಮರಸವನ್ನು ಹಿಂಡುವಂತಹ ಪಾತ್ರೆಯಲ್ಲಿ ಮಿಶ್ರಣಮಾಡಿದಾಗ ಅದು ಅತ್ಯಂತ ರುಚಿಕರವಾದ ಹಾಗೂ ಮತ್ತು ಭರಿಸುವ ಪೇಯವಾಗುತ್ತದೆ ಎನ್ನುವುದು ಭಟ್ಟ ಭಾಸ್ಕರಾಚಾರ್ಯರ ಭಾಷ್ಯದಲ್ಲಿ. ಇದನ್ನು ಸಾಮಾನ್ಯವಾಗಿ ಸೋಮಯಾಗದ ಕೊನೆಯಲ್ಲಿ ಮಾಡುವ ಸಂಪ್ರದಾಯವಿದೆ ಎನ್ನುವ ಅಭಿಪ್ರಾಯವೂ ಅವರದ್ದು. ಶತಪಥ ಬ್ರಾಹ್ಮಣ ಮತ್ತು ವಾಜಸನೇಯೀ ಸಂಹಿತೆಯಲ್ಲೂ ಇದೇ ಸಕ್ತುವಿನ ವಿಷಯ ಬಂದಿದೆ. ಕಾಠಕ ಸಂಹಿತೆಯಲ್ಲಿ ಕರ್ಕಂದು, ಕುವಲ ಮತ್ತು ಅಪಾಮಾರ್ಗದ ಕುರಿತು ಹೇಳುವಾಗ ಸಕ್ತುವಿನ ವಿಷಯ ಬಂದಿದೆ. ಇನ್ನು ವೇದಿಕ್ ರಿಚುವಲ್ಸ್ ಎನ್ನುವ ಹಿಂದಿಯ ಪುಸ್ತಕದಲ್ಲಿ ಈ ಸಕ್ತು ಎನ್ನುವ ಧಾನ್ಯದ ಹುಡಿಯ ಉಪಯೋಗವನ್ನು ಯಜ್ಞ ದೀಕ್ಷಿತನಾದ ಯಜಮಾನನು ವ್ರತದ ಪಥ್ಯದಂತೆ ಬಳಸುತ್ತಾನೆ ಎನ್ನಲಾಗಿದೆ. ಬೌಧಾಯನ ಶ್ರೌತಸೂತ್ರದಲ್ಲಿ ಇದನ್ನು ಯಜ್ಞಾಹುತಿಯಾಗಿ ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಆಪಸ್ತಂಭದಲ್ಲಿಯೂ ಅದನ್ನೆ ಹೇಳಲಾಗಿದೆ. ಇದು ಆಯುವೇದದ ಅಷ್ಟಾಂಗಹೃದಯ ಸಂಹಿತೆ, ಸುಶ್ರುತ ಸಂಹಿತೆ, ಮಹಾಭಾರತ, ಚರಕ ಸಂಹಿತೆ, ಹಿತೋಪದೇಶ, ವಿಷ್ಣುಸ್ಮೃತಿ, ಮತ್ತು ಇನ್ನೂ ಅನೇಕ ಕಡೆ ಇದರ ಪ್ರಸ್ತಾಪವಿದ್ದು ಇದು ಮಾನವನ ದೇಹದ ಆರೋಗ್ಯಕ್ಕೆ ಪೂರಕವಾಗಿ ದೊರಕಿದ ಉದಾಹರಣೆ ಸಿಗುತ್ತದೆ. ಬಾರ್ಲಿಯನ್ನು ಹುರಿದು ಅದನ್ನು ಹಿಟ್ಟು ಮಾಡಿ ನೆಲದಲ್ಲಿ ಹರಡುವುದನ್ನು ಸಕ್ತು ಎನ್ನಲಾಗುತ್ತದೆ ಎನ್ನುವ ಅರ್ಥವನ್ನು ಆಪ್ಟೆಯವರು ಕೊಡುತ್ತಾರೆ. ಸಕ್ತು ಎನ್ನುವುದು ನೆಲದಮೇಲೆ ಹರಡಿರುವ ಒಣಗಿದ ಧಾನ್ಯ ಎಂದು ಸಹ ಶಬ್ದಕೋಶವೊಂದರಲ್ಲಿ ಹೇಳಲಾಗಿದೆ. ಅಕ್ಕಿಯಿಂದ ಮಾಡಿದ ಪೇಯವೇ ಇರಲಿ ಬಾರ್ಲಿಯಿಂದಲೇ ಮಾಡಿರಲಿ ಅದು ಆರೊಗ್ಯದಾಯಿಯಂತೂ ಹೌದು.
#ಬಾರ್ಲಿಯ_ಪೇಯ
ಸದ್ಯೋಜಾತರು
No comments:
Post a Comment
If you have any doubts. please let me know...