ಬ್ರಹ್ಮ ಎಂದರೆ ಜ್ಞಾನ. ಪರಮೋಚ್ಚ ಜ್ಞಾನ. ಶಬ್ದವನ್ನು ನಮ್ಮ ಹಿರಿಯರು ಬ್ರಹ್ಮ ಎನ್ನುವ ಅತ್ಯುತ್ಕೃಷ್ಟವಾದ ಸ್ಥಾನವನ್ನು ನೀಡಿ ಅದಕ್ಕೆ ವಿಶೇಷ ಸ್ಥಾನವನ್ನು ನೀಡಿದ್ದರು. ಶಬ್ದದಿಂದಲೇ ಮಾತು ಹುಟ್ಟಿದ್ದು. ವಾಕ್ ಅಥವಾ ಮಾತಿಗೆ ಭಾಷೆ ಮಾಧ್ಯಮವಾಗಿ ರೂಪುಗೊಂಡಿತು. ಭಾಷೆ ವ್ಯಕ್ತವಾಗುವುದು ಲಿಪಿಯ ಮಾಧ್ಯಮದಿಂದ. ಹೀಗೇ ಶಬ್ದಕ್ಕಿರುವ ಮಹತ್ವವನ್ನು ವೇದ, ಉಪನಿಷತ್ತು ಪುರಾಣವೇ ಮೊದಲಾದವುಗಳು ಕೊಂಡಾಡಿವೆ. ವಾಕ್ಯ ರಚನೆಯ ಬದ್ದತೆಯನ್ನು ಸಾರಿವೆ. ಅದನ್ನೇ ಇಲ್ಲಿ. . . .
ದೇವೀಂ ವಾಚಮಜನಯಂತ ದೇವಾಸ್ತಾಂ ವಿಶ್ವರೂಪಾಃ ಪಶವೋ ವದಂತಿ |
ಸಾ ನೋ ಮಂದ್ರೇಷಮೂರ್ಜಂ ದುಹಾನಾ ಧೇನುರ್ವಾಗಸ್ಮಾನುಪಸುಷ್ಟುತೈತು ||
ಪ್ರಕಾಶಮಾನಳಾದ ವಾಗ್ದೇವಿಯನ್ನು ದೇವತೆಗಳು ಸೃಷ್ಟಿಸಿದರು. ಅದೇ ವಾಗ್ದೇವಿಯನ್ನು ಬೇರೆ ಬೇರೆ ರೂಪ ಹೊಂದಿರುವ ಪಶುಗಳೂ ಪ್ರಶಂಸಿಸುತ್ತವೆ. ಅದೇ ವಾಗ್ದೇವಿಯು ನಮಗೆ ಹರ್ಷಕಾರಕಳಾಗಿ ಅನ್ನವನ್ನೂ ಕ್ಷೀರಾದಿ ರಸಗಳನ್ನೂ ಕರೆಯುತ್ತಲೂ ಪ್ರಭೂತವಾದ ಕ್ಷೀರ ಹೊಂದಿದ ಧೇನುವಿನ ರೂಪವನ್ನು ಆಶ್ರಯಿಸಿ ಅತಿಶಯವಾಗಿ ಸ್ತುತಿಸಲ್ಪಡುತ್ತಾ ನಮ್ಮಲ್ಲಿಗೆ ದಯಮಾಡಲಿ.
ಇದು ಋಗ್ವೇದದ ೮ನೇ ಮಂಡಲದಲ್ಲಿ ಬರುತ್ತದೆ. ವಾಗ್ದೇವತೆಯನ್ನು ದೇವತೆಗಳು ಸೃಷ್ಟಿಸಿದರಂತೆ. ಈ ವಾಗ್ದೇವತೆಯ ರೂಪವನ್ನು ಹೊಂದಿದ ವಾಕ್ಕನ್ನು (ಮಾತು ಮತ್ತು ಭಾಷೆಗಳನ್ನು)ಬೇರೆ ಬೇರೆ ರೂಪವನ್ನು ಹೊಂದಿರುವ ಪ್ರಾಣಿಗಳೂ ಬಳಸುತ್ತವೆ. ಅಂದರೆ ವ್ಯಕ್ತ ಶಬ್ದಗಳಿಂದಲೂ ಅರ್ಥಗಳಿಂದ ಕೂಡಿರುವ ವಾಕ್ಯಗಳನ್ನು ಮನುಷ್ಯರು ಮಾತನಾಡುತ್ತಾರೆ. ಅವ್ಯಕ್ತವಾಗಿರುವ ಅಸ್ಪಷ್ಟವಾಗಿರುವ ವರ್ಣಾತ್ಮಕವಲ್ಲದ ಶಬ್ದಗಳನ್ನು ಗೋವುಗಳೂ ಮತ್ತು ಇತರ ಪ್ರಾಣಿಗಳು ಬಳಸುತ್ತವೆ. ಇವುಗಳನ್ನೇ ಅವ್ಯಕ್ತ ವಾಕ್ಯಗಳೆಂದು ಹೇಳಲ್ಪಡುತ್ತವೆ. ಈ ಅವ್ಯಕ್ತ ಸಂಕೇತಗಳು ಮನುಷ್ಯರಿಗೆ ತಿಳಿಯುವುದಿಲ್ಲ. ಇಂತಹ ವ್ಯಕ್ತಾವ್ಯಕ್ತ ಶಬ್ದ ಸ್ವರೂಪಳಾದ ವಾಗ್ದೇವತೆಯು ನಮಗೆ ಹಾಲನ್ನು ಕರೆಯುವ ಧೇನುವಿನಂತೆ ಪ್ರೀತಿಪಾತ್ರಳಾಗಿ ಹಿತಕರವಾದ ಅನ್ನಾದಿಗಳನ್ನು ಅಂದರೆ ಹಾಲು ಮೊಸರು ತುಪ್ಪ ಮೊದಲಾದವನ್ನೂ, ರಸಾದಿಗಳನ್ನು ಎಂದರೆ ಸಸ್ಯಗಳಿಂದ ಉತ್ಪನ್ನವಾಗುವ ಪುಷ್ಟಿಕರವಾದ ಆಹಾರಗಳನು ಯಥೇಚ್ಚವಾಗಿ ಕರೆಯುತ್ತಾ ಅಂದರೆ ಅನುಗ್ರಹಿಸುತ್ತಾ ನಮ್ಮ ಸಮೀಪಕ್ಕೆ ಬರಲಿ ಮತ್ತು ನಮ್ಮಿಂದ ಸ್ತುತಿಸಲ್ಪಡಲಿ ಎನ್ನುವ ಅಭಿಪ್ರಾಯ ಇರುವುದು ಯಾಸ್ಕ ಮಹರ್ಷಿಗಳ ನಿರುಕ್ತದಲ್ಲಿ.
ಪೂರ್ತಾ ಸೂಕ್ತ ಎನ್ನುವುದು ವಾಗ್ದೇವತೆಯ ಕುರಿತಾಗಿದ್ದು, ಅದು ವಾಕ್ ಸ್ವರೂಪವನ್ನೇ ಹೊಂದಿದೆ. ಭೂಮಿಯಲ್ಲಿ ಹರಿಯುವ ನದೀ, ನೀರು ಮತ್ತು ಇಲ್ಲಿನ ಸಸ್ಯವರ್ಗಗಳನ್ನು ಕುರಿತಾಗಿ ಸ್ಮರಿಸಲ್ಪಡುವುದನ್ನು ಪೂರ್ತಾಸೂಕ್ತ ಎಂದು ಕರೆಯಲಾಗಿದೆ ಎಂದು ಬೃಹದ್ದೇವತೆಯಲ್ಲಿ ಹೇಳಲಾಗಿದೆ. ವಾಗ್ದೇವತೆಗೆ ಮೂರು ಸ್ವರೂಪವಿದೆ ಎನ್ನುವುದು ಇದರ ಅಭಿಪ್ರಾಯ. ಪೃಥಿವೀ, ಮಧ್ಯಮಾ ಮತ್ತು ಅಂತರಿಕ್ಷ ಸ್ಥಾನವನ್ನು ಇದರಲ್ಲಿ ಹೇಳಲಾಗಿದೆ.
ಅಂತರಿಕ್ಷಸ್ಥಾನವನ್ನೇ ಸ್ವರ್ಗಸ್ಥಾನ ಎಂದು ಹೇಳಲಾಗುತ್ತದೆ. ಅರಣ್ಯ, ರಾತ್ರೀ, ಶೃದ್ಧಾ, ಉಷಾ, ಪೃಥ್ವೀ ಅಪ್ ಎನ್ನುವ ದೇವತೆಗಳನ್ನು ಸ್ತುತಿಸುವಾಗ ವಾಕ್ಕುಗಳು ಆಯಾ ಋಕ್ಕುಗಳಿಗೆ ಅನುಸಾರವಾಗಿ ಇರುವುದು. ಈ ದೇವತೆಯು ಸ್ವರ್ಗಸ್ಥಳಾಗಿ ವಾಕ್ ಅದಿತಿ ಮತ್ತು ಸರಸ್ವತೀ ಎನ್ನುವ ಈ ಮೂರು ಹೆಸರಿನಿಂದ ಸ್ತುತಳಾದಾಗ ಆಯಾಯ ಸೂಕ್ತಕ್ಕೆಲ್ಲಾ ಪೂರ್ತಿಯಾಗಿ ಅದೇ ದೇವತೆಯಾಗಿರುತ್ತಾಳೆ. ಇದೇ ವಾಗ್ದೇವತೆಯು ಸೂರ್ಯಾ ದೇವಿಯಾಗಿ ಸ್ತುತಿಸಲ್ಪಟ್ಟಾಗ ಆಕೆ ಸ್ವರ್ಗೀಯ ಸ್ಥಾನ ಪಡೆದುಕೊಳ್ಳುತ್ತಾಳೆ.
ವಾಕ್ ಅಥವಾ ಮಾತು ಎನ್ನುವುದು ಎಲ್ಲವನ್ನು ಗ್ರಹಿಸತಕ್ಕದ್ದು ಅನ್ನುವುದು ಬೃಹದಾರಣ್ಯಕದ ಉದಾಹರಣೆ. ವಾಗ್ವೈಗ್ರಹಃ ಸ ನಾಮ್ನಾತಿಗ್ರಾಹೇಣ ಗೃಹೀತೋ ವಾಚಾ ಹಿ ನಾಮಾನ್ಯಭಿವದತಿ ಮಾತು ಎನ್ನುವುದು ನಾಮಾತ್ಮಕವಾಗಿದೆ. ಮಾತಿನಿಂದಲೇ ಎಲ್ಲ ಆಗುಹೋಗುಗಳೂ ಮತ್ತು ಅದರಿಂದಲೇ ಜಗತ್ತಿನ ವ್ಯವಹಾರ ನಡೆಯುತ್ತದೆ.
ವಾಗ್ವೈ ಬ್ರಹ್ಮೇತಿ ಯಥಾ ಮಾತೃವಾನ್ ಪಿತೃಮಾನಾಚಾರ್ಯವಾನ್ ಎಂದು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಜನಕ ಮತ್ತು ಯಾಜ್ಞವಲ್ಕ್ಯನ ಸಂಭಾಷಣೆಯಲ್ಲಿ ಕಂಡು ಬರುತ್ತದೆ. ಇದರಲ್ಲಿ ಮಾತಿಗೂ ಬ್ರಹ್ಮನಿಗೂ ಇರುವ ತಾದಾತ್ಮ್ಯವನ್ನು ತೋರಿಸುವ ವಾಕ್ಕಿನ ಮಹತ್ವವನ್ನು ತೋರಿಸಲಾಗಿದೆ. ವಾಕ್ಕಿನ ಪ್ರಶಂಸೆ ಇದರಲ್ಲಿ ಕಂಡು ಬರುತ್ತದೆ.
ಮಾತು ಎನ್ನುವುದು ಒಂದು ಆಲಯವಿದ್ದಂತೆ. ಆಕಾಶವೇ ಅದಕ್ಕೆ ಪ್ರತಿಷ್ಟೆ, ಈ ವಾಕ್ ಎನ್ನುವುದು ಋಗ್ವೇದವೇ ಮೊದಲಾದವುಗಳೂ, ಇತಿಹಾಸಗಳೂ, ಸಕಲ ಶಾಸ್ತ್ರ ಸ್ಮೃತಿಗಳೂ, ಯಜ್ಞ ಯಾಗಾದಿಗಳಲ್ಲೇ ಪ್ರಾಪಂಚಿಕವಾದ ಎಲ್ಲಾ ವಿಷಯಗಳೂ ಇದರಿಂದಲೇ ತಿಳಿಯಲ್ಪಡುತ್ತವೆ. ಈ ವಾಕ್ ಎನ್ನುವುದರಿಂದಲೇ ಇಡೀ ಜಗತ್ತಿನ ನಿಯಂತ್ರಣ ಮಾಡಲ್ಪಡುತ್ತಿದೆ. ಲೋಕವ್ಯವಹಾರಕ್ಕೆಲ್ಲಾ ಮೂಲ ಇದೇ ವಾಕ್ಕು.
ನಮ್ಮ ಮಾತುಗಳೆಲ್ಲಾ ಹೃದಯ ಎನ್ನುವ ಆಕಾಶದಿಂದ ಹುಟ್ಟುತ್ತದೆ ಎನ್ನುವುದು ಛಾಂದೋಗ್ಯ ಉಪನಿಷತ್ತಿನಲ್ಲಿ ಹೇಳಲ್ಪಟ್ಟಿದೆ ಅದನ್ನೇ ಅಲ್ಲಿ ಯಾವಾನ್ ವಾ ಅಯಮಾಕಾಶಸ್ತಾವಾನೇಷೋಂತರ್ಹೃದಯ ಎಂದಿದೆ. ನಮ್ಮ ಹೃದಯ ಎನ್ನುವುದು ಬೃಹ್ಮನ ಆವಾಸಸ್ಥಾನ ಅಂತಹ ಹೃದಯದಿಂದಲೇ ಎಲ್ಲ ಹುಟ್ಟುಗಳು ಸಂಭವಿಸುತ್ತವೆ. ಇದನ್ನೇ ತೈತ್ತಿರೀಯಸಂಹಿತೆಯಲ್ಲಿಯೂ ಹೇಳಲಾಗಿದೆ.
ಗೌರೀರ್ಮಿಮಾಯ ಸಲಿಲಾನಿ ತಕ್ಷತ್ಯೇಕಪದೀ ದ್ವಿಪದೀ ಸಾ ಚತುಷ್ಪದೀ |
ಅಷ್ಟಾಪದೀ ನವಪದೀ ಬಭೂವುಷೀ ಸಹಸ್ರಾಕ್ಷರಾ ಪರಮೇ ವ್ಯೋಮನ್ ||
ಸ್ವರ್ಗಲೋಕದಲ್ಲಿರುವ ಮಾಧ್ಯಮಿಕಾ ವಾಕ್ಕು ಅಥವಾ ಮಾತು ಶಬ್ದಮಾಡುತ್ತಾಳೆ. ನೀರನ್ನು ದೊರಕಿಸಿಕೊಡುವವಳಾಗಿ ಒಂದು ಎರಡು ನಾಲ್ಕು ಎಂಟು ಮತ್ತು ಒಂಬತ್ತು ಅಧಿಷ್ಠಾನಗಳುಳ್ಳವಳಾಗಿಯೂ ಇರುತ್ತಾ ಉತ್ಕೃಷ್ಟವಾದ ಸ್ವರ್ಗದಲ್ಲಿ ಅಪರಿಮಿತವಾದ ವ್ಯಾಪ್ತಿವುಳ್ಳವಳಾಗುತ್ತಾಳೆ.
ಶಬ್ದವನ್ನು ಇಲ್ಲಿ ಬ್ರಹ್ಮತ್ವಕ್ಕೆ ಏರಿಸಲಾಗಿದೆ. ಶಬ್ದ ಮತ್ತು ಮಾತು ಎರಡೂ ದೈವತ್ವಕ್ಕೇರಿದ್ದು ಮಾತ್ರವಲ್ಲ ಬ್ರಹ್ಮನ ಸ್ಥಾನ ಪಡೆದುಕೊಂಡಿವೆ. ಇಲ್ಲಿ ಏಕಪದಿ ಎನ್ನುವುದು ಮಧ್ಯಮ ರೂಪವಾದ ಒಂದು ಪಾದವನ್ನು ಅಥವಾ ಅಧಿಷ್ಠಾನವುಳ್ಳವಳು ಎಂಬ ಅರ್ಥ ಧ್ವನಿಸುತ್ತದೆ. ಹೀಗೇ ಮಿಕ್ಕವುಗಳೂ ಅವುಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಸಾಗುತ್ತವೆ. ಪ್ರಪಂಚಕ್ಕೆಲ್ಲಾ ಶಬ್ದ ಮತ್ತು ವಾಕ್ಕಿನ ಮಹತ್ವ ಈ ಋಕ್ಕಿನಲ್ಲಿ ಅರ್ಥವನ್ನು ಕೊಡುತ್ತದೆ.
ಗೌರಿ ಎನ್ನುವುದಕ್ಕೆ ಅರ್ಥವನ್ನು ಕೊಡುತ್ತಾ ವಿಶ್ವವ್ಯಾಪಿಯಾದ ಬ್ರಹ್ಮತ್ವವನ್ನು ಹೊಂದಿದ ಶಬ್ದ ಎನ್ನುವುದಾಗಿ ಹೇಳಲಾಗಿದೆ.
ಪ್ರಧಾನಮರ್ಥಃ ಶಬ್ದೋ ಹಿ ತದ್ಗುಣಾಯತ್ತ ಇಷ್ಯತೇ |
ತಸ್ಮಾನ್ನಾನವಯೋಪಾಯೈಃ ಶಬ್ದಾನರ್ಥವಶಂ ನಯೇತ್ ||
ಒಂದು ಶಬ್ದದ ಮುಖ್ಯವಾದ ಅರ್ಥವು ಆ ವಸ್ತುವಿನ ಗುಣವನ್ನನುಸರಿಸಿರುವುದು. ಆದರಿಂದ ಒಂದು ಶಬ್ದದ ಅರ್ಥವನ್ನು ಹೇಳುವಾಗ ಆ ಶಬ್ದಕ್ಕೆ ನಾನಾವಿಧವಾದ(ರೂಪ ನಿಷ್ಪತ್ತಿಯೇ ಮೊದಲಾದ) ಉಪಾಯಗಳಿಂದ ಅರ್ಥವನ್ನು ಹೊಂದಿಸಬೇಕು.
ಒಂದು ವಾಕ್ಯದಲ್ಲಿ ಅಸಂಬದ್ಧವಾದ ಅದು ಸಂದರ್ಭೋಚಿತವಲ್ಲದ ಅರ್ಥವೂ ವ್ಯತ್ಯಾಸವಾಗಿರುವ ಪದವಿದ್ದರೆ ಅಂತಹದ್ದನ್ನು ತ್ಯಜಿಸಬೇಕು. ಎಂದರೆ ಆ ಶಬ್ದಕ್ಕೆ ಯಾವ ಅರ್ಥವನ್ನೂ ಹೇಳಬಾರದು. ಒಂದು ಅವಶ್ಯಕವಾದ ಶಬ್ದವು ವಾಕ್ಯದಲ್ಲಿ ಇಲ್ಲದೇ ಇದ್ದರೆ ವಾಕ್ಯದ ಅರ್ಥವನ್ನು ಹೊಂದಿಸುವುದಕ್ಕಾಗಿ ಆ ಶಬ್ದವನ್ನು ಅಧ್ಯಾಹಾರ ಮಾಡಿಕೊಳ್ಳಬೇಕು. ಹೀಗೆ ಬೃಹದ್ದೇವತಾದಲ್ಲಿ ಬಹಳ ವಿಸ್ತಾರವಾಗಿ ಶಬ್ದ ಮತ್ತು ವಾಕ್ಯದ ಕುರಿತಾಗಿ ಹೇಳಿದೆ. ಇನ್ನು ಭಾಷೆಯ ಕುರಿತು ನೋಡುತ್ತಾ ಹೋದರೆ ಶಬ್ದ ಎನ್ನುವುದು ಬ್ರಹ್ಮತ್ವ ಪಡೆದಮೇಲೆ ಅಂತಹ ಶಬ್ದದ ವ್ಯಕ್ತ ರೂಪವೇ ಭಾಷೆ. ಇಂತಹ ಭಾಷೆ ಪ್ರಾದೇಶಿಕ ಭಿನ್ನತೆ ಇದ್ದರೂ ಮೂಲದಲ್ಲಿ ಸಂವಹನದ ಮಾಧ್ಯಮ ಎನ್ನುವುದು ಸ್ಪಷ್ಟ.
#ಶಬ್ದಾನರ್ಥವಶಂ_ನಯೇತ್
Sadyojatha