September 9, 2021

ಇರುವೆ ನೀನಿರುವೆಯಾ



ನಮ್ಮ ಹಳ್ಳಿಗಳಲ್ಲಿ ಏನೂ ಓದದ ಜನರೂ ಸಹ ಕೆಲವೊಂದು ವಿಷಯಗಳನ್ನು ತಿಳಿದಿರುತ್ತಿದ್ದರು. ಅವರು ಅದನ್ನೆಲ್ಲ ವ್ಯವಸ್ಥಿತವಾಗಿ ತಿಳಿದವರಲ್ಲ ಜನಪದೀಯವಾಗಿ ಹರಿದು ಬಂದದ್ದು. ಹುತ್ತದ ಮಣ್ಣಿನ ಬಳಕೆಯಿಂದ ಕೆಲವೊಂದು ರೋಗಗಳನ್ನು ಗುಣಪಡಿಸಬಹುದು ಎನ್ನುವುದು ಅವರ ಸಾಮಾನ್ಯ ಗ್ರಹಿಕೆ. ಅದು ನಿಜವೂ ಸಹ. ಇದಕ್ಕೆ ಪುಷ್ಟಿಕೊಡುವ ಮಂತ್ರ ಅಥರ್ವವೇದದಲ್ಲಿ ದೊರಕುತ್ತದೆ. ಈ ಮಣ್ಣುಗಳಿಗೆ ಕಾರಣ ನಮ್ಮ ನಡುವೆ ಜೀವಿಸಿ ಆಗಾಗ ನಮಗೆ ಕಚ್ಚಿ ರುಚಿತೋರಿಸುವ ಇರುವೆ . . . . 

ಇರುವೆ ಸಂಧಿಪದಿ ವಂಶದ ಹೈಮೆನೋಪ್ಟೆರ ಉಪವರ್ಗಕ್ಕೆ ಸೇರಿರುವ ಹಲವಾರು ಕೀಟಗಳಲ್ಲಿ ಒಂದು. ಇವುಗಳ ಪ್ರಭೇದಗಳು ಸುಮಾರು ೧೫,೦೦೦. ಇರುವೆಗಳು ಜೊತೆ ಜೊತೆಯಾಗಿ ಇರುವವು. ಒಂಟಿ ಜೀವಿ ಅಲ್ಲವೇ ಅಲ್ಲ. ಈಗ ಲಭಿಸಿರುವ ಅತ್ಯಂತ ಪ್ರಾಚೀನ ಪಳೆಯುಳಿಕೆಗಳು ಸೀನೋಜೋಯಿಕ್ ಯುಗದ ಪ್ರಾರಂಭಕಾಲದವುಗಳು. ಅಂದರೆ ೬೫ ದಶಲಕ್ಷ ವರ್ಷ ಪ್ರಾಚೀನ. ಆದರೆ ಆ ವೇಳೆಗಾಗಲೇ ಇವುಗಳ ವಿಕಾಸ ಪೂರ್ಣವಾಗಿತ್ತು. ೩೫,೦೦೦,೦೦೦ ವರ್ಷಗಳ ಹಿಂದೆ ಮರದ ಮೇಣ ಅಥವಾ ಅರಗಿನೊಳಗೆ ಸಿಕ್ಕಿಕೊಂಡು ಅಸುನೀಗಿರುವ ಇರುವೆಗಳ ಶರೀರಗಳು ಸ್ವಲ್ಪವೂ ಕೆಡದಂತೆ ಪಳೆಯುಳಿಕೆಗಳಾಗಿ ಉಳಿದಿವೆ. ಅವುಗಳು ಸಿಕ್ಕಿವೆ. ಅವುಗಳ ಮತ್ತು ಇಂದಿರುವ ಇರುವೆಗಳ ಅಂಗರಚನೆ, ಶರೀರ ರಚನೆಗಳಲ್ಲಿ ಅಂಥ ಹೆಚ್ಚಿನ ಬದಲಾವಣೆಗಳೇನೂ ಕಂಡುಬರುವುದಿಲ್ಲ. ಬೆಚ್ಚಗಿನ ಗೂಡು ಇರುವೆಗೆ ಬಲುಪ್ರಿಯವಂತೆ. ಅಂಥ ಸ್ಥಳಗಳನ್ನೇ ಅವು ತಮ್ಮ ನಿವಾಸ ಸ್ಥಾನಗಳಿಗೆ ಆರಿಸಿಕೊಳ್ಳುತ್ತವೆ. ಉಷ್ಣವಲಯ, ಸಮಶೀತೋಷ್ಣವಲಯಗಳಲ್ಲಿ ಇರುವೆಗಳ ಬೇಗ ವರ್ಧಿಸುತ್ತವೆ. ಕೆಲವು ಮಾತ್ರ ಶೀತವಲಯದಲ್ಲೂ ನೆಲೆಸುತ್ತವೆ. ಇರುವೆಗಳು ಗೂಡು ಬದಲಾಯಿಸಬೇಕಾಗಿ ಬಂದಾಗ ಮರಿಗಳನ್ನು ಹೊತ್ತುಕೊಂಡು ಹೋಗುತ್ತವೆಯಂತೆ. ಇರುವೆಗಳ ಗೂಡು ಸಾಮಾನ್ಯವಾಗಿ ನೆಲದಡಿಯಲ್ಲಿರುವುದು. ಅವು ಚಿಕ್ಕ ಚಿಕ್ಕ ಬಿಲಗಳೂ ಆಗಿರಬಹುದು. ಆದರೆ ಕೆಲವು ಜಾತಿಯ ಇರುವೆಗಳು ಮರದಮೇಲೆ, ಕಲ್ಲುಗಳ ಕೆಳಗೆ, ಕಸಕಡ್ಡಿಗಳ ರಾಶಿಗಳಲ್ಲಿ ಗೂಡುಮಾಡಿಕೊಂಡು ಬಾಳುತ್ತವೆ. 
ಒಂದು ಇರುವೆಗೂಡಿನಲ್ಲಿರುವ ವರ್ಗ ಮೂರು. ಗಂಡು, ಹೆಣ್ಣು ಮತ್ತು ಕೆಲಸಗಾರ. ಇರುವೆಗಳ ವಿವಿಧ ಪ್ರಭೇದಗಳಲ್ಲಿ ಕೆಲಸಗಾರ ಇರುವೆ ಬೇರೆ ಬೇರೆ ರೂಪಗಳನ್ನು ಹೊಂದಿರುವುದು. ಕೆಲವು ಕೆಲಸಗಾರ ಇರುವೆಗಳು ಅತಿ ದೊಡ್ಡವಾಗಿಯೂ, ಕೆಲವು ಮಧ್ಯಸ್ಥಿತಿಯಲ್ಲಿಯೂ, ಮತ್ತೆ ಕೆಲವು ಅತಿಚಿಕ್ಕವಾಗಿಯೂ ಇರುವುದು ಬಹುರೂಪತೆಯ ಲಕ್ಷಣ. 
ಇರುವೆಗಳಿಗೂ ಮಾತು ಬರುತ್ತದೆ. ಅಂದರೆ ಒಂದನ್ನೊಂದು ಮುಖದಿಂದ ಮುಖ ತಾಗಿಸಿಕೊಂಡು ಸಂಜ್ಞೆ ಮಾಡಿಕೊಳ್ಳುತ್ತವೆ. ಇದರ ಕುರಿತಾದ ಒಂದು ಕಥೆ ಪುರಾಣದಲ್ಲಿ ಸ್ವಾರಸ್ಯಕರವಾಗಿದೆ.
ವಮ್ರೀಭಿಃ ಪುತ್ರಮಗ್ರುವೋ ಅದಾನಂ ನಿವೇಶನಾದ್ಧರಿವ ಆ ಜಭರ್ಥ |
ವ್ಯನ್ಧೋ ಅಖ್ಯದಹಿಮಾದದಾನೋ ನಿರ್ಭೂದುಖಚ್ಚಿತ್ಸಮರಂತ ಪರ್ವ ||
ಹರಿ ಎನ್ನುವ ಹೆಸರನ್ನು ಹೊಂದಿರುವ ಇಂದ್ರನೇ ವಮ್ರೀ ಎನ್ನುವ ಇರುವೆಗಳಿಂದ ಕಚ್ಚಿಸಿಕೊಳ್ಳುತ್ತಿದ್ದ ಅಗ್ರೂ ಎನ್ನುವವಳ ಮಗನನ್ನು ವಮ್ರಿ ಎನ್ನುವ ಇರುವೆಗಳ ಹುತ್ತದಿಂದ ಹೊರಕ್ಕೆ ಎತ್ತಿಕೊಂಡು ಬಂದೆ. ಈ ಅಗ್ರುವಿನ ಮಗ ಕುರುಡನಾಗಿದ್ದರೂ ಸಹ ಸರ್ಪಗಳಿರುವುದನ್ನು ಗುರುತಿಸಿದ. ಇರುವೆಗಳಿಂದ ಕಚ್ಚಿಸಿಕೊಂಡು ಸಣಕಲಾಗಿ ಛಿದ್ರವಾಗಿದ್ದ ಅವನ ದೇಹವು ಪುನಃ ಮೊದಲಿನಂತಾದುವು ಎನ್ನುವುದು ಈ ಋಕ್ಕಿನ ಭಾವಾರ್ಥ.
ಒಮ್ಮೆ ಅಗ್ರೂ ಎನ್ನುವವಳ ಮಗ ಕುರುಡನಾಗಿದ್ದ ಆತನ ಅಂಧತ್ವದಿಂದಾಗಿ ಒಮ್ಮೆ ಹುತ್ತ ಒಂದರಲ್ಲಿ ಬೀಳುತ್ತಾನೆ. ಹುತ್ತ ಆಳೆತ್ತರಕ್ಕೆ ಬೆಳೆದಿದೆ. ಹುತ್ತದೊಳಗಿನಿಂದ ಆರ್ತಧ್ವನಿ ಕೇಳಿ ಬರುತ್ತದೆ. ಆ ಆರ್ತಧ್ವನಿ ಇಂದ್ರನನ್ನು ಕುರಿತಾಗಿ ಮೊರೆಯಾಗಿತ್ತು. ಇಂದ್ರ ಆ ಆರ್ತನಾದ ಕೇಳಿ ಬಂದು ಆ ಅಗ್ರುವಿನ ಮಗನನ್ನು ಹೊರಕ್ಕೆ ತರುತ್ತಾನೆ. ಇಂದ್ರ ಹೊರಕ್ಕೆ ತರುವಾಗ ಆತನ ದೇಹವೆಲ್ಲಾ ಜರ್ಜ್ಜರಿತವಾಗಿತ್ತು. ಗೆದ್ದಲುಗಳು ಆತನ ದೇಹವನ್ನು ತಿಂದು ಕೃಶ ಮಾಡಿದ್ದವು. ಚರ್ಮಗಳು ಜೋತು ಬಿದ್ದಿದ್ದವು. ಇಂದ್ರನ ಸ್ಪರ್ಷಮಾತ್ರದಿಂದಲೇ ಆತ ಮೊದಲಿನಂತಾದ ಎಂದು ಹೇಳುವುದಲ್ಲದೇ ಅಂತಹವನಿಗೆ ಅಂಧತ್ವ ಇದ್ದರೂ ಸಹ ಆತ ಹುತ್ತದಲ್ಲಿ ಹಾವಿರುವುದನ್ನು ಗಮನಿಸಿದ್ದ ಎಂದು ಈ ಋಕ್ಕಿನ ಅಭಿಪ್ರಾಯ. ಇಲ್ಲಿ ಈ ಋಕ್ಕಿನಲ್ಲಿ ವಮ್ರೀಭಿಃ ಎನ್ನುವ ಶಬ್ದವಿದೆ. ವಮ್ರೀಭಿಃ ಎಂದರೆ ಹೆಣ್ಣಿರುವೆ ಎನ್ನುವ ಅರ್ಥ. ವಮ್ರಃ ಎನ್ನುವುದು ಗಂಡಿರುವೆಗಳಿಗೆ. 

ವೃದ್ಧಸ್ಯ ಚಿದ್ವರ್ಧತೋ ದ್ಯಾಮಿನಕ್ಷತಃ ಸ್ತವಾನೋ ವಮ್ರೋ ವಿಜಘಾನ ಸಂದಿಹಃ ||
ಇಲ್ಲಿ ಅಂದರೆ ಒಂದನೇ ಮಂಡಲದ ೫೧ನೇ ಸೂಕ್ತದ ೯ನೇ ಋಕ್ಕಿನಲ್ಲಿ ವಮ್ರೀ ವಿಜಘಾನ ಎನ್ನುವ ಪದ ಬಳಕೆ ಸಿಗುತ್ತದೆ. ಇಲ್ಲಿ ವಮ್ರನನ್ನು ದೇವತಾ ಸ್ತೋತ್ರವನ್ನು ಅನವರತವೂ ಉಚ್ಚರಿಸುತ್ತಿರುವ ಒಬ್ಬ ಋಷಿಯನ್ನಾಗಿ ಹೇಳಲಾಗಿದೆ. ಈತನು ಇಂದ್ರನನ್ನು ಅನೇಕ ವಿಧದಿಂದ ಸ್ತುತಿಸಿ ತನಗೆ ಎದುರಾಗಿದ್ದ ಪ್ರತಿಬಂಧಕಗಳನ್ನೆಲಾ ಪರಿಹರಿಸಿಕೊಂಡು ಈ ಭೂಮಿಯಲ್ಲಿರುವ ಎಲ್ಲಾ ಸಾರವನ್ನೂ ಇರುವೆಯ ಹುತ್ತಗಳೂ(ಗೆದ್ದಲು) ಒಳಗೊಂಡಿರುತ್ತವೆ ಎಂದು ಯಜ್ಞಕ್ಕೆ ಬೇಕಾಗುವ ಯಜ್ಞ ಸಾಮಗ್ರಿಯೊಂದನ್ನು ಹುತ್ತದಿಂದ ಸಂಪಾದಿಸಿಕೊಂಡನಂತೆ ಈ ಮುನಿ. ಪ್ರಾಯಶಃ ಇಂದಿಗೂ ಯಜ್ಞಕ್ಕೆ ಬೇಕಾಗುವ ಹೋಮಕುಂಡವನ್ನು ವಲ್ಮೀಕದ ಹುತ್ತದಿಂದ ಬೆರೆಸಿದ ಮಣ್ಣಿನಿಂದ ಮಾಡುತ್ತಾರೆ ಎಂದು ಕೇಳಿದ ನೆನಪು ನನಗೆ. ಪೃಥ್ವೀ ಸಾರವೇ ವಲ್ಮೀಕವಪೆ ಎನ್ನಲಾಗುತ್ತದೆ. ತೈತ್ತಿರೀಯ ಬ್ರಾಹ್ಮಣದಲ್ಲಿ "ಯದ್ವಲ್ಮೀಕವಪಾಸಂಭಾರೋ ಭವತಿ ಊರ್ಜಮೇವ ರಸಂ ಪೃಥಿವ್ಯಾ ಅವರುಂಧೇ" ತೈ.ಬ್ರಾ ೧:೧:೩೪. 

ಯದತ್ತ್ಯುಪಜಿಹ್ವಿಕಾ ಯದ್ವಮ್ರೋ ಅತಿ ಸರ್ಪತಿ |
ಸರ್ವಂ ತದಸ್ತು ತೇ ಘೃತಮ್ || ಇದು ಎಂಟನೇ ಮಂಡಲದ ೧೦೨ನೇ ಸೂಕ್ತದಲ್ಲಿ ಇದೆ. 
ಹೇ ಅಗ್ನಿಯೇ ಹೋಮಕ್ಕೆ ಹಾಕಲ್ಪಡುವ ಕಾಷ್ಠವೇ ಮೊದಲಾದವನ್ನು ಗೆದ್ದಲು ಮುಂತಾದ ಕ್ರಿಮಿಗಳು ತಿಂದಿವೆಯೋ, ವಮ್ರ ಎನ್ನುವ ಇರುವೆಗಳು ತಿಂದಿವೆಯೋ ಆ ಎಲ್ಲಾ ಕಟ್ಟಿಗೆಗಳೂ ನಿನಗೆ ತುಪ್ಪ(ಘೃತ)ದಂತೆ ಪ್ರಿಯಕರವಾಗಿರಲಿ ಎನ್ನುವುದು ಇಲ್ಲಿನ ಅರ್ಥ. ಇಲ್ಲಿ ಯಾಸ್ಕರು ಉಪಜಿಹ್ವಿಕಾ ಮತ್ತು ವಮ್ರೀಯನ್ನು ಗೆದ್ದಲು ಮತ್ತು ಇರುವೆಗಳನ್ನು ನಿರ್ದೇಶಿಸುವ ಪದ ಎಂದು ಹೇಳಿದ್ದಾರೆ. ಇಲ್ಲಿ ಮಹರ್ಷಿ ಯಾಸ್ಕರು ಇನ್ನೂ ವಿಸ್ತಾರವಾಗಿ ವಮ್ರೀ ಎನ್ನುವುದು ವಮನ ಎನ್ನುವ ಪದದಿಂದ ಬಂದದ್ದು ವಮನ ಎಂದರೆ ವಾಂತಿ ಮಾಡಿಕೊಳ್ಳುವುದು. ಇರುವೆಗಳು ನೀರನ್ನು ಹೀರಿ ಅವುಗಳನ್ನು ಮಣ್ಣಿನ ಮೇಲೆ ಕಾರಿ ಮಣ್ಣನ್ನು ಹಸಿಯಾಗಿಯೂ ಮೃದುವಾಗಿಯೂ ಮಾಡಿಕೊಳ್ಳುವುವು ಆದುದರಿಂದ ಗೆದ್ದಲು ಇರುವೆಗಳನ್ನು ವಮ್ರೀ ಎನ್ನುವುದಾಗಿ ಕರೆಯಲಾಗಿದೆ. ಇನ್ನು ಈ ಋಕ್ಕಿನಲ್ಲಿ ಬರುವ ಉಪಜಿಹ್ವಿಕಾ ಕೂಡಾ ಇರುವೆಗಳನ್ನು ನಿರ್ದೇಶಿಸುತ್ತದೆ. ಉಪಜಿಹ್ವಿಕಾ ಎನ್ನುವುದು ಉಪಜಿಘ್ರ್ಯಃ ಎನ್ನುವ ಪದದಿಂದ ಬಂದಿದ್ದು, ಇರುವೆಗಳ ಸ್ವಭಾವವನ್ನು ಹೇಳುತ್ತದೆ. ಇರುವೆಗಳು ಮೊದಲು ಮೂಸಿನೋಡಿ ಆ ಪದಾರ್ಥ ಹೇಗಿವೆ ಎನ್ನುವುದನ್ನು ಪರೀಕ್ಷಿಸಿ ಅವನ್ನು ತಿನ್ನುತ್ತವೆಯಂತೆ. ತಮಗೆ ತಿನ್ನಲು ಯಾವುದು ಯೋಗ್ಯವೋ ಅದನ್ನು ಮಾತ್ರವೇ ಆಯ್ದುಕೊಂಡು ತಿನ್ನುತ್ತವೆಯಂತೆ. ಅವುಗಳ ಆಘ್ರಾಣ ಶಕ್ತಿ ಅಷ್ಟು ತೀಕ್ಷ್ಣವಾಗಿರುತ್ತವೆಯಂತೆ ಆದುದರಿಂದಲೇ ಅವುಗಳನ್ನು ಉಪಜಿಹ್ವಿಕಾ ಎಂದು ಕರೆಯಲಾಗಿದೆ. ಇನ್ನು ಇರುವೆಗಳಿಗೆ ಸೀಮಿಕ ಎನ್ನುವ ಹೆಸರೂ ಇದೆ. "ಯದ್ವಮ್ರೋ ಅತಿ ಸರ್ಪತಿ" ಇರುವೆಗಳು ನಿಂತದ್ದು ನೋಡಿರುವುದು ಕಡಿಮೆ. ಇಲ್ಲವೇ ಇಲ್ಲ ಅನ್ನುವಷ್ಟೂ ತಿರುಗುತ್ತಾ ಇರುತ್ತವೆ. ಇವುಗಳ ಸ್ವಭಾವವೇ ಹಾಗೆ ನಿಂತಲ್ಲಿ ನಿಲ್ಲದೇ ಸಂಚರಿಸುತ್ತಾ ತಮ್ಮ ಆಹಾರಕ್ಕಾಗಿ ವಸ್ತುಗಳನ್ನು ಮೂಸಿ ನೋಡಿ ಆಯ್ದು ಕೊಳ್ಳುವುದರಿಂದ ಇಲ್ಲಿ ಅತಿ ಸರ್ಪತಿ ಎನ್ನುವ ಪದ ಬಳಕೆಯಾಗಿದೆ. ಸರ್ಪತಿ ಎನ್ನುವುದು ಸಂಚಾರಕ್ಕೆ. ಇರುವೆಗಳ ಕುರಿತಾಗಿ ಮತ್ತು ಅಗ್ರೂ ಕುರಿತಾಗಿ ವಾಜಸನೇಯ ಮತ್ತು ಶತಪಥ ಬ್ರಾಹ್ಮಣದಲ್ಲಿಯೂ ಬಂದಿದೆ. ಇನ್ನು ಅಥರ್ವ ವೇದದ ೨ನೇ ಕಾಂಡದ ೩ನೇ ಸೂಕ್ತದ ನಾಲ್ಕನೇ ಮಂತ್ರವನ್ನು ಗಮನಿಸಿದರೆ ಅಲ್ಲಿ

ಉಪಜೀಕಾ ಉದ್ಭರನ್ತಿ ಸಮುದ್ರಾದಧಿ ಭೇಷಜಮ್ |
ತದಾಸ್ರಾವಸ್ಯ ಭೇಷಜಂ ತದು ರೋಗಮಶೀಶಮತ್ ||
ಇರುವೆ ಒಂದು ವಿಧದ ಔಷಧವೆಂದು ಹೇಳಿದೆ. ಭೂಮಿಯ ತಳಭಾಗದ ನೀರಿನಿಂದ ಉಂಟಾಗುವ ರೋಗಗಳಿಗೆ ಈ ಇರುವೆಗಳು ಔಷಧ ರೂಪದಿಂದ ಮಣ್ಣನ್ನು ಪರಿವರ್ತಿಸಿ ನಮಗೆ ಯಾವುದೇ ವ್ಯಾಧಿ ಬಾಧಿಸದಂತೆ ನೋಡಿಕೊಳ್ಳುತ್ತವೆ ಎನ್ನಲಾಗಿದೆ.ಅಂದರೆ ಪ್ರಮುಖವಾಗಿ ಅತಿಸಾರದಂತಹ ರೋಗವನ್ನು ಗುಣಪಡಿಸುತ್ತವಂತೆ. ಇನ್ನು ಇದೇ ಅಥರ್ವವೇದದ ಆರನೇ ಕಾಂಡದ ನೂರನೇ ಸೂಕ್ತದಲ್ಲಿ ಯದ್ವೋ ದೇವಾ ಉಪಜೀಕಾ ಆಸಿಂಚನ್ ಧನ್ವನ್ಯುದಕಮ್ ಎಂದು ಸಿಗುತ್ತದೆ. ಹೇ ಮನುಷ್ಯನೇ ನೀನು ದೇವರನ್ನೇ ಅವಲಂಬಿಸಿರುವೆ ಈ ನೀರು ಖನಿಜಯುಕ್ತವಾದ ಮಣ್ಣಿನಿಂದ ಕೂಡಿರುವುದರಿಂದ ನಿನ್ನ ದೇಹಕ್ಕಾಗುವ ಬಳಲಿಕೆಯನ್ನು ಕಡಿಮೆ ಮಾಡಿ ಬಾಯಾರಿಕೆಯನ್ನು ನೀಗಿಸುತ್ತದೆ ಎನ್ನುವಲ್ಲಿ ನೀರಿನ ಜೊತೆಗಿರುವ ಮಣ್ಣನ್ನು ಕುರಿತಾಗಿ ಹೇಳಿರುವುದೇ ಉಪಜೀಕಾ ಎಂದು. ಪೈಪ್ಪಲಾದ ಸಂಹಿತೆಯಲ್ಲಿ ಉಪಚೀಕಾ ಎಂತಲೂ ತೈತ್ತಿರೀಯ ಬ್ರಾಹ್ಮಣ ಮತ್ತು ಸಂಹಿತೆಯಲ್ಲಿ ಉಪದೀಕಾ ಎಂದು ಇರುವೆಗಳನ್ನು ಕರೆಯಲಾಗಿದೆ. ಅದೇನೇ ಇರಲಿ ಇರುವೆಗಳ ಮಹತ್ವವನ್ನು ಸುಶ್ರುತ ಸಂಹಿತೆಯಲ್ಲಿ ೬ಕಡೆಗಳಲ್ಲಿ ಹೇಳಲಾಗಿದೆ,  ಚರಕ ಸಂಹಿತೆ ಯಲ್ಲಿ ಇದರ ಉಲ್ಲೇಖ ೪ಸಲವಿದೆ. ಅಷ್ಟಾಂಗಹೃದಯ ಸಂಹಿತೆಯಲ್ಲಿ ಒಮ್ಮೆ ಮತ್ತು ಕಾಮಸೂತ್ರದಲ್ಲಿ ಒಮ್ಮೆ, ಕೃಷ್ಣಾಮೃತಮಹಾರ್ಣವದಲ್ಲಿ ಒಮ್ಮೆ, ಸಾಂಖ್ಯಕಾರಿಕ ಭಾಷ್ಯ ಮತ್ತು ರಾಜನಿಘಂಟುವಿನಲ್ಲಿಯೂ ಉಪಜಿಹ್ವಿಕಾ ಎನ್ನುವ ಇರುವೆಯ ವಿಷಯ ಬಂದಿರುವುದಲ್ಲದೇ ಇನ್ನೂ ಅನೇಕ ಕಡೆ ಹೇಳಲಾಗಿದ್ದು ಇರುವೆ ಇಲ್ಲದ ಕಡೆ ಇಲ್ಲವೇನೋ. 

#ಉಪಜಿಹ್ವಿಕಾಎನ್ನುವ_ಇರುವೆ 
Sri Sadyoojatha 

No comments:

Post a Comment

If you have any doubts. please let me know...