September 6, 2021

ಗುರುಭಿರಭ್ಯಸ್ತ ನಾಮನ್ (ಗುರು)

ಜುನಾಗಡದ ಶಾಸನದ ಗುರುಭಿರಭ್ಯಸ್ತ ನಾಮನ್
 
ಮೊದಲಸಹಸ್ರಮಾನದ ಆರಂಭದ ಶತಮಾನಕ್ಕೆ ಸರಿಹೊಂದುವ ರುದ್ರದಾಮನ ಜುನಾಗಡ್ ಶಾಸನವನ್ನು ೨೦ ಸಾಲುಗಳಲ್ಲಿ ಖಂಡರಿಸಲಾಗಿದೆ. ಈ ಶಾಸನ ಕೆಲವೊಂದು ಮಹತ್ವದ ವಿಷಯಗಳಿಗೆ ಆಕರವಾಗಿದೆ. ರುದ್ರದಾಮ ಸಂಸ್ಕೃತ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದ ಎನ್ನುವುದು ಈ ಶಾಸನದಿಂದ ತಿಳಿದು ಬರುತ್ತದೆ. "ಶಬ್ದಾರ್ಥ ಗಾಂಧರ್ವ ನ್ಯಾಯಾದ್ಯಾನಾಂ ವಿದ್ಯಾನಾಂ ಮಹತೀನಾಂ ಪಾರಣ ಧಾರಣ" ನಾಗಿದ್ದನೆನ್ನುವುದಾಗಿ ಆತನ ಜುನಾಗಡ್ ಶಾಸನದಿಂದ ತಿಳಿದು ಬರುತ್ತದೆ.
ಈ ಜುನಾಗಡ್ ಶಾಸನದ ೪ನೇ ಸಾಲಿನ ಉತ್ತರಾರ್ಧದಲ್ಲಿ ಕಾಣಿಸಿಕೊಳ್ಳುವ "ಗುರುಭಿರಭ್ಯಸ್ತ ನಾಮನ್" ಎನ್ನುವ ಪದ ಮುಂದೆ ಅನೇಕ ಶಾಸನಗಳಲ್ಲಿ ಮತ್ತು ಸಾಹಿತ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಗೋಚರಿಸುತ್ತದೆ. ಈ ಪದದ ಅರ್ಥವನ್ನು ಅನೇಕ ವಿದ್ವಾಂಸರು ಅನೇಕ ವಿಧದಲ್ಲಿ ವಿವರಿಸಿದರೂ ಅದರ ಸರಿಯಾದ ಅರ್ಥ ಇನ್ನೂ ಸಿಗದಿರುವುದು ಸೋಜಿಗ. ಇದನ್ನು ರುದ್ರದಾಮನಿಗೆ ಸಿಕ್ಕಿದ ಬಿರುದು ಎಂದು ಕೆಲವರು ಭಾವಿಸಿದರೆ ಇನ್ನು ಕೆಲವರು ಇದೊಂದು ರುದ್ರದಾಮನ ಹೆಸರಿನ ವಿಶೇಷಣ ಎಂದಿರುವರು. ತಾನು ಕಲಿತು ಬಂದ ಅಥವಾ ತನ್ನ ಗುರು ಅಥವಾ ಮಾರ್ಗದರ್ಶಕರ ನೆನಪನ್ನು ಸದಾ ಸ್ಮರಿಸುವವ ಎನ್ನುವ ಅರ್ಥವನ್ನೂ ಈ ಪದ ಧ್ವನಿಸುತ್ತದೆ. ಗೌರವಾನ್ವಿತವಾದ ಪದದ ಗುಚ್ಚ ಎಂದು ಸಾಮಾನ್ಯಗೊಳಿಸಿದ ಎಲ್ಲಾ ಪಂಡಿತರುಗಳೂ ಹಾಗೆಯೇ ನಿಲ್ಲಿಸಿ ಬಿಟ್ಟರು. ರುದ್ರದಾಮನು ಧಾರ್ಮಿಕ ನಡೆಯ ವ್ಯಕ್ತಿ. ಸ್ವಾಧ್ಯಾಯ ಪ್ರವಚನಾದಿಗಳು ಅವನ ಆಸ್ಥಾನದಲ್ಲಿ ನಿತ್ಯದ ಕಾರ್ಯಕ್ರಮವಾಗಿತ್ತು ಅಂತವನು ತನ್ನ ಗುರುವಿನಿಂದ ನಿರ್ದೇಶಿಸಲ್ಪಟ್ಟದ್ದನ್ನು ಮೀರದೇ ನಡೆಯುತ್ತಿದ್ದನಾದುದರಿಂದ ಅವನಿಗೆ ಈ ಹೆಸರು ಬಿರುದಾಗಿ ಬಂದಿದೆ.

ಗುರುಗಳಿಂದ ವೇದಾಧ್ಯಯನ ಕಲಿತು ಅದನ್ನೇ ಜೀವನವನ್ನಾಗಿಸುತ್ತಾ ಅದೇ ರೀತಿ ನಡೆದುಕೊಳ್ಳುತ್ತಾ ಇರುವುದು.
"ಗುರುಭಿರಭ್ಯಸ್ತನಾಮನ್" ಎನ್ನುವುದು. ಒಂದೊಮ್ಮೆ "ಸುಗ್ರಹೀತ ನಾಮನ್" ಎಂದಾಗಿದ್ದರೆ ಅಂತಹ ದೊಡ್ಡ ಗೌರವ ಸೂಚಕ ಪದವೆನ್ನಿಸುತ್ತಿರಲಿಲ್ಲ.
ಗುರುಭಿರಭ್ಯಸ್ತ ನಾಮನ್ ಎನ್ನುವುದನ್ನು ವ್ಯಾಕರಣದ ದೃಷ್ಟಿಯಿಂದ ಗಮನಿಸುವುದಾದರೆ; "ಗುರುಭಿರ್ - ಅಭ್ಯಸ್ಥ -ನಾಮನ್" ಇದನ್ನು ಇನ್ನು ಹೆಚ್ಚು ತಾರ್ಕಿಕ ದೃಷ್ಟಿಯಿಂದ ಗಮನಿಸಿದರೆ ಗುರವಭ್ಯಸ್ಥನಾಮನ್ ಆಗಬೇಕು. ಗಮಕತ್ವಾತ್ ಸಮಾಸಃ ಎನ್ನುವುದರಿಂದ ಸಾಪೇಕ್ಷಮ್ ಅಸಮರ್ಥಂ ಭವತಿ. ಎಂದಾಗುತ್ತದೆ. ಆದುದರಿಂದ ವಿದ್ವಾಂಸರುಗಳ ಹೇಳಿಕೆಯಂತೆ ಗುರುಭಿರಭ್ಯಸ್ಥ ನಾಮನ್ ಎನ್ನುವುದು.

೧. ಸಾಮಾನ್ಯವಾದ ಸುಗೃಹೀತ ನಾಮನ್ ಎನ್ನುವುದಕ್ಕಿಂತ ಹೆಚ್ಚು ಗೌರವವನ್ನು ಸೂಚಿಸುವ ಪದಗಳಲ್ಲಿ ಗುರುಭಿರಭ್ಯಸ್ಥನಾಮನ್ ಪ್ರಮುಖವಾದದ್ದು.

೨. ಈ ಪದದ ಅರ್ಥವನ್ನು ಅಕ್ಷರಶಃ ಗಮನಿಸಿದಾಗ ಅಂದರೆ ವಾಚ್ಯಾರ್ಥವನ್ನು ಗಮನಿಸಿದಾಗ "ಯಾರು (ನಾಮನ್) ಅವರ ಹೆಸರನ್ನು ಹೇಳುತ್ತಾ (ಅಭ್ಯಸ್ಥ) ಯಾರಿಂದ ಅಭ್ಯಾಸ ಮಾಡಿದರೋ (ಗುರುಭಿರ್) ಗುರುಗಳಿಂದ. ಎಂದಾಗುತ್ತದೆ. ಅಂದರೆ ಇಲ್ಲಿ ರುದ್ರಧಾಮನು ಯಾವ ಗುರುಗಳಿಂದ ಅಭ್ಯಾಸ ಮಾಡಿದನೋ ಆ ಗುರು.

೩. ಇನ್ನು ಲಕ್ಷ್ಯಾರ್ಥವನ್ನು ಗಮನಿಸಿದರೆ ರುದ್ರದಾಮನು, ವೇದನಿಷ್ಠನಾಗಿದ್ದು, ದೊಡ್ದ ವೇದಾಂತಿಯಾಗಿದ್ದನು. ಫಲಭರಿತ ಹಣ್ಣನ್ನು ಹೇಗೆ ಮರಗಳು ಕೊಡುತ್ತವೋ ಅದೇರೀತಿ ಉತ್ತಮವಾದ ವೇದನಿಷ್ಟವಾದ ಆಡಳಿತವನ್ನು ಕೊಡುತ್ತಿದ್ದ.

೪. ಗುರುಭಿರಭ್ಯಸ್ಥ ನಾಮನ್ ಎನ್ನುವುದು ವ್ಯಾಕರಣದ ಪ್ರಕಾರ ತಪ್ಪು. ಸಮಾಸದ ನಿಯಮವನ್ನು ಮೀರುತ್ತದೆ. ಸಮಾಸವನ್ನು ಪರಿಗಣಿಸಿದರೆ ಗುರ್ವಭ್ಯಸ್ಥ ನಾಮನ್ ಆಗಬೇಕಾಗುತ್ತದೆ.

ಪುನಃ ಇನ್ನೊಮ್ಮೆ ಇದನ್ನು ಗಮನಿಸುವುದಾದರೆ ವ್ಯಾಕರಣಾಂಶವನ್ನು ಬದಿಗಿಟ್ಟು ಸುಗೃಹೀತ ನಾಮನ್ ಎನ್ನುವುದನ್ನೇ ಬರೆದಿದ್ದರೆ, ಅದು ರುದ್ರದಾಮನ ಕೀರ್ತಿಗೆ ಅಂತಹ ದೊಡ್ಡ ಬಿರುದಾಗಿರುತ್ತಿರಲಿಲ್ಲ. ಇಲ್ಲಿ ಗುರು ಎನ್ನುವ ಶಬ್ದವನ್ನು ದೇವರಿಗೆ ಸಮಾನವಾದ ಅರ್ಥದಲ್ಲಿ ಬಳಸಿದ್ದು. ವೇದವನ್ನು ಗಮನದಲ್ಲಿರಿಸಿಕೊಂಡು ಈ ಶಬ್ದವನ್ನು ಈ ಶಾಸನದಲ್ಲಿ ಬಳಸಿಕೊಳ್ಳಲಾಗಿದೆ.

ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಗಮನಿಸಿದರೆ ಅಲ್ಲಿಯೂ ಸುರರು(ದೇವತೆಗಳೂ) ಮತ್ತು ಅಸುರರರು(ರಾಕ್ಷಸರು) ಇಬ್ಬರಿಗೂ ಗುರು ಇರುತ್ತಿದ್ದರು. ಗುರು ಎನ್ನುವುದು ದೇವತಾ ಸ್ವರೂಪ ಅಥವಾ ವೇದಮಾತಾ ಎನ್ನುವ ಭಾವನೆ ಇತ್ತು. ವಿಷ್ಣುವಿನ ಅಂಶದಿಂದ ಅವತಾರ ಹೊಂದಿದ ರಾಮ ಮತ್ತು ಕೃಷ್ಣ ಇಬ್ಬರಿಗೂ ಗುರುವಿನ ಮಾರ್ಗದರ್ಶನವಿತ್ತು ಎಂದು ಪುರಾಣಗಳಿಂದ ತಿಳಿದು ಬರುತ್ತದೆ.
ಅಮರ ಸಿಂಹನ ಅಮರಕೋಶದಲ್ಲಿ "ಉಪಾಧ್ಯಾಯೋಧ್ಯಾಪಕೋಥ ಸ ನಿಷೇಕಾದಿಕೃದ್ ಗುರುಃ" ಎಂದು ಹೇಳಿದ್ದಾನೆ.
ನಿಷೇಕೋ ಗರ್ಭದಾನಾಧಿ ಯಸ್ಯ ತಸ್ಯ ಕರ್ತಾ" ಎನ್ನುವುದಾಗಿ ಹೇಳಲಾಗಿದೆ ಅಂದರೆ ಗ್ರೀಣಾತಿ ಧರ್ಮಾದಿ ಇತಿ ಗುರುಃ ಅಂದರೆ ಇಲ್ಲಿ ಧರ್ಮವನ್ನು ಎತ್ತಿ ಹಿಡಿಯುವವನೇ ಗುರು. ಮತ್ತು "ಗಿರತಿ ಅಜ್ಞಾನಮ್" ಎನ್ನುತ್ತದೆ. ಅಂದರೆ ಅಜ್ಞಾನವನ್ನು ಹೊಡೆದೋಡಿಸುವವನೇ ಗುರು. ಇಲ್ಲಿ ಬೇರೆ ಬೇರೆ ಅರ್ಥವನ್ನು ಗ್ರಹಿಸಿದರೆ "ಸಂಸ್ಕಾರಾದಿ ಕರ್ತೋಃ ಗುರುಃ " ಎನ್ನುತ್ತದೆ. ಅಂದರೆ ಸಂಸ್ಕಾರಾದಿಗಳನ್ನು ಮಾಡಿಸುವವನೇ ಗುರು.
ಅಧ್ಯಾಪಕ, ಉಪಾಧ್ಯಾಯ, ಮತ್ತು ಎಲ್ಲಾ ವಿಧದ ಕಾರ್ಯಗಳಿಗೆ ಮಾರ್ಗದರ್ಶನ ಕೊಡುವವನು ಮತ್ತು ಸಂಸ್ಕಾರಗಳಲ್ಲಿ ಸಲಹೆ ಸೂಚನೆಯೊಂದಿಗೆ ಧರ್ಮವನ್ನು ಸೂಚಿಸುವ ಮಹತ್ತರ ಕೆಲಸ ಮಾಡುವವನೆ ಗುರು.

ನಿಷೇಕಾಧೀನಿ ಕರ್ಮಾಣಿ ಯ ಕರೋತಿ ಯಥಾ ವಿಧಿಃ
ಸಂಭಾವಯತಿಚಾನೇನ ಸ ವಿಪ್ರೋ ಗುರುರುಚ್ಯತೇ || ಎನ್ನುವುದಾಗಿ ಅಮರ ಕೋಶ ಮತ್ತು ಮನುಸ್ಮೃತಿಯಲ್ಲಿ ಹೇಳಲ್ಪಟ್ಟಿದೆ. ಇಲ್ಲಿ ನಿಷೇಕ ಮತ್ತು ಗರ್ಭಾದಾನಾದಿಗಳು ಸಂಸ್ಕಾರವಾಗಿರುವುದರಿಂದ ಅವು ಗುರು ಮುಖೇನ ಮಾಡಬೇಕಾದದ್ದು ಎನ್ನುತ್ತದೆ.
ಮನುವಿನ ಅನಿಸಿಕೆಯಂತೆ : "ಉಪಾಧ್ಯಾಯಾನ್ ದಶಾಚಾರ್ಯ ಆಚಾರ್ಯಾಣಂ ಶತಂ ಪಿತಾ" ಎನ್ನುತ್ತಾನೆ.

ವ್ಯಾಸರು ಹೇಳುವಂತೆ :
ಪ್ರಭುಃ ಶರೀರ ಪ್ರಭಾವಃ ಪ್ರಿಯಕೃದ್ ಪ್ರಾಣದೋ ಗುರುಃ |
ಹಿತಾನಾಂ ಉಪದೇಷ್ಟಾ ಚ ಪ್ರತ್ಯಕ್ಷಂ ದೈವತಂ ಪಿತಾ ||
ಎಂದು ಗುರು ತನ್ನ ಸಂಪೂರ್ಣ ಪ್ರಭಾವವನ್ನು ಶಿಷ್ಯನ ಮೇಲೆ ಹಾಕುತ್ತಾನೆ. ಹಿತವಾದದದ್ದನ್ನು ಉಪದೇಶಿಸುತ್ತಾನೆ ಅಂತಹ ಗುರು ದೇವ ಸಮಾನ ಎನ್ನುತ್ತಾನೆ.

ಕಾಳಿದಾಸ ತನ್ನ ರಘುವಂಶದಲ್ಲಿ
ನ ಕೇವಲಂ ತದ್ ಗುರುರೇಕ ಪಾರ್ಥಿವಃ | ಕ್ಷಿತವಭೂದೇಕ ಧನುರ್ದ್ಧರೋಪಿ ಸಃ || ಎನ್ನುತ್ತಾನೆ. ಹೀಗೇ ಧರ್ಮವನ್ನು ಬಿಟ್ಟು ಗುರುವನ್ನು ಬಿಟ್ಟು ಮಾನವ ತನ್ನ ಯಾವ ಉನ್ನತಿಯನ್ನು ಮೊದಲೆಲ್ಲ ಸಾಧಿಸಿಕೊಳ್ಳಲು ಆಗುತ್ತಿರಲಿಲ್ಲ. ಧರ್ಮವನ್ನು ಬಿಟ್ಟು ರಾಜಕಾರಣವೂ ಅಂತಹ ಸುಲಭದ್ದಲ್ಲ. ಆದರೆ ಧರ್ಮದ ಅರ್ಥೈಸುವಿಕೆಯಲ್ಲಿ ಎಡವಿದ ನಾವು ರಾಜಕಾರಣದಲ್ಲಿ ಧರ್ಮ ಬೆರೆಸಬೇಡಿ ಎಂದು ಉದ್ದುದ್ದ ಗಂಟಲು ಹರಿಯುವಂತೆ ಭೀಷಣವಾದ ಭಾಷಣ ಬಿಗಿಯುತ್ತೇವೆ. ಗುರುಭಿರಭ್ಯಸ್ಥನಾಮನ್ ಎನ್ನುವ ಒಂದು ವಾಕ್ಯವೇ ಇದಕ್ಕೆಲ್ಲ ಉತ್ತರ ಕೊಡಬಲ್ಲದು.

ಕರ್ನಾಟಕದ ಶಾಸನಗಳ ಕಡೆಗೆ ಬಂದರೆ ಕದಂಬರ ಶಾಸನಗಳಲ್ಲಿ ಮೊತ್ತ ಮೊದಲಿಗೆ ಗುರುವನ್ನು ನೆನೆಯಲಾಗಿದೆ. ರವಿವರ್ಮನ ಗುಡ್ನಾಪುರ ಶಾಸನದಲ್ಲಂತೂ ತನ್ನ ಅಜ್ಜ ವೀರ ಶರ್ಮನೇ ತನ್ನ ಗುರು ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಆತನ ಕುರಿತಾಗಿ ಧ್ಯಾನಿಸುತ್ತಾನೆ. ಹೀಗೆ ಗುರುವಿನ ಅನುಕರಣೆ ಅನುಸರಣೆ ಹಿಂದೆಲ್ಲ ಮಹತ್ವ ಪಡೆದಿತ್ತು ಆದರೆ ಇಂದು ಗುರು ವೆನ್ನಿಸಿಕೊಂಡವ ಧರ್ಮದಂತೆ ನಡೆದಾಗ ಖಂಡಿತಾ ಅನುಕರಣೀಯ ಅನುಸರಣೀಯನೇ.

#ರುದ್ರದಾಮನ_ಭಕ್ತಿ 
Sadyojatha

No comments:

Post a Comment

If you have any doubts. please let me know...