ಶಿವಸಂಸ್ಕೃತಿಯ - ವೀರ ಶೈವದ ಮೂಲಪುರುಷ ಶ್ರೀ ವೀರಭದ್ರ ಹಾಗೂ 12 ನೇ ಶತಮಾನದಲ್ಲಿನ ಶಿವಶರಣ ರು ಕಂಡ ಶ್ರೀ ವೀರಭದ್ರ
(ಅ). ಶಿವಸಂಸ್ಕೃತಿಯ ವೀರಶೈವದ ಮೂಲಪುರುಷ ಶ್ರೀ ವೀರಭದ್ರ :
ಮೂಲತಃ ವೀರಭದ್ರನು ಶಿವಸಂಸ್ಕೃತಿಯ ಮೂಲ ಪುರುಷ. ಅಂತೆಯೇ ಶಿವನ ಪೂಜಕರೆಲ್ಲರಿಗೂ ಆರಾಧ್ಯ ದೈವ. ಹಾಗೆಯೆ ವೀರಭದ್ರನು ವೀರಶೈವನು. ವೀರಶೈವನೆಂದರೆ ಲಿಂಗಾಯತ. ಲಿಂಗವನ್ನು ಶರೀರದಮೇಲೆ ಧರಿಸಿದವನೇ ವೀರಶೈವ ಲಿಂಗಾಯತ ಆಗಿರುತ್ತಾನೆ. -
ವೀರಭದ್ರನು ಶಿವಸಂಸ್ಕೃತಿಯ ಮೊಟ್ಟಮೊದಲ ಹರಿಕಾರನು, ಮೊಟ್ಟಮೊದಲ ಕ್ರಾಂತಿಕಾರನು, ಮೊಟ್ಟಮೊದಲ ವೀರಶೈವನೆನಿಸಿದ್ದಾನೆ. ಶಿವನ ಅವತಾರವೇ ಆದ ವೀರಭದ್ರ ಶಿವನಂತೆಯೇ ಉಗ್ರನೂ ಶಾಂತನೂ ಸೃಷ್ಟಿಯ ಸಕಲ ಚರಾಚರ ವಸ್ತುಗಳ ಶಕ್ತಿಯೂ ಆಗಿದ್ದಾನೆ. ಅಂತೆಯೇ ವೀರಭದ್ರನು ಶಿವನಲ್ಲದೇ ಬೇರಾರೂ ಅಲ್ಲ. ಆದ್ದರಿಂದ ಶಿವ ಮತ್ತು ವೀರಭದ್ರರನ್ನು ವೀರಶೈವರು ಬೇರೆ ಬೇರೆ ಎಂದು ಭಾವಿಸಿದಂತಿಲ್ಲ. ಶಿವನನ್ನು ಲಿಂಗರೂಪದಲ್ಲಿ ಆರಾಧಿಸುವ ಪದ್ಧತಿ ಬಹು ಪ್ರಾಚೀನ ಕಾಲದಿಂದ ನಡೆದು ಕೊಂಡು ಬಂದಿರುತ್ತದೆ. ಲಿಂಗವನ್ನು ಸ್ಥಾವರ ಮತ್ತು ಇಷ್ಟ ಎಂಬ ಎರಡು ಬಗೆಯಲ್ಲಿ ಕ್ರಿಸ್ತ ಪೂರ್ವಕಾಲದಿಂದಲೂ ಪೂಜಿಸುತ್ತ ಬಂದ ಅನೇಕ ಉದಾಹರಣೆಗಳು ದೊರೆಯು ತ್ತವೆ. ಮೊದಮೊದಲು ಲಿಂಗ ರೂಪದಲ್ಲಿ ಪೂಜೆಗೊಳ್ಳುತ್ತಿದ್ದ ವೀರಭದ್ರನನ್ನು ದೇವಾಲಯ ಗಳಲ್ಲಿ ಮೂರ್ತಿ ರೂಪದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸು ವ ಪದ್ಧತಿಯು ಆರಂಭಗೊಂ ಡಿರಬಹುದಾಗಿರುತ್ತದೆ. ಅಂತೆಯೇ ಈಶ್ವರಲಿಂಗದ ಜೊತೆಗೆ ವೀರಭದ್ರನ ಮೂರ್ತಿ ಅಥವಾ ಈಶ್ವರ ದೇವಾಲಯದ ಆವರಣದಲ್ಲಿ ವೀರಭದ್ರನ ಗುಡಿ, ಅಥವಾ ವೀರಭದ್ರನ ಮೂರ್ತಿಯ ಜೊತೆಗೆ ಈಶ್ವರ ಲಿಂಗ ಹೀಗೆ ಶಿವ ಮತ್ತು ಶಿವಸಂಭೂತ ವೀರಭದ್ರನನ್ನು ಜೊತೆ ಜೊತೆಗೆ ಪೂಜಿಸುವ ವಾಡಿಕೆ ಬೆಳೆಯಿತು. ಪ್ರತ್ಯೇಕ ದೇವಾಲಯಗಳನ್ನು ಕಟ್ಟಿಸಿ ವೀರಭದ್ರನನ್ನು ಪೂಜಿಸುವಿಕೆ ಯೂ ಆರಂಭವಾಗಿ ವೀರಭದ್ರ ಪರಂಪರೆಯೊಂದು ವಿಶಿಷ್ಟ ರೀ ತಿಯಲ್ಲಿ ಬೆಳೆದು ಬಂದಿರುತ್ತದೆ. ಸ್ಕಂದ ಪುರಾಣದಲ್ಲಿ ಜಡೆಯ ಲ್ಲಿ ( ಶಿರದಲ್ಲಿ ) ಲಿಂಗವನ್ನು ಧರಿಸಿದವ ವೀರಭದ್ರ ಎಂದು ಹೇಳಿದೆ. ಹರಪ್ಪ ಮೊಹೆಂಜೋ ದಾರೋದಲ್ಲಿ ಸಿಕ್ಕ ಶಿಲ್ಪದಲ್ಲಿ ಪಶುಪತಿಯ ಪ್ರತಿಮೆ ಇದ್ದು ಅದರ ತಲೆಯಲ್ಲಿ ಲಿಂಗವಿದೆ. ರಾಘವಾಂಕನು ವೀರಭದ್ರನನ್ನು ‘ನಿಡುಜಡೆ ಮುಡಿ ನಡುನೆತ್ತಿಯ ಲಿಂಗಂ’ ಎಂದು ವರ್ಣಿಸಿದ್ದಾನೆ. ಸ್ಕಂದ ಪುರಾಣದಲ್ಲಿ ‘ಲಿಂಗಾಂಕಿತ ಜಟಾಧರಂ’ ಎಂದು ವರ್ಣಿಸಿದೆ. ಪಶುಪತಿ ಎಂದರೆ ಶಿವ, ರುದ್ರ. ಶಿವನ ಮಾನಸಪುತ್ರ ರುದ್ರನ ಪುತ್ರನಾದ ವೀರಭದ್ರನೂ ಸಿಂಧೂ ಸಂಸ್ಕೃತಿಯ ದ್ರಾವಿಡಜನಾಂಗದ ಶ್ರೇಷ್ಠ ಪುರುಷ. ವೀರಭದ್ರನ ಪರಂಪರೆ ಸಂಪ್ರದಾಯಗಳು ಬಹು ಪ್ರಾಚೀನ ಕಾಲದಿಂದಲೇ ನಡೆದುಕೊಂಡುಬಂದಿರುವುದು ಈ ದೇಶದಲ್ಲಿ ಅಷ್ಟೇ ಅಲ್ಲ ನೇಪಾಳ ಮುಂತಾದ ನೆರೆಯ ರಾಷ್ಟ್ರಗಳಲ್ಲಿಯೂ ಇದೆ. ವೀರಶೈವ ಪಂಚಪೀಠಗಳು ಪ್ರಾಚೀನ ವೀರಭದ್ರ ಸಂಸ್ಕೃತಿ ಯನ್ನು ಅಳವಡಿಸಿಕೊಂಡು ಇಂದಿಗೂ ಪಾಲಿಸಿಕೊಂಡು ಬಂದಿವೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಗೋತ್ರ ಪುರುಷ ವೀರಭದ್ರನಾಗಿದ್ದಾನೆ. ಅಲ್ಲಿ ವೀರಭದ್ರನ ಪೂಜೆಯಿ ಲ್ಲದೆ ಯಾವ ವಿಶಿಷ್ಟ ಕಾರ್ಯ ಕ್ರಮಗಳೂ ಜರುಗುವುದಿಲ್ಲ. ರಂಭಾಪುರಿ ಪೀಠದ ಗೋತ್ರ ಪುರುಷ ವೀರಭದ್ರನಾಗಿದ್ದಾನೆ. ಕೇದಾರ ಪೀಠದ ಜಗದ್ಗುರುಗಳು ಪೀಠಾರೋಹಣ ಮಾಡುವಾಗ ವೀರಭದ್ರನ ಪೂಜೆ ಮಾಡಿಯೇ ಮುಂದಿನ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ವೀರಭದ್ರನನ್ನು ಮನೆ ದೇವರೆಂದು ಅಸಂಖ್ಯಾತ ಭಕ್ತರು ಪೂಜಿಸುತ್ತಾರೆ. ಆದ್ದರಿಂದ ಮನೆಮನೆಗಳಲ್ಲಿಯೂ ಕೂಡ ಯಾವುದೇ ಶುಭಕಾರ್ಯವಿದ್ದರೂ ವೀರಭದ್ರನ ಪೂಜೆ ಆಗಲೇ ಬೇಕು. ಮದುವೆ ಮುನ್ನಾದಿನ ಗುಗ್ಗಳ ಪೂಜೆಯನ್ನು ಅತ್ಯಂತ ಕಟ್ಟು ನಿಟ್ಟಾಗಿ ಸಾಂಪ್ರದಾಯಿಕವಾಗಿ ಇಂದಿಗೂ ತಪ್ಪದೇ ಆಚರಿಸುತ್ತಾರೆ. ಇವೆಲ್ಲವೂ ವೀರಭದ್ರನ ಸಂಸ್ಕೃತಿ ಆಚರಣೆಗಳು ಅನೂಚಾನವಾಗಿ ನಡೆದುಕೊಂಡು ಬಂದುದಕ್ಕೆ ಸಾಕ್ಷಿಯಾಗಿವೆ.
ವೀರಭದ್ರನ ಉಲ್ಲೇಖ ಕ್ರಿ.ಶ. ನಾಲ್ಕನೆಯ ಶತಮಾನದಷ್ಟು ಹಳೆಯ ಕಾಲದಲ್ಲಿ ಮುಳಬಾಗಿಲು ಮುಡಿಯನೂರು ತಾಮ್ರ ಶಾಸನದಲ್ಲಿ ಸಿಗುತ್ತದೆ. ವೀರಶೈವ ಗಣಂಗಳನ್ನು ಮಂಡ್ಯಜಿಲ್ಲಯ ಮರಡೀಪುರ ಶಾಸನ ( ಕ್ರಿ.ಶ. 1280 ) ಹೆಸರಿಸಿದ್ದು ಅದರಲ್ಲಿ ಪ್ರಾಚೀನ ಕಾಲದ ಬಾಳಾಕ್ಷರ, ಅಕ್ಷರೇಶ್ವರ, ನಂದೀನಾಥ, ನಂದಿ, ಮಹಾಕಾಳ, ಬೃಂಗಿನಾಥ, ಮುಂತಾದ ಗಣಂಗಳ ಸ್ಥಾನದಲ್ಲಿ ವೀರಭದ್ರನನ್ನು ಹೆಸರಿಸಿದ್ದು ವಿಶೇಷವಾಗಿದೆ. ಇದರಿಂದ ವೀರಭದ್ರ ಐತಿಹಾಸಿಕ ವೀರಪುರುಷ ಅಷ್ಟೇ ಅಲ್ಲ, ಅವನು ಗಣಾಚಾರಿ, ವೀರಮಾಹೇಶ್ವರ ಎಂದು ತಿಳಿದುಬರುತ್ತದೆ.
ವೀರಭದ್ರನ ದಕ್ಷ ಸಂಹಾರ ಪ್ರಸಂಗ ವೀರಭದ್ರನ ಅನೇಕ ಗುಣಗಳನ್ನು ವ್ಯಕ್ತಪಡಿಸುತ್ತದೆ. ತಂದೆ ಮತ್ತು ಹಿರಿಯರ ಆಜ್ಞಾಪಾಲಕನಾಗಿ, ದುಷ್ಟರನ್ನು ತಕ್ಕರೀತಿಯಲ್ಲಿ ದಂಡಿಸಿದ ವೀರನಾಗಿ, ಯುದ್ಧವೀರನಾಗಿ ಜನಾಂಗ ಸಾಮರಸ್ಯಕ್ಕಾಗಿ ಶ್ರಮಿಸಿದ ತಂದೆ ರುದ್ರನ ಕಾರ್ಯವನ್ನು ವಿಫಲ ಮಾಡುತ್ತಿ ರುವ ಗರ್ವಿಷ್ಠರನ್ನು ಶಿಕ್ಷಿಸಿ ಪಾಠ ಕಲಿಸಿದವನಾಗಿ, ಯಜ್ಞ ಸಂಸ್ಕೃತಿಯ ವಿನಾಶಕನಾಗಿ, ದಕ್ಷನ ಪತ್ನಿಯ ಮೊರೆಗೆ ಕರುಣೆತೋರಿದ ಕರುಣಾ ಮೂರ್ತಿಯಾಗಿ, ಶೌರ್ಯ ಮತ್ತು ಶುಭಮಂಗಲಗಳ ಸಾಕಾರಮೂರ್ತಿಯಾಗಿ ಕಂಗೊಳಿಸಿದ್ದಾನೆ. ವೀರ ಮತ್ತು ಭದ್ರ ಎಂಬ ಹೆಸರಿನಲ್ಲಿಯೇ ಈ ಅರ್ಥವಂತಿಕೆ ಅಡಗಿರುವುದನ್ನು ಕಾಣಬಹುದು. ಅನ್ಯಾಯವನ್ನು ಎಂದಿಗೂ ಸಹಿಸಿಕೊಳ್ಳದೆ ಅದನ್ನು ಪ್ರತಿಭಟಿಸಿ “ವೀರ’ತನವನ್ನು ಮೆರೆಯಬೇಕೆಂಬುದು, ಜೊತೆಗೆ “ವೀರ’’ ಗುಣವನ್ನು ಮಂಗಲ’ಕ್ಕಾಗಿ , “ಭದ್ರ”ತೆಗಾಗಿ ಉಪಯೋಗಿಸುವುದೇ “ವೀರ”ತ್ವದ ಸರಿಯಾದ ಲಕ್ಷಣ ಎಂಬುದನ್ನೂ “ವೀರಭದ್ರ” ಎಂಬ ಪದ ಸಾರುತ್ತದೆ.
ಪ್ರಾಗೈತಿಹಾಸಿಕ ವೀರಭದ್ರನನ್ನು ಅವನ ವೈಶಿಷ್ಟ್ಯವನ್ನು ಕಣ್ಣ ಮುಂದೆ ಕಟ್ಟುವಂತೆ ಅಕ್ಷರಲೋಕ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹಿಡಿದಿಟ್ಟಿದ್ದರೆ, ಚಿತ್ರ ಪ್ರಪಂಚ ವೈವಿಧ್ಯಮಯವಾದ ಚಿತ್ರವಿಚಿತ್ರವಾಗಿ ಚಿತ್ರಿಸಿದೆ. ಜನಪದರು ತಮ್ಮ ಸಹಜವಾದ ಹಾಡು, ಒಡಪು, ಬಯಲಾಟ, ಮಾಧ್ಯಮಗಳಲ್ಲಿ ಅಷ್ಟೇ ಅಲ್ಲ ನಿತ್ಯಾಚರಣೆಗಳಲ್ಲಿಯೂ ವೀರಭದ್ರ ಸಂಸ್ಕøತಿಯನ್ನು ಜೀವಂತವಾಗಿ ಇಟ್ಟಿದ್ದಾರೆ. ಕಲಾವಿದರು, ಶಿಲ್ಪಿಗಳು, ಶಾಸನರಚಕರು ವೀರಭದ್ರನನ್ನು ತಮ್ಮದೇ ಆದ ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿ ವೀರಭದ್ರನನ್ನು ಕಂಡರಿಸಿದ್ದಾರೆ. ಇದರಿಂದ ವೀರಭದ್ರನು ಬರೀ ಮೂರ್ತಿಯೆಂದು ಸ್ಥಾವರವೆಂದು ಪೂಜೆಗೊಳ್ಳುವುದಿಲ್ಲ ಜನಮನದ ನಿತ್ಯಬದುಕಿನ ಶಕ್ತಿದೇವನಾಗಿ ಜಂಗಮಸ್ವರೂಪನಾಗಿದ್ದಾನೆ. ಬುಡುಗ-ಬೇಡ ಜಂಗಮರೆಂಬ ಆಂಧ್ರದ ವೀರಶೈವರು ಶ್ರೀ ವೀರಭದ್ರಸ್ವಾಮಿಯ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ವಿಶೇಷವಾಗಿದೆ. ಇವರು ಜಂಗಂ ಕಥೆಯನ್ನು ಹೇಳುತ್ತಾರೆ. ಶ್ರೀ ವೀರಭದ್ರ ಸಂಪ್ರದಾಯದಲ್ಲಿ ಅಗ್ನಿಕುಂಡ ಮಾಡಿ ಅಗ್ನಿಯನ್ನು ತುಳಿಯುವ ದಕ್ಷಯಜ್ಞ ನಾಶದ ಆಚರಣೆಯನ್ನು ಬುಡುಗ, ಬೇಡಜಂಗಮರು ಈಗಲೂ ಆಂಧ್ರದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಅವರು ದೊಡ್ಡದಾದ ಖಡ್ಗವೊಂದನ್ನು ಹಿಡಿದುಕೊಂಡು ದಕ್ಷಯಜ್ಞವನ್ನು ಕೆಡಿಸುವ ವೀರ ಒಡಪುಗಳನ್ನು ಜೋರಾಗಿ ಕೂಗುತ್ತಾ ಚೂಪಾದ ಶೂಲಗಳನ್ನು ನಾಲಿಗೆಯಲ್ಲಿ, ದೇಹದ ಮೇಲೆ ಚುಚ್ಚಿಕೊಳ್ಳುತ್ತಾ ದೊಡ್ಡದಾದ ಅಗ್ನಿಕುಂಡವನ್ನು ಹಾರುತ್ತ ಕುಂಡದ ಆಚೆ ಬದಿಯಲ್ಲಿ ಇಟ್ಟ ದಕ್ಷನ ಮೂರ್ತಿಯನ್ನು ಕತ್ತರಿಸಿ ಹಾಕುತ್ತಾರೆ. ಆಂಧ್ರದ ಹತ್ತಕ್ಕೂ ಹೆಚ್ಚಿನ ಸಂಖ್ಯೆಯ ಜಿಲ್ಲೆಗಳಲ್ಲಿ ಈ ಜಂಗಮರು ವೀರಭದ್ರಾಚರಣೆಯನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಜಂಗಮರು ವೀರಭದ್ರ ಆಚರಣೆಯನ್ನು ಆಚರಿಸುವಾಗ ಹೇಳುವ ಒಡಪುಗಳಲ್ಲಿನ ವಿಷಯ ರಾಚೋಟಿ ವೀರಭದ್ರೇಶನಿಗೆ ಹೆಚ್ಚು ಅನ್ವಯವಾಗುತ್ತವೆ. ಅವರ ಒಡಪುಗಳಲ್ಲಿರುವ “ಸುರರಾತಿಭಂಗಾ”, “ಸೌಜನ್ಯರತ್ನಾಕರಾ”, “ಶ್ಯಾಮ ಮಹಾದಿವ್ಯವೇಷಾ”, “ಭಕ್ತಾಪೋಷಾ”, “ದಯಾವಾರ್ಥಿ” ಎಂಬ ಶಬ್ದಗಳನ್ನು ನೋಡಿದರೆ - ರಾಚೋಟಿ ವೀರಭದ್ರಸ್ವಾಮಿಯ ಸೌಮ್ಯ ರೂಪವನ್ನೇ ವರ್ಣಿಸುತ್ತಿರುವಂತೆ ತೋರುತ್ತದೆ. ಖಡ್ಗವನ್ನು ಹಿಡಿದು ವೀರಾವೇಶದಿಂದ ದಕ್ಷನ ಸಂಹಾರ ಮಾಡಿದರೂ ವೀರೇಶನು ಸೌಮ್ಯನೂ, ಭಕ್ತಾನುಗ್ರಹಿಯೂ ಎಂಬುದನ್ನು ತೋರಿಸುತ್ತಾರೆ. ರಾಚೋಟಿ ಹೊರತಾಗಿ ಅನ್ಯ ಭಾಗಗಳಲ್ಲಿ ವಿಶೇಷವಾಗಿ ವೀರ ರೌದ್ರಾವತಾರವೇ ಹೆಚ್ಚು. ಸೌಮ್ಯ ವೀರೇಶನ ವರ್ಣನೆ ತೀರ ಕಡಿಮೆ. ರಾಚೋಟಿ ವೀರಭದ್ರಸ್ವಾಮಿ ಸಂಪೂರ್ಣಾನಂದ ಪೂರ್ಣನೂ ಸಂತೃಪ್ತಿ ಸಮಾಧಾನ ಶಾಂತ ಚಿತ್ತನೂ ಆಗಿ ಕಂಗೊಳಿಸಿದ್ದಾನೆ. ಯಜ್ಞನಾಶದ ನಂತರ ಸಕಲರಿಗೂ ಸನ್ಮಂಗಳನ್ನು ಉಂಟು ಮಾಡುವುದಕ್ಕಾಗಿ ಭಕ್ತಾನುರಾಗಿ ಸಂಪ್ರೀತಿಯಿಂದ ರಾಚೋಟಿಯಲ್ಲಿ ನೆಲೆಸಿದ್ದು ವಿಶೇಷವಾಗಿದೆ. ಅಂತೆಯೇ ರಾಚೋಟಿ ವೀರಭದ್ರಸ್ವಾಮಿಗೆ ನಾಲ್ಕು ಕೈಗಳಿಲ್ಲ. ಕಾಲು ಮುಂದಿಟ್ಟಿಲ್ಲ. ರುಂಡ ಮಾಲೆಯಿಲ್ಲ. ಕೈಯಲ್ಲಿ ಖಡ್ಗವೊಂದನ್ನು ಬಿಟ್ಟರೆ ತ್ರಿಶೂಲಾದಿ ಅಸ್ತ್ರಗಳು ಇಲ್ಲ. ಅಂತೆಯೆ ದಕ್ಷ ಬ್ರಹ್ಮನು ಕೂಡ ಶ್ರೀ ವೀರಭದ್ರಸ್ವಾಮಿಯ ಕಾಲ ಬಳಿ ಕೆಳಗೆ ಭಕ್ತಿಯಿಂದ ಕುರಿದಲೆಯವನಾಗಿ ಕೈಮುಗಿದು ಕುಳಿತಿದ್ದಾನೆ.
ದೇವಸ್ಥಾನಗಳಲ್ಲಿ ಪೂಜೆಗೊಳ್ಳುವ ವೀರಭದ್ರನ ಪ್ರತಿಮೆಯನ್ನೇ ತೆಗೆದುಕೊಂಡರೆ ಅವನು ಬೇರೆ ದೇವರುಗಳಂತೆ ಮೂರ್ತಿಗೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಖಡ್ಗ ತ್ರಿಶೂಲ ಮುಂತಾದ ಆಯುಧಗಳು, ರುಂಡಮಾಲೆ, ಶಿರದಲ್ಲಿ ವ್ಯಾಳಾಸುರ ಶಿರೋಭೂಷಣ, ಆಭರಣಗಳು, ಇವಲ್ಲದೆ ವೀರಭದ್ರನು ವಿಶಿಷ್ಟರೀತಿಯಲ್ಲಿ ನಿಂತ ಭಂಗಿ, (ಸಾಮಾನ್ಯವಾಗಿ ದೇವರುಗಳು ಕುಳಿತ ಭಂಗಿಯಲ್ಲಿರುತ್ತವೆ ಇಲ್ಲವೆ ನೇರವಾಗಿ ನಿಂತಭಂಗಿಯಲ್ಲಿ ಇರುತ್ತವೆ) ಇವೆಲ್ಲವೂ ವೀರಭದ್ರನ ವೀರಾಗ್ರ ರೀತಿ ಮತ್ತು ಅದ್ಭುತ ಶಕ್ತಿ ಸಂಕೇತಗಳಾಗಿ ತೋರುತ್ತವೆ. ವೀರಭದ್ರನ ಇನ್ನೊಂದು ವಿಶೇಷವೆಂದರೆ ವೀರಗುಣವಷ್ಟೇ ಅಲ್ಲ ಅವನಲ್ಲಿ ಭದ್ರತ್ವ ಅಂದರೆ ರಕ್ಷಣೆಯನ್ನು ಮಾಡುವವನ ಆತ್ಮವಿಶ್ವಾಸ ಮತ್ತು ವೀರತ್ವದಲ್ಲೂ ಶಾಂತತ್ವ ಶುಭತ್ವಗಳ ಸಮ್ಮಿಳಿತವಾಗಿರು ವುದು. ಈ ಬಗೆಯ ಬಹು ಅರ್ಥವುಳ್ಳ ಮೂರ್ತಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪರೂಪವೆಂದೇ ಹೇಳಬೇಕು. ಇನ್ನು ತಾಮ್ರ ಬೆಳ್ಳಿ ಬಂಗಾರ ಮುಂತಾದ ಲೋಹಗಳಲ್ಲಿ ವೀರಭದ್ರನನ್ನು ಮೂರ್ತಿಗೊಳಿಸಿ, ಫಲಕಗೊಳಿಸಿ ಮನೆಯ ಜಗುಲಿ, ಮಾಡು ಗಳಲ್ಲಿ, ಪುರವಂತರ ಎದೆ ಯಲ್ಲಿ, ಕೊರಳಿನಲ್ಲಿ, ಪಲ್ಲಕ್ಕಿ ಯಲ್ಲಿ ಇಟ್ಟು ಪ್ರದರ್ಶಿಸುವ ಪೂಜಿಸುವ ಭಕ್ತರಿಗೂ ಲೆಕ್ಕ ವಿಲ್ಲ.
ವೀರಭದ್ರನ ಒಡಪುಗಳಲ್ಲಿ `ಆಹಾಹಾ ಸರ್ಪಾ' ಎಂಬ ಮಾತು ಬರುತ್ತದೆ. ವೀರಭದ್ರ ಸರ್ಪಕುಲ ಅಂದರೆ ನಾಗಕುಲದವ. ನಾಗರು ದ್ರಾವಿಡ ಪಣಿಯರು. (ಪಣಿ = ಫಣಿ, ನಾಗರಹೆಡೆ) (ವೀರಪಣಿ + ಜ = ವೀರಬಣಿಜರು ಎಂದರೆ ವೀರಬಣಜಿಗರು, ವೀರಬಣಂಜುಗಳು ಪ್ರಾಯಃ ವೀರಭದ್ರನ ನಾಗಕುಲಕ್ಕೆ ಸಂಬಂಧಿಸಿದ ದ್ರಾವಿಡರು. ಶೂರರಾದ ಇವರು ಪರ್ವತ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಅಲೆದು ಜನರಿಗೆ ಬೇಕಾದ ವಸ್ತುಗಳನ್ನು ಒದಗಿಸುತ್ತಿದ್ದರು. ಅಂತೆಯೆ ಇವರು ಮುಂದೆ ಪಣಿ+ಕ = ವಣಿಕ ಪಣಿ+ಜ ವಣಿಜ, ವಾಣಿಜ್ಯ (ವ್ಯಾಪಾರಿ) ಮಾಡುವವರೆನಿಸಿರಬೇಕು. ಇಂದಿಗೂ ಬಹಳಷ್ಟು ಬಣಜಿಗರಿಗೆ ವೀರಭದ್ರನು ಮನೆದೇವರಾಗಿ ಇರುವುದನ್ನು ಕಾಣಬಹುದು) ಶಿವನು ರೌದ್ರಾವತಾರ ತಾಳಿ ರುದ್ರನೆನಿಸಿದ, ಅವನು ರುದ್ರಾವತಾರಿಯಾದಾಗ ಹುಟ್ಟಿದವನೇ ವೀರಭದ್ರ. ಕರ್ನಾಟಕದ ಕೆಲವು ವೀರಭದ್ರ ಶಿಲ್ಪಗಳಲ್ಲಿ ವೀರಭದ್ರನು ಕೈಯಲ್ಲಿ ನಾಗರಹಾವನ್ನು ಹಿಡಿದ ದೃಶ್ಯವನ್ನು ಕಾಣಬಹುದು.
ವೀರಭದ್ರನನ್ನು ವೀರಮಾಹೇಶ್ವರ ಎಂದು ವೀರಾಗಮ ವರ್ಣಿಸಿದೆ-
`ವೀರಮಾಹೇಶ್ವರಾಚಾರ ವೀರಭದ್ರಾಯತೇ ನಮ:
ಆಶೇಷ ಪ್ರಮಥಾಚಾರ ಗುರೂಣಾಂ ಗುರವೇ ನಮ:’
ಎಂಬ ಶ್ಲೋಕದಲ್ಲಿ ವೀರಭದ್ರ ವೀರಮಾಹೇಶ್ವರನಷ್ಟೇ ಅಲ್ಲ ಅವರೆಲ್ಲರಿಗೂ ಗುರು ಎಂದೂ ಅಂಥ ಗುರುವಿನ ಗುರುವಿಗೆ ನಮಸ್ಕಾರ ಎಂದೂ ಹೇಳಿದೆ. ವೀರಶೈವರಲ್ಲಿ ಜಂಗಮರಿಗೆ ವೀರಮಾಹೇಶ್ವರ ಎಂಬ ಪದದ ಬಳಕೆ ವೀರಭದ್ರನಿಂದ ಬಂದಿರ ಬಹುದಾಗಿರುತ್ತದೆ.
(ಆ). 12 ನೇ ಶತಮಾನದ ಲ್ಲಿನ ಶಿವಶರಣರು ಕಂಡ ಶ್ರೀ ವೀರಭದ್ರ :
ಬಸವಣ್ಣ ಮೊದಲುಗೊಂಡು ಚಿನ್ಮಯಜ್ಞಾನಿ ಚೆನ್ನಬಸವಣ್ಣ, ಸಿದ್ಧರಾಮೇಶ್ವರ, ಉರಿಲಿಂಗ ಪೆದ್ದಿ ಮುಂತಾದ 17 ಕ್ಕೂ ಹೆಚ್ಚು ಸಂಖ್ಯೆಯ ಶಿವಶರಣರು 30 ಕ್ಕೂ ಹೆಚ್ಚು ಸಂಖ್ಯೆಯ ವಚನಗಳಲ್ಲಿ ವೀರಭದ್ರನನ್ನು ಗೌರವ ದಿಂದಲೇ ನೆನೆಸಿದ್ದಾರೆ. ಅನೇಕ ಶಿವಶರಣರು ರುದ್ರ, ವೀರಭದ್ರರನ್ನು ತಮ್ಮ ವಚನ ಗಳಲ್ಲಿ ಉಲ್ಲೇಖಿಸಿದ್ದಾರೆ. ಪ್ರಾಯಶಃ ಅವರು ವೀರಭದ್ರ ನನ್ನು ಪೌರಾಣಿಕ ಹಿನ್ನೆಲೆಯಲ್ಲಿ ನೋಡಿದ್ದಾರೆ. ಅವನ ಮಹತ್ವ ವನ್ನು ಎತ್ತಿತೋರಿಸಿದ್ದಾರೆ. ವೈದಿಕರನ್ನು ಬಗ್ಗು ಬಡಿಯಲು ರುದ್ರ, ವೀರಭದ್ರರು ಮಾಡಿದ ಅಮೋಘ ಕಾರ್ಯವನ್ನು ಅವರು ಮನವಾರೆ ಪ್ರಶಂಸೆ ಮಾಡಿದ್ದಾರೆ. ಏಕದೇವೋಪಾಸನೆಗೆ, ಇಷ್ಟಲಿಂಗೋಪಾಸನೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಅವರು ನೀಡಿದ್ದರಿಂದ ಶಿವನ ಗಣಂಗಳಿಗೆ ವಿಶೇಷ ಸ್ಥಾನವನ್ನು ಶರಣರು ನೀಡಿದಂತಿಲ್ಲ. ಆದರೆ ಸ್ವತಂತ್ರ ವಿಚಾರವಾದಿ ಶಿವಶರಣ ಎನಿಸಿದ ಸಿದ್ಧರಾಮನಂಥ ಶಿವಯೋಗಿ, ವೀರಭದ್ರನನ್ನು ಸ್ಮರಿಸಿದ್ದಷ್ಟೇ ಅಲ್ಲ ಸ್ತುತಿಮಾಡಿದ್ದೂ ನೋಡಿದರೆ ವೀರಭದ್ರನ ಮಹತ್ವ ಶಿವಶರಣರಿಗೆ ಮನವರಿಕೆ ಆಗಿತ್ತು ಎಂದೇ ಭಾವಿಸಬೇಕಾಗುತ್ತದೆ.
ಶಿವಯೋಗಿ ಸಿದ್ಧರಾಮನು ವೀರಭದ್ರನನ್ನು-
ವೀರಭದ್ರದೇವರ ಜೆಡೆಮುಡಿಕೇಶಂಗಳಲ್ಲಿ ಅನಂತಗಣಗಳುದಯ ವಿಸ್ತಾರವು (ವಚನ ಸಂಖ್ಯೆ 1086. ಸಂ.4.) ಎಂದು ಅನಂತ ಗಣಂಗಳು ವೀರಭದ್ರನಿಂದಲೇ ಉದಯವಾದರು ಅಷ್ಟೇ ಅಲ್ಲ ವೀರಭದ್ರನೂ ಸ್ವತಃ ಗಣೇಶ್ವರನು (ವಚನ ಸಂಖ್ಯೆ 1898) ಮುಂದುವರಿದು ಎಲ್ಲ ಪುರಾಣಗಳಿಗೆ ಹೆಸರಿದ್ದರೂ ನಮ್ಮ ವೀರಭದ್ರನ ಪುರಾಣಕ್ಕೆ ‘ನಿಶ್ಯಬ್ದ ನಿರವಯಲ ಪುರಾಣ’ ಎನಿಸಿದೆ. ಅವನು ‘ಮಹತ್ಪ್ರಳಯಾಗ್ನಿ ಸಮಕ್ರೋಧಿ’ ಎಂದು ಹೇಳುತ್ತಾನೆ.
ಉರಿಲಿಂಗಪೆದ್ದಿ ಒಬ್ಬ ಶ್ರೇಷ್ಠ ದಲಿತ ಶಿವಶರಣ. ಅವನು ವೇದಾಗಮಗಳನ್ನೂ ಆಳವಾಗಿ ಅಭ್ಯಾಸಮಾಡಿದವನು. ಅವನು ವೀರಭದ್ರನನ್ನು ಶ್ರೇಷ್ಠ ಸದ್ಭಕ್ತ ಶಿವಶರಣರ ಸಾಲಿನಲ್ಲಿಟ್ಟು ಗೌರವದಿಂದ ಸ್ಮರಿಸಿದ್ದಾನೆ. ಕೆಲವು ಶರಣರು ವೀರಭದ್ರನನ್ನು ಪೂಜಿಸುವುದ್ಯಾಕೆ? ಎಂದು ಪ್ರಶ್ನಿಸಿರಬಹುದು. ಅದಕ್ಕೆ ಉತ್ತರವಾಗಿ ಉರಿಲಿಂಗಪೆದ್ದಿ ಸುದೀರ್ಘವಾದ ವಿವರಣೆಯನ್ನು ಉದಾಹರಣೆಗಳನ್ನು ನೀಡಿ ‘ಮಹಾಶರಣರಪ್ಪ ನಂದೀಶ್ವರ ವೀರಭದ್ರ ಮೊದಲಾದ ಮಹಾಗಣಂಗಳಿಗೆ ಸದ್ಭಕ್ತಿಯ ಮಾಡಿ ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು’ ನೀವೇಕೆ ಇವರಲ್ಲಿ ಅವಿಶ್ವಾಸ ಮಾಡಿ ಕೆಡುತ್ತೀರಿ? ಎಂದು ಕೇಳುತ್ತಾನೆ. ( ವಚನಸಂಖ್ಯೆ 1596 ) ಇಲ್ಲಿ ಉರಿಲಿಂಗ ಪೆದ್ದಿ ಬಹು ಸ್ವಾರಸ್ಯಕರವಾಗಿ ವೀರಭದ್ರಾದಿ ಗಣಗಳ ಬಗ್ಗೆ ಹೇಳುತ್ತಾನೆ. ಸಂದೇಹ ಬೇಡ, ಪುರಾತನ ಶರಣರು ಶಿವನ ಗಣಂಗಳಲ್ಲಿ ಸದ್ಭಕ್ತಿಯನ್ನು ಮಾಡಿ ಮುಕ್ತಿಯನ್ನು ಪಡೆದಿದ್ದಾರೆ. ನೀವೂ ಕೂಡ ನಂಬಿರಿ, ವಿಶ್ವಾಸದಿಂದ ಅವರಲ್ಲಿ ಭಕ್ತಿ ಮಾಡಿರಿ ದಿಟವೋ ಸೆಟೆಯೋ ಎಂಬ ಸಂಶಯದಲ್ಲಿ ಬೀಳಬೇಡಿ ಎಂದು ಪರಿಪರಿಯಾಗಿ ಕೇಳಿಕೊಳ್ಳುವ ವಚನ ಇದಾಗಿದೆ.
ಸ್ವಾರಸ್ಯವೆಂದರೆ ಚೆನ್ನಬಸವಣ್ಣ ಮುಂತಾದ ಕೆಲವು ಶರಣರು ಏಕದೇವೋಪಾಸನೆಯ ನಿಷ್ಠೆಯನ್ನು ಎತ್ತಿಹಿಡಿಯುವುದಕ್ಕಾಗಿ ಹೇಳಿದ ವಚನಗಳಲ್ಲಿ ಬೇರೆ ದೇವತೆಗಳನ್ನು ಹೆಸರಿಸುವಾಗ ವೀರಭದ್ರನ ಹೆಸರನ್ನೂ ಸೇರಿಸಿದ್ದಾರೆ. ಇದರಿಂದ ಲಿಂಗವನ್ನಲ್ಲದೆ ಬೇರೇನನ್ನೂ ಪೂಜಿಸಬಾರದೆಂಬುದು ಅಲ್ಲಿನ ಅರ್ಥ. ಇದು ಬಾಹ್ಯದೃಷ್ಟಿಯಲ್ಲಿ ಸರಿಯಾದರೂ ವೀರಭದ್ರನೇ ಲಿಂಗವಾಗಿರುವುದರಿಂದ ವೀರಭದ್ರನ ಪೂಜೆಯೂ ಲಿಂಗಪೂಜೆಯೇ ಆಗುತ್ತದೆ. ಶಿವನೇ ತನ್ನ ಜಡೆಮುಡಿಯಿಂದ ವೀರಭದ್ರನನನ್ನು ಸೃಷ್ಟಿಮಾಡಿ ಉಗ್ರರೂಪತಾಳಿ ದಕ್ಷಬ್ರಹ್ಮನ ಸಂಹಾರಮಾಡಿದ್ದು ಇದಕ್ಕೆ ಉದಾಹರಣೆಯಾಗಿದೆ. ಇದನ್ನು ಬಸವಣ್ಣನವರೂ ತಮ್ಮ ವಚನಗಳಲ್ಲಿ ಸ್ಪಷ್ಟೀಕರಿಸಿದ್ದಾರೆ.
“ಕೂಡಲಸಂಗಮ ದೇವನು ದಕ್ಷನ ಕೆಡಿಸಿದುದ ಮರೆದಿರಲ್ಲಾ”
“ವಿಷವಟ್ಟಟಿಸುಡುವಲ್ಲಿ ವೀರಭದ್ರ ಬಡಿವಲ್ಲಿ
ಕೂಡಲ ಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು”
“ದಕ್ಷಯಾಗವ ನಡೆಸಲೆಂದು ಅಜಮುಖ್ಯರಾದ ಸುರರೆಲ್ಲ
ನೆರೆದು ಬಂದ ಬಾಯ ನೋಡಾ
ಬಾಯ ತಪ್ಪಿಸಿ ಉಣಬಂದ ದೈವದ ಚೆಂದ ಬಾಯ ನೋಡಾ
ಉಣ್ಣದೆ ಉಡದೆ ಹೊಗೆಯ ಕೈಯ್ಯಲ್ಲಿ ಸತ್ತ ಅಣ್ಣಗಳ ಕೇಡ ನೋಡಾ
ಕೂಡಲಸಂಗಮದೇವಾ”
“ಅಂದಾ ತ್ರಿಪುರವನುರುಹಿದಾತ ವೀರ
ಅಂದಾ ದಕ್ಷನ ಯಾಗವ ಕೆಡಿಸಿದಾತ ವೀರ”
ಬಸವಣ್ಣನವರ ವಚನಗಳಲ್ಲಿ ವೀರಭದ್ರನು ಯಜ್ಞಸಂಸ್ಕೃತಿ ಯನ್ನು ನಾಶಮಾಡುವಲ್ಲಿ ವಹಿಸಿದ ವೀರೋಚಿತ ಕಾರ್ಯದ ಪ್ರಶಂಸೆಯನ್ನು ಕಾಣುತ್ತೇವೆ. ವೀರಶೈವವನ್ನು ವಿರೋಧಿಗಳಿಂದ ರಕ್ಷಿಸಿದ ಬಗೆಯನ್ನು ಬಸವಣ್ಣನವರು ಎತ್ತಿ ಹಿಡಿದಿದ್ದಾರೆ. ಅಲ್ಲದೆ ವೀರಭದ್ರನನ್ನು ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಪ್ರಶಂಸಿಸಿದ್ದಾರೆ.
ಅವಿರಳಜ್ಞಾನಿ ಶರಣ ಚೆನ್ನಬಸವಣ್ಣನವರು ಶೈವರೊಡನೆ ವೀರಶೈವರು ಬೆರೆಯಬಾರದೆಂದು ಸಾಂದರ್ಭಿಕವಾಗಿ (ಅಂದರೆ ಇಷ್ಟಲಿಂಗಕ್ಕಿಂತ ಅನ್ಯ ದೈವತಗಳನ್ನೆ ಹೆಚ್ಚು ನೆಚ್ಚಿಕೊಂಡವರಿಗೆ ಬುದ್ಧಿವಾದ) ಹೇಳುವಾಗ ಮತ್ತು ಇಷ್ಟಲಿಂಗವನ್ನಲ್ಲದೆ ಬೇರೆ ಯಾವ ದೇವತೆಯನ್ನೂ ಪೂಜಿಸಬಾರದೆಂದು ಏಕದೇವೋಪಾಸನೆಯನ್ನು ಎತ್ತಿ ಹೇಳುವಾಗ ಒಂದೆರಡು ಕಡೆಗೆ ಖಂಡಿಸಿದ್ದಾರೆ. ಆದರೆ ತಮ್ಮ ಒಂದು ವಚನದಲ್ಲಿ ವೀರಶೈವ ದೇವರುಗಳು ಪವಿತ್ರರಾದವರು. ಅಂಥ ಶುದ್ಧಾತ್ಮರನ್ನು ಕ್ರೋಧಿ, ಕಾಲಹೀನ, ಧ್ವಂಸಕ ಹೀಗೆಲ್ಲಾ ಹೇಳಿ ತಿರಸ್ಕರಿಸುವುದು ಉಚಿತವಲ್ಲ. ಆದ್ದರಿಂದ ಬೇರೆ ಯಾರೇ ಏನೇ ಹೇಳಲಿ ವೀರಭದ್ರಾದಿ ಎಲ್ಲ ದೇವದೇವತೆ ಋಷಿಮುನಿಗಳನ್ನು ಪೂಜ್ಯವಾಗಿ ಕಾಣಬೇಕಾದುದು ಸರಿಯಾದ ಮಾರ್ಗ ಎಂದು ಹೇಳುತ್ತಾರೆ:
ಇತಿಹಾಸೇಷು ವೇದೇಷು ಪುರಾಣೇಷು ಪುರಾತನೈಃ |
ಮಹರ್ಷಿಬಿsರ್ಮಹಾದೇವೋ ಮಹನೀಯಃ ಪ್ರತಿಷ್ಠಿತಃ ||
ಇಂತೆಂದುದಾಗಿ ಪುರಾತನರಲ್ಲಿ ಆದ್ಯಂತರಾಗಿದ್ದ ಮಹಾಋಷಿಗಳೆಲ್ಲರೂ
ರತ್ನಸುವರ್ಣ ರಜತ ತಾಮ್ರ ಚಂದ್ರಕಾಂತ ಸ್ಫಟಿಕ ಪವಳಲಿಂಗಂಗಳ
ಆರಾಧಿಸಿದರು.
ಅಗಸ್ತ್ಯ ದದೀಚಿ ಕಂಕದ ಬಾಣಾಸುರ ಪುರಂದರ ಬ್ರಹ್ಮವಿಷ್ಣು ದೂರ್ವಾಸ ನಂದಿಕೇಶ್ವರ ಸ್ಕಂದ ಭೃಂಗಿ ವೀರಭದ್ರಾದಿಗಣಂಗಳೆಲ್ಲರೂ
ರುದ್ರೇಣ ದೀಕ್ಷಿತೋ ಭೂತ್ವಾ ಸ್ಕಂದಃ ಶಿವಸಮುದ್ಭವಃ |
ಶಿವಾಚಾರ ರಹಸ್ಯಸ್ಯ ಪಾತ್ರತಾಂ ಪರಮಾಂ ಗತಃ || ಇಂತೆಂದುದಾಗಿ
ಇದನರಿದು ಪರಶುರಾಮ ಪರಾಶರ ವಶಿಷ್ಠ ವಾಲ್ಮೀಕಿ
ಕಮಲಾಕರ ವಿಶ್ವಾಮಿತ್ರ ಮಹಾಮುನಿಗಳೆಲ್ಲರೂ
ಪಾಣಿನಿಶ್ಚ ಕಣಾದಶ್ಚ ಕಪಿಲೋ ಗೌತಮಾದಯಃ |
ಪ್ರಸಾದಸೇವನಾದ್ಧ್ಯಾನಾದರ್ಚನಾದ್ಧಾರಣಾದಪಿ || ಇಂತೆಂದುದಾಗಿ
ಇದು ಕಾರಣ ಕೂಡಲಚೆನ್ನಸಂಗಮದೇವರನಾರಾದಿಸಿ,
ಪ್ರಸಾದ ಪಾದೋದಕವ ಕೊಂಡು ಅತಿಶುದ್ಧರಾದರು
ಎಲ್ಲಾ ದೇವರುಗಳು, ಎಲ್ಲಾ ಋಷಿಜನಂಗಳು. (ವಚನ ಸಂಖ್ಯೆ 151 ವಚನಮಹಾಸಂಪುಟ ಕರ್ನಾಟಕ ಸರ್ಕಾರ 2016)
ಇತಿಹಾಸ, ವೇದ, ಪುರಾಣಗಳಿಗಿಂತ ಪುರಾತನನಾದ ರುದ್ರನಿಂದ ಆರಂಭವಾದ ವೀರಶೈವ ಧರ್ಮವನ್ನು ವೀರಭದ್ರ ಮತ್ತು ಸಮಸ್ತ ಋಷಿಗಳು ಲಿಂಗಪೂಜಾನಿರತರಾಗಿ, ಪ್ರಸಾದ ಪಾದೋದಕ ಸ್ವೀಕರಿಸಿ ಅತಿ ಶುದ್ಧರಾದರು. ಹೀಗೆ ಪರಿಶುದ್ಧರಾದ ವೀರಶೈವರನ್ನು ನಾವು ಭಿನ್ನಭಾವದಿಂದ ಕಾಣುವುದೆಂದರೆ ಶರಣರ, ವೀರಶೈವ ತತ್ತ್ವಕ್ಕೆ ಅವಹೇಳನ ಮಾಡಿದಂತೆಯೇ ಸರಿ. ಇಷ್ಟಲಿಂಗವನ್ನು ಧರಿಸಿಕೊಂಡ ಯಾರನ್ನೇ ಆಗಲಿ ಗೌರವದಿಂದ ಕಾಣಬೇಕು ಎಂದು ವೀರಶೈವಧರ್ಮ ಆದೇಶಿಸುತ್ತದೆ. ಇಷ್ಟಲಿಂಗ ಧರಿಸಿದ ವೀರಭದ್ರಸ್ವಾಮಿ ಗುರುವಿನ ಗುರು ಅಲ್ಲವೇ? ಹಾಗೆಯೇ ಗಣಪತಿ, ಷಣ್ಮುಖರು
ಶಿವಸಂಭೂತ ಶಿವಗಣಂಗಳಲ್ಲವೇ? ಶಿವಶರಣರು ಕ್ಷುದ್ರದೈವಗಳನ್ನು ಅಂಧಶ್ರದ್ಧೆಯಿಂದ ಪೂಜಿಸಬೇಡಿರಿ ಎಂದು ಹೇಳಿರುವರೇ ವಿನ: ಶಿವಗಣಂಗಳನ್ನು ಪೂಜಿಸಬೇಡಿರಿ ಎಂದು ಹೇಳಿಲ್ಲ. ಪರಂಜ್ಯೋತಿ ಎನಿಸುವ ಶಿವನು ಮಾತ್ರ ಬೇಕು, ಅವನ ಸಂಭೂತರಾದ ವೀರಭದ್ರ ಮುಂತಾದವರು ಬೇಡ ಎಂದರೆ ಒಪ್ಪುವ ಮಾತೆ? ಶಿವನ ರುದ್ರಾವತಾರದ ಭಾಗವೇ ರುದ್ರ ವೀರಭದ್ರರಲ್ಲವೇ? ಎರಡು ಸಾವಿರದಷ್ಟು ವಚನಗಳಲ್ಲಿ ಶರಣರು ರುದ್ರನನ್ನು ಉಲ್ಲೇಖಿಸಿರುವುದನ್ನು ಗಮನಿಸಬೇಕು. ಸೊಡ್ಡಳಬಾಚರಸ ಎಂಬ ಶಿವಶರಣನು ಶಿವನ ಬೇರೆ ಬೇರೆ ಹೆಸರುಗಳೇ ಅವನ ಅದ್ಭುತ ಲೀಲೆಗಳಿಂದಾಗಿ ಬಂದಂಥವು. ವೀರಭದ್ರನೆಂಬುವವನೂ ಅದೇ ಶಿವನು. ಆದ್ದರಿಂದ ಶಿವ, ವೀರಭದ್ರ, ಲಿಂಗ ಇವುಗಳಲ್ಲಿ ಅಭೇದವೆಂಬುದನ್ನು ತಿಳಿಯಬೇಕು ಎಂಬುದು ಸೊಡ್ಡಳ ಬಾಚರಸನ ಅಭಿಪ್ರಾಯ.(ವಚನಸಂಖ್ಯೆ:780)
ಮಡಿವಾಳ ಮಾಚಿದೇವ ಮುಂತಾದ ಕೆಲವು ಶರಣರು ಲಿಂಗದ ಹೊರತು ಯಾವುದನ್ನೂ ಪೂಜಿಸಬಾರದೆಂದು ಹೇಳಿದ್ದಕ್ಕೆ ಉರಿಲಿಂಗಪೆದ್ದಿ ಮುಂತಾದ ಶರಣರ ವಚನಗಳು ಉತ್ತರವನ್ನು ನೀಡುತ್ತವೆ. ಮಡಿವಾಳ ಮಾಚಿದೇವನನ್ನೇ ವೀರಭದ್ರನವತಾರವೆಂದು ವರ್ಣಿಸಲಾಗಿದೆ. ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ ಮೊದಲಾದ ಪ್ರಮುಖ ಶಿವಶರಣರು ವೀರಭದ್ರನನ್ನು ಶಿವಸ್ವರೂಪಿಯಾಗಿ, ಶಿವಗಣಂಗಳಲ್ಲಿ ಒಬ್ಬನನ್ನಾಗಿ, ಶಿವಸಂಸ್ಕೃತಿಯ ರಕ್ಷಕನನ್ನಾಗಿ ಕಂಡಿದ್ದಾರೆ.
ಶಿವಶರಣರು ಹೆಚ್ಚಾಗಿ ಯಜ್ಞಸಂಸ್ಕೃತಿಯ ವೈದಿಕರನ್ನು ತಿರಸ್ಕರಿಸಿದರು. ವೇದಗಳಲ್ಲಿ ವಿವರಿತ ಯಜ್ಞ ಕರ್ಮಕಾಂಡವನ್ನು ತೀವ್ರವಾಗಿ ವಿರೋಧಿಸಿದರು. ಆದರೆ ರುದ್ರ, ವೀರಭದ್ರಾದಿ ಮಹಾಪುರುಷರನ್ನು ಅವರು ಎಂದಿಗೂ ಅನ್ಯಭಾವದಿಂದ ಕಂಡಿಲ್ಲ. ಶಿವನೇ ಅವರ ಅಧಿದೈವ, ರುದ್ರನನ್ನಂತೂ ಮನವಾರೆ ಪ್ರಶಂಸಿದ್ದಾರೆ. ಬಸವಣ್ಣನವರು ವಿಶ್ವಕ್ಕೇ ಶ್ರೇಷ್ಠನೆನಿಸಿದ ರುದ್ರನನ್ನು ವೇದಗಳು “ವಿಶ್ವರೂಪಾಯವೈನಮ:” ಎಂದು ಹೊಗಳುತ್ತಿರಲು ಸಂಹಾರ ಕಾರಣರಾದ ರುದ್ರ ವೀರಭದ್ರರು ಎಂದೆಂದಿಗೂ ವಂದನಾರ್ಹರು - ರುದ್ರ ವೀರಭದ್ರರೇ ಕೂಡಲಸಂಗಮನಾಗಿ ಬಂದವರು ಅಂಥ ಕೂಡಲಸಂಗಮದೇವನಿಗೆ ನಮೋ ನಮಃ ಎನ್ನುತ್ತೇನೆ ಎಂದು ಸ್ಪಷ್ಟವಾಗಿ ವಿವರಿಸಿದ್ದಾರೆ.
ಅಲ್ಲಮಪ್ರಭುಗಳು ವೀರಭದ್ರನನ್ನು ಶಿವನಲ್ಲಿಯೇ ಕಾಣುತ್ತಾರೆ: “ಕಾಮನ ಕಣ್ಣ ಮುಳ್ಳ ಕಳೆದು ಭೂಮಿಯ ತೈಲದ ಸೀಮೆಯ ಕೆಡಿಸಿ ಹೋಮವನುರುಹಿ ದಕ್ಷನ ತಲೆಯನರಿದು ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ ? ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು!”(ವಚನಸಂಖ್ಯೆ 1076) ಎಂಬುದು ಅವರ ಸ್ಪಷ್ಟತೆ. ಸತ್ಯಕ್ಕನೆಂಬ ಶಿವಶರಣೆಯಂತೂ ಒಂದು ಸುಂದರವಾದ ಭಾವಗೀತೆಯಂತೆ ಇದನ್ನು ಹೇಳುತ್ತಾಳೆ:
ಭಾವನೇಕೆ ಬಾರನೆನ್ನ ಮನೆಗೆ ?
ಹರಿಯಮಗನನುರುಹಿದ ಗರುವದ ಭಾವನೇಕೆ ಬಾರನೆನ್ನ ಮನೆಗೆ ?
ಅಸುರರ ಪುರವ ಸುಟ್ಟ ವೀರಭಾವನೇಕೆ ಬಾರನೆನ್ನ ಮನೆಗೆ ?
ದಕ್ಷನ ಶಿರವನರಿದು, ಯಾಗವ ಕೆಡಿಸಿ ಕುರಿದಲೆಯ ಹತ್ತಿಸಿ
ಬಿನ್ನಾಣದ ಬಲುಹ ಮೆರೆವ ಏಕೋಭಾವನೇಕೆ ಬಾರನೆನ್ನ ಮನೆಗೆ ? (ವಚನಸಂಖ್ಯೆ 1225).
ಬಳ್ಳೇಶಮಲ್ಲಯ್ಯನೆಂಬ ಶರಣನು ವೀರಭದ್ರನನ್ನು ‘ಶುದ್ಭಧವಳಿತ ಭಾನುಕೋಟಿತೇಜಪ್ರಭೆಮಂಡಲವ ರವಿ ಉದಯ ಒಬ್ಬನೆನಬಹುದೆ ದೇವ ಬಳ್ಳೇಶ್ವರ ವೀರಭದ್ರವತಾರವಾ?’ ಎನ್ನುತ್ತಾನೆ.(ವಚನಸಂಖ್ಯೆ 199)
ಶಿವಶರಣರು ವಚನಗಳಲ್ಲಿ ಮುಖ್ಯವಾಗಿ ವೀರಭದ್ರನನ್ನು ಮೂರು ಬಗೆಯಲ್ಲಿ ಕಂಡರಿಸಿದ್ದಾರೆ.
(1).ಅವನು ವಿಷ್ಣುಪಾರಮ್ಯದ ಹೋಮಸಂಸ್ಕøತಿಯವರನ್ನು ಬಗ್ಗು ಬಡೆದ ಒಬ್ಬ ಧೀರ ಐತಿಹಾಸಿಕ ಪುರುಷನೆಂಬಂತೆ
(2). ಅವನು ಶಿವನ ಶ್ರೇಷ್ಠ ಗಣಂಗಳಲ್ಲಿ ಒಬ್ಬನೆಂಬಂತೆ
(3). ದೇವಾನು ದೇವತೆ ಗಳಿಂದಲೂ ಪೂಜೆಗೊಳ್ಳುವ ಪವಿತ್ರ ದೇವನೆಂಬಂತೆ
ಪರಂಜ್ಯೋತಿಸ್ವರೂಪನಾದ ಶಿವನನ್ನು ಹೆಂಡತಿ ಮಕ್ಕಳುಳ್ಳ ಸಂಸಾರಿಗನನ್ನಾಗಿ ಕಾಣುವುದಕ್ಕಿಂತ ಶಿವಶಕ್ತಿಯ ಸಂಭೂತ ವೀರಭದ್ರ ಆ ಶಕ್ತಿಸ್ವರೂಪ ಇಷ್ಟಲಿಂಗದಲ್ಲಿ ಸನ್ನಿಹಿತ ಎಂದು ಭಾವಿಸಿ ಶರಣರು ಇಷ್ಟಲಿಂಗದಲ್ಲಿಯೇ ಆ ಪರಂಜ್ಯೋತಿ ಸ್ವರೂಪ ದರ್ಶನ ಮಾಡಿಕೊಂಡು ಆ ಮೂಲಕವಾಗಿ ಐಕ್ಯಸ್ಥಲದಲ್ಲಿ ತಾನೂ ಪರಂಜ್ಯೋತಿಸ್ವರೂಪನಾಗಬೇಕಾದ ಷಟ್ಸ್ಥಲಮಾರ್ಗವನ್ನು ಅನುಸರಿಸಬೇಕೆಂದರು. ವೀರಭದ್ರ ಮತ್ತು ಶಿವನ ಗಣಂಗಳನ್ನು ಶಿವನ ರೂಪದಲ್ಲಿಯೇ ಅಂದರೆ ಇಷ್ಟಲಿಂಗದ ರೂಪದಲ್ಲಿಯೆ ಕಂಡುಕೊಂಡರು. -
ಸಂಶೋಧಕರ ಪರಿಗಣನಾ ಅಂಶಗಳು : ಸಂಶೋಧಕರು ಸಂಸ್ಕೃತಿ ಸಂಶೋಧನೆಗೆ ಅನೂಚಾನವಾಗಿ ಜಾರಿಯಲ್ಲಿರುವ ಜನಪದರ ಆಚಾರವಿಚಾರ ಆಚರಣೆಗಳ ನ್ನು ನಂಬಿಕೆಗಳನ್ನು ಬಳಸಿ ಕೊಳ್ಳುವುದು ವಾಡಿಕೆ. ಹಾಗೆ ನೋಡಿದರೆ ವೀರಭದ್ರನಿಗೆ ಸಂಬಂಧಿಸಿದ ಜನರ ಆಚಾರ ವಿಚಾರ ಆಚರಣೆಗಳನ್ನು ನಂಬಿಕೆಗಳನ್ನು ಯಾರೂ ವಿರೋಧಿಸಲು ಸಾಧ್ಯವಾಗಿಲ್ಲ. ಮುಂದೆಯೂ ಸಾಧ್ಯ ಆಗುವು ದೂ ಇಲ್ಲ....ಮೇಲೆ ಉಲ್ಲೇಖಿ ಸಿದಂತೆ ಶರಣ ಉರಿಲಿಂಗ ಪೆದ್ದಿಯ ಮಾತಿನಲ್ಲೇ ಹೇಳ ಬೇಕೆಂದರೆ - ಮೊದಲು ನಾವು ಶುದ್ಧ ಮನಸ್ಸಿನಿಂದ ವಿಶ್ವಾಸ ಇಡಬೇಕು. ವಿಶ್ವಾಸದಿಂದ ವಿಚಾರಿಸಿದರೆ ಸತ್ಯ ಗೋಚರ ವಾಗುತ್ತದೆ. ಅವಿಶ್ವಾಸದಿಂದ ಎಲ್ಲವೂ ಗೋಜಲು ಗೋಜ ಲಾಗಿ ಕಾಣಿಸುತ್ತದೆ.
ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತಿಯ ಆಚರಣೆ :
ಹೀಗೆ ವೀರಭದ್ರನ ಚರಿತ್ರೆ ಮಹತ್ವ ಬಹು ಪ್ರಾಚೀನ ಕಾಲದಿಂದಲೇ ಸಾಗಿ ಬಂದಿದೆ. ಭಕ್ತರ ಹೃದಯದ ಕಣ್ಮಣಿಯಾಗಿ ಅವರ ಕಷ್ಟಪರಿಹಾರಕನಾಗಿ ಇಷ್ಟಾರ್ಥಗಳನ್ನು ನೆರವೇರಿಸುತ್ತ ಬಂದ ವೀರಭದ್ರನ ಜಯಂತಿ ಯನ್ನು ಪ್ರತಿವರ್ಷ ಭಾದ್ರಪದ ಮಾಸ - ಶುಕ್ಲಪಕ್ಷದ ಮೊದಲ ನೆಯ ಮಂಗಳವಾರದಂದು ಆಚರಿಸಲಾಗುತ್ತದೆ - ಅಂದು ಶ್ರೀ ವೀರಭದ್ರ ಸ್ವಾಮಿಯ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ. - -
ಸಂಗ್ರಹಿತ ಮಾಹಿತಿಗಳ ಆಕರ : ಶ್ರೀ ವೀರಭದ್ರ ಜಯಂತಿಯ ನಿಮಿತ್ತ ಪ್ರಕಟಿತ - ಡಾ. ಸಂಗಮೇಶ ಸವದತ್ತಿಮಠ ರವರ ಸಂಶೋಧನಾತ್ಮಕ ವಿಶೇಷ ವಿಶ್ಲೇಷಣಾ ಪತ್ರಿಕಾ ಲೇಖನಗಳು.
No comments:
Post a Comment
If you have any doubts. please let me know...