September 12, 2021

ಕೂಷ್ಮಾಂಡ


   ವಾತರಶನಾ ಎನ್ನುವ ಹೆಸರಿನಿಂದ ಕರೆಸಿಕೊಳ್ಳುವ ಋಷಿ ಮೊದಲು ಕಾಣಿಸಿಕೊಳ್ಳುವುದು ಋಗ್ವೇದದ ೧೦ನೇ ಮಂಡಲದಲ್ಲಿ. ಅಗ್ನಿ, ವಾಯು ಮತ್ತು ಸೂರ್ಯನನ್ನು ಸ್ತುತಿಸುವ ಈ ಸೂಕ್ತ ದ್ರಷ್ಟಾರರು. ಇವರ ಕುರಿತಾಗಿ ಮೊನ್ನೆ ಬರೆದಾಗಿದೆ. ಅವರ ಸೂಕ್ತದ ಒಂದನೇ ಋಕ್ಕನ್ನು ಮೊನ್ನೆ ವಿವರಿಸಿದ್ದೆ. ಅವರ ಎರಡನೇ ಋಕ್ಕಿನಲ್ಲಿ ಮುನಯೋ ವಾತರಶನಾಃ ಪಿಶಂಗಾ ಎಂದು ಬರುತ್ತದೆ. ಅಂದರೆ ಈ ವಾತರಶನಾ ಎನ್ನುವ ಮುನಿಯ ಮಕ್ಕಳು ಮಲಿನವಾದ ಕಂದು(ಮಾಸಲು) ಬಣ್ಣದ ವಸ್ತ್ರವನ್ನು ಧರಿಸಿದ್ದರಂತೆ. ಅಂದರೆ ಪಿಶಂಗ ಎನ್ನುವುದು ಕೊಳಕಾದ ಅಥವಾ ಮಲಿನವಾದ ಎನ್ನುವ ಅರ್ಥವನ್ನು ಭಾಷ್ಯದಲ್ಲಿ ಕೊಡಲಾಗಿದೆ. 
ಇನ್ನು ಇದೇ ಮುನಿಯ ವಿಷಯವಾಗಿ ತೈತ್ತಿರೀಯ ಆರಣ್ಯಕದ ೨:೭ರಲ್ಲಿ ವಾತರಶನಾ ಹ ವಾ ಋಷಯಶ್ಶ್ರಮಣಾ ಊರ್ಧ್ವಮಂಥಿನೋ ಬಭೂವುಸ್ತಾನೃಷಯೋ . . . ಎಂದು ಬರುತ್ತದೆ. ವಾತರಶನಾ ಎನ್ನುವ ಋಷಿಯು ದ್ರಷ್ಟಾರ, ದರ್ಶನವಂತ ಎಂದು ಭಾಷ್ಯಕಾರ ಭಟ್ಟಭಾಸ್ಕರರು ಹೇಳುತ್ತಾರೆ. ಈತನ ಶರೀರ ಅದೆಷ್ಟು ಬಲವಾಗಿತ್ತೆಂದರೆ ಗಾಳಿಯಲ್ಲಿ ತೇಲುವಂತಿತ್ತಂತೆ. ಅದಕ್ಕಾಗಿಯೇ ವಾತರಶನಾ ಎಂದು ಹೆಸರು ಬಂದಿತ್ತುಎನ್ನುತ್ತಾರೆ. ವಾತ ಎಂದರೆ ಗಾಳಿ. ಅಂದರೆ ರಶನಾ ಎಂದರೆ ಬಂಧನಕ್ಕೆ ಬಳಸುವ ಹಗ್ಗ, ಅಥವಾ ಹಗ್ಗದಂತೆ ಬಳುಕುವ ಈತ ತನ್ನ ವಿದ್ಯೆಯಿಂದ ತೇಜಸನ್ನು ಹೊಂದಿದ್ದ. ಶ್ರಮಣಃ ಎಂದು ಹೇಳಲಾಗಿದ್ದು, ಈತ ಶ್ರಮವಂತ ಎನ್ನುತ್ತಾ ಮಹಾ ತಪಸ್ವಿಯಾಗಿದ್ದ. ಶ್ರಮಜೀವಿಯಾಗಿದ್ದ. ಈತ ಯಾವಾಗಲೂ ಉಚ್ಚವಾದ ಮನಸ್ಥಿತಿಯನ್ನು ಹೊಂದಿದ್ದ ಮತ್ತು ಬಹಳ ಉತ್ಸಾಹಿಯಾಗಿದ್ದ. ಅಂದರೆ ಇಲ್ಲಿ ಊರ್ಧ್ವರೇತಸಃ ಎಂದು ಭಟ್ಟ ಭಾಸ್ಕರರ ಅಭಿಪ್ರಾಯ ಇದೆ. ವಾತರಶನಾ ಬೇರೆ ಋಷಿಗಳ ಸಂಪತ್ತನ್ನೆಲ್ಲಾ ತಾನೊಬ್ಬನೇ ತೆಗೆದುಕೊಳ್ಳ್ಳುತ್ತಿದ್ದ. ಒಮ್ಮೆ ಈ ಋಷಿ ಸಂಪತ್ತನ್ನೆಲ್ಲಾ ದೋಚುವುದನ್ನು ಉಳಿದ ಋಷಿಗಳು ಕಾಣಬಾರದು ಎಂದು ಅಡಗಿಕೊಳ್ಳುತ್ತಾನೆ. ಅದನ್ನೇ ಇಲ್ಲಿ ನಿಲೀಯ ಎಂದು ಮಂತ್ರದಲ್ಲಿ ಹೇಳಿರುವುದು. ಇದು ಕೂಷ್ಮಾಂಡಕ್ಕೆ ಸಂಬಂಧಿಸಿದ ಮಂತ್ರವಾದುದರಿಂದ ಕೂಷ್ಮಾಂಡಾನಿ ಎಂದು ಮಂತ್ರದಲ್ಲಿ ಹೇಳಿರುವುದು ಕೇವಲ ಕುಂಬಳಕಾಯಿಗಲ್ಲ, ಇಲ್ಲಿ ದೇಹವನ್ನು ಅತ್ಯಂತ ಸೂಕ್ಷ್ಮವಾಗಿ ಮಾಡಿಕೊಂಡು ಅಡಗಿಕೊಂಡ ಎಂದು. ಅಂದರೆ ಇದು ವಾಜಸನೇಯೀ ಸಂಹಿತೆಯಲ್ಲಿ ಇಂದ್ರಜಾಲ ಪ್ರಯೋಗ ಎಂದು ಹೇಳಿದೆ. ಇಲ್ಲಿ ಇನ್ನೊಂದು ರೀತಿಯಲ್ಲಿ ಹೇಳುತ್ತಾ ಕೂಷ್ಮಾಂಡದ ಒಳಗೆ ಸೂಕ್ಷ್ಮವಾಗಿ ಅಡಗಿ ಕುಳಿತು ಕೂಷ್ಮಾಂಡದ ಆಶ್ರಯ ಪಡೆದು ಅದರ ಅಭಿಮಾನಿಯಾದ ಎಂದು ಅರ್ಥ. ಆ ಕೂಷ್ಮಾಂಡವನ್ನು ಉಳಿದ ಋಷಿಗಳು ಅಲುಗಾಡಿಸಿದರು ವಾತರಶನನು ಅಲ್ಲಿರುವುದು ತಿಳಿದು ಅವನ ತಪಸ್ಸು ಮತ್ತು ಬ್ರಹ್ಮಚರ್ಯ ನಾಶವಾಗುವಂತೆ ಶಪಿಸುತ್ತಾರೆ.
ಎಷ್ಟು ವಿದ್ಯೆ ಇದ್ದರೂ, ಅಷ್ಟೇ ತೇಜಸ್ಸು ಹೊಂದಿದ್ದರೂ ತಾನು ಮಾಡುವ ಕಾರ್ಯ ಮತ್ತು ಅಂಥಹ ಮನಸ್ಸು ಆ ವ್ಯಕ್ತಿಯನ್ನು ಎಷ್ಟು ಕೆಳಮಟ್ಟಕ್ಕೆ ನೂಕಬಲ್ಲದು ಎಂದು ತಿಳಿಯುತ್ತದೆ.

#ಕೂಷ್ಮಾಂಡ_ಬ್ರಾಹ್ಮಣ 
ಸದ್ಯೋಜಾತರು

No comments:

Post a Comment

If you have any doubts. please let me know...