September 16, 2021

ದೇಹವೇ ದೇವಾಲಯ... ಯೋ ವೈ ತಾಂ

ಯೋ ವೈ ತಾಂ ಬ್ರಹ್ಮಣೋ ವೇದಾಮೃತೇನಾವೃತಾಂ ಪುರಂ|ತಸ್ಮೈ ಬ್ರಹ್ಮ ಚ ಬ್ರಹ್ಮಾಶ್ಚ ಚಕ್ಷುಃ ಪ್ರಾಣಂ ಪ್ರಜಾಂ ದದುಃ ||
[ಅಥರ್ವ ೧೦.೨.೨೯]
ಅನ್ವಯ :
ಯಃ = ಯಾವನು
ಅಮೃತೇನ ಆವೃತಾಂ = ಅಮರನಾದ ಭಗವಂತನಿಂದ ಆವೃತವಾಗಿರುವ
ಬ್ರಹ್ಮಣಃ ತಾಂ ಪುರಂ = ಆ ಭಗವಂತನ ಪುರವಾದ ಈ ದೇಹವನ್ನು
ವೈ ವೇದ = ಸರಿಯಾಗಿ ತಿಳಿದು ಉಪಯೋಗಿಸಿಕೊಳ್ಳುತ್ತಾನೋ
ತಸ್ಮೈ = ಅವನಿಗೆ
ಬ್ರಹ್ಮ ಚ = ಪರಮಾತ್ಮನು ಮತ್ತು
ಬ್ರಹ್ಮಾಶ್ಚ = ಪರಮಾತ್ಮನ ಮಕ್ಕಳಾದ ಜೀವಾತ್ಮರು
ಚಕ್ಷು = ಸತ್ಯ ದರ್ಶನ ಶಕ್ತಿಯನ್ನೂ
ಪ್ರಾಣಂ = ಜೀವನ ಶಕ್ತಿಯನ್ನೂ
ಪ್ರಜಾಂ = ಸತ್ ಸಂತತಿಯನ್ನೂ
ದದುಃ = ನೀಡುತ್ತಾರೆ
ಅರ್ಥ :
ಯಾವನು ಅಮರನಾದ ಭಗವಂತನಿಂದ ಆವೃತವಾಗಿರುವ ಆ ಭಗವಂತನ ಪುರವಾದ ಈ ದೇಹವನ್ನು ಸರಿಯಾಗಿ ತಿಳಿದು ಉಪಯೋಗಿಸಿಕೊಳ್ಳುತ್ತಾನೋ ಅವನಿಗೆ ಪರಮಾತ್ಮನು ಸತ್ಯ ದರ್ಶನ ಶಕ್ತಿಯನ್ನೂ ಜೀವನ ಶಕ್ತಿಯನ್ನೂ ಸತ್ ಸಂತತಿಯನ್ನೂ ನೀಡುತ್ತಾನೆ.
ಅನೇಕ ಪುರೋಹಿತರು ಈ ಮಂತ್ರವನ್ನು ಆಶೀರ್ವಾದ ರೂಪದಲ್ಲಿ ಪಠಿಸುವುದನ್ನು ನಾನು ಕೇಳಿದ್ದೇನೆ.ಕಿವಿಗೆ ಹಿತವಾಗುತ್ತಿತ್ತು.ಅರ್ಥ ತಿಳಿಯುತ್ತಿರಲಿಲ್ಲ. ಅರ್ಥ ತಿಳಿಯುವ ಪ್ರಯತ್ನ ಮಾಡಿದಾಗ ಸಂತೋಷವಾಯ್ತು. ಈ ಮಂತ್ರದ ಬಗ್ಗೆ ವಿಚಾರ ಮಾಡೋಣ.
ಈ ದೇಹವನ್ನು ಹಲವರು ತಮ್ಮ ವಯಸ್ಸಾದ ಕಾಲದಲ್ಲಿ, ಅಥವಾ ರೋಗಪೀಡಿತವಾದಾಗ ಈ ಪಾಪಿದೇಹ ಎಂದು ಜರಿಯುವುದನ್ನು ಕಂಡಿದ್ದೇವೆ. ಈ ದೇಹವನ್ನು ಪೋಷಿಸಬೇಕಾಗಿದೆಯಲ್ಲಾ! ಎಂದು ತೊಳಲಾಡುವವರಿಗೇನೂ ಕಮ್ಮಿ ಇಲ್ಲ. ಆದರೆ ವೇದವು ಏನು ಹೇಳುತ್ತದೆ? ಈ ದೇಹವು ಭಗವಂತನಿಂದ ಆವೃತವಾಗಿವಾಗಿದೆ, ಎಂದು ಹೇಳುತ್ತದೆ. ಇಂತಾ ದೇಹವನ್ನು ನಾನು ಹೇಗೆ ಕಾಪಾಡಬೇಕು? ಭಗವಂತನ ಆವಾಸ ಸ್ಥಾನವಾಗಿರುವ ದೇಹವನ್ನು ದೇವಾಲಯವೆಂದು ಭಾವಿಸಿದಾಗ ನಮ್ಮ ಶರೀರದ ಬಗ್ಗೆ ನಮಗೆ ಹೇಗೆನಿಸುತ್ತದೆ?
ಈ ದೇಹವನ್ನು ದೇವಾಲಯವೆಂದು ಭಾವಿಸಿದಾಗ ಅದನ್ನು ಅಡ್ಡಾದಿಡ್ಡಿ ಬೆಳೆಸುತ್ತೇವೆಯೇ? ಸುಂದರವಾಗಿ .ಪವಿತ್ರಭಾವನೆಯಿಂದ ಬೆಳೆಸಬೇಕಾಗುತ್ತದೆ. ನಾವು ಈ ದೇಹಕ್ಕಾಗಿ ಮಾಡುವ ಪ್ರತಿಯೊಂದು ಕರ್ಮವೂ ಯಜ್ಞಭಾವನೆಯಿಂದ ಮಾಡಬೇಕಾಗುತ್ತದೆ.ನಾವು ಈಗ ಸಧ್ಯದ ಪರಿಸ್ಥಿತಿಯಲ್ಲಿ ಹೇಗಿದ್ದೇವೆಂದು ಸ್ವಲ್ಪ ವಿಚಾರ ಮಾಡಿದರೆ ನಮಗೆ ಹೇಗೆನ್ನಿಸೀತು!
ಪ್ರಾತಃಕಾಲದಲ್ಲಿ ಏಳುವಾಗಲೇ ಕಾಫಿ ಕೊಡಮ್ಮಾಎಂದು ಕೇಳುತ್ತಲೇ ಹಾಸಿಗೆಯಿಂದ ಏಳುವ ಮಗ ಕಾಫಿ ಆಗಿದೆಯಾ? ಎಂದು ಹಾಸಿಗೆಯಿಂದಲೇ ಕೇಳುವ ಮನೆಯ ಯಜಮಾನ, ಮುಖಕ್ಕೆ ನೀರೆರಚಿ ದರ್ಶಿನಿ ಗೆ ಧಾವಿಸುವ ಜನರು!! ಇದೆಲ್ಲಾ ನಿತ್ಯ ದೃಶ್ಯವಲ್ಲವೇ? ಸಾಮಾನ್ಯವಾಗಿ ನಮ್ಮ ದೇಹವನ್ನು ನಾವು ಯಂತ್ರವೆಂದು ಭಾವಿಸಿಲ್ಲವೇ? ಹಲವರು ಹೇಳುವುದುಂಟು ಪೆಟ್ರೋಲ್ [ಕಾಫಿ] ಹಾಕದೆ ತಲೆಯೇ ಓಡುವುದಿಲ್ಲ ಈ ಯಂತ್ರವನ್ನು ಚಾಲನೆಯಲ್ಲಿರಿಸಲು ಇಂಧನ ಬೇಕಾಗಿದೆ, ಅದಕ್ಕಾಗಿ ಸಿಕ್ಕಿದ ಬಂಕ್‌ಗಳಲ್ಲಿ [ಹೊಟೆಲ್] ಇಂಧನ ತುಂಬಿಸಿಕೊಂಡರಾಯ್ತು. ನಮ್ಮ ಜೀವನ ಇಷ್ಟು ಯಾಂತ್ರಿಕವಾಗಿಲ್ಲವೇ?

No comments:

Post a Comment

If you have any doubts. please let me know...