September 8, 2021

ಜಿಪುಣ ಗುಂಡ 2000 ರೂ

#ವಿಧಿಯಾಟ

ಜಿಪುಣ ಗುಂಡ ಮೊದಲ ಬಾರಿಗೆ  ತನಗೆ ಕೆಲಸದಲ್ಲಿ  ಬಡ್ತಿ ದೊರೆತ ಕಾರಣ ಬೆಂಗಳೂರಿನ ಕೋಟೆ ಆಂಜನೇಯ ಸ್ವಾಮಿ ಗುಡಿಗೆ ದರ್ಶನಕ್ಕೆ ಹೋಗಿದ್ಧ. ಶನಿವಾರವಾದ ಕಾರಣ ವಿಪರೀತ ಜನ ಜಮಾಯಿಸಿದ್ದರು.

ಪೂಜೆಮುಗಿದು ಆರತಿತಟ್ಟೆ ಆತನ ಬಳಿ ಭಟ್ಟರು ತರುತ್ತಿದ್ದಂತೆ ಗುಂಡ ಜೋಬೆಲ್ಲಾ ತಡಕಾಡಿ 1 ರೂಪಾಯಿ ನಾಣ್ಯತೆಗೆದು  ಕಸಿವಿಸಿಯಿಂದಲೇ ಅದನ್ನು ಆರತಿ ತಟ್ಟೆಗೆ ಹಾಕಿದ. 

ಇತರರು 10 ರೂ, 50 ರೂ, 100 ರೂ ಹಾಕುತ್ತಿರುವುದನ್ನು ನೋಡಿ ಗುಂಡನಿಗೆ ತಾನು ಹಾಕಿದ್ದು ಕಡಿಮೆ ಆಯ್ತು ಎಂದು ಅನಿಸತೊಡಗಿತು. 

ಹಿಂದೆ ನಿಂತ ಸಾಧಾರಣ ಉಡುಪಿನ ಮಹಿಳೆಯೋರ್ವಳು ದೂರವಿದ್ದ ಕಾರಣ   ಅವಳಿಗೆ  ಆರತಿ ತಟ್ಟೆ ಕೈ ಎಟುಕುತ್ತಿರಲಿಲ್ಲ . ಅವಳು ಕೈಚಾಚುತ್ತ ಮುಂದೆ ನಿಂತ ಗುಂಡನತ್ತ 2000 ರೂಪಾಯಿನ ನೋಟು ಹಿಡಿದಾಗ , ಗುಂಡ ಅದನ್ನು ಪಡೆದು ತಕ್ಷಣವೇ ಆರತಿ ತಟ್ಟೆಗೆ ಹಾಕಿದ. ಭಟ್ಟರು ಧನ್ಯತಾ ಭಾವದಿಂದ ಗುಂಡನತ್ತ ನೋಡಿ ಮುಗುಳ್ನಕ್ಕು ಗುಂಡನಿಗೆ ಲಾಡು  ಪ್ರಸಾದದ ಒಂದು ದೊಡ್ಡ ಪೊಟ್ಟಣ  ನೀಡಿದ. ಗುಂಡನಿಗೆ ಒಳಗೊಳಗೆ ಖುಷಿ. ಯಾರೋ ಮಾಡಿದ ದಾನಕ್ಕೆ ತನಗೆ ಫಲ ಸಿಗುತ್ತಿದೆಯಲ್ಲ ಎಂದು!

ಹೊರಗೆ ಬಂದಾಗ 2000 ರೂಪಾಯಿ ದಾನ ಮಾಡಿದ ಹೆಂಗಸು ಎದುರಾದಾಗ ಗುಂಡ ಅವಳಿಗೆ -
" ತಗೋಳಿ ತಾಯಿ ಈ ಲಾಡು ಪ್ರಸಾದ. ನಿಜಕ್ಕೂ ಇದು ನಿಮಗೆ ತಲುಪ ಬೇಕಾದ್ದು. ಭಟ್ಟರು 2000 ರೂ ಹಣ ನಾನು ಹಾಕಿದ್ದು ಎಂದು ಭಾವಿಸಿ ನನಗೆ ಲಾಡು ಪ್ರಸಾದ ನೀಡಿದರು" ಎಂದಾಗ ಆ ಹೆಂಗಸು - " ಯಾವ 2000 ರೂಪಾಯಿ!? ಆ 2000 ರೂಪಾಯಿ ನನ್ನದಲ್ಲ. ನೀವು ಜೋಬಿನಿಂದ ಚಿಲ್ಲರೆ ತೆಗೆಯುವಾಗ ಕೆಳಗೆ ಬೀಳಿಸಿಕೊಂಡದ್ದು. ಅದನ್ನು ನಾನು ನಿಮಗೆ ತೆಗೆದು ಕೊಟ್ಟೆ ಅಷ್ಟೇ!" ಎಂದಾಗ ಗುಂಡನ ಮುಖ ನೋಡಬೇಕಿಷ್ಟೆ.

No comments:

Post a Comment

If you have any doubts. please let me know...