September 22, 2021

ಸಪ್ತ ಋಷಿಗಳ ರಾಜ್ಯಾಡಳಿತ

ಈ ಭೂಭಾಗವನ್ನು ಯಾರ‍್ಯಾರೋ ಆಳಿದ್ದಾರೆ ಆದರೆ ಪಾವಿತ್ರ್ಯವನ್ನು ಉಳಿಸಿಕೊಂಡ ಋಷಿಗಳೂ ಆಳಿದ್ದರು, ರಾಜನಾಗಿದ್ದು ಋಷಿಚರ್ಯೆ ಹೊಂದಿದವರೂ ಆಳಿದ್ದರು. ಅವರೇ ರಾಜರ್ಷಿ ಎನ್ನಿಸಿಕೊಂಡಿದ್ದರು. ಅದರ ಕುರಿತು ಚಿಕ್ಕದಾಗಿ ಒಂದಷ್ಟು . . . 

ಮಮದ್ವಿತಾ ಇದು ಋಗ್ವೇದದ ನಾಲ್ಕನೇ ಮಂಡಲದ ೪೨ ನೇ ಸೂಕ್ತ. ಪುರುಕುತ್ಸ ಎನ್ನುವವನ ಮಗನಾದ ತ್ರಸದಸ್ಯು ಎನ್ನುವವನು ಈ ಸೂಕ್ತದ ದ್ರಷ್ಟಾರ. ಈತ ಕೇವಲ ರಾಜನಾಗಿರಲಿಲ್ಲ ರಾಜರ್ಷಿ ಎನ್ನಿಸಿಕೊಂಡಿದ್ದ. ತನ್ನನ್ನೇ ಸ್ತುತಿಸಿಕೊಂಡ ಆರು ಋಕ್ಕಿಗಳಿ ಆತ್ಮವೇ ದೇವತೆ ಮಿಕ್ಕವು ಇಂದ್ರಾವರುಣ ಮಮದ್ವಿತಾ ರಾಷ್ಟ್ರಂ ಕ್ಷತ್ರಿಯಸ್ಯ ಎಂದು ಆರಂಭವಾಗುವ  ಮೊದಲ ಋಕ್ಕಿನಲ್ಲಿ. ನಾನು ಋಷಿಯಾಗಿದ್ದೇನೆ ನನ್ನ ಈ ರಾಷ್ಟ್ರದಲ್ಲಿ ಎರಡು ವಿಧದ ಆಡಳಿತಗಳಿವೆ. ಒಂದು ಈ ಭೂಮಿಯ ಆಡಳಿತವಾದರೆ ಇನ್ನೊಂದು ಸ್ವರ್ಗದ್ದು ಎಂದು ಹೇಳುತ್ತಾನೆ. ನಾನೇ ವರುಣನಾಗಿದ್ದು, ಜನರಿಗೆ ಅತೀ ಸಮೀಪಸ್ಥನಾಗಿದ್ದೇನೆ ಎನ್ನುವ ಈತ ನಾನು ಮಾಡಿದ ಕರ್ಮವನ್ನು ದೇವತೆಗಳೆಲ್ಲಾ ಸ್ವೀಕರಿಸುತ್ತಾರೆ ಎನ್ನುತ್ತಾ ತನ್ನ ಪ್ರಭುತ್ವವನ್ನು ಅತ್ಯಂತ ಹೆಮ್ಮೆಯಿಂದ ಹೇಳುವುದು ಸಿಗುತ್ತದೆ. ಇದನ್ನೇ ಕ್ಷಿತಿಸ್ವರ್ಗಭೇದೇನ ಎನ್ನುವುದು ಸಾಯಣಾಚಾರ್ಯರು. ಅಂದರೆ ಸ್ವರ್ಗಕ್ಕೂ ಭೂಮಿಗೂ ಎನ್ನುವ ಅರ್ಥವಾದರೂ ತ್ರಸದಸ್ಯು ಸ್ವರ್ಗಾಧಿಕಾರ ಹಿಡಿದಿದ್ದನೇ ಎನ್ನುವ ಸಂಶಯ ಕಾಡುತ್ತದೆ. ಆದರೆ ಸ್ವರ್ಗ ಸದೃಶ ಆಡಳಿತವನ್ನಂತೂ ಕೊಟ್ಟಿರಬಹುದು. ಇನ್ನು ಅದೇ ಮಂಡಲದ ೩೮ನೇ ಸೂಕ್ತದ ದ್ರಷ್ಟಾರ ವಾಮದೇವ ಮಹರ್ಷಿ. ದ್ಯಾವಾ ಪೃಥಿವಿ ಮತ್ತು ದಧಿಕ್ರಾವನ್ನು ಕುರಿತಾಗಿ ಸ್ತುತಿಸುವ ಈ ಸೂಕ್ತದಲ್ಲಿ ತ್ರಸದಸ್ಯುವಿನ ತಂದೆಯ ವಿಷಯ ಸಿಗುತ್ತದೆ. ಈ ತ್ರಸದಸ್ಯುವಿನ ತಂದೆ ಪುರುಕುತ್ಸ, ತಾಯಿ ಪುರುಕುತ್ಸಾನಿ. ಈ ಪುರುಕುತ್ಸ ಪೂರು ಎನ್ನುವ ವಂಶೀಯನಾಗಿದ್ದ ಎಂದು ಅಲ್ಲಲ್ಲಿ ಹೇಳಲ್ಪಟ್ಟಿದೆ.

ಪುರುಕುತ್ಸನ ಸಮಕಾಲೀನನಾಗಿ ಸುದಾಸ ಎನ್ನುವವನಿದ್ದ. ಈ ಪುರುಕುತ್ಸ ರಾಜನೂ ಹೌದು ಋಷಿಯೂ ಸಹ ಹೌದು. ಋಗ್ವೇದದ ಒಂದನೇ ಮಂಡಲದ ೬೩ನೇ ಸೂಕ್ತದಲ್ಲಿ ಬರುವ ಯತ್ಸುದಾಸೇ ವೃಥ ವರ್ಗಂಹೋ ರಾಜನ್ ಎನ್ನುವುದನ್ನು ಗಮನಿಸಿದರೆ ಸುದಾಸ ಮತ್ತು ಪುರುಕುತ್ಸ ಸಮಕಾಲೀನರು. ಇಂದ್ರನು ಯುದ್ಧಗಳಲ್ಲಿ ಇವರಿಬ್ಬರಿಗೂ ಸಹಾಯ ಮಾಡಿದ ಎನ್ನುವುದು ಈ ಋಕ್ಕಿನಿಂದ ತಿಳಿಯುತ್ತದೆ. ಆದರೆ ಇವರಿಬ್ಬರಲ್ಲಿಯೂ ಸಹ ಆಗಾಗ ಯುದ್ಧ ನಡೆಯುತ್ತಾ ಇರುತ್ತದೆ.
ಅಸ್ಮಾಕಮತ್ರ ಪಿತರಸ್ತ ಆಸನ್ ಸಪ್ತ ಋಷಯೋ ದೌರ್ಗಹೇ ಬಧ್ಯಮಾನೇ ಎನ್ನುವುದು ಋಗ್ವೇದದ ೪ನೇ ಮಂಡಲದ ೪೨ನೇ ಸೂಕ್ತದಲ್ಲಿ ಬರುತ್ತ್ತದೆ. ಪುರುಕುತ್ಸನು ಬಂಧಿತನಾದುದರಿಂದ ಅರಾಜಕವಾದ ಈ ದೇಶದಲ್ಲಿ ಪ್ರಸಿದ್ಧರಾದ ಸಪ್ತ ಋಷಿಗಳೂ ಸಹ ಪಾಲಕರಾದರು, ಪುರುಕುತ್ಸನು ಬಂಧಿತನಾದಾಗ ಅದೇ ಋಷಿಗಳು ಇಂದ್ರಾವರುಣರ ಅನುಗ್ರಹದಿಂದ ಪುರುಕುತ್ಸನ ಪತ್ನಿಯಲ್ಲಿ ಇಂದ್ರನಿಗೆ ಸಮಾನನಾದ ಶತ್ರುನಾಶಕನೂ, ದೇವತೆಗಳ ಸಾನ್ನಿಧ್ಯವುಳ್ಳವನೂ ಆದ ತ್ರಸದಸ್ಯವು ಜನಿಸುವಂತೆ ಮಾಡಿದರು. ಎನ್ನುವಲ್ಲಿ ಗಮನಿಸ ಬೇಕಾದ್ದು ಈ ದೇಶ ಸಪ್ತರ್ಷಿಗಳಿಂದ ಸಹ ಆಳಲ್ಪಟ್ಟಿತ್ತು ಎನ್ನುವುದು. 
ಈ ಋಕ್ಕಿನಲ್ಲಿ ಈ ಸೂಕ್ತದ್ರಷ್ಟಾರನಾದ ತ್ರಿಸದಸ್ಯುವು ಹೇಗೆ ಜನಿಸಿದ ಎನ್ನುವುದು ಹೇಳಲ್ಪಟ್ಟಿದೆ. ತ್ರಸದಸ್ಯುವಿನ ಹುಟ್ಟಿನ ಕುರಿತಾಗಿ ಭಾಷ್ಯಕಾರರು ಒಂದು ಸನ್ನಿವೇಶ ಹೇಳುತ್ತಾರೆ.

ಪುರುಕುತ್ಸಸ್ಯ ಮಹಿಷಿ ದೌರ್ಗಹೇ ಬಂಧನಸ್ಥಿತೇ ಎನ್ನುವಲ್ಲಿ ಪ್ರಾಚೀನ ಕಾಲದಲ್ಲಿ ದುರ್ಗಹಪುತ್ರನಾದ ಪುರುಕುತ್ಸನೆಂಬ ರಾಜನು ಯುದ್ಧ ಮಾಡುತ್ತಿರುವಾಗ ಶತ್ರುಗಳಿಂದ ಸೆರೆಹಿಡಿಯಲ್ಪಟ್ಟು ಬಂಧನಕ್ಕೊಳಗಾಗುತ್ತಾನೆ. ಆಗ ಪುರುಕುತ್ಸನನ್ನು ಸೆರೆಯಿಂದ ಬಿಡಿಸಲು ಸಾಧ್ಯವಾಗುವುದಿಲ್ಲ. ಪುರುಕುತ್ಸ ರಾಜನಿಗೆ ಮಕ್ಕಳಿಲ್ಲದ್ದರಿಂದ ಅವನ ಮಡದಿ ಪುರುಕುತ್ಸಾನೀ ಎಂಬ ರಾಜ ಪತ್ನಿಯು ತಮ್ಮ ರಾಜ್ಯವು ಅರಾಜಕವಾಗಿ ನಾಯಕನಿಲ್ಲದೇ ಶತ್ರುಗಳ ಪಾಲಾಗುತ್ತದೆ ಎಂದು  ಚಿಂತಿಸುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಯಾವುದೋ ಕಾರಣಕ್ಕಾಗಿ ಸಪ್ತ ಋಷಿಗಳು ಬರುತ್ತಾರೆ. ಪುರುಕುತ್ಸಾನಿಯು ಅವರನ್ನು ಆದರಾತಿಥ್ಯಗಳಿಂದ ಸತ್ಕರಿಸಿ ಪೂಜಿಸಿ ತನ್ನ ಮತ್ತು ತನ್ನ ಗಂಡನಿಗೊದಗಿದ ದುರವಸ್ಥೆಯ ಕಥೆಯನ್ನು ಹೇಳಿಕೊಳ್ಳುತ್ತಾಳೆ. ಆಗ ಸಪ್ತ ಋಷಿಗಳು ಆವಳ ಪೂಜಾ ಸತ್ಕಾರಗಳಿಂದ ಸಂತುಷ್ಟರಾಗಿ ಭಕ್ತಿಯಿಂದ ಇಂದ್ರಾವರುಣರನ್ನು ಸ್ತುತಿಸು ಎಂದು ಉಪದೇಶಮಾಡುತ್ತಾರೆ. ಅದರಂತೆ ಪುರುಕುತ್ಸಾನಿಯು ಇಂದ್ರಾವರುಣರನ್ನು ಬೇಡಿಕೊಳ್ಳುತ್ತಾಳೆ. ಅವರಿಂದ ತ್ರಸದಸ್ಯು ಎನ್ನುವ ಪುತ್ರನು ಹುಟ್ಟುತ್ತಾನೆ. ಇದು ಆತನ ಜನ್ಮ ವೃತ್ತಾಂತವಾದರೆ, ತನ್ನ ಜನ್ಮ ವೃತ್ತಾಂತವನ್ನು ತನ್ನ ತಾಯಿಯಿಂದ ತಿಳಿದು ತ್ರಸದಸ್ಯುವು ಈ ಅಸ್ಮಾಕಮತ್ರ ಪಿತರಸ್ತ ಎನ್ನುವ ಋಕ್ಕೂ ಮತ್ತು ಮುಂದಿನ ಪುರುಕುತ್ಸಾನೀ ಹಿ ವಾಮದಾಶದ್ದವ್ಯೇಭಿರಿಂದ್ರಾ ವರುಣಾ ನಮೋಭಿಃ ಎನ್ನುವಲ್ಲಿ ಸಹ ಹೇಳಿಕೊಂಡಿದ್ದಾನೆ. ಇಲ್ಲಿ ಗಮನಿಸಬೇಕಾದ ಹಲವು ಅಂಶಗಳಲ್ಲಿ ಪುರುಕುತ್ಸನೂ ಸಹ ದುರ್ಗಹ ಮತ್ತು ಗಿರಿಕ್ಷಿತ್ ಎನ್ನುವ ವಂಶದವನು. ಇನ್ನು ೮ನೇ ಮಂಡಲದ ೨೨ನೇ ಸೂಕ್ತದಲ್ಲಿ ಯೇಭಿಸ್ತೃಕ್ಷಿಂ ಎಂದು ಬಂದಿರುವುದರಿಂದ ತೃಕ್ಷಿ ಅಥವಾ ತೃಕ್ಷ, ತಾರ್ಕ್ಷ್ಯ ಎನ್ನುವವನೂ ಸಹ ಇದೇ ವಂಶದಲ್ಲಿದ್ದ ಎನ್ನುವುದು ಸಹ ತಿಳಿಯುತ್ತದೆ. ಇನ್ನು ೬ನೇ ಮಂಡಲದ ೪೬ನೇ ಸೂಕ್ತದಲ್ಲಿ ಯತ್ಪೂರೌ ಕಚ್ಚ ವೃಷ್ಣ್ಯಂ ಎನ್ನುವಲ್ಲಿ ಪುರುಕುತ್ಸ ಪೂರು ಎನ್ನುವ ವಂಶದವನು ಎಂದೂ ಸಹ ಹೇಳಿದೆ. ಈ ಪೂರು ಎನ್ನುವ ಜನಾಂಗ ನೆಲೆಸಿದ್ದು ಸರಸ್ವತೀ ನದೀಯ ತೀರದಲ್ಲಿ ಎಂದು ವಶಿಷ್ಠ ಮಹರ್ಷಿಯ ಪ್ರ ಕ್ಷೋದಸಾ ಎನ್ನುವ ೭ನೇ ಮಂಡಲದ ೯೫ ಮತ್ತು ವಶಿಷ್ಠ ಮಹರ್ಷಿಯ ಬೃಹದುಗಾಯಿಷೇ ಎನ್ನುವ ೯೬ನೇ ಸೂಕ್ತದಿಂದ ತಿಳಿದುಬರುತ್ತದೆ. ಮಿತ್ರಾತಿಥಿಯ ಮಗನಾದ ಕುರುಶ್ರವಣನೆನ್ನುವ ಕುರುವಂಶಸ್ಥ ರಾಜನೂ ಸಹ ಇದೇ ತ್ರಸದಸ್ಯುವಿನ ವಂಶಸ್ಥ ಎನ್ನುವುದು ಹತ್ತನೇ ಮಂಡಲದಲ್ಲಿ ಕವಷ ಐಲೂಷನ ೩೩ನೇ ಸೂಕ್ತದ ೪ ಮತ್ತು ೫ನೇ ಋಕ್ಕಿನಲ್ಲಿ ಕುರುಶ್ರವಣ ಮತ್ತು ತ್ರಸದಸ್ಯುವನ್ನು ದೇವತೆಯನ್ನಾಗಿ ಸ್ತುತಿಸುವುದು ತಿಳಿಯುತ್ತದೆ. 
ಇಲ್ಲಿ ನಾನು ಗಮನಿಸ ಹೊರಟದ್ದು ಈ ದೇಶವನ್ನು ಕೇವಲ ಕ್ಷತ್ರಿಯ ವಂಶದವರು ಆಳಿದ್ದಿಲ್ಲ, ಇಲ್ಲಿ ಋಷಿಪರಂಪರೆಯಿಂದ ರಾಜಕೀಯ ಮತ್ತು ರಾಜಕಾರಣ ಹರಿದು ಬಂದಿದೆ ಎನ್ನುವುದಕ್ಕೆ ಸಿಗುವ ನಿದರ್ಶನಗಳಲ್ಲಿ ಇದೇ ಸಪ್ತರ್ಷಿಗಳು ಪುರುಕುತ್ಸನ ಸಾಮ್ರಾಜ್ಯವನ್ನು ಆಳಿದ ಉಲ್ಲೇಖವನ್ನು. 

#ಸದ್ಯೋಜಾತರು

No comments:

Post a Comment

If you have any doubts. please let me know...