ಮುತ್ತೈದೆಯರು ಬಯಸುವ ಅಷ್ಟ ಸೌಭಾಗ್ಯಗಳನ್ನು ನೀಡಲು ಸಾಕ್ಷಾತ್ ಶಿವನ ಪತ್ನಿ ಗೌರಿಯು ಭೂಲೋಕಕ್ಕೆ ಬರುವ ದಿನವೇ ಭಾದ್ರಪದ ಮಾಸದ ಅಷ್ಟಮಿ ತಿಥಿ. ಭಾದ್ರಪದ ಮಾಸವೆಂದರೆ ಶಿವನ ಪರಿವಾರವೇ ಭೂಲೋಕಕ್ಕೆ ಬಂದು ಪೂಜೆಗೊಳ್ಳುವ ಮಾಸ. ಚತುರ್ಥಿಯೆಂದು ಗಣಪನಿಗೆ ಪೂಜೆಯಾದರೆ, ಅಷ್ಟಮಿಯಂದು ಗೌರಿಗೆ ಪೂಜೆ. ರಾಜ್ಯದೆಲ್ಲೆಡೆ ಗೌರಿಯನ್ನು ಭಕ್ತಿಭಾವಗಳಿಂದ ಪೂಜಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಆಚರಿಸಲ್ಪಡುವ ಅಷ್ಟಮಿ ಗೌರಿ ಪೂಜೆ ವಿಶೇಷ ಮತ್ತು ವಿಭಿನ್ನವಾದುದು. ಇಲ್ಲಿನ ಆಚರಣೆ ಮಹಾರಾಷ್ಟ್ರದ ಸಂಪ್ರದಾಯದ ಪ್ರಭಾವಕ್ಕೆ ಒಳಪಟ್ಟಿದೆ. ಮೂರು ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಅಷ್ಟಮಿ ತಿಥಿಯ ಅನುರಾಧಾ ನಕ್ಷತ್ರದಂದು ಗೌರಿಯನ್ನು ಆಹ್ವಾನಿಸುತ್ತಾರೆ. ಅಂದು ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ, ಹೂ, ಹಣ್ಣು, ಅರಿಶಿಣ, ಕುಂಕುಮ, ಗಂಧ ಅಕ್ಷತೆ ಮತ್ತು ಆರತಿಯೊಂದಿಗೆ ಬಾವಿ ಅಥವಾ ನೀರಿನ ಮೂಲವಿರುವ ಸ್ಥಳಕ್ಕೆ ಹೋಗಿ ಐದು ಚಿಕ್ಕ ಚಿಕ್ಕ ಕಲ್ಲುಗಳನ್ನಿಟ್ಟು ಗಂಗೆಯನ್ನು ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ಐದು ತರಹದ ಹೂ ಎಲೆಗಳು, ಅಂದರೆ ಅರಿಶಿಣ, ಮಾವು, ಸಂಪಿಗೆ, ವೀಳ್ಯದೆಲೆ ಹಾಗೂ ಗೌರಿ ಹೂವನ್ನು ನೀರು ತುಂಬಿದ ತಾಮ್ರದ ಕಳಶದಲ್ಲಿಟ್ಟು, ಮನೆಯಲ್ಲಿರುವ ಕುಮಾರಿಯು ಗೌರಿಯನ್ನು ಆಹ್ವಾನಿಸುತ್ತಾಳೆ. ಪೂಜೆ ಮಾಡಿ ತಂದ ಕಳಶವನ್ನು ಗಣಪತಿಯ ಪಕ್ಕದಲ್ಲಿಡುತ್ತಾರೆ. ಅಂದು ಗೌರಿಗೆ ಐದು ತರಹದ ಸೊಪ್ಪುಗಳಿಂದ ಪಲ್ಯ ಮತ್ತು ಜೋಳದ ಭಕ್ರಿ (ರೊಟ್ಟಿ)ಯನ್ನು ನೈವೇದ್ಯ ಮಾಡುತ್ತಾರೆ.
ಎರಡನೆಯ ದಿನ ಜ್ಯೇಷ್ಠಾ ನಕ್ಷತ್ರದಂದು ಜ್ಯೇಷ್ಠಾ ಗೌರಿಯ ಪೂಜೆ ನಡೆಯುತ್ತದೆ. ಹೊಸ ಮಡಿಕೆಗೆ ಅಲಂಕಾರ ಮಾಡಿ ಗೌರಿಯ ಮೂರ್ತಿಯನ್ನು ಕೂಡಿಸಿ ಹೊಸ ಸೀರೆ, ಕುಪ್ಪಸ, ಆಭರಣಗಳನ್ನು ತೊಡಿಸುತ್ತಾರೆ. ಗೆಜ್ಜೆವಸ್ತ್ರ, ಹೂ, ಹಾರ, ದಂಡೆಯಿಂದ ಗೌರಿಯನ್ನು ಅತ್ಯಂತ ಸುಂದರವಾಗಿ ಅಲಂಕಾರ ಮಾಡುತ್ತಾರೆ. ಅಂದು ಗೌರಿಗೆ ಪ್ರಿಯವಾದ ಹೋಳಿಗೆ, ಕರಿಗಡಬು, ಪಾಯಸ, ಕರ್ಜಿಕಾಯಿ, ಚಕ್ಕುಲಿ, ಕೋಡುಬಳೆ, ಜೋಳದ ವಡೆ, ಕೋಸಂಬರಿ ಹೀಗೆ ಹದಿನಾರು ತರಹದ ಪಕ್ವಾನ್ನಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ.
ಗೌರಿಯ ಉಡಿಯಲ್ಲಿ ಹೊಸ ಹತ್ತಿಯನ್ನು ಇಟ್ಟು ಪೂಜೆ ಮಾಡಿ ನೂಲು ತೆಗೆದು ದಾರಗಳನ್ನು ಮಾಡುತ್ತಾರೆ. ಬಂಧುಬಾಂಧವರನ್ನು ಆಹ್ವಾನಿಸಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.
ಮೂರನೆಯ ದಿನ ಮೂಲಾ ನಕ್ಷತ್ರದಂದು ನಿಸರ್ಗಪ್ರಿಯಳಾದ ಗೌರಿಗೆ ಮುತೆôದೆಯರೆಲ್ಲ ಸೇರಿ ಗರಿಕೆ, ವೀಳ್ಯದೆಲೆ, ಮಾವು, ಅರಿಶಿಣ, ಸಂಪಿಗೆ ಎಲೆ ಹಾಗೂ ಹೂಗಳಿಂದ ಹೊಸ ನೂಲಿಗೆ ಕಟ್ಟಿ ಜ್ಯೇಷ್ಠಾ ಗೌರಿಯ ಉಡಿಯಲ್ಲಿ ಇಡುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಮಕ್ಕಳು ಮತ್ತು ಪುರುಷರ ಹೆಸರಿಗೆ ಐದು ಎಳೆಯ ನೂಲಿನ ದಾರ ಮಾಡಿದರೆ, ಮನೆಯ ಮುತೆôದೆಯರು ಹನ್ನೊಂದು ಎಳೆ, ಹದಿನಾರು ಎಳೆ, ಇಪ್ಪತ್ತೊಂದು ಎಳೆ ಹೀಗೆ ವಿವಿಧ ಎಳೆಗಳ ಹಾರವನ್ನು ಮಾಡಿ ಅದಕ್ಕೆ ಪೂಜೆಗಿಟ್ಟ ಎಲ್ಲ ಮಂಗಳದ್ರವ್ಯಗಳಾದ ಅರಿಶಿಣ ಕೊಂಬು, ಎಲೆ ಕೊನ್ನರಿ, ರೇಷ್ಮೆ ನೂಲು, ಕಂಬಳಿ ನೂಲುಗಳನ್ನು ದಾರಕ್ಕೆ ಕಟ್ಟುತ್ತಾರೆ. ಇದನ್ನು ಅಷ್ಟಮಿ ದಾರ ಎಂದು ಕರೆಯುತ್ತಾರೆ. ಗೌರಿ ಹೆಸರಿನಲ್ಲಿ ದಾರವನ್ನು ಧರಿಸಿಕೊಂಡು ಅಖಂಡ ಸೌಭಾಗ್ಯ ನೀಡೆಂದು ಬೇಡಿಕೊಳ್ಳುತ್ತಾರೆ. ಅಂದು ಅನ್ನಬೆಲ್ಲ ನೈವೇದ್ಯ ಮಾಡಿ ಪ್ರಸಾದವನ್ನು ಅಂಗೈಗೆ ಕೊಡುತ್ತಾರೆ, ಪ್ರಸಾದವನ್ನು ಅಂಗೈಯಲ್ಲಿ ತೆಗೆದುಕೊಂಡವರು ಕೈ ತೊಳೆದುಕೊಳ್ಳದೆ ಧಾನ್ಯಗಳ ಚೀಲಗಳಿಗೆ ಅಥವಾ ಶೇಖರಿಸಿಟ್ಟ ಧಾನ್ಯಗಳಲ್ಲಿ ಕೈ ಒರೆಸುವುದರಿಂದ ಧಾನ್ಯ ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಅಂದು ಸಾಯಂಕಾಲ ಗೌರಿಯನ್ನು ವಿಸರ್ಜನೆ ಮಾಡುವುದರೊಂದಿಗೆ ಜ್ಯೇಷ್ಠಾ ಗೌರಿಯ ಆಚರಣೆ ಕೊನೆಗೊಳ್ಳುತ್ತದೆ.
ಪೂಜೆಯ ಹಿನ್ನೆಲೆ
ಭೂಮಿಯ ಮೇಲೆ ಅಸುರರು ದಾಳಿಮಾಡಿ, ಪುರುಷರನ್ನೆಲ್ಲ ಬಂಧನದಲ್ಲಿರಿಸಿ ಹಿಂಸಿಸುತ್ತಿದ್ದರು. ಆಗ ಮಹಿಳೆಯರೆಲ್ಲ ಸೇರಿ ಗೌರಿಯ ಬಳಿ ಬಂದು ರಾಕ್ಷಸರ ಬಂಧನದಲ್ಲಿರುವ ತಮ್ಮ ಪತಿಯರನ್ನು ರಕ್ಷಿಸಿ ಸೌಭಾಗ್ಯ ಕಾಪಾಡಬೇಕೆಂದು ಬೇಡಿಕೊಂಡರು. ಪಾರ್ವತಿಯು ಭಾದ್ರಪದ ಮಾಸದ ಅಷ್ಟಮಿಯ ದಿನ ರಾಕ್ಷಸರನ್ನು ಸಂಹರಿಸಿ ಬಂಧನದಲ್ಲಿರುವವರನ್ನು ರಕ್ಷಿಸುತ್ತಾಳೆ. ಆಗ ಎಲ್ಲ ಸುಮಂಗಲೆಯರು ತಮ್ಮನ್ನು ರಕ್ಷಿಸಿದ ಕೃತಜ್ಞತೆಗಾಗಿ ಗೌರಿಯನ್ನು ಶ್ರದ್ಧಾಭಕ್ತಿಯಿಂದ ಆಹ್ವಾನಿಸಿ ಅವಳನ್ನು ಸಿಂಗರಿಸಿ ತಮಗೂ ಅಖಂಡ ಸೌಭಾಗ್ಯ, ಧನ, ಧಾನ್ಯ, ಆರೋಗ್ಯ, ಬುದ್ಧಿ, ಶಾಂತಿ, ಸುಖವನ್ನು ಕರುಣಿಸೆಂದು ಪ್ರಾರ್ಥಿಸುತ್ತಾರೆ. ಗೌರಿಯನ್ನು ಪೂಜಿಸುವವರಿಗೆ ಅಷ್ಟೈಶ್ವರ್ಯ ನೀಡುವಳೆಂಬ ನಂಬಿಕೆಯೂ ಇದೆ.
No comments:
Post a Comment
If you have any doubts. please let me know...