September 8, 2021

ಸೂರ್ಯಾಯ ನಮಃ


ವಾತರಶನಾ ಎನ್ನುವ ಹೆಸರಿನಿಂದ ಕರೆಸಿಕೊಳ್ಳುವ ಋಷಿ ಮೊದಲು ಕಾಣಿಸಿಕೊಳ್ಳುವುದು ಋಗ್ವೇದದ ೧೦ನೇ ಮಂಡಲದಲ್ಲಿ. ಕೇಶಿ ಎನ್ನುವ ೧೩೬ನೇ ಸೂಕ್ತದಲ್ಲಿ. ಕೇಶಿನಃ ಎನ್ನುವ ದೇವತೆಯನ್ನು ಸ್ತುತಿಸುವ ಈ ಸೂಕ್ತ ದ್ರಷ್ಟಾರರು ವಾತರಶನಾ ಋಷಿಯ ಮಕ್ಕಳಾದ ಜೂತಿ, ವಾತಜೂತಿ, ವಿಪ್ರಜೂತಿ, ವೃಷಾಣಕ, ಕರಿಕ್ರತ, ಏತಶ ಮತ್ತು ಋಷ್ಯಶೃಂಗ ಎನ್ನುವ ಏಳು ಮಂದಿ. ಇವರು ಒಬ್ಬೊಬ್ಬರು ಒಂದೊಂದು ಋಕ್ಕಿಗೆ ದ್ರಷ್ಟಾರರು. ಈ ಸೂಕ್ತದ ಮೊದಲ ಋಕ್ಕು ಆರಂಭವಾಗುವುದೇ ಕೇಶ್ಯಗ್ನಿಂ ಕೇಶೀ ವಿಷಂ ಕೇಶೀ ಭಿಭರ್ತಿ ರೋದಸೀ ಎಂದು. ಕೇಶಃ ಎಂದರೆ ರೋಮಗಳು ಅಥವಾ ಕೂದಲುಗಳು ಎಂದು ಅರ್ಥ. ಕೇಶೀ ಕೇಶಾ ರಶ್ಮಯಃ ಎನ್ನುವುದು ನಿರುಕ್ತದಲ್ಲಿ ಯಾಸ್ಕ ಮಹರ್ಷಿಗಳು. ಅಂದರೆ ಕೇಶಾ ಎನ್ನುವುದು ಪ್ರಕಾಶ ಅಥವಾ ಕಿರಣಗಳನ್ನು ನಿರ್ದೇಶಿಸುತ್ತದೆ ಎನ್ನುತ್ತಾರೆ. ಕೂದಲುಗಳು ಅತ್ಯಂತ ಸಪೂರವಾಗಿ ಉದ್ದವಾಗಿರುವ ಕಾರಣಕ್ಕೆ ಕೇಶ ಎಂದು ಹೇಳುವುದಾದರೂ, ರಶ್ಮಿಗಳೂ ಸಹ ಅದೇ ರೀತಿಯಾಗಿರುವುದರಿಂದ ಕೇಶ ಎನ್ನುವುದಾಗಿ ಕರೆಯಲಾಗುತ್ತದೆ. ರಶ್ಮಿಗಳುಳ್ಳವನು ಕೇಶೀ ಅಥವಾ ಕೇಶ ಎನ್ನುವ ಅರ್ಥ ಬರುವುದರಿಂದ ಸೂರ್ಯನು ಕೇಶಿ ಅಥವಾ ಕೇಶ ಎಂದು ಕರೆಸಿಕೊಳ್ಳುತ್ತಾನೆ. ಅಗ್ನಿ, ಸೂರ್ಯ ಮತ್ತು ವಾಯು ಈ ಮೂರೂ ಜನ ಕೇಶಿಗಳೆಂದು ಕರೆಸಿಕೊಳ್ಳುವ ಕಾರಣ ಸೂಕ್ತ ದೇವತೆಗಳೂ ಅವರೇ. ಪ್ರಕಾಶಃ ಕಿರಣೈಃ ಕುರ್ವಂತಿ ಎಂದು ಬಂದಿರುವ ಬೃಹದ್ದೇಶಿ ೨:೬೫ರಲ್ಲಿ ಹೇಳುವಂತೆ ಸಾಯಂಕಾಲದಲ್ಲಿ ಅಸ್ತಮಾನವಾಗಿ ಕತ್ತಲೆಯುಂಟಾಗುತ್ತದೆ. ದೀರ್ಘವಾದ ಕತ್ತಲೆಯಲ್ಲಿ ವಾತಾವರಣ ಶಾಂತವಾಗುತ್ತದೆ. ಜೀವಿಗಳಿಗೆ ಸುಪ್ತ ಅವಸ್ಥೆ ಅದು. ಕತ್ತಲೆಯನ್ನು ಕಳೆದು ಪುನಃ ಚೈತನ್ಯವನ್ನು ಕೊಡಲಿಕ್ಕಾಗಿ ರಶ್ಮಿಯನ್ನು ಹರಸುವುಯದರಿಂದ ಸೂರ್ಯನನ್ನು ಕೇಶಿ ಎಂದು ಕರೆಯಲಾಗುತ್ತದೆ ಎನ್ನುವುದಾಗಿ ಬೃಹದ್ದೇಶಿಯಲ್ಲಿ ಹೇಳಲಾಗಿದೆ. ಇನ್ನು ಅದೇ ಬೃಹದ್ದೇಶಿಯಲ್ಲಿ ಹೇಳುವಂತೆ ಪಾರ್ಥಿವಾಗ್ನಿ(ಹೆಣಸುಡುವಾಗಿನ)ಅಗ್ನಿಯ ಜ್ವಾಲೆಯು ಎಲೆ ಎಳೆಯಾಗಿ ಕೇಶದಂತಿರುವುದರಿಂದ ಅಗ್ನಿಯನ್ನು ಕೇಶಿ ಎಂದು ಕರೆಯಲಾಗುತ್ತದೆ ಎನ್ನಲಾಗಿದೆ.

ಇನ್ನು ಈ ಸೂಕ್ತದ ಮೊದಲ ಋಕ್ಕನ್ನು ಗಮನಿಸೋಣ. ಕೇಶ್ಯಗ್ನಿಂ ಕೇಶೀ ವಿಷಂ ಕೇಶೀ ಭಿಭರ್ತಿ ರೋದಸೀ. . . .ಕೇಶೀದಂ ಜ್ಯೋತಿರುಚ್ಯತೇ ಎಂದು ಹೇಳಲಾಗಿದೆ. ಅಂದರೆ ಪ್ರಕಾಶಮಾನನಾಗಿ, ರಶ್ಮಿಯನ್ನು ಹೊಂದಿರುವ ಸೂರ್ಯನು ಹವಿಸ್ಸಿನಿಂದ ಅಗ್ನಿಯನ್ನು ಕಾಪಾಡುತ್ತಾನೆ. ಅದೇ ಸೂರ್ಯನು ನೀರನ್ನು ತನ್ನೆಡೆಗೆ ಸೆಳೆದುಕೊಂಡು ಸಲಹುತ್ತಾನೆ. ಆ ನೀರನ್ನೇ ಧರಿಸಿದ್ದಾನೆ. ಈ ಭೂಮಿ ಮತ್ತು ದೇವಲೋಕವನ್ನು ತನ್ನ ಆಕರ್ಷಣ ಶಕ್ತಿಯಿಂದ ಹಿಡಿದಿಟ್ಟುಕೊಂಡಿದ್ದಾನೆ. ತನ್ನ ಪ್ರಕಾಶದಿಂದ ಸ್ವರ್ಗಲೋಕವನ್ನು ಎಲ್ಲರಿಗೂ ಕಾಣುವಂತೆ ಬೆಳಗಿಸುತ್ತಾನೆ. ನಾವೇನು ಪ್ರಕಾಶಮಾನವಾದ ಒಂದು ಜಗತ್ತನ್ನು ಕಾಣುತ್ತೇವೆಯೋ ಅದೆಲ್ಲವೂ ಸೂರ್ಯಮಂಡಲವೇ ಆಗಿದೆ ಎನ್ನುವಲ್ಲಿ ಅದೆಷ್ಟು ವಿಷಯ ಸಿಗುತ್ತವೆ. ನಮ್ಮ ಭೂಮಿಯನ್ನು ಸಹ ಸೂರ್ಯ ತಾನೇ ನಿಯಂತ್ರಿಸುತ್ತಾನೆ ಎನ್ನುವ ವಿಷಯ ಆಶ್ಚರ್ಯ ಹುಟ್ಟಿಸುತ್ತದೆ. ಇಲ್ಲಿ ಋಕ್ಕಿನ ಕೊನೆಯ ವಾಕ್ಯವನ್ನು ಗಮನಿಸಿದರೆ ಅದೆಷ್ಟು ವಿಷಯ ಅಡಕವಾಗಿದೆ. ಈ ಜಗತ್ತೇನೋ ಇದೆ. ಜಗತ್ತನ್ನು ನೋಡಲು ಕಣ್ಣುಗಳಿವೆ. ಅನುಭವಿಸಲು ಇಂದ್ರಿಯಗಳಿವೆ. ಆದರೆ ಸೂರ್ಯನ ಪ್ರಕಾಶವೇ ಇರದಿದ್ದರೆ ಕಣ್ಣಿದ್ದೂ ವ್ಯರ್ಥ ಎನ್ನುವ ಅಭಿಪ್ರಾಯ ಗಮನಿಸಿದರೆ ಜಗತ್ತಿನ ನಿಯಂತ್ರಣ ಇರುವುದೇ ಸೂರ್ಯನಲ್ಲಿ. ಇಲ್ಲಿ ಕೇಶಿನಃ ಎಂದು ಕರೆದಿರುವುದು ಮೂವರನ್ನು. ಮೊದಲನೆಯದಾಗಿ ಅಗ್ನಿ, ಎರಡನೆಯದಾಗಿ ಸೂರ್ಯ, ಮೂರನೆಯದಾಗಿ ವಾಯು. ಈ ಮೂವರೂ ಕಾಲದ ಸಂಕೇತಗಳು. ಇವರು ಆಯಾಯ ಕಾಲಕ್ಕೆ ಕರ್ತವ್ಯ ನಿರ್ವಹಿಸುವರು. ಭೂಮಿಯಲ್ಲಿನ ದಹನ ಕ್ರಿಯೆಯನ್ನು ಅಗ್ನಿ ನಿರ್ವಹಿಸಿದರೆ, ನಮಗೆ ಬೆಳಕನ್ನು ನೀಡಿ ಕಾಲ ಕಾಲಕ್ಕೆ ಮಳೆಯನ್ನು ಸುರಿಸುವ ಕಾರ್ಯವನ್ನು ಮಾಡುವವನು ಸೂರ್ಯನು. ಇನ್ನು ಸೂರ್ಯ ಮತ್ತು ಅಗ್ನಿ ಕಣ್ಣಿಗೆ ಕಾಣಿಸುವವರಾಗಿದ್ದು ವಾಯು ಮಾತ್ರ ಅನುಭವಕ್ಕೆ ಬರುವವನು. ವಾಯುವಿಲ್ಲದೇ ಯಾವ ಜೀವಿಯೂ ಬದುಕಲಾರದು. ಆದುದರಿಂದ ಕೇಶಿನಃ ಎಂದರೆ ಈ ಮೂವರ ಸಮಾಗಮವನ್ನು ಹೇಳಲಾಗಿದೆ. ಮುಂದಿನ ಋಕ್ಕಿನಿಂದ ವಿಷಯ ಬಹಳ ಆಳಕ್ಕಿಳಿಯುತ್ತದೆ. ಅದು ನಾಳೆಗೆ ಇರಲಿ.

#ಕೇಶಿ_ವಾತರಶನಾ 
ಸದ್ಯೋಜಾತರು

No comments:

Post a Comment

If you have any doubts. please let me know...