ಮಹಾಭಾರತದಲ್ಲಿ ಜತುಗೃಹಪರ್ವ ಎನ್ನುವ ಭಾಗವಿದೆ ಅಲ್ಲೊಂದು ಸನ್ನಿವೇಶವಿದೆ. ಶಕುನಿ, ದುರ್ಯೋಧನ,ದುಃಶಾಸನ,ಕರ್ಣ ಸೇರಿ ಪಾಂಡವರ ಸಂಹಾರಕ್ಕಾಗಿ ಕೆಟ್ಟ ಯೋಜನೆಯನ್ನು ಸಿದ್ಧಪಡಿಸುತ್ತಾರೆ. ಈ ಯೋಜನೆಗೆ ಒಪ್ಪಿಗೆಯನ್ನು ಪಡೆಯಲು ಅವರೆಲ್ಲರೂ ಧೃತರಾಷ್ಟ್ರನಲ್ಲಿಗೆ ಬರುತ್ತಾರೆ. ಕುಂತಿಯನ್ನು ಮಕ್ಕಳ ಸಮೇತ ಸುಡಬೇಕೆಂಬುದೇ ಅವರ ಯೋಜನೆಯಾಗಿತ್ತು. ಆ ಯೋಜನೆಗೆ ಧೃತರಾಷ್ಟ್ರನ ಅನುಮತಿಯೂ ಸಿಗುತ್ತದೆ. ಧೃತರಾಷ್ಟ್ರನ ತಮ್ಮನಾದ ವಿದುರನು ಈ ವಿಷಯ ತಿಳಿದುಕೊಳ್ಳುತ್ತಾನೆ. ವಿದುರನು ಕುಂತಿಯು ಮಕ್ಕಳೊಡನೆ ಅಲ್ಲಿಂದ ತಪ್ಪಿಸಿಕೊಳ್ಳುವುದೇ ಆ ಸಮಯದಲ್ಲಿ ಸೂಕ್ತವೆಂದು ನಿಶ್ಚಯಿಸುತ್ತಾನೆ. ವಿದುರನು ಅವರು ತಪ್ಪಿಸಿಕೊಳ್ಳಲಿಕ್ಕಾಗಿಯೇ ಉಪಾಯಮಾಡುತ್ತ್ತಾನೆ.
ತತೋ ವಾತಸಹಾಂ ನಾವಂ ಯನ್ತ್ರ ಯುಕ್ತಾಂ ಪತಾಕಿನೀಮ್ |
ಊರ್ಮಿಕ್ಷಮಾಂ ದೃಢಾಂ ಕೃತ್ವಾ ಕುನ್ತೀಮಿದಮುವಾಚ ಹ || ೫ || ಸುಂಟರಗಾಳಿಯನ್ನೂ ಅಲೆಗಳನ್ನೂ ತಡೆದುಕೊಳ್ಳಲು ಸಮರ್ಥವಾದ, ಯಂತ್ರಯುಕ್ತವಾದ, ಧ್ವಜಯುಕ್ತವಾದ ಮತ್ತು ಹೆಚ್ಚು ದೃಢವಾದ ನಾವೆಯೊಂದನ್ನು ಸಿದ್ಧಗೊಳಿಸುತ್ತಾನೆ.
“ಕುಂತಿ! ನಾನೀಗ ನದಿಯಲ್ಲಿ ಸಿದ್ಧಪಡಿಸಿರುವ ನಾವೆಯು ಅಲೆಗಳನ್ನೂ ಮತ್ತು ಬಿರುಗಾಳಿಯನ್ನೂ ತಡೆದುಕೊಳ್ಳಲು ಅತ್ಯಂತ ಸಮರ್ಥವಾಗಿದೆ. ನೀನು ಈ ನೌಕೆಯಲ್ಲಿ ಮಕ್ಕಳೊಡನೆ ಕುಳಿತು ತಪ್ಪಿಸಿಕೋ.” ಎನ್ನುವ ವಿದುರನ ನಿರ್ದೇಶನದಂತೆ ಮಕ್ಕಳೊಡನೆ ನಾವೆಯಲ್ಲಿ ಕುಳಿತು ಗಂಗಾನದಿಯಲ್ಲಿ ಬಹಳ ದೂರದವರೆಗೆ ಪ್ರಯಾಣ ಮಾಡಿದಳು. ಅನಂತರ ವಿದುರನು ಮೊದಲೇ ಸೂಚಿಸಿದ್ದಂತೆ ಪಾಂಡವರು ಆ ನಾವೆಯನ್ನು ಗಂಗಾನದಿಯಲ್ಲೇ ಬಿಟ್ಟು, ಕೌರವರು ಕೊಟ್ಟಿದ್ದ ಹಣವನ್ನೂ ತೆಗೆದುಕೊಂಡು ಅರಣ್ಯವನ್ನು ಪ್ರವೇಶಿಸುತ್ತಾರೆ. ಅವರು ವಾಸಿಸುತ್ತಿದ್ದ ಅರಗಿನ ಮನೆಗೆ ಕಾರಣಾಂತರದಿಂದ ಒಬ್ಬ ನಿಷಾದಿಯು ತನ್ನ ಐವರು ಮಕ್ಕಳೊಡನೆ ಅಂದೇ ಅಲ್ಲಿ ತಂಗುತ್ತಾಳೆ, ಅರಗಿನಮನೆಯೊಡನೆ ಭಸ್ಮೀಭೂತಳಾಗುತ್ತಳೆ. ಬೆಂಕಿಯಿಡಲೆಂದೇ ಬಹಳ ದಿವಸಗಳಿಂದಲೂ ಹೊಂಚುಹಾಕುತ್ತಿದ್ದ, ಪುರೋಚನನೂ ಭಸ್ಮವಾಗಿ ಹೋಗುತ್ತಾನೆ. ಇಲ್ಲಿನ ಕಥೆಯನ್ನು ಗೌಣವಾಗಿಸಿ ನೋಡಿ. ಆದರೆ, ಇಲ್ಲಿ ನಾವೆಯೊಂದರ ಉಲ್ಲೇಖ ಬರುತ್ತದೆ. ನಾವೆ ಸಾಮಾನ್ಯವಾದ ನಾವೆಯಲ್ಲ. ಅದು ಮೆಷೀನ್ ಬೋಟ್. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ್ದ ಬೋಟ್ ಅದು. ಬಿರುಗಾಳಿಯನ್ನು ಮತ್ತು ಅಲೆಗಳನ್ನು ಸಮರ್ಥವಾಗಿ ಎದುರಿಸಿ ಸಾಗಬಲ್ಲ ತಂತ್ರಜ್ಞಾನ ಆ ಕಾಲಕ್ಕೆ ಅಭಿವೃದ್ಧಿಗೊಂಡಿತ್ತ್ತು ಎನ್ನುವುದನ್ನು ನನ್ನ ಮುಂದಿನ ನಿದರ್ಶನಕ್ಕೆ ಪುಷ್ಟಿ ಕೊಡುತ್ತದೆ.
ಇದು ಋಗ್ವೇದದ ಒಂದನೇ ಮಂಡಲದ ನೂರ ಹದಿನರನೇ ಸೂಕ್ತದ ನಿದರ್ಶನ.
ತ್ಯುಗ್ರೋ ಹ ಭುಜ್ಯುಮಶ್ವಿನೋದಮೇಘೇ ರಯಿಂ ನ ಕಶ್ಚಿನ್ಮಮೃವಾ ಅವಾಹಾಃ |
ತಮೂಹಥುರ್ನೌಭಿರಾತ್ಮನ್ವತೀಭಿರಂತರಿಕ್ಷಪ್ರುದ್ಭಿರಪೋದಕಾಭಿಃ || ಇಲ್ಲಿ ’ನೌಭಿಃ’ ಎನ್ನುವುದು ನೌಕೆಗೆ. ಅದರ ಕುರಿತಾಗಿಯೇ ಇಲ್ಲಿ ಸ್ವಲ್ಪ ಹೇಳುತ್ತೇನೆ. ಹಿಂದೆ ತುಗ್ರ ಎನ್ನುವ ರಾಜರ್ಷಿಯೊಬ್ಬ ಅಶ್ವಿನೀ ದೇವತೆಗಳಿಗೆ ಮಿತ್ರನಾಗಿದ್ದ. ಸಮುದ್ರ ಮಧ್ಯದ ದ್ವೀಪದಲ್ಲಿದ್ದ ಈತನ ವೈರಿಗಳು ಈತನಿಗೆ ಪದೇ ಪದೇ ಉಪಟಳ ಕೊಡುತ್ತಿದ್ದರು. ಅವರನ್ನು ಹೇಗಾದರೂ ಮಾಡಿ ನಿಗ್ರಹಿಸಬೇಕೆಂದು ತನ್ನ ಮಗ ಭುಜ್ಯುವನ್ನು ಕರೆದು ಯುದ್ಧಕ್ಕೆ ಹೋಗಲು ತಿಳಿಸುತ್ತಾನೆ. ಭುಜ್ಯುವು ಸೈನಿಕರೊಂದಿಗೆ ನಾವೆಯಲ್ಲಿ ಹೊರಡುತ್ತಾನೆ. ನಾವೆ ಅಂದರೆ ಅದು ಸ್ವಲ್ಪ ದೊಡ್ದದಾದ ಹಡಗಿನಂತಿರುವುದು. ನಾವೆಯಲ್ಲ್ಲಿ ಸಮುದ್ರಯಾನ ಮಾಡುತ್ತಿರುವಾಗ ಆ ನಾವೆಯು ತುಂಡಾಗಿ ಒಳಗೆ ನೀರು ಸೇರಿಕೊಳ್ಳುತ್ತದೆ. ಸಮುದ್ರದ ಮಧ್ಯದಲ್ಲಿದ್ದಾನೆ, ಎಲ್ಲೆಡೆ ನೀರು, ಜೊತೆಗೆ ಸಮುದ್ರದ ಅಲೆಗಳ ಅಬ್ಬರ. ಆಗ ತ್ಯೌಗ್ರನೆಂದು ಕರೆಯಲ್ಪಟ್ಟ ಭುಜ್ಯುವು ಅಶ್ವಿನೀ ದೇವತೆಗಳನ್ನು ಮೊರೆಹೋಗುತ್ತಾನೆ. ಅಶ್ವಿನೀ ದೇವತೆಗಳು ಅಲ್ಲಿಗೆ ಧಾವಿಸಿ ಸೈನ್ಯ ಸಹಿತನಾದ ಭುಜ್ಯುವನ್ನು ರಕ್ಷಿಸುತ್ತಾರೆ. ತಾವು ಕೊಂಡು ಹೋದ ನೌಕೆಯಲ್ಲಿ ಮೂರು ದಿನ ಹಗಲೂ ರಾತ್ರಿ ಪ್ರಯಾಣಿಸಿ ತುಗ್ರನ ಸಮೀಪಕ್ಕೆ ಭುಜ್ಯುವನ್ನು ತಂದು ಬಿಡುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶ ನೌಕೆ. ಇಲ್ಲಿ ಅಂತರಿಕ್ಷಪ್ರುದ್ಭಿಃ ಎಂದರೆ ಅಶ್ವಿನೀ ದೇವತೆಗಳ ನೌಕೆಗಳು ಬಹಳ ನಿರ್ಮಲವಾಗಿ ವಿಶಾಲವಾಗಿ ಮತ್ತು ಅತ್ಯಂತ ಹಗುರವಾಗಿದ್ದುದರಿಂದ ನೀರಿನ ಮೇಲುಗಡೆಯೇ ಸಂಚರಿಸುವ ಸಾಮರ್ಥ್ಯ ಹೊಂದಿದ್ದವಂತೆ. ಅಂದರೆ ಈ ನಾವೆ ನೀರಿಗೆ ತಾಗಿಯೂ ಸಂಚರಿಸಿತ್ತು. ನೀರಿನ ಅಡಿಯಲ್ಲಿಯೂ ಸಂಚರಿಸುವ ಸಾಮರ್ಥ್ಯ ಹೊಂದಿತ್ತು. ಹಾಗೇ ನೀರಿಗಿಂತ ಸ್ವಲ್ಪ ಮೇಲೆಯೂ ಸಂಚರಿಸುವ ಸಾಮರ್ಥ್ಯ ಹೊಂದಿತ್ತು ಎನ್ನಲಾಗಿದೆ. ಅಂದರೆ ಇಲ್ಲಿ ವೇದಗಳಲಲಿಯೂ ನಾವೆಯ ಬಳಕೆಯ ವಿಷಯ ಇದೆ. ಅದೂ ವಿಶೇಷ ವಿನ್ಯಾಸದ ನಾವೆಗಳಿದ್ದವು ಎಂದು ಋಗ್ವೇದದ ಕೆಲವೆಡೆ ಹೇಳಲಾಗಿದೆ. ಹಕ್ಕಿಯ ರೆಕ್ಕೆಯಂತೆ ರಚಿತವಾದ ನೌಕೆ ಸಹ ಇದ್ದವು. ಮುಂದೆ ಮಹಾಭಾರತದಲ್ಲಿ ಅರಗಿನ ಮನೆಯ ಪ್ರಸಂಗದಲ್ಲಿ ಯಾಂತ್ರೀಕೃತ ನಾವೆಯ ಬಳಕೆ ಕುಂತಿ ಮಾಡಿದ್ದಳು ಎನ್ನುವಲ್ಲಿ ಸಾರಿಗೆ ಸಂವಹನಕ್ಕೆ ಉಪಾಯಗಳು ಇದ್ದವು.
#ಯಂತ್ರಯುಕ್ತ_ನೌಕೆ
ಸದ್ಯೋಜಾತರು
No comments:
Post a Comment
If you have any doubts. please let me know...