ಋಗ್ವೇದದ ನಾಲ್ಕನೇ ಮಂಡಲದ ದೃಷ್ಟಾರ ಋಷಿ ವಾಮದೇವ ಎನ್ನುವವರು. ಗೋತಮ ಮಹರ್ಷಿಗಳ ಮಗನಾದ ಇವರು ಬ್ರಹ್ಮನ ಅಂಶವನ್ನು ಪಡೆದು ಕೊಂಡವರೆನ್ನುವುದು ಬ್ರಹದಾರಣ್ಯಕ ಉಪನಿಷತ್ತು ಹಾಗೂ ಶ್ರುತಿಗಳು. ಸುಮಾರು ೫೦೦ಕ್ಕೂ ಹೆಚ್ಚು ಋಕ್ಕುಗಳ ದೃಷ್ಟಾರರಾಗಿರುವ ವಾಮದೇವ ಮಹರ್ಷಿ ಬ್ರಹ್ಮಜ್ಞಾನ ಸಂಪಾದಿಸಿಕೊಂಡವರು. ಐತರೇಯ ಆರಣ್ಯಕದಲ್ಲಿ ಪ್ರಕಾಶಮಾನನಾದ ಸೂರ್ಯನೇ ಪರುಷರೂಪದಲ್ಲಿ ಕಂಗೊಳಿಸಿದಾಗ ’ಸರ್ವೇಷಾಂ ವಾಮ ಇತಿ ತಸ್ಮಾದ್ವಾಮದೇವ ತಸ್ಮಾದ್ವಾಮದೇವ ಇತಿ’ ದೇವತೆಗಳೆಲ್ಲರೂ ಈತ ತಮಗೆ ಪ್ರಿಯನಾಗಿರಬೇಕೆಂದು ಆಶಿಸಿದ್ದರಿಂದ ವಾಮದೇವ ಎನ್ನುವ ಹೆಸರು ಪಡೆದುಕೊಂಡ ಎನ್ನುವುದಾಗಿ ಬರುತ್ತದೆ.
ಗರ್ಭಸ್ಥನಾಗಿರುವಾಗಲೇ ಪ್ರಾಪಂಚಿಕ ಜ್ಞಾನವನ್ನು ಮತ್ತು ಆಗುಹೋಗುಗಳನ್ನು ಪಡೆದು ಕೊಂಡೆನು ಎನ್ನುವುದಾಗಿ ಈ ಮಹರ್ಷಿಯೇ ನಾಲ್ಕನೇ ಮಂಡಲದಲ್ಲಿ ಹೇಳಿಕೊಂಡಿರುವುದರಿಂದ ಈತ ಅಸಾಧಾರಣ ಎನ್ನುವುದು ತಿಳಿದು ಬರುತ್ತದೆ.
ಈ ಋಷಿಯ ಒಂದು ಸೂಕ್ತವನ್ನು ಇಲ್ಲಿ ಗಮನಿಸುತ್ತಿದ್ದೇನೆ. ಅಗ್ನಿ, ನೀರು, ತುಪ್ಪ, ಮತ್ತು ಗೋವುಗಳನ್ನು ಕುರಿತಾಗಿ ಸ್ತುತಿಸುವ ಈ ನಾಲ್ಕನೇ ಮಂಡಲದ ಸೂಕ್ತದಲ್ಲಿ . . . . .
ವಯಂ ನಾಮ ಪ್ರ ಬ್ರವಾಮಾ ಘೃತಸ್ಯಾಸ್ಮಿನ್ನಜ್ಞೇ ಧಾರಯಾಮಾ ನಮೋಭಿಃ |
ಉಪ ಬ್ರಹ್ಮಾ ಶೃಣವಚ್ಛಸ್ಯಮಾನಂ ಚತುಃಶೃಂಗೋ ವಮೀದ್ಗೌರ ಏತತ್ ||
ಯಜ್ಞವನ್ನು ಮಾಡುವ ನಾವು ತುಪ್ಪಕ್ಕಿರುವ ಪವಿತ್ರವಾದ ಹೆಸರನ್ನು ಸ್ತುತಿಸುತ್ತೇವೆ. ಮತ್ತು ಆ ತುಪ್ಪವನ್ನು ಬಳಸಿಕೊಂಡೇ ಯಜ್ಞವನ್ನು ಮಾಡುತ್ತೇವೆ. ನಾಲ್ಕು ಕೋಡುಗಳುಳ್ಳ (ಇಲ್ಲಿ ಶೃಂಗ ಎನ್ನುವ ಪದಕ್ಕೆ ಕನ್ನಡದಲ್ಲಿ ಕೋಡುಗಳು ಎಂದಾಗುತ್ತದೆ ಆಕೋಡುಗಳು ಎನ್ನುವುದನ್ನು ನಾಲ್ಕು ವೇದಗಳ ಕುರಿತಾಗಿ ತೆಗೆದುಕೊಳ್ಳಲಾಗಿದೆ. ಅಂದರೆ ನಾಲ್ಕು ವೇದಗಳನ್ನು ತಿಳಿದಿರುವ) ಬ್ರಹ್ಮದೇವನು ನಾವು ಪಠಿಸುತ್ತಿರುವ ಸ್ತುತಿಯನ್ನು ಆಲಿಸಿ ಕೇಳಲಿ. ಅರುಣವರ್ಣಾತ್ಮಕನಾದ ಸೂರ್ಯ ದೇವನು ಈ ಯಜ್ಞವನ್ನು ನಿರ್ವಹಿಸುತ್ತಾನೆ.
ಇಲ್ಲಿ ಬ್ರಹ್ಮಾ ಎನ್ನುವುದು ಋತ್ವಿಜರನ್ನು. ಚತುಃಶೃಂಗೋ ಅನ್ನುವುದು ನಾಲ್ಕು ವೇದಗಳನ್ನು ಅಧ್ಯಯನಮಾಡಿರುವವರು ಎಂದು ಅರ್ಥೈಸಿಕೊಳ್ಳಬೇಕು. ಯಜ್ಞವೊಂದು ಸಾಂಗವಾಗಿ ನಡೆಯಲು ಯಜ್ಞಕರ್ಮಗಳು ಲೋಪವಿಲ್ಲದಂತೆ ನಡೆಯುವುದರ ಜವಾಬ್ದಾರಿ ಈ ಬ್ರಹ್ಮ ಸ್ಥಾನದ ಋತ್ವಿಜನಿಗೆ ಇರುತ್ತದೆ. ಇನ್ನು ಮುಂದಿನ ಋಕ್ಕಿನಲ್ಲಿ . . . .
ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಾಸೋ ಅಸ್ಯ |
ತ್ರಿಧಾ ಬದ್ಧೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾನ್ ಆ ವಿವೇಶ ||
ಯಜ್ಞದ ಮೂಲ ಸ್ವರೂಪನಾದ ಅಗ್ನಿಗೆ ವೇದ ರೂಪವಾದ ನಾಲ್ಕು ಕೋಡುಗಳು(ಕೊಂಬು), ಪೂರ್ವಾಹ್ನ, ಮಧ್ಯಾಹ್ನ ಮತ್ತು ಸಾಯಂಕಾಲ ಎನ್ನುವ ಸವನ ತ್ರಯ ರೂಪವಾದ ಮೂರು ಪಾದಗಳು. ಬ್ರಹ್ಮೌದನ ಮತ್ತು ಪ್ರವರ್ಗ್ಯರೂಪಗಳಾದ ಎರಡು ತಲೆಗಳೂ, ಮತ್ತು ಛಂದಸ್ಸಿನ ರೂಪವಾದ ಏಳು ಹಸ್ತಗಳು. ಮಂತ್ರ, ಬ್ರಾಹ್ಮಣ, ಮತ್ತು ಕಲ್ಪ ಎಂಬ ಮೂರು ಪ್ರಕಾರಗಳಿಂದ ಬದ್ಧನಾದವನೂ ಸ್ತುತಿಕರ್ತರಿಗೆ ಇಷ್ಟಾರ್ಥಗಳನ್ನು ಕೊಡುವ ಈ ದೇವನು ಪ್ರಪಂಚದ ಎಲ್ಲಾ ಶಬ್ದಗಳಿಗೂ ಮೂಲರೂಪನು. ಮತ್ತು ಈ ದೇವನೇ ಪ್ರತಿಯೊಬ್ಬ ಮಾನವರಲ್ಲಿಯೂ ಜೀವಿಸಿದ್ದಾನೆ ಎನ್ನುವ ಅರ್ಥವನ್ನು ಕೊಡುತ್ತದೆ.
ನಿರುಕ್ತಕಾರರಾದ ಯಾಸ್ಕ ಮಹರ್ಷಿಗಳು ’ಚತ್ವಾರಿ ಶೃಂಗಾಃ’ ಎನ್ನುವುದನ್ನು ಯಜ್ಞಾತ್ಮಕನಾದ ಅಗ್ನಿಗೆ ನಾಲ್ಕು ಕೊಂಬುಗಳು. ಇಲ್ಲಿ ಕೊಂಬುಗಳೆಂದರೆ ವೇದಗಳು.
’ತ್ರಯೋ ಅಸ್ಯ ಪಾದಾಃ’ ಎನ್ನುವುದು ಪ್ರಾತಸ್ಸವನ, ಮಾಧ್ಯಂದಿನ ಸವನ, ಮತ್ತು ತೃತೀಯ ಸವನ ಎಂದು ಅರ್ಥೈಸಲಾಗಿದೆ.
’ದ್ವೇ ಶೀರ್ಷೇ’ ಎನ್ನುವುದು ಬ್ರಹ್ಮೌದನ ಮತ್ತು ಪ್ರವರ್ಗ್ಯ ಎನ್ನುವ ಯಜ್ಞಕರ್ಮಗಳು ಇದನ್ನೇ ಯಾಸ್ಕರು ಪ್ರಾಯಣೀಯ ಮತ್ತು ಉದಯನೀಯವೆನ್ನುವ ಎಂಬ ಎರಡು ಯಜ್ಞಕರ್ಮಗಳನ್ನು ವಿವರಿಸಿದ್ದಾರೆ.
’ಸಪ್ತ ಹಸ್ತಾಸೋ ಅಸ್ಯ’ ಎನ್ನುವುದನ್ನು ಏಳು ಛಂದಸ್ಸುಗಳಿಗೆ ಹೇಳಲಾಗಿದೆ. ಇದನ್ನೇ ಅಗ್ನಿಯ ಏಳು ಹಸ್ತಗಳೆಂದು ತಿಳಿಯಬೇಕು.
’ತ್ರಿಧಾ ಬದ್ಧಃ’ ಎಂದರೆ ಯಜ್ಞ ಕರ್ಮಗಳು ಬ್ರಾಹ್ಮಣ, ಕಲ್ಪ, ಮತ್ತು ಮಂತ್ರ ಎನ್ನುವ ಮೂರು ವಿಧವಾದ ನಿಯಮಗಳು.
ತೈತ್ತಿರೀಯ ಬ್ರಾಹ್ಮಣದಲ್ಲಿ ಋಚಾಂ ಪ್ರಾಚೀ ಮಹತೀ ದಿಗುಚ್ಯತೇ ಎಂದು ಉಲ್ಲೇಖಿಸಲಾಗಿದೆ. ಋಗ್ವೇದಕ್ಕೆ ಪೂರ್ವವೂ, ಯಜುರ್ವೇದಕ್ಕೆ ದಕ್ಷಿಣವೂ, ಸಾಮವೇದಕ್ಕೆ ಉತ್ತರವೂ ಅಥರ್ವವೇದಕ್ಕೆ ಪಶ್ಚಿಮವೆಂದೂ ನಾಲ್ಕು ಶೃಂಗಗಳನ್ನುದ್ದೇಶಿಸಿ ಹೇಳಲಾಗಿದೆ.
"ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾನ್ ಆ ವಿವೇಶ " ಎನ್ನುವುದನ್ನು ನಾನು ಇಲ್ಲಿ ಪುನಃ ಪ್ರಸ್ತಾಪಿಸುತ್ತೇನೆ. ಅಭೀಷ್ಟದಾಯಕನಾದ ಈ ದೇವನು ಓಂಕಾರನು. ಈ ಓಕಾರನು ಪ್ರಪಂಚದ ಎಲ್ಲಾ ಶಬ್ದಗಳಿಗೂ ಮೂಲರೂಪನು. ಮತ್ತು ಈ ದೇವನೇ ಪ್ರತಿಯೊಬ್ಬ ಮಾನವರಲ್ಲಿಯೂ ಜೀವಿಸಿದ್ದಾನೆ ಎನ್ನುವುದು ಈ ಋಕ್ಕಿನ ಅಭಿಪ್ರಾಯ.
ಹೌದು, ಪ್ರಣವಸ್ವರೂಪಿಯಾದ ಓಂಕಾರವು ಜಗತ್ತಿನ ಆದಿಯೂ ಹೌದು, ಇದು ಭಾಷೆಗಳಿಗೂ ಆದಿ. ಅನೇಕರು ಸಂಸ್ಕೃತವನ್ನು ಪ್ರಾಚೀನತೆಯಿಂದ ಅರ್ವಾಚೀನವಾಗಿಸುವ ಹವಣಿಕೆ ಮಾಡುತ್ತಾರೆ, ಆದರೆ ಇದನ್ನು ಗಮನಿಸಿದಾಗ. ಸಿಂಧೂ ಸರಸ್ವತೀ ನಾಗರೀಕತೆಯ ಕಾಲಕ್ಕೂ ಓಂಕಾರವನ್ನು ಅರ್ಥವತ್ತಾಗಿ ಚಿತ್ರಿಸಲಾಗಿದೆ. ಓಂಕಾರದಿಂದ ಲಿಪಿಯು ಹೇಗೆ ವಿಕಾಸ ಹೊಂದಿದೆ ಎಂದು ಗಮನಿಸಬಹುದಾಗಿದೆ.
ವೇದಗಳು ಮೌಖಿಕ ಪರಂಪರೆಯಲ್ಲಿ ಸಾಗಿ ಬಂದು ಶ್ರುತಿಗಳು ಎನ್ನಿಸಿಕೊಂಡವು, ಇವು ಬಾಯಿಯಿಂದ ಬಾಯಿಗೆ ಬಂದಂಥವುಗಳು. ಇವುಗಳು ಅಂದಿನಿಂದ ಇಂದಿನತನಕವೂ ಅದೇ ಮಾದರಿಯಲ್ಲಿ ಸಾಗಿ ಬಂದಿವೆ. ಹಾಗಾದರೆ ಲಿಪಿ ಹೇಗೆ ಉಗಮವಾಯಿತು.?
ಗಾಯತ್ರೇಣ ಪ್ರತಿಮಿಮೀತೇ ಅರ್ಕಮರ್ಕೇಣ ಸಾಮತ್ರೈಷ್ಟುಭೇನ ವಾಕಂ |
ವಾಕೇನ ವಾಕಂ ದ್ವಿಪದಾ ಚತುಷ್ಪದಾ ಅಕ್ಷರೇಣ ಮಿಮತೇ ಸಪ್ತವಾಣೀಃ | ೧: ೧೬೪ : ೨೪
ಇದು ಋಗ್ವೇದದಲ್ಲಿ ಬರುವ ಒಂದು ಋಕ್ಕು. ಏಳು ಛಂದಸ್ಸುಗಳು ಸಹ ಅಕ್ಷರರೂಪವನ್ನು ಹೊಂದುತ್ತವೆ. ಛಂದಸ್ಸುಗಳಲ್ಲಿ ಅಗ್ರಗಣ್ಯ ಗಾಯತ್ರೀ ಛಂದಸ್ಸಿಗೆ ಎಂಟು ಅಕ್ಷರಗಳು, (ತ್ರೈಷ್ಟುಭೇನ) ತ್ರಿಷ್ಟುಪ್ ಛಂದಸ್ಸಿಗೆ ಹನ್ನೊಂದು ಅಕ್ಷರಗಳು. ಜಗತೀ ಎನ್ನುವ ಛಂದಸ್ಸಿಗೆ ಹನ್ನೆರಡು ಅಕ್ಷರಗಳು. ಹಾಗೆಯೇ ಇಷ್ಟಿಷ್ಟು ಅಕ್ಷರಗಳಿಗೆ ಪಾದವೆಂದು. ಇಷ್ಟು ಪಾದಗಳಾದಲ್ಲಿ ಈ ಛಂದಸ್ಸಿನ ನಿರ್ಣಯ ಮಾಡಲಾಗುತ್ತದೆ. ಹೀಗೆ ಪಾದಗಳಿಗೆ ಛಂದಸ್ಸುಗಳಿಗೆ ಅಕ್ಷರಗಳೇ ಪ್ರಮಾಣ ಎಂದಾಯಿತು. ಹಾಗಾದರೆ ಅಕ್ಷರಗಳ, ಲಿಪಿಯ ಇತಿಹಾಸದ ಆರಂಭ ಯಾವಾಗಿನಿಂದ ಆರಂಭ ? ಇದನ್ನೆಲ್ಲಾ ಗಮನಿಸಿದರೆ ಈ ನೆಲದಲ್ಲಿ ಯಾವಾಗಲೋ ಲಿಪಿಯ ವಿಕಾಸ ಆಗಿರಲೇ ಬೇಕು. ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಇಂದ್ರನು ಭಾಷೆಯೊಂದಕ್ಕೆ ವ್ಯಾಕರಣ ಬರೆದ ಎನ್ನುವ ವಿಚಾರ ಬರುತ್ತದೆ, ದೇವತೆಗಳೆಲ್ಲಾ ಸೇರಿ ಇಂದ್ರನನ್ನು ಭಾಷೆಯೊಂದಕ್ಕೆ ವ್ಯಾಕರಣವನ್ನು ಬರೆಯಲು ಕೇಳಿಕೊಂಡರಂತೆ. ಇಂದ್ರನು ಪದ, ಪ್ರತ್ಯಯ, ವಾಕ್ಯಗಳನ್ನು ಬಿಡಿಸಿ ತಿಳಿಸುತ್ತಾನಂತೆ. ಅದಕ್ಕಾಗಿಯೇ ಇಂದಿಗೂ ಸಹ ವೈಯ್ಯಾಕರಣಿಗಳು ಇಂದಿಗೂ ಇಂದ್ರನನ್ನು ಮೊದಲಿಗೆ ನೆನಪಿಸಿಕೊಳ್ಳುತ್ತಾರೆ. ಶತಪಥ ಬ್ರಾಹ್ಮಣ ಮತ್ತು ಪಂಚವಿಂಶ ಬ್ರಾಹ್ಮಣದಲ್ಲಿಯೂ ಸಹ ಬಂಗಾರದ ತೂಕದ ಬಗ್ಗೆ ತಿಳಿಸುತ್ತದೆ. ಬ್ರಾಹ್ಮಣಗಳ ತರುವಾಯ ಬಂದ ಗೋಪಥದಲ್ಲಿಯೂ ಸಹ ಓಂಕಾರದ ಉಲ್ಲೇಖ ಸಿಗುತ್ತದೆ. ಅಲ್ಲಿ ಓಂಕಾರದ ಧಾತು,
"ಓಂಕಾರಂ ಪೃಚ್ಚಾಮಃ ಕೋ ಧಾತುಃ | ಕಿಂ ಪ್ರಾತಿಪದಿಕಂ ಕಿಂ ನಾಮಾ ಖ್ಯಾತಂ | ಕಿಂ ಲಿಂಗಂ ಕಿಂ ವಚನಂ | ಕಾ ವಿಭಕ್ತಿಃ ಕಃ ಪ್ರತ್ಯಯಃ | ಕಃ ಸ್ವರಃ ಉಪಸರ್ಗೋ ನಿಪಾತಃ ಕಿಂ | ವೈ ವ್ಯಾಕರಣಂ ವಿಕಾರಃ | ಕೋ ವಿಕಾರಿ ಕತಿ ಮಾತ್ರಃ | ಕತಿವರ್ಣಃ ಕತ್ಯಕ್ಷರಃ ಕತಿಪದಃ ಕಸ್ಸಂಯೋಗಃ | ಕಿಂ ಸ್ಥಾನಾನು ಪ್ರಧಾನುಕರಣಂ ಕಿಮುಚ್ಚಾರಯಂತಿ | ಕಿಂ ಛಂದಃ ಕೋವರ್ಣಃ ಇತಿ ಪೂರ್ತೀ ಪ್ರಶ್ನಾಃ || ೧ : ೨೪ ||" ಇದು ವರ್ಣಮಾಲೆಯ ಸಂಪೂರ್ಣ ವಿವರಣೆ.
ಯಜುರ್ವೇದದಲ್ಲಿ ಕೃಷ್ಣ ಮತ್ತು ಶುಕ್ಲ ಪ್ರಬೇಧಗಳಿವೆ ಶುಕ್ಲ ಯಜುರ್ವೇದದಲ್ಲಿನ ವಾಜಸನೇಯ ಸಂಹಿತೆಯಲ್ಲಿ ಅಕ್ಷರ, ಲೇಖನ ಸಾಮಗ್ರಿಗಳ ಉಲ್ಲೇಖ ಸಿಗುತ್ತದೆ, ಐತರೇಯದಲ್ಲಿಯೂ ಸಹ ಅಕ್ಷರಗಳ ಬಗ್ಗೆ ಉಲ್ಲೇಖ ಸಿಗುತ್ತದೆ ವರ್ಣಗಳ ಕುರಿತಾದ ವಿವರಣೆ ಸಿಗುತ್ತದೆ. ಪಾಣಿನಿ ತನ್ನ ಅಷ್ಟಾಧ್ಯಾಯಿಯಲ್ಲಿಯೂ ಲಿಪಿಯ ಕುರಿತಾಗಿ ಹೇಳಿದ್ದಾನೆ. ಇನ್ನು ಪುರಾಣದ ಕಾಲದಲ್ಲಿ ಮಹಾಭಾರತವನ್ನು ಗಣಪತಿಯು ಬರೆದ ಎನ್ನುವ ಮಾತಿದೆ, ಅಲ್ಲಿಗೆ ಲಿಪಿಯಂತೂ ಸಾರ್ವಕಾಲಿಕ ಅನ್ನಿಸುತ್ತದೆ. ಅದೇನೇ ಇರಲಿ ಅಕಾರ ಉ ಕಾರ ಮಕಾರದಿಂದ ಓಂಕಾರದ ಪ್ರಣವ ಹುಟ್ಟಿತಂತೆ . ಅಲ್ಲಿಗೆ ಲಿಪಿಯ ಇತಿಹಾಸದ ಆಳ ಬಹು ವಿಸ್ತಾರವಾಗಿದೆ.
#ಓಂಕಾರದ_ಪ್ರಣವ
- ಮೂಲ ಶ್ರೀ ಸದ್ಯೋಜಾತರು.
No comments:
Post a Comment
If you have any doubts. please let me know...