July 13, 2021

ಯಜ್ಞೋಪವೀತ(ಜನಿವಾರ) ಏಕೆ ಧರಿಸಬೇಕು?

ಯಜ್ಞೋಪವೀತ(ಜನಿವಾರ) ಏಕೆ ಧರಿಸಬೇಕು? ಯಾರು ಧರಿಸಬೇಕು? ಯಜುರ್ವೇದ-1-5= “ವಿಶ್ವಸಂಚಾಲನ ನಿಯಮ(ಋತ) ಎಂಬ ವ್ರತವನ್ನು ನಡೆಸುತ್ತಿರುವ ವ್ರತ ರಕ್ಷಕನೇ(ಪರಮಾತ್ಮನೇ)! ನಾನು ಸಹ ವಿಶ್ವಸಂಚಾಲನ ನಿಯಮಕ್ಕೆ ವಿರುದ್ಧವಲ್ಲದ, ಯಥಾರ್ಥ ಜ್ಞಾನದ, ಸತ್ಯಾಚರಣೆಯ ವ್ರತವನ್ನಾಚರಿಸುವೆನು, ಅದು ಸಿದ್ಧಿಸಲಿ”. ಅಂದರೇ ಪ್ರಕೃತಿ ನಿಯಮಾನುಸಾರದ ಆಚರಣೆಗಾಗಿ ಯಜ್ಞೋಪವೀತ ಧರಿಸಬೇಕು. ಪಾರಸ್ಕರ ಗೃಹ್ಯಸೂತ್ರ- 2-2-11= “ ಈ ಯಜ್ಞೋಪವೀತವು ಪಾಪದಿಂದ ದೂರವಿರುವುದಕ್ಕಾಗಿ, ಜಾಗೃತರಾಗಿ ಪ್ರಹಾರದಿಂದ- ಅಪಾಯದಿಂದ,  ರಕ್ಷಿಸಿ ಕೊಳ್ಳವುದಕ್ಕಾಗಿ, ಆಯು- ಆರೋಗ್ಯ- ಬಲ- ತೇಜಸ್ಸಿನ ಪ್ರಾಪ್ತಿಗಾಗಿ, ಶ್ರೇಷ್ಠತಮ ಕಾರ್ಯ ಮಾಡಲು ಪ್ರೇರಣೆಯನ್ನು ಪಡೆಯುವುದಕ್ಕಾಗಿ, ಆ ಮೂಲಕ ಪರಮಾತ್ಮ ನೊಂದಿಗೆ ಬೆಸೆಯುವುದಕ್ಕಾಗಿ, ಯಜ್ಞೋಪವೀತ ಧರಿಸಬೇಕು”. ಋಗ್ವೇದ-1-118-2= ತ್ರಿವಿಧ ಬಂಧನಗಳಿಂದ ಬಿಡುಗಡೆಗಾಗಿ, ತ್ರಿವಿಧ ಶುದ್ಧಿಗಾಗಿ, ತ್ರಿವಿಧ ಚಕ್ರದ ಪ್ರಾಪ್ತಿಗಾಗಿ ಯಜ್ಞೋಪವೀತ ಧರಿಸಬೇಕು. ಇಲ್ಲಿ ಮೂರು ಎಳೆಯ ವಿಚಾರವಿದೆಯೇ ಹೊರತೂ, ಆರು ಎಳೆಯದಿಲ್ಲ. 1ನೇ ಎಳೆ] ತ್ರಿವಿಧ ಬಂಧನ(ಋಣ) ಅ]ದೇವಋಣ= ಜನ್ಮಾರಂಭದಿಂದ  ಪಂಚತತ್ವಗಳಿಂದ ನಮ್ಮ ಶರೀರ ಬೆಳೆದಿರುವುದರಿಂದ, ಆ ಪಂಚ ಭೂತಗಳ ಶುದ್ಧಿಯನ್ನು ಉಳಿಸಿಕೊಳ್ಳುವ ವ್ಯವಹಾರ ಮಾಡುವ ಮೂಲಕ, ಅವುಗಳ ಋಣದ(ಸಾಲದ) ಮರುಪಾವತಿ ಮಾಡುವುದಕ್ಕಾಗಿ ಯಜ್ಞೋಪವೀತ ಧಾರಣೆ. ಆ]ಪಿತೃಋಣ= ನಮ್ಮ ಬಾಲ್ಯದಲ್ಲಿ ನಮ್ಮ ಪೋಷಣೆ ಮಾಡಿದ ಪಿತೃಗಳು(ತಂದೆ-ತಾಯಿ-ಪಾಲಕರ) ಜೀವಂತವಿರುವಾಗಲೇ ಅವರ ಸೇವೆಯನ್ನು ಶ್ರದ್ಧೆಯಿಂದ(ಶ್ರಾದ್ಧ) ಮಾಡಿ, ತೃಪ್ತಿ(ತರ್ಪಣ) ಪಡಿಸುವುದರ ಮೂಲಕ ಅವರ ಋಣದ(ಸಾಲದ) ಮರುಪಾವತಿ ಮಾಡುವುದಕ್ಕಾಗಿ ಯಜ್ಞೋಪವೀತ ಧಾರಣೆ. ಇ] ಋಷಿಋಣ= ನಮಗೆ ಜ್ಞಾನ- ತಿಳುವಳಿಕೆಗಳು ವಿವಿಧ ಮೂಲಗಳಿಂದ ಬಂದಿರುತ್ತವೆ. ಆ ಜ್ಞಾನ- ತಿಳುವಳಿಕೆಯನ್ನು ನಿಷುಲ್ಕವಾಗಿ, ಅಪೇಕ್ಷಿತರಿಗೆ ನೀಡುವುದರ ಮೂಲಕ ಋಷಿಋಣ(ಸಾಲದ) ಮರುಪಾವತಿ ಮಾಡುವುದಕ್ಕಾಗಿ ಯಜ್ಞೋಪವೀತ ಧಾರಣೆ. 2ನೇ ಎಳೆ] ತ್ರಿವಿಧ ಶುದ್ಧಿ= ಅ] ಮನಃಶುದ್ಧಿ=  ಪಾಪಕಾರ್ಯದ ಮೂಲವು ದುಷ್ಠಚಿಂತನೆಯಾಗಿದೆ. ಅದನ್ನು ಗಾಯತ್ರೀ ಮಂತ್ರದ ಜಪ(ಅರ್ಥ ಭಾವನೆ)- ಅನುಷ್ಠಾನ(ಆಚರಣೆ)ಯಿಂದ, ಪಾಪವನ್ನು ಚಿಂತನೆಯ ಹಂತದಲ್ಲೇ ಭಸ್ಮ ಮಾಡಲು ಯಜ್ಞೋಪವೀತ ಧಾರಣೆ. ಆ] ಮಾತು(ವಾಣಿ)= ಋಗ್ವೇದ-10-21-2= “ ಹಿಟ್ಟನ್ನು ಜರಡಿ ಹಿಡಿದು ಕಸ ಆದಿಯನ್ನು ತೊಲಗಿಸುವಂತೆ, ಬುದ್ಧಿಯುಪಯೋಗಿಸಿ ವ್ಯರ್ಥ- ಅಸತ್ಯ- ಅಪ್ರಿಯ ವಾಕ್ಯಗಳನ್ನು ತೊಲಗಿಸಿ, ಮಧುರ ವಾಣಿಯನ್ನಾಡುವ ಸಲುವಾಗಿ” ಯಜ್ಞೋಪವೀತ ಧಾರಣೆ. ಇ] ಮೈ(ಶರೀರ)= ಜ್ಞಾನೇಂದ್ರಿಯಗಳಿಂದ- ಕರ್ಮೇಂದ್ರಿಯಗಳಿಂದ ತನ್ನ ಮತ್ತು ಅನ್ಯ ಜೀವಿಗಳಿಗೆ ಹಿತವುಂಟು ಮಾಡುವ ಕಾರ್ಯವನ್ನು ಮಾಡುವುದಕ್ಕಾಗಿ ಯಜ್ಞೋಪವೀತ ಧಾರಣೆ. 3ನೇ ಎಳೆ] ತ್ರಿವಿಧ ಚಕ್ರಗಳಿಗಾಗಿ= ಅ] ಜ್ಞಾನಚಕ್ರ= ಸರ್ವಹಿತಕಾರಿ, ಸತ್ಯಜ್ಞಾನವನ್ನು ಪ್ರತಿನಿತ್ಯ ಹೆಚ್ಛಿಸಿಕೊಳ್ಳಬೇಕು. ಆ ಕಾರಣ ತಿಳಿಯದನ್ನು ತಿಳಿಯುವುದಕ್ಕಾಗಿ, ತಿಳಿದಿದ್ದನ್ನು ಹೆಚ್ಛು ಹೃದಯಸ್ಥ ಮಾಡಿಕೊಳ್ಳುವುದಕ್ಕಾಗಿ, ಆತ್ಮ- ಅನಾತ್ಮ ತತ್ವಗಳ ತಿಳುವಳಿಕೆಗಾಗಿ ಯಜ್ಞೋಪವೀತ ಧಾರಣೆ. ಆ] ಕರ್ಮಚಕ್ರ= ಅಹಿಂಸೆ- ಸತ್ಯಾಚರಣೆ- ಆಸ್ತೇಯ- ಬ್ರಹ್ಮಚರ್ಯ- ಅಪರೀಗ್ರಹ- ಶೌಚ- ಸಂತೋಷ- ತಪಃ- ಸ್ವಾಧ್ಯಾಯ- ಈಶ್ವರ ಪ್ರಣಿದಾನಾದಿ ಕಾರ್ಯ ಮಾಡುವುದಕ್ಕಾಗಿ ಯಜ್ಞೋಪವೀತ ಧಾರಣೆ. ಇ] ಉಪಾಸನಾ ಚಕ್ರ= ಸಹಮಾನವರ –ಸಹಜೀವಿಗಳ ಜೊತೆ ಮೈತ್ರೀಪೂರ್ಣ ವ್ಯವಹಾರ ಮಾಡುತ್ತಾ, ಸಕಲ ಜೀವಿಗಳಿಗೂ ಪರಮಾತ್ಮನೇ ಪಿತನೆಂದು (ಪಾಲಕನೆಂದು) ತಿಳಿದು, ಅವನ ಸಾನಿಧ್ಯಪಡೆದು ಶಾಂತಿ ಪಡೆಯುವುದಕ್ಕಾಗಿ ಯಜ್ಞೋಪವೀತ ಧಾರಣೆ. ಮೇಲೆ ತಿಳಿಸಿದಂತೆ, ವೇದಮಾರ್ಗದಲ್ಲಿ ನಡೆಯಲು ಸಾಧಕರೆಲ್ಲರೂ ಮೂರೆಳೆಯ ಯಜ್ಞೋಪವೀತವನ್ನು(ಜನಿವಾರ), ಸಾಂಕೇತಿಕವಾಗಿ- ಸಮವಸ್ತ್ರದಂತೆ ಧರಿಸಿ ಅನುಶಾಸನದಲ್ಲಿರಬೇಕೆಂಬುದು ಆರ್ಷ(ಋಷಿ) ಪರಂಪರೆ. ಆದರೂ ವೇದಾಧ್ಯಯನ- ವೇದಾಧಿಕಾರ ನಿರ್ಧಿಷ್ಠವಾಗಿ ಯಾರಿಗೆಂಬುದನ್ನು ನೋಡೋಣ, ಯಜುರ್ವೇದ- 26-2= ಈ ಮಂತ್ರದಲ್ಲಿ ಪರಮಾತ್ಮನು ಮಾನವರಿಗೆ ಹೇಳುತ್ತಿದ್ದಾನೆ! “ ಈ ಕಲ್ಯಾಣಕಾರಿ ವೇದವಾಣಿಯನ್ನು ಮಾನವ ಮಾತ್ರರಿಗಾಗಿ- ಸಮಸ್ತ ಜನರಿಗಾಗಿ, ಬ್ರಾಹ್ಮಣ, ಕ್ಷತ್ರೀಯ ಸ್ವಭಾವದವರಿಗಾಗಿ, ಶೂದ್ರ ಸ್ವಭಾವದವರಿಗಾಗಿ, ಧನ, ಧಾನ್ಯ ಸಂಪತ್ತಿನ ಸ್ವಾಮಿಯಾದ ವೈಶ್ಯ ಸ್ವಭಾವದವರಿಗಾಗಿ, ತನ್ನವರೆಂಬುವವರಿಗಾಗಿಯೂ, ಪರರೆಂಬುವವರಿ ಗಾಗಿಯೂ ಉಪದೇಶಿಸುತ್ತಿದ್ದೇನೆ. ಈ ನನ್ನ ಕಾಮನೆ ಸಮೃದ್ಧವಾಗಲಿ, ಜಗತ್ತು ನಮ್ರತೆಯಿಂದ ವೇದದತ್ತ ಬರಲಿ”. ಸಮಸ್ತ ಮಾನವರಿಗಾಗಿ, ವೇದ- ಯಜ್ಞೋಪವೀತ ಎಂದಾಯಿತು, ಆದರೂ ಸ್ತ್ರೀಯರಿಗಾಗಿಯೂ ಎಂಬುದು ಸರಿಯೇ? ನೋಡೋಣ- ವೇದಗಳಲ್ಲಿ “ಸ್ತ್ರೀಯರ ಸ್ಥಾನ”:- {ಅಥರ್ವವೇದ-11-1-17} “ಈ ನಾರಿಯರು ಶುದ್ಧರೂ-ಪುನೀತರೂ ಪೂಜನೀಯರೂ (ಸತ್ಕಾರಕ್ಕೆ ಯೋಗ್ಯರೂ) ಯಜ್ಞದ ಅಧಿಕಾರಿಣಿಯರು. ಇವರು ಶುಭ್ರರಾಗಿ ಹವನ-ದ್ರವ್ಯ ಸಮೇತ ಯಜ್ಞಕ್ಕೆ ಬರಲಿ.” 2,{ಋಗ್ವೇದ -8-33-19} “ವನಿತಾ ವರೇಣ್ಯಳು ಚತುರ್ವೇದಜ್ಞಳಾಗಿ ವಿರಾಜಿಸಬಲ್ಲಳು. 3,{ಅಥರ್ವವೇದ-11-5-18} “ಕನ್ಯೆಯು ಬ್ರಹ್ಮಚರ್ಯ ವ್ರತವನ್ನಾಚರಿಸಿದ ನಂತರ, ಯುವಕನಾದ ಪತಿಯನ್ನು ಸ್ವೀಕರಿಸುತ್ತಾಳೆ” (ತಾನೇ ಆರಿಸಿ ಕೊಳ್ಳುತ್ತಾಳೆ ಮತ್ತು ಸ್ತ್ರೀಗೆ ಬ್ರಹ್ಮಚರ್ಯಾಶ್ರಮ- ಯಜ್ಞೋಪವೀತ ಖಡ್ಡಾಯ) 4,{ಅಥರ್ವವೇದ-14-1-64} “ಓ ನವವಧು! ನಿನ್ನ ಮುಂದೆ- ಮಧ್ಯೇ-ಕಡೆಯಲ್ಲಿ ಯಾವಾಗಲೂ ವೇದಜ್ಞಾನ ಜೊತೆಗಿರಲಿ, ವ್ಯಾಧಿರಹಿತಳೂ- ದಿವ್ಯಶಕ್ತಿ ಸಂಪನ್ನ ಸಾಧನಗಳಿಂದ ಪೂರ್ಣವಾದ ಶರೀರವನ್ನು ಪಡೆದುಕೊಂಡು ಮಂಗಳಕಾರಿಣಿಯೂ- ಸುಖದಾಯಿನಿಯೂ ಆಗಿ ಪತಿಗೃಹದಲ್ಲಿ ವಿರಾಜಿಸು.”  5,{ಋಗ್ವೇದ-10-109-4} “ಸ್ತ್ರೀ ಯು ಉಪನೀತಳಾಗಿ (ಯಜ್ಞೋಪವೀತ/ ಜನಿವಾರ ಧರಿಸಿ) ಪರಮಾತ್ಮನ ವಿಚಾರದಲ್ಲಿ ಸ್ಥಿತಳಾಗಿ ಧರಿಸಲು ಕಷ್ಟಕರವಾದ ಯೋಗ್ಯತೆಯನ್ನು ಧರಿಸುತ್ತಾಳೆ.”

No comments:

Post a Comment

If you have any doubts. please let me know...