ಭಾರತೀಯ ಕಾನೂನಿನ ಪ್ರಕಾರ ಅಪರಾಧ ಮಾಡಿದವನ ಜೊತೆಗೆ ಅಪರಾಧಕ್ಕೆ ಪ್ರೇರಣೆ ಕೊಟ್ಟವನೂ ಅಪರಾಧಿಯಾಗಿರುತ್ತಾನೆ. ಅಪರಾಧದ ತೀವ್ರತೆಯ ಆಧಾರದಲ್ಲಿ ಶಿಕ್ಷೆಯೂ ಕೊಡಲ್ಪಡುತ್ತದೆ. ಅದೇನೇ ಇರಲಿ ಈ ರೀತಿಯ ವ್ಯವಸ್ಥೆಗೆ ಪೂರಕವಾದ ಒಂದು ಕಥೆ ಮಹಾಭಾರತದಲ್ಲಿ ಸಿಗುತ್ತದೆ. ಅಪರಾಧಕ್ಕೆ ಪ್ರೇರಕನಿಗೆ ಮೊದಲು ಶಿಕ್ಷೆಯಾಗುತ್ತದೆ. ನಂತರ ಅಪರಾಧ ಎಸಗಿದವನು ಸ್ವಯಂ ಶಿಕ್ಷೆ ಪಡೆದುಕೊಳ್ಳುತ್ತಾನೆ. ಇದು ದೀರ್ಘವಾದ ಕಥೆ.
ಮಹಾಭಾರತದಲ್ಲಿ ವನಪರ್ವದಲ್ಲಿ ತೀರ್ಥಯಾತ್ರಾ ಪರ್ವ ಅಂತ ಒಂದು ಇದೆ. ಅದರ ೧೨೭ನೇ ಅಧ್ಯಾಯದಲ್ಲಿ ಯುಧಿಷ್ಠಿರನು ಸೋಮಕನ ಕುರಿತಾಗಿ ಲೋಮಶರನ್ನು ಕೇಳುವ ಪ್ರಸಂಗ ಬರುತ್ತದೆ. ಹಿಂದೆ ಧರ್ಮಿಷ್ಠನಾದ ಸೋಮಕನೆನ್ನುವ ರಾಜನಿದ್ದ. ಅವನಿಗೆ ನೂರು ಮಂದಿ ಮಡದಿಯರಿದ್ದರು. ಆದರೆ ನೂರು ಮಡದಿಯರಲ್ಲಿ ಒಬ್ಬಳಲ್ಲಿಯೂ ಅವನಿಗೆ ಮಗುವನ್ನು ಪಡೆಯಲು ಸಾಧ್ಯವಾಗಲಿಲ್ಲ. ಅನೇಕವರ್ಷಗಳವರೆಗೆ ಮಕ್ಕಳಿಲ್ಲದೇ ಇದ್ದ. ಸೋಮಕ ಮುದುಕನಾಗುತ್ತಾನೆ. ಸಂತಾನಕ್ಕಾಗಿ ಸೋಮಕನು ವ್ರತಗಳನ್ನು, ಉಪವಾಸಗಳನ್ನು, ದಾನ, ಪುಣ್ಯಕ್ಷೇತ್ರಯಾತ್ರೆ ಎಲ್ಲಾ ಧರ್ಮಕಾರ್ಯಗಳನ್ನು ಮಾಡುತ್ತಲೇ ಇದ್ದ. ಇದರ ಫಲವಾಗಿ ನೂರು ಮಂದಿ ಮಡದಿಯರಲ್ಲಿ ಒಬ್ಬಳಿಗೆ ಮಾತ್ರ ಒಂದು ಗಂಡು ಮಗು ಹುಟ್ಟಿತು. ಈ ಮಗುವಿಗೆ ‘ಜಂತು’ ಎಂದು ನಾಮಕರಣ ಮಾಡುತ್ತಾರೆ. ಈ ಮಗುವನ್ನೇ ಸೋಮಕನ ಎಲ್ಲಾ ಮಡದಿಯರು ತಮ್ಮದೆಂದೇ ಭಾವಿಸಿ ಅದನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಗು ಯಾವಾಗಲೂ ನಗುತ್ತಲೇ ಇರುವಂತೆ ಎಲ್ಲರೂ ನೋಡಿ ಕೊಳ್ಳುತ್ತಿದ್ದರು. ಹೀಗೆಯೇ ಇರುವಾಗ ಒಂದು ದಿನ ಇರುವೆಯೊಂದು ಕಚ್ಚುತ್ತದೆ. ಆಗ ಮಗುವು ಗಟ್ಟಿಯಾಗಿ ಕಿರುಚುತ್ತದೆ. ಇರುವೆಯ ಕಡಿತದಿಂದ ಮಗುವು ಚೀರಿದ್ದನ್ನು ಕಂಡು ರಾಜನ ನೂರು ಮಂದಿ ಮಡದಿಯರೂ ಮಗುವಿನ ಸುತ್ತಲೂ ಕುಳಿತು ಗೋಳಿಡುತ್ತಾರೆ. ಮಗುವನ್ನು ಸಮಾಧಾನಪಡಿಸಲೂ ಹೋಗಲಿಲ್ಲ. ನೂರು ಮಂದಿಯೂ ಮಗುವಿನೊಡನೆ ಸೇರಿ ಅಳುತ್ತಿದ್ದಾಗ, ಆ ಕಿರುಚುವ ಧ್ವನಿ ಮಂತ್ರಿಮಂಡಲದಲ್ಲಿ ಮಂತ್ರಾಲೋಚನೆ ಮಾಡುತ್ತಾ ಸಿಂಹಾಸನದಲ್ಲಿ ಕುಳಿತಿದ್ದ ಸೋಮಕನಿಗೂ ಕೇಳಿಸುತ್ತದೆ. ಕೂಡಲೇ ರಾಜನು ಅಂತಃಪುರದ ಕಡೆಯಿಂದ ಬರುತ್ತಿದ್ದ ಕಿರುಚಾಟಕ್ಕೆ ಕಾರಣವನ್ನು ತಿಳಿದುಬರುವಂತೆ ಸೇವಕರನ್ನು ಕಳುಹಿಸುತ್ತಾನೆ. ರಾಜಸೇವಕರು ನೋಡಿ ಬಂದು ರಾಜನಿಗೆ ಕಾರಣವನ್ನು ಹೇಳುತ್ತಾರೆ. ಸೋಮಕನು ಅಂತಃಪುರಕ್ಕೆ ಹೋಗಿ ಅಳುತ್ತಿದ್ದ ತನ್ನ ಮಗನನ್ನು ಸಮಾಧಾನಗೊಳಿಸುತ್ತಾನೆ. ತನ್ನ ಪತ್ನಿಯರಿಗೂ ಸಮಾಧಾನ ಹೇಳಿ, ಮಂತ್ರಿಮಂಡಲ ಸೇರುತ್ತಾನೆ. ಸೋಮಕ ಈಗ ಬಹಳ ಚಿಂತೆಗೊಳಗಾಗುತ್ತಾನೆ. ತನ್ನ ಮಂತ್ರಿಗಳು ಮತ್ತು ಪುರೋಹಿತರಿಗೆ ’ಧಿಗಸ್ತ್ವಿಹೈಕಪುತ್ರತ್ವಮಪುತ್ರತ್ವಂ ವರಂ ಭವೇತ್ | ನಿತ್ಯಾತುರತ್ವಾದ್ಭೂತಾನಾಂ ಶೋಕ ಏವೈಕಪುತ್ರತಾ || ಎನ್ನುತ್ತಾನೆ. “ನಾನು ಒಬ್ಬನೇ ಮಗನನ್ನು ಹೊಂದಿರುವುದಕ್ಕೆ ಧಿಕ್ಕಾರವಿರಲಿ! ನನ್ನ ಈಗಿನ ಅನುಭವದಲ್ಲಿ ಒಬ್ಬ ಮಗನಿರುವುದಕ್ಕಿಂತಲೂ ಮಕ್ಕಳಿಲ್ಲದಿರುವುದೇ ಒಳ್ಳೆಯದೆನಿಸಿಬಿಟ್ಟಿದೆ. ಪ್ರಪಂಚದಲ್ಲಿ ಹುಟ್ಟಿದ ಪ್ರಾಣಿಗಳಿಗೆ ರೋಗ ರುಜಿನಗಳು ಯಾವಾಗಲೂ ಬರುವುದರಿಂದ ಒಬ್ಬ ಮಗನನ್ನು ಪಡೆಯುವುದು ಶೋಕಕ್ಕೆ ಕಾರಣವಾಗುತ್ತದೆಯೇ ಹೊರತು ಸುಖಕ್ಕೆ ಕಾರಣ ವಾಗುವುದಿಲ್ಲ. ಹೆಚ್ಚು ಮಕ್ಕಳನ್ನು ಪಡೆಯಬೇಕೆಂಬ ಆಸೆಯಿಂದ ನಾನು ನೂರು ಮಂದಿ ಕನ್ಯೆಯರನ್ನು ಮದುವೆಯಾದೆ. ಅವರ ಆರೋಗ್ಯ ಮತ್ತು ಅವರ ವಂಶಗಳನ್ನು ಸಂಪೂರ್ಣವಾಗಿ ಪರೀಕ್ಷಿಸಿದ ನಂತರವೇ ಅವರು ನನಗೆ ತಕ್ಕುದಾದ ಕನ್ಯೆಯರೆಂದು ನಿಶ್ಚಯಿಸಿ ಮದುವೆಯಾದೆ. ಆದರೆ ನನ್ನ ಪರೀಕ್ಷೆ ಮತ್ತು ಪ್ರಯತ್ನಗಳೆಲ್ಲವೂ ಹಾಳಾಗಿ ಹೋಯ್ತು. ಆ ನೂರು ಮಂದಿಯಲ್ಲಿ ಯಾರಿಗೂ ಬೇಗ ಮಕ್ಕಳೇ ಆಗಲಿಲ್ಲ. ನಾನು ಮುದುಕನಾದನಂತರ ಎಲ್ಲರೂ ಸೇರಿ ವ್ರತೋಪವಾಸಗಳನ್ನು ಮಾಡಿದ ಫಲವಾಗಿ ಈ ಒಬ್ಬ ಮಗ ಜಂತುವನ್ನು ಪಡೆದಿರುತ್ತೇವೆ. ನಮ್ಮೆಲ್ಲರ ಪ್ರಾಣವೂ ಈ ಒಂದು ಮಗುವನ್ನೇ ಅವಲಂಬಿಸಿದೆ. ಈ ಮಗುವಿಗೆ ಸ್ವಲ್ಪ ತೊಂದರೆಯಾದರೂ ಅರಮನೆಯೇ ಅಲ್ಲೋಲ ಕಲ್ಲೋಲವಾಗುತ್ತದೆ. ನಾನು ಮುದುಕನಾಗಿದ್ದೇನೆ. ನನ್ನ ಮಡದಿಯರೂ ಮುದುಕಿಯರಾಗುತ್ತಿದ್ದಾರೆ. ಈ ವೃದ್ಧಾಪ್ಯದಲ್ಲಿ ಹುಟ್ಟಿರುವ ಈ ಮಗುವು ನಮ್ಮ ಉಸಿರಿನಂತಿದೆ. ಹೀಗೆ ಹೇಳಿ ಬ್ರಾಹ್ಮಣರಲ್ಲಿ ನಿಮಗೆ ತಿಳಿದಿರುವಂತೆ ಈಗಲೂ ನೂರು ಮಕ್ಕಳನ್ನು ಪಡೆಯಲು ಸಾಧ್ಯವಾಗುವ ಯಾವುದಾದರೂ ಕರ್ಮವಿದೆಯಾ ಎನ್ನುತ್ತಾನೆ. ಹಾಗೇನಾದರೂ ಇದ್ದರೆ ಆ ಕರ್ಮವು ಚಿಕ್ಕದು, ದೊಡ್ಡದು, ನನ್ನಿಂದ ಮಾಡಲು ಸಾಧ್ಯ ಅಥವಾ ಅಸಾಧ್ಯ ಎನ್ನುವುದನ್ನು ಯೋಚಿಸಬೇಡಿ. ನಡೆಸಿಕೊಡಿ ಎನ್ನುತ್ತಾನೆ.
ಅಸ್ತಿ ಚೈತಾದೃಶಂ ಕರ್ಮ ಯೇನ ಪುತ್ರಶತಂ ಭವೇತ್ | ಯದಿ ಶಕ್ನೋಷಿ ತತ್ಕರ್ತುಮಥ ವಕ್ಷ್ಯಾಮಿ ಸೋಮಕ || “ಸೋಮಕರಾಜನೇ! ಒಂದು ಕರ್ಮವೇನೋ ಇದೆ. ಆ ಕರ್ಮವನ್ನು ಮಾಡುವುದರಿಂದ ನೂರು ಮಂದಿ ಮಕ್ಕಳನ್ನು ಪಡೆಯುವ ಸಾಧ್ಯತೆ ಇದೆ. ಆದರೆ ನಿನಗೆ ಆ ಕರ್ಮವನ್ನು ಮಾಡಲು ಸಾಧ್ಯವಾಗಲಿಕ್ಕಿಲ್ಲ. ಎಂತಹ ದಾರುಣ ಕರ್ಮವಾದರೂ ಮಾಡಿಯೇ ತೀರುವೆನೆಂದು ನೀನು ಹೇಳುವೆಯಾದರೆ ಕರ್ಮಾಂಗಗಳನ್ನು ವಿವರಿಸಿ ಹೇಳುವೆನು.” ಎನ್ನುತ್ತಾರೆ ಆಗ ಸೋಮಕನು, ನೀವು ಹೇಳಿರುವ ಹೇಗೇ ಇರಲಿ, ಆ ಕರ್ಮದಿಂದ ನೂರು ಮಕ್ಕಳು ಹುಟ್ಟುವುದು ನಿಶ್ಚಯವಾಗಿದ್ದರೆ ಖಂಡಿತವಾಗಿಯೂ ಮಾಡುತ್ತೇನೆ ಎನ್ನುತ್ತಾನೆ. ಅದು ಮಾಡುವ ಕಾಠಿಣ್ಯವೇನು ಹೇಳಿ ಎನ್ನುತ್ತಾನೆ. ಆಗ “ಮಹಾರಾಜ! ನಾನೇ ಪುರೋಹಿತನಾಗಿ ಮಾಡಿಸುವ ಯಜ್ಞದಲ್ಲಿ ನೀನು ಯಜಮಾನ. ಈಗ ನಿನಗೆ ಹುಟ್ಟಿರುವ ಜಂತುವನ್ನೇ ಬಲಿಯನ್ನಾಗಿ ಮಾಡಿಕೊಂಡು ಯಾಗಮಾಡು. ಆ ಯಾಗವು ಮುಗಿದ ಸ್ವಲ್ಪ ಕಾಲದಲ್ಲಿಯೇ ನಿನಗೆ ನೂರು ಮಂದಿ ಮಕ್ಕಳು ಹುಟ್ಟುವರು. ಜಂತುವಿನ ವಪೆಯನ್ನು ತೆಗೆದು ಹೋಮಮಾಡುವಾಗ ಹುಟ್ಟುವ ಹೊಗೆಯನ್ನು ಆಘ್ರಾಣಿಸುವುದರಿಂದ ನಿನ್ನ ನೂರು ಪತ್ನಿಯರೂ ನೂರು ಮಕ್ಕಳನ್ನು ಪಡೆಯುತ್ತಾರೆ. ಜಂತುವೂ ಈಗಿನ ತನ್ನ ತಾಯಿಯನ್ನೇ ಪುನಃ ತಾಯಿಯನ್ನಾಗಿ ಪಡೆದು ನಿನ್ನ ಮಗನಾಗಿಯೇ ಹುಟ್ಟುತ್ತಾನೆ. ಪುನರ್ಜನ್ಮದಲ್ಲಿ ಇವನ ಎಡಪಕ್ಕೆಯಲ್ಲಿ ಒಂದು ಸುವರ್ಣದ ರೇಖೆಯಿರುವುದು.” ಎನ್ನುತ್ತಾರೆ. ಪುರೋಹಿತರಿಗೆ ಸೋಮಕನು “ಯಾವ ಕರ್ಮವನ್ನು ಯಾವ ರೀತಿಯಲ್ಲಿ ಲೋಪ-ದೋಷಗಳಿಲ್ಲದೇ ನೆರವೇರಿಸಬೇಕೋ ಆ ರೀತಿಯಲ್ಲಿಯೇ ಮಾಡಿ. ನಾನು ಪುತ್ರರನ್ನು ಪಡೆಯಬೇಕಾಗಿರುವುದರಿಂದ ನೀವು ಹೇಳಿದಂತೆಯೇ ಎಲ್ಲವನ್ನೂ ಮಾಡುವೆನು.”
ಸೋಮಕನು ತನ್ನ ಮಗನಾದ ಜಂತುವನ್ನು ಪಶುವಿನ ಸ್ಥಾನದಲ್ಲಿಟ್ಟು ಕೊಂಡು ಯಾಗವನ್ನು ಪ್ರಾರಂಭಿಸಿದನು. ಆದರೆ ತಾಯಂದಿರಿಗೆ ಮಾತ್ರ ಆ ದೃಶ್ಯವನ್ನು ನೋಡಲಾಗಲಿಲ್ಲ. ಪಶು ಸ್ಥಾನದಲ್ಲಿದ್ದ ಮಗುವನ್ನು ಎತ್ತಿಕೊಂಡು ಗಟ್ಟಿಯಾಗಿ ಅವರು ಅಳತೊಡಗುತ್ತಾರೆ. ಪಶುಸ್ಥಾನದಿಂದ ಮಗುವನ್ನು ರಾಜಮಹಿಷಿಯರು ಸೆಳೆದುಕೊಂಡು ಹೋಗುತ್ತಾರೆ. ಆದರೆ ಪುರೋಹಿತರು ಆರಂಭಿಸಿದ ಕರ್ಮವನ್ನು ನಿಲ್ಲಿಸುವಂತಿರಲಿಲ್ಲ. ಮೇಲಾಗಿ ಪುರೋಹಿತರಿಗೇ ತಾವು ಮಾಡುತ್ತಿರುವ ಕರ್ಮದ ಫಲವೇನೆಂಬುದು ಚೆನ್ನಾಗಿ ತಿಳಿದಿತ್ತು. ಪುರೋಹಿತರು ಮಗು ವಿದ್ದಲ್ಲಿಗೆ ಹೋಗಿ ತಮ್ಮ ಬಲಗೈಯಿಂದ ಮಗುವನ್ನು ಹಿಡಿದು ಬಲಾತ್ಕಾರವಾಗಿ ಯಜ್ಞಮಂಟಪಕ್ಕೆ ತರುತ್ತಾರೆ. ರಾಜಪತ್ನಿಯರು ಅಳುತ್ತಿದ್ದರು. ಜಂತುವನ್ನು ಪಶುಸ್ಥಾನದಲ್ಲಿಟ್ಟು ಮಹಾಮಂತ್ರಗಳಿಂದ ಅಭಿಮಂತ್ರಿಸಿ ವಧೆಮಾಡಿ ವಪೆಯನ್ನು ತೆಗೆದು ಯಜ್ಞದಲ್ಲಿ ಹೋಮಮಾಡಿದಾಗ ಅಲ್ಲಿಯೇ ಇದ್ದು ಸಂಕಟಪಡುತ್ತಿದ್ದ ರಾಜಮಹಿಷಿಯರು ವಪೆಯ ಧೂಮವನ್ನು ಆಘ್ರಾಣಿಸಿ ಪ್ರಜ್ಞಾ ಹೀನರಾಗಿ ಬೀಳುತ್ತಾರೆ. ಶೈತ್ಯೋಪಚಾರವಾದನಂತರ ಅವರೆಲ್ಲರಿಗೂ ಪ್ರಜ್ಞೆಯುಂಟಾಯಿತು. ಪುರೋಹಿತರು ಹೇಳಿದ ರೀತಿಯಲ್ಲಿಯೇ ಜಂತುವಿನ ವಪಾ ಹೋಮದ ಧೂಮದ ಆಘ್ರಾಣದಿಂದಲೇ ಅವರೆಲ್ಲರೂ ಗರ್ಭವತಿಯರಾಗುತ್ತಾರೆ. ಹತ್ತನೆಯ ತಿಂಗಳಿನಲ್ಲಿ ನೂರು ಮಂದಿಯರೂ ನೂರು ಮಕ್ಕಳನ್ನು ಪ್ರಸವಿಸುತ್ತಾರೆ. ಪುರೋಹಿತರು ಹೇಳಿದ್ದಂತೆಯೇ ಜಂತುವು ಜ್ಯೇಷ್ಠಪುತ್ರನಾಗಿ ತನ್ನ ಹಿಂದಿನ ತಾಯಿಯ ಗರ್ಭದಲ್ಲಿಯೇ ಹುಟ್ಟುತ್ತಾನೆ. ಪುರೋಹಿತರು ಹೇಳಿದ್ದ ರೀತಿಯಲ್ಲಿಯೇ ಅವನ ಎಡಭಾಗದಲ್ಲಿ ಸುವರ್ಣದ ರೇಖೆಯೂ ಇತ್ತು. ರಾಜಕುಮಾರರು ಹುಟ್ಟಿದ ಸ್ವಲ್ಪ ಸಮಯದಲ್ಲಿಯೇ ಪುರೋಹಿತನು ಸಾಯುತ್ತಾನೆ. ಅವನು ಸತ್ತ ಸ್ವಲ್ಪಕಾಲದಲ್ಲಿಯೇ ಸೋಮಕನೂ ಸಾಯುತ್ತಾನೆ. ಸೋಮಕನು ಪರಲೋಕದಲ್ಲಿ ತನಗೆ ನೂರು ಮಕ್ಕಳಾಗುವಂತೆ ಕರ್ಮಮಾಡಿಸಿದ ತನ್ನ ಪುರೋಹಿತನು ಅತಿಘೋರವಾದ ನರಕದಲ್ಲಿ ಬಿದ್ದು ದಾರುಣವಾದ ಸಂಕಟವನ್ನು ಅನುಭವಿಸುತ್ತಿದ್ದುದನ್ನು ಕಾಣುತ್ತಾನೆ. ಸೋಮಕನಿಗೆ ಬೇಸರವಾಗುತ್ತದೆ. ಬ್ರಾಹ್ಮಣನನ್ನು ಕೇಳುತ್ತಾನೆ. ಬ್ರಾಹ್ಮಣರೇ ನೀವು ಯಾವ ಕಾರಣದಿಂದ ಇಂತಹ ಘೋರವಾದ ನರಕದಲ್ಲಿ ಬಿದ್ದು ಅತಿದಾರುಣವಾದ ಈ ಯಾತನೆಯನ್ನು ಅನುಭವಿಸುತ್ತಿರುವಿರಿ?” ಆ ಬ್ರಾಹ್ಮಣನಿಗೆ ಉತ್ತರಕೊಡುವ ಚೈತನ್ಯವೂ ಇರಲಿಲ್ಲ. ಅವನ ಶರೀರವು ಅಗ್ನಿಯಲ್ಲಿ ಸುಡುತ್ತಿತ್ತು. ದಾರುಣವಾದ ಯಾತನೆಯನ್ನನುಭವಿಸುತ್ತಾ ಬಹುಸಂಕಟದಿಂದ ರಾಜನಿಗೆ ಹೇಳಿದನು . . . .
ತ್ವಂ ಮಯಾ ಯಾಜಿತೋ ರಾಜಂಸ್ತಸ್ಯೇದಂ ಕರ್ಮಣಃ ಫಲಮ್ || “ಸೋಮಕ! ಮಕ್ಕಳ ಪ್ರಾಪ್ತಿಗಾಗಿ ನಿನಗೆ ಯಜ್ಞಮಾಡಿಸಿದುದರ ಫಲವಿದು. ಈ ರೀತಿಯಲ್ಲಿ ಅನುಭವಿಸುತ್ತಿದ್ದೇನೆ.” ಬ್ರಾಹ್ಮಣನ ಮಾತು ಕೇಳಿ ರಾಜನಿಗೂ ಬಹಳ ದುಃಖವಾಯಿತು. ಸೋಮಕನು ಯಮಧರ್ಮನ ಬಳಿಗೆ ಹೋಗಿ, “ಯಮಧರ್ಮನೇ! ನನ್ನ ಕಾಮನೆಯನ್ನು ಪೂರೈಸಲು ಕರ್ಮ ಮಾಡಿಸಿದ ಪುರೋಹಿತರನ್ನು ಈ ಕೂಡಲೇ ಬಿಡುಗಡೆ ಮಾಡು. ಅವರ ಸ್ಥಾನದಲ್ಲಿ ನಾನು ನಿಲ್ಲುತ್ತೇನೆ. ನನ್ನ ಕಾಮನೆಯನ್ನು ಪೂರ್ಣಗೊಳಿಸುವ ಸಲುವಾಗಿ ಯಜ್ಞಮಾಡಿಸಿದದವರು ನರಕದ ಅಗ್ನಿಯಲ್ಲಿ ಬೆಂದುಹೋಗುತ್ತಿದ್ದಾರೆ. ಎನ್ನುತ್ತಾನೆ. ಆಗ ಯಮನು “ಒಬ್ಬನು ಮಾಡಿದ ಕರ್ಮದ ಫಲವನ್ನು ಮತ್ತೊಬ್ಬನೆಂದಿಗೂ ಅನುಭವಿಸಲಾರನು. ನೀನು ಮಾಡಿದ ಕರ್ಮಕ್ಕೆ ಫಲವಾಗಿ ನಿನಗೆ ಅಲ್ಲಿ ಕಾಣುತ್ತಿರುವ ಉತ್ತಮಲೋಕಗಳೂ ಲಭ್ಯವಾಗಿವೆ. ನೀನಲ್ಲಿಗೆ ತೆರಳಬಹುದು.” ಎನ್ನುತ್ತಾನೆ. ಪುರೋಹಿತನು ನರಕಕ್ಕೆ ಬೀಳಲು ಕಾರಣವನ್ನು ಹೀಗೆ ಹೇಳಲಾಗಿದೆ. ಪುರೋಹಿತನು ಯಾಜಕನಾಗಿ ಸೋಮಕನಿಗೆ ಪುತ್ರಯಜ್ಞ ವನ್ನು ಮಾಡಿಸಿದನು. ಅದರಿಂದ ಸೋಮಕನಿಗೆ ಮಕ್ಕಳ ಪ್ರಾಪ್ತಿಯಾಯಿತು. ಯಾಜಕನಿಗೆ ಸೋಮಕನು ಯಥೇಚ್ಛವಾಗಿ ದಕ್ಷಿಣೆಯನ್ನು ಕೊಟ್ಟನು. ಯಾಜಕನು ಯಜ್ಞಕ್ಕೆ ಪ್ರೇರಕನು. ಮೇಲಾಗಿ ಅದು ಕಾಮ್ಯಯಜ್ಞ. ಯಾಜಕನು ಸೋಮಕನಿಂದ ದಕ್ಷಿಣೆಯನ್ನು ಪಡೆದು ಸಂತುಷ್ಟನಾದನು. ದಕ್ಷಿಣೆಯ ಮೂಲಕವಾಗಿ ಸೋಮಕನು ತನ್ನ ಪಾಪಗಳೆಲ್ಲವನ್ನೂ ಪುರೋಹಿತನಿಗೆ ಧಾರೆಯೆರೆದುಕೊಟ್ಟನು. ಅದಕ್ಕೆ ಪ್ರತಿಯಾಗಿ ಪುರೋಹಿತನು ಯಾವ ವಿಧವಾದ ಪ್ರಾಯಶ್ಚಿತ್ತವನ್ನೂ ಮಾಡಿಕೊಳ್ಳದೇ ಇದ್ದುದರಿಂದ ಶಿಶುಹತ್ಯೆಯ ಕಾರ್ಯಕ್ಕೆ ಪ್ರಚೋದಕನಾದ ಕಾರಣದಿಂದ ನರಕವಾಸವನ್ನು ಅನುಭವಿಸಬೇಕಾಯಿತು.
ಯಮಧರ್ಮನ ಆ ಮಾತಿಗೆ ಉತ್ತರವಾಗಿ ಸೋಮಕನು ಹೇಳಿದನು: “ಯಮಧರ್ಮ! ಈ ಬ್ರಹ್ಮವಾದಿಗಳನ್ನು ನರಕದಲ್ಲಿಯೇ ಬಿಟ್ಟು ನಾನು ಮಾತ್ರ ಉತ್ತಮಲೋಕಕ್ಕೆ ಖಂಡಿತವಾಗಿಯೂ ಹೋಗಲಾರೆನು. ಸ್ವರ್ಗದಲ್ಲಾಗಲೀ, ನರಕದಲ್ಲಾಗಲೀ ಈ ಬ್ರಾಹ್ಮಣನೊಡನೆ ವಾಸಮಾಡಬೇಕೆಂಬುದೇ ನನ್ನ ಆಶೆ. ಕಾರಣವೇನೆಂದರೆ ಕರ್ಮ ಮಾಡಿಸಿದವರು ಇವರಾಗಿದ್ದರೆ ಕರ್ಮಮಾಡಿದವನು ಅಥವಾ ಕರ್ಮಮಾಡಿಸಲು ಪ್ರೇರಿಸಿದವನು ನಾನೇ ಆಗಿರುತ್ತೇನೆ. ಇವರಿಗೆ ದಕ್ಷಿಣಾರೂಪವಾದ ಫಲವು ಸಿಕ್ಕಿದೆ. ನನಗೆ ಮಕ್ಕಳ ರೂಪವಾದ ಫಲವು ಸಿಕ್ಕಿದೆ. ಆದುದರಿಂದ ನರಹತ್ಯೆಯಿಂದ ಪ್ರಾಪ್ತವಾಗಬಹುದಾದ ದುಷ್ಫಲವನ್ನು ನಾನೂ ಮತ್ತು ಈ ಬ್ರಾಹ್ಮಣರೂ ಸಮವಾಗಿ ಅನುಭವಿಸುವೆ ಎನ್ನುತ್ತಾನೆ. ಆಗ ಯಮ ಈ ಪುರೋಹಿತನೊಡನೆ ಇರಲು ಅನುವು ಮಾಡಿಕೊಡುತ್ತಾನೆ ಎನ್ನುವ ಕಥೆ.
#ಸೋಮಕ_ಜಂತು
ಸದ್ಯೋಜಾತರು
No comments:
Post a Comment
If you have any doubts. please let me know...