July 18, 2021

ದೈಹಿಕನ್ಯೂನತೆ ಸರಿಪಡಿಸಬಹುದು ಋಗ್ವೇದದ ಎಂಟನೇ ಮಂಡಲ

ದೈಹಿಕನ್ಯೂನತೆ ಸರಿಪಡಿಸಬಹುದು.

ಋಗ್ವೇದದ ಎಂಟನೇ ಮಂಡಲದ ಒಂದನೇ ಸೂಕ್ತದಲ್ಲಿ ಬರುವ ಒಂದು ಋಕ್ಕು ವೈದ್ಯಕೀಯ ಲೋಕದಲ್ಲಿನ ಸಾಧ್ಯತೆಯನ್ನು ದೃಢೀಕರಿಸುತ್ತದೆ. ಮನುಷ್ಯನ ದೈಹಿಕ ನ್ಯೂನತೆಗಳನ್ನು ಸರಿಪಡಿಸ ಬಹುದು ಎನ್ನುವುದನ್ನು ಸೂಕ್ಷ್ಮವಾಗಿ ಇಲ್ಲಿ ಹೇಳಲಾಗಿದೆ. ಈ ಕುರಿತಾಗಿ ನಾನು ಹಿರಿಯ ವೈದ್ಯ ಮಿತ್ರರಲ್ಲಿ ವಿಚಾರಿಸಿದಾಗ ಅವರೂ ಸಹ ಆಧುನಿಕ ವೈದ್ಯವಿಜ್ಞಾನದಲ್ಲಿ ಸರಿಪಡಿಸಬಹುದು ಎನ್ನುವುದನ್ನು ಹೇಳಿದರು. ಇದೊಂದು ಚಿಕ್ಕ ಕಥೆಯನ್ನಿಲ್ಲಿ ಹೇಳುತ್ತೇನೆ. 

ಹಿಂದೆ ಪ್ಲಯೋಗ ಎನ್ನುವ ಒಬ್ಬ ರಾಜನಿದ್ದ. ಆತನಿಗೆ ಅನುರೂಪಳಾದ ಪತ್ನಿ. ರಾಜ್ಯವೂ ಸಹ ಸುಭಿಕ್ಷವಾಗಿತ್ತು. ಧರ್ಮಾಚರಣೆಗಳನ್ನು ಅವನು ಎಂದಿಗೂ ಮೀರಿ ನಡೆದವನಲ್ಲ. ಈತನಿಗೆ ಆಸಂಗ ಎನ್ನುವ ಒಬ್ಬ ಮಗನಿದ್ದ. ನೋಡಲು ಅತಿ ಸುಂದರ. ವಿದ್ಯೆಯಲ್ಲಿಯೂ ಆತ ಅಷ್ಟೇ ಚುರುಕಾಗಿದ್ದ ಮತ್ತು ಪ್ರತಿಭಾನ್ವಿತನಾಗಿದ್ದ. ಯಾವುದಕ್ಕೂ ಕೊರತೆ ಇಲ್ಲ. ವಿದ್ಯೆ ಮತ್ತು ಸಂಪತ್ತು, ಧಾರ್ಮಿಕತೆ ಎಲ್ಲವೂ ಇತ್ತು. ರಾಜ ಪ್ಲಯೋಗ ತನ್ನ ಮಗನಿಗೆ ತನ್ನ ನಂತರ ಉತ್ತರಾಧಿಕಾರಿಯನ್ನಾಗಿ ರಾಜ್ಯವನ್ನು ಒಪ್ಪಿಸುತ್ತಾನೆ. ಪಟ್ಟಾಭಿಷೇಕಕ್ಕೂ ಮೊದಲು ಆಸಂಗನಿಗೆ ವಿವಾಹ ಮಾಡುತ್ತಾನೆ. ಆಗೆಲ್ಲಾ ರಾಜರನೇಕರು ಋಷಿ ಪುತ್ರಿಯರನ್ನು ಮದುವೆಯಾದ ಉದಾಹರಣೆಗಳು ದೊರಕುತ್ತವೆ. ಹಾಗೆಯೇ ರಾಜ ಪುತ್ರಿಯರು ಋಷಿಗಳನ್ನು ಮದುವೆಯಾಗುವುದೂ ಸಹ ಅಷ್ಟೇ ಪ್ರಸಿದ್ಧವಾಗಿತ್ತು. ಇಲ್ಲಿಯೂ ಅಂಗಿರಾ ಋಷಿಯ ಮಗಳು ಅಥವಾ ಅದೇ ವಂಶಸ್ಥಳು ಶಶ್ವತೀ ಎನ್ನುವವಳನ್ನು ಆಸಂಗನು ವಿವಾಹವಾಗುತ್ತಾನೆ. ವಿವಾಹಕಾರ್ಯಗಳೆಲ್ಲವೂ ಯಥಾವತ್ತಾಗಿ ನಡೆಯುತ್ತವೆ. ವಿವಾಹದ ದಿನ ರಾತ್ರಿ ಶೋಭನದಲ್ಲಿ ರಾಜ ಗಂಡಲ್ಲ, ಅವನು ಹೆಣ್ಣು ಎನ್ನುವುದು ಶಶ್ವತೀಗೆ ತಿಳಿಯುತ್ತದೆ. ಶಶ್ವತೀ ದುಃಖಿತಳಾಗುತ್ತಾಳೆ. ಆದರೆ ಶಾಪಾನುಗ್ರಹ ಸಮರ್ಥಳಾಗಿದ್ದರೂ ಸಹ ರಾಜನನ್ನು ಶಪಿಸುವುದಿಲ್ಲ. ಆಕೆ ಸೈರಿಸಿಕೊಂಡು ರಾಜನಲ್ಲಿ ಯಾಕೆ ಮುಚ್ಚಿಟ್ಟು ಮದುವೆಯಾದೆ ಎಂದು ಕೇಳುತ್ತಾಳೆ. ಆಸಂಗ ತನ್ನ ಕಥೆಯನ್ನು ಹೇಳಿಕೊಳ್ಳುತ್ತಾನೆ. ಆತ ಹಿಂದೆ ತಿಳಿಯದೇ ದೇವತೆಗಳಿಗೆ ಅಪಹಾಸ್ಯಮಾಡಿದ್ದು, ಅವರಿಗೆ ಕೋಪ ಬರುವಂತೆ ಮಾಡಿ ಅವರಿಂದ ಶಾಪ ಹೊಂದಿದ್ದು, ಆ ಕಾರಣದಿಂದ ತನಗೆ ನಪುಂಸಕತ್ವ ಬಂದಿರುವುದು(ಸ್ತ್ರೀತ್ವವನ್ನು ಹೊಂದಿದ್ದು) ಹೇಳುತ್ತಾನೆ. ಆಗ ಶಶ್ವತೀ ಆಸಂಗನ ಮಾತಿನಿಂದ ಚೇತರಿಸಿಕೊಂಡು, ಇದು ಸರಿಯಾಗುವ ದೋಷ ಎಂದು ಧೈರ್ಯ ತುಂಬಿ, ಕಣ್ವಗೋತ್ರದ ಮೇಧಾತಿಥಿ ಮತ್ತು ಮೇಧ್ಯಾತಿಥಿ ಎನ್ನುವವರನ್ನು ಭೇಟಿಯಾಗಿ ಮೇಧಾತಿಥಿ ಎನ್ನುವ ಋಷಿಯಿಂದ ಆಸಂಗನ ಸಲುವಾಗಿ ಯಜ್ಞವನ್ನು ಮಾಡಿಸಿ ಆತನ ತಪಸ್ಸಿನ ಬಲದಿಂದ ಈತನಿಗೆ ಸ್ತ್ರೀತ್ವವು ಹೋಗಿ ಪುನಃ ಪುರುಷತ್ವವು ಪ್ರಾಪ್ತಿಯಾಗುತ್ತದೆ. ಈತ ಮುಂದೆ ಪುರುಷನಾಗುತ್ತಾನೆ. ಆ ಉಪಕಾರಕ್ಕಾಗಿ ಮೇಧಾತಿಥಿಗೆ ದ್ರವ್ಯಾದಿಗಳನ್ನು ನೀಡಿದ ನಿದರ್ಶನ ಋಕ್ಕುಗಳಿಂದ ಸಿಗುತ್ತದೆ. ಈ ಸೂಕ್ತದ ೩೦ ರಿಂದ ೩೩ನೇ ಋಕ್ಕಿನ ತನಕ ಆಸಂಗ ರಾಜನೇ ಸ್ವತಃ ಸ್ತುಹಿ ಸ್ತುಹಿ ಎಂದು ಹೇಳಿರುವುದರಿಂದ ಆ ಋಕ್ಕುಗಳಿಗೆ ಆತನೇ ದೃಷ್ಟಾರನಾಗಿ ರಾಜರ್ಷಿ ಎನ್ನಿಸಿಕೊಂಡಿದ್ದಾನೆ ಮುಂದಿನ ಋಕ್ಕನ್ನು ಶಶ್ವತೀ ಹೇಳಿಕೊಂಡಿರುವುದರಿಂದ ಅದು ಆಕೆಯ ಋಕ್ಕಾಗಿದೆ. 

ಸ್ತುಹಿ ಸ್ತುಹೀದೇತೇ ಘಾ ತೇ ಮಂಹಿಷ್ಠಾಸೋ ಮಘೋನಾಂ |
ನಿಂದಿತಾಶ್ವಃ ಪ್ರಪತೀ ಪರಮಜ್ಯಾ ಮಘಸ್ಯ ಮೇಧ್ಯಾತಿತೇ ||
ಮೇಧಾತಿಥಿಯೇ ನೀನು ಪುರುಷರಿಗೆ ಬೇಕಾಗಿರುವ ಪೌರುಷದ ಸಂಪತ್ತನ್ನು ನೀಡುವವನಾಗಿದ್ದಿಯೇ, ನಿನಗೆ ಯಥೋಚಿತವಾದ ದಾನವನ್ನು ನಾವೇ ಮಾಡುತ್ತೇವೆ. ನನ್ನ ಅವಹೇಳನದ ಸಂದರ್ಭದಲ್ಲಿ ನನ್ನನ್ನು ಪಾರು ಮಾಡಿದವನು ನೀನು ನಿನ್ನಿಂದ ನನ್ನ ಅಭಿವೃದ್ಧಿಯಾಯಿತು ಎಂದು ಹೇಳಿಕೊಂಡಿದ್ದಾನೆ. ಮೇಧಾತಿಥಿಯೂ ಸಹ ಆಸಂಗನನ್ನು ಹೊಗಳಿದ್ದಾನೆ. ಪ್ಲಯೋಗ ಪುತ್ರನಾದ ಆಸಂಗನು ಈ ಕಾರ್ಯಕ್ಕೆ ಹತ್ತು ಸಾವಿರ ಗೋವುಗಳನ್ನು ನೀಡಿದ್ದಾನೆ ಎಂದು ಅಭಿನಂದಿಸಿದ್ದಾನೆ. ಹಾಗೆಯೇ ಮುಂದಿನ ಋಕ್ಕಿನಲ್ಲಿ ಶಶ್ವತೀ ತನ್ನ ಗಂಡ ಆಸಂಗನ ದೈಹಿಕ ನ್ಯೂನತೆಯನ್ನು ಹೇಳಿಕೊಂಡಿದ್ದಾಳೆ. ಅದು ಇಲ್ಲಿ ಬರೆಯಲು ನನಗೂ ಸಾಧ್ಯವಿಲ್ಲದಿರುವುದರಿಂದ ಅಲ್ಲಿ ಆಕೆ ವಿವಾಹದ ದಿನ ಕಂಡದ್ದಕ್ಕಿಂತ ಭಿನ್ನವಾಗಿ ಆಕೆ ತನ್ನ ಪತಿಯನ್ನು ಹೊಗಳಿದ್ದಾಳೆ. ಆತನ ಅಂಗಗಳನ್ನೂ ಹೊಗಳಿ ಮೇಧಾತಿಥಿಯನ್ನು ಅಭಿನಂದಿಸಿದ್ದಾಳೆ.

ಇನ್ನು ಇಲ್ಲಿ ವೈದ್ಯಕೀಯ ವಿಚಾರ ಹೇಗೆ ಎಂದರೆ, ಹುಟ್ಟುತ್ತಾ ಆತ ಪುರುಷನಾಗಿದ್ದ, ಮಧ್ಯದಲ್ಲಿ ಆತನಿಗೆ ಸ್ತ್ರೀತ್ವ ಪ್ರಾಪ್ತಿಯಾಗುತ್ತದೆ. ಮುಂದೆ ಆತ ಅದರಿಂದ ಗುಣಮುಖನಾಗಿ ಪುನಃ ಸಮರ್ಥನಾದ ಪುರುಷನಾಗುತ್ತಾನೆ. ಅಂದರೆ(ಪ್ರಾಯಶಃ ಹಾರ್ಮೋನ್ ವ್ಯತ್ಯಯ ಆಗಿರಬಹುದು) ಅದು ವಾಸಿಯಾಗುವ ಸ್ಥಿತಿ ಎನ್ನುವುದನ್ನು ಅಂದು ಕಂಡುಕೊಂಡಿದ್ದಿರಬಹುದು. ಮೇಧಾತಿಥಿ ಇಲ್ಲಿ ಮನೋವೈಜ್ಞಾನಿಕ ಹಂತದ ಶಕ್ತಿಯಿಂದ ಸಹ ಸರಿಪಡಿಸಿರಲೂ ಬಹುದು ಅಥವಾ ಯಾವುದೋ ಒಂದು ಪದ್ಧತಿಯಿಂದ ಸರಿಪಡಿಸಿರಬಹುದು. ಅದು ನಮಗೆ ಮುಖ್ಯವಾಗುವುದಿಲ್ಲ. ಇಲ್ಲಿ ಬೇಕಾಗಿದ್ದು ದೈಹಿಕ ನ್ಯೂನತೆಯನ್ನು ಸರಿಪಡಿಸಬಹುದೆನ್ನುವುದು ಮಾತ್ರ. 

#ಆಸಂಗನ_ದೈಹಿಕ_ನ್ಯೂನತೆ 
ಸದ್ಯೋಜಾತರು

No comments:

Post a Comment

If you have any doubts. please let me know...