July 24, 2021

ತ್ರಿಶೂಲ...! ಶಿವನ ಆಯುಧದ ಹಿಂದಿದೆ ಮಹಾರಹಸ್ಯ

ತ್ರಿಶೂಲ...! ಶಿವನ ಆಯುಧದ ಹಿಂದಿದೆ ಮಹಾರಹಸ್ಯ.

ಸ್ನೇಹಿತರೇ ಶಿವ ಅನ್ನುವುದೇ ಒಂದು ವಿಸ್ಮಯ ಆ ಆದಿ ಯೋಗಿಯ ಬಗ್ಗೆ ಹುಡುಕಿದಷ್ಟು ಅತ್ಯಾದ್ಬುತವಾದ ಮಾಹಿತಿಗಳು ದೊರೆಯುತ್ತಲೆ ಹೋಗುತ್ತವೆ. ಸಾಮಾನ್ಯವಾಗಿ ಶಿವನನ್ನು ನೆನಪಿಸಿಕೊಂಡ ಕೂಡಲೇ ಕೈಲಾಸದಲ್ಲಿ ಕಣ್ಣನ್ನು ಮುಚ್ಚಿ ಧ್ಯಾನದಲ್ಲಿ ಮಗ್ನನಾಗಿರುವ ಆ ಮಹಾಯೋಗಿಯ ಚಿತ್ರಣ ನಮ್ಮ ಕಣ್ಮುಂದೆ ಗೋಚರಿಸುತ್ತದೆ, ತಲೆ ಮೇಲೆ ಚಂದ್ರನನ್ನು ಇಟ್ಟುಕೊಂಡು, ತನ್ನ ಜಟಾಜೂಟದಲ್ಲಿ ಮಾತೆ ಗಂಗೆಯನ್ನು ಕಟ್ಟಿಕೊಂಡು, ಕುತ್ತಿಗೆಗೆ ಹಾವನ್ನು ಆಭರಣವನ್ನಾಗಿ ಮಾಡಿಕೊಂಡು ಧ್ಯಾನಮಗ್ನನಾಗಿರುವ ಶಿವ ಭಕ್ತವತ್ಸಲ. ಅಂತಹ ಮಹಾಶಿವನ ಕೈಯಲ್ಲಿ ಒಂದು ತ್ರಿಶೂಲ ಇರುತ್ತದೆ ಅದು ಅವನ ಆಯುಧ ಹೇಗೆ ವಿಷ್ಣು ಚಕ್ರ ಮತ್ತು ಗದೆಯನ್ನು ಹೊಂದಿದ್ದಾನೋ ಅದೇ ರೀತಿ ಶಿವ ತ್ರಿಶೂಲವನ್ನು ಹೊಂದಿದ್ದಾನೆ, ಆ ತ್ರಿಶೂಲ ತುಂಬಾನೇ ವಿಶಿಷ್ಟವಾದದ್ದು ಹಾಗೆ ನೋಡಿದರೆ ಆ ತ್ರಿಶೂಲದ ಹಿಂದೆ ಹಲವಾರು ನಿಗೂಢಾರ್ಥಗಳಿವೆ ನಮ್ಮ ಬದುಕಿಗೆ ಬೇಕಾದ ಸೂತ್ರಗಳಿವೆ ಹಾಗೂ ಯೋಗದ ರಹಸ್ಯಗಳಿವೆ ಶಿವನ ತ್ರಿಶೂಲದ ರಹಸ್ಯಗಳನ್ನು ನೋಡಿ ಬರೋಣ ಬನ್ನಿ.

ಪರಶಿವನ ಕೈಯಲ್ಲಿರುವ‌ ತ್ರಿಶೂಲದ ಸೃಷ್ಟಿಯ ಹಿಂದೆ ಕೂಡ ಒಂದು ಅತ್ಯಂತ ಆಸಕ್ತಿದಾಯಕ ಕಥೆ ಇದೆ. ಇಡೀ ಜಗತ್ತಿಗೆ ಬೆಳಕು ಕೊಡುವ ಸೂರ್ಯ ☀️ ಅದೆಷ್ಟು ಪ್ರಖರನಾಗಿರುತ್ತಾನೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ ಈ ಮಾರ್ತಾಂಡನ ಬಿಸಿಯನ್ನು ಸಹಿಸಲಾಗದೇ ಆತನ ಪತ್ನಿ ಸಂಜನಾದೇವಿ ಅಥವಾ ಶರಣ್ಯದೇವಿ ತವರು ಮನೆಗೆ ಹೊರಟು ಹೋದಳಂತೆ ಸೂರ್ಯನ ಅತಿಯಾದ ಶಾಖದಿಂದಾಗಿ ಅವನ ಜೊತೆ ಇರೋದಕ್ಕೆ ಸಾಧ್ಯ ಆಗ್ತಾ ಇಲ್ಲ ಅಂತ ಆಕೆ ತನ್ನ ತಂದೆ ದೇವಶಿಲ್ಪಿ ವಿಶ್ವಕರ್ಮನ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾಳೆ ಅವನ ಅಗಾಧ ಬಿಸಿ ಕಡಿಮೆಯಾಗದೇ ತಾನು ಸೂರ್ಯನ ಬಳಿ ಹೋಗೋದಕ್ಕೆ ಸಾಧ್ಯನೇ ಆಗಲ್ಲ ಅಂತ ಹಠ ಹಿಡಿದು ಕುಳಿತುಬಿಡುತ್ತಾಳೆ ಸಂಜನಾದೇವಿ, ಆಗ ಮಗಳ ಸಮಸ್ಯೆಗೊಂದು ಪರಿಹಾರವನ್ನು ಹುಡುಕೋದಕ್ಕೆ ಮುಂದಾದ ಆ ದೇವಶಿಲ್ಪಿ ವಿಶ್ವಕರ್ಮ ಸೂರ್ಯನ ಶಾಖವನ್ನು ಕಡಿಮೆ ಮಾಡೋದಕ್ಕೆ ಮುಂದಾಗುತ್ತಾನೆ. ಅಷ್ಟೇ ಅಲ್ಲ ಆದಿತ್ಯದೇವನಿಂದ ಹೊರಹೊಮ್ಮುತ್ತಿದ್ದ ಹೆಚ್ಚಿನ ಶಾಖವನ್ನು ಬಳಸಿಕೊಂಡು ಆ ಶಾಖದಿಂದ "ವಿಜಯ" ಅನ್ನೋ ತ್ರಿಶೂಲ, "ಸುದರ್ಶನ" ಅನ್ನೋ ದಿವ್ಯಚಕ್ರ ಹಾಗೂ "ಪುಷ್ಪಕ" ಅನ್ನೋ ವಿಮಾನವನ್ನು ಸೃಷ್ಟಿ ಮಾಡುತ್ತಾನೆ, ಬಳಿಕ ತಾನು ತಯಾರಿಸಿದ ವಿಜಯ ತ್ರಿಶೂಲವನ್ನು ಶಿವನಿಗೆ ಹಾಗೂ ಸುದರ್ಶನವನ್ನು  ಮಹಾವಿಷ್ಣುವಿಗೆ ಕೊಟ್ಟ ದೇವಶಿಲ್ಪಿ , ಸಂಪತ್ತಿನ ಅಧಿಪತಿಯಾಗಿದ್ದ ಕುಬೇರನಿಗೆ ಆ ಪುಷ್ಪಕ ವಿಮಾನವನ್ನು ನೀಡುತ್ತಾನೆ.

ಇದು ಶಿವನ ಆಯುಧ ತ್ರಿಶೂಲ ಸೃಷ್ಟಿಯಾದ ಕಥೆ ಈ ತ್ರಿಶೂಲದ ಹಿಂದೆ ಅನೇಕ ಸಾಂಕೇತಿಕ ಅರ್ಥಗಳು ಕೂಡ ಇದೆ. ಬದುಕಿಗೆ ಬೇಕಾದ ಸೂತ್ರಗಳಿವೆ ಎಲ್ಲದಕ್ಕಿಂತ ಹೆಚ್ಚಾಗಿ ಯೋಗದ ರಹಸ್ಯಗಳಿವೆ ಅದರಲ್ಲೂ ಸಂಖ್ಯೆ 3 ಹಾಗೂ ಶಿವನ ನಡುವೆ ತುಂಬಾನೇ ನಂಟಿದೆ.
"ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ 
ಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಂ 
ಏಕ ಬಿಲ್ವಂ ಶಿವಾರ್ಪಣಂ" ।।

ಹಾಗೆ ಶಿವನನ್ನು ಸ್ತುತಿಸುವ ಬಿಲ್ವಾಷ್ಟಕದಲ್ಲೂ ಕೂಡ ಶಿವನ ಹಾಗೂ ಸಂಖ್ಯೆ ಮೂರರ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಲಾಗಿದೆ.
ಶಿವನಿಗೆ ಪ್ರಿಯವಾದ ಬಿಲ್ವ ಕೂಡ ಮೂರು ದಳಗಳಿಂದ 
ಕೂಡಿರುತ್ತದೆ ಸತ್ವ , ರಜಸ್ಸು ಹಾಗೂ ತಮಸ್ಸು ಎಂಬ ಮೂರು ಗುಣಗಳಿಗೂ ಕೂಡ ಈ ಶಿವನೆ ಒಡೆಯ ಇನ್ನೂ ಈತ ಮುಕ್ಕಣ್ಣ , ತ್ರಿಪುಂಡ್ರಧಾರಿ ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವವನು ಇನ್ನೂ ಜಗತ್ತಲ್ಲಿ ಹುಟ್ಟುವ ಪ್ರತಿ ಜೀವಿಯ ಸೃಷ್ಟಿ, ಸ್ಥಿತಿ ಹಾಗೂ ಲಯ ಅನ್ನೋ ಮೂರು ಅವಸ್ಥೆಯನ್ನು ಸಾಗಿ ಹೋಗಲೇಬೇಕು. ವಿಶೇಷ ಅಂದರೆ ಭೂತ , ವರ್ತಮಾನ ಹಾಗೂ ಭವಿಷ್ಯತ್ತು ಅನ್ನೋ ತ್ರಿಕಾಲಗಳ‌ ನಿಯಂತ್ರಕ ಕೂಡ ಶಿವನೇ ಅನ್ನೋದನ್ನು ಸಾಂಕೇತಿಕವಾಗಿ ಸೂಚಿಸುವುದಕ್ಕಾಗಿಯೇ ಆತ ತ್ರಿಶೂಲಧಾರಿಯಾಗಿದ್ದಾನೆ. 
ಹೀಗೇ ನಮ್ಮ ಬದುಕಿನ ಮೂರು ಅವಸ್ಥೆಯನ್ನು ಪ್ರತಿ ಮನುಷ್ಯನಲ್ಲಿ ಇರುವ ತ್ರಿಗುಣಗಳು ,ಜಗತ್ತಿನ ಗತಿಯನ್ನು ಗುರುತಿಸುವ ತ್ರಿಕಾಲ, ಹೀಗೆ ಹಲವು ಸಂಗತಿಗಳ ಸಂಕೇತ ಅನ್ನಿಸಿಕೊಂಡಿದೆ ಶಿವನ ತ್ರಿಶೂಲ. ಅಷ್ಟೇ ಅಲ್ಲ ಈ ತ್ರಿಶೂಲದ ಹಿಂದೆ ಹಲವಾರು ಯೋಗದ ರಹಸ್ಯಗಳಿವೆ, ಯೋಗಶಾಸ್ತ್ರದ ಪ್ರಕಾರ ನಮ್ಮ ಶರೀರದಲ್ಲಿ ಒಟ್ಟು 72,000 ನರನಾಡಿಗಳು ಇವೆ ಶರೀರದಲ್ಲಿ ಪ್ರಾಣಶಕ್ತಿ ಹರಿಸಿ ನಮಗೆ ಚೈತನ್ಯವನ್ನು ತುಂಬುವುದೇ ಶರೀರದಲ್ಲಿರೋ ಈ ನಾಡಿಗಳು ಅನ್ನುತ್ತೆ ಯೋಗಶಾಸ್ತ್ರ. ಇಂತಹ ಎಪ್ಪತ್ತೆರಡು ಸಾವಿರ ನಾಡಿಗಳ ಪೈಕಿ ಇಡಾ, ಪಿಂಗಳಾ, ಹಾಗೂ ಸುಶುಮ್ನ ಅನ್ನೋ 3 ನಾಡಿಗಳು ತುಂಬಾನೇ ಪ್ರಮುಖವಾದವು.

ಮೂಗಿನ ಎಡಭಾಗದ ಹೊಳ್ಳೆ ಇಡಾನಾಡಿಯ ಸಂಪರ್ಕ ಹೊಂದಿದ್ದರೆ ಬಲಹೊಳ್ಳೆ ಪಿಂಗಳಾ ನಾಡಿಯ ಸಂಬಂಧವನ್ನು ಹೊಂದಿದೆ ಇನ್ನೂ ಇಡಾ , ಪಿಂಗಳ ನಾಡಿಗಳ ನಡುವೆ ಸುಶಮ್ನ ಅನ್ನೋ ನಾಡಿ ಹರಿಯುತ್ತೆ ಅನ್ನೋ ಮಾಹಿತಿ ಯೋಗಶಾಸ್ತ್ರದಲ್ಲಿ ಸಿಗುತ್ತದೆ. ಏಕಕಾಲಕ್ಕೆ ಮೂಗಿನ ಎರಡು ಹೊಳ್ಳೆಗಳು ತೆರೆದುಕೊಂಡಿದ್ದಾಗ ಮಾತ್ರ ಸುಶಮ್ನ ನಾಡಿ ಜಾಗೃತಾವಸ್ತೆಯಲ್ಲಿ ಇರುತ್ತೆ, ಇನ್ನೂ ಇಡಾ ಹಾಗೂ ಪಿಂಗಳ ನಾಡಿಗಳು ನಮ್ಮ ಹಣೆಯ ಭಾಗದಲ್ಲಿ ಮುಕ್ತಾಯವಾದರೆ ಸುಶಮ್ನ ನಾಡಿ ನಡುನೆತ್ತಿಯ ಮಧ್ಯಭಾಗದಲ್ಲಿರುವ ಸಹಸ್ರಾರದಲ್ಲಿ ತೆರೆದುಕೊಳ್ಳುತ್ತೆ ಹೀಗೆ ನಮ್ಮ ಶರೀರದ ಚೈತನ್ಯ ಶಕ್ತಿಗೆ ಕಾರಣವಾಗಿರೋ ಮೂರು ನಾಡಿಗಳು ಶಿವನ ತ್ರಿಶೂಲವನ್ನು ಪ್ರತಿನಿಧಿಸುತ್ತವೆ ಅಂತ ಹೇಳಲಾಗುತ್ತದೆ.
ತ್ರಿಶೂಲದ ಎಡಭಾಗದ ಹಲಗು ಇಡಾ ನಾಡಿಯ ಸಂಕೇತವಾದರೆ ,ಬಲಭಾಗದ ಹಲಗು ಪಿಂಗಳ ನಾಡಿಯ ಸಂಕೇತ ಅನ್ನಿಸಿಕೊಂಡಿದೆ, ಇನ್ನೂ ತ್ರಿಶೂಲದ ಮಧ್ಯಭಾಗದಲ್ಲಿ ಸ್ವಲ್ಪ ಹೆಚ್ಚು ಉದ್ದವಿರುವ ಹಲಗು ಸುಶಮ್ನ ನಾಡಿಯ ಸೂಚಕವಾಗಿದೆ.

ಶಿವನ ಕೈಯಲ್ಲಿರುವ ತ್ರಿಶೂಲ ಬರಿ ಅಲಂಕಾರಕ್ಕೆ ಮಾತ್ರ ಅಲ್ಲ ಅದರ ಹಿಂದೆ ಹತ್ತು ಹಲವು ಸಂದೇಶಗಳು ಇವೆ ಅನ್ನೋ ಬಗ್ಗೆ ಸಂಕ್ಷಿಪ್ತ ಮಾಹಿತಿ ,ಇದು ಕೇವಲ ತ್ರಿಶೂಲ ಒಂದೇ ಅಲ್ಲ ನಮ್ಮ ಸನಾತನ ಧರ್ಮದ ದೇವಾದಿ-ದೇವತೆಗಳ ಕೈಯಲ್ಲಿರುವ ಬೇರೆ ಬೇರೆ ವಿಧದ ಆಯುಧಗಳ ಹಿಂದೆ ಕೂಡ ಇಂತದ್ದೇ ಅತ್ಯಾದ್ಭುತ ಕಲ್ಪನೆ ಹಾಗೂ ರಹಸ್ಯಗಳಿವೆ.
#ಜೈಹಿಂದ್ #ಜೈಕರ್ನಾಟಕ

No comments:

Post a Comment

If you have any doubts. please let me know...