July 27, 2021

ಗ್ರಹಗಳ ಕುರಿತಾದ ಮಾಹಿತಿ ಭಾಗವತದಲ್ಲಿ

ಭಾಗವತದ ಒಂದಷ್ಟು ಮಾಹಿತಿ.

ಯಾವುದೇ ರೀತಿಯ ವಿಶೇಷ ಉಪಕರಣಗಳ ಬಳಕೆ ಇಲ್ಲದ ಕಾಲದಲ್ಲಿ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕಿರುವ ದೂರವನ್ನು ಗಣಿಸಿ ಹೇಳಿದ್ದು ಆಶ್ಚರ್ಯವೆನ್ನಬಹುದು. ಯೋಜನಗಳ ಅಳತೆ ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಗ್ರಹಗಳ ಇರುವಿಕೆ ಮತ್ತು ಅವುಗಳ ಚಲನೆಯ ಸಮಯ ಸರಿ ಎನ್ನಿಸುತ್ತದೆ. ಮಹಾಬಾರತದಲ್ಲಿನ ಗ್ರಹಣಗಳ ಕುರಿತಾಗಿ ಇರುವ ಮಾಹಿತಿ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಗ್ರಹಗಳ ಕುರಿತಾದ ಮಾಹಿತಿ ಭಾಗವತದಲ್ಲಿ ಸಿಗುತ್ತದೆ.    

ಶ್ರೀಮದ್ ಭಾಗವತದ ಐದನೇ ಸ್ಕಂಧದ 22ನೇ ಅಧ್ಯಾಯದಲ್ಲಿ ಅತ್ಯಂತ ಸುಂದರವಾಗಿ ಖಗೋಲದ ಕೆಲವು ವಿಷಯಗಳನ್ನು ಹೇಳಲಾಗಿದೆ. ಸೂರ್ಯನು ಒಂದು ಕ್ಷಣದಲ್ಲಿ 2200 ಯೋಜನಗಳಷ್ಟು ದೂರದವರೆಗೆ ಸಂಚರಿಸುತ್ತಾ ಒಂದು ದಿನದಲ್ಲಿ ಅಂದರೆ ಅರವತ್ತು ಘಳಿಗೆಗಳಲ್ಲಿ ಒಂಬತ್ತು ಕೋಟಿ ಐವತ್ತೊಂದು ಲಕ್ಷ ಯೋಜನಗಳ ದೂರವನ್ನು ಸುತ್ತುತ್ತಾನಂತೆ. ಅಂದರೆ ಸೂರ್ಯ ತನ್ನ ಪಥದಲ್ಲಿ ಸುತ್ತುತ್ತಾನೆ. ಭೂಮಿಯು ಸೂರ್ಯನನ್ನು ಸುತ್ತುತ್ತದೆ.

ಯದೇತದ್ಭಗವತ ಆದಿತ್ಯಸ್ಯ ಮೇರುಂ ಧ್ರುವಂ ಚ ಪ್ರದಕ್ಷಿಣೇನ ಪರಿಕ್ರಾಮತೋ ರಾಶೀನಾಮಭಿಮುಖಂ ಪ್ರಚಲಿತಂ ಚಾಪ್ರದಕ್ಷಿಣಂ ಭಗವತೋಪವರ್ಣಿತಮಮುಷ್ಯ ವಯಂ ಕಥಮನುಮಿಮೀಮಹೀತಿ || ಸೂರ್ಯನು ಮೇರುಪರ್ವತವನ್ನು ಮತ್ತು ಧ್ರುವನನ್ನೂ ಪ್ರದಕ್ಷಿಣಾಕಾರವಾಗಿ ಸುತ್ತುತ್ತಿದ್ದರೂ ಸಹ ರಾಶಿಗಳಿಗೆ ಎದುರಾಗಿ ಅಪ್ರದಕ್ಷಿಣವಾಗಿಯೇ ಸುತ್ತುತ್ತಾನೆ. ನಕ್ಷತ್ರಗಳ ಜೊತೆ ಕೂಡಿ ಮೇರುವನ್ನೂ ಮತ್ತು ಧ್ರುವನನ್ನೂ ಪ್ರದಕ್ಷಿಣವಾಗಿ ಬಳಸುತ್ತಿರುವ ಕಾಲಚಕ್ರವನ್ನು ಆಶ್ರಯಿಸಿಕೊಂಡು ಚಕ್ರಗತಿಯ ಜೊತೆಗೆ ಸಂಚರಿಸುತ್ತಿರುವ ಸೂರ್ಯ ಮತ್ತು ನಕ್ಷತ್ರಗಳು ಮೇರುವಿಗೆ ಪ್ರದಕ್ಷಿಣೆ ಮಾಡುತ್ತಿರುವ ಕಾಲಚಕ್ರದ ಸಂಚಾರಕ್ಕೆ ವಿರುದ್ಧವಾಗಿ ಅಪ್ರದಕ್ಷಿಣಾಕಾರವಾದ ಗತಿಯಿಂದ ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕ್ಕೆ ಮತ್ತು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಿವೆ. ದ್ವಾದಶಧಾ ವಿಭಜ್ಯ ಷಟ್ಸು ವಸನ್ತಾದಿಷ್ವೃತುಷು ಯಥೋಪಜೋಷಮೃತು ಗುಣಾನ್ವಿದಧಾತಿ. . . . ಎನ್ನುವಲ್ಲಿ ಜಗತ್ತಿನ ಪ್ರತಿಯೊಂದು ಘಟನೆಗಳಿಗೂ ಕಾರಣನಾದ ಸೂರ್ಯನು ತನ್ನನ್ನು ಹನ್ನೆರಡು ಬಗೆಗಳನ್ನಾಗಿ ಮಾಡಿಕೊಂಡು ಚೈತ್ರ, ವೈಶಾಖ ಮುಂತಾದ ಹನ್ನೆರಡು ಮಾಸಗಳಲ್ಲಿ ಪ್ರತಿಯೊಂದರಲ್ಲೂ ಒಂದೊಂದು ಹೆಸರಿನಿಂದ ಕರೆಸಿಕೊಂಡು ಜಗತ್ತಿನ ಜೀವಿಗಳು ಆಯಾ ಜೀವನ ಕ್ರಮವನ್ನು ಅನುಭವಿಸುವುದಕ್ಕಾಗಿ ವಸಂತದಿಂದ ಆರು ಋತುಗಳಲ್ಲೂ ಬಿಸಿ ಚಳಿ ಮತ್ತು ಗಾಳಿಗಳೇ ಮುಂತಾದ ಋತುಧರ್ಮಗಳನ್ನುಂಟುಮಾಡುತ್ತಾನೆ. ಸೂರ್ಯನು ಭೂಮಿ ಮತ್ತು ಸ್ವರ್ಗಗಳ ಮಧ್ಯದಲ್ಲಿದ್ದು ಸಂವತ್ಸರಗಳ ಭಾಗಗಳಾಗಿ ರಾಶಿಗಳ ಹೆಸರುಗಳಾಗಿ ಮೇಷ, ವೃಷಭ ಮುಂತಾದ ಹನ್ನೆರಡು ತಿಂಗಳುಗಳನ್ನುಂಟುಮಾಡುತ್ತಾನೆ. ಶುಕ್ಲಪಕ್ಷ ಮತ್ತು ಕೃಷ್ಣಪಕ್ಷಗಳೆಂಬ ಎರಡು ಪಕ್ಷಗಳ ಕಾಲಕ್ಕೆ ಚಾಂದ್ರಮಾನಮಾಸವೆಂದೂ, ಪಿತೃದೇವತೆಗಳ ಒಂದು ಹಗಲು ಮತ್ತು ರಾತ್ರಿಗಳ ಕಾಲಕ್ಕೆ ಪಿತೃಮಾನಮಾಸವೆಂದೂ, ಸೂರ್ಯನು ಒಂದು ರಾಶಿಯಲ್ಲಿ ಅಂದರೆ ಎರಡೂಕಾಲು ನಕ್ಷತ್ರಗಳಲ್ಲಿ  ಸಂಚಾರಮಾಡುವಷ್ಟು ಕಾಲಕ್ಕೆ ಸೌರಮಾನಮಾಸವೆಂದೂ ಹೆಸರು. ಸೂರ್ಯನು ಸಂವತ್ಸರದ ಆರನೆಯ ಒಂದು ಭಾಗವನ್ನು ಭೋಗಿಸುವ ಕಾಲಕ್ಕೆ ಅಥವಾ ಎರಡು ರಾಶಿಗಳಲ್ಲಿ ಸಂಚರಿಸುವಷ್ಟು ಕಾಲಕ್ಕೆ ಒಂದು ಋತುವೆಂದು ಕರೆಯಲಾಗುತ್ತದೆ. ಸೂರ್ಯನು ಖಗೋಳದ ಅರ್ಧಭಾಗವಾಗಿರುವ ಆರು ರಾಶಿಗಳನ್ನು ದಾಟುವ ಕಾಲವನ್ನು ‘ಅಯನ’ ಎಂದು ಕರೆಯುತ್ತಾರೆ. ಹಾಗೆಯೇ ಸೂರ್ಯನು ತನ್ನ ಮಂದಗತಿ, ತೀವ್ರಗತಿ ಮತ್ತು ಸಮಾನಗತಿಗಳಿಂದ ಸ್ವರ್ಗ ಮತ್ತು ಭೂಮಂಡಲಗಳಿಂದೊಡಗೂಡಿದ ಇಡೀ ಆಕಾಶವನ್ನು ಸುತ್ತಿ ಬರುವ ಕಾಲವನ್ನು ಸಂಚಾರಕ್ಕೆ ತಕ್ಕಂತೆ ಸಂವತ್ಸರ, ಪರಿವತ್ಸರ, ಇಡಾವತ್ಸರ, ಅನುವತ್ಸರ ಅಥವಾ ವತ್ಸರಗಳೆಂದು ಕರೆಯಲಾಗುತ್ತದೆ. ಹೀಗೆಯೇ ಚಂದ್ರನು ಸೂರ್ಯಕಿರಣ ಮಂಡಲಗಳಿಗಿಂತಲೂ ಒಂದು ಲಕ್ಷಯೋಜನಗಳಷ್ಟು ಎತ್ತರದಲ್ಲಿ ಇರುತ್ತಾನೆ. ಚಂದ್ರನ ಗತಿಯು ವೇಗವಾಗಿದೆ. ಚಂದ್ರನು ಎಲ್ಲ ನಕ್ಷತ್ರಗಳಿಗಿಂತಲೂ ಮುಂದೆ ಇರುತ್ತಾನೆ. ಸೂರ್ಯನ ಒಂದು ವರ್ಷದ ಮಾರ್ಗವನ್ನು ಒಂದು ತಿಂಗಳಿನಲ್ಲೂ, ಸೂರ್ಯನ ಒಂದು ತಿಂಗಳಿನ ಮಾರ್ಗವನ್ನು ಎರಡೂ ಕಾಲು ದಿವಸಗಳಲ್ಲೂ, ಸೂರ್ಯನ ಒಂದು ಪಕ್ಷದ ಮಾರ್ಗವನ್ನು ಒಂದೇ ದಿವಸದಲ್ಲೂ ಚಂದ್ರನು ಸಂಚರಿಸುವನು. ಚಂದ್ರನು ಎಲ್ಲಾ ಜೀವಗಳಿಗೂ ಆಹಾರಗಳನ್ನು ಒದಗಿಸುವವನಾಗಿರುವುದರಿಂದ ಪ್ರಾಣಸ್ವರೂಪ. ಆತನು ಕೃಷ್ಣಪಕ್ಷದಲ್ಲಿ ತನ್ನ ಕ್ಷಯ ಹೊಂದುತ್ತಿರುವ ಕಲೆಗಳಿಂದ ಪಿತೃಗಣಗಳಿಗೂ ಮತ್ತು ಶುಕ್ಲಪಕ್ಷದಲ್ಲಿ ವೃದ್ಧಿಹೊಂದುತ್ತಿರುವ ಕಲೆಗಳಿಂದ ದೇವಗಣಗಳಿಗೂ ಹಗಲು-ರಾತ್ರಿಗಳ ವಿಭಾಗವನ್ನು ಮಾಡಿಕೊಡುತ್ತಾನೆ ಮತ್ತು ಮೂವತ್ತು ಮುಹೂರ್ತಗಳ ಕಾಲದಿಂದ ಒಂದೊಂದು ನಕ್ಷತ್ರವನ್ನು ದಾಟುತ್ತಾನೆ. ಚಂದ್ರನಿಗಿಂತಲೂ ಮೂರು ಲಕ್ಷ ಯೋಜನಗಳಷ್ಟು ಮೇಲೆ ಅಭಿಜಿತ್ ನಕ್ಷತ್ರವೂ ಸೇರಿ ಇಪ್ಪತ್ತೆಂಟು ನಕ್ಷತ್ರಗಳಿವೆ. ಈ ಅಭಿಜಿತ್ತೆಂಬ ನಕ್ಷತ್ರವು ಉತ್ತರಾಷಾಢಾನಕ್ಷತ್ರ ಮತ್ತು ಶ್ರವಣನಕ್ಷತ್ರಗಳ ಸಂಧಿಯಲ್ಲಿ ಇರುವ ನಕ್ಷತ್ರ. ಭಾವಾರ್ಥದೀಪಿಕಾದಲ್ಲಿ ‘ಅಭಿಜಿನ್ನಾಮ ನಕ್ಷತ್ರಂ | ಉಪರಿಷ್ಟಾದಾಷಾಢಾನಾಂ | ಅವಸ್ತೂಚ್ಛ್ರೋಣಾಯೈ | ಎಂದಿದೆ. ಅಂದರೆ  ಉತ್ತರಾಷಾಢಾ-ಶ್ರವಣನಕ್ಷತ್ರಗಳ ಸಂಯೋಗವೇ ಅಭಿಜಿನ್ನಕ್ಷತ್ರ. ಎಂದರೆ ವಿಜಯಧ್ವಜೀಯದಲ್ಲಿ ಅಶ್ವಿನೀ ಮತ್ತು ರೇವತಿಗಳ ಸಂಧಿಯೇ ಅಭಿಜಿತ್ತೆಂದು ಹೇಳಲಾಗಿದೆ. ಇನ್ನು ಸಾರಾರ್ಥದರ್ಶಿನೀಯಲ್ಲಿ ಉತ್ತರಾಷಾಢನಕ್ಷತ್ರದ ಅರ್ಧಭಾಗದಿಂದ ಶ್ರವಣದ ಆದಿಯಲ್ಲಿ ನಾಲ್ಕು ಲಿಪ್ತಿಗಳವರೆಗೂ ಅಭಿಜಿತ್ ಎಂದು ಸಂಜ್ಞೆ ಎನ್ನಲಾಗಿದೆ. ಈ ಅಭಿಜಿತ್ ಕುರಿತಾಗಿ ಒಂದು ಕಥೆಯೇ ಇದೆ. ಅದು ಈಗಾಗಲೇ ಮೊದಲೊಮ್ಮೆ ಬರೆದಾಗಿದೆ. ಈ ನಕ್ಷತ್ರಗಳಿಗಿಂತಲೂ ಎರಡು ಲಕ್ಷ ಯೋಜನಗಳಷ್ಟು ಎತ್ತರದಲ್ಲಿ ಶುಕ್ರಗ್ರಹ ಕಾಣಿಸುತ್ತದೆ. ಅದು ಸೂರ್ಯನಂತೆಯೇ ನಿಧಾನ ಮತ್ತು ವೇಗವಾಗಿ ಹಾಗೂ ಸಮಗತಿಗಳಿಂದ ಕೂಡಿ ಕೆಲವೊಮ್ಮೆ ಸೂರ್ಯನಿಗೆ ಹಿಂದೆಯೂ, ಕೆಲವೊಮ್ಮೆ ಸೂರ್ಯನಿಗಿಂತ ಮುಂದೆಯೂ ಇನ್ನು ಕೆಲವು ವೇಳೆಗಳಲ್ಲಿ ಸೂರ್ಯನ ಜೊತೆಗೂ ಸಂಚರಿಸುವುದು. ಶುಕ್ರ ಸಾಮಾನ್ಯವಾಗಿ ಪ್ರಾಣಿಗಳಿಗೆ ಅನುಕೂಲವನ್ನೇ ಉಂಟುಮಾಡುವ ಗ್ರಹ. ಸೂರ್ಯನ ಸಂಚಾರದಿಂದ ಮಳೆಯುಂಟಾಗುವುದು. ಮಳೆ ಬೀಳುವುದಕ್ಕೆ ಯಾವ ಯಾವ ಗ್ರಹಗಳಿಂದ ತಡೆಯುಂಟಾಗುವುದೋ ಆ ಗ್ರಹಗಳನ್ನು ಇದು ಶಾಂತಿಗೊಳಿಸುವುದು ಎಂದು ಊಹಿಸಬಹುದು. ಶುಕ್ರಗ್ರಹವನ್ನು ವರ್ಣಿಸಿದ್ದರಿಂದ ಬುಧನನ್ನೂ ವರ್ಣಿಸಿದಂತೆಯೇ. ಶುಕ್ರನ ಸಂಚಾರಕ್ಕೆ ಅನುಸಾರವಾಗಿಯೇ ಬುಧಗ್ರಹದ ಸಂಚಾರವನ್ನೂ ತಿಳಿಯಬೇಕು. ಚಂದ್ರನ ಮಗನಾದ ಬುಧನು ಶುಕ್ರಗ್ರಹಕ್ಕಿಂತಲೂ ಎರಡು ಲಕ್ಷಯೋಜನಗಳಷ್ಟು ಎತ್ತರದಲ್ಲಿದ್ದಾನೆ. ಈ ಗ್ರಹವೂ ಸಾಮಾನ್ಯವಾಗಿ ಮಂಗಲಕರವೇ ಆಗಿದೆ. ಆದರೆ ಬುಧನು ಸೂರ್ಯನ ಗತಿಯನ್ನು ಬಿಟ್ಟು ಮುಂದಕ್ಕೆ ಹೋದದ್ದೇ ಆದರೆ ಬಿರುಗಾಳಿ, ಒಣಮೋಡ ಮತ್ತು ಅನಾವೃಷ್ಟಿಗಳು ಉಂಟಾಗುತ್ತವೆ. ಬುಧಗ್ರಹಕ್ಕೆ ಎರಡು ಲಕ್ಷ ಯೋಜನಗಳಷ್ಟು ಎತ್ತರದಲ್ಲಿ ಮಂಗಲಗ್ರಹವಿದೆ. ಅದು ವಕ್ರಗತಿಯಿಂದ ನಡೆಯದೇ ಇದ್ದರೆ ಒಂದೊಂದು ರಾಶಿಯನ್ನೂ ಮೂರು ಮೂರು ಪಕ್ಷಗಳಲ್ಲಿ ಇರುತ್ತಾ ಹನ್ನೆರಡು ರಾಶಿಗಳನ್ನು ದಾಟಿ ಹೋಗುತ್ತದೆ. ಅದಕ್ಕೂ ಮೇಲೆ ಎರಡು ಲಕ್ಷ ಯೋಜನಗಳಷ್ಟು ಎತ್ತರದಲ್ಲಿ ಬೃಹಸ್ಪತಿಯಿದ್ದಾನೆ. ಆತನು ವಕ್ರಗತಿಯಿಂದ ನಡೆಯದಿದ್ದರೆ ಒಂದೊಂದು ರಾಶಿಯನ್ನೂ ಒಂದೊಂದು ವರ್ಷದಲ್ಲಿ ತಿರುಗುತ್ತಾನೆ. ಗುರುವು ಸಾಮಾನ್ಯವಾಗಿ ಎಲ್ಲರಿಗೂ ಶುಭಕರನಾಗಿ ಅನುಕೂಲನಾಗಿರುತ್ತಾನೆ. ಗುರು ಗ್ರಹಕ್ಕೆ ಎರಡು ಲಕ್ಷಯೋಜನಗಳಷ್ಟು ಎತ್ತರದಲ್ಲಿ ಶನಿಯನ್ನು ನೋಡುತ್ತೇವೆ. ಈತನು ಒಂದೊಂದು ರಾಶಿಯಲ್ಲಿ ಮೂವತ್ತು ತಿಂಗಳುಗಳ ಕಾಲ ಇರುತ್ತಾನೆ. ಆದುದರಿಂದ ಈತನಿಗೆ ಎಲ್ಲ ರಾಶಿಗಳನ್ನೂ ದಾಟಿಹೋಗಲು ಮೂವತ್ತು ವರ್ಷಗಳಾಗುತ್ತವೆ. ಈ ಶನಿಗ್ರಹಕ್ಕೆ ಮೇಲೆ ಹನ್ನೊಂದು ಲಕ್ಷ ಯೋಜನಗಳಷ್ಟು ದೂರದಲ್ಲಿ ಸಪ್ತರ್ಷಿಮಂಡಲವಿದೆ. ಸಪ್ತರ್ಷಿಮಂಡಲಕ್ಕಿಂತಲೂ ಹದಿಮೂರು ಲಕ್ಷ ಯೋಜನಗಳಷ್ಟು ಎತ್ತರದಲ್ಲಿ ಧ್ರುವನಕ್ಷತ್ರವಿದೆ. 

ಶಿಶುಮಾರ ಚಕ್ರದಲ್ಲಿ ಅಭಿಜಿತ್ತೆಂಬ ನಕ್ಷತ್ರದಿಂದ ಪ್ರಾರಂಭವಾಗಿ ಪುನರ್ವಸೂ ನಕ್ಷತ್ರದವರೆಗಿನ ಹದಿನಾಲ್ಕು ನಕ್ಷತ್ರಗಳಿವೆ. ಆ ಹದಿನಾಲ್ಕು ನಕ್ಷತ್ರಗಳಿಗೆ ಉತ್ತರಾಯಣವೆಂದು ಹೆಸರು. ಎಡಭಾಗದಲ್ಲಿ ಪುಷ್ಯನಕ್ಷತ್ರದಿಂದ ಪ್ರಾರಂಭವಾಗಿ ಉತ್ತರಾಷಾಢದವರೆಗೆ ಹದಿನಾಲ್ಕು ನಕ್ಷತ್ರಗಳಿವೆ. ಅವುಗಳನ್ನು ದಕ್ಷಿಣಾಯನವೆಂದು ಕರೆಯುತ್ತಾರೆ. ಹೀಗೆ ಆ ಶಿಶುಮಾರ ಚಕ್ರದ ಎರಡು ಪಕ್ಕಗಳಲ್ಲಿಯೂ ಅಶ್ವಿನಿಯೇ ಮುಂತಾದ ಇಪ್ಪತ್ತೆಂಟು ನಕ್ಷತ್ರಗಳೂ ಸಮಸಂಖ್ಯೆಯ ಅವಯವಗಳಾಗಿವೆ. ಕುಂಡಲಾಕಾರದ ರಚನೆಯಲ್ಲಿ ಎರಡೂ ಕಡೆಯ ಅಂಗಗಳು ಸಮನಾಗಿರುವಂತೆ ಇಲ್ಲಿ ನಕ್ಷತ್ರಗಳ ಸಂಖ್ಯೆಯೂ ಸಮವಾಗಿದೆ. ಅದರ ಬೆನ್ನಿನಲ್ಲಿ ಅಜವೀಥಿಯೂ, ಮೂಲಾ, ಪೂರ್ವಾಷಾಢಾ ಮತ್ತು ಉತ್ತರಾಷಾಢಗಳೆಂಬ ಮೂರು ನಕ್ಷತ್ರಗಳ ಸಮೂಹವೂ ಬೆಳಗುತ್ತಿದೆ. ಉದರದಲ್ಲಿ ಆಕಾಶಗಂಗೆಯು ಪ್ರಕಾಶಿಸುತ್ತಿದೆ. ಅದರ ಬಲ ಮತ್ತು ಎಡಭಾಗಗಳ ಕಟಿಗಳಲ್ಲಿ ಕ್ರಮವಾಗಿ ಪುನರ್ವಸೂ ಮತ್ತು ಪುಷ್ಯನಕ್ಷತ್ರಗಳು ಹೊಳೆಯುತ್ತಿವೆ. ಹಿಂದುಗಡೆಯ ಬಲ ಮತ್ತು ಎಡಪಾದಗಳಲ್ಲಿ ಆರ್ದ್ರೆ ಮತ್ತು ಆಶ್ಲೇಷಾನಕ್ಷತ್ರಗಳು ಪ್ರಕಾಶಿಸುತ್ತಿವೆ ಮತ್ತು ಬಲ ಮತ್ತು ಎಡಭಾಗಗಳ ಮೂಗುಹೊಳ್ಳೆಗಳಲ್ಲಿ ಕ್ರಮವಾಗಿ ಅಭಿಜಿತ್ ಮತ್ತು ಉತ್ತರಾಷಾಢಾನಕ್ಷತ್ರಗಳನ್ನು ನೋಡುತ್ತೇವೆ. ಹಾಗೆಯೇ ಬಲಗಣ್ಣು ಎಡಗಣ್ಣುಗಳಲ್ಲಿ ಕ್ರಮವಾಗಿ ಶ್ರವಣ ಮತ್ತು ಪೂರ್ವಾಷಾಢಾನಕ್ಷತ್ರಗಳೂ, ಬಲ ಮತ್ತು ಎಡಕಿವಿಗಳಲ್ಲಿ ಧನಿಷ್ಠಾ ಮತ್ತು ಮೂಲಾನಕ್ಷತ್ರಗಳೂ ವಿರಾಜಿಸುತ್ತಿವೆ. ಮಖೆಯೇ ಮುಂತಾದ ದಕ್ಷಿಣಾಯನದ ಎಂಟು ನಕ್ಷತ್ರಗಳು ಎಡಗಡೆಯ ಪಾದದ ವಂಕ್ರಿಗಳೆಂಬ ಮೂಳೆಗಳಲ್ಲಿ ಬೆಳಗುತ್ತಿವೆ. ಎಡಪಾದದ ವಂಕ್ರಿಗಳೆಂಬ ಮೂಳೆಗಳಲ್ಲಿ ಉತ್ತರಾಯಣವೆಂಬ ನಾಮಧೇಯವುಳ್ಳ ಮೃಗಶಿರೆಯೇ ಮುಂತಾದ ಎಂಟು ನಕ್ಷತ್ರಗಳು ಹಿಂದು ಮುಂದಾಗಿ ನೆಲೆಸಿವೆ. ಶತಭಿಷೆ ಮತ್ತು ಜ್ಯೇಷ್ಠೆ ಎಂಬ ಎರಡು ನಕ್ಷತ್ರಗಳು ಕ್ರಮವಾಗಿ ಬಲ ಮತ್ತು ಎಡ ಹೆಗಲುಗಳಲ್ಲಿ ಪ್ರಕಾಶಿಸುತ್ತಿವೆ. ಅದರ ಮೇಲೆ ದವಡೆಯಲ್ಲಿ ನಕ್ಷತ್ರರೂಪರಾದ ಅಗಸ್ತ್ಯರೂ, ಕೆಳದವಡೆಯಲ್ಲಿ ನಕ್ಷತ್ರ ರೂಪನಾದ ಯಮನೂ, ಮುಖಗಳಲ್ಲಿ ಮಂಗಳನೂ, ಲಿಂಗಪ್ರದೇಶದಲ್ಲಿ ಶನಿಯೂ, ಕತ್ತಿನ ಹೆರಳಿನಲ್ಲಿ ಬೃಹಸ್ಪತಿಯೂ, ಎದೆಯಲ್ಲಿ ಸೂರ್ಯನೂ, ಹೃದಯದಲ್ಲಿ ನಾರಾಯಣನೂ, ಮನಸ್ಸಿನಲ್ಲಿ ಚಂದ್ರನೂ, ಹೊಕ್ಕಳಿನಲ್ಲಿ ಶುಕ್ರನೂ, ಸ್ತನಗಳಲ್ಲಿ ಅಶ್ವಿನೀಕುಮಾರರೂ, ಪ್ರಾಣಾಪಾನಗಳಲ್ಲಿ ಬುಧನೂ, ಕತ್ತಿನಲ್ಲಿ ರಾಹುವೂ, ಸಮಸ್ತ ಅಂಗಗಳಲ್ಲಿ ಕೇತುವೂ, ರೋಮಗಳಲ್ಲಿ ಸಮಸ್ತ ತಾರೆಗಳೂ ನೆಲೆಗೊಂಡಿವೆ. 

#ಪುರಾಣದಲ್ಲಿ_ಗ್ರಹ_ 
ಸದ್ಯೋಜಾತರು

No comments:

Post a Comment

If you have any doubts. please let me know...