July 15, 2021

ನಾನು ಮಾನವನೆನ್ನುವ ಮನುವಿನ ಮಗ

ನಾನು ಮಾನವನೆನ್ನುವ ಮನುವಿನ ಮಗ 

ಹಿಂದೊಮ್ಮೆ ನಾನು ನಾಭಾನೇದಿಷ್ಠ ಎನ್ನುವ ಮನುವಿನ ಮಕ್ಕಳಲ್ಲಿ ಒಬ್ಬನ ಕುರಿತಾಗಿ ಬರೆದಿದ್ದೆ. ಆಸ್ತಿಯಲ್ಲಿನ ಹಕ್ಕುಗಳ ಕುರಿತಾಗಿ ಇದ್ದ ವಿಷಯ ಅದು ಐತರೇಯ ಬ್ರಾಹ್ಮಣವನ್ನಾಧರಿಸಿದ ಕಥೆ. ಅದರಲ್ಲಿ ಮನು ಮತ್ತು ಮನುವಿನ ಕರ್ತವ್ಯ ಎಲ್ಲವನ್ನೂ ವಿವರಿಸಿದ್ದೆ. ”ತಸ್ಮಾದೇವಂ ವಿದುಷಾ ಸತ್ಯಮೇವ ವದಿತವ್ಯಂ ಸ ಏಷ ಸಹಸ್ರನಿರ್ಮಂತ್ರೋ’ ಎನ್ನುವ ಮಂತ್ರದಲ್ಲಿ ವಿದ್ವಾಂಸನಾದವನು ಯಾವಾಗಲೂ ಸತ್ಯವನ್ನೇ ಹೇಳಬೇಕು. ಸತ್ಯದಿಂದಲೇ ಸಂಪತ್ಸಮೃದ್ಧಿಯಾಗಬೇಕು ಮತ್ತು ಆಗಿಯೇ ಆಗುತ್ತದೆ. ಯಶಸ್ಸು ಮತ್ತು ಕೀರ್ತಿಗಳು ಬರುವುದು ಸತ್ಯದಿಂದ ಎನ್ನುವುದಲ್ಲದೇ ಈ ಮಂತ್ರ ನಾಭಾನೇದಿಷ್ಠನಿಂದ ಪಠಿತವಾಗಿ ದೊರಕಿದ ಕಾರಣ ’ಸಹಸ್ರಸನಿಃ’ ಎಂದೇ ಪ್ರಸಿದ್ಧವಾಗಿದೆ. ಇವೆಲ್ಲವೂ ಸಹ ಹತ್ತನೇ ಮಂಡಲದ ೬೧ನೇ ಸೂಕ್ತದೃಷ್ಟಾರನಾದ ನಾಭಾನೇದಿಷ್ಠನದ್ದು. ಈ ಋಷಿ ತನ್ನ ತಂದೆಯನ್ನು ಮಾನವ ಎಂದು ಹೇಳಿಕೊಳ್ಳುತ್ತಾನೆ. ಅಂದರೆ ಮನುವಿನ ಮಕ್ಕಳಲ್ಲಿ ಒಬ್ಬನಾದ ಈತ ತಂದೆಯನ್ನು ಮಾನವ ಎನ್ನುತ್ತಾನೆ. ಅಲ್ಲಿಗೆ ಮನು ಎನ್ನುವುದು ಮಾನವರಿಗೆ. ಅಥವಾ ಮಾನವರ ಮೂಲದವರಿಗೆ ಎಂದು. 

ಇನ್ನು ಋಗ್ವೇದ ೧೦ನೇ ಮಂಡಲದ ೬೨ನೇ ಸೂಕ್ತದಲ್ಲಿ ನಾಭಾನೇದಿಷ್ಠನು ವಿಶ್ವೇದೇವತೆಗಳನ್ನು ಸ್ತುತಿಸುತ್ತಾ ಹೇಳುವ ಮಂತ್ರಗಳನ್ನು ಸ್ವಲ್ಪ ಗಮನಿಸುವೆ. ’ಯೇ ಯಜ್ಞೇನ ದಕ್ಷಿಣಯಾ ಸಮಕ್ತಾ’ ಎನ್ನುವ ಋಕ್ಕಿನ ಕೊನೆಯಲ್ಲಿ ’ಮಾನವಂ ಸುಮೇಧಸ’ ಎನ್ನುವುದಾಗಿ ಹೇಳಲ್ಪಟ್ಟಿದೆ. ಅಂದರೆ ಇಲ್ಲಿ ’ಮಾನವಂ’ ಎಂದಿರುವುದನ್ನು ಗಮನಿಸಿದರೆ ನಾಭಾನೇದಿಷ್ಠನು ಆಂಗೀರಸ ಮಹರ್ಷಿಗಳ ಯಾಗದ ಸಂದರ್ಭದಲ್ಲಿ ಬರುವ ಸನ್ನಿವೇಶದಲ್ಲಿ ತನ್ನ ತಂದೆಗೆ ಮಾನವ ಎನ್ನುತ್ತಾನೆ. ಅಂದರೆ ಮನುವಿನ ಮಕ್ಕಳೆಲ್ಲ ಇಲ್ಲಿ ಮಾನವರೇ ಆಗುತ್ತಾರೆ ಎನ್ನುವ ಭಾವವನ್ನು ಕೊಡುತ್ತಾನೆ. ಭಾಷ್ಯಕಾರರು ’ನಾಭಾನೇದಿಷ್ಠಂ ವೈ ಮಾನವಮಿತಿ’ ಎನ್ನುತ್ತಾರೆ. ’ಮಾನವಂ ಪೃತಿಗೃಭ್ಣೀತ’ ಎನ್ನುವಲ್ಲಿ ಮನುವಿನ ಮಗನಾದ ಮಾನವನಾದ ನನ್ನನ್ನು ಸ್ವೀಕರಿಸಿ ಎನ್ನುವುದು ಸಿಗುತ್ತ್ತದೆ. 
 
ಮುಂದಿನ ಋಕ್ಕಿನಲ್ಲಿ ಸಹ ’ಮಾನವಂ ಪೃತಿಗೃಭ್ಣೀತ’ ಎಂದು ಬರುತ್ತದೆ. ನೀವು ಒಂದು ಸಂವತ್ಸರದ ತನಕ ಯಾಗವನ್ನು ಮಾಡಿರುವಿರಿ. ನಿಮಗೆ ದೀರ್ಘಾಯುಷ್ಯವುಂಟಾಗಲಿ. ಮನುವಿನ ಮಗ ಮಾನವನಾದ ನನ್ನನ್ನು ಸ್ವೀಕರಿಸಿರಿ ಎನ್ನುತ್ತಾನೆ.

’ಯಂ ಋತೇನ ಸೂರ್ಯಮಾರೋಹಯನ್’ ಎನ್ನುವ ಮುಂದಿನ ಮಂತ್ರದಲ್ಲಿ ಸಹ ಮಾನವ ಎನ್ನುವ ಪದ ಬಳಕೆ ಕಂಡು ಬರುತ್ತದೆ. ಈ ಭೂಮಿಯ ಪಾವಿತ್ರ್ಯ ನಿಮ್ಮ ಯಜ್ಞದಿಂದ ಹೆಚ್ಚಾಗಿದೆ. ಭೂಮಿಯ ಮೇಲೆ ನಮಗಿರುವ ಶ್ರದ್ಧೆಯನ್ನು ದ್ವಿಗುಣಗೊಳಿಸಿದ್ದೀರಿ. ನಿಮಗೆ ಈ ಭೂಮಿಯಲ್ಲಿಯೇ ಉತ್ತಮವಾದ ಪ್ರಜಾ ಸಂತತಿ ಉಂಟಾಗಲಿ ಎನ್ನುವುದರ ಜೊತೆಗೆ ತಾನು ಮನುವಿನ ಮಗನಾದ ಮಾನವ ಎನ್ನುತ್ತಾನೆ. ಹೀಗೇ ಮನುವಿನ ಮಗನಾದ ನಾನು ಮಾನವ ಎನ್ನುವುದರ ಜೊತೆಗೆ ಮನು ಯಾರು ಎನ್ನುವುದಕ್ಕೂ ಉತ್ತರ ದೊರಕಿಸಿದ್ದಾನೆ. 
’ಸಲೋಕಪಾಲಾ ಮುನಯೋ ಮನೂನಾಮಾದ್ಯಂ ಮನುಂ ಪ್ರಾಞ್ಜಲಯಃ ಪ್ರಣೇಮುಃ’ ಎಂದು ಭಾಗವತ ಪುರಾಣದ ನಾಲ್ಕನೇ ಸ್ಕಂದದ ೬ನೇ ಅಧ್ಯಾಯದ ೩೯ನೇ ಶ್ಲೋಕದಲ್ಲಿ ಮನುವನ್ನು ಪ್ರಾಂಜಲನಾಗಿ ಬೇಡಿಕೊಳ್ಳುವುದು ಅಥವಾ ಪ್ರಾರ್ಥಿಸುವುದು ಸಿಗುತ್ತದೆ. 

’ವಿವಸ್ವಾನ್ ಮನವೇ ಪ್ರಾಹ ಮನುರಿಕ್ಷ್ವಾಕವೇಬ್ರವೀತ್’ ಎಂದು ಭಗವದ್ಗೀತೆಯಲ್ಲೂ ಬರುತ್ತದೆ. ಇಲ್ಲಿ ಮನು ಮತ್ತು ಸೂರ್ಯನಿಗೂ ಸಂಬಂದ ಕಾಣಿಸುತ್ತದೆ. ಮನು ಮತ್ತು ಯಮ ಸಹೋದದರು ಎನ್ನುವ ಉಲ್ಲೇಖ ಅನೇಕ ಕಡೆಗಳಲ್ಲಿದೆ. ಯಮನು ಮೃತ್ಯುವಿಗೆ ಅಧಿದೇವತೆಯಾದರೆ ಮನು ಮಾನವರಿಗೆ ಅಧಿದೇವತೆ. ಆತನಿಂದಲೇ ನಾವೆಲ್ಲ ಮಾನವರಾಗಿದ್ದು.

ಋಗ್ವೇದ ಮೂರನೇ ಮಂಡಲದ ೬೦ನೇ ಸೂಕ್ತದಲ್ಲಿ ವಿಶ್ವಾಮಿತ್ರ ಮಹರ್ಷಿ ಋಭುಗಳನ್ನು ಸ್ತುತಿಸುತ್ತಾ ’ಇಂದ್ರಸ್ಯ ಸಖ್ಯಂ ಋಭವಃ ಸಮಾನಶುರ್ಮನೋನಪಾತೋ’ ಎಂದಿರುವುದು ಋಭುಗಳು ಸಹ ಮನುವಿನ ಮಕ್ಕಳಾಗಿ ಮಾನವರಾಗಿದ್ದರು ಎನ್ನುವುದು ತಿಳಿದು ಬರುತ್ತದೆ ’ಮನುಷ್ಯಸ್ಯಾಂಗಿರಸ ಪುತ್ರಾಃ’ ಎನ್ನುವುದು ಭಾಷ್ಯಕಾರರು. ಮನುಷ್ಯರು ಅಂಗೀರಸನ ಮಕ್ಕಳು. ಅಂದರೆ ಮನುವಿನ ಮಕ್ಕಳು ಮಾನವರು. ಇಲ್ಲಿ ಮನು ಎಂದಾಕ್ಷಣ ಕಣ್ಣು ಕೆಂಪಗೆ ಮಾಡುವವರು ಅರ್ಥಮಾಡಿಕೊಳ್ಳಬೇಕಾದ್ದು ಇದನ್ನೇ ಮನುವನ್ನು ಹೇಳಿಕೊಂಡರೆ ತಮ್ಮನ್ನು ತಾವೇ ಹಳಿದುಕೊಂಡಂತೆ ಅಷ್ಟೇ.
ಮನುಕುಲಾದಿತ್ಯ, ಮನುಜ, ಮನುಜಾ, ಮನುಜಪತಿ, ಮನುಜಲೋಕ, ಮನುಜವ್ಯಾಘ್ರ, ಮನುಜಾತ, ಮನುಜಾತ್ಮಜ ಹೀಗೇ ಮನುವಿನ ಹೆಸರಿನ ಉಲ್ಲೇಖಗಳು ಬಹಳಷ್ಟು ಕಡೆ ಸಿಗುತ್ತವೆ. 

#ಮನು_ಮಾನವ 
Sadyojath

No comments:

Post a Comment

If you have any doubts. please let me know...