" ಸನಾತನ ವೀರಶೈವ ಧರ್ಮಕ್ಕೆ " ಮಹಾಚಾರ್ಯರ / ಶಿವಾಚಾರ್ಯರ ಕೊಡುಗೆ
ಸನಾತನ ವೀರಶೈವ ಧರ್ಮದ ಸಂಸ್ಥಾಪನೆಯಲ್ಲಿ ಪಂಚ ಪೀಠಗಳ ಪರಮಾಚಾರ್ಯರ ಹಾಗೂ ಅದರ ಸಂವರ್ಧನೆಯಲ್ಲಿ ಅವುಗಳ ಶಾಖಾ ಮಠಗಳ ಶಿವಾಚಾರ್ಯರ ಕೊಡುಗೆ ಅಪಾರ. ಇದನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಪೀಠಾಚಾರ್ಯರು, ಶಿವಾಚಾರ್ಯರು ಹಾಗೂ ಸದ್ಭಕ್ತರು ಆ ಮಹಾಚಾರ್ಯರ ಮತ್ತು ಶಿವಾಚಾರ್ಯರ ಸಂಸ್ಮರಣೋತ್ಸವವನ್ನು ಆಚರಿಸುವ ಪರಂಪರೆಯನ್ನು ಬೆಳೆಸಿಕೊಂಡು ಹೋಗಬೇಕಾಗಿದೆ ಆ ನಿಟ್ಟಿನಲ್ಲಿ ಚಿಂತಿಸುವದಕ್ಕಾಗಿ ಈ ಲೇಖನ.
ಪಂಚ ಪೀಠಗಳ ಪರಮಾಚಾರ್ಯರಾದ ಏಕಾಕ್ಷರ , ದ್ವ್ಯಕ್ಷರ, ತ್ರ್ಯಕ್ಷರ, ಚತುರಕ್ಷರ, ಪಂಚಾಕ್ಷರ ಶಿವಾಚಾರ್ಯ ಭಗವತ್ಪಾದರು ಕೃತಯುಗದಲ್ಲಿ ಮತ್ತು ಏಕವಕ್ತ್ರ ,ದ್ವಿವಕ್ತ್ರ ತ್ರಿವಕ್ತ್ರ ಚತುರ್ವಕ್ತ್ರ ಪಂಚವಕ್ತ್ರ ಭಗವತ್ಪಾದರು ತ್ರೇತಾಯುಗದಲ್ಲಿ ಸುರರಿಗೆ ಹಾಗೂ ಅಸುರರಿಗೆ ರತ್ನಮಯ ಲಿಂಗ ಧಾರಣೆಯನ್ನು ಮಾಡಿ ವೇದಾಗಮಗಳ ಆಧಾರದಿಂದ ಅವರಿಗೆ ಲಿಂಗಾಂಗ ಸಾಮರಸ್ಯವನ್ನು ಬೊಧಿಸುವ ಮೂಲಕ ವೀರಶೈವ ಧರ್ಮವನ್ನು ಪ್ರತಿಷ್ಠಾಪಿಸಿದ್ದರು. ಮುಂದೆ ದ್ವಾಪರ ಯುಗದಲ್ಲಿ ಅವರೇ
ರೇಣುಕ ,ದಾರುಕ ,ಘಂಟಾಕರ್ಣ, ಧೇನುಕರ್ಣ ಮತ್ತು ವಿಶ್ವಕರ್ಣ ಆಚಾರ್ಯರೆಂಬ ನಾಮದಿಂದ ಭೂಲೋಕದಲ್ಲಿ ಲಿಂಗೋದ್ಭವರಾಗಿ ಅವತರಿಸಿ ಕ್ರಮವಾಗಿ ಅಗಸ್ತ್ಯ, ದಧೀಚಿ, ವ್ಯಾಸ , ಸಾನಂದ ಹಾಗೂ ದೂರ್ವಾಸ ಮಹರ್ಷಿಗಳಿಗೆ ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ ಮತ್ತು ಪಂಚವರ್ಣ ಸೂತ್ರಗಳನ್ನು ಉಪದೇಶಿಸಿ ಭೂಲೋಕದಲ್ಲಿ ವೀರಶೈವ ಧರ್ಮವನ್ನು ಪ್ರತಿಷ್ಠಾಪಿಸಿದರು. ಈ ಪಂಚ ಸೂತ್ರಗಳಲ್ಲಿ ಜೀವ, ಈಶ್ವರ, ಜಗತ್ತು, ಬಂಧ ಮತ್ತು ಮೋಕ್ಷ ಗಳೆಂಬ ದಾರ್ಶನಿಕ ವಿಚಾರಗಳು ಅತ್ಯಂತ ಸೂಕ್ಷ್ಮವಾಗಿ ವಿವರಿಸಲ್ಪಟ್ಟಿವೆ. ಅಂತೆಯೇ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಜಗತ್ತಿನ ಆದ್ಯ ದಾರ್ಶನಿಕ ಸೂತ್ರಕಾರರು. ಮುಂದೆ ಕಲಿಯುಗವು ಪ್ರಾರಂಭವಾಗಲು ಅದೇ ಆಚಾರ್ಯರು ರೇವಣಾರಾಧ್ಯ, ಮರುಳಾಧ್ಯ, ಏಕೋರಾಮಾರಾಧ್ಯ, ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯರೆಂಬ ನಾಮದಿಂದ ಮತ್ತೆ ಅವತರಿಸಿ ಪರಂಪರೆಯಿಂದ ಬಂದ ಪಂಚ ಸೂತ್ರಗಳನ್ನು ಲೋಕದ ಜನರಿಗೆ ಉಪದೇಶಿಸಿ ವೀರಶೈವ ಧರ್ಮದ ಆಚಾರ ವಿಚಾರ ಸಿದ್ಧಾಂತಗಳನ್ನು ರಕ್ಷಿಸಿಕೊಂಡು ಬಂದರು.
ಕ್ರಿ .ಶ.6 ನೇ ಶತಮಾನದಲ್ಲಿ. ಕಾಶೀ ನರೇಶ ಜಯನಂದ ದೇವನಿಗೆ ಮತ್ತು ನೇಪಾಳದ ಅರಸು ವಿಶ್ವಮಲ್ಲನಿಗೆ ಧಾರ್ಮಿಕ ಸಂಸ್ಕಾರವನ್ನು ಕೊಟ್ಟು ಅವರಿಂದ ಭೂದಾನ ಪಡೆದು ಶ್ರೀ ಕಾಶೀ ಪೀಠಕ್ಕೆ ಐತಿಹಾಸಿಕ ದಾಖಲೆಗಳನ್ನು ಕೊಟ್ಟ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಜಂಗಮ ಜಗದ್ಗುರುಗಳು ಸದಾ ಸ್ಮರಣೀಯರು. ಜೊತೆಗೆ ಅದೇ ಹೆಸರಿನಲ್ಲಿ ಬಂದ 77 ಜಗದ್ಗುರುಗಳ ಹಾಗೂ ನಂತರದ ಶ್ರೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯರವರೆಗಿನ ಒಟ್ಟು 85 ಜಗದ್ಗುರುಗಳ ಧಾರ್ಮಿಕ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳು ಅವಿಸ್ಮರಣೀಯಗಳು .ಇದೇ ರೀತಿಯಾಗಿ ರಂಭಾಪುರಿ ಪೀಠದ ಮೂಲ ಆಚಾರ್ಯರಿಂದ ಶ್ರೀ ಜಗದ್ಗುರು ವೀರ ರುದ್ರಮುನಿ ಶಿವಾಚಾರ್ಯರ ವರೆಗಿನ ,ಉಜ್ಜಯಿನಿ ಪೀಠದ ಮೂಲ ಆಚಾರ್ಯರಿಂದ ಜಗದ್ಗುರು ಮರುಳಸಿಧ್ಧ ಶಿವಾಚಾರ್ಯರ ವರೆಗಿನ , ಕೇದಾರ ಪೀಠದ ಮೂಲ ಆಚಾರ್ಯರಿಂದ ರಾವಲ್ ಜಗದ್ಗುರು ಸಿಧ್ಧೇಶ್ವರ ಲಿಂಗ ಶಿವಾಚಾರ್ಯರ ವರೆಗಿನ ,ಶ್ರೀ ಶೈಲ ಪೀಠದ ಮೂಲ ಆಚಾರ್ಯರಿಂದ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯರ ವರೆಗಿನ, ಎಲ್ಲ ಜಗದ್ಗುರುಗಳ ಧಾರ್ಮಿಕ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳು ಸದಾ ಸ್ಮರಣೀಯಗಳೇ ಆಗಿವೆ.
ಶಿವಾಚಾರ್ಯರ ಸಾಹಿತ್ಯಸೇವೆ:
ವೀರಶೈವರ ಸಾಹಿತ್ಯವು ಬಹುಪಾಲು ಶಿವಾಚಾರ್ಯರಿಂದಲೇ ವಿರಚಿತವಾಗಿದೆ. ಇವರಲ್ಲಿ ಶಿವಯೋಗಿ ಶಿವಾಚಾರ್ಯರೇ ಮೊದಲಿಗರೆಂದು ಹೇಳಬಹುದು. ಇವರು ಯೋಗಿ ಕುಲ ಚಕ್ರವರ್ತಿಗಳೂ ನಿಗಮಾಗಮ ವಿದ್ವಾಂಸರೂ ಆಗಿದ್ದರು. ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಅಗಸ್ತ್ಯನಿಗೆ ಬೋಧಿಸಿದ ಪಡ್ವಿಡಿ ಸೂತ್ರವನ್ನು ಆಧಾರವಾಗಿಟ್ಟುಕೊಂಡು ಉಳಿದ ನಾಲ್ಕು ಸೂತ್ರಗಳ ರಹಸ್ಯಾರ್ಥವನ್ನು ಒಂದೆಡೆ ಸಂಗ್ರಹಿಸುವ ಉದ್ದೇಶದಿಂದ ರೇಣುಕಾಗಸ್ತ್ಯ ಸಂವಾದ ರೂಪದಲ್ಲಿ ಒಂದು ಆಪೂರ್ವವಾದ ಜಾಗತಿಕ ದಾರ್ಶನಿಕ ಗ್ರಂಥವನ್ನು ರಚಿಸಿದರು ಅದುವೇ. ಶ್ರೀ ಸಿದ್ಧಾಂತ ಶಿಖಾಮಣಿ.
ವೇದಾಗಮ ಮತ್ತು ಶೈವ ಪುರಾಣಗಳಲ್ಲಿ ಚದಿರಿ ಹೋಗಿದ್ದ ಶಿವಾದ್ವೈತ ಸಿದ್ಧಾಂತದ ತತ್ವಗಳನ್ನು ಒಂದೆಡೆ ತಂದು ಒಂದು ಅಪೂರ್ವವಾದ ಗ್ರಂಥವನ್ನು ರಚಿಸಿದ ಕೀರ್ತಿ ಶ್ರೀ ಶಿವಯೋಗಿ ಶಿವಾಚಾರ್ಯರಿಗೇನೇ ಸಲ್ಲುತ್ತದೆ.ಒಂದು ವೇಳೆ ಈ ಗ್ರಂಥ ಇರದೇ ಹೋಗಿದ್ದರೆ ಷಟ್ ಸ್ಥಲ ಸಿದ್ಧಾಂತದ ಏಕೊತ್ತರಶತ ಸ್ಥಲಗಳ ವಿಸ್ತಾರವನ್ನು ತಿಳಿದು ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಂತೆಯೇ ಶ್ರೀ ಶಿವಯೋಗಿ ಶಿವಾಚಾರ್ಯರು ಸದಾ ಸ್ಮರಣೀಯರು.
ಅದರಂತೆ ಬ್ರಹ್ಮಸೂತ್ರಗಳಿಗೆ ಮೊಟ್ಟಮೊದಲ ವೀರಶೈವ ಭಾಷ್ಯವನ್ನು ಬರೆದ , ಆದಿ ಶಂಕರರ ಸಮಕಾಲೀನರಾದ ನೀಲಕಂಠ ಶಿವಾಚಾರ್ಯರು . ಆ ಭಾಷ್ಯಕ್ಕೆ ಕಾರಿಕಾ ರೂಪವಾದ ವ್ಯಾಖ್ಯಾನ ಉಳ್ಳ ಕ್ರಿಯಾಸಾರ ಗ್ರಂಥವನ್ನು ರಚಿಸಿದವರು ದ್ವಿತೀಯ ನೀಲಕಂಠ ಶಿವಾಚಾರ್ಯರು. ಅದರಂತೆ ಬ್ರಹ್ಮಸೂತ್ರಗಳಿಗೆ ಶ್ರೀಕರ ಭಾಷ್ಯವನ್ನು ಬರೆದ 11 ನೇ ಶತಮಾನದ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯರು. ಈ ಎಲ್ಲ ಶಿವಾಚಾರ್ಯರು ವೀರಶೈವ ಸಾಹಿತ್ಯವೃಕ್ಷದ ತಾಯಿಬೇರುಗಳಿದ್ಧಂತೆ. ಅದರಂತೆ ಲಿಂಗಧಾರಣಚಂದ್ರಿಕಯನ್ನು ಬರೆದ ನಂದಿಕೇಶ್ವರ ಶಿವಾಚಾರ್ಯರು, ಶಿವಾದ್ವೈತ ಮಂಜರಿಯನ್ನು ರಚಿಸಿದ ಸ್ವಪ್ರಭಾನಂದ ಶಿವಾಚಾರ್ಯರು, ಶಿವಾದ್ವೈಪರಿಭಾಷಾ
ಗ್ರಂಥ ಕಾರರಾದ ಹೂಲಿ ತರ್ಕತೀರ್ಥ ನೀಲಕಂಠ ಶಿವಾಚಾರ್ಯರು, ಪರಳಿ ವ್ಯಾಜ್ಯವನ್ನು ಗೆದ್ದ ಚೌಡಯ್ಯದಾನಪುರ ಪಂ. ವಿರುಪಾಕ್ಷ ಶಿವಾಚಾರ್ಯರು. ವೀರಶೈವೇಂದುಶೇಖರ ರಚನಾಕಾರರಾದ ರಂಭಾಪುರಿ ಪೀಠದ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಅವಿಸ್ಮರಣೀಯರು. 1918 ನೇ ಇಸ್ವಿಯಲ್ಲಿ ಕಾಶೀ ಕ್ಷೇತ್ರದ ಶ್ರೀ ಜಗದ್ಗುರು ವಿಶ್ವಾರಾಧ್ಯ ಜ್ಞಾನ ಸಿಂಹಾಸನ ಮಹಾ ಪೀಠದಲ್ಲಿ ನಡೆದ ಶ್ರೀ ಜಗದ್ಗುರು ಪಂಚಾಚಾರ್ಯ ಮಹಾ ಸಮಾಮೇಲನದಲ್ಲಿ ಸಾನಿಧ್ಯ ವಹಿಸಿ ಪೀಠ ಮತ್ತು ಮಠಗಳ ಚರ -ಸ್ಥಿರ ಗಳನ್ನು ಒಂದು ಮಾಡುವ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡ ಅಂದಿನ ರಂಭಾಪುರಿ ಪೀಠದ ಜಗದ್ಗುರು ಪಂಚಾಕ್ಷರ ಶಿವಾಚಾರ್ಯರು ಉಜ್ಜಯಿನಿ ಪೀಠದ ಪರಮ ತಪಸ್ವಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಶ್ರೀಶೈಲಪೀಠ ಜಗದ್ಗುರು ವೀರಭಿಕ್ಷಾವರ್ತಿ ಶಿವಾಚಾರ್ಯರು ಕಾಶೀ ಪೀಠದ ಜಗದ್ಗುರು ಶಿವಲಿಂಗ ಶಿವಾಚಾರ್ಯರು ಹಾಗೂ ಅಸ್ವಾಸ್ಥ್ಯದಿಂದ ಅನುಪಸ್ಥಿತರಿದ್ದರೂ ನಿರ್ಣಯಕ್ಕೆ ಲಿಖಿತ ಸಮ್ಮತಿಯನ್ನು ಕೊಟ್ಟ ಕೇದಾರ ಪೀಠದ ರಾವಲ್ ಜಗದ್ಗುರು ವಿಶ್ವಲಿಂಗ ಶಿವಾಚಾರ್ಯರು ಸದಾ ಸ್ಮರಣೀಯರು. ಕಾಶೀ ಹಿಂದೂ ವಿಶ್ವವಿದ್ಯಾಲಯಕ್ಕೆ 75 ಎಕರೆ ಭೂದಾನ ಮಾಡಿದ ಕಾಶೀ ಪೀಠದ ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯರ ಶೈಕ್ಷಣಿಕ ಕೊಡಿಗೆ ಅಪಾರ.
ಶರಣ ಸಂತತಿಗೆ ಶಿವಾಚಾರ್ಯರ ಕೊಡುಗೆ.
------------------------------------------------
ಕರ್ನಾಟಕದ ಬಸವಾದಿ ಶರಣರಿಗೆ ಶಿವಾಚಾರ್ಯರೇ ದೀಕ್ಷಾ ಗುರುಗಳೆಂಬುದು ಕಟು ಸತ್ಯ .
ಕೂಡಲ ಸಂಗಮದ ಸಾರಂಗಮಠದ ಜಾತವೇದಮುನಿ ಶಿವಾಚಾರ್ಯರು ಬಸವಣ್ಣನವರ ದೀಕ್ಷಾ ಶಿಕ್ಷಾ ಮತ್ತು ಜ್ಞಾನ ಗುರುಗಳು. ಅದರಂತೆ ಮಾದರ ಚನ್ನಯ್ಯನಿಗೆ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯರು, ಹಾವಿನಹಾಳ ಕಲ್ಲಯ್ಯನಿಗೆ ರುದ್ರಮುನಿ ಶಿವಾಚಾರ್ಯರು, ದೇವರ ದಾಸಿಮಯ್ಯನಿಗೆ ಚಂದ್ರಗುಂಡ ಶಿವಾಚಾರ್ಯರು, ನನ್ನಚೋಡನಿಗೆ ಜಂಗಮ ಮಲ್ಲಿಕಾರ್ಜುನ ಶಿವಾಚಾರ್ಯರು ,ಅಕ್ಕಮಹಾದೇವಿಗೆ ಉಡುತಡಿಯ ಗುರುಲಿಂಗಶಿವಾಚಾರ್ಯರು, ಉರುಲಿಂಗಪೆದ್ದಿಗೆ ಉರುಲಿಂಗದೇವ ಶಿವಾಚಾರ್ಯರು. ಕಲಬುರ್ಗಿಯ ಶರಣ ಬಸವೇಶ್ವರರಿಗೆ ಕಲಕೇರಿಯ ಮರುಳಾಧ್ಯ ಶಿವಾಚಾರ್ಯರು ಹುಬ್ಬಳ್ಳಿಯ ಶ್ರೀ ಸಿಧ್ಧಾರೂಢರಿಗೆ ಭೂಪುರದ ಗಜದಂಡ ಶಿವಾಚಾರ್ಯರು ದೀಕ್ಷಾಗುರುಗಳಾದರೆ ಸೊನ್ನಲೆಗಯ ಸಿಧ್ಧರಾಮನ ಜನ್ಮಕ್ಕೇನೆ ಜಗದ್ಗುರು ರೇವಣ ಸಿಧ್ಧೇಶ್ವರರ ಮಂಗಲಾಶೀರ್ವಾದವೇ ಕಾರಣ ವೆಂಬುದನ್ನು ಯಾರೂ ಮರೆಯುವಂತಿಲ್ಲ.
ಇದೂ ಅಲ್ಲದೇ ಎಲ್ಲ ಪ್ರಾಂತಗಳಲ್ಲಿರುವ ಪಂಚ ಪೀಠಗಳ ಶಾಖಾ ಮಠಗಳ ಶಿವಾಚಾರ್ಯರ ಕೊಡಿಗೆಯೂ ಅಪಾರವಾದುದು . ಅವರೆಲ್ಲರ ಚರಿತ್ರೆ ಮತ್ತು ಕಾರ್ಯಗಳನ್ನು ಜನರಿಗೆ ಪರಿಚಯಿಸುವ ಕಾರ್ಯ ಸರ್ವತ್ರ ಇಂದು ನಡೆಯ ಬೇಕಾಗಿದೆ.
ಆದ್ದರಿಂದ ಸಂಶೋಧಕ ಶಿವಾಚಾರ್ಯರು ತಾವು ಸ್ವತಃ ಇಲ್ಲವೇ ಸಂಶೋಧಕ ವಿದ್ವಾಂಸರನ್ನು ಈ ಕಾರ್ಯದಲ್ಲಿ ತೋಡಗಿಸಿ ಪರಮಾಚಾರ್ಯರ ಮತ್ತು ವಿವಿಧ ಸಾಹಿತ್ಯ ರಚನೆ ಮತ್ತು ಮಾನವೀಯ ಸಮಾಜದ ಸುಧಾರಣೆಗಾಗಿ ಕ್ರಾಂತಿಕಾರಕ ಕಾರ್ಯಗಳನ್ನೆಸಗಿ ಲಿಂಗಾಂಗ ಸಾಮರಸ್ಯವನ್ನು ಹೊಂದಿದ ಶಿವಾಚಾರ್ಯರ ಬಗ್ಗೆ ಗೊಷ್ಠಿಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ ಚಿಂತಿಸ ಬೇಕಾಗಿದೆ ಈ ಲೇಖದ ಬಗ್ಗೆ ಶಿವಾಚಾರ್ಯರ ಮತ್ತು ಮಹಾಚಾರ್ಯರ ಪ್ರತಿಕ್ರಿಯೆಗಳನ್ನು ಗಮನಿಸಿ ಮುಂದಿನ ಕಾರ್ಯವನ್ನು ಕೈಕೊಳ್ಳಲಾಗುವದು.
ಶುಭಸ್ಯ ಶೀಘ್ರಂ ಎನ್ನುವಂತೆ ಇದೇ ಶ್ರಾವಣ ಮಾಸದಿಂದ ತಮ್ಮ ತಮ್ಮ ಮಠಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಿವಾಚಾರ್ಯರ ಸ್ಮರಣೋತ್ಸವವನ್ನು ಪ್ರಾಂಸಚಿವಭಿಸುವದು ಸೂಕ್ತವಾದುದು. ಕಾಶೀ ಜಗದ್ಗುರುಗಳು ಮಹಾರಾಷ್ಟ್ರದ ಉದ್ಗೀರದಲ್ಲಿ ನಡೆಯುವ ಶ್ರಾವಣ ತಪೋನುಷ್ಠಾನದಲ್ಲಿ ಈ ಸ್ಮರಣೋತ್ಸವವನ್ನು ಪ್ರಾರಂಭಿಸಲು ನಿಶ್ಚಯಿಸಿದ್ದಾರೆ.
ಈ ಲೇಖನವು ಪರಿಪೂರ್ಣವಾದುದಲ್ಲ ಇದು ಸಾಂಕೇತಿಕವಾದುದು ಈ ನಿಟ್ಟಿನಲ್ಲಿ ಸರ್ವರೂ ಚಿಂತಿಸುವದು ಅವಶ್ಯವಾಗಿದೆ.
No comments:
Post a Comment
If you have any doubts. please let me know...