ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ
ಆದಿತ್ಯವರ್ಣೇ ತಪಸೋಽಧಿಜಾತೋ ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ |
ತಸ್ಯ ಫಲಾನಿ ತಪಸಾ ನುದನ್ತು ಮಾಯಾನ್ತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ | ೬ |ಇದು ಋಗ್ವೇದದ ಖಿಲಸೂಕ್ತ, ಐದನೇ ಮಂಡಲದ ೫೭ನೇ ಸೂಕ್ತ ಎಂದು ಕರೆಸಿಕೊಂಡಿದೆ.
ಈ ಮಂತ್ರ ಶ್ರೀಸೂಕ್ತದ ಮಂತ್ರ. ಈ ಸೂಕ್ತದ ಈ ಮಂತ್ರದ ದೃಷ್ಟಾರ ಆನಂದ ಋಷಿ ಎನ್ನುವವನು. ಈ ಋಷಿ ಮಹಾಲಕ್ಷ್ಮಿಯನ್ನು ಕುರಿತಾಗಿ ಈ ಮಂತ್ರವನ್ನು ಜಪಿಸುತ್ತಾನೆ. ಹೇಗಿದ್ದಾಳೆ ಲಕ್ಷ್ಮೀ ಎಂದರೆ ಆದಿತ್ಯವರ್ಣೇ ಎನ್ನುತ್ತಾನೆ. ಸೂರ್ಯನ ಪ್ರಭೆಯಂತಿದ್ದಾಳೆ ಎನ್ನುವುದಾಗಿ ಪ್ರಖರತೆಯನ್ನೂ ಮತ್ತು ಮಂದವನ್ನೂ ಸೂಚಿಸುತ್ತಾನೆ.
ಸರ್ಯನ ಪ್ರಭೆ ಅಥವಾ ಕಾಂತಿಯಂತೆ ಮಹಾ ಪ್ರಕಾಶಮಾನವಾಗಿ ಬೆಳಗುವ ಶರೀರವನ್ನು ಹೊಂದಿರುವ ಹೇ ಶ್ರೀದೇವತೆಯೇ ನಿನ್ನ ಅನುಗ್ರಹ ಪೂರಿತ ಆಜ್ಞೆಯಂತೆ ಅತ್ಯಪೂರ್ವವಾದ ಬಿಲ್ವ ಎನ್ನುವ ವೃಕ್ಷವು (ಸಸ್ಯಪ್ರಬೇಧ) ಹುಟ್ಟಿಕೊಂಡಿತು. ಈ ಬಿಲ್ವವು ಮನುಷ್ಯರಿಗೆ ಸುಖ ಸಂಪತ್ತು ಕೊಡಲಿ. ಮತ್ತು ಮನುಷ್ಯರಲ್ಲಿರುವ ಅಜ್ಞಾನವನ್ನು ದೂರಮಾಡಲಿ ಎನ್ನುವ ಅರ್ಥವನ್ನು ಕೊಡುತ್ತದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಮಹತ್ವದ ಅಂಶ ಎಂದರೆ ’ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ | ತಸ್ಯ ಫಲಾನಿ ತಪಸಾ ನುದನ್ತು’ ಎನ್ನುವಲ್ಲಿನ ಅಂಶವನ್ನು ನೋಡಿದರೆ ಬಿಲ್ವ ಪತ್ರೆಯ ಮಹತ್ವ ಆಶ್ಚರ್ಯ ಹುಟ್ಟಿಸುತ್ತದೆ. ಮೂರು ದಳಗಳುಳ್ಳ ಬಿಲ್ವ ಪತ್ರದ ಕುರಿತು ಶ್ರೀವಿದ್ಯಾರಣ್ಯರು ಅಪುಷ್ಪಾಃ ಫಲವಂತೋ ಯೇ ತೇ ವನಸ್ಪತಯಃ ಸ್ಮೃತಾಃ ಅಂದರೆ ಈ ಬಿಲ್ವಪತ್ರೆ ಎನ್ನುವುದು ಹೂವನ್ನು ಬಿಡದೇ ಕಾಯಿಯನ್ನು ಕೊಡುತ್ತದೆ ಎಂದಿರುವರು(ಆದರೆ ಹೂವು ಬಿಟ್ಟರೂ ಅದು ಅದು ಗೋಚರವಾಗುವುದು ವಿರಳ ಇರಬಹುದು). ಔಷಧೀಯಗುಣ ಮತ್ತು ಶ್ರೇಷ್ಠತೆಯನ್ನು ಹೊಂದಿರುವುದರಿಂದ ವನಸ್ಪತಿ ಎಂದು ಕರೆಯಲಾಗುತ್ತದೆ ಎಂದು ವಾಮನಪುರಾಣದಲ್ಲಿ ಕಾತ್ಯಾಯನನ ಮಾತು. ಬಿಲ್ವವೃಕ್ಷವೇ ಲಕ್ಷ್ಮಿಯ ನಿವಾಸಸ್ಥಾನ ಎಂದು ಭಾರ್ಗವಪುರಾಣದಲ್ಲಿ ಹೇಳಲಾಗಿದೆ ಎಂದು ಪೃಥ್ವೀದರಾಚಾರ್ಯರ ಅಭಿಪ್ರಾಯ. ಸಾಧಾರಣವಾಗಿ ಮರಗಳು ಮೊದಲು ಹೂವುಗಳನ್ನು ಬಿಟ್ಟು ನಂತರದಲ್ಲಿ ಫಲಬಿಡುತ್ತವೆ. ಆದರೆ ಹೂವನ್ನು ಬಿಡದೇ ಫಲಕೊಡುವ ಮರಗಳನ್ನೆಲ್ಲಾ ವನಸ್ಪತಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರಮುಖವಾಗಿರುವುದು ಬಿಲ್ವಪತ್ರೆ. ಆದರೆ ಶ್ರಾವಣ ಭಾದ್ರಪದದಲ್ಲಿ ಬಿಲ್ವ ಪತ್ರೆ ಮರದಲ್ಲಿ ಹೂವು ಬಿಡುತ್ತದೆ ಮತ್ತು ಅದು ಹಸಿರಾಗಿಯೇ ಇರುವುದರಿಂದ ಗೊತ್ತಾಗುವುದಿಲ್ಲ ಎನ್ನುವ ಅಭಿಪ್ರಾಯ ಕೆಲವರದ್ದಿದೆ. ಅದೇನೇ ಇರಲಿ, ಬಿಲ್ವ ಎನ್ನುವುದು ಲಕ್ಷ್ಮಿಯ ತಪಸ್ಸಿನಿಂದ ಶಿವನಿಗೆ ಪ್ರಿಯವೆನ್ನಿಸಿತು ಎನ್ನುವುದು ಬ್ರಹ್ಮಾಂಡಪುರಾಣದಲ್ಲಿ. ಹೀಗೇ ಬಿಲ್ವಪತ್ರೆಯ ಕುರಿತಾಗಿ ಸ್ಕಾಂದಪುರಾಣದಲ್ಲಿ ಕಥೆಯನ್ನೇ ಕೊಡಲಾಗಿದೆ. ಅದೇನೇ ಇರಲಿ ಬಿಲ್ವಪತ್ರೆ ಅತ್ಯಂತ ಸುವಾಸನಾಯುಕ್ತವಾದದ್ದು. ಆದರೆ ಬಿಲ್ವಪತ್ರೆಯ ಕಾಯಿ ಕಾಣಸಿಗುತ್ತದೆ, ಅದು ಸಹ ಸುವಾಸನಾಯುಕ್ತವೇ. ಅನೇಕ ರೋಗಗಳೂ ನಿವಾರಣೆಯಾಗುತ್ತವೆ. ಇಂತಹ ಒಂದು ಬಿಲ್ವ ಶಿವನಿಗರ್ಪಿತವಾದರೂ ಸ್ವರ್ಗಪ್ರಾಪ್ತಿ ಎನ್ನಲಾಗುತ್ತದೆ. ಉದಯಿಸುತ್ತಿರುವ ಸೂರ್ಯನಂತೆ ಶರೀರಹೊಂದಿ ಕಂಗೊಳಿಸುತ್ತಿರುವ ಶ್ರೀಲಕ್ಷ್ಮಿಯು ಬಿಲ್ವಾರಣ್ಯದಲ್ಲಿ ನೆಲೆಸುತ್ತಾಳೆ ಎಂದು ಸಹ ವರ್ಣನೆ ಸಿಗುತ್ತದೆ. ಇಂತಹ ಬಿಲ್ವ ಪತ್ರೆಯ ಮರ ಎಲ್ಲೆಂದರಲ್ಲಿ ಬೆಳೆಯುವುದಿಲ್ಲ. ಅದು ಬೆಳೆಯುವುದು ಅಂತಹ ವಾತಾವರಣದಲ್ಲಿ.
#ಬಿಲ್ವದಲ್ಲಿ_ ಶ್ರೀಲಕ್ಷ್ಮಿ
ಸದ್ಯೋಜಾತರು
No comments:
Post a Comment
If you have any doubts. please let me know...