ಪುರಾಣದಲ್ಲಿ ಬರುವ ಉತ್ತಾನಪಾದನ ಕಥೆ ಬಹಳ ಅರ್ಥಗರ್ಭಿತವಾದದ್ದು. ಉತ್ತಾನಪಾದ ಎನ್ನುವುದೇ ಚಲನೆಯ ಸಂಕೇತ. ಆ ಉತ್ತಾನಪಾದನ ನಡೆ ಸುರುಚಿಯ ಕಡೆಗಿದ್ದರೆ ಮನುಷ್ಯ ಉತ್ತಮನಾಗುತ್ತಾನೆ. ಅದೇ ನಡೆ ಸುನೀತಿಯ ಕಡೆಗಾದರೆ ಶಾಶ್ವತವಾದ ಕೀರ್ತಿಪಡೆದು ಸ್ಥಿರವಾಗಿ ನಿಲ್ಲುತ್ತ್ತಾನೆ. ಶಿಶುಮಾರನ ಮಗಳು ಭ್ರಮಿ ಎನ್ನುವವಳು ಧ್ರುವನ ಪತ್ನಿ. ಭ್ರಮಿ ಎನ್ನುವುದೂ ಚಲನೆ, ಶಿಂಶುಮಾರ ಸಹ ಕಾಲಕ್ಕೆ ಸಂಬಂಧಿಸಿದ ಪದ. ಮಕ್ಕಳ ಹೆಸರು ವತ್ಸರ ಮತ್ತು ಕಲ್ಪ ಎಂದು. ಅಂದರೆ ಈ ಇಡೀ ಸಂಸಾರವೇ ಕಾಲಯಾನದ ಸೂಚಕ ಎನ್ನಬಹುದು.
ಉತ್ತಾನಪಾದನಿಗೆ ಸುನೀತಿ ಮತ್ತು ಸುರುಚಿ ಎಂಬ ಇಬ್ಬರು ಪತ್ನಿಯರು. ಅವರಿಬ್ಬರಲ್ಲಿ ಸುರುಚಿಯೇ ಮಹಾರಾಜನಿಗೆ ಹೆಚ್ಚು ಪ್ರೀತಿಪಾತ್ರಳಾಗಿದ್ದಳು. ಸುರುಚಿಗೆ ಉತ್ತಮ ಎನ್ನುವ ಮಗನೂ, ಸುನೀತಿಗೆ ಧ್ರುವ ಎನ್ನುವ ಮಗನೂ ಜನಿಸುತ್ತಾರೆ. ಒಂದು ದಿನ ಉತ್ತಾನಪಾದನು ಉತ್ತಮನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಿಸುತ್ತಿದ್ದ. ಅದೇ ಸಮಯದಲ್ಲಿ ಧ್ರುವನೂ ಸಹ ತಂದೆಯ ತೊಡೆಯನ್ನು ಏರಲು ಬರುತ್ತಾನೆ. ಆದರೆ ಉತ್ತಾನಪಾದನು ಧ್ರುವನನ್ನು ಆದರಿಸುವುದಿಲ್ಲ್ಲ. ಸ್ವಭಾವತಃ ಅಹಂಕಾರಿಯಾಗಿದ್ದ ಸುರುಚಿಯು ತನ್ನ ಸವತಿಯಾದ ಸುನೀತಿಯ ಮಗ ಧ್ರುವನು ಮಹಾರಾಜನ ತೊಡೆಯನ್ನೇರಲು ಪ್ರಯತ್ನಿಸುತ್ತಿರುವುದನ್ನು ಕಂಡು ಹೊಟ್ಟೆಯುರಿಯಿಂದ “ನಿನಗೆ ರಾಜಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕು ಇಲ್ಲ. ನೀನು ರಾಜನ ಮಗ ನಿಜ. ಆದರೆ, ನಾನು ನಿನಗೆ ಜನ್ಮ ಕೊಡಲಿಲ್ಲ ಎನ್ನುತ್ತಾಳೆ. ನಿನಗೆ ರಾಜಸಿಂಹಾಸನವನ್ನು ಪಡೆಯಬೇಕೆಂಬ ಆಶೆಯಿದ್ದರೆ ತಪಸ್ಸುಮಾಡಿ, ದೇವರನ್ನು ಒಲಿಸಿಕೊಂಡು ಪುನಃ ನನ್ನ ಗರ್ಭದಲ್ಲಿ ಜನಿಸಿ ಆಮೇಲೆ ತಂದೆಯ ತೊಡೆಯನ್ನೇರು ಎಂದು ಛೇಡಿಸುತ್ತಾಳೆ. ಆದರೆ ಉತ್ತಾನಪಾದನು ಇವೆಲ್ಲವನ್ನೂ ಸುಮ್ಮನೆ ನೋಡುತ್ತಿದ್ದ. ವಿರೋಧಿಸಲೇ ಇಲ್ಲ. ಧ್ರುವ ಅಪ್ಪನನ್ನು ಬಿಟ್ಟು ಅಳುತ್ತಾ ತಾಯಿಯ ಬಳಿಗೆ ಹೋಗುತ್ತಾನೆ. ಸುನೀತಿಗೆ ಅರಮನೆಯ ಇತರ ಹೆಂಗಸರು ಸುರುಚಿ ಆಡಿದ್ದ ಮಾತುಗಳನ್ನು ತಿಳಿಸುತ್ತಾರೆ. ಆಕೆಗೂ ತುಂಬಾ ದುಃಖವಾಗುತ್ತದೆ.
ಸುರುಚಿಯು ಸತ್ಯವಾದ ಮಾತನ್ನೇ ಹೇಳಿದ್ದಾಳೆ. ಆದುದರಿಂದ, ಉತ್ತಮನಿಗೆ ಸಮನಾಗಿ ರಾಜಸಿಂಹಾಸನದಲ್ಲಿ ಕುಳಿತುಕೊಳ್ಳುವ ಇಚ್ಛೆಯೇ ನಿನಗೆ ಇದ್ದರೆ ದ್ವೇಷಭಾವವನ್ನು ಬಿಟ್ಟು ಸುರುಚಿ ಹೇಳಿದಂತೆಯೇ ಮಾಡು. ಆ ಶ್ರೀಹರಿಯ ಆರಾಧಿಸು, ತಪಸ್ಸು ಮಾಡಿ ಗೆದ್ದು ಬಾ ಎಂದು ಹರಸುತ್ತಾಳೆ. ಧ್ರುವನು ಕಾಡಿಗೆ ಹೊರಡುತ್ತಾನೆ. ನಾರದರು ಅಲ್ಲಿಗೆ ಬರುತ್ತಾರೆ. ಅವರು ಎಷ್ಟೇ ಸಮಾಧಾನ ಮಾಡಿದರೂ ಕೇಳದೇ ನಾರದರಿಂದ ತಪಸ್ಸಿನ ರಹಸ್ಯ ತಿಳಿದು ತಪಸ್ಸು ಮಾಡಿ ಹರಿಯನ್ನು ಒಲಿಸಿಕೊಳ್ಳುತ್ತಾನೆ. ತನ್ನದೇ ಆದ ಸ್ಥಾನವನ್ನು ಪಡೆಯುವ ಆಶೆಯಿಂದ ಧ್ರುವನಾಗಿ ನಿಲ್ಲುವ ಆಶೆಯಿಂದ ಇದ್ದ ಧ್ರುವನಿಗೆ ತನ್ನ ಮನದ ಇಚ್ಚೆಯಂತೆ ಅವಿನಾಶಿಯಾದ ಭದ್ರವಾದ ಸ್ಥಾನವನ್ನು ಅಂದರೆ ಗ್ರಹ, ನಕ್ಷತ್ರಗಳಿಗೆ ಆಧಾರಸ್ತಂಭದಂತೆ ಮೇರುವಾಗಿರುವ ಸ್ಥಾನವನ್ನು ಪಡೆಯುತ್ತಾನೆ. ಪ್ರಳಯದವರೆಗೆ ಮಾತ್ರ ಇರುವ ಇತರ ಲೋಕಗಳು ನಾಶಹೊಂದಿದರೂ ಯಾವುದು ಸ್ಥಿರವಾಗಿರುತ್ತದೆಯೋ ಮತ್ತು ಯಾವುದನ್ನು ತಾರಾಗಣಗಳೊಡನೆ ಕೂಡಿದ ಧರ್ಮ, ಅಗ್ನಿ, ಕಶ್ಯಪ, ಶುಕ್ರರೇ ಮುಂತಾದ ಗ್ರಹ ನಕ್ಷತ್ರಗಳು ಪ್ರದಕ್ಷಿಣೆಮಾಡುತ್ತಿವೆಯೋ ಅಂತಹ ದಿವ್ಯವಾದ ಧ್ರುವನಕ್ಷತ್ರ ಪದವನ್ನು ಪಡೆಯುತ್ತಾನೆ. ಇದು ಭಾಗವತ ಪುರಾಣದಲ್ಲಿ ಬರುವ ದೀರ್ಘವಾದ ಕಥೆಯ ಸಂಕ್ಷಿಪ್ತ ರೂಪ. ನಕ್ಷತ್ರಗಳಿಗೆ ಚಲನೆಯಿಲ್ಲ ಚಲನೆ ಇರುವುದು ಭೂಮಿಗೆ. ಭೂಮಿಯ ಚಲನೆಯಿಂದ ನಕ್ಷತ್ರಗಳು ಚಲಿಸಿದಂತೆ ಭಾಸವಾಗುತ್ತದೆ ಅಷ್ಟೇ.
ಧ್ರುವ ಎನ್ನುವ ಪದ ಋಗ್ವೇದದಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ. ಅಯಂ ಸ ಜಜ್ಞೇ ಧ್ರುವ . . . . ವರ್ಧಮಾನಃ ಎನ್ನುವ ಆರನೇ ಮಂಡಲದ ಒಂದು ಸೂಕ್ತದ ಈ ಮಂತ್ರ ವೈಶ್ವಾನರಾಗ್ನಿಯನ್ನು ಕುರಿತಾಗಿ ಹೇಳುತ್ತದೆ. ಅಂದರೆ ಸ್ಥಿರವಾಗಿ ಮರಣ ರಹಿತವಾಗಿರುವ ಈ ಅಗ್ನಿಯು ಮರಣವನ್ನು ಹೊಂದುವ ಈ ಶರೀರದಲ್ಲಿ ಶಾಶ್ವತವಾಗಿರುತ್ತದೆ ಎನ್ನುವುದನ್ನು ಹೇಳುವಲ್ಲಿ ಸ್ಥಿರತೆಯನ್ನು ಹೇಳುತ್ತದೆ. ಜೊತೆಗೆ ನಾಶ ಹೊಂದಿದರೂ, ಆ ವೈಶ್ವಾನರ ಸ್ವರೂಪದ ಶಕ್ತಿಯು ಶಾಶ್ವತವಾಗಿರುತ್ತದೆ. ಅಂದರೆ ಅದೊಂದು ಶಕ್ತಿ ಜೀವಂತವಿರುತ್ತದೆ. ಅದರಲ್ಲಿಯೇ ಮುಂದೆ ಧ್ರುವಂ ಜ್ಯೋತಿರ್ನಿಹಿತಂ ದೃಶಯೇ ಎನ್ನುವಲ್ಲಿ ನಿಶ್ಚಲವಾದ ಜ್ಯೋತಿಯನ್ನು ಕುರಿತು ಹೇಳುತ್ತಾ, ನಿಶ್ಚಲವಾದುದು ಮತ್ತು ಮನಸ್ಸಿಗಿಂತಲೂ ವೇಗವಾದುದು ಎಂದು ಬೃಹಸ್ಪತಿಯ ಮಗ ಭರದ್ವಾಜ ಮಹರ್ಷಿ ಹೇಳುತ್ತಾರೆ. ಇನ್ನು ಭಗವದ್ಗೀತೆಯಲ್ಲಿ ಬರುವ ಜಾತಸ್ಯ ಹಿ ಧ್ರುವೋ ಮತ್ಯುಃ ಧ್ರುವಂ ಜನ್ಮ ಮೃತಸ್ಯ ಚ ಎನ್ನುವುದು ಸಹ ಹುಟ್ಟು ಹೇಗೆ ನಿಶ್ಚಿತವೋ ಅನಿಶ್ಚಿತವಾದ ಸಾವು ಸಹ ನಿಶ್ಚಿತವೇ ಎನ್ನುತ್ತದೆ. ಅಂದರೆ ಹುಟ್ಟಿನ ಜೊತೆಗೇ ಸಾವು ಸಹ ಸ್ಥಿರವಾಗಿರುವುದು. ಮಹಾಭಾರತದಲ್ಲಿ ಪಂಚಾಂಗ ಯೋಗವನ್ನು ಕುರಿತಾಗಿ ಹೇಳುವಾಗ ’ಸೇನಾಮಾಜ್ಞಾಪಯಾಮಾಸುರ್ನಕ್ಷತ್ರೇಹನಿ ಚ ಧ್ರುವೇ’ ಎಂದು ಹೇಳಲಾಗಿದೆ. ಅದೇನೇ ಇರಲಿ ನಮ್ಮ ಪ್ರಾಚೀನರು ಧ್ರುವ ಎನ್ನುವುದು ಸ್ಥಿರವಾಗಿರುವ ನಕ್ಷತ್ರವನ್ನಾಗಿ ಗಮನಿಸಿದ್ದರು. ಆಶ್ವಲಾಯನ ಗೃಹ್ಯ ಸೂತ್ರದಲ್ಲಿ ’ಧ್ರುವಮರುಂಧತೀಂ ಸಪ್ತಋಷೀನಿತಿ ದೃಷ್ಟ್ವಾ ವಾಚಂ ವಿಸೃಜೇತ’(೧:೭:೨೨) ಎಂದು ಬಂದಿರುವಲ್ಲಿ ಧ್ರುವ ನಕ್ಷತ್ರವಾಗಿಯೇ ಕಾಣಿಸಿಕೊಳ್ಳುತ್ತದೆ. ಶಾಂಖಾಯನ ಗೃಹ್ಯಸೂತ್ರದಲ್ಲಿ ’ದಧಿಕ್ರಾವ್ಣೋ ಅಕಾರಿಷಂ’ ಎನ್ನುತ್ತಾ ಮೊಸರನ್ನು ಕುಡಿಯುತ್ತಾ ಮುಂದೆ ’ಧ್ರುವ ದರ್ಶನಾದ್’ ಎಂದು ಹೇಳಲ್ಪಟ್ಟಿದೆ. ಅಲ್ಲಿ ಧ್ರುವ ನಕ್ಷತ್ರವನ್ನು ಸೂರ್ಯಾಸ್ತದ ನಂತರ ನೋಡಬಹುದೆನ್ನುವ ಅರ್ಥವೂ ಹೇಳಲ್ಪಟ್ಟಿದೆ. ಲಾಟ್ಯಾಯನ ಶ್ರೌತ ಸೂತ್ರದಲ್ಲಿ ಸಹ ಹೇಳಲ್ಪಟ್ಟಿದ್ದು ಸಹ ಅದೇ ಅರ್ಥದಲ್ಲಿ. ಇನ್ನು ಸಾಮಾನ್ಯವಾಗಿ ಇವೆಲ್ಲವೂ ಸಹ ಮಾಂಗಲ್ಯಮಂತ್ರಗಳು. ಅಂದರೆ ವಿವಾಹ ವಿಧಿಗೆ ಸಂಬಂಧಿಸಿದ್ದಾಗಿದೆ. ಅಂದರೆ ವಿವಾಹವೂ ಸಹ ಕೆಲವೇ ಗಂಟೆಗಳಲ್ಲಿ ಮುಗಿಯದೇ ಮೂರ್ನಾಲ್ಕು ದಿನಗಳಿಗೂ ಹೆಚ್ಚು ನಡೆಯುತ್ತಿತ್ತು ಮತ್ತು ನಕ್ಷತ್ರಗಳನ್ನು ತೋರಿಸಿ ಅರುಂಧತಿ ವಸಿಷ್ಠರ ಜೊತೆ ಧ್ರುವ ನಕ್ಷತ್ರದ ವೀಕ್ಷಣೆಯೂ ಇತ್ತು ಎನ್ನುವುದು ಅನೇಕ ಮಂತ್ರಗಳಲ್ಲಿ ಹೇಳಲ್ಪಟ್ಟಿದೆ.
ಧ್ರುವ ನಕ್ಷತ್ರ ಎನ್ನುವುದು ಉತ್ತರಾರ್ಧಗೋಳದಲ್ಲಿ ಇರುವಂತಹ ಒಂದು ನಕ್ಷತ್ರ.ಇದನ್ನುpolestar ಎಂದು ಕರೆಯುತ್ತಾರೆ. ಪೂರ್ವಜರು ನಮ್ಮ ವಿವಾಹದ ನಂತರ ಜೀವನವೂ ಸಹ ಧ್ರುವನಂತೆ ಶಾಶ್ವತವಾಗಿರಲಿ ಎಂದು ಬಯಸುತ್ತಿದ್ದರು. ಇಲ್ಲಿ ಒಂದು ಪ್ರಮುಖವಾಗಿ ಗಮನಿಸಬೇಕಾದದ್ದು ಈ ನಕ್ಷತ್ರವನ್ನು ವಧುವಿಗೆ ಮಾತ್ರ ಸ್ಥಿರತೆಯ ಲಾಂಚನವಾಗಿ ತೋರಿಸಬೇಕು ಎನ್ನುವುದು ಗೃಹ್ಯ ಸೂತ್ರಗಳು. ಮೈತ್ರಾಯಣೀ ಉಪನಿಷತ್ತಿನಲ್ಲಿ ಒಂದು ಆಶ್ಚರ್ಯವಿದೆ. ಅಂದರೆ ’ಧ್ರುವಸ್ಯ ಪ್ರಚಲನಮ್’ ಎಂದಿರುವುದು ಈ ನಕ್ಷತ್ರಕ್ಕೆ ಚಲನೆ ಇದೆಯೇ ಎನ್ನುವುದು ಆಶ್ಚರ್ಯವಾಗುತ್ತದೆ. Indian Antiquary Volume 23 ರಲ್ಲಿಯೂ ಸಹ ಧ್ರುವ ನಕ್ಷತ್ರವು ಸ್ಥಿರವಾಗಿರುವ ನಕ್ಷತ್ರ ಎಂದಿರುವುದು ಸಿಗುತ್ತದೆ. ಅಂದರೆ ಅದೆಷ್ಟೋ ಅನೂಹ್ಯ ವರ್ಷಗಳ ಹಿಂದೆ ಆಕಾಶ ಕಾಯಗಳ ಕುರಿತಾಗಿ ಮತ್ತು ನಕ್ಷತ್ರಗಳ ಚಲನೆ ಮತ್ತು ಸ್ಥಿರತೆಯನ್ನು ಹೇಳಿರುವುದು ನೋಡಿದರೆ ಆಶ್ಚರ್ಯ ವಿಸ್ಮಯ ಎಲ್ಲವೂ. ಇನ್ನು ವರಾಹಮಿಹಿರರ ಬೃಹತ್ಸಂಹಿತೆಯ ಸಪ್ತರ್ಷಿಚಾರಾಧ್ಯಾದಲ್ಲಿಯೂ ಸಹ ಧ್ರುವ ನಕ್ಷತ್ರದ ವೈಶಿಷ್ಟ್ಯವು ಉಲ್ಲೇಖಿಸಲ್ಪಟ್ಟಿವೆ. ವಸಿಷ್ಠಸ್ಯಾಪ್ಯರುಂಧತೀ ಎಂದು ಅವರಿಬ್ಬರ ಅನ್ಯೋನ್ಯತೆ ನಮಗೆ ಆದರ್ಶವಾಗಿರಲಿ ಎನ್ನುವ ಆಶೀರ್ವಾದಸೂಚಕ ಮಂತ್ರವಿದೆ. ಇನ್ನು ‘precession of the equinox’ ನಲ್ಲಿ ಗಮನಿಸಿದರೆ ಧ್ರುವ ನಕ್ಷತ್ರ ಎನ್ನಬಹುದಾದ ನಕ್ಷತ್ರ ಬದಲಾಗುತ್ತಿರುತ್ತದೆ - ೨೬೦೦೦ ವರ್ಷಗಳಿಗೆ ಒಂದು ಆವರ್ತನೆಯಾಗುತ್ತದೆ. ಕೆಲವೊಮ್ಮೆ ಭೂಮಿಯ ಅಕ್ಷಕ್ಕೆ ನೇರವಾಗಿ ಯಾವುದೇ ನಕ್ಷತ್ರ ಇರುವುದಿಲ್ಲ. ಈಗ ಸಹ ಹಾಗೇ ಇದೆ, ನಾವು ಧ್ರುವ ನಕ್ಷತ್ರ ಎಂದು ಗುರುತಿಸುತ್ತಿರುವ ನಕ್ಷತ್ರ ಉತ್ತರ ಧ್ರುವದ ನೇರಕ್ಕೆ ಇಲ್ಲ.
ಭಾರತೀಯರಾದ ನಾವು ಹೆಮ್ಮೆ ಪಡಬೇಕಾದ ಮಾಹಿತಿ ಇದು. ನಮ್ಮ ಭಾರತೀಯ ಖಗೋಳ ಶಾಸ್ತ್ರಕ್ಕೆ ಈ ಪ್ರಕ್ರಿಯೆ ಅದೆಷ್ಟೋ ಸಾವಿರ ವರ್ಷಗಳಿಗೂ ಮೊದಲೇ ಅದರ ಜ್ಞಾನವಿದೆ. ಈ ಅಂಶವನ್ನೆ ಗಣಿತಾಂಶಗಳಿಂದ "ಅಯನಾಂಶ" ಎಂದು ಕರೆಯುತ್ತೇವೆ.
ಈ ಎಲ್ಲ ಕಾರಣಗಳಿಂದಲೇ ನಾವು ರಾಜ್ಯಾಭಿಷೇಕದ ಮಂತ್ರದಲ್ಲಿ ರಾಷ್ಟ್ರಂ ಧಾರಯತಾಂ ಧ್ರುವಂ ಎಂದಿರುವುದು.
ಸದ್ಯೋಜಾತರು..