October 30, 2021

ಸುಖವೆಂಬುದು ನಮ್ಮಲ್ಲೇ ಇದೆ

 ಸಾಧುವೊಬ್ಬನ ಭೇಟಿಗಾಗಿ ಕಾಡನ್ನು ಪ್ರವೇಶಿಸಿದವನೊಬ್ಬ ಅವನಿಗೆ ಕೇಳುತ್ತಾನೆ; " ನಿನ್ನಲ್ಲೊಂದು ಅದ್ಭುತ ಜಾದೂ ನಾಣ್ಯವೊಂದಿದೆಯೆಂದು ಜನ ಹೇಳುತ್ತಾರೆ. ಅದನ್ನಿಟ್ಟುಕೊಂಡವನಗೆ ಅತೃಪ್ತಿ ಎಂಬುದೇ ಇರಲಾರದಂತೆ , ಹೌದೆ?"
        ಆ ಸಾಧು ನಗುತ್ತ ಆ ನಾಣ್ಯವನ್ನು ತೋರಿಸಿದ.
       " ಅದನ್ನು ನನಗೆ ಕೊಡು, ಅದರ ಹಣ ಎಷ್ಟಾಗುತ್ತೋ ಅಷ್ಟನ್ನು ನಾನು ಕೊಡುತ್ತೇನೆ " ಎಂದು ವ್ಯಕ್ತಿ ಕೇಳಿದಾಗ ಸಾಧುವು, "ಅದು ಮಾರುವ ವಸ್ತುವಲ್ಲ" ಎಂದು ನಯವಾಗಿಯೇ ಹೇಳಿದ. 
         ಕತ್ತಲಾಗುತ್ತ ಬಂದಂತೆ ಕಾಡಿನಲ್ಲಿ ರಾತ್ರಿ ಓಡಾಟ ಭಯಾನಕವೂ ಆಗಿರುವುದರಿಂದ,  ಸಾಧುವು ತನ್ನ ಗುಡಿಸಲಲ್ಲೇ ಅವನಿಗೂ ಮಲಗುವ ಅವಕಾಶವೊದಗಿಸಿದ. ಆದರೆ ಈತನಿಗೆ ಹೇಗಾದರೂ ಮಾಡಿ ಆ ನಾಣ್ಯ ಪಡೆಯಬೇಕೆಂಬ ಆಸೆಯಿಂದ ನಿದ್ರೆಯೇ ಬರಲಿಲ್ಲ. ಸಾಧುಗೆ ನಿದ್ರೆ ಬಂದಾಕ್ಷಣ ಎದ್ದು ಇಡೀ ಗುಡಿಸಲನ್ನೇ ತಡಕಾಡಿದ.ಸಿಗಲಿಲ್ಲ. ಬೆಳಗಿನ ಜಾವದಲ್ಲಿ ಸಾಧು ಎದ್ದು ತನ್ನ ಬೆಳಗಿನ ಕ್ರಿಯೆಗಳಿಗೆಂದು ಹೊರ ಹೋದಾಗ, ಅವನ ಹಾಸಿಗೆ, ಬಟ್ಟೆ ಇತ್ಯಾದಿಗಳನ್ನೂ ಹುಡುಕಾಡಿದ. ನಾಣ್ಯದ ಕುರುಹೇ ಇಲ್ಲ. 
         
ಕೊನೆಗೆ ಕಳ್ಳ ತನ್ನ ನಡವಳಿಕೆಗೆ ತಾನೇ ನಾಚಿಕೆ ಪಟ್ಟುಕೊಂಡು ಸಾಧುವಿನಲ್ಲಿ ಕ್ಷಮೆಯಾಚಿಸಿ, ಕುತೂಹಲ ತಡೆಯಲಾರದೇ ನಾಣ್ಯ ಇದ್ದುದೆಲ್ಲಿ ಎಂದು ಹೇಳುವಂತೆ ಕೇಳಿಕೊಂಡ. ಸಾಧು ನಸುನಗುತ್ತ, ಆ ವ್ಯಕ್ತಿ ತಲೆ ಇಟ್ಟು ಮಲಗಿದ್ದ ದಿಂಬನ್ನೆಳೆದ. ಆಶ್ಚರ್ಯವೆಂಬಂತೆ ಅಲ್ಲಿ ಆ ನಾಣ್ಯವಿತ್ತು.
         " ಇಲ್ಲೊಂದು ಕಡೆಯ ಹೊರತಾಗಿ ಬೇರೆಲ್ಲೆಡೆಗೂ ನೀನು ಹುಡುಕಾಡಿದೆ" ಎಂದು ಆ ಸಾಧು ಸ್ತಂಭೀಭೂತನಾಗಿ ನಿಂತಿದ್ದ ಈ ವ್ಯಕ್ತಿಗೆ ಹೇಳುತ್ತಾನೆ. 
" ಸುಖವಂಬುದು ಯಾವಾಗಲೂ ನಿನ್ನ ದಿಂಬಿನಡಿಯಲ್ಲಿಯೇ ಇರುತ್ತದೆ. ನೆಮ್ಮದಿಗಾಗಿ ಜನ ಎಲ್ಲೆಲ್ಲೋ ಹುಡುಕಾಡುತ್ತಾರೆ. ತಮ್ಮ ತಲೆಯಲ್ಲಿಯೇ ಅದು ನೆಲೆಸಿರುತ್ತದೆಂಬ ಸತ್ಯ ಅವರಿಗೆ ತಿಳಿದಿರಲಾರದು."

ಸದ್ವಿಚಾರ ಸಂಗ್ರಹ

No comments:

Post a Comment

If you have any doubts. please let me know...