October 18, 2021

ಸಪ್ತಶತೀ ದೇವೀಮಾಹಾತ್ಮ್ಯೆ - ರಹಸ್ಯತ್ರಯಗಳು

" "ಸಪ್ತಶತೀ ಪಾರಾಯಣ ಮಾಡುವವರಲ್ಲಿ ಹೆಚ್ಚಿನವರು ೧೩ ಅಧ್ಯಾಯಗಳನ್ನು ಪಠಿಸುತ್ತಾರೆ."ರಹಸ್ಯತ್ರಯ" ಎಂಬ ಮೂರು ಅಧ್ಯಾಯಗಳನ್ನು ಪಠಿಸುವವರು ಬಹಳ ಕಡಿಮೆ.ಸಪ್ತಶತಿಯೊಂದಿಗೆ ರಹಸ್ಯತ್ರಯಗಳನ್ನೂ ಪಾರಾಯಣ ಮಾಡಿದರೆ ಫಲ ಹೆಚ್ಚು.ಹೆಸರೇ ಸೂಚಿಸುವಂತೆ ಇದು ರಹಸ್ಯ.ಸುಲಭದಲ್ಲಿ ಅರ್ಥವಾಗುವಂತಿಲ್ಲ.ಸ್ತ್ರೀ ಯಿಂದಲೇ ಪುರುಷ,ಪುರುಷನಿಂದಲೇ ಸ್ತ್ರೀ ಸೃಷ್ಟಿ,ಇದು ಹೇಗೆ? ಎಂಬ ಗೊಂದಲ,ದ್ವಂದ್ವದಲ್ಲಿ ಸಿಲುಕಿ ನಮ್ಮನ್ನು ನಾವೇ ಸಂದೇಹಿಸಿಕೊಳ್ಳುವಂತಾಗುತ್ತದೆ.ಇದು ರಹಸ್ಯವಾದುದರಿಂದ ಉಚ್ಚಸ್ವರದಲ್ಲಿ ಪಠಿಸದೆ ಬಹಳ ಮೆಲ್ಲನೆಯ ದನಿಯಲ್ಲಿ ಪಾರಾಯಣ ಮಾಡಬೇಕು.       " ಪ್ರಾಧಾನಿಕ ರಹಸ್ಯ "ರಾಜ ಸುರಥನು,ಕ್ರೌಷ್ಟುಕಿ ಮುನಿಯನ್ನು ಚಂಡಿಯ ಮಾಹಾತ್ಮ್ಯೆಯನ್ನು ಹೇಳಿದಿರಿ.ಚಂಡಿಯ ಈ ಅವತಾರಗಳ ಸ್ವಭಾವವನ್ನು ತಿಳಿಸಿ,ಯಾವ ಸ್ವರೂಪವನ್ನು,ಯಾವರೀತಿಯಿಂದ ಆರಾಧಿಸಬೇಕು? ಎಂಬುದನ್ನು ಹೇಳಿರಿ" ಎಂದು ಪ್ರಾರ್ಥಿಸಿದನು.ಕ್ರೌಷ್ಟುಕಿ ಋಷಿಯು,"ಎಲೈ ರಾಜನೇ,ಇದು ಬಹಳ ರಹಸ್ಯ,ಗೋಪ್ಯವಾದುದು.ಬೇರೆಯವರಿಗೆ ಹೇಳಬಾರದು ಎಂಬ ನಿಯಮವಿದೆ.ಆದರೆ ನೀನು ದೇವಿಯ ಪರಮಭಕ್ತ.ನನಗೂ ಭಕ್ತನೇ ಆದುದರಿಂದ ಹೇಳಲು ತೊಂದರೆ ಇಲ್ಲ.ಶ್ರೀಮಹಾಲಕ್ಷ್ಮಿಯೇ ಎಲ್ಲಕ್ಕೂ ಮೂಲಳು.ದೃಶ್ಯ,ಅದೃಶ್ಯ ರೂಪದಲ್ಲಿ ಅವಳೇ ವಿಶ್ವವನ್ನು ವ್ಯಾಪಿಸಿದ್ದಾಳೆ.ಚಿನ್ನದ ಮೈಕಾಂತಿ,ಚತುರ್ಭುಜಗಳಲ್ಲಿ ಮಾತುಲಿಂಗ,ಗದೆ,ಗುರಾಣಿ, ಮತ್ತು ಪಾನಪಾತ್ರೆಯನ್ನು,ಶಿರದಲ್ಲಿ ನಾಗ,ಲಿಂಗ,ಯೋನಿಯನ್ನು ಧರಿಸಿ,ದಿವ್ಯಾಭರಣ ಭೂಷಿತೆಯಾಗಿ,ತನ್ನ ತೇಜಸ್ಸಿನಿಂದ ಶೂನ್ಯವಾದ ಜಗತ್ತನ್ನು ಪರಿಪೂರ್ಣವಾಗಿಸಲು,ತನ್ನ ತಮೋಗುಣ ರೂಪದ ಉಪಾಧಿಯಿಂದ ಬೇರೊಂದು ಉತ್ಕೃಷ್ಟ ನಾರಿಯ ರೂಪದಲ್ಲಿ ಪ್ರಕಟವಾದಳು.ಆ ತಾಮಸೀ ರೂಪದ, ತೆಳುಸೊಂಟದ ನಾರಿಗೆ ನಾಲ್ಕು ಭುಜಗಳಿದ್ದು,ಕೈಗಳಲ್ಲಿಗುರಾಣಿ,ಪಾನಪಾತ್ರೆ,ಖಡ್ಗ,ರುಂಡ,ವಕ್ಷದಲ್ಲಿ ಕಬಂಧಮಾಲೆ,ಮಸ್ತಕದಲ್ಲಿ ಮುಂಡಮಾಲೆಯನ್ನು ಧರಿಸಿದ್ದಳು.ಶರೀರದ ಬಣ್ಣ ಕಪ್ಪಾಗಿದ್ದು,ಕಣ್ಣುಗಳು ದೊಡ್ಡದಾಗಿದ್ದವು.ಅವಳು ಮಹಾಲಕ್ಷ್ಮಿಗೆ ನಮಸ್ಕರಿಸಿ,"ಮಾತೆ! ನನ್ನ ಹೆಸರು,ಮಾಡಬೇಕಾದ ಕಾರ್ಯವೇನೆಂದು ತಿಳಿಸು" ಎಂದು ಕೇಳಿದಳು."ಮಹಾಮಾಯಾ,ಮಹಾಕಾಲೀ,ಮಹಾಮಾರೀ,ಕ್ಷುಧಾ,ತೃಷಾ,ನಿದ್ರಾ,ತೃಷ್ಣಾ,ಏಕವೀರಾ,ಕಾಲರಾತ್ರಿ ಮತ್ತು ದುರತ್ಯಯಾ ಇವು ನಿನ್ನ ಹೆಸರುಗಳು.ಇವು ನೀನು ಸಂದರ್ಭಕ್ಕನುಗುಣವಾಗಿ ಮಾಡುವ ಕೆಲಸಗಳಂತೆ ಕರೆಯಲ್ಪಡುತ್ತವೆ.ಇದನ್ನರಿತು ಆರಾಧಿಸುವವನು ಸುಖವನ್ನು ಅನುಭವಿಸುತ್ತಾನೆ" ಎಂದು ಮಹಾಕಾಳಿಗೆ ಮಹಾಲಕ್ಷ್ಮಿಯು ತಿಳಿಸಿದಳು.ಅನಂತರ ಮಹಾಲಕ್ಷ್ಮಿಯು ತನ್ನ ದೇಹದಿಂದ,ಶುದ್ಧಸತ್ವಗುಣದ,ಅಂಕುಶ,ಅಕ್ಷಮಾಲೆ,ವೀಣೆ,ಪುಸ್ತಕಗಳನ್ನು ಚತುರ್ಭುಜಗಳಲ್ಲಿ ಧರಿಸಿದ್ದ ಎರಡನೆಯ ರೂಪವನ್ನು ಪ್ರಕಟಿಸಿ, ಅವಳಿಗೆ, ಮಹಾವಿದ್ಯಾ, ಮಹಾವಾಣೀ, ಭಾರತೀ, ವಾಕ್, ಸರಸ್ವತೀ, ಆರ್ಯಾ, ಬ್ರಾಹ್ಮೀ, ಕಾಮಧೇನು, ವೇದಗರ್ಭಾ, ಮತ್ತು ಧೀಶ್ವರೀ ಎಂದು ಹೆಸರಿಟ್ಟಳು.ನಂತರ ಮಹಾಲಕ್ಷ್ಮಿಯು, ಮಹಾಕಾಲಿ ಮತ್ತು ಮಹಾಸರಸ್ವತಿಯರಿಗೆ,"ದೇವಿಯರೇ,ಈಗ ನೀವಿಬ್ಬರೂ ನಿಮ್ಮ ನಿಮ್ಮ ಸ್ವಭಾವ,ಗುಣಗಳಿಗೆ ಯೋಗ್ಯವಾದ ಸ್ತ್ರೀ-ಪುರುಷರ ಜೋಡಿಯನ್ನು ಸೃಷ್ಟಿಮಾಡಿರಿ" ಎಂದು ಹೇಳಿ,ಸ್ವತಃ ಮಹಾಲಕ್ಷ್ಮಿಯು,ಹಿರಣ್ಯಗರ್ಭರೂ,ಸುಂದರಾಂಗರೂ,ಕಮಲಾಸನದ ಮೇಲೆ ವಿರಾಜಮಾನರಾಗಿದ್ದ, ಸ್ತ್ರೀ-ಪುರುಷರ ಜೋಡಿಯನ್ನು ಉತ್ಪಾದಿಸಿ,ಪುರುಷನನ್ನು ಬ್ರಹ್ಮ,ವಿಧಿ,ವಿರಿಂಚ,ಧಾತೃಎಂದೂ,ಸ್ತ್ರೀಯನ್ನು ಶ್ರೀ,ಪದ್ಮಾ,ಕಮಲಾ,ಲಕ್ಷ್ಮೀಎಂದು ಹೆಸರಿಟ್ಟು ಕರೆದಳು. ಮಹಾಕಾಲೀ,ಮಹಾಸರಸ್ವತಿಯರೂ ತಮ್ಮ ದೇಹದಿಂದ ಒಂದೊಂದು ಜೋಡಿಯನ್ನು ಸೃಷ್ಟಿಸಿದರು. ಮಹಾಕಾಳಿಯು, ನೀಲಕಂಠ, ಕೆಂಪುಭುಜ, ಬಿಳಿಯಶರೀರ, ಮಸ್ತಕದಲ್ಲಿ ಚಂದ್ರನನ್ನು ಮುಕುಟವಾಗಿ ಧರಿಸಿದ್ದ ಸ್ತ್ರೀ-ಪುರುಷರನ್ನು ಸೃಷ್ಟಿಸಿದಳು.ಪುರುಷನಿಗೆ ರುದ್ರ,ಕಪರ್ದಿ, ಶಂಕರ, ಸ್ಥಾಣು, ತ್ರಿಲೋಚನ, ಸ್ತ್ರೀಗೆ ತ್ರಯೀವಿದ್ಯಾ, ಕಾಮಧೇನು, ಭಾಷಾ, ಮತ್ತು ಸ್ವರಾ ಎಂದು ಹೆಸರಿಸಿದಳು. ಮಹಾಸರಸ್ವತಿಯು, ಶ್ವೇತವರ್ಣದ ಸ್ತ್ರೀಯನ್ನು,ಶ್ಯಾಮವರ್ಣದ ಪುರುಷನನ್ನು ಸೃಷ್ಟಿಸಿ,ಸ್ತ್ರೀಗೆ ಉಮಾ, ಗೌರೀ, ಸತೀ, ಚಂಡೀ, ಸುಂದರೀ, ಸುಭಗಾ, ಶಿವಾ ಎಂದೂ,ಪುರುಷನಿಗೆ ವಿಷ್ಣು, ಕೃಷ್ಣ, ಹೃಷೀಕೇಶ, ವಾಸುದೇವ, ಜನಾರ್ದನ ಎಂದು ಹೆಸರಿಟ್ಟು ಕರೆದಳು.ನಂತರ ಮೂವರು ದೇವಿಯರೂ ಪುರುಷ ರೂಪವನ್ನು ಪಡೆದರು.ಇದನ್ನು ಜ್ಞಾನಿಗಳಾದ,ಜ್ಞಾನಚಕ್ಷುವಿರುವರು ಮಾತ್ರ ತಿಳಿಯಬಲ್ಲರೇ ವಿನಃ ಅಜ್ಞಾನಿಗಳು ಅರಿಯಲಾರರು.ಮಹಾಲಕ್ಷ್ಮಿಯು ಸರಸ್ವತಿಯನ್ನು ಬ್ರಹ್ಮನಿಗೆ,ಉಮೆಯನ್ನು ಶಂಕರನಿಗೆ,ಲಕ್ಷ್ಮಿಯನ್ನು ವಾಸುದೇವನಿಗೆ ಕೊಟ್ಟಳು.ಬ್ರಹ್ಮನು ಸರಸ್ವತಿಯೊಂದಿಗೆ ಬ್ರಹ್ಮಾಂಡವನ್ನು ಸೃಷ್ಟಿಸಿದನು.ವಿಷ್ಣುವು ಲಕ್ಷ್ಮಿಯೊಡನೆ ಬ್ರಹ್ಮಾಂಡ ಸೃಷ್ಟಿಯನ್ನು ಪೋಷಿಸಿದನು.ಶಂಕರನು ಉಮೆಯೊಂದಿಗೆ ಪ್ರಳಯಕಾಲದಲ್ಲಿ ಅದನ್ನು ಭೇದಿಸಿದನು.ಹೀಗೆ ಮಹತ್ತತ್ವವೇ ಪ್ರಧಾನವಾವಾದ,ಪಂಚಭೂತಾತ್ಮಕವಾದ,ಸಮಸ್ತ ಸ್ಥಾವರ,ಜಂಗಮಗಳ ಜಗತ್ತಿನ ಸೃಷ್ಟಿಯಾಯಿತು.ಮಹಾಲಕ್ಷ್ಮಿಯೇ,ಸತ್ಯ,ಜ್ಞಾನ,ಚಿತ್,ಮಹಾಮಾಯಾ,ಮೊದಲಾದ,ಸಾಕಾರ,ನಿರಾಕಾರ ರೂಪದ,ಅನೇಕ ಹೆಸರುಗಳಿಂದ ಜಗದ್ರಕ್ಷಕಳಾಗಿರುವಳು,ಎಂದು ಮಾರ್ಕಂಡೇಯ ಮಹಾಮುನಿಯು ಕ್ರೌಷ್ಟುಕಿ ಋಷಿಗೆ ಪ್ರಾಧಾನಿಕ ರಹಸ್ಯವನ್ನು ಉಪದೇಶಿಸಿದನು.ಇಲ್ಲಿಗೆ "ಪ್ರಾಧಾನಿಕ ರಹಸ್ಯ" ಮುಗಿಯಿತು.*-*-*-*-*-*-*-*-*-*" ವೈಕೃತಿಕರಹಸ್ಯ "ಕ್ರೌಷ್ಟುಕಿ ಋಷಿಯು ರಾಜ ಸುರಥನಿಗೆ,ಮಹಾಕಾಳೀ,ಮಹಾಲಕ್ಷ್ಮೀ,ಮಹಾಸರಸ್ವತಿಯರ ಸ್ವರೂಪವನ್ನು ಹೇಳುತ್ತೇನೆ ಕೇಳು ಎಂದು..."ಸತ್ತ್ವಪ್ರಧಾನಳಾದ ಮಹಾಲಕ್ಷ್ಮಿಯ ತಾಮಸೀ ಭೇದದ ಸ್ವರೂಪಗಳಾದ,ಶರ್ವಾ,ಚಂಡಿಕಾ,ದುರ್ಗಾ,ಭದ್ರಾ,ಭಗವತೀ ಇತ್ಯಾದಿ ಹೆಸರುಗಳಿಂದ ಪೂಜಿಸಲ್ಪಡುತ್ತಾಳೆ.ತಮೋಗುಣದಿಂದ ಪ್ರಕಟಳಾದ ಮಹಾಕಾಳಿಯು,ಭಗವಾನ್ ವಿಷ್ಣುವಿನ "ಯೋಗನಿದ್ರೆ" ಯಾಗಿದ್ದು,ದಶಮುಖ,ದಶಭುಜ,ದಶಕಾಲುಗಳು ಮೂವತ್ತು ಕಣ್ಣುಗಳುಳ್ಳ ಮೈ ಬಣ್ಣ ಕಪ್ಪು,ಕೈಗಳಲ್ಲಿ ಖಡ್ಗ,ಬಾಣ,ಗದೆ,ಶೂಲ,ಚಕ್ರ,ಶಂಖ,ಭುಶುಂಡಿ,ಪರಿಘ,ಧನುಸ್ಸು,ಮತ್ತು ರಕ್ತ ತೊಟ್ಟಿಕ್ಕುತ್ತಿರುವ ರುಂಡವನ್ನು ಧರಿಸಿದ್ದಾಳೆ.ಇವಳು ರೂಪ,ಸೌಭಾಗ್ಯ,ಕಾಂತಿ ಮತ್ತು ಮಹೈಶ್ವರ್ಯಕ್ಕೆ ಅಧಿಷ್ಠಾತ್ರಿಯಾಗಿದ್ದಾಳೆ.ಮಧುಕೈಟಭರ ವಧೆಗಾಗಿ ಬ್ರಹ್ಮನು ಇವಳನ್ನು ಸ್ತೋತ್ರ ಮಾಡಿದ್ದನು.ಇವಳನ್ನು ಆರಾಧಿಸಿದರೆ,ಚರಾಚರ ಜಗತ್ತನ್ನು ಉಪಾಸಕನ ಅಧೀನವಾಗಿಸುತ್ತಾಳೆ.ಎಲ್ಲ ದೆವತೆಗಳ ಅಂಗಗಳಿಂದ ಪ್ರಾದುರ್ಭವಿಸಿದ,ತ್ರಿಗುಣಮಯೀ ಆದ ಮಹಾಲಕ್ಷ್ಮಿಯ ಮುಖ ಶ್ವೇತವರ್ಣ,ಭುಜಗಳು ಶ್ಯಾಮಲವರ್ಣ,ಸ್ತನಗಳು ಹಾಲಿನಂತೆ ಬಿಳುಪು,ಕಟಿ ಮತ್ತು ಚರಣಗಳು ಕೆಂಪು,ತೊಡೆ ಮಿನಖಂಡಗಳು ನೀಲಿಬಣ್ಣದಿಂದ ಕೂಡಿದ್ದು,ಸುಂದರ ವಸ್ತ್ರಾಭೂಷಣಗಳಿಂದ ಅಲಂಕೃತಳಾದ ರೂಪದಲ್ಲಿ ಉನ್ಮತ್ತಳಂತೆ ಶೋಭಿಸುತ್ತಾಳೆ.ಅಸಂಖ್ಯ ಭುಜಗಳಿದ್ದರೂ ಅಷ್ಟಾದಶ (೧೮) ಭುಜದವಳೆಂದೇ ಇವಳನ್ನು ಪೂಜಿಸಬೇಕು.ಕೈಗಳಲ್ಲಿಅಕ್ಷಮಾಲೆ,ಕಮಲ,ಬಾಣ,ಖಡ್ಗ,ವಜ್ರ,ಗದೆ,ಚಕ್ರ,ತ್ರಿಶೂಲ,ಪರಶು,ಶಂಖ,ಗಂಟೆ,ಪಾಶ,ಶಕ್ತಿ,ದಂಡ,ಚರ್ಮ,ಧನುಸ್ಸು,ಪಾನಪಾತ್ರೆ,ಮತ್ತು ಕಮಂಡಲುಗಳನ್ನು ಧರಿಸಿ ಪದ್ಮದ ಮೇಲೆ ಕುಳಿತಿದ್ದಾಳೆ.ಮಹಿಷಾಸುರನ ವಧೆ ಇವಳಿಂದ (ಮಹಾಲಕ್ಷ್ಮಿ) ಆಯಿತು.ಸತ್ತ್ವಗುಣಪ್ರಧಾನವಾದ ಪಾರ್ವತಿಯಿಂದ ಪ್ರಕಟವಾದ,ಮಹಾಸರಸ್ವತಿಗೆ,ಎಂಟು ಭುಜಗಳಿದ್ದು, ಬಾಣ,ಒನಕೆ,ಶೂಲ,ಚಕ್ರ,ಶಂಖ,ಗಂಟೆ,ನೇಗಿಲು ಮತ್ತು ಧನುಸ್ಸನ್ನು ಆಯುಧಗಳಾಗಿ ಧರಿಸಿದ್ದಾಳೆ.ಶುಂಭ-ನಿಶುಂಭರನ್ನು ಇವಳು ಸಂಹರಿಸಿದವಳು," ಎಂದು ತ್ರಿಶಕ್ತ್ಯಾತ್ಮಿಕ ದೇವಿಯರ ಸ್ವರೂಪವನ್ನುವರ್ಣಿಸಿ,ಕ್ರೌಷ್ಟುಕಿ ಋಷಿಯು,ಅವರ ಉಪಾಸನಾ ವಿಧಿಯನ್ನು ಹೇಳಲಾರಂಭಿಸಿದನು.ಹದಿನೆಂಟು ಭುಜಗಳ ಮಹಾಲಕ್ಷ್ಮಿಯನ್ನು ಪೂಜಿಸುವಾಗ,ಅವಳ ಎಡಕ್ಕೆ ಹತ್ತು ಮುಖಗಳ ಮಹಾಕಾಳಿ,ಬಲಕ್ಕೆ ಅಷ್ಟಭುಜಗಳ ಮಹಾಸರಸ್ವತಿಯರನ್ನು,ಅವರ ಹಿಂದುಗಡೆ ಶಂಕರ,ಮಹಾವಿಷ್ಣು,ಮತ್ತು ಬ್ರಹ್ಮರನ್ನು ಆವಾಹಿಸಿ  ಪೂಜೆ ಸಲ್ಲಿಸಬೇಕು.ಅರಿಷ್ಟ ಶಾಂತಿಗಾಗಿ,ಬಲಪಾರ್ಶ್ವದಲ್ಲಿ ಕಾಲನನ್ನು,ಎಡಪಾರ್ಶ್ವದಲ್ಲಿ ಮೃತ್ಯುವನ್ನು,ದೇವಿಯ ನವಶಕ್ತಿಗಳಾದ ಬ್ರಾಹ್ಮೀ,ಮಾಹೇಶ್ವರಿ,ಕೌಮಾರೀ,ವೈಷ್ಣವೀ,ವಾರಾಹೀ,ನಾರಸಿಂಹೀ,ಐಂದ್ರೀ,ಶಿವದೂತೀ ಮತ್ತು ಚಾಮುಂಡಾ ಇವರಿಗೂ ಪೂಜೆ ಸಲ್ಲಿಸಲೇಬೇಕು.ಪೂಜೆಯಲ್ಲಿ ಆಯಾಯಾ ಅವತಾರಕ್ಕೆ ಸಂಬಂಧಿಸಿದ ಸ್ತೋತ್ರ,ಮಂತ್ರಗಳನ್ನೇ ಹೇಳಬೇಕು.ಎಲ್ಲ ರೂಪಗಳೂ ಪ್ರಕಟವಾದುದು ಮಹಾಲಕ್ಷ್ಮಿಯಿಂದಲೇ.ಮಹಿಷಾಸುರ ಮರ್ದಿನಿಯಾದ ಅವಳೇ ಪ್ರಧಾನವಾಗಿ ಪೂಜನೀಯಳು.ಷೋಡಶೋಪಚಾರ ಪೂರ್ವಕವಾಗಿ ದೇವಿಯನ್ನು ಆರಾಧಿಸಿ,ಮಾಂಸಾಹಾರಿ ಆರಾಧಕರು ಮದ್ಯ,ಮಾಂಸ,ರಕ್ತಸಿಂಚಿತ ಬಲಿಯನ್ನು,ಸಸ್ಯಾಹಾರಿಗಳು ಪಂಚಭಕ್ಷ, ಪರಮಾನ್ನ,ಪಂಚಫಲಗಳನ್ನು ನೈವೇದ್ಯವಾಗಿ ಅರ್ಪಿಸಿ,ಮಹಾಮಂಗಳಾರತಿ ಮಾಡಿ ದೇವಿಯನ್ನು ನಾನಾ ಸ್ತೋತ್ರಗಳಿಂದ,ರಹಸ್ಯತ್ರಯಗಳಿಂದ ಸ್ತುತಿಸಿ ಪ್ರಾರ್ಥಿಸಬೇಕು.ನಂತರ ದೇವಿಯಿಂದಲೇ ಹತನಾದ ಮಹಿಷಾಸುರನನ್ನೂ,ದೇವಿಯ ವಾಹನವನ್ನೂ ಪೂಜಿಸಬೇಕು.ಕೊನೆಯಲ್ಲಿ "ಅಪರಾಧಕ್ಷಮಾಪಣಾ ಸ್ತೋತ್ರ"ದಿಂದ ಸ್ತುತಿಸಿ ಕ್ಷಮಾ ಪ್ರಾರ್ಥನೆಯನ್ನು ಮಾಡವುದು ಅವಶ್ಯಕ.ಶಕ್ತಿ ಇದ್ದವರು ಸಪ್ತಶತೀ ಪಾರಾಯಣ ಮಾಡಿ,ಪ್ರತಿಯೊಂದು ಶ್ಲೋಕಕ್ಕೂ,ಎಳ್ಳು,ತುಪ್ಪದಿಂದ ಕೂಡಿದ ಆಹುತಿಯನ್ನು ಕೊಟ್ಟು ಚಂಡೀಹೋಮವನ್ನು ಮಾಡಿ,ಸುವಾಸಿನೀ ಪೂಜೆ,ಅನ್ನದಾನ,ಮಾಡುವುದರಿಂದ ದೇವಿಯು ಪ್ರಸನ್ನಳಾಗಿ,ಭಕ್ತನ ಮನೋವಾಂಛಿತ ಫಲಗಳನ್ನು ಕೊಟ್ಟು ದೇಹಾಂತ್ಯದಲ್ಲಿ ತನ್ನಲ್ಲಿಯೇ ಐಕ್ಯಮಾಡಿಕೊಳ್ಳುತ್ತಾಳೆ" ಆದ್ದರಿಂದ ರಾಜನೇ ನೀನೂ ಸಹ ಭಕ್ತಿಯಿಂದ ಶಾಸ್ತ್ರೋಕ್ತ ವಿಧಿಯಿಂದ ಚಂಡಿಕೆಯನ್ನು ಪೂಜಿಸು.ಅವಳು ನಿನಗೆ ಸಕಲ ಸೌಭಾಗ್ಯ, ಸುಖವನ್ನು ಅನುಗ್ರಹಿಸುವಳು,ಎಂದು ಕ್ರೌಷ್ಟುಕಿ ಮುನಿಯು ಸುರಥರಾಜನಿಗೆ ಹೇಳಿದನು.ಇಲ್ಲಿಗೆ ರಹಸ್ಯತ್ರಯದ ಎರಡನೆಯ "ವೈಕೃತಿಕ ರಹಸ್ಯ,ಸಂಪನ್ನವಾಯಿತು.ಆಸಕ್ತರಿಗಾಗಿ...*ಅಪರಾಧ ಕ್ಷಮಾಪಣಾ ಸ್ತೋತ್ರ*ಅಪರಾಧ ಸಹಸ್ರಾಣಿಕ್ರಿಯಂತೇsಹರ್ನಿಶಂ ಮಯಾ |ದಾಸೋsಯಮಿತಿ ಮಾಂ ಮತ್ವಾಕ್ಷಮಸ್ವ ಪರಮೇಶ್ವರಿ ||೧||ಆವಾಹನಂ ನ ಜಾನಾಮಿನ ಜಾನಾಮಿ ವಿಸರ್ಜನಮ್ ||ಪೂಜಾಂ ಚೈವ ನ ಜಾನಾಮಿಕ್ಷಮ್ಯತಾಂ ಪರಮೆಶ್ವರಿ ||೨||ಮಂತ್ರಹೀನಂ ಕ್ರಿಯಾಹೀನಂಭಕ್ತಿಹೀನಂ ಸುರೇಶ್ವರಿ |ಯತ್ಪೂಜಿತಂ ಮಯಾದೇವಿಪರಿಪೂರ್ಣಂ ತದಸ್ತು ಮೇ ||೩||ಅಪರಾಧಶತಂ ಕೃತ್ವಾಜಗದಂಬೇತಿ ಚೋಚ್ಚರೇತ್ |ಯಾಂ ಗತಿಂ ಸಮವಾಪ್ನೋತಿನ ತಾಂ ಬ್ರಹ್ಮಾದಯಃ ಸುರಾಃ ||೪||ಸಾಪರಾಧೋsಸ್ಮಿ ಶರಣಂಪ್ರಾಪ್ತಸ್ತ್ವಾಂ ಜಗದಂಬಿಕೇ |ಇದಾನೀಮನುಕಂಪ್ಯೋsಹಂಯಥೇಚ್ಛಸಿ ತಥಾ ಕುರು ||೫||ಅಜ್ಞಾನಾದ್ವಿಸ್ಮೃತೇರ್ಭ್ರಾಂತ್ಯಾಯನ್ನ್ಯೂನಮಧಿಕಂ ಕೃತಮ್ |ತತ್ಸರ್ವಂ ಕ್ಷಮ್ಯತಾಂ ದೇವಿಪ್ರಸೀದ ಪರಮೇಶ್ವರಿ ||೬||ಕಾಮೇಶ್ವರಿ ಜಗನ್ಮಾತಃಸಚ್ಚಿದಾನಂದ ವಿಗ್ರಹೇ |ಗೃಹಾಣಾರ್ಚಾಮಿಮಾಂ ಪ್ರೀತ್ಯಾಪ್ರಸೀದ ಪರಮೇಶ್ವರಿ ||೭||ಗುಹ್ಯಾತಿಗುಹ್ಯಗೋಪ್ತ್ರೀ ತ್ವಂಗೃಹಾಣಾಸ್ಮತ್ಕೃತಂ ಜಪಮ್ |ಸಿದ್ಧಿರ್ಭವತು ಮೇ ದೇವಿತ್ವತ್ಪ್ರಸಾದಾತ್ಸುರೇಶ್ವರಿ ||೮||*-*-*-*-*-*-*-*-*-  "ಮೂರ್ತಿ ರಹಸ್ಯ."ಕ್ರೌಷ್ಟುಕಿ ಋಷಿಯು ರಾಜ ಸುರಥನಿಗೆ ಹೇಳಿದನು...ನಂದನ ಮಗಳಾಗಿ ಜನಿಸುವ ನಂದಾದೇವಿಯು ಕನಕಕಾಂತಿಯ ದೇಹ,ದಿವ್ಯ ವಸ್ತ್ರ,ಆಭರಣಗಳನ್ನು ತೊಟ್ಟು,ಕಮಲ,ಅಂಕುಶ,ಪಾಶ,ಶಂಖವನ್ನು ನಾಲ್ಕು ಕೈಗಳಲ್ಲಿ ಧರಿಸಿ,ಇಂದಿರಾ,ಲಕ್ಷ್ಮೀ,ಶ್ರೀ,ರುಕ್ಮಾಂಬುಜಾಸನಾ,ಮುಂತಾದ ಹೆಸರುಗಳಿಂದಕರೆಯಲ್ಪಡುತ್ತಾಳೆ.ಅವಳನ್ನು ಆರಾಧಿಸಿದರೆ,ಮೂರುಲೋಕಗಳನ್ನೂ ಆರಾಧಕನಿಗೆ ಅಧೀನವಾಗಿಸುವಳು.ಮೊದಲು ತಿಳಿಸಿದ್ದ ರಕ್ತದಂತಿಕಾ ದೇವಿಯು,ವಿಶಾಲವಾದ ಕೆಂಪು ಬಣ್ಣದ ದೇಹ,ಆಕರ್ಷಿಸುವಂತಹ,ಮನೋಹರವಾದ ಸ್ತನದ್ವಯಗಳು,ಕೆಂಪು ವಸ್ತ್ರ,ಕೆಂಪು ರತ್ನಗಳ ಆಭರಣ,ಹೀಗೆ ದಂತವೂ ಸೇರಿ ಅವಳ ಸರ್ವಾಂಗವೂ ಕೆಂಪು ಬಣ್ಣದಲ್ಲಿದ್ದುದರಿಂದ, "ರಕ್ತದಂತಿಕಾ" ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಾಳೆ.ಅವಳು ಚತುರ್ಭಜದಲ್ಲಿ ಖಡ್ಗ,ಪಾನಪಾತ್ರೆ,ಒನಕೆ,ಮತ್ತು ನೇಗಿಲನ್ನು ಆಯುಧಗಳಾಗಿ ಧರಿಸಿರುವಳು.ಪ್ರತಿದಿನವೂ ಅವಳನ್ನು ಸ್ತುತಿಸಿದರೆ, ತನ್ನಂತೆಯೇ ತನ್ನ ಆರಾಧಕನನ್ನೂ ಚರಾಚರ ಜಗತ್ತಿಗೆ ವ್ಯಾಪಿಸುವಂತೆ ಮಾಡಿ,ಭಕ್ತನ ರಕ್ಷಣೆ ಮಾಡುವಳು.ಶಾಕಂಭರೀದೇವಿಯು,ಶೋಕರಹಿತಳು,ದುಷ್ಟರನ್ನು ನಿಗ್ರಹಿಸುವವಳು,ಪಾಪ-ವಿಪತ್ತುಗಳನ್ನು ನಾಶಮಾಡುವವಳಾಗಿದ್ದಾಳೆ.ಶಾಕಂಭರಿಯು ನೀಲವರ್ಣದವಳಾಗಿದ್ದು,ಕಣ್ಣುಗಳು ನೀಲಕಮಲದಂತಿವೆ.ತ್ರಿವಲಿಯಿಂದ ಕೂಡಿದ ಸೂಕ್ಷ್ಮವಾದ ಉದರ,ತೆಳುವಾದ ಸೊಂಟ,ಎತ್ತರವಾದ ಉಬ್ಬಿದ, ಒಂದಕ್ಕೊಂದು ಅಂಟಿಕೊಂಡಂತಹ ಗೋಲಾಕಾರದ ಸ್ತನಗಳಿದ್ದು  ಕಮಲವಾಸಿನಿಯಾಗಿದ್ದಾಳೆ.ಕೈಗಳಲ್ಲಿ  ಮುಷ್ಟಿಯ ತುಂಬ ಬಾಣಗಳು,ಕಮಲಪುಷ್ಪ,ಹೂವು,ಸೊಪ್ಪು,ಗೆಡ್ಡೆ,ಗೆಣಸು,ಹಣ್ಣುಗಳಿಂದ ಕೂಡಿದ ಶಾಕಗುಚ್ಛ (ತರಕಾರಿಯ ಕಟ್ಟು) ಮತ್ತು ಹೊಳೆಯುವ ಧನುಸ್ಸನ್ನು ಧರಿಸಿ,ಭಕ್ತರ ಹಸಿವು,ಬಾಯಾರಿಕೆ,ಮೃತ್ಯುಭಯವನ್ನು ನಿವಾರಿಸುವವಳಾಗಿದ್ದು,ಶಾಕಂಭರೀ,ಶತಾಕ್ಷೀ,ದುರ್ಗಾ,ಉಮಾ,ಗೌರೀ,ಸತೀ,ಚಂಡೀ,ಕಾಲಿಕಾ,ಪಾರ್ವತೀ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಾಳೆ.ಶಾಕಂಭರಿಯನ್ನು ಆರಾಧಿಸುವವನಿಗೆ ಕ್ಷಾಮ-ಡಾಮರದ,ರೋಗ-ರುಜಿನಗಳ,ಹಸಿವು-ದಾಹಗಳ ಬಾಧೆಯಿಲ್ಲದಂತೆ ಅನ್ನಪಾನೀಯಗಳೆಂಬ ಅಕ್ಷಯಫಲವನ್ನು ಅನುಗ್ರಹಿಸಿ ರಕ್ಷಿಸುತ್ತಾಳೆ.ಭೀಮಾದೇವಿಯು ನೀಲವರ್ಣದ ಶರೀರ,ದೊಡ್ಡದಾದ ನಯನ ಮತ್ತು ಕುಚದ್ವಯಗಳು,ಕೈಗಳಲ್ಲಿ ಚಂದ್ರಹಾಸವೆಂಬ ಖಡ್ಗ, ಡಮರು,ಮಸ್ತಕ,ಪಾನಪಾತ್ರೆಗಳನ್ನು ಧರಿಸಿದ್ದಾಳೆ.ಅವಳ ರೂಪ ಭಯಂಕರವಾಗಿದ್ದರೂ,ಭಕ್ತಾಭೀಷ್ಟದಾಯಕಳಾಗಿ,ಏಕವೀರಾ,ಕಾಲರಾತ್ರಿ,ಕಾಮದಾ ಎಂಬ ಹೆಸರಿನಿಂದ ಭಕ್ತರಿಂದ ಪೂಜೆಗೊಳ್ಳುತ್ತಾಳೆ.ಭ್ರಾಮರೀದೇವಿಯ ಕಾಂತಿಯು ಅನೇಕಬಣ್ಣಗಳಿಂದ ಕೂಡಿದ್ದು,ಸುಗಂಧದ್ರವ್ಯಗಳಿಂದ ಲೇಪಿತವಾದ ದೇಹ,ತನ್ನ ತೇಜೋಮಂಡಲದ ಪ್ರಭೆಯಿಂದಾಗಿ ನೋಡಲು ಸಾಧ್ಯವಾಗದಷ್ಟು ಪ್ರಕಾಶಮಾನಳಾಗಿದ್ದು,ಚಿತ್ರಭ್ರಮರವಾಣಿ,ಮಹಾಮಾರೀ ಮೊದಲಾದ ಹೆಸರುಗಳಿಂದ ಆರಾಧಿಸಲ್ಪಡುತ್ತಾಳೆ"ಸುರಥರಾಜನೇ!ಇವು ಚಂಡಿಕಾದೇವಿಯ ವಿವಿಧ ಮೂರ್ತಿಗಳ ಸ್ವರೂಪ,ಹೆಸರುಗಳು.ಈ ದೇವಿಯರ ಕೀರ್ತನೆಯನ್ನು ಮಾಡಿದರೆ,ದೇವಿಯು ಕಾಮಧೇನುವಿನಂತೆ,ಆರಾಧಕನ ಎಲ್ಲ ಮನೋಕಾಮನೆಗಳನ್ನು ಈಡೇರಿಸುವಳು ಎಂಬುದರಲ್ಲಿ ಸಂಶಯವೇ ಇಲ್ಲ.ರಾಜನೇ,ಇದು ಪರಮ ಗೊಪ್ಯವಾದ ರಹಸ್ಯ.ಇದನ್ನು ನೀನು ಬೇರೆ ಯಾರಿಗೂ ಹೇಳಕೂಡದೆಂಬುದು ಸದಾ ನಿನ್ನ ಜ್ಞಾನದಲ್ಲಿರಲಿ.ಮೈಮರೆತು ಹೇಳಿದರೆ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.ದೇವಿಯ ದಿವ್ಯ ಮೂರ್ತಿಗಳ ಆಖ್ಯಾನ,ಆರಾಧನೆ ಮನೋವಾಂಛಿತ ಫಲವನ್ನು ಕೊಡುವಂತಹುದಾಗಿದೆ.ಆದ್ದರಿಂದ ನೀನು ಪೂರ್ಣ ಪ್ರಯತ್ನದಿಂದ ಏಕಾಗ್ರಚಿತ್ತನಾಗಿ,ದೇವಿಯ ಜಪಾರಾಧನೆಯನ್ನು ನಿರಂತರವಾಗಿ ಮಾಡು.ಸಪ್ತಶತಿಯ ಮಂತ್ರಗಳ ಪಠನ ಮಾತ್ರದಿಂದ ಮನುಷ್ಯನು ಏಳು ಜನ್ಮಗಳಲ್ಲಿ ಸಂಪಾದಿಸಿದ ಬ್ರಹ್ಮಹತ್ಯಾದಿ ಘೋರಪಾತಕಗಳಿಂದ,ಸಮಸ್ತ ಪಾಪಗಳಿಂದ ಮುಕ್ತನಾಗುತ್ತಾನೆ.ಆದ್ದರಿಂದಲೇ ನಿನಗೆ ದೇವಿಯ ಗೋಪ್ಯಕ್ಕಿಂತಲೂ ಗೋಪ್ಯವಾದಂತಹ ಎಲ್ಲವನ್ನೂ,ಎಲ್ಲರಹಸ್ಯಗಳನ್ನೂ,ಧ್ಯಾನ,ಆರಾಧನಾ ಕ್ರಮವನ್ನು ಸಾದ್ಯಂತವಾಗಿ ವಿವರಿಸಿದ್ದೇನೆ.ಆ ಮಹಾದೇವಿಯ ಅನುಗ್ರಹದಿಂದ ನೀನು ಸರ್ವಲೋಕ ಮಾನ್ಯನಾಗುವೆ.ಸರ್ವಜಗದ್ವ್ಯಾಪಿನಿಯೂ ಸರ್ವರೂಪಮಯಿಯೂ ವಿಶ್ವರೂಪಳೂ ಆದ ಮಹಾದೇವಿ,ಪರಮೇಶ್ವರಿಗೆ ಭಕ್ತಿಯಿಂದ ನಮಸ್ಕರಿಸುತ್ತೇನೆ"ಎಂದು ಹೇಳಿ ಕ್ರೌಷ್ಟುಕಿ ಋಷಿಯು ವಿಶ್ರಮಿಸಿದನು.ಇಲ್ಲಿಗೆ ರಹಸ್ಯತ್ರಯಗಳು"  ಮುಕ್ತಾಯವಾಯಿತು.ನಮಸ್ತಸ್ಯೈ ನಮಸ್ತಸ್ಯೈನಮಸ್ತಸ್ಯೈ ನಮೋನಮಃ ||ಶ್ರೀಜಗದಂಬಾರ್ಪಣಮಸ್ತು.

No comments:

Post a Comment

If you have any doubts. please let me know...