May 27, 2020

ದಾಸರೋ ನಾವೆಲ್ಲ ಶುನಕನಂದದಿ ಜಗದ । ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ॥ ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು । ವಾಸನಾಕ್ಷಯ ಮೋಕ್ಷ – ಮಂಕುತಿಮ್ಮ

ಶುನಕ ಎಂದರೆ . . . . . . 

ದಾಸರೋ ನಾವೆಲ್ಲ ಶುನಕನಂದದಿ ಜಗದ ।
ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ॥
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು ।
ವಾಸನಾಕ್ಷಯ ಮೋಕ್ಷ – ಮಂಕುತಿಮ್ಮ
 ಎನ್ನುವುದಾಗಿ ಡಿವಿಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳುತ್ತಾರೆ. ಇಲ್ಲಿನ ಶುನಕ ಶಬ್ದ ನಾಯಿಯನ್ನೇ ಸೂಚಿಸುತ್ತದೆ. ಈ ಹಿಂದೆ ನಾನು ಶುನಃಶೇಪನ ಕುರಿತಾಗಿ ಬರೆದಿದ್ದೆ. ಅಲ್ಲಿ ಶುನಃಪುಚ್ಚ, ಶುನಃಶೇಪ, ಮತ್ತು ಶುನಃಲಾಂಗೂಲ ಎನ್ನುವ ಮೂವರಲ್ಲಿ ಶುನಃಶೇಪನ ಬಲಿ ಪ್ರಸಂಗವನ್ನು ಬರೆದಿದ್ದೆ. ಆಗ ಈ ಶಬ್ದದ ಕುರಿತಾಗಿ ಅನೇಕರು ಶುನಃಶೇಪ ಅನ್ನುವುದು ನಾಯಿಯಬಾಲ ಎಂದಾಗುತ್ತದೆ ಎನ್ನುವ ಪ್ರತಿಕ್ರಿಯೆ ಬರೆದಿದ್ದರು. ನಾನು ಅದನ್ನೇ ಇಂದು ಪುನಃ ಬರೆಯುತ್ತಿದ್ದೇನೆ.
ಶುನಕ, ಶ್ವಾ, ಶ್ವಾನ ಇತ್ಯಾದಿ ಪದಗಳು ಬಂದಾಗ ನಮಗೆ ಮೊದಲು ನೆನಪಾಗುವುದೇ ನಾಯಿಯದ್ದು. ಆದರೆ ಇಲ್ಲಿ “ಶುನ” ಎನ್ನುವ ಪದವನ್ನು ಅರಸುತ್ತಾ ನಾವು ಹೋದಾಗ ಅನೇಕ ಅರ್ಥಗಳು ಸಿಗುತ್ತಾ ಹೋಗುತ್ತವೆ.
ಶುನಂ ಹುವೇಮ ಮಘವಾನಮಿಂದ್ರಮಸ್ಮಿನ್ಭರೇ ನೃತಮಂ ವಾಜಸಾತೌ |
ಶೃಣ್ವಂತಮುಗ್ರಮೂತಯೇ ಸಮತ್ಸು ಘ್ನಂತಂ ವೃತ್ರಾಣಿ ಸಂಜಿತಂ ಧನಾನಾಂ || ಇಂದ್ರನನ್ನು ಕುರಿತಾಗಿ ಪ್ರಾರ್ಥಿಸಿಕೊಳ್ಳುವ ಋಕ್ ಇದು. ನಮ್ಮ ಜೀವನಕ್ಕಾಗಿ (ಆಹಾರಕ್ಕಾಗಿ) ನಡೆಯುವ ಯುದ್ಧದಲ್ಲಿ ನಮಗೆ ಸುಖವನ್ನು ಕೊಡುವವನೂ, ಧನವನ್ನು ಹೊಂದಿರುವ ಐಶ್ವರ್ಯ ಹೊಂದಿರುವವನೂ, ನಮ್ಮೆಲರ ನಾಯಕತ್ವವನ್ನು ಹೊಂದಿರುವವನೂ, ನಾವು ಹಾಡಿಹೊಗಳುವ ಸ್ತುತಿಗಳನ್ನು ಆಲಿಸುವವನೂ, ಶತ್ರುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯುಳ್ಳವನೂ, ವೃತ್ರನೇ ಮೊದಲಾದ ಅಸುರರನ್ನು ಎದುರಿಸಿ ಸಂಹಾರಮಾಡಬಲ್ಲವನೂ, ಶತ್ರುಗಳಲ್ಲಿರುವ ನಮ್ಮ ಸಂಪತ್ತು ಪುನಃ ನಮಗೆ ದೊರಕುವಂತೆ ಮಾಡುವವನೂ ಆದ ಇಂದ್ರನೇ ನಿನ್ನನ್ನು ನಮ್ಮ ರಕ್ಷಣೆಗಾಗಿ ಆಹ್ವಾನಿಸುತ್ತಿದ್ದೇನೆ ಎನ್ನುವ ತಾತ್ಪರ್ಯ ಈ ಋಕ್ಕಿನದ್ದು. ಇಲ್ಲಿ ಶುನಂ ಎನ್ನುವುದನ್ನು ವೃದ್ಧಿಯನ್ನು ಹೊಂದತಕ್ಕವನೂ ಸುಖವನ್ನು ಕೊಡುವವನಾದ ಇಂದ್ರನ ಕುರಿತಾಗಿ ಹೇಳಲಾಗಿದೆ. ಶುನ ಎನ್ನುವ ಶಬ್ದವನ್ನು ಅಲ್ಲಲ್ಲಿ ಹೇಳಿರುವುದು ಸುಖ ಮತ್ತು ಸಂತೋಷವನ್ನು ಕುರಿತಾಗಿದ್ದು ಇಲ್ಲಿ ಪ್ರಾಣಿಯನ್ನು ಕುರಿತಾಗಿಯಲ್ಲ.
ಋಗ್ವೇದದ 7ನೇ ಮಂಡಲದ 70ನೇ ಸೂಕ್ತದ ಒಂದನೇ ಋಕ್ಕನ್ನು ಈಗ ಗಮನಿಸೋಣ.
ಆ ವಿಶ್ವವಾರಾಶ್ವಿನಾ ಗತಂ ನಃ ಪ್ರ ತತ್ಸ್ಥಾ ನಮವಾಚಿವಾಂ ಪ್ರಥಿವ್ಯಾಂ |
ಆಶ್ವೋ ನ ವಾಜೀ ಶುನ ಪೃಷ್ಠೋ ಅಸ್ಥಾದಾ ಯತ್ಸೇದಥುರ್ಧ್ರುವಸೇ ನ ಯೋನಿಂ ||
ಜಗತ್ತಿನ ಎಲ್ಲಾ ಜನರ ಗೌರವಾದರಗಳಿಗೆ ಪಾತ್ರರಾದ ಅಶ್ವಿನೀ ದೇವತೆಗಳೇ, ನಮ್ಮ ಯಾಗಶಾಲೆಗೆ ಬನ್ನಿ, ಈ ಜಗತ್ತಿನಲ್ಲಿ ಈ ಯಾಗಶಾಲೆ ನಿಮಗಾಗಿಯೇ ನಿರ್ಮಿಸಲ್ಪಟ್ಟಿದೆ ಎಂದು ಪ್ರಸಿದ್ಧವಾಗಿದೆ. ಶಾಶ್ವತವಾದ ವಾಸಕ್ಕಾಗಿ ಮನೆಯನ್ನು ಆಶ್ರಯಿಸಿರುವಂತೆ, ಯಾವ ಕುದುರೆಯನ್ನು ನೀವು ಹತ್ತಿ ಕುಳಿತುಕೊಳ್ಳುವಿರೋ ಅಂತಹ ಸುಖಕರವಾದ ಪೃಷ್ಠಭಾಗವುಳ್ಳದ್ದು ಹಾಗೂ ವೇಗವಾಗಿ ಸಂಚರಿಸುವ ಕುದುರೆಯು ನಿಮ್ಮ ಸಮೀಪದಲ್ಲಿರಲಿ. ಎಂದು ಹೇಳುತ್ತಾ " ಶುನಪೃಷ್ಠಾ" ಎನ್ನುವುದನ್ನು ಇಲ್ಲಿ ಕುದುರೆಯ ವಿಶಾಲವಾದ ಪೃಷ್ಠ ಭಾಗವನ್ನು ಕುರಿತಾಗಿ ಹೇಳಲಾಗಿದೆ. ಕುದುರೆಯ ಪೃಷ್ಠಭಾಗವು ವಿಸ್ತಾರವಾಗಿದ್ದರೆ ಅದು ಸುಖಕರವಾಗಿರುತ್ತದೆ ಎಂದು ಶುನ ಎನ್ನುವ ಪದವನ್ನು ಇಲ್ಲಿ ಸುಖಕರ ಎನ್ನುವ ಅರ್ಥದಲ್ಲಿ ಬಳಸಲಾಗಿದೆ.
ಇನ್ನು ಋಗ್ವೇದದ ಆರನೇ ಮಂಡಲಕ್ಕೆ ಬಂದರೆ ಅಲ್ಲಿ 33ನೇ ಸೂಕ್ತದ ದೃಷ್ಟಾರ ಋಷಿಯ ಹೆಸರು ಶುನಹೋತ್ರ ಎನ್ನುವುದಾಗಿ.
ಇನ್ನು ಋಗ್ವೇದದ 4ನೇ ಮಂಡಲದ 57ನೇ ಸೂಕ್ತದಲ್ಲಿ
ಶುನಂ ವಾಹಾಃ ಶುನಂ ನರಃ ಶುನಂ ಕೃಷತು ಲಾಂಗಲಂ |
ಶುನಂ ವರತ್ರಾ ಬಧ್ಯಂತಾಂ ಶುನಮಷ್ಟ್ರಾಮುದಿಂಗಯ || ಎನ್ನುವುದಾಗಿ ಬರುತ್ತದೆ. ಭಾರವನ್ನು ಹೊರುವ ಎತ್ತುಗಳು ಸುಖಕರವಾಗಿ ಭಾರವನ್ನು ಹೊತ್ತೊಯ್ಯಲಿ, ಕೃಷಿಕರಾದ ಮನುಷ್ಯರು ತಮ್ಮ ಕೃಷಿ ಕೆಲಸಗಳನ್ನು ಸುಖವಾಗಿ ಮಾಡಲಿ, ಉಳುವ ಸಾಧನವಾದ ನೇಗಿಲು ಸುಖವಾಗಿ ಉಳುವಂತಾಗಲಿ. ಎತ್ತಿಗೆ ಹಾಕಿರುವ ಮೂಗುದಾರಗಳು ಅವುಗಳಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡದೇ ಸುಖವಾಗಿರಲಿ. ಇಲ್ಲಿ ಶುನಂ ಎನ್ನುವುದು ಸುಖವನ್ನು ಮತ್ತು ಆರಾಮದಾಯಕವನ್ನು ಸ್ಪಷ್ಟಪಡಿಸುತ್ತದೆ.
ಆಶ್ವಲಾಯನ ಶ್ರೌತ ಸೂತ್ರದಲ್ಲಿ ಶುನಾಸೀರೀಯ ಸವನ ಎನ್ನುವ ಯಾಗವೊಂದರ ಉಲ್ಲೇಖ ಸಿಗುತ್ತದೆ. ಆ ಯಾಗದ ಕೊನೆಯಲ್ಲಿ
ಶುನಂ ನಃ ಫಾಲಾ ವಿ ಕೃಷಂತು ಭೂಮಿಂ ಶುನಂ ಕೀ ನಾಶಾ ಅಭಿಯಂತು ವಾಹೈಃ |
ಶುನಂ ಪರ್ಜನ್ಯೋ ಮಧುನಾ ಪಯೋಭಿಃ ಶುನಾಸೀರಾ ಶುನಮಸ್ಮಾಸು ದತ್ತಂ ||
ನೇಗಿಲು ಮೊದಲಾದ ಉಳುವ ಸಾಧನಗಳು ಸುಖವಾಗಿ ಉಳಲಿ, ರೈತರು ತಮ್ಮ ಎತ್ತುಗಳೊಡನೆ ತಮ್ಮ ಕೆಲಸಗಳಿಗಾಗಿ ಹೊಲಕ್ಕೆ ಹೋಗಿ ಸುಖವಾಗಿ ಕೆಲಸ ಮಾಡಿಕೊಳ್ಳಲಿ, ಪರ್ಜನ್ಯನು ಉತ್ತಮವಾದ ಮಳೆ ಬರುವಂತೆ ಮಾಡಲಿ ಹೀಗೆ ಶುನಾಸೀರ ದೇವತೆಗಳೇ ನಮಗೆ ಸುಖವನ್ನು ಉಂಟುಮಾಡಿರಿ ಎಂದು ಹೇಳುತ್ತಾ ಇಲ್ಲಿ ಶುನ ಎನ್ನುವ ಶನ್ದವನ್ನು ಸುಖ ಎನ್ನುವ ಪದಕ್ಕೆ ಕೊಡಲಾಗಿದೆ.
ಶುನಾಖ್ಯೋ ವಾಯ್ವಿಂದ್ರಯೋರನ್ಯತಮಃ ಎನ್ನುವುದಾಗಿ ಸುಖಕೃದ್ದೇವಃ ಎನ್ನುವುದಾಗಿ ಸಾಯಣಾಚಾರ್ಯರ ಅಭಿಮತ. ವಾಯು ಮತ್ತು ಇಂದ್ರನನ್ನೇ ಶುನ ಎಮ್ದು ಕರೆಯಲಾಗಿದೆ ಎನ್ನುತ್ತಾರೆ.
"ದ್ಯುದೇವಃ ಶುನದೇವತಾ" ಇತಿ ಶೌನಕಃ | ಶುನ ಎಂದರೆ೩ ದೇವಲೋಕದಲ್ಲಿರುವ ಇಂದ್ರ ವಾಯು ಮತ್ತು ಸೂರ್ಯನೂ ಶುನ ಎನ್ನುವ ದೇವತೆಯೇ ಎನ್ನುವುದು ನಿರುಕ್ತದ ಮಾತು.
ಆದರೆ ನಿರುಕ್ತಕ್ಕೆ ವ್ಯತಿರಿಕ್ತವಾಗಿ "ವಾಯುಃ ಶುನಃ ಸೂರ್ಯ ಏವಾತ್ರ ಸೀರಃ" ಎನ್ನುವುದಾಗಿ ಬೃಹದ್ದೇವತಾದಲ್ಲಿದೆ ಅಲ್ಲಿ ವಾಯುವನ್ನು ಮಾತ್ರವೇ ಶುನಃ ಎಂದು ಕರೆಯಲಾಗಿದೆ. ಈ ಶುನಃ ಶಬ್ದವು ಸಂದರ್ಭಕ್ಕನುಸಾರವಾಗಿ ಮಾತ್ರವೇ ಪ್ರಾಣಿಗೆ ಹೇಳಬಹುದೇ ವಿನಃ ಶುನ ಎನ್ನುವುದು ಪ್ರಮುಖವಾಗಿ ಸೌಖ್ಯವನ್ನು ಸಂಪತ್ತನ್ನು ಸುಖವನ್ನು ಸೂಚಿಸುತ್ತದೆ. ತೈತ್ತಿರೀಯ ಸಂಹಿತೆಯಲ್ಲಿಯೂ ಸಹ ಅದೇ ಅರ್ಥವನ್ನಿ ಕೊಟ್ಟು ಶುನಃ ಎನ್ನುವುದು ವಾಯು ಮತ್ತು ಸೀರ ಎನ್ನುವುದು ಇಂದ್ರ ಅಥವಾ ಸೂರ್ಯ ಎನ್ನಲಾಗಿದೆ. ಶುನಃಸೀರೀಯ ಯಾಗವು ಚಾತುರ್ಮಾಸ್ಯದ ಪರಿಪೂರ್ಣತೆಗೆ ಮೊದಲೆಲ್ಲಾ ಮಾಡುವ ಯಾಗವಾಗಿತ್ತು ಎನ್ನಲಾಗಿದೆ.
ಇನ್ನು ನಮ್ಮ ಪ್ರಾದೇಶಿಕ ಕನ್ನಡದಲ್ಲಿಯಂತೂ ಶುನಕ ನಾಯಿಯಾಗಿಯೇ ಸಿಗುತ್ತದೆ. ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ "ಸ್ವರಾಗ ಸಂತತಿ ಶುನಕಗೋಷ್ಠಿಯೊಳು" ಎನ್ನುವ ಉಲ್ಲೇಖ ಸಿಗುತ್ತದೆ. ಪಾರ್ಶ್ವನಾಥ ಪುರಾಣದಲ್ಲಿ " ನೋಡದಲ್ ಶುನಕಂ ಕೂರ್ತುಂ ಎನ್ನುವುದಾಗಿ ಬರುತ್ತದೆ, ಹೀಗೇ ಸಾಮಾನ್ಯವಾಗಿ ಕನ್ನಡದಲ್ಲಿಯೂ ನಾಯಿಯನ್ನು ಶುನಕ ಎನ್ನುವುದಾಗಿಯೇ ಅನೇಕ ಕಡೆಗಳಲ್ಲಿ ಹೇಳಲಾಗಿದ್ದರೂ ಶುನಕದ ಮೂಲ ಹುಡುಕಿದರೆ ಅದು ಸಂಸ್ಕೃತದಲ್ಲಿ ನಾಯಿ ಮರಿಯನ್ನು ಕುರಿತಾಗಿ ಸಿಗುತ್ತದೆ. ಇನ್ನು ವೇದದಲ್ಲಿ ನಾಯಿಯ ನಿರ್ದೇಶನಕ್ಕೆ ಸರಮೆ ಮತ್ತು ಸಾರಮೇಯ ಪದ ಬಳಕೆ ಕಾಣ ಸಿಗುತ್ತದೆ. ಅದೇನೇ ಇರಲಿ ಶುನ ಅಥವಾ ಶುನಕ ಎನ್ನುವುದು ಸುಖಕರವಾದ ಎನ್ನುವುದೇ ಶುನಃಶೇಪಕ್ಕೆ ಸಮಂಜಸ ಎನ್ನಿಸುತ್ತದೆ.
ಮೂಲ:ಸದ್ಯೋಜಾತರು

ರುದ್ರನ ಆರಾಧನೆಯಲ್ಲಿ ಮಾ ನೋ ವಧೀಃ ಪಿತರಂ ಮೋ ತ ಮಾತರಂ’ ನನಗೆ ಜನ್ಮಕೊಟ್ಟ ತಂದೆ ತಾಯಿಯರನ್ನೂ ಸಹ ನೀನು ಹಿಂಸಿಸಬೇಡ.

ಮಾ ನಸ್ತೋಕೇ ತನಯೇ . . . . . ರುದ್ರ

ಜಗತ್ತಿನಲ್ಲಿ ನಮ್ಮ ದೇಶಕ್ಕೆ ವಿಶಿಷ್ಟವಾದ ಸ್ಥಾನವಿದೆ. ಭಾರತವನ್ನು ಗುರುತಿಸುವುದೇ ಸನಾತನತೆಯಿಂದ. ಇಲ್ಲಿನ ಪ್ರತಿಯೊಂದು ನಡವಳಿಕೆಗಳೂ ಗಮನಾರ್ಹವಾಗಿರುತ್ತದೆ. ನಮ್ಮಲ್ಲಿ ಯಾವುದನ್ನೂ ವಯಕ್ತಿಕವಾಗಿ ಬಯಸಿದ್ದು ಕಡಿಮೆ. ಎಲ್ಲ ಕಡೆ ಸಮಷ್ಟಿ. ಕೇವಲ ನನಗಾಗಿಯಲ್ಲ ನಮಗಾಗಿ ಕೊಡು, ಕೇವಲ ನಮಗಾಗಿಯಲ್ಲ, ಈ ಪ್ರಪಂಚದ ಎಲ್ಲಾ ವರ್ಗದ ಜೀವಿಗಳಿಗೂ ಕೊಡು ಎನ್ನುವುದು ನಮ್ಮ ಪ್ರಾಚೀನ ಪರಂಪರೆಯಿಂದ ಕಂಡು ಬರುತ್ತದೆ. ಇದಕ್ಕೆ ಮಹತ್ವದ ಪೂರಕ ದಾಖಲೆ ಸಿಗುವುದು ರುದ್ರನ ಆರಾಧನೆಯಲ್ಲಿ. ಅಥವಾ ರುದ್ರಾಧ್ಯಾಯದಲ್ಲಿ.

ಮಾ ನೋ ಮಹಾಂತಮುತ ಮಾ ನೋ ಅರ್ಭಕಂ ಮಾ ನ ಉಕ್ಷಂತಮುತ ಮಾ ನ ಉಕ್ಷಿತಂ |
ಮಾ ನೋ ವಧೀಃ ಪಿತರಂ ಮೋ ತ ಮಾತರಂ ಮಾ ನಃ ಪ್ರಿಯಾ ಸ್ತನ್ವೋ ರುದ್ರ ರೀರಿಷಃ  ||
ಇದು ಅಂಗೀರಸ ವಂಶದ ಕುತ್ಸನ ಸ್ತುತಿಗಳಲ್ಲಿ ಒಂದು ಇಲ್ಲಿ ಹೇ ರುದ್ರದೇವ ನಮ್ಮಲ್ಲಿರುವ ವಯಸ್ಸಿನಲ್ಲಿ ಮತ್ತು ಜ್ಞಾನದಲ್ಲಿ ಹಿರಿಯರಾದವರನ್ನು ಹಿಂಸಿಸಬೇಡ ಎನ್ನುವುದನ್ನು ’ಮಾ ನೋ ಮಹಾಂತಂ’ ಎನ್ನಲಾಗಿದ್ದು, ಅಂಥವರನ್ನು ವಧಿಸಬೇಡ ಎನ್ನಲಾಗಿದೆ. ’ಉತ ಮಾ ನೋ ಅರ್ಭಕಂ’ ಎಂದು ಹೇಳಿರುವುದು ಚಿಕ್ಕ ಚಿಕ್ಕ ಬಾಲಕರನ್ನೂ ಸಹ ನೀನು ಹಿಂಸಿಸಬೇಡ, ’ಮಾ ನ ಉಕ್ಷಂತಂ’ ಅಂದರೆ, ಯುವಕರನ್ನು, ಪ್ರಜೆಗಳನ್ನು ನಮಗೆ ದೊರಕಿಸಿಕೊಡುವವರು ಎನ್ನುವುದನ್ನೆ ಇಲ್ಲಿ ಉಕ್ಷಂತಂ ಎನ್ನಲಾಗಿದ್ದು, ಅವರನ್ನು ಹಿಂಸೆಗೊಳಪಡಿಸದಿರು ಎನ್ನಲಾಗಿದೆ. ’ಉತ ಮಾ ನ ಉಕ್ಷಿತಂ’ ಎಂದರೆ ಪ್ರಜೋತ್ಪತ್ತಿಕಾರಕರಾದ ಯುವಕರನ್ನೂ ಮತ್ತು ಗರ್ಭಸ್ಥವಾದ ಶಿಶುಗಳನ್ನು ಎನ್ನುವುದನ್ನು ’ಮಾ ನ ಉಕ್ಷಂತಮುತ ಮಾ ನ ಉಕ್ಷಿತಂ’ ಎನ್ನಲಾಗಿದೆ. ’ಮಾ ನೋ ವಧೀಃ ಪಿತರಂ ಮೋ ತ ಮಾತರಂ’ ನನಗೆ ಜನ್ಮಕೊಟ್ಟ ತಂದೆ ತಾಯಿಯರನ್ನೂ ಸಹ ನೀನು ಹಿಂಸಿಸಬೇಡ. 
ಇವಿಷ್ಟೇ ಅಲ್ಲ ಈ ಜಗತ್ತಿನಲ್ಲಿ ಶರೀರಹೊತ್ತು ಜನ್ಮ ತಳೆದ ಯಾವ ಪ್ರಜೆಗಳನ್ನೂ ಸಹ ಹಿಂಸೆಗೊಳಪಡಿಸಬೇಡ ಎನ್ನುವುದು ಈ ಋಕ್ಕಿನ ಅಭಿಲಾಷೆ. 

ಮಾ ನಸ್ತೋಕೇ ತನಯೇ ಮಾ ನ ಆಯೌ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ |
ವೀರಾನ್ಮಾ ನೋ ರುದ್ರ ಭಾಮಿತೋ ವಧೀರ್ಹವಿಷ್ಮಂತಃ ಸದಮಿತ್ತ್ವಾ ಹವಾಮಹೇ || ಇದು ಋಗ್ವೇದದಲ್ಲಿ ಬರುವ ಋಕ್ಕು. 
ಇಲ್ಲಿ ತೋಕೇ ಎನ್ನುವುದು ಮಕ್ಕಳನ್ನು ಕುರಿತಾಗಿ ಹೇಳಿದ್ದಾಗಿದೆ. ನಮ್ಮ ಪುತ್ರರನ್ನು ಹಿಂಸಿಸಬೇಡ. ಮೊಮ್ಮಕ್ಕಳನ್ನು ಹಿಂಸಿಸಬೇಡ. ’ನ ಆಯೌ ಮಾ’ ಎನ್ನುವುದು ಇಲ್ಲಿ ಇತರ ಎಲ್ಲಾ ಪ್ರಜಾವರ್ಗದವರನ್ನೂ ಸಹ ಹಿಂಸಿಸಬೇಡ. ಗೋವುಗಳನ್ನು, ಕುದುರೆಗಳನ್ನು, ನಮ್ಮ ವೀರರನ್ನೂ ಹೇ ರುದ್ರದೇವ ಕ್ರುದ್ಧನಾಗಿ ಹಿಂಸಿಸಬೇಡ. ನಾವು ಯಾವಾಗಲೂ ಸಹ ಹವಿಸ್ಸುಗಳಿಂದ ನಿನ್ನನ್ನು ಆಹ್ವಾನಿಸಿ ಪೂಜಿಸುತ್ತೇವೆ. ಇಲ್ಲಿ ಎಂತಹ ಮಹತ್ವದ ಸಂದೇಶ ಕಾಣಿಸುತ್ತದೆ. ತನ್ನ ಕುರಿತಾಗಿ ಮಾತ್ರವಲ್ಲದೇ ಸಮಸ್ತ ದೇಶದ ಅಭಿವೃದ್ಧಿಯನ್ನು. ಜನಪರ ಕಾಳಜಿ ವ್ಯಕ್ತವಾಗುತ್ತದೆ.
ಇದನ್ನೇ ಯಜುರ್ವೇದದಲ್ಲಿ 

ಮಾ ನಸ್ತೋಕೇ ತನಯೇ ಮಾ ನ ಆಯುಷಿ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ |
ವೀರಾನ್ಮಾ ನೋ ರುದ್ರ ಭಾಮಿತೋ ವಧೀರ್ಹವಿಷ್ಮಂತೋ ನಮಸಾ ವಿಧೇಮ ತೇ || ಎಂದು ಹೇಳಲ್ಪಟ್ಟಿದೆ. 
ಹೇ ರುದ್ರದೇವ ನಿನ್ನ ಸ್ವಭಾವವೇ ’ಭಾಮಿತ’ ಅಂದರೆ ಕ್ರೋಧ. ನಮ್ಮ ಮಕ್ಕಳನ್ನೂ ಮೊಮ್ಮಕ್ಕಳನ್ನು ನೀನು ಹಿಂಸೆ ಮಾಡುವವನಲ್ಲ. ಆದರೂ ಸ್ವಭಾವತಃ ಹಿಂಸಿಸಬೇಡ. ಅವರ ಆಯುಷ್ಯಕ್ಕೆ ಕುಂದು ತರಬೇಡ. ನಮ್ಮ ಗೋವುಗಳಿಗೆ ಮತ್ತು ಕುದುರೆಗಳಿಗೆ ಹಿಂಸೆ ನಿನ್ನಿಂದ ಅಗದಿರಲಿ, ವೀರರಾದ ನಮ್ಮ ಜನರನ್ನು ಹಿಂಸೆಗೊಳಪಡಿಸಸದೇ ಸಂರಕ್ಷಿಸು. ನಿನ್ನನ್ನು ಹವಿಸ್ಸುಗಳಿಂದ ಸಂತುಷ್ಟಿಗೊಳಿಸಿ ನಿನ್ನ ಕೃಪೆಗೆ ನವು ಪತ್ರರಾಗುವಂತೆ ಮಾಡು. ಎನ್ನುವ ಈ ಆಶಯ ನನು ಎನ್ನುವದನ್ನು ಗೌಣವಾಗಿಸಿ ಸಮಷ್ಟಿಯನ್ನು ಪ್ರತಿನಿಧಿಸುತ್ತದೆ. 

ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ವೀರಾಯ ಪ್ರಭರಾಮಹೇ ಮತೀಃ |
ಯಥಾ ಶಮಸದ್ದ್ವಿಪದೇ ಚತುಷ್ಪದೇ ವಿಶ್ವಂ ಪುಷ್ಟಂ ಗ್ರಾಮೇ ಅಸ್ಮಿನ್ನನಾತುರಮ್ ||
ನೀನು ಮಹಾ ಬಲಶಾಲಿಯೂ ಜಟಾಜೂಟಧಾರಿಯೂ ಆದ ಹೇ ಪರಶಿವನಾದ ರುದ್ರದೇವನೇ ಎನ್ನುವುದನ್ನೇ ’ತವಸೇ ಕಪರ್ದಿನೇ’ ಎಂದು ಹೇಳಲಾಗಿದೆ. ಯುದ್ಧದಲ್ಲಿ ವೀರರಾದ ಶತ್ರುಗಳನ್ನು ನಾಶಮಾಡುವವನೂ ಮತ್ತು ಸಂಪದ್ಭರಿತರಾದ ಮತ್ತು ವೀರರಾದ ಮರುದ್ದೇವತೆಗಳನ್ನೇ ಪುತರರನ್ನಾಗಿ ಪಡೆದವನು ಎನ್ನುವುದನ್ನು ಧ್ವನಿಸುವುದು ’ಕ್ಷಯದ್ವೀರಾಯ’ ಎನ್ನುವುದು.
ರುದ್ರ ಎನ್ನುವ ಹೆಸರು ಸ್ವಲ್ಪ ಭಯವನ್ನು ಹುಟ್ಟಿಸುವಂತೆ ಮಾಡುವುದು ನವರಸಗಳಿಂದಾಗಿ ಆದರೆ ಇಲ್ಲಿ ರುದ್ರ ಎನ್ನುವುದು ಹಾಗಲ್ಲ. ಸಂಸಾರದ ದುಖಗಳನ್ನು ನಾಶಮಾಡುವವನು ರುದ್ರ, ತಮಸ್ಸನ್ನು ಪರಿಹರಿಸಿ ಇಷ್ಟಾರ್ಥವನ್ನು ಪರಿಹರಿಸುವವನು. ಮೃಗಶಿರಾ ನಕ್ಷತ್ರದ ಕುರಿತಾದ ಕಥೆಯಲ್ಲಿ ಮೃಗವ್ಯಾಧನೆನ್ನಿಸಿಕೊಂಡ ರುದ್ರನು ಅಲ್ಲಿ ಪ್ರಜಾಪತಿಗೆ ಬಾಣದಿಂದ ಹೊಡೆದು ಪಶ್ಚಾತ್ತಾಪದಿಂದ ಅಳುವುದರಿಂದ ರುದ್ರ ಎನ್ನಿಸಿಕೊಂಡ ಎಂದು ಹೇಳುವುದು ಒಂದಾದರೆ. ದೇವತೆಗಳಿಗೂ ಅಸುರರಿಗೂ ಯುದ್ಧವಾದಾಗ ದೇವತೆಗಳು ಕೂಡಿಟ್ಟ ಸಂಪತ್ತನ್ನು ರುದ್ರನು ಅಡಗಿಸಿಟ್ಟುಕೊಳ್ಳುತ್ತಾನೆ. ದೇವತೆಗಳು ಯುದ್ಧದಲ್ಲಿ ಜಯಿಸಿ ಬಂದು ರುದ್ರನಲ್ಲಿದ್ದ ಸಂಪತ್ತು ಮರಳಿ ಪಡೆದುಕೊಂಡಾಗ ಅಳುವುದರಿಂದ ಸಹ ರುದ್ರ ಎನ್ನುವ ಹೆಸರು ಪಡೆದ ಎಂದು ಹೇಳಲಾಗಿದೆ. ಇಂತಹ ರುದ್ರನಿಗೆ ಸ್ತೋತ್ರಗಳಿಂದ ನಮಸ್ಕರಿಸುತ್ತೇನೆ ಎನ್ನಲಾಗುತ್ತಿದೆ. ಈ ರೀತಿ ಸ್ತೋತ್ರಗಳನ್ನು ಅರ್ಪಿಸುವುದರಿಂದ ಎರಡು ಕಾಲುಗಳುಳ್ಳ ಮನುಷ್ಯರಿಗೂ ಮತ್ತು ನಾಲ್ಕು ಕಾಲುಗಳುಳ್ಳ ಗೋವು ಮತ್ತು ಕುದುರೆಗಳೇ ಮೊದಲಾದ ಪ್ರಾಣಿಗಳಿಗೂ ರೋಗವೇ ಮೊದಲಾದ ಉಪದ್ರವರಹಿತವಾದ ಸುಖವು ಉಂಟಾಗಲಿ, ಈ ಗ್ರಾಮದಲ್ಲಿ ಮನುಷ್ಯರು ಮತ್ತು ಎಲ್ಲಾ ಪ್ರಾಣಿವರ್ಗವು ರೋಗರಹಿತರಾಗಿ ಪುಷ್ಟಿಯುಕ್ತರಾಗಲಿ ಎಂದು ಈ ಸ್ತೋತ್ರವನ್ನು ಅರ್ಪಿಸುತ್ತಿದ್ದೇನೆ. ಅಂದರೆ ಇಲ್ಲಿ ನನನಗಾಗಿ ಅಲ್ಲ ಇಡೀ ಗ್ರಾಮಕ್ಕಾಗಿ ಗ್ರಾಮದ ಸಕಲ ಜೀವಿಗಳಿಗಾಗಿ ಪ್ರಾರ್ಥನೆ ಕಂಡುಬರುತ್ತದೆ.
ಮೂಲ:ಸದ್ಯೋಜಾತ ಭಟ್

May 24, 2020

ಶ್ರೀ ಮಹಾ ಮೃತ್ಯುಂಜಯ ಮಂತ್ರ

ಶ್ರೀ ಮೃತ್ಯುಂಜಯ ಮಂತ್ರದ ಭಾಷ್ಯ

ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ | ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ | ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪತಿವೇದನಮ್ | ಉರ್ವಾರುಕಮಿವ ಬಂಧನಾದಿತೋ ಮುಕ್ಷೀಯ ಮಾಮುತಃ || 
(ಯಜುರ್ವೇದ ಅಧ್ಯಾಯ ೩, ಮಂತ್ರ ೬೦)


ಅನ್ವಯ:- [ತ್ರ್ಯಂಬಕಮ್] ತ್ರಿ ಕಾಲಗಳಲ್ಲೂ ಸಮಾನ ರೂಪವಾದ ಜ್ಞಾನವುಳ್ಳ ರುದ್ರರೂಪಿ ಪರಮೇಶ್ವರನನ್ನು [ಯಜಾಮಹೇ] ನಿತ್ಯವೂ ನಾವು ಪೂಜಿಸುವೆವು. [ಸುಗಂಧಿಮ್] ಶುದ್ಧವಾದ ಗಂಧವು ಯಾವನಿಂದ ಉಂಟಾಗುತ್ತದೆಯೋ ಅಂತಹವನನ್ನು ಅಂದರೆ ಎಲ್ಲವನ್ನೂ ಪರಿಶುದ್ಧಗೊಳಿಸುವವನಾದ ಈಶ್ವರನನ್ನು (ಪುಷ್ಟಿವರ್ಧನಮ್] ಶರೀರ ಮತ್ತು ಆತ್ಮಗಳ ಬಲವನ್ನು ಹೆಚ್ಚಿಸುವವನಾದ ಈಶ್ವರನನ್ನು (ನಾವು ನಿತ್ಯವು ಪೂಜಿಸುವೆವು. ಅವನ ಅನುಗ್ರಹದಿಂದ) [ಉರ್ವಾರುಕಮಿವ] ಸೌತೆಕಾಯಿ ಅಥವಾ ಮೆಕ್ಕೆಕಾಯಿ ಅಥವಾ ಕರಬೂಜದ ಹಣ್ಣಿನಂತೆ (ಈ ಹಣ್ಣು ಪಕ್ವವಾಗಿ ಅಮೃತ ಅಂದರೆ ಅತ್ಯಂತ ಮಧುರವಾಗಿ ಆಗುತ್ತದೆ-ಅದರಂತೆ.) [ಬಂಧನಾತ್] ತೊಟ್ಟಿನಿಂದ (ಲತೆಯ ಬಂಧನದ ದೆಸೆಯಿಂದ ಸುಲಭವಾಗಿ ಬೇರ್ಪಡುವಂತೆ.) [ಮೃತ್ಯೋಃ] ಮೃತ್ಯುವಿನಿಂದ -ಪ್ರಾಣ, ಶರೀರ, ಆತ್ಮಗಳ ವಿಯೋಗದಿಂದ [ಮುಕ್ಷಿಯ] ನಾನು ಮುಕ್ತನಾಗಬೇಕು. [ಮಾ ಅಮೃತಾತ್] ಮೋಕ್ಷ ಸುಖದಿಂದ ನಾನು ಬಿಡುಗಡೆ ಹೊಂದಬಾರದು. (ಮೋಕ್ಷ ಸುಖದ ವಿಷಯದಲ್ಲಿ ನಾನು ಶ್ರದ್ದಾರಹಿತನಾಗುವುದು ಬೇಡ.)
 [ತ್ರ್ಯಂಬಕಮ್] ಸರ್ವ ದರ್ಶಿಯೂ ಸರ್ವಾಧ್ಯಕ್ಷನೂ ಆದ ಪರಮೇಶ್ವರನನ್ನು [ಯಜಾಮಹೇ] ನಿತ್ಯವೂ ಪೂಜಿಸುತ್ತೇವೆ. (ಸತ್ಕರಿಸುತ್ತೇವೆ.) [ಸುಗಂಧಿಂ] ಸುಗಂಧವುಳ್ಳ ಅಂದರೆ ಪರಿಶುದ್ಧಗೊಳಿಸುವ ಈಶ್ವರನನ್ನು [ಪತಿವೇದನಮ್] ರಕ್ಷಣೆ ಮಾಡುವ ಸ್ವಾಮಿಯನ್ನು ಉಂಟು ಮಾಡಿಕೊಡುವ ಅಥವಾ ಜ್ಞಾನವನ್ನು ನೀಡುವ ಈಶ್ವರನನ್ನು (ನಾನು ನಿತ್ಯವೂ ಸತ್ಕರಿಸುತ್ತೇವೆ ಅವನ ಅನುಗ್ರಹದಿಂದ) [ಉರ್ವಾರುಕಮಿವ] ಕರಬೂಜ ಫಲದಂತೆ [ಬಂಧನಾತ್ | ತೊಟ್ಟಿನಿಂದ ಅಂದರೆ ಲತೆಯ ಬಂಧನದ ದೆಸೆಯಿಂದ [ಮುಕ್ಷಿಯ] ನಾನು ಬಿಡುಗಡೆ ಹೊಂದಬೇಕು. [ಮಾ ಅಮುತಃ] ಮೋಕ್ಷ ರೂಪವಾದ ಪರಲೋಕದ ದೆಸೆಯಿಂದ ಅಥವಾ ಜನ್ಮಾಂತರ ಸುಖ ರೂಪ ಫಲದ ದೆಸೆಯಿಂದ ಅಥವಾ ಧರ್ಮದ ದೆಸೆಯಿಂದ ನಾನು ಬಿಡುಗಡೆ ಹೊಂದುವುದು ಬೇಡ.

ಈ ಮಂತ್ರದ ವಿಷಯದಲ್ಲಿ ಯಾಸ್ಕ ಮುನಿಯು ನಿರುಕ್ತ ದಲ್ಲಿ ಹೀಗೆ ಹೇಳುತ್ತಾರೆ. “ತ್ಯಂಬಕನಾದ ರುದ್ರನನ್ನು ನಾವು ಪೂಜಿಸುತ್ತೇವೆ. ಆ ದೇವರು ಸುಗಂಧಯುಕ್ತ ವೂ, ಪುಷ್ಟಿಕಾರಕ ವೂ ಆದ ಸವತೇಕಾಯಿಯ (ಕರಬೂಜದ) ಫಲವನ್ನು ತೊಟ್ಟಿನಿಂದ ಹೇಗೋ ಹಾಗೆ ನನ್ನನ್ನು ಮೃತ್ಯುವಿನ ದೆಸೆಯಿಂದ ಬಿಡಲಿ.” 
ಈ ಮಂತ್ರದ ವ್ಯಾಖ್ಯಾನ ಶ.ಬ್ರಾ. ೨.೬.೨.೧೨-೧೪ ರಲ್ಲಿ ಇದೆ.

ಉಪಮಾಲಂಕಾರ ವಾಗಿದೆ. ಮನುಷ್ಯರು ಈಶ್ವರನನ್ನು ಬಿಟ್ಟು ಬೇರೆ ಯಾರ ಪೂಜೆಯನ್ನು ಮಾಡಬಹುದು.

ಭಾವಾರ್ಥ- ಇಲ್ಲಿ ಉಪಮಾಲಂಕಾರವಿದೆ. ಮನುಷ್ಯರು ಈಶ್ವರನನ್ನು ಬಿಟ್ಟು ಬೇರೆ ಯಾರ ಪೂಜೆಯನ್ನೂ ಮಾಡಬಾರದು. ಏಕೆಂದರೆ, ಬೇರೆಯವರ ಪೂಜೆ ವೇದ ವಿಹಿತವಾದುದಲ್ಲವಾದ್ದರಿಂದ ದುಃಖ ಫಲವನ್ನು ನೀಡುತ್ತದೆ. ಸವತೆಕಾಯಿ ಫಲವು ಬಳ್ಳಿಯಲ್ಲಿ ಅಂಟಿಕೊಂಡಿದ್ದು ತಾನಾಗಿಯೇ ಪಕ್ವವಾಗಿ ಸಮಯ ಬಂದಾಗ ಬಳ್ಳಿಯ ಬಂಧನದಿಂದ ಬೇರೆಯಾಗಿ ಅತ್ಯಂತ ಮಧುರವಾದ ಆಗುತ್ತದೆ. ಹಾಗೆಯೇ ನಾವು ಪೂರ್ಣಾಯಸ್ಸನ್ನು ಅನುಭವಿಸಿ ಶರೀರವನ್ನು ಬಿಟ್ಟು ಮುಕ್ತಿಯನ್ನು ಹೊಂದಬೇಕು. ಮೋಕ್ಷ ಪ್ರಾಪ್ತಿಗೆ ಬೇಕಾದ ಅನುಷ್ಠಾನ ದಿಂದಾಗಲಿ, ಪರಲೋಕದ ದೆಸೆಯಿಂದಾಗಿ ಜನ್ಮಾಂತರದ ದೆಸೆಯಿಂದಾಗಿ ನಾವು ಎಂದಿಗೂ ವಿರಕ್ತರಾಗಬಾರದು. ನಾಸ್ತಿಕತೆ ಯನ್ನು ಆಶ್ರಯಿಸಿ ಎಂದಿಗೂ ನಾವು ಈಶ್ವರನ ಅನಾದರಣೆಯನ್ನು ಮಾಡಬಾರದು. ವ್ಯಾವಹಾರಿಕ ಸುಖಕ್ಕಾಗಿ ಅನ್ನ-ಜಲಾದಿಗಳನ್ನು ಜನರು ಅಪೇಕ್ಷಿಸುವಂತೆಯೇ ಈಶ್ವರನಲ್ಲಿ, ವೇದಗಳಲ್ಲಿ, ವೇದೋಕ್ತ ಧರ್ಮದಲ್ಲಿ ಮತ್ತು ಮೋಕ್ಷದಲ್ಲಿ ನಾವು ಸದಾ ಶ್ರದ್ಧೆಯುಳ್ಳವರಾಗಿರಬೇಕು. || ೬೦ll
ಆಕರ: ಯಜುರ್ವೇದ ಭಾಷ್ಯ 
ಸಂಗ್ರಹ: ವೇ ಬ್ರ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ 9986175616.

May 17, 2020

ನೀರಿನ ಕುರಿತಾಗಿ ಅಧ್ಯಯನ ಮಾಡಿದ ಋಷಿ ಅಂಬರೀಷ

ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ


ಅಂಬರೀಷ ಎನ್ನುವವನು ಪುರಾಣದಲ್ಲಿ ರಾಜನಾಗಿ ಕಾಣಸಿಗುತ್ತಾನೆ. ಅಂಬರೀಷನ ಕಥೆ ಬಹಳ ರೋಚಕವಾಗಿ ಸಿಗುತ್ತದೆ. ಆದರೆ ಇದು ರಾಜವನೊಬ್ಬನ ಕಥೆಯಲ್ಲ, ನೀರಿನ ಕುರಿತಾಗಿ ಅಧ್ಯಯನ ಮಾಡಿದ್ದ ಋಷಿಯೊಬ್ಬನ ಕುರಿತಾಗಿ. ತ್ವಷ್ಟ್ರನ ಮಗನಾದ ತ್ರಿಶಿರಾ ಅಥವಾ ಅಂಬರೀಷನ ಕುರಿತಾಗಿರುವುದು. ಈತನನ್ನು ಸಿಂಧುದ್ವೀಪ ಎನ್ನುವುದಾಗಿ ಕರೆಯಲಾಗುತ್ತದೆ. ಈತ ಇಂದ್ರನಿಗಾಗಿ ನೀರನ್ನು ಶೊಧಿಸಿದ ಅಥವಾ ನೀರನ್ನು ಬಳಸಿದ ಕುರಿತಾಗಿರುವುದು. ಹಿಂದೆ ಇಂದ್ರನು ವಿಶ್ವರೂಪಾಚಾರ್ಯ ಎನ್ನುವ ತನ್ನ ಪುರೋಹಿತನನ್ನೇ ಸಂಹಾರ ಮಾಡುತ್ತಾನೆ. ಆಗ ಇಂದ್ರನಿಗೆ ಬ್ರಹ್ಮಹತ್ಯಾ ದೋಷ ಬರುತ್ತದೆ ಆಗ ಇಂದ್ರ ತ್ವಷ್ಟ್ರನ ಮಗನಾದ ಸಿಂಧುದ್ವೀಪ ಎನ್ನುವ ಋಷಿಯನ್ನು ಪುರೋಹಿತನನ್ನಾಗಿ ಬಲಸಿಕೊಂಡು ತನ್ನ ಪಾಪವನ್ನು ಪರಿಹಾರ ಮಾಡಿಕೊಳ್ಳುತ್ತಾನೆ. ಸಿಂಧುದ್ವೀಪ ಋಷಿಯು ಪಾಪಪರಿಹಾರಾರ್ಥವಾಗಿ ನೀರನ್ನು ಕುರಿತು ಜಪಮಾಡಿ ಪಾಪ ಪರಿಹಾರವನ್ನು ಮಾಡಿಕೊಡುತ್ತಾನೆ. ಹಾಗಾದರೆ ಪಾಪ ಪರಿಹಾರಾರ್ಥವಾದ ಆ ನೀರನ್ನು ಹೇಗೆ ಪ್ರಾರ್ಥಿಸಿದ ಎನ್ನುವುದನ್ನು ಗಮನಿಸೋಣ. ನೀರು, ಗಾಳಿ ಮತ್ತು ಬೆಂಕಿ ಇವು ಮೂರೂ ಮನುಷ್ಯನಿಗೆ ಅತ್ಯವಶ್ಯಕವಾದವು. ಇವುಗಳಲ್ಲಿ ಒಂದರ ಕೊರತೆ ಉಂಟಾದರೂ ಬದುಕು ಅಲ್ಲೋಲ ಕಲ್ಲೋಲ ನಿಶ್ಚಿತ. ಅದರಲ್ಲೂ ನೀರು ಮತ್ತು ಬೆಂಕಿ ಒಂದಕ್ಕೊಂದು ಪೂರಕ ಮತ್ತು ನೀರಿನಲ್ಲಿಯೂ ಬೆಂಕಿಯ ಅಂಶ ಇದೆ ಎನ್ನುವುದು ಈ ಋಷಿಯ ಅಭಿಪ್ರಾಯ. ಪ್ರತಿಯೊಂದು ಜೀವಿಯೂ ನೀರಿಗಾಗಿ ಹಾತೊರೆಯುತ್ತದೆ. ಈ ಹಿಂದೆ ಕಪ್ಪೆಯ ಕುರಿತಾಗಿ ಬರೆದಾಗಲೂ ಅಲ್ಲಿ ನೀರನ್ನು ನೋಡಿ ಕಪ್ಪೆ ಕೂಗುತ್ತದೆ ಎಂದು ಬರೆದಿದ್ದೆ.


ಹೌದು. ಋಗ್ವೇದದ ಹತ್ತನೇ ಮಂಡಲದ ೯ನೇ ಸೂಕ್ತ ನೀರನ್ನು ಕುರಿತಾಗಿಯೇ ಧ್ಯಾನಿಸಲ್ಪಟ್ಟಿದೆ. ಈ ಸೂಕ್ತದ ದೃಷ್ಟಾರ. ಈತನನ್ನು ಅಂಬರೀಷ ಎಂತಲೂ, ಸಿಂಧುದ್ವೀಪ ಅಥವಾ ತ್ರಿಶಿರಾ ಎನ್ನುವುದು ಈ ಋಷಿಗಿರುವ ಹೆಸರುಗಳು. ಇಲ್ಲಿ ನೀರನ್ನು ಆಪಃ ಎಂದು ಕರೆಯಲಾಗಿದ್ದು ಅದು ಉದಕಾಭಿಮಾನಿ ದೇವತೆಗಳನ್ನು ಕುರಿತಾದದ್ದು. ಇದನ್ನು ಸಾಮಾನ್ಯವಾಗಿ ಉಪನಯನವಾಗಿ ದಿನವೂ ಸಂಧ್ಯಾವಂದನೆಯನ್ನು ಮಾಡುವ ಅಭ್ಯಾಸ ಇಟ್ಟುಕೊಂಡವರು ಒಮ್ಮೆಯಾದರೂ ಹೇಳುತ್ತಾರೆ.
ಒಂದು ನದೀ ಅಥವಾ ಸರೋವರದಲ್ಲಿ ತನ್ನ ಸೊಂಟದ ತನಕ ನೀರು ಬರುವಷ್ಟು ನಿಂತು ಹನ್ನೆರಡು ವರ್ಷ ಈ ಸೂಕ್ತ ಜಪಮಾಡಿದರೆ ಬ್ರಹ್ಮಹತ್ಯಾದೋಷ ನಿವಾರಣೆಯಾಗುತ್ತದೆ ಎನ್ನುವುದನ್ನು ಋಗ್ವಿಧಾನ ಮತ್ತು ಬೃಹದ್ದೇವತಾದಲ್ಲಿ ವಿಧಿ ಪೂರ್ವಕವಾಗಿ ಹೇಳಲಾಗಿದೆ. ಇಂದಿಗೂ ನೀರನ್ನು ಮುಟ್ಟಿ ಗಂಗೇಚ ಯಮುನೇ ಚೈವ ಎನ್ನುವ ಶ್ಲೋಕವನ್ನು ಹೇಳುವ ರೂಢಿ ಇದ್ದೇ ಇದೆ.


ಪ್ರಾತರುತ್ಥಾಯ ಸತತಂ ಕುರ್ಯಾನ್ಮಾರ್ಜನಮಾತ್ಮನಃ |
ರಾತ್ರೌ ಕೃತಸ್ಯ ಪಾಪಸ್ಯ ಅವಿಜ್ಞಾತಸ್ಯ ನಿಷ್ಕೃತಿಃ ||
ರಾತ್ರಿ ಕಾಲದಲ್ಲಿ ತಿಳಿಯದೇ ಮಾಡಿದ ಯಾವುದೇ ಪಾಪಕೃತ್ಯವಿದ್ದರೂ ಸಹ ಅದು ಪರಿಹಾರವಾಗಲಿ ಎಂದು ಸ್ನಾನದ ನಂತರ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಪರಿಹಾರವಾಗುತ್ತದೆ ಎನ್ನಲಾಗಿದೆ.
ಅದೇ ರೀತಿ ಸಾಯಂಕಲ ಮಾಡಿದರೆ ಹಗಲಿನಲ್ಲಿ ಗೊತ್ತಗದೇ ಘಟಿಸಿದ ಪಾಪಕಾರ್ಯದ ಪರಿಮರ್ಜನೆ ಎನ್ನುವಲ್ಲಿ ಶುದ್ಧವಾದ ನೀರು ನಮಗೆ ಸೀಕಿದಾಗ ದೇಹದಲ್ಲಿ ಇರತಕ್ಕ ರೋಗಾಣುಗಳು ಮತ್ತು ಸೂಕ್ಷ್ಮ ಜೀವಿಗಳು ದೇಹದಿಂದ ದೂರಕ್ಕೆ ಹೋಗುತ್ತವೆ ಎನ್ನುವ ಸೂಕ್ಷಾರ್ಥ ಇದೆ.


ಆಪೋ ಹಿ ಷ್ಠಾ ಮಯೋಭುವಸ್ತಾ ನ ವೂರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ || ಎನ್ನುವ ಈ ಋಕ್ಕಿನಲ್ಲಿ ಆಪಃ ಎನ್ನುವುದು ಉದಕ ದೇವತೆಗಳಿಗೆ. ಆಪಃ ಎನ್ನುವುದು ಸುತ್ತಲೂ ಹರಡಿಕೊಳ್ಳುವುದು ಎನ್ನುವ ಅರ್ಥ. ನೀರು ನಿಲ್ಲುವ ಸ್ವಭಾವದ್ದಲ್ಲ ಸುತ್ತಲೂ ಪಸರಿಸುವ ಸ್ವಭಾವದ್ದು ಈ ನೀರು ಎಂತಹ ರೋಗಗಳಿದ್ದರೂ ಗುಣ ಪಡಿಸಬಲ್ಲದು ಎನ್ನಲಾಗಿದೆ. ಕೆಲವೊಂದು ರೋಗಗಳು ಇದರಿಂದಲೇ ಬಂದರೂ ಅವೆಲ್ಲವೂ ಸಹ ಇದರಿಂದಲೇ ಗುಣಮುಖವಾಗುತ್ತವೆ. ಆಪಃ ಎನ್ನುವುದು ಸುಖ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಉದಕಾಭಿಮಾನಿ ದೇವತೆಗಳೇ ನೀವು ಎಲ್ಲರಿಗೂ ಆರೋಗ್ಯದೊಂದಿಗೆ ಸುಖ ಮತ್ತು ಸಮೃದ್ಧಿಯನ್ನು ಒದಗಿಸಿ ಅವರ ಅನ್ನಾದಿ ಆಹಾರಗಳ ಸಮೃದ್ಧಿಕೊಟ್ಟು ಸುಖ ಶಾಂತಿ ನೆಲೆಸುವಂತೆ ಮಾಡಿರಿ ಎಂದು ಈ ಋಕ್ಕಿನಲ್ಲಿ ಹೇಳಲಾಗಿದೆ.


ಯೋ ವಃ ಶಿವತಮೋ ರಸಸ್ತಸ್ಯ ಭಾಜಯತೇಹ ನಃ |
ಉಶತೀರಿವ ಮಾತರಃ || ಹಾಲುಗಲ್ಲದ ಹಸುಳೆಯ ಅಥವಾ ತನ್ನ ಮಗುವಿನ ಪುಷ್ಟಿಯನ್ನು ಅಪೇಕ್ಷಿಸುವ ತಾಯಿಯಂತೆ ಎನ್ನುವ ಮಾತು "ಉಶತೀರಿವ ಮಾತರಃ" ಎಂದು. ಎಂತಹ ಉದಾತ್ತ ಮಾತು. ತಾಯಿ ತನ್ನ ಸರ್ವಸ್ವವನ್ನೂ ತನ್ನ ಮಗುವಿಗೆ ಧಾರೆ ಎರೆಯುತ್ತಾಳೆ. ತಾಯಿಗೆ ಮಗುವಿನ ಶ್ರೇಯೋಭಿವೃದ್ಧಿ ಬಹಳ ಮುಖ್ಯವಾಗುತ್ತದೆ. ಅದನ್ನೇ ಇಲ್ಲಿ ಹೇಳಲಾಗಿದೆ. ಉದಕಾಭಿಮಾನಿ ಅಪ್ ದೇವತೆಗಳೇ ನಿಮ್ಮ ನೀರು ಅತ್ಯಂತ ರುಚಿಕರ ಅಂತಹ ನೀರನ್ನು ನಮಗೆ ದಯಪಾಲಿಸಿ. ತಾಯಿ ತನ್ನ ಮಗುವಿಗೆ ಸ್ತನ್ಯಪಾನ ಮಾಡಿಸಿ ಮಗುವಿಗೆ ಪುಷ್ಟಿಯನ್ನು ಕೊಡುವಂತೆ ನಮಗೂ ಆಯುರಾರೋಗ್ಯವನ್ನು ಕೊಡಿ ಎನ್ನಲಾಗಿದೆ.


ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|
ಆಪೋ ಜನಯಥಾ ಚ ನಃ || ಉದಕಾಭಿಮಾನಿ ಅಪ್ ದೇವತೆಗಳೆ ನಾವು ಮಾಡಿದ ಪಾಪದ ಪರಿಹಾರವನ್ನು ನೀವು ಮಾಡುತ್ತೀರಿ ಆದುದರಿಂದ ಆದಷ್ಟು ವೇಗವಗಿ ನಾವು ನಿಮ್ಮ ಸಮೀಪಕ್ಕೆ ಬಂದು ನಿಮ್ಮನ್ನು ಪ್ರಾರ್ಥಿಸಿ ನಿಮ್ಮನ್ನು ಸಂಪ್ರೀತಿಗೊಳಿಸುತ್ತೇವೆ. ನಮಗೆ ನೀವು ಪುತ್ರ ಪೌತ್ರಾದಿ ಸಂಪತ್ತುಗಳನ್ನು ಕೊಡಿ ಎನ್ನಲಾಗಿದೆ.


ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||
ಹೌದು ಈ ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವಂತೆ. ನೀರು ದೇಹದಲ್ಲಿ ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗದ ತೀವ್ರತೆ ಅಧಿಕವಾಗುತ್ತದೆಯಂತೆ. ಜೀರ್ಣ ಮತ್ತು ಅಜೀರ್ಣಕ್ಕೂ ಇದೇ ನೀರು ಅತ್ಯಂತ ಅವಶ್ಯವಂತೆ. ಪಚನಕ್ರಿಯೆ ನಡೆಯಲೂ ನೀರು ಬೇಕೇ ಬೇಕು ಅನ್ನುತ್ತಾ ಶಂ ನೋ ಎನ್ನುತ್ತದೆ. ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೋಗಕಾರಕ ಕ್ರಿಮಿಗಳಿಂದ ನಮಗೆ ಹಾನಿ ಉಂಟಾಗದಿರಲಿ ಎನ್ನುವ ಈ ಋಕ್ಕಿನ ಆಶಯ ಬಹಳ ಮಹತ್ವದ್ದು. ನಾವು ಕುಡಿಯುವ ನೀರು ಕುಡಿಯಲು ಯೋಗ್ಯವಾಗಿರುವಂತೆ ದೊರಕಿಸಿಕೊಡಿ ಎನ್ನುವ ಮಾತು ನಿಜಕ್ಕೂ ಸೂರ್ಯ ಚಂದ್ರರಿರುವ ತನಕವೂ ಸತ್ಯದ್ದು.

May 14, 2020

ಬೆನಕ ಬೆನಕ ಏಕದಂತ ಪಚ್ಚೆಕಲ್ಲು ಪಾಣಿಪೀಠ ಮುತ್ತಿನುಂಡೆ ಹೊನ್ನ ಘಂಟೆ ಒಪ್ಪುವ ವಿಘ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು....ಏಕೆ?


ಗಣಪತಿಗೆ 21 ನಮಸ್ಕಾರಗಳು ಏಕೆ ಮಾಡಬೇಕು ?

ಬೆನಕ ಬೆನಕ
ಏಕದಂತ
ಪಚ್ಚೆಕಲ್ಲು ಪಾಣಿಪೀಠ 
ಮುತ್ತಿನುಂಡೆ ಹೊನ್ನ ಘಂಟೆ
ಒಪ್ಪುವ ವಿಘ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು.....


ನಮ್ಮ ದೇಹದಲ್ಲಿರುವ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವುಗಳು ವೃದ್ಧಿಯಾಗಲು ಮಾಡುತ್ತೇವೆ. ಎಡಗೈಯಿಂದ ಬಲ ಕಿವಿ, ಬಲಗೈಯಿಂದ ಎಡ ಕಿವಿ ಹಿಡಿದುಕೊಂಡು ದೇಹ ನೇರವಾಗಿ ಕುಳಿತು ಹೇಳಬೇಕು

5 ಪಂಚ ಭೂತಗಳು (ಭೂಮಿ, ನೀರು, ಅಗ್ನಿ, ವಾಯು, ಆಕಾಶ)
5 ಪಂಚೇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ)

5 ಕರ್ಮೇಂದ್ರಿಯಗಳು (ಕೈ, ಕಾಲು, ಬಾಯಿ, ಗುದ, ಗುಹ್ಯ)

5 ಪಂಚ ತನ್ಮ0ತೃಗಳು ( ರೂಪ, ಶಬ್ಧ, ಗಂಧ, ರಸ, ಸ್ಪರ್ಶ) 
1 ಮನಸು.
14ವರ್ಷದ ಮಕ್ಕುಳು 14 ನಮಸ್ಕಾರ, 14ಕ್ಕೆ ಮೇಲ್ಪಟ್ಟುವರು 21 ನಮಸ್ಕಾರ ಮಾಡಿದರೆ ಒಳ್ಳೇದು. ಮದುವೆ ಆದಂತಹವರು ಉತ್ತರ ದಿಕ್ಕಿಗೆ ಮುಖಮಾಡಿ ಹಾಗೂ ವಯಸ್ಕರು ಮತ್ತು ಮಕ್ಕಳು ಪೂರ್ವದಿಕ್ಕೆಗೆ ಮುಖ ಮಾಡಿ ಗಣೇಶ ನಮಸ್ಕಾರ ಮಾಡಿದರೆ ಒಳ್ಳೇದು.


ಗರಿಕೆಯ ಹಿನ್ನೆಲೆ ಮತ್ತು ಮಹತ್ವ

🚩ಯಾಕೆ ಗರಿಕೆ ಹುಲ್ಲಿಗೆ ಪೂಜೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಯನ್ನು ನೀಡಲಾಗುತ್ತದೆ. ಗರಿಕೆಯು ದೇವರಾದ ಶಿವ, ದೇವಿ ಶಕ್ತಿ ಮತ್ತು ಗಣೇಶ ದೇವರನ್ನು ಒಟ್ಟಾಗಿ ಸೇರಿಸುತ್ತದೆ. ಗರಿಕೆಯ ಹಿಂದಿರುವ ಕಥೆ ಇಲ್ಲಿದೆ ಓದಿ

🚩ಹಿಂದೂ ಧರ್ಮದಲ್ಲಿ ಗರಿಕೆಯಿಲ್ಲದೆ ಯಾವ ಪೂಜೆಯು ಸಂಪೂರ್ಣವಾಗುವುದಿಲ್ಲ. ಪವಿತ್ರವಾದ ಗರಿಕೆಯನ್ನು ಮೊದಲು ಪೂಜಿತನಾದ ಗಣೇಶನಿಗೆ ಅರ್ಪಿಸಲೇಬೇಕು. ಪೂಜೆಯಲ್ಲಿ ಪವಿತ್ರವಾದ ಸ್ಥಾನವನ್ನು ಮೊದಲು ಬಿಲ್ವಪತ್ರಿ  ನೀಡಲಾಗಿದೆ.  ನಂತರ ಗರಿಕೆ ಹುಲ್ಲಿಗೆ ಎರಡನೇ ಸ್ಥಾನ ನೀಡಲಾಗಿದೆ. ಬಿಲ್ವಪತ್ರೆ ಮತ್ತು ಗರಿಕೆ ಎರಡೂ ಸಹ ಪವಿತ್ರವೆಂದು ಭಾವಿಸಲಾಗಿದೆ. ಗಣೇಶನ ಪೂಜೆಯಲ್ಲಿ ಗರಿಕೆಯು ವಿಶೇಷ ಸ್ಥಾನವನ್ನು ಪಡೆದಿದೆ.

🚩ಗರಿಕೆಯು ಎಲೆಗಳು ಮೂರು ಕತ್ತಿಗಳ ಆಕಾರದ ರೀತಿಯಲ್ಲಿ ಮೊದಲು ಚಿಗುರೊಡೆಯುತ್ತವೆ. ಆ ಮೂರು ಗರಿಕೆಯ ಎಲೆಗಳು ಸಹ ಮೂರು ದೇವ ತತ್ವಗಳಾದ ಶಿವ, ಶಕ್ತಿ,ಮತ್ತು ಗಣೇಶನನ್ನು ಪ್ರತಿಬಿಂಬಿಸುತ್ತವೆ.

🚩ಗರಿಕೆಯ ಹುಲ್ಲಿಗೆ ಗಣೇಶ ದೇವರ ಆತ್ಮವನ್ನು ಆಕರ್ಷಿಸುವ ಶಕ್ತಿಯಿದೆ ಹಾಗೆ ದೇವರ ತತ್ವಗಳನ್ನು ನೀರಿನ ಹನಿಗಳ ಮೂಲಕ ಗರಿಕೆಯ ಎಲೆಗಳಿಗೆ ಹೀರಿಕೊಳ್ಳುವ ಸಾಮರ್ಥ್ಯ ಇದೆ. 21 ಗರಿಕೆಯನ್ನು ಗಣೇಶ ದೇವನಿಗೆ ಪೂಜೆ ಮಾಡುವಾಗ ಅರ್ಪಿಸಿ ಭಕ್ತಿಯಿಂದ ಪೂಜಿಸುವುದರಿಂದ ಅದೃಷ್ಟವನ್ನು ಹೊತ್ತು ತರುವುದು ಎಂದು ನಂಬಲಾಗಿದೆ.

ಗರಿಕೆಯ ಗಿಡವನ್ನು ಗುರುತಿಸುವುದು ಹೇಗೆ ?

🚩ಗರಿಕೆಯು ಒಂದೇ ಬೇರಿನಲ್ಲಿ ಮೊದಲು ಮೂರು ಉದ್ದನೆಯ ಎಲೆಗಳಾಗಿ ಬೆಳೆದು ನಂತರ ಮೂರ್ನಾಲ್ಕು ಗಂಟುಳಾಗಿ ಅಲ್ಲಿಂದ ಎಲೆಗಳು ಚಿಗುರೊಡೆದು ಮತ್ತೆ ಉದ್ದಕ್ಕೆ ಬೆಳೆಯುತ್ತವೆ. ಗರಿಕೆಯ ಎಲೆಯನ್ನು ನೀವು ಒಂದು ವೇಳೆ ಪೂಜೆಗೆ ಕಿತ್ತರೂ ಸಹ ಅದು ಬೇಗ ಬೇಗನೇ ಚಿಗುರೊಡೆದು ಮರುಹುಟ್ಟು ಪಡೆದು ಪುನರ್ಜೀವ ಪಡೆಯುವುದು.

ಗರಿಕೆ ಹುಲ್ಲಿನ ಕಥೆ.

🚩ಒಂದು ಕಾಲದಲ್ಲಿ ಒಬ್ಬ ರಾಕ್ಷಸ ಅನಲಾಸುರ ಇದ್ದನು. ಅವನು ಸ್ವರ್ಗದಲ್ಲಿ ಆತಂಕ ಉಂಟು ಮಾಡಿದನು.ಅವನ ಕಣ್ಣಿನಿಂದ ಬರುವ ಬೆಂಕಿಯು ಅವನ ದಾರಿಯಲ್ಲಿ ಯಾರೇ ಬಂದರು ಏನೇ ಬಂದರು ಎಲ್ಲವನ್ನು ಸುಟ್ಟು ಹಾಕುತ್ತಿದ್ದನು. ಹೀಗೆ ಎಲ್ಲವನ್ನು ನಾಶ ಮಾಡುತ್ತಿದ್ದನು. ಆಗ ದೇವನಾದ ಗಣೇಶನನ್ನು ಸಹಾಯಕ್ಕೆ ಆಹ್ವಾನಿಸಲಾಗುತ್ತದೆ.

🚩ಗಣೇಶ ಮತ್ತು ರಾಕ್ಷಸ ಅನಲಾಸುರ ಇಬ್ಬರು ಯುದ್ಧ ಮಾಡುತ್ತಾರೆ. ಆಗ ಅನಲಾಸುರನು ಬೆಂಕಿಯ ಉಂಡೆಗಳನ್ನು ಗಣೇಶನ ಮೇಲೆ ಎಸೆಯುತ್ತಾನೆ. ಆಗ ಗಣೇಶನು ಇವನನ್ನು ಸಂಹಾರ ಮಾಡಲು ವಿರಾಟ ರೂಪವನ್ನು ಪಡೆದು ಸಂಪೂರ್ಣವಾಗಿ ಅನಲಾಸುರನನ್ನು ನುಂಗಿಬಿಟ್ಟನು.ಆಗ ಗಣೇಶನ ದೇಹದಲ್ಲಿ ಅಧಿಕವಾದ ಉಷ್ಣಾಂಶ ಉತ್ಪತ್ತಿಯಾಗಿ ಗಣೇಶನ ಹೊಟ್ಟೆಯು ಸಹ ಊದಿಕೊಂಡು ಬಿಡುವುದು.ಗಣೇಶನು ಈ ದೇಹದ ಉಷ್ಣಾಂಶದಿಂದ ದೇಹಾಲಾಸ್ಯದಿಂದ ಸುಧಾರಿಸಿಕೊಳ್ಳುವುದಕ್ಕೆ ಹರ ಸಾಹಸ ಪಡುತ್ತಿದ್ದನು.

🚩ದೇವತೆಗಳಾದ ಬ್ರಹ್ಮ, ವಿಷ್ಣು ಮಹೇಶ್ವರ,ಸೂರ್ಯ, ಚಂದ್ರ, ಎಲ್ಲರೂ ಗಣೇಶನ ನೋವು ಕಡಿಮೆ ಮಾಡುವುದಕ್ಕೆ ಬಂದರು ಏನು ಮಾಡಿದರೂ ಹೊಟ್ಟೆ ನೋವು ಗಣೇಶನಿಗೆ ಕಡಿಮೆ ಯಾಗುವುದಿಲ್ಲ.

ಕೊನೆಗೆ ಋಷಿ ಮುನಿಗಳು 21 ಗರಿಕೆಯನ್ನು ತೆಗೆದುಕೊಂಡು ಬಂದು ಗಣೇಶನ ತಲೆಯ ಮೇಲೆ ಇಡುತ್ತಾರೆ. ಆಗ ಗಣೇಶನ ದೇಹದ ಉಷ್ಣಾಂಶವೆಲ್ಲವೂ ಹಾವಿಯಾಗಿ ಮಾಯಾಜಾಲವಾಗಿ ಕಡಿಮೆಯಾಗುತ್ತದೆ. ಗಣೇಶನು ಸಹ ಗುಣ ಮುಖನಾಗುತ್ತಾನೆ.

ಎಂತಹ ಗರಿಕೆಯನ್ನು ಗಣೇಶನಿಗೆ ಅರ್ಪಿಸಬಾರದು ?

ಗಣೇಶನಿಗೆ ಹೂವು ಹೊಡೆದ ಗರಿಕೆಯನ್ನು ಅರ್ಪಿಸಬಾರದು. ಯಾಕೆಂದರೆ ಎಲೆಗಳು ಹಣ್ಣಾಗಿ ಹೋಗಿರುತ್ತವೆ ಬಣ್ಣವೂ ಸ್ವಲ್ಪ ಬದಲಾಗುತ್ತದೆ. ಆದ್ದರಿಂದ ಅಂತಹ ಹಣ್ಣಾಗಿ ಹೂವು ಬಿಟ್ಟ ಗರಿಕೆಯ ಹುಲ್ಲನ್ನು ಪೂಜೆಗೆ ಬಳಸಬಾರದು. ಗರಿಕೆಯಲ್ಲಿರುವ ಜೀವಶಕ್ತಿಯ ಉಲ್ಲಾಸ ಕೂಡ ಕಡಿಮೆಯಾಗಿರುತ್ತದೆ. ಗರಿಕೆಯಲ್ಲಿರುವ ದೇವತೆಗಳನ್ನು ಆಕರ್ಷಿಸುವ ಶಕ್ತಿ ಸಾಮರ್ಥ್ಯ ಕೂಡ ಕಡಿಮೆ ಆಗಿರುವುದು. ಆದ್ದರಿಂದ ಹೂವು ಹೊಡೆದ ಗರಿಕೆಯು ಪೂಜೆಗೆ ಬಳಸಬಾರದು.

ಗರಿಕೆಯ ಆರ್ಯುರ್ವೇದ ಗುಣ ಹಾಗೂ ವಿಶಿಷ್ಟ ಹಿನ್ನೆಲೆ.

🚩ತೇನ ವಿನಾ ತೃಣಮಪಿ ನ ಚಲತಿ ಅಂದರೆ ಭಗವಂತನ ಚಿತ್ತವಿರದೆ ಹುಲ್ಲುಕಡ್ಡಿಯೂ ಅಲುಗಾಡದು ಎಂಬ ನುಡಿಗಟ್ಟಿನ ಹಿಂದೆ ಹುಲ್ಲಿನ ಬಗ್ಗೆ ಕೊಂಚ ಕೀಳರಿಮೆ ಇದೆ ನಿಜ. ಆದರೆ ವರ್ಷಕ್ಕೊಮ್ಮೆ ಗೌರಿ-ಗಣಪನ ಮಡಿಗೇರುವ ಗರಿಕೆಯದು ಮಾತ್ರ ವಿಶಿಷ್ಟ ಹಿನ್ನೆಲೆ.

🚩ನಮ್ಮ ರಾಜ್ಯದ ದಕ್ಷಿಣದ ಕೊಡಿನಾಡು ಕೊಡಗು. ಆ ಜಿಲ್ಲೆಯ ತುತ್ತ ತುದಿಯ ಪುಟ್ಟ ಹಳ್ಳಿಯ ಹೆಸರೇ ಕರಿಕೆ. ಅದರ ಹಿಂದೆ ಗರಿಕೆಯ ಹೆಸರೇ ಇದೆ. ಇತರ ದೇಶಗಳಲ್ಲಿ ಗರಿಕೆ ಒಂದು ಕಳೆ. ನಮಗೆ ಪೂಜಾರ್ಹ ಹುಲ್ಲು. ಅದರ ನಾನಾ ಬಳಕೆಗಳ ದೊಡ್ಡ ಪಟ್ಟಿ ಆಯುರ್ವೇದದ ಸಂಸ್ಕೃತಗ್ರಂಥಗಳಲ್ಲಿವೆ.

🚩ಅನಿಯಮಿತ ಮುಟ್ಟಿನ ಸ್ರಾವದ ಹಿಂದೆ ಗರ್ಭಾಶಯದ ಒಳಗಂಟು(ಫೈಬ್ರಾಯಿಡ್) ಪ್ರಬಲ ಕಾರಣ. ಅಂತಹ ಸಂದರ್ಭಗಳಲ್ಲಿ ದಾಳಿಂಬೆ ಸಿಪ್ಪೆ ಕಷಾಯ ಮತ್ತು ಗರಿಕೆಯ ರಸದ ಕುಡಿಸುವ ಮನೆ ಮದ್ದು ರೂಢಿಯಲ್ಲಿದೆ.

🚩ಅನೇಕರಿಗೆ ಗರ್ಭಕೋಶದ ಶಸ್ತ್ರ ಕ್ರಿಯೆ ನಡೆಸದಂತೆ ಗರಿಕೆ ರಸಸೇವನೆ ಒಳಿತು ಮಾಡಿದೆ. ಅಂದರೆ ಕಲ್ಲು, ಲೋಹ ಕರಗಿಸುವ ಗರಿಕೆ ಜೀವಂತ ಒಡಲ ಪುಟ್ಟ ಗಂಟು ಕರಗಿಸಿದರೆ ಅಚ್ಚರಿ ಇಲ್ಲ. ಮಹಿಳೆಯರ ತಿಂಗಳ ತೊಂದರೆ ಪರಿಹರಿಸಲು ಗರಿಕೆ ಸಂಜೀವಿನಿ.

🚩ಗಂಡದೂರ್ವಾ, ಗಂಡಾಲಿ, ಶತವೀರ್ಯಾ, ಗೋಲೋಮಿ, ಮತ್ಸ್ಯ ಶಕುಲಾದನೀ ಇತ್ಯಾದಿ ಪರ್ಯಾಯ ಹೆಸರು ಗರಿಕೆಯದು. ಇಲ್ಲಿ ಗಂಡ ಅಂದರೆ ಗಿಣ್ಣು ಅಥವಾ ಗಂಟು. ಗಂಟು ಗಂಟುಗಳಲ್ಲಿ ಬೇರು. ಅಲ್ಲಿಯೇ ಹೊಸ ಕವಲು. ಅದನ್ನೇ ಉಪನಿಷದ್ಗಳು ಕಾಂಡಾತ್ ಕಾಂಡಾತ್ ಪ್ರರೋಹಂತಿ ಎಂಬ ಸುಂದರ ಬಣ್ಣನೆಯೊಂದಿಗೆ ಸಸ್ಯಶಾಸ್ತ್ರೀಯ ವರ್ಣನೆ ಮಾಡುತ್ತವೆ.

🚩ಹಸುಗಳು ಅತಿಯಾಗಿ ಇಷ್ಟ ಪಡುವ ವಸ್ತು ಗರಿಕೆ, ಒಂದು ಹುಲ್ಲು ನೂರು ಗುಣ ಎಂಬ ಗರಿಕೆಯ ಅತಿಶಯೋಪಕಾರ ಕಾಣುವೆವು. ನಿಮ್ಮ ಮನೆಯ ನಾಯಿ ಹರಿಕೆ ಹುಲ್ಲನ್ನು ಮೆಲ್ಲುವ ಮತ್ತು ಕೆಲವೊಮ್ಮೆ ಉದರಶುದ್ಧಿ ಮಾಡಿಕೊಳ್ಳುವ ಪ್ರಕೃತಿ ಚಿಕಿತ್ಸೆ ಕಂಡಿದ್ದೀರಿ. ಚರಕಸಂಹಿತೆಯ ಜೀವನೀಯ, ಅಂದರೆ ಜೀವನಕ್ಕೆ ಉಪಕರಿಸುವ ಗಣ(ಗುಂಪು)ದಲ್ಲಿ ಗರಿಕೆಗೆ ಇದೆ.

🚩ಜ್ವರ, ಮೈಉರಿ, ಕಫ ಉಲ್ಬಣತೆ, ಚರ್ಮಗಾದರಿ, ಗುಳ್ಳೆ, ನೀರೂಡುವ ತುರಿಗಜ್ಜಿ, ಸರ್ಪಸುತ್ತು ಪರಿಹಾರಕ್ಕೆ ಗರಿಕೆ ಮದ್ದು. ಬಾಯಿ ರುಚಿ ಹೆಚ್ಚಿಸೀತು. ವಾಂತಿಗೆ ಕಡಿವಾಣ. ಮೂರ್ಛೆ ತಿಳಿವಿಗೆ ಗರಿಕೆರಸದ ಮೂಗಿನ ಬಳಕೆಗೆ ಉಲ್ಲೇಖಗಳಿವೆ.

🚩ಎಂತಹದೇ ರಕ್ತಸ್ರಾವ ನಿಲುಗಡೆಗೆ ಗರಿಕೆ ಬೇಕು. ವಿಷಚಿಕಿತ್ಸೆಗೆ ಗರಿಕೆ ಉತ್ತಮ ಮದ್ದು. ಕೇರುಗಾಯದ ಮದ್ದಾಗಿ ಗರಿಕೆರಸದ ಲೇಪ ಬಯಲು ಸೀಮೆಯ ಜನಪದ ವೈದ್ಯ. ಮೂತ್ರಕಟ್ಟು, ಉರಿ ಮತ್ತು ಕಲ್ಲುಪರಿಹಾರಕ್ಕೆ ಗರಿಕೆ ರಸ ಪಾನ ಚಿಕಿತ್ಸೆಯಾಗಿದೆ.

🚩ಗರಿಕೆಯ ತುದಿ ಚಿಗುರು ಆಯ್ದು ತರುವಿರಿ. ಬರೋಬ್ಬರಿ ನೂರೆಂಟು ಗಂಟು! ಅಂತಹ ಗರಿಕೆ ಚಿಗುರಿನ ಹಾರ ಗಣಪನಿಗರ್ಪಿಸಿರಿ. ಆದರೆ ಅದನ್ನು ಮರುದಿನ ಮೋರಿಗೆ ಎಸೆಯದಿರಿ.

🚩ನೂರೈವತ್ತು ವರ್ಷಗಳ ಹಿಂದೆ ನಮ್ಮ ನೆಲದಲ್ಲಿ ಒಂದು ಪುಸ್ತಕ ಸಂಪದಿತ. ಅದರ ಹೆಸರು ‘ಸಹಸ್ರಾರ್ಧ ವೃಕ್ಷಾದಿ ವರ್ಣನಂ.’ ಅಂದರೆ ಐನೂರು ಗಿಡ ಮರಗಳ ಬಣ್ಣನೆ. ಹಾರದ ಗರಿಕೆ ಆಹಾರವಾಗುವ ಸುಂದರ ವರ್ಣನೆ ಅಂತಹ ಗ್ರಂಥದ ಅಮೂಲ್ಯ ಮಾಹಿತಿ.

🚩ಗರಿಕೆರಸ ಕುಡಿಯುವ ನೀವು ಗರಿಕೆ ಹಾರದ ಪಲ್ಯ ಮಾಡಿ ಆಹಾರವಾಗಿ ಬಳಸಿರಿ. ಕಲ್ಲು ಕರಗಿಸುವ ಈ ಹುಲ್ಲು ಗಣಪನ ಹಬ್ಬದ ಉಂಡೆ, ಚಕ್ಲಿ, ಕೋಡುಬಳೆ, ಒಬ್ಬಟ್ಟು ಕರಗಿಸೀತಲ್ಲವೇ? ಈ ಗ್ರಂಥದ ಮತ್ತೊಂದು ಮಾಹಿತಿ ಕೂಡ ಸ್ವಾರಸ್ಯದ್ದೇ. ಗರಿಕೆಯ ಬೇರಗೆದು ತೆಗೆಯಿರಿ. ಬೆಲ್ಲದ ಪಾನಕ ಮಾಡಿ ಕುಡಿಯಿರಿ. ಅದು ಬಹಳ ತಂಪು. ಆದರೆ ಬೇರಗೆಯುವ ಕೆಲಸ ಮಾತ್ರ ಸುಲಭದ್ದಲ್ಲ.


ಗರಿಕೆಯ ಹುಲ್ಲಿನಿಂದ ಒಂದು ದೊಡ್ಡ ಸಾಮ್ರಾಜ್ಯದ ಸ್ಥಾಪನೆಯ ಕತೆ ಗೊತ್ತೇ?

🚩ನಂದ ರಾಜ್ಯದ ರಾಜಕುಮಾರರು ಒಮ್ಮೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಒಬ್ಬ ಬ್ರಾಹ್ಮಣ ರಸ್ತೆ ಪಾಟಲಿಪುರದ ಹೆದ್ದಾರಿಯ ಗರಿಕೆಗೆ ತೊಡರಿಕೊಂಡು ಎಡವಿದ. ಆತನ ಶಿಖೆ ಬಿಚ್ಚಿಹೋಯಿತು. ಅದನ್ನು ಕಂಡ ರಾಜಕುಮಾರರು ಬಿದ್ದು ಬಿದ್ದು ಕೇಕೆ ಹಾಕಿ ನಗತೊಡಗಿದರು.

🚩ಆಗ ಸಿಟ್ಟಿಗೆದ್ದ ಬ್ರಾಹ್ಮಣ ಹೀಗೆಂದನು: ‘ಎಲವೋ ದುಷ್ಟರೇ, ಇಂತಹ ರಾಜಪಥದಲ್ಲಿ ಗರಿಕೆಯ ಹುಲ್ಲು ಸ್ವೇಚ್ಛೆಯಾಗಿ ಬೆಳೆಯಲು ನಿಮ್ಮ ಅರಾಜಕತೆ ಕಾರಣ.

ಇಂದು ನನ್ನ ಬಿಚ್ಚಿದ ಶಿಖೆ ಕಟ್ಟಲಾರೆ. ನಿಮ್ಮ ನಂದವಂಶ ನಿರ್ವಂಶ ಮಾಡದೆ ಇರಲಾರೆ. ಇಗೋ ನೋಡಿರಿ. ಈ ಗರಿಕೆಯನ್ನು ಬುಡ ಸಮೇತ ಕಿತ್ತು ಹಾಕುವೆನು. ಇಲ್ಲಿ ಬೆಂಕಿ ಹಾಕಿ ಸುಡುವೆನು. ಮತ್ತೆ ಇಂತಹ ಹುಲ್ಲು ಇಲ್ಲಿ ಹುಟ್ಟದಿರಲಿ. ನಿಮ್ಮಂತಹ ದುಷ್ಟರು ಮತ್ತೆ ನಮ್ಮ ನೆಲ ಆಳದಿರಲಿ.’ ಕೂಡಲೇ ನೆಲ ಬಗೆದು ಬ್ರಾಹ್ಮಣ ಗರಿಕೆ ತರಿದನು.

🚩ಆಗ ಅಲ್ಲಿಗೆ ಚಂದ್ರಗುಪ್ತ ಆಗಮಿಸಿದನು. ಅನಂತರ ನಂದ ಸಾಮ್ಯಾಜ್ಯದ ಅಳಿವು, ಗುಪ್ತರ ಸ್ಥಾಪನೆ ಇತಿಹಾಸದ ಪುಟಗಳು. ಜುಟ್ಟು ಬಿಚ್ಚಿ ಶಪಥ ಮಾಡಿದಾತನೇ ಚಾಣಕ್ಯ. ಅರ್ಥಶಾಸ್ತ್ರ ಗ್ರಂಥದ ಕರ್ತೃ. ಭಾರತದಲ್ಲಿ ಹೊಸ ಶಕೆಗೆ ಗರಿಕೆಯ ಹುಲ್ಲು ಕಾರಣವಾದ ಕತೆ ಇದು.

🚩ಸಾಸಿವೆಗಿಂತಲೂ ಕಿರಿದಾದ ಗರಿಕೆ ಬೀಜ ಯಥೇಚ್ಛ ಬೆಳೆದರೆ ಎರಡೂವರೆ ಚದರ ಮೀಟರ್ ಹರಹು ಪಡೆಯಬಲ್ಲುದು. ಕೇವಲ ಐದು ತಿಂಗಳಲ್ಲಿ ಅಂತಹ ಬೆಳೆ. ಐದಡಿ ತಳಕ್ಕಿಳಿವ ಬೇರು! ಸಮುದ್ರ ತಟದ ಉಪ್ಪು ನೀರು ಸಹ ಗರಿಕೆಯ ಕೆಚ್ಚಡಗಿಸದು. ಬಂಜರು ನೆಲದಲ್ಲೂ ಗರಿಕೆ ಬೆಳೆದೀತು.
*****

May 12, 2020

ಅಯೋಗ್ಯಃ ಪುರುಷೋ ನಾಸ್ತಿ.... ಯಾವ ಕೆಲಸಕ್ಕೂ ಯೋಗ್ಯನಲ್ಲದ ಮನುಷ್ಯನು ಇಲ್ಲವೇ ಇಲ್ಲ..


ಅಮಂತ್ರಂ ಅಕ್ಷರಮ್ ನಾಸ್ತಿ  ನಾಸ್ತಿ ಮೂಲ ಮನೌಷಧಮ್|

ಅಯೋಗ್ಯ: ಪುರುಷೋ ನಾಸ್ತಿ  ಯೋಜಕಸ್ತತ್ರ ದುರ್ಲಭ: ||

ಎಷ್ಟು ಸರಳವಾಗಿದೆ ಅರ್ಥ! ಮಂತ್ರವಾಗದ ಅಕ್ಷರವಿಲ್ಲ. ಔಷಧಿಯಾಗದ ಗಿಡಮೂಲಿಕೆಗಳಿಲ್ಲಯಾವ ವ್ಯಕ್ತಿಯೂ ಅಯೋಗ್ಯನಲ್ಲ. ಆದರೆ ಯೋಜನೆ ಮಾಡುವವರು ವಿರಳ. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು ಮನುಷ್ಯನ ಜನ್ಮವಾಗುವಾಗ ಭಗವಂತನು ಎಲ್ಲರಲ್ಲಿ ಚೈತನ್ಯದ ಮೂಟಯನ್ನೇ ಇಟ್ಟು ಕಳಿಸಿದ್ದಾನೆ, ಕೆಲವರು ಮೂಟೆಯ ಬಾಯ್ಬಿಚ್ಚಿ ತೆರೆದು ಚೈತನ್ಯವನ್ನು ಜಾಗೃತಗೊಳಿಸಿಕೊಂಡು ಪ್ರಭಾವಶಾಲಿಗಳಾಗುತ್ತಾರೆ. ಕೆಲವರು ಮೂಟೆಯ ಬಾಯನ್ನೇ ತೆರೆಯುವುದಿಲ್ಲ. ಒಳಗಿರುವ ಚೈತನ್ಯದ ಜಾಗೃತಿ ಮಾಡಬೇಕಾದವರು ಯಾರು? ಮನೆಯಲ್ಲಿ ಅಪ್ಪ-ಅಮ್ಮ, ಶಾಲೆಯಲ್ಲಿ ಟೀಚರ್. ಆದರೆ ಮಗುವಿನ ಅಂತ:ಶಕ್ತಿಯನ್ನು ಜಾಗೃತ ಗೊಳಿಸುವ ಕೆಲಸ ಆಗುತ್ತಿದೆಯೇ? ನಮ್ಮ ಕಣ್ಮುಂದಿರುವ ದಾರಿ ಯಾವುದು?

ನಮ್ಮ ಮಕ್ಕಳು ಸಾಫ್ಟ್ ವೇರ್ ಇಂಜಿನಿಯರಾಗಬಾರದೆಂದಲ್ಲ, ವೈದ್ಯರುಗಳಾಗಬಾರದೆಂದಲ್ಲ. ಆದರೆ ಮೊದಲು ಮಾನವೀಯತೆಯ ಶಿಕ್ಷಣ , ನೈತಿಕ ಮೌಲ್ಯಗಳ ಶಿಕ್ಷಣ, ಪ್ರೀತಿ,ಪ್ರೇಮ, ವಾತ್ಸಲ್ಯಗಳಂತಹ ಗುಣಗಳನ್ನು ಅರಳಿಸುವ ಸಂಸ್ಕಾರ ಕೊಡಬೇಡವೇ? ವೇದ ಮಂತ್ರವು ಹೇಳುವಂತೆ   ನೀನು ಪುಣ್ಯವಂತ, ನೀನು ಭಾಗ್ಯಶಾಲಿ, ನೀನು ಶಕ್ತಿವಂತ, ನೀನು ಸಮರ್ಥ. . . . .ಎಂಬ ಮಾತುಗಳನ್ನು ಮಕ್ಕಳ ಮುಂದೆ ಹೇಳುತ್ತಿರಿ, ಅವರು ಸಮರ್ಥರೇ ಆಗುತ್ತಾರೆ. ಆದರೆ ಹೊರಗಿನ ವೇಷಭೂಷಣ, ಹೇರಿಕೆಯ ಶಿಸ್ತು,   ನೆಲಕ್ಕೆ ಒಗ್ಗದ ನಮ್ಮದಲ್ಲದ ಸಂಸ್ಕೃತಿಯ ಅಂಧಾನುಕರಣೆ, ಇವೆಲ್ಲವೂ ಮಕ್ಕಳ ಆತ್ಮವಿಕಾಸ ಮಾಡಲಾರದು.

ಮಕ್ಕಳು ಕೇವಲ ಬುದ್ಧಿವಂತರಾದರೆ ಸಾಕೇ? ಹೌದೆನ್ನುತ್ತಾರೆ ಇಂದಿನ ಹಲವಾರು ಪೋಷಕರು. ಆದರೆ ಮಕ್ಕಳ ಬುದ್ಧಿವಂತಿಕೆಯ ಜೊತೆಗೇ ಮನಸ್ಸನ್ನುಅರಳಿಸುವ, ಸದ್ಗುಣಗಳನ್ನು  ಬೆಳೆಸುವ ಶಿಕ್ಷಣವು ಇಂದು ಎಲ್ಲಾ ದಿನಗಳಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ಕಾರಣ ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯದ ಕೊರತೆ ಎದ್ದು ಕಾಣುತ್ತಿದೆ. ಆತ್ಮ ವಿಶ್ವಾಸದ ಕೊರತೆಯಿಂದ ಹಲವು ಮಕ್ಕಳು ಆತ್ಮಹತ್ಯೆಗೆ ಒಳಗಾಗಿರುವ ಉಧಾಹರಣೆಗಳನ್ನು   ಕಾಣುತ್ತೇವೆ. ನಿಮ್ಮ ಮಕ್ಕಳಿಗೆ ವೇದಮಂತ್ರದಲ್ಲಿ ತಿಳಿಸಿರುವಂತೆ ನೀನು ಸಮರ್ಥನಾಗಿದ್ದೀಯೇ, ನೀನು ಒಳ್ಳೆಯವ, ನೀನು ಶಕ್ತಿಶಾಲಿ,ನೀನು ಮೇಧಾವಂತ, ನೀನು ಗುಣವಂತ  ಎಂದು ಇಂದಿನಿಂದಲೇ ಹೇಳುತ್ತಾ ಬನ್ನಿ, ಅವರು ಹಾಗೆಯೇ ಆಗುತ್ತಾರೆ. ಒಳ್ಳೆಯ ಮಾತಿಗೇಕೇ ದಾರಿದ್ರ್ಯ?

 "ಅಮಂತ್ರಂ ಅಕ್ಷರಂ ನಾಸ್ತಿ " - ಅಂದರೆ ಮಂತ್ರವಾಗಲು ಯೋಗ್ಯವಲ್ಲದ ಯಾವುದೇ ಅಕ್ಷರವಿಲ್ಲ... ಅರ್ಥಾತ್ ಪ್ರತಿಯೊಂದು ಅಕ್ಷರಕ್ಕೂ (Alphabet ಗೂ) ಅದರದ್ದೇ ಆದ ಒಂದು ವೈಶಿಷ್ಟ್ಯ (Vibration) ಇದೆ... ಅದನ್ನೇ ಹಿಂದಿನವರು "ಬೀಜಾಕ್ಷರ" ಅಂತ ಕರೆದದ್ದು... ಉದಾ: "ರಂ" ಅಗ್ನಿಬೀಜಾಕ್ಷರ... 'ಭರ್ರ್...' ಅಂತ ಬೆಂಕಿ ಹತ್ತಿತು ಅನ್ತೇವೆ... ಅಂದರೆ "" ಅಕ್ಷರದಿಂದ ಅಗ್ನಿ ಹುಟ್ಟಿತು... "ಯಂ" ಅನ್ನುವುದು ವಾಯುಬೀಜಾಕ್ಷರ, 'ಸೊಯ್ಯ್.'.. ಅಂತ ಗಾಳಿ ಬೀಸಿತು ಅನ್ತೇವೆ... ಅಂದರೆ, "" ಅಕ್ಷರದಿಂದ ಗಾಳಿಹುಟ್ಟಿತು ಹೀಗೆ...

ಅಷ್ಟೇ ಅಲ್ಲ "" ಕಾರದಿಂದ "ಕ್ಷ" ಕಾರದ ತನಕ ಇರುವ ೫೧ ವರ್ಣಗಳಿಗೂ ಭಗವಂತನ ೫೧ ರೂಪಗಳ ಅನುಸಂಧಾನ ಇದೆ... '' ದಿಂದ 'ಕ್ಷ' ತನಕದ ಎಲ್ಲ ೫೧ ವರ್ಣಗಳಲ್ಲೂ ಭಗವಂತ ೫೧ ರೂಪಗಳಿಂದ ಇದ್ದು ಅದರಲ್ಲಿ ಅವನು ರಮಿಸುವವನಾದ್ದರಿಂದಲೇ ಅದನ್ನು "ಅಕ್ಷರ" ಅಂತ ಕರೆದದ್ದು... (Alphabets from to ಕ್ಷ is called as "ಅಕ್ಷರ)...
ಬಹಳ ಹಿಂದಿನ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ನಾವು ಉಚ್ಛರಿಸುವ ಯಾವ ಅಕ್ಷರದಲ್ಲಿ ದೋಷ ಇದೆ ಎನ್ನುವುದರಿಂದಲೇ ಆಯುರ್ವೇದ ಪಂಡಿತರು ನಮ್ಮ ದೇಹದಲ್ಲಿರುವ ರೋಗದ ಲಕ್ಷಣಗಳನ್ನು ಕಂಡುಹಿಡಿಯುತ್ತಿದ್ದರು...

"ನಾಸ್ತಿ ಮೂಲಂ ಅನೌಷದಂ" - ಔಷಧೀಯ ಗುಣವಿಲ್ಲದ ಯಾವುದೇ ಗಿಡಮೂಲಿಕೆಯಿಲ್ಲ... ಅರ್ಥಾತ್ ನಾವು ಯಾವುದಕ್ಕೂ ಉಪಯೋಗಕ್ಕೆ ಬಾರದ "ಕಳೆ" ಅಂತ ಕಿತ್ತು ಎಸೆಯುವ ಸಣ್ಣ ಗಿಡದಲ್ಲೂ ಒಂದು ವಿಶಿಷ್ಟ ಗುಣ ಇರುತ್ತದೆ... ಉದಾ: ನಾಚಿಗೆ ಮುಳ್ಳು ಅಥವಾ ಮುಟ್ಟಿದರೆ ಮುನಿ ಗಿಡ... ಇದು ಯಾತಕ್ಕೂ ಉಪಯೋಗವಿಲ್ಲದ ಕಳೆ ಅಂತ ಕಿತ್ತು ಎಸೆಯುವ ಗಿಡ. ಆದರೆ ಅದರ ಎಲೆಯ ರಸದಲ್ಲಿ ನಮಗೆ ಬರುವ "ಪೈಲ್ಸ್ ಕಾಯಿಲೆಗೆ" (ಮೂಲವ್ಯಾಧಿಗೆ) ಭಗವಂತ ಮದ್ದನ್ನು ಇಟ್ಟಿದ್ದಾನೆ...

"ಅಯೋಗ್ಯಃ ಪುರುಷೋ ನಾಸ್ತಿ
ಯಾವ ಕೆಲಸಕ್ಕೂ ಯೋಗ್ಯನಲ್ಲದ ಮನುಷ್ಯನು ಇಲ್ಲವೇ ಇಲ್ಲ... ಯಾರನ್ನು ನಾವು ಶತದಡ್ಡ ಯಾತಕ್ಕೂ ಬಾರದ ಮನುಷ್ಯಪ್ರಾಣಿ ಅಂತ ತಿಳಿದಿರುತ್ತೇವೋ ಅಂಥವನಲ್ಲೂ ಕೂಡ ಯಾರಲ್ಲೂ ಇಲ್ಲದ ಒಂದು ವಿಶಿಷ್ಟಗುಣವಿರಬಹುದು..
ಉದಾ: ಭಾಗವತದಲ್ಲಿ ಬರುವ ಮೂರು ಜನ್ಮಗಳ ವರ್ಣನೆಯಂತೆ ಒಂದು ಜನ್ಮದಲ್ಲಿ ಚಕ್ರವರ್ತಿಯಾಗಿ ದೇಶವನ್ನಾಳಿದ ಭರತಚಕ್ರವರ್ತಿ, ಮುಂದೆ ಜಿಂಕೆಯಾದ, ಮೂರನೇ ಜನ್ಮದಲ್ಲಿ ಜಡಭರತನಾದ ಅತ್ಯಂತ ಪೆದ್ದನಂತೆ ನಡೆದುಕೊಂಡ... ಆಗ ಕಾಲದ ಜನ ಪ್ರಾಣಿಗೂ ಕಡೆಯಾಗಿ ಅವನನ್ನು ನಡೆಸಿಕೊಂಡರು... ಮುಂದೆ ಜಡಭರತ ದೇಶದ ರಾಜನ ಪಾಲಕಿ ಹೊತ್ತು ರಾಜನಿಗೇ ಗುರುವಾಗಿ ಉಪದೇಶಮಾಡಿದ.. ಹೀಗೆ ಜ್ಞಾನದ ಮೊಟ್ಟೆ ಎಲ್ಲಿ ಚಿಗುರೊಡೆದಿರುತ್ತೋ ಬಲ್ಲವರಾರು .‌.. ಅದರಿಂದ ನಮಸ್ಕಾರದ ಒಂದು ವೇದ ಮಂತ್ರ "ನಮೋ ಅರ್ಭಕೇಭ್ಯಃ "ಅನ್ನುತ್ತೆ - ಅಂದರೆ ತಾಯಿಯ ಗರ್ಭದಲ್ಲಿರು ಶಿಶುವಿಗೂ ನಮಸ್ಕಾರ ಅಂತ...

"ಯೋಜಕಸ್ತತ್ರ ದುರ್ಲಭಃ" -
ಹೀಗೆ ಭಗವಂತನ ಸೃಷ್ಟಿಯಲ್ಲಿ ನಿಷ್ಪ್ರಯೋಜಕವಾದ ವಸ್ತು ಅಥವಾ
ಜೀವಿ ಎಂಬುದೇ ಇಲ್ಲ.... ಆದರೆ ಅವುಗಳ ಉಪಯೋಗವನ್ನು , ಯೋಗ್ಯತೆಯನ್ನು ಗುರುತಿಸಿ, ಅರಿತು ಉಪಯೋಗ ಪಡೆದುಕೊಳ್ಳಬಲ್ಲ ಮನುಜರು ಮಾತ್ರ ಬಹಳ ವಿರಳ...

       ಸುಭಾಷಿತಕಾರ ಹೀಗೆ ಹೇಳುತ್ತಾನೆ.ಮಂತ್ರವಲ್ಲದ ಅಕ್ಷರವಿಲ್ಲ, ಔಷಧೀಯ ಗುಣವಿಲ್ಲದ ಗಿಡಮೂಲಿಕೆಗಳಿಲ್ಲ, ಅಯೋಗ್ಯನಾದ ಮನುಷ್ಯನಿಲ್ಲ. ಇರುವುದೊಂದೇ, ಅದು ಯೋಜಕರ ಕೊರತೆ. ಭಾರತೀಯ ಸಮಾಜ ಅನುಭವಿಸುತ್ತಿರುವ ಕೊರತೆ ಇದು. ಯೋಜಕರಾದ ನಾಯಕರುಗಳು ತೀರ ವಿರಳ. ಆಚಾರ್ಯರನ್ನು ತ್ರಿವಿಕ್ರಮಪಂಡಿತಾಚರ್ಯರು ಆಧ್ಯಾತ್ಮಜ್ಞಾನನೇತಾ ಎಂದು ಕರೆದಿದ್ದಾರೆ.ಆಧ್ಯಾತ್ಮಜ್ಞಾನದತ್ತ ನಮ್ಮನ್ನು ಕೊಂಡೊಯ್ಯುವನಾಯಕಆಚಾರ್ಯರು. ಸಾಮಾಜಿಕವಾಗಿ ನಾಯಕತ್ವಗುಣವನ್ನು ಲೋಕಕ್ಕೆ ತೋರಿಸುತ್ತಾ ಅನೇಕರನ್ನು ಪ್ರಭಾವಿಸಿದವರುಅವರು ವ್ಯಕ್ತಿಯು ನಾಯಕನಾಗಬೇಕಾದರೇ ಅಳವಡಿಸಿಕೊಳ್ಳಬೇಕಾದ ಗುಣಗಳ (Leadership qualities)ಬಗ್ಗೆ ಚೆಲ್ಲಿದ ಬೆಳಕನ್ನು ಕಾಣಲು ಪ್ರಯತ್ನಿಸೋಣ.     

ಮುಂದಾಳುತ್ವ ಗುಣ (leading from front)       
ನಾಯಕನಾದವನು ತಾನು ಮುಂದೆ ನಿಂತು ,ಸೋಲು ಗೆಲುವುಗಳ ಜವಾಬ್ದಾರಿಯನ್ನು ಹೊತ್ತು,ತನ್ನ ಜೊತೆಯಿರುವವರನ್ನು ಮುನ್ನಡೆಸಬೇಕು. ಯಶಸ್ಸನ್ನು ಪಡೆದಾಗ ಅದರ ಶ್ರೇಯಸ್ಸನ್ನು ಪಡೆದು,ಯಶ ಕಾಣದಾಗ ಜವಾಬ್ದಾರಿಯಿಂದ ನುಣಿಚಿಕೊಂಡು,ಅಪಕೀರ್ತಿಯ ಜವಾಬ್ದಾರಿಯನ್ನು ತನ್ನವರ ಮೇಲೆ ಹಾಕುವುದು ನಿಜವಾದ ನಾಯಕನ ಲಕ್ಷಣವಲ್ಲ. ಆಚಾರ್ಯರು ತಾವು ಮುಂದೆ ನಿಂತು ನಾಯಕತ್ವವನ್ನು ವಹಿಸಿ ತೋರಿಸಿದ್ದಾರೆ. ಶ್ರೀ ಮಧ್ವವಿಜಯದ ೧೦ನೇ ಸರ್ಗದಲ್ಲಿ ಆಚಾರ್ಯರ ಉತ್ತರಭಾರತದ ಸಂಚಾರವನ್ನು ವರ್ಣಿಸುತ್ತಾರೆ. ಆಚಾರ್ಯರು ಸಂಚರಿಸುತ್ತಾ ಶಿಷ್ಯರೊಂದಿಗೆ ಕೂಡಿ ಗಂಗಾನದಿಯ ದಡಕ್ಕೆ ಬಂದು ಸೇರುತ್ತಾರೆ. ಅಲ್ಲಿ ಶತ್ರುಗಳ ಆಕ್ರಮಣದ ಭಯದಿಂದ ತುರುಷ್ಕರಾಜನು ನೌಕೆಗಳ ಸಂಚಾರವನ್ನು ನಿಲ್ಲಿಸಿದ್ದನು. ಅಲ್ಲಿರುವ ಜನರೆಲ್ಲರೂ ಭಯಂಕರ ಪ್ರವಾಹ,ಶತ್ರುರಾಜನ ಸೈನ್ಯದ ಭಯವಿರುವುದರಿಂದ ನದಿಯು ದಾಟಲು ಯೋಗ್ಯವಲ್ಲ, ಎಂದು ತಡೆದರು.ಬೇರೆಯವರಿಗೆ ಇದೋಂದು Risk Factor ಆಗಿತ್ತು. ಆದರೆ ಆಚಾರ್ಯರುನಾಯಕನಾದವನು ಗಮ್ಯ ತಲುಪಲು ಅತ್ಮವಿಶ್ವಾಸದಿಂದ ರಿಸ್ಕ್ ತೆಗೆದುಕೊಳ್ಳಬೇಕೆಂದುತಾವು ಆಚರಿಸಿ ತೋರಿಸುತ್ತಾರೆ. ಹಾಗಂತ ಆಚಾರ್ಯರು ಮೊದಲು ತಮ್ಮ ಶಿಷ್ಯರನ್ನು ನೀರಿಗೆ ಬಿಡಲಿಲ್ಲ. ತಾವು ಮುಂದೆ ನಿಂತರು,ಶಿಷ್ಯರಿಗೆ ಧೈರ್ಯ ತುಂಬಿ ತಮ್ಮನ್ನು ಅನುಸರಿಸಲು ಹೇಳಿದರು. ತಾವು ಮುಂದೆ ಈಜುತ್ತಾ, ಎಲ್ಲರನ್ನೂ ದಡ ಸೇರಿಸಿದರು. ನಾಯಕನು ಹೀಗಿರಬೇಕೆಂದು ಜಗತ್ತಿಗೆ ತೋರಿಸಿದರು.
                              
 ಭಯಮಿಶ್ರಿತಪ್ರೀತಿ 
          ಭೀಷಾಸ್ಮಾತ್ ವಾತಃ ಪವತೆ ಭೀಷೋದೇತಿ ಸೂರ್ಯ:” ಎಂಬುವ ತೈತ್ತಿರೀಯ ಮಂತ್ರಕ್ಕೆ ವ್ಯಾಖ್ಯಾನ ಮಾಡುತ್ತಾ ಆಚಾರ್ಯರು ಹೀಗೆ ಹೇಳುತ್ತಾರೆ.ತಸ್ಮಾತ್ ವಾಯ್ವಾದಯೋ ದೇವಾಃ ವಿದ್ವಾಂಸೋಪಿ ವಿಶೇಷತಃ| ಭೀತಾಃ ಸ್ವಕರ್ಮ ಕುರ್ವಂತಿ ವಿಷ್ಣೋಃ ಪ್ರೀತ್ಯರ್ಥಮಂಜಸಾ||”ವಾಯು ,ಸೂರ್ಯ ಮೊದಲಾದ ದೇವತೆಗಳು ಪರಮಾತ್ಮನ ಭಯದಿಂದ, ಅವನ ಪ್ರೀತಿಗಾಗಿ ಚೆನ್ನಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ವಾಯು ಮೊದಲಾದ ದೇವತೆಗಳಿಗೆ ಪರಮಾತ್ಮನ ವಿಷಯದಲ್ಲಿ ಪ್ರೀತಿಯೂ ಇದೆ,ಭಯವೂ ಇದೆ. ನಾಯಕನಲ್ಲಿ ಅವನ ಅನುಯಾಯಿಗಳಿಗೆ ಇವೆರಡೂ ಇರಬೇಕೆಂದು ಸೂಚಿಸುತ್ತಾರೆ. ಕೇವಲ ಭಯವಿದ್ದರೆ ಅವನ ಎದುರು ಮಾತ್ರ ಕೆಲಸ ಮಾಡುತ್ತಾರೆ.ಕೇವಲ ಪ್ರೀತಿಯಿದ್ದರೆ ಉದಾಸೀನ ಮಾಡಿ,ಚೆನ್ನಾಗಿ ಕೆಲಸ ಮಾಡುವುದಿಲ್ಲ. ಎರಡೂ ಇದ್ದರೆ ನಿರಂತರವಾಗಿ ,ಚೆನ್ನಾಗಿ ಕೆಲಸ ಮಾಡುತ್ತಾರೆ. ಹಾಗಾದರೆ ನಾಯಕನಾದವನು ಅನುಯಾಯಿಗಳಿಂದ ಭಯಮಿಶ್ರಿತಪ್ರೀತಿಯನ್ನು ಹೇಗೆ ಸಂಪಾದಿಸಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ಆಚಾರ್ಯರು ಕೊಡುವ ಉತ್ತರ ಧಾರ್ಯತೇ ಯೇನ ವಿಶ್ವಂ ಸದಾ ಅಜಾದಿಕಂ.ಎಂದು ಪರಮಾತ್ಮ ನಿರಂತರವಾಗಿ ವಿಶ್ವದ ಸೃಷ್ಟಿ, ಸ್ಥಿತಿ, ಲಯ ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾನೆ.ಅವನು ವಾಯು ಮೊದಲಾದ ದೇವತೆಗಳಿಗಿಂತ ಅತಿ ಹೆಚ್ಚು ಕೆಲಸ ಮಾಡುತ್ತಾನೆ. ಅಷ್ಟೇ ಅಲ್ಲ ವಾರ್ಯತೇ ಅಶೇಷ ದುಃಖಂ ನಿಜಧ್ಯಾಯಿನಾಂ,ತನ್ನನ್ನು ನಂಬಿ ಕೆಲಸ ಮಾಡುವವರ ದುಃಖಕ್ಕೆ ಸ್ಪಂದಿಸಿ,ಅವರ ದುಃಖವನ್ನು ಪರಿಹರಿಸುತ್ತಾನೆ.ಅಪ್ಪ ತಾನು ಸಂಧ್ಯಾವಂದನೆ ಮಾಡದೇ ಮಗನಿಗೆ ಸಂಧ್ಯಾವಂದನೆ ಮಾಡೆಂದು ಹೇಳುವುದು ಪರಿಣಾಮಕಾರಿಯಾಗುವುದಿಲ್ಲ. ಹಾಗಾಗಿ ನಾಯಕನು ತಾನು ಪರಿಶ್ರಮಿಯಾಗಿರಬೇಕು(Hard working). ಅಷ್ಟೇ ಅಲ್ಲದೆ ತನ್ನವರ ವಿಷಯದಲ್ಲಿ ಕಾಳಜಿವುಳ್ಳವನಾಗಿರಬೇಕು(concerned). ಆಗ ಅನುಯಾಯಿಗಳು ನಾಯಕನಲ್ಲಿ ಭಯಮಿಶ್ರಿತ ಪ್ರೀತಿಯುಳ್ಳವರಾಗುತ್ತಾರೆಆಚಾರ್ಯರು ತಮ್ಮ ಶಿಷ್ಯರಲ್ಲಿ ಕಾಳಜಿಯುಳ್ಳವರಾಗಿದ್ದರು. ವಿಷಯದಲ್ಲಿ ನಾರಾಯಣಪಂಡಿತಾಚಾರ್ಯರು ಆಚಾರ್ಯರ ಜೀವನದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸಿದ್ದಾರೆ.ಆಚಾರ್ಯರು ಅರುಣೋದಯ ಕಾಲದಲ್ಲಿ ಎದ್ದು ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಿದ್ದರು. ಶಿಷ್ಯರು ತಡವಾಗಿ ಮಲಗಿದರೂ, ಬೇಗ ಎದ್ದು  ಕಷ್ಟಕರವಾದ ಗುರು ಶುಷ್ರೂಶೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಆದರೆ ಒಮ್ಮೆ ಶ್ರವಣ ಮನನ ಮಾಡುತ್ತಾ ಬಹಳ ತಡವಾಗಿ ಮಲಗಿದ್ದ ಶಿಷ್ಯರು ಬೆಳಿಗ್ಗೆ ಬೇಗ ಏಳಲಿಲ್ಲ. ಆಚಾರ್ಯರು ತಾವೇ ತಮ್ಮ ಸ್ನಾನವಸ್ತ್ರಾದಿಗಳನ್ನು ಹಿಡಿದು ನದಿಗೆ ಹೊರಟರು. ಶಿಷ್ಯರನ್ನು ಎಬ್ಬಿಸಲಿಲ್ಲ. ಆಮೇಲೆ ತಕ್ಷಣ ಎಚ್ಚರಗೊಂಡ ಶಿಷ್ಯರು ಆಚಾರ್ಯರು ಕೆಲಸ ಮಾಡದ್ದಕ್ಕೆ ಬಯ್ಯುವರು ಎಂದು ಗಾಬರಿಯಿಂದ ಸುಮ್ಮನೆ ನಿಂತರು ಆದರೇ ಆಚಾರ್ಯರು ಬಯ್ಯಲಿಲ್ಲ. ಹಾಗಾಗಿ ನಾಯಕನು ನಿಯಮಕ್ಕನುಗುಣವಾಗಿ ಕೆಲಸ ಮಾಡಿಸಬೇಕಾದರೂ, (Principled) ಕೆಲವೊಮ್ಮೆ ಸಂದರ್ಭಾನುಸಾರವಾಗಿ, ವ್ಯಕ್ತಿಗಳಿಗನುಸಾರವಾಗಿ ಮುಕ್ತತೆಯನ್ನೂ(Liberty) ಪ್ರದರ್ಶಿಸಬೇಕು. ಹೀಗೆ ಆಚಾರ್ಯರೂ ನಾಯಕತ್ವ ಗುಣಗಳ ಬಗ್ಗೆ ಅನೇಕ ಕಡೆ ಬೆಳಕು ಚೆಲ್ಲಿದ್ದಾರೆ, ದೃಷ್ಟಿಯಿಂದ ಗಮನಿಸಿ, ಜನರಿಗೆ ತಿಳಿಸಿ, ಅಳವಡಿಸಿಕೊಳ್ಳಬೇಕಾಗಿದೆ.