ಮನುಷ್ಯನ ಕೈಯಲ್ಲಿ ಐದು ಬೆರಳುಗಳಿವೆ. (ಎರಡು ಕೈಗಳಲ್ಲಿ ಹತ್ತು) ಒಮ್ಮೆ ಅವುಗಳಲ್ಲಿ ನಾನು ಶ್ರೇಷ್ಠ- ಯಾರು ಶ್ರೇಷ್ಠ ಈ ವಿಷಯದಲ್ಲಿ ಜಗಳ ಬಂದಿತು. ಶ್ರೇಷ್ಠರು ಎಂಬ ಮಾತು ಬಂದರೆ ನಾನೇ ಶ್ರೇಷ್ಠ ಎನ್ನುವುದು ಎಲ್ಲರ ಸ್ವಭಾವ. ಸಣ್ಣಪುಟ್ಟ ಕೆಲಸ ಮಾಡಿದರೆ ಅಥವಾ ಸಾಧನೆ ಹಂತದಲ್ಲಿ ಯಾರಾದರು ಚೂರೋ ಪಾರೋ ಗುರುತಿಸಿದ್ದರೆ ಅದನ್ನೇ ದೊಡ್ಡ ಸಾಧನೆ ಎಂದು ವಿಸ್ತರಿಸಿ ಹೇಳಿ ನಾನೇ ಶ್ರೇಷ್ಠ ಎನ್ನುತ್ತಾರೆ. ಒಂದ್ವೇಳೆ ಕೆಟ್ಟವರು ಯಾರು ಇಂಥ ಪ್ರಶ್ನೆ ಬಂದರೆ ತಮ್ಮನ್ನು ತೋರಿಸಿಕೊಳ್ಳದೆ, ಇನ್ಯಾರಿದ್ದಾರೆ ಎಂದು ಸೂತ್ತ ಕುಳಿತವರ ಕಡೆ ಕಣ್ಣು ಹಾಯಿಸಿ ನೋಡುತ್ತಾರೆ. ಇಂಥದೇ ಜಗಳ ಒಂದು ಹಸ್ತದ ಐದು ಬೆರಳುಗಳಿಗೆ ಬಂದು ಒಂದಷ್ಟು ಹೊತ್ತು ವಾದ- ವಿವಾದ ನಡೆಯಿತು. ಅದು ಬಗೆಹರಿಯದೆ ಅವು ತಮ್ಮಲ್ಲಿ ವಿಚಾರ ಮಾಡಿ, ನಮ್ಮನ್ನು ಸೃಷ್ಟಿ ಮಾಡಿದ ಸೃಷ್ಟಿಕರ್ತ ಬ್ರಹ್ಮದೇವರನ್ನೇ ಕೇಳೋಣ ಈ ವಿವಾದದ ಪರಿಹಾರ ಅವರೇ ತಿಳಿಸಲಿ ಎಂದು ಹೊರಟವು. ಬ್ರಹ್ಮ ಲೋಕಕ್ಕೆ ಬಂದು ಬ್ರಹ್ಮ ದೇವರಿಗೆ ನಮಸ್ಕರಿಸಿ ತಮ್ಮ ಶ್ರೇಷ್ಠತೆ ಕುರಿತಾದ ವಾದ ವಿವಾದದ ಬಗ್ಗೆ ಹೇಳಿದವು. ಯಾರು ಶ್ರೇಷ್ಠ ಎಂದು ಬ್ರಹ್ಮನು ಯೋಚಿಸಿ, ಬೆರಳು ಗಳಿಗೆ ಹೇಳಿದ ಮೊದಲು ನಿಮ್ಮ ನಿಮ್ಮ ಶ್ರೇಷ್ಠತೆಯ ವಾದವನ್ನು ಮಂಡಿಸಿ ಎಂದನು.
ಹೆಬ್ಬೆರಳು ಹೇಳಿತು:- ನಾನು ಇವರೆಲ್ಲರಿಗಿಂತ ಬಲಶಾಲಿ. ಎಲ್ಲಾ ಬೆರಳುಗಳಿಗಿಂತ ನಾನು ಶಕ್ತಿವಂತನಾಗಿದ್ದೇನೆ. ಯಾವುದೇ ಕೆಲಸವನ್ನು ನಾನಿಲ್ಲದೆ ಮಾಡಲು ಸಾಧ್ಯವಿಲ್ಲ. ಎಂಥಾ ಕಠಿಣ ಕೆಲಸವನ್ನು ಲೀಲಾಜಾಲವಾಗಿ ನಾನು ಮಾಡುತ್ತೇನೆ ಭಾರ ಎತ್ತಲು ನಾನೆ ಬೇಕು. ಒಂದು ಬದಿ ನಾನೊಬ್ಬನೇ ಇದ್ದು ಇನ್ನೊಂದು ಕಡೆ ನಾಲ್ಕು ಜನ ಇರುತ್ತಾರೆ. ಆಗಲೂ ನಾನೇ ಬಲಿಷ್ಠ ಆದ್ದರಿಂದ ನಾನು ಶ್ರೇಷ್ಠ ಎಂದಿತು.
ತೋರು ಬೆರಳು:- ನನ್ನ ಹತ್ತಿರ ‘ಅಧಿಕಾರ’ ಉಂಟು, ಶಾಸನ ಮಾಡುವೆ. ನಾನು ಮುಂದೆ ನಿಂತು ಎದುರಿನವರನ್ನು ನೋಡಿದರೆ ಸಾಕು ಅವನು ಪತರಗುಡುತ್ತಾನೆ ನಾನು (ಅಂಬರೀಶ್ ಸ್ಟೈಲ್ ನಲ್ಲಿ) ಒಮ್ಮೆ ಏಯ್ ಅಂತ ಬೆರಳು ತೋರಿಸಿದರೆ ಸುಮ್ಮನಾಗುತ್ತಾನೆ. ಬೇರೆ ಯಾವುದೇ ಬೆರಳು ತನ್ನನ್ನು ಮುಂದೆ ತೋರಿಸಿಕೊಂಡರೆ ಮನುಷ್ಯ ಹೆದರುವುದಿಲ್ಲ. ಇಂಥ ನನ್ನ ಶ್ರೇಷ್ಠತೆಗೆ ಯಾರು ಸಮಾನರಲ್ಲ ನಾನೇ ಶ್ರೇಷ್ಠ ಎಂದಿತು.
ಮಧ್ಯದ ಬೆರಳು:- ನನ್ನ ಸ್ಥಾನ ಬಹಳ ಪ್ರಧಾನವಾದದ್ದು. ನನ್ನ ರಕ್ಷಣೆಗೆ ಬಲಗಡೆ ಇಬ್ಬರು ಎಡಗಡೆ ಇಬ್ಬರು ಇದ್ದಾರೆ. ಅವರೆಲ್ಲ ನನ್ನ ಪರಿವಾರದವರು. ಅವರನ್ನು ದಾಟಿ ನನ್ನ ಹತ್ತಿರ ಬರಲು ಯಾರಿಗೂ ಸಾಧ್ಯವಿಲ್ಲ. ಆದ್ದರಿಂದ ನಾನು ದೊಡ್ಡವನು ಎಂದಿತು.
ಉಂಗುರದ ಬೆರಳು:- ಗತ್ತಿನಿಂದ ಮುಂದೆ ಬಂದ ಉಂಗುರದ ಬೆರಳು ನಾನು ಧನಾಧಿಪತಿ ಶ್ರೀಮಂತ, ಶುಭಕಾರಕ. ಶುಭ ಕಾರ್ಯಗಳಲ್ಲಿ, ಉಪನಯನ- ವಿವಾಹಗಳ ಸಮಾರಂಭದಲ್ಲಿ ಉಂಗುರವನ್ನು ಮೊದಲು ನನಗೆ ಹಾಕುತ್ತಾರೆ. ಆನಂತರ ಹುಟ್ಟಿದ ಮಕ್ಕಳಿಗೆ ನನ್ನ ಬೆರಳಿನ ಉಂಗುರ ದಿಂದಲೇ ಅನ್ನ ಪ್ರಾಶನ ಮಾಡಿಸುತ್ತಾರೆ. ಸ್ನೇಹ ಪ್ರೀತಿ ಸಂಬಂಧಗಳಲ್ಲಿ ನಾನು ಸೂತ್ರಧಾರ. ನನ್ನ ಬೆರಳಿಗೆ ಮೊದಲು ಉಂಗುರ ಹಾಕಿ ಆನಂತರ ಫ್ಯಾಶನ್ನಿಗೆ ಉಳಿದ ಬೆರಳಿಗೆ ಹಾಕುತ್ತಾರೆ.
ಎಲ್ಲಾ ಶುಭ ಕಾರ್ಯಗಳನ್ನು ಶ್ರೀಮಂತಿಕೆಗೆ, ಬದ್ಧತೆಗೆ ನಾನೇ ಸಾಕ್ಷಿ. ನನಗಿಂತ ಶ್ರೇಷ್ಠರು ಬೇಕೇ ಎಂದಿತು
ಕಿರುಬೆರಳು:- ಇದು ಮಾತ್ರ ಮುಂದೆ ಹೋಗದೆ ಸುಮ್ಮನೆ ನಿಂತಿತ್ತು. ಬ್ರಹ್ಮ ದೇವರೇ ಕೇಳಿದ. ಏ ಕಿರಿ ಬೆರಳೇ ನಿನ್ನ ಸ್ಥಾನ ಯಾವುದು ಎಂದು ಮುಂದೆ ಬಂದು ಮಂಡಿಸು ಎಂದನು. ಕಿರಿ ಬೆರಳು ಹೇಳಿತು. ನನ್ನಲ್ಲಿ ವಾದವು ಇಲ್ಲ, ಜಗಳವೂ ಇಲ್ಲ, ಇದಕ್ಕೂ ನನಗೂ ಸಂಬಂಧವಿಲ್ಲ ಎಂದಿತು. ಹಾಗಾದರೆ ನೀನು ಏಕೆ ಈ ಸಭೆಗೆ ಬಂದಿರುವೆ? ಎಂದು ಬ್ರಹ್ಮ ಕೇಳಿದನು. ಪುಟ್ಟ ಬೆರಳು ಹೇಳಿತು ನನ್ನ ಜೊತೆಗಿರುವ ಈ ನಾಲ್ವರು ನಾನು ಶಕ್ತಿ, ನಾನು ಐಶ್ವರ್ಯ, ನನಗೆ ಸಂಪತ್ತು, ನನ್ನದೇ ಅಧಿಕಾರ ಅಂತ ಜಗಳ ಮಾಡುತ್ತಿದ್ದರು ಎಂದಿತು. ಅದು ಸರಿ ಆದರೆ ನಿನಗೆ ಈ ವಿಷಯದಲ್ಲಿ ವಾದ ಜಗಳ ಇಲ್ಲ ಎಂದ ಮೇಲೆ ಏಕೆ ಬಂದೆ ಎಂದು ಕೇಳಿದಾಗ, ಬ್ರಹ್ಮ ದೇವರೇ ನೀವು ನನ್ನನ್ನು ಸೃಷ್ಟಿ ಮಾಡಿ ನನಗೆ ಒಳ್ಳೆಯ ಅವಕಾಶ ಕೊಟ್ಟಿರುವಿರಿ ಅದಕ್ಕಾಗಿ ನಿಮಗೆ ಕೃತಜ್ಞತೆಯಿಂದ ನಮಸ್ಕರಿಸಲು ಇವರಗಳ ಜೊತೆ ಬಂದೆ ಎಂದಿತು.
ಆಶ್ಚರ್ಯದಿಂದ ಬ್ರಹ್ಮ ಕೇಳಿದ ನಾನು ಸೃಷ್ಟಿ ಮಾಡಿದವನು ನಿಜ. ಆದರೆ ನಿನಗೆ ವಿಶೇಷವಾದ ಯಾವ ಅವಕಾಶ ಕೊಟ್ಟಿದ್ದೇನೆ? ಕಿರಿಬೆರಳು ಹೇಳಿತು. ಬ್ರಹ್ಮದೇವ ನಾವು ದೇವಸ್ಥಾನಕ್ಕೆ ಹೋದಾಗ ಹಿರಿಯರು ಬಂದಾಗ ಕೈ ಮುಗಿಯುತ್ತೇವೆ. ಹಾಗೆ ಕೈಮುಗಿದಾಗ ಎಲ್ಲರಿಗಿಂತ ಮುಂದೆ ನಿಲ್ಲುವ ಸ್ಥಾನ ನನಗೆ ನೀವು ಕೊಟ್ಟಿದ್ದೀರಿ. ನಮ್ಮಲ್ಲಿ ಶಕ್ತಿ, ಅಧಿಕಾರ, ಸಂಪತ್ತು, ಸ್ಥಾನಮಾನದಲ್ಲಿ ‘ನಾನು’ ಎಲ್ಲರಿಗಿಂತ ದೊಡ್ಡವನು ಎಂದು ಹೇಳಿಕೊಂಡವರೆಲ್ಲ ನನ್ನ ಹಿಂದೆ ಇರುತ್ತಾರೆ. ಆದರೆ ದೇವರಿಗೆ ಕೈ ಮುಗಿಯುವಾಗ, ಗುರುಗಳು, ಸಂತರು, ಮಹಾತ್ಮರು, ಗೌರವಾನ್ವಿತರು ಎದುರಿಗೆ ಬಂದಾಗ ಮುಂದೆ ಇದ್ದು ಅವರ ದರ್ಶನ ಭಾಗ್ಯ ಪಡೆದು, ನಮಸ್ಕರಿಸುವಾಗ ನನಗೆ ಮೊದಲು ದರ್ಶನ ಭಾಗ್ಯ ವಾಗುತ್ತದೆ. ಭಗವಂತನ ದರ್ಶನ ಮಾಡುವಾಗ, ಗುರು ಹಿರಿಯರ ದರ್ಶನ ಮಾಡುವ ಅವರನ್ನು ಮೊದಲು ನೋಡುವಂತೆ ನನಗೆ ಮುಂದೆ ನಿಲ್ಲುವ ಅವಕಾಶ ನೀವು ಮಾಡಿ ಕೊಟ್ಟಿದ್ದೀರಿ. ಇಂಥ ಶ್ರೇಷ್ಠ ಅವಕಾಶ ಕ್ಕಿಂತ ಬೇರೇನೂ ಬೇಡ ಎಂದಿತು.
ಬ್ರಹ್ಮದೇವರು ಹಾಗೂ ಸಭೆಗೆ ಸೂರ್ಯ ಚಂದ್ರ ಇಂದ್ರಾದಿ ದೇವತೆಗಳೆಲ್ಲ ಕಿರು ಬೆರಳಿನ ಮಾತು ಕೇಳಿ ಸಂತೋಷದಿಂದ ಚಪ್ಪಾಳೆ ಹೊಡೆದು ನೀನು ನೋಡಲು ಚಿಕ್ಕವನಾದರೂ ಎಲ್ಲಾ ಬೆರಳುಗಳಿಗಿಂತ ನೀನೆ ಶ್ರೇಷ್ಠ ಎಂದು ಅಭಿಮಾನದಿಂದ ಹೇಳಿದರು ಬ್ರಹ್ಮ ದೇವರು ಕೊಟ್ಟ ತೀರ್ಪು ಅದೇ ಆಗಿದ್ದು ಕಿರಿಬೆರಳನ್ನು ಅಭಿನಂದಿಸಿದರು.
ಇದರ ಸಂದೇಶ ಹಿರಿಯ ಕಿರಿಯ ಮುಖ್ಯವಲ್ಲ ಮಾನವೀಯತೆ ವಿನಯ ಮತ್ತು ಧರ್ಮ ಪಾಲನೆ ಎನ್ನುವ ಗುಣವೇ ನಿಜವಾದ ಶ್ರೇಷ್ಠತೆ. ಯಾವುದೇ ವ್ಯಕ್ತಿಯ ಮೌಲ್ಯ ಅವನ ಮೈ ಮಾಟದಲ್ಲಿ ಅಲ್ಲ ಅವನು ತೋರಿಸುವ ಸಂಸ್ಕಾರದಲ್ಲಿ ಇದೆ. ಕಿರಿ ಬೆರಳಿನಂತೆ ನಾವು ಪ್ರತಿ ಕಾರ್ಯಕ್ಕೂ ಮೊದಲು ಬಡವರ ಹಿರಿಯರ ಗುರುಗಳ ಹಾಗೂ ದೇವರಿಗೆ ಬಾಗಬೇಕು. ಈ ಕಥೆಯ ಸಂದೇಶ.
No comments:
Post a Comment
If you have any doubts. please let me know...