ದೇವರನ್ನು ಹೊರತುಪಡಿಸಿ ಇಲ್ಲಿ ಯಾವುದೂ ಪರಿಪೂರ್ಣವಲ್ಲದೇ - ಇರುವುದರಿಂದ ಜಗತ್ತಿನ ಪ್ರತಿಯೊಂದು ವಸ್ತುವಿನಲ್ಲಿ ಮತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕೆಲವು ಒಳ್ಳೆಯ ಗುಣಗಳಿದ್ದರೆ ಇನ್ನು ಕೆಲವು ಕೊರತೆಗಳು ಅಥವಾ ಕೆಟ್ಟ ಗುಣಗಳು ಇದ್ದೇ ಇರುತ್ತವೆ.
ಕಾಗೆಯ ಬಣ್ಣ ಕಪ್ಪಾಗಿ, ಧ್ವನಿ ಕರ್ಕಶವಾಗಿ ಇದ್ದರೂ ನಾವು ಚಲ್ಲಿದ ಕಾಳು ಕಡ್ಡಿ ಕಸ ಇತ್ಯಾದಿಗಳನ್ನು ತಿಂದು ನಮ್ಮ ಪ್ರಾಂಗಣವನ್ನು ಸ್ವಚ್ಛ ಮಾಡುವ ಮತ್ತು ತನ್ನ ತನ್ನ ಬಳಗವನ್ನೆಲ್ಲ ಕರೆದುಕೊಂಡು ತಿನ್ನುವ ಒಳ್ಳೆಯ ಗುಣಗಳು ಅದರಲ್ಲಿವೆ. ಕೋಗಿಲೆಯ ಕಂಠವು ಅತೀವ ಆಕರ್ಷಣೀಯವಾಗಿದ್ದರೂ, ತನ್ನ ತತ್ತಿಗಳನ್ನು ತಾನು ಕಾಪಾಡದಷ್ಟು ಆಲಸಿಯಾಗಿರುತ್ತದೆ. ಒಳ್ಳೆಯ ಅಥವಾ ಕೆಟ್ಟ ಗುಣಗಳ ಪ್ರಮಾಣ ಹೆಚ್ಚು ಕಡಿಮೆ ಇರಬಹುದು. ಕೆಲವರಲ್ಲಿ ಒಳ್ಳೆಯದು ಹೆಚ್ಚಿನ ಪ್ರಮಾಣದಲ್ಲಿದ್ದು, ಕೆಟ್ಟದ್ದು ಕಡಿಮೆ ಪ್ರಮಾಣದಲ್ಲಿ ಇರಬಹುದು. ಇನ್ನು ಕೆಲವರಲ್ಲಿ ಕೆಟ್ಟದ್ದು ಅಧಿಕ ಪ್ರಮಾಣದಲ್ಲಿದ್ದು, ಒಳ್ಳೆಯದು ಕಡಿಮೆ ಪ್ರಮಾಣದಲ್ಲಿರಬಹುದು. ಆದರೆ ಅವುಗಳಲ್ಲಿರುವ ಕಡಿಮೆ ಪ್ರಮಾಣದ ಕೆಟ್ಟದ್ದನ್ನು ನೋಡಿ ಯಾರನ್ನೇ ಆಗಲಿ ಹಿಂದೆ ಮುಂದೆ ನೋಡದೆ ನಿಂದೆ ಮಾಡಿ ಅವರ ತೇಜೋವಧೆ ಮಾಡುವುದಾಗಲಿ, ಮನಸ್ಸಿಗೆ ನೋವಾಗುವಂತೆ ಚುಚ್ಚಿ ಮಾತನಾಡುವುದಾಗಲಿ ಒಳ್ಳೆಯದಲ್ಲ. ಬದಲಾಗಿ ಸ್ವಲ್ಪ ಪ್ರಮಾಣದಲ್ಲಾದರೂ ಇರುವ ಒಳ್ಳೆಯದನ್ನು ಗಮನಿಸಿ ಅದನ್ನೇ ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡುವುದಕ್ಕಾಗಿ ಆ ಒಳ್ಳೆಯದನ್ನೇ ಒತ್ತಿ ಮತ್ತು ಎತ್ತಿ ಹೇಳಲು ಪ್ರಯತ್ನಿಸಬೇಕು.
ಮೊದಲನೆಯದಾಗಿ ಇನ್ನೊಬ್ಬರ ಬಗ್ಗೆ ಏನೂ ಮಾತಾಡದಿರುವುದು ಸರ್ವೋತ್ತಮ. ಒಂದುವೇಳೆ ಇದು ಸಾಧ್ಯವಾಗದಿದ್ದರೆ, ಇತರರಲ್ಲಿರುವ ಒಳ್ಳೆಯದನ್ನು ಕುರಿತು ಮಾತಾಡಬೇಕೇ ಹೊರತು ಕೆಟ್ಟದ್ದರ ಬಗ್ಗೆ ಅಲ್ಲ. 'ಮಾಡಿದವರ ಪಾಪ ಆಡಿದವರ ಬಾಯಲ್ಲಿ' ಎಂಬ ನಾಣ್ಣುಡಿಯಂತೆ ಬೇರೆಯವರು ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳ ಬಗ್ಗೆ ಮಾತಾಡಿದರೆ ಆ ಅಪರಾಧಗಳಿಂದಾಗಿ ಅವರಿಗಂಟಿದ ಪಾಪ ಕಡಿಮೆಯಾಗುತ್ತದೆ ಮತ್ತು ಅದರ ಬಗ್ಗೆ ಮಾತಾಡಿದವರನ್ನು ಆವರಿಸಿಕೊಳ್ಳುತ್ತದೆ. ಅಂತೆಯೇ ದಾಸರು, 'ಬೇರೆಯವರ ಹೊಲಸು ತಿಂದು ಬದುಕುವ ಹಂದಿಗಳಂತೆ, ನಿಂದಕರು ಇತರರ ಪಾಪ ತಿಂದು ಬದುಕುತ್ತಾರೆ' ಎಂದು ಹೇಳಿದ್ದಾರೆ. ನಿಜಗುಣ ಶಿವಯೋಗಿಗಳು, ನಿಂದಿಸಿ ನುಡಿಯದಿರಾರನು' ಎಂದು ಹೇಳಿದ್ದಾರೆ. ಆದ್ದರಿಂದ ಬೇರೆಯವರಲ್ಲಿರುವ ಕೆಟ್ಟದ್ದರ ಬಗ್ಗೆ ಮಾತನಾಡಿ ಅವರ ಪಾಪದಲ್ಲಿ ಭಾಗಿಗಳಾಗುವುದಕ್ಕಿಂತ ಅವರಲ್ಲಿರುವ ಒಳ್ಳೆಯದರ ಬಗ್ಗೆ ಮಾತಾಡುವ ಮೂಲಕ ಅವರ ಪುಣ್ಯದಲ್ಲಿ ಪಾಲು ಪಡೆಯುವುದು ಒಳ್ಳೆಯದು. ಸಮುದ್ರದಲ್ಲಿ ಒಂದೆಡೆ ಮೀನು, ಮೊಸಳೆಗಳಿದ್ದರೆ, ಮತ್ತೊಂದೆಡೆ ಮುತ್ತು ರತ್ನಗಳೂ ಇರುತ್ತವೆ. ಮೀನುಗಳನ್ನು ಹುಡುಕುವವರಿಗೆ ಮೀನುಗಳು ಸಿಗುತ್ತವೆ. ಮುತ್ತು ರತ್ನ ಹುಡುಕುವವರಿಗೆ ಮುತ್ತು ರತ್ನಗಳು ಸಿಗುತ್ತವೆ. ಅದರಂತೆ, ಯಾವುದೇ ಮನುಷ್ಯನಲ್ಲಿ ಒಳ್ಳೆಯದನ್ನು ಹುಡುಕುವವರಿಗೆ ಒಳ್ಳೆಯದು ಸಿಗುತ್ತದೆ. ಕೆಟ್ಟದ್ದನ್ನು ಹುಡುಕುವವರಿಗೆ ಕೆಟ್ಟದ್ದು ಸಿಗುತ್ತದೆ. ಆದ್ದರಿಂದ ನಾವು ಯಾವುದೇ ಮನುಷ್ಯನಲ್ಲಿ ಕೆಟ್ಟದ್ದನ್ನು ಹುಡುಕುವವರಾಗದೆ ಮುತ್ತುರತ್ನಗಳನ್ನು ಹುಡುಕುವ ಮುತ್ತುಗಾರರಾಗಬೇಕು. ಯಾವುದೇ ವ್ಯಕ್ತಿಯಲ್ಲಿಯ ಕೆಟ್ಟದ್ದನ್ನು ಎತ್ತಿಕಟ್ಟೆ ಅಥವಾ ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ದೃಷ್ಟಿಯಿಂದ ಇಲ್ಲವೇ ಸಮಾಜದಲ್ಲಿ ಅವನ ವ್ಯಕ್ತಿತ್ವವನ್ನು ಹಾಳುಮಾಡುವ ಉದ್ದೇಶದಿಂದ ನಿಂದೆ ಮಾಡುವುದು ಒಳ್ಳೆಯದಲ್ಲ. ಅದರಿಂದ ನಮಗೇ ಗೊತ್ತಿಲ್ಲದಂತೆ ನಮಗೆ ಪಾಪ ಬರುತ್ತದೆ.
ಶ್ರೀ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು. ಶ್ರೀಶೈಲ ಪೀಠ
No comments:
Post a Comment
If you have any doubts. please let me know...