ಪ್ರತಿಶ್ಲೋಕಂ ಚ ಜುಹುಯಾತ್ ಪಾಯಸಂ ತಿಲಸರ್ಪಿಷಾ ||
ಚಂಡಿಕೋಪಾಸ್ತಿ ದೀಪಿಕಾದಲ್ಲಿ ಇದರ ವ್ಯಾಖ್ಯಾನವು ಹೀಗಿದೆ.
ತಿಲಸರ್ಪಿಷಾ ತಿಲಸಹಿತಂ ಸರ್ಪಿರ್ಘೃತಂ ತಿಲಸರ್ಪಿರಿತಿ ಮಧ್ಯಮಪದಲೋಪೀಸಮಾಸಃ | ತೇನ ಸಹ ಪಾಯಸಂ ಜುಹುಯಾತ್ | ಪಾಯಸಂ ತಿಲಾನ್ ಸರ್ಪಿಶ್ಚ ಪೃಥಕ್ ಪೃಥಕ್ ಜುಹುಯಾದಿತ್ಯೇಕೇ | ಸರ್ಪಿಸ್ತಿಲಮಿಶ್ರಂ ಪಾಯಸಂ ಜುಹುಯಾದಿತ್ಯನ್ಯೇ | ಯಥಾಚಾರಂ ವ್ಯವಸ್ಥಾ ||
ತಿಲ ಮತ್ತು ಫೃತ ಸಹಿತವಾದ ಪಾಯಸವನ್ನು ಹೋಮಿಸಬೇಕು. ಇನ್ನೊಂದು ಮತ ಪ್ರಕಾರ ತಿಲ ಘೃತ ಪಾಯಸಗಳನ್ನು ಪ್ರತ್ಯೇಕವಾಗಿ ಹೋಮಿಸಬೇಕು.
ಪಾಯಸಂ ಸರ್ಪಿಷಾಯುಕ್ತಂ ತಿಲೈಃ ಶುಕ್ಲೈರ್ವಿಮಿಶ್ರಿತಮ್ || ತುಪ್ಪ ಮತ್ತು ಬಿಳಿಎಳ್ಳಿನಿಂದ ಮಿಶ್ರವಾದ ಪಾಯಸ ಆಗಬೇಕು. (ಹೆಚ್ಚಾಗಿ ಕಂದು ಎಳ್ಳನ್ನೇ ಉಪಯೋಗಿಸುತ್ತಾರೆ . ಬಿಳಿಎಳ್ಳು ಉತ್ತಮ)
ಪಾಯಸ ಮಾಡಲು ದ್ರವ್ಯಪ್ರಮಾಣ:-
ಚಂಡಿಕೋಪಾಸ್ತಿ ದೀಪಿಕಾಯಾಂ - ದುಗ್ಧಂ ಪಂಚಗುಣಂ ಪ್ರೋಕ್ತಂ ಘೃತತಂಡುಲತೋ ಗವಾಮ್ | ಶರ್ಕರಾ ಘೃತತುಲ್ಯಾ ಚ ಪಾಯಸೋಯಂ ವಿಧಿಃ ಸ್ಮೃತಃ ಇತಿ ಘೃತತಂಡುಲಶರ್ಕರಾಃ ಸಮಪ್ರಮಾಣಾಃ | ಪಂಚಗುಣಂ ಗವ್ಯಂ ದುಗ್ಧಮಿತ್ಯರ್ಥಃ || ಅಕ್ಕಿ, ಗೋವಿನ ತುಪ್ಪ, ಸಕ್ಕರೆ ಸಮಪ್ರಮಾಣ. ಅದರ ಐದು ಪಟ್ಟು ಹಾಲು . (ಅಡಿಗೆ ಭಟ್ಟರು ಐದು ಪಟ್ಟು ಹಾಲು ಹಾಕಿದರೆ ಕೈಯಿಂದ ಆಹುತಿ ಹಾಕಲು ಸಾಧ್ಯವಾಗುವ ಗಟ್ಟಿ ಪಾಯಸ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇದರಲ್ಲಿ ಬೆಲ್ಲ ಹೇಳಿಲ್ಲ ಸಕ್ಕರೆ ಹೇಳಿದ್ದಾರೆ. ಗೋವಿನ ಎಲುಬಿನ ಪುಡಿಯಿಂದ ಬ್ಲೀಚ್ ಮಾಡಿದ ಸಕ್ಕರೆಯೇ ಸರ್ವತ್ರ ಇರುವುದರಿಂದ ಸೂಕ್ತವಲ್ಲ. ವಿಶ್ವಸನೀಯ ಬ್ರೌನ್ ಶುಗರ್ ಅಂದರೆ ಕಂದುಸಕ್ಕರೆಯನ್ನು ಬಳಸಬಹುದು)
ತಂಡುಲ ತ್ರಿಗುಣಂ ದುಗ್ಧಂ ದುಗ್ದಾರ್ಧಂ ಜೀವನೀಯಕಮ್ | ತದರ್ಧಂ ಗುಡಚೂರ್ಣಂ ತು ಪರಮಾನ್ನಮಿತಿ ಸ್ಮೃತಮ್ || ತಂಡುಲದ ಮೂರು ಪಟ್ಟು ಹಾಲು, ಹಾಲಿನ ಅರ್ಧಪಟ್ಟು ನೀರು, ನೀರಿನ ಅರ್ಧಪಟ್ಟು ಬೆಲ್ಲ ಈ ಪ್ರಮಾಣದಲ್ಲಿ ಬೇಯಿಸಿದರೆ ಪರಮಾನ್ನ ಆಗುವುದು.
ಶಾಂತಿ ತರಂಗಿಣ್ಯಾಂ - ಗುಡೋದನಂ ಘೃತಾಕ್ತಂ ತತ್ಪಯಸಾ ಮಧುನಾಚಿತಮ್ | ಸರ್ವದೇವಪ್ರಿಯಕರಂ ಪಾಯಸಂ ಪರಿಕೀರ್ತಿತಮ್ || ಬೆಲ್ಲದ ಅನ್ನಕ್ಕೆ ತುಪ್ಪ, ಹಾಲು, ಜೇನುತುಪ್ಪ ಸೇರಿಸಿದರೆ ಸರ್ವದೇವಪ್ರಿಯಕರವಾದ ಪಾಯಸ ಆಗುವುದು. ಇಲ್ಲಿ ಬೆಲ್ಲ, ತುಪ್ಪ ಇತ್ಯಾದಿಗಳಿಗೆ ಪ್ರಮಾಣ ಹೇಳಿಲ್ಲವಾದ್ದರಿಂದ ಅನುಸರಿಸಲು ಅನುಕೂಲವಿದೆ.
ಶಬ್ದ ಕಲ್ಪದ್ರುಮೇ - ಅತಪ್ತತಂಡುಲೋ ಧೌತಃ ಪರಿಭೃಷ್ಟೋ ಘೃತೇನ ಚ | ಖಂಡಯುಕ್ತೇನ ದುಗ್ಧೇನ ಪಾಚಿತಃ ಪಾಯಸೋ ಭವೇತ್ || ಬಿಸಿಯಾಗಿರದ ಅಕ್ಕಿಯನ್ನು ತೊಳೆದು ಅನಂತರ ನೀರನ್ನು ಸೇರಿಸದೆ ತುಪ್ಪದಲ್ಲಿ ಕಲೆಸಿ ಹಾಲಿನಲ್ಲಿಯೇ ಬೇಯಿಸಿದರೆ ಪಾಯಸ ಆಗುವುದು.
ಶಬ್ದ ಕಲ್ಪದ್ರುಮೇ - ಪಾಯಸ - ಪಯಸಾ ಸಂಸ್ಕೃತಮ್ || ಹಾಲಿನಲ್ಲಿ ಪಕ್ವವಾದ ಅನ್ನವೇ ಪಾಯಸ .
- ಹಾಲು,ತುಪ್ಪ, ಅಕ್ಕಿ, ಸಕ್ಕರೆ.
- ಅಕ್ಕಿ, ಹಾಲು,ನೀರು,ಬೆಲ್ಲ.
- ಅಕ್ಕಿ, ಬೆಲ್ಲ, ಹಾಲು,ತುಪ್ಪ, ಜೇನುತುಪ್ಪ.
- ಅಕ್ಕಿ, ಹಾಲು,ತುಪ್ಪ.
- ಅಕ್ಕಿ, ಹಾಲು.
ಹೀಗೆ ಪಾಯಸ ಮಾಡುವಿಕೆಯ ಹಲವು ವಿಧಗಳಿವೆ.
ಯಾವುದಾದರೊಂದು ಕ್ರಮವನ್ನು ಅನುಸರಿಸಬೇಕು. ಚಂಡೀಹೋಮದ ಪಾಯಸಕ್ಕೆ ತುಪ್ಪ, ಬಿಳಿಎಳ್ಳನ್ನು ಮತ್ತೆ ಸೇರಿಸಬೇಕು.
ಎಷ್ಟೋ ಕಡೆಗಳಲ್ಲಿ ಪಾಯಸ ಮಾಡುವ ಅಕ್ಕಿಯನ್ನು ತೊಳೆಯುವುದೇ ಇಲ್ಲ. ತ್ರಿಭಿಃ ಪ್ರಕ್ಷಾಲಿತಂ ದೈವೇ || ಮೂರು ಬಾರಿ ಅಕ್ಕಿಯನ್ನು ನೀರಿನಿಂದ ತೊಳೆದು ಪಾಯಸ ಮಾಡಬೇಕು.
ಈಗ ಅತಿಹೆಚ್ಚಿನ ಚಂಡೀಹೋಮಗಳಲ್ಲಿ ಮಾಡುವ ಪಾಯಸ ಎಂದರೆ ಬೆಲ್ಲದ ಅನ್ನವೇ ಆಗಿರುತ್ತದೆ. ಬೆಲ್ಲದ ಅನ್ನ ಆದ ಮೇಲೆ ಅಭಿಘಾರದ ಲೆಕ್ಕದಲ್ಲಿ ಹಾಲು,ತುಪ್ಪ ಹಾಕಿ ತೊಳೆಸುತ್ತಾರೆ. ತುಪ್ಪ ಹಾಕದಿರುವುದೂ ಉಂಟು. ಇದು ಪಾಯಸ ಆಗುವುದಿಲ್ಲ. ಅಕ್ಕಿಯ ಜೊತೆಗೆ ಬೆಲ್ಲ, ತುಪ್ಪ,(ಜೇನುತುಪ್ಪ) ಹಾಲು ಸೇರಿಸಿ ಬೇಯಿಸಬೇಕು. ನೀರು ಇಲ್ಲದೆ ಕೇವಲ ಹಾಲಿನಲ್ಲಿಯೇ ಬೇಯಿಸುವುದಾದರೆ ಮೊದಲಿಗೆ ಹಾಲು ಹಾಕಲೇಬೇಕು. ಚಂಡೀಹೋಮದ ಪಾಯಸ ಸಿದ್ಧವಾದ ಮೇಲೆ ಪುನಃ ಬಿಳಿಎಳ್ಳು, ತುಪ್ಪ ಮಿಶ್ರ ಮಾಡಬೇಕು.
ಸಾಮಾನ್ಯವಾಗಿ ಒಂದು ಕೆಜಿ ಪಾಯಸಕ್ಕೆ ಒಂದು ಕೆಜಿ ಅಕ್ಕಿ, ಒಂದು ಕೆಜಿ ಬೆಲ್ಲ, ಒಂದು ಲೀಟರ್ ಹಾಲು , ನೂರು ಗ್ರಾಂ ತುಪ್ಪ, (ನೂರು ಗ್ರಾಂ ಜೇನುತುಪ್ಪ) ನೂರು ಗ್ರಾಂ ಬಿಳಿಎಳ್ಳು, ನೂರು ಗ್ರಾಂ ಪುನಃ ತುಪ್ಪ , ಎರಡು ಲೀಟರ್ ನೀರು ಈ ಪ್ರಮಾಣ ಅನುಸರಿಸಬಹುದು. (ಇದು ತೂಕಪ್ರಮಾಣ ಹೇಳಿರದ ಶ್ಲೋಕದ ಆಧಾರದ ಮೇಲೆ ಪ್ರಾಯೋಗಿಕವಾಗಿ ಮಾಡಿಸಿ ನೋಡಿ ಅನಂತರ ತೂಕಪ್ರಮಾಣ ಯೋಜಿಸಿರುವುದು)
ಹಲವು ಕಡೆಗಳಲ್ಲಿ ಪಾಯಸಕ್ಕೆ ಗೋಡಂಬಿ, ದ್ರಾಕ್ಷಿ, ಉತ್ತುತ್ತೆ ಮುಂತಾದವುಗಳನ್ನು ಸೇರಿಸುತ್ತಾರೆ. ಆಮಂತ್ರಣ ಪತ್ರಿಕೆಯಲ್ಲಿ 25 ಕೆಜಿ ಗೋಡಂಬಿ, 25 ಕೆಜಿ ಒಣದ್ರಾಕ್ಷಿ, 25 ಕೆಜಿ ಖರ್ಜೂರ ಬಳಸಲಾಗುವುದು ಅಂತ ಪ್ರಿಂಟ್ ಆಗಿರುವುದೂ ಇದೆ. ಆಹುತಿ ಸಮರ್ಪಣೆಯ ಪಾಯಸಕ್ಕೆ ಗೋಡಂಬಿ ಇತ್ಯಾದಿ ಹಾಕಕೂಡದು. ಮನುಷ್ಯರು ಸೇವಿಸುವ ಪಾಯಸಕ್ಕೆ ಇವೆಲ್ಲ ಅವಶ್ಯ ಬೇಕು!
ಒಂದಾವರ್ತಿ ಚಂಡೀಹೋಮದ 700 ಆಹುತಿಗೆ ಎಷ್ಟು ಪ್ರಮಾಣದ ಪಾಯಸ ಬೇಕು ?
ಶಾಂತಿರತ್ನಮಾಲಾಯಾಂ - ಪಾಯಸಂ ಪ್ರಸೃತೇಃ ಸಮಮ್ || ಪ್ರಸೃತಿ ಪ್ರಮಾಣ ಅಂದರೆ ಬೊಗಸೆ ಪ್ರಮಾಣದ(ಅರ್ಧ ಬೊಗಸೆ) ಪಾಯಸ ಒಂದು ಆಹುತಿಗೆ ಬೇಕು. ಕಾಯತೀರ್ಥದಿಂದ ಹೋಮಿಸಬೇಕು. ಹೀಗೆ ಹೋಮಿಸಲು ಒಂದು ಕೆಜಿ ಅಕ್ಕಿಯಿಂದ ಮಾಡಿದ ಪಾಯಸ 30-35 ಆಹುತಿಗಳಿಗೇ ಖಾಲಿಯಾಗುತ್ತದೆ. ಆಗ 700 ಪಾಯಸಾಹುತಿ ಸಮರ್ಪಣೆಗೆ 21 ಕೆಜಿ ಅಕ್ಕಿಯಿಂದ ಮಾಡಿದ ಪಾಯಸ ಬೇಕು. ಶತಚಂಡೀ ಪುರಶ್ಚರಣ ಹೋಮಕ್ಕೆ 210 ಕೆಜಿ ಪಾಯಸ, ಸಹಸ್ರಚಂಡೀ ಪುರಶ್ಚರಣ ಹೋಮಕ್ಕೆ 2100 ಕೆಜಿ ಪಾಯಸ ಬೇಕು. ಈ ಪ್ರಮಾಣದಲ್ಲಿ ಪಾಯಸದಿಂದ ಚಂಡೀಹೋಮ ಆಗಿರುವುದು ಬಲು ಅಪರೂಪ.
ಬೊಗಸೆ ಪ್ರಮಾಣದಲ್ಲಿಯೇ ಸೂಕರೀ ಮುದ್ರೆಯಿಂದ ಪಾಯಸವನ್ನು ಹೋಮಿಸುವುದಾದರೆ ಸಾಮಾನ್ಯವಾಗಿ 50 ಆಹುತಿಗೆ ಒಂದು ಕೆಜಿ ಪಾಯಸ ಬೇಕಾಗುತ್ತದೆ. ಆಗ 700 ಆಹುತಿಗೆ 14 ಕೆಜಿ ಪಾಯಸ ಅವಶ್ಯಕ.
ಆದರೆ ಈಗ ಅತಿಹೆಚ್ಚು ಚಂಡೀಹೋಮಗಳಲ್ಲಿ ಬಳಕೆ ಆಗುತ್ತಿರುವುದು ಏಳೆಂಟು ಕೆಜಿ ಪಾಯಸ ಮಾತ್ರ. ಇದು ಅಲ್ಪ ಪ್ರಮಾಣ ಆಗುತ್ತದೆ.
ಶಾರದಾತಿಲಕದಲ್ಲಿ ದುಗ್ಧಾನ್ನಮಕ್ಷಮಾತ್ರಮುದಾಹೃತಮ್ || ಕ್ಷೀರಾನ್ನಕ್ಕೆ ಅಕ್ಷಪ್ರಮಾಣ ಅಂದರೆ ಕರ್ಷಪ್ರಮಾಣ ಹೇಳಿದೆ. ಇದು ಅಂದಾಜು 109 ಗ್ರಾಂ ಆಗುತ್ತದೆ. ಆಗಲೂ 700 ಆಹುತಿಗೆ 21 ಕೆಜಿ ಪಾಯಸ ಬೇಕಾಗುತ್ತದೆ.
ಪೀಠ ಮತ್ತು ಆವರಣ ದೇವತೆಗಳಿಗೆ ಪಾಯಸ ಸಮರ್ಪಿಸುವ ಕ್ರಮ ಅನುಸರಿಸುವುದಾದರೆ 4 ಕೆಜಿ ಪಾಯಸ ಹೆಚ್ಚುವರಿ ಬೇಕಾಗುತ್ತದೆ.
ಇನ್ನು ಪಾಯಸವನ್ನು ಬೆಳಗಿನ ಜಾವ, ಮಧ್ಯರಾತ್ರಿ, ಹಿಂದಿನ ರಾತ್ರಿಯಲ್ಲಿಯೇ ಮಾಡಿಟ್ಟಿರುವುದೂ ಹಲವು ಪ್ರದೇಶಗಳಲ್ಲಿ ನಡೆದಿದೆ. ಹೀಗೆ ಮಾಡಿದರೆ ಹಳಸಲು ಪಾಯಸ ಆಗುತ್ತದೆ. ಪಾಯಸ ಸಿದ್ಧಪಡಿಸಿದ ಒಂದು ಯಾಮದೊಳಗೆ ಅಂದರೆ ಮೂರು ಗಂಟೆಯ ಅವಧಿಯೊಳಗೆ ಆಹುತಿ ಸಮರ್ಪಣೆ ಆಗಬೇಕು.
ಇನ್ನು ಪಾಯಸದ ಅಕ್ಕಿ ಡಿಎನ್ಎ ಮಾಡಿಫೈ ಆಗದ ದೇಶೀತಳಿಯ ಅಕ್ಕಿ ಸಾವಯವ ರೀತಿಯಲ್ಲಿ ಬೆಳೆದಿದ್ದು ಅತ್ಯುತ್ತಮ. ಇದು ದುರ್ಲಭವಾದ್ದರಿಂದ ಸ್ಟೀಮ್ ಅಕ್ಕಿ ಬಿಟ್ಟು ಉಳಿದ ಅಕ್ಕಿಯನ್ನು ಬಳಸುವುದುತ್ತಮ.
ಹಾಗೆಯೇ ದೇಶೀತಳಿಯ ಹಸುವಿನ ಹಾಲು, ತುಪ್ಪ ಅತ್ಯುತ್ತಮ. ಸಿಗದಿದ್ದರೆ ಜೆರ್ಸಿ, ಹೆಚ್ಎಫ್ ಮುಂತಾದ ತಳಿಯ ದನದ ಹಾಲು ಅವತ್ತೇ ಕರೆದಿದ್ದು ಬಳಸಬೇಕಾಗುತ್ತದೆ. ಅದೂ ದುರ್ಲಭವಾದರೆ ನಂದಿನಿ ಹಾಲೇ ಗತಿ.
ಶುದ್ಧ ತುಪ್ಪ ಸಿಗದಿದ್ದಾಗ ನಂದಿನಿ ಮೊದಲಾದ ಬ್ರಾಂಡೆಡ್ ತುಪ್ಪ ಬಳಸುವುದು ಉತ್ತಮ. ಈಗ ಮಾರುಕಟ್ಟೆಯಲ್ಲಿ ಹೋಮದ ತುಪ್ಪವೆಂದು ಅತಿ ಹೆಚ್ಚು ಮಾರಾಟ ಆಗುತ್ತಿರುವುದು ಕಸಾಯಿಖಾನೆಯಲ್ಲಿ ತಯಾರಿಸಿದ ದನದ ಕೊಬ್ಬೇ ಆಗಿದೆ. ಅದೆಷ್ಟೋ ಸಾವಿರ ಚಂಡೀಹೋಮಗಳು ದನದ ಕೊಬ್ಬು ಸೇರಿಸಿದ ಪಾಯಸದಿಂದಲೇ ಆಗಿದೆ.
ಉಂಡೆಬೆಲ್ಲ ಮತ್ತು ಸಕ್ಕರೆಗಳಲ್ಲಿ ಅತಿ ಹೆಚ್ಚು ರಾಸಾಯನಿಕಗಳಿರುವುದರಿಂದ ಯೋಗ್ಯವಲ್ಲ. ವಿಶ್ವಸನೀಯ ಸಾವಯವ ಉಂಡೆಬೆಲ್ಲ, ಕಂದುಸಕ್ಕರೆ ಆಗಿದ್ದರೆ ಬಳಸಬಹುದು. ಮಡ್ಡಿಬೆಲ್ಲ(ಜೋನಿಬೆಲ್ಲ) ಬಳಸುವುದು ವಿಹಿತ.
ಜೇನುತುಪ್ಪದ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಅತಿಹೆಚ್ಚು ಲಭ್ಯವಿರುವುದು ಸಕ್ಕರೆ ಪಾಕವೇ ಆಗಿದೆ. ಪಾಯಸಕ್ಕೆ ಜೇನುತುಪ್ಪ ಹಾಕುವುದಾದರೆ ವಿಶ್ವಸನೀಯ ಮೂಲಗಳಿಂದ ಶುದ್ಧ ಜೇನುತುಪ್ಪ ಸಂಗ್ರಹಿಸುವುದೊಳಿತು.
ಬಿಳಿಎಳ್ಳನ್ನೂ ತೊಳೆದು ಒಣಗಿಸಿ ಬಳಸುವುದುತ್ತಮ.
ನೀರು, ಪಾಯಸ ಬೇಯಿಸುವ ಪಾತ್ರೆ, ಪಾಕ ತಯಾರಿಸುವವರ ಶುದ್ಧಿ ಕೂಡಾ ಆವಶ್ಯಕ.
✍ ರವೀಂದ್ರ ಶರ್ಮಾ ಕೋಣನಕಟ್ಟೆ.
No comments:
Post a Comment
If you have any doubts. please let me know...