April 8, 2025

ಆತ ವಿಜ್ಞಾನಿಯಾಗಲು ಅಜ್ಜಿ ಹೇಳಿದ ಸುಳ್ಳುಗಳೇ ಪ್ರೇರಣೆ!

🌻ದಿನಕ್ಕೊಂದು ಕಥೆ🌻                                            
ನಾವೆಲ್ಲಾ ಅಮ್ಮ ಹೇಳಿದ ಸುಳ್ಳುಗಳು, ಅಪ್ಪ ಹೇಳಿದ ಸುಳ್ಳುಗಳು ಮುಂತಾದ ಜನಪ್ರಿಯ ಪುಸ್ತಕಗಳನ್ನೂ, ಲೇಖನಗಳನ್ನೂ ಓದಿದ್ದೇವೆ. ಆನಂದಿಸಿದ್ದೇವೆ. ಈಗ ಅಜ್ಜಿ ಹೇಳಿದ ಸುಳ್ಳುಗಳ ಬಗ್ಗೆಯೂ ಓದೋಣವೇ? ಅಜ್ಜಿ ಹೇಳಿದ ಸುಳ್ಳಿನಿಂದಾಗಿ ಒಬ್ಬ ಮುಗ್ಧ ಬಾಲಕ ಒಬ್ಬ ಮಹಾನ್ ವಿಜ್ಞಾನಿ ಆದ ಬಗ್ಗೆ ತಿಳಿದುಕೊಳ್ಳೋಣವೇ? ಹದಿನಾರನೇ ಶತಮಾನದಲ್ಲಿ ಇಟಲಿಯಲ್ಲಿ ಗ್ಯಾಲಿಲೀ ಎಂಬ ಸಂಗೀತಗಾರರಿದ್ದರು. ದುರದೃಷ್ಟವಶಾತ್ ಅವರ ಪತ್ನಿ ಅನಾರೋಗ್ಯದಿಂದ ತೀರಿಕೊಂಡರು. ಅವರ ಒಬ್ಬನೇ ಮಗ ಎಂಟು ವರ್ಷ ವಯಸ್ಸಿನ ಹುಡುಗನ ಮುಗ್ಧ ಮನಸ್ಸಿಗೆ ತನ್ನ ತಾಯಿ ಸತ್ತಿದ್ದಾರೆ. ಮತ್ತೆಂದೂ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ಅರ್ಥವಾಗುತ್ತಿರಲಿಲ್ಲ. ಆತ ಯಾವಾಗಲೂ ತಾಯಿಯನ್ನು ನೆನಪಿಸಿಕೊಂಡು ಅಳುತ್ತಿದ್ದ. ಆಕೆಯನ್ನು ನೋಡಬೇಕೆಂದು ಹಠ ಹಿಡಿಯುತ್ತಿದ್ದ.

ಸಂಗೀತಗಾರರಾಗಿದ್ದ ಗ್ಯಾಲಿಲೀಯವರು ತಮ್ಮ ವೃತ್ತಿಯ ನಿಮಿತ್ತ ಊರಿಂದೂರಿಗೆ ಸುತ್ತಬೇಕಿತ್ತು. ಮಗನೊಟ್ಟಿಗೆ ಹೆಚ್ಚಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಅವರ ಮನೆಯಲ್ಲೊಬ್ಬ ಅಜ್ಜಿ ಇದ್ದರು. ಹುಡುಗನ ಪಾಲನೆ-ಪೋಷಣೆಯನ್ನು ಅವರು ನೋಡಿಕೊಳ್ಳುತ್ತಿದ್ದರು. ತನ್ನ ತಾಯಿಯನ್ನು ತೋರಿಸು ಎಂದು ಹುಡುಗ ಅತ್ತಾಗಲೆಲ್ಲ ಅಜ್ಜಿಯವರು ಅವನಿಗೆ ಏನಾದರೂ ತಿಂಡಿ-ತಿನಿಸು ಕೊಟ್ಟು ಸುಮ್ಮನಾಗಿಸುತ್ತಿದ್ದರು. ಬೇರೆ ಏನೇನೋ ಹೇಳಿ ಅವನ ಮನಸ್ಸನ್ನು ಬೇರೆ ಕಡೆ ತಿರುಗಿಸುತ್ತಿದ್ದರು. ಒಂದು ರಾತ್ರಿ ಹುಡುಗನಿಗೆ ತಾಯಿಯ ನೆನಪು ತುಂಬಾ ಕಾಡಿರಬೇಕು. ಆತ ಒಂದೇ ಸಮನೆ ಅಳುತ್ತಿದ್ದ. ಅಜ್ಜಿ ಸಮಾಧಾನ ಮಾಡುವಷ್ಟೂ ಮಾಡಿದರು. ಹುಡುಗ ಸುಮ್ಮನಾಗದಿದ್ದಾಗ ಅವರಿಗೆ ರೋಸಿ ಹೋಗಿರಬೇಕು. ಅವರು ಹುಡುಗನನ್ನು ಮನೆಯಿಂದ ಹೊರಕ್ಕೆ ಕರೆದುಕೊಂಡು ಬಂದರು. ಕತ್ತಲ ರಾತ್ರಿಯಲ್ಲಿ ಬಯಲಿನಲ್ಲಿ ನಿಲ್ಲಿಸಿದರು. ಆಕಾಶದತ್ತ ಕೈ ತೋರಿಸಿ ಮಗು ಸತ್ತವರೆಲ್ಲ ನಕ್ಷತ್ರಗಳಾಗುತ್ತಾರಂತೆ!

ಆಕಾಶದ ಕಡೆ ನೋಡು. ಅಲ್ಲಿರುವ ಸಾವಿರಾರು ನಕ್ಷತ್ರಗಳಲ್ಲಿ ಯಾವುದೋ ಒಂದು ನಕ್ಷತ್ರ ನಿಮ್ಮ ತಾಯಿಯೇ ಇರಬೇಕು. ನೀನು ಗಮನಕೊಟ್ಟು ಹುಡುಕಿದರೆ ಆಕೆ ನಿನಗೆ ಕಾಣಿಸಬಹುದು ಎನ್ನುತ್ತಾ ಅವನನ್ನು ಬಯಲಿನಲ್ಲೇ ಬಿಟ್ಟು ಹೋದರು. ಮುಗ್ಧ ಹುಡುಗ ಅಜ್ಜಿಯ ಮಾತನ್ನು ನಂಬಿಬಿಟ್ಟ. ರಾತ್ರಿ ಬಹಳ ಹೊತ್ತಿನವರೆಗೆ ನಕ್ಷತ್ರಗಳನ್ನೇ ದಿಟ್ಟಿಸಿ ನೋಡುತ್ತಿದ್ದ! ತಾಯಿಯನ್ನು ಹುಡುಕುತ್ತಿ ದ್ದ! ಅಂದಿನಿಂದ ರಾತ್ರಿಯ ಹೊತ್ತು ಬಟ್ಟ ಬಯಲಿನಲ್ಲಿ ನಿಂತು ನಕ್ಷತ್ರಗಳನ್ನು ದಿಟ್ಟಿಸಿ ನೋಡುವುದು ಅವನ ಅಭ್ಯಾಸವಾಗಿ ಬಿಟ್ಟಿತ್ತು. ಆತ ಅನೇಕ ವರ್ಷಗಳವರೆಗೆ ಅದನ್ನೇ ಮಾಡುತ್ತ ಬಂದ. ಆತ ಬೆಳೆದು ದೊಡ್ಡವನಾದಾಗ ಅಸಂಖ್ಯಾತ ನಕ್ಷತ್ರಗಳಲ್ಲಿ ತನ್ನ ತಾಯಿಯನ್ನು ಹುಡುಕುವುದು ವ್ಯರ್ಥವೆಂಬುದು ಅರ್ಥವಾಯಿತು. ಆದರೆ ನಕ್ಷತ್ರಕಾಯಗಳನ್ನು ಗಮನಿಸಿ ನೋಡುವ ಆತನಿಗೆ ಪ್ರಿಯವಾದ ಹವ್ಯಾಸವಾಗಿತ್ತು. ಅವರು ತಮ್ಮದೇ ಆದ ದುರ್ಬೀನನ್ನು ತಯಾರು ಮಾಡಿಕೊಂಡರು. ನಕ್ಷತ್ರಕಾಯಗಳ ಗ್ರಹಗಳ ಅಧ್ಯಯನ ಮಾಡುತ್ತಾ ಮಾಡುತ್ತಾ ಅವರು ಬಹು ದೊಡ್ಡ ಖಗೋಳ ಶಾಸ್ತ್ರಜ್ಞರಾದರು!

ಅವರ ಹೆಸರು ಗೆಲಿಲಿಯೋ ಗ್ಯಾಲಿಲೀ(1564-1642). ಅವರು ಗುರು ಮತ್ತು ಶುಕ್ರ ಗ್ರಹಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದರು. ಅವುಗಳಿಗಿರುವ ಉಪಗ್ರಹಗಳನ್ನು ಗುರುತಿಸಿದರು. ಅಂದಿನವರೆಗೆ ಎಲ್ಲರ ನಂಬಿಕೆಯಾಗಿದ್ದ ಭೂಮಿಯ ಸುತ್ತ ಎಲ್ಲ ಗ್ರಹಗಳೂ ಸುತ್ತುತ್ತವೆಂಬ ನಂಬಿಕೆಯನ್ನು ಸುಳ್ಳೆಂದು ಹೇಳಿದರು. ಸೂರ್ಯ ಮಧ್ಯದಲ್ಲಿದ್ದಾನೆಂದೂ ಅವನ ಸುತ್ತ ಎಲ್ಲ ಗ್ರಹಗಳೂ ಸುತ್ತುತ್ತವೆಂಬುದನ್ನು ಸಾಬೀತು ಮಾಡಿ ತೋರಿಸಿದ ಮಹಾನ್ ವಿಜ್ಞಾನಿ ಅವರು. ಈ ಕುತೂಹಲಕಾರಿ ಪ್ರಸಂಗವು ಕಾರ್ಕಳದ ಡಾ.ಕೆ. ಜಗದೀಶ ಪೈಗಳು ಬರೆದಿರುವ ರಾಷ್ಟ್ರೋತ್ಥಾನ ಪ್ರಕಾಶನದವರು ಪ್ರಕಟಿಸಿರುವ ಸಾರ್ಥಕ ಜೀವನದ ನಿಚ್ಚಣಿಗೆ ಪುಸ್ತಕದಲ್ಲಿ ನಿರೂಪಿತವಾಗಿದೆ.*

*ಅವರಿಗೆ ಪ್ರಣಾಮಗಳು. ಅಂದು ಅಜ್ಜಿಯವರು ಸುಳ್ಳು ಹೇಳಿ ಬಾಲಕನನ್ನು ಸುಮ್ಮನಾಗಿಸಿರಬಹುದು. ಆದರೆ ತನ್ನ ಮುಗ್ಧ ಬಾಲಕನೊಬ್ಬನಿಗೆ ನಕ್ಷತ್ರಗಳನ್ನು ಗಮನಿಸುವ ಹವ್ಯಾಸವನ್ನು ಹತ್ತಿಸಿದ ಆ ಅಜ್ಜಿಗೂ, ಮಹಾನ್ ಖಗೋಳ ಶಾಸ್ತ್ರಜ್ಞ ಗೆಲಿಲಿಯೋರವರಿಗೂ ಪ್ರಣಾಮಗಳು. ಅಜ್ಜ-ಅಜ್ಜಿಯರು ನಮಗೆ ಹೇಳುವ ಕತೆಗಳನ್ನೂ, ಮಾತುಗಳನ್ನೂ, ಅಡಗೂಲಜ್ಜಿಯ ಕಾಗಕ್ಕ-ಗುಬ್ಬಕ್ಕ ಕತೆಗಳೆಂದು ತಿರಸ್ಕರಿಸಬಾರದು. ಅವನ್ನು ಪುರಸ್ಕರಿಸಿದವರಿಗೆ, ಅರ್ಥೈಸಿಕೊಂಡವರಿಗೆ, ಹೊಸ-ಹೊಸ ಸತ್ಯಗಳ ಸಾಕ್ಷಾತ್ಕಾರ ಆಗಬಹುದಲ್ಲವೇ?

No comments:

Post a Comment

If you have any doubts. please let me know...