ಶ್ರೀ ಹನುಮ ಜಯಂತಿಯ ಶುಭಾಶಯಗಳೊಂದಿಗೆ.
ಸಾಮಾನ್ಯವಾಗಿ ಈ ಹೆಸರುಗಳನ್ನು ಉ.ಕ. ಭಾಗದ ಬಹುತೇಕ ದೈವಭಕ್ತರು ಕೇಳಿರುತ್ತಾರೆ. ಈ ಹೆಸರುಗಳು ಹನುಮನ ವಿವಿಧ ರೂಪಕ್ಕೆ ಹಿಂದಿನ ಋಷಿಮುನಿಗಳು ಇಟ್ಟ ಹೆಸರು.
ಹೌದು, ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿರುವ ಹನುಮನಿಗೆ ಕಾಂತೇಶಸ್ವಾಮಿ ಎಂದು ಹೆಸರು. ಇಲ್ಲಿಂದ ಹೆಚ್ಚು ಕಮ್ಮಿ 60 ಕಿ.ಮೀ. ಶಿಕಾರಿಪುರ. ಅಲ್ಲಿರುವವನು ಭ್ರಾಂತೇಶಸ್ವಾಮಿ (ಹುಚ್ಚೂರಾಯ ಎಂದೂ ಪ್ರಸಿದ್ಧಿಯಾಗಿದೆ).
ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಹನುಮ ಭ್ರಾಂತೇಶಸ್ವಾಮಿ ಎಂದು ಕರೆಯಿಸಿಕೊಂಡರೆ, ಅಲ್ಲಿಂದ ಸುಮಾರು 35 ಕಿ.ಮೀ. ಅಂತರದಲ್ಲಿರುವವನು ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯಲ್ಲಿ ನೆಲೆಸಿರುವ ಶಾಂತೇಶಸ್ವಾಮಿ
ಈ ಮೂರು ಊರುಗಳ ದೇವಾಲಯದಲ್ಲಿನ ಹನುಮನ ಮೂರ್ತಿಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ದೂರ್ವಾಸ, ವಶಿಷ್ಠ ಮತ್ತು ವ್ಯಾಸ ಮುನಿಗಳು ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿ ಇದೆ. ಇದಕ್ಕೆ ಸಂಬಂಧಪಟ್ಟ ಸೂಕ್ತ ಐತಿಹಾಸಿಕ ದಾಖಲೆಗಳನ್ನು ಕೂಡ ಇಲ್ಲಿ ನೋಡಬಹುದು.ಈ ಮೂರು ಊರಿನ ಹನುಮನರನ್ನು ಸೂರ್ಯೋದಯದಿಂದ ಸೂರ್ಯಾಸ್ತ ಆಗುವುದೊರಳಗಾಗಿ ದರ್ಶನ ಪಡೆದುಕೊಳ್ಳುವುದು ವಿಶೇಷ. ಸಾಡೇಸಾತಿ, ಅಷ್ಟಮ, ಅರ್ಧಾಷ್ಟಮ, ಪಂಚಮ ಶನಿಕಾಟದಲ್ಲಿರುವವರು ತಪ್ಪಿಸದೇ ಇಲ್ಲಿಗೆ ಹೋಗಬೇಕು. ಅಷ್ಟೊಂದು ಮಹತ್ವವಾದ ಸ್ಥಳ ಮಹಿಮೆ ಈ ಮೂರು ಸ್ಥಳಗಳಿಗಿವೆ.
ಹಲವಾರು ರೋಗ, ರುಜಿನಗಳಿಗೆ, ಅನೇಕ ಸಮಸ್ಯೆಗಳನ್ನು ಈ ಹನುಮರು ಪರಿಹರಿಸುತ್ತಾರೆ ಎಂಬ ನಂಬಿಕೆ ಜನರದ್ದು. ಹೀಗಾಗಿ ಅಧಿಕ ಮಾಸದ ಶನಿವಾರಗಳಂದು ಇಲ್ಲಿ ಜನಜಾತ್ರೆಯೇ ನೆರೆದಿರುತ್ತದೆ
ಹನುಮ ಚಿರಂಜೀವಿಯಾಗಿರುವುದರಿಂದ ಈಗಲೂ ಜೀವಂತವಾಗಿದ್ದು ಧ್ಯಾನಾಸಕ್ತನಾಗಿದ್ದಾನೆ ಎಂಬುದು ಪುರಾಣಗಳಿಂದ ತಿಳಿದು ಬರುತ್ತದೆ. ಅದಕ್ಕೆಂದೇ ಹನುಮನ ಭಕ್ತರು ಜಗತ್ತಿನಲ್ಲಿ ಸಾಕಷ್ಟಿದ್ದಾರೆ.
ಈ ಅಧಿಕ ಮಾಸದಲ್ಲಿ ಕಾಂತೇಶ, ಭ್ರಾಂತೇಶ ಮತ್ತು ಶಾಂತೇಶರ ದರ್ಶನ ಪಡೆದುಕೊಂಡು ಪುಣ್ಯವಂತರಾಗಬೇಕೆನ್ನುವವರು ತಡ ಮಾಡದೇ ಹೊರಟರೇ ಅದೃಷ್ಟವಂತರೆನ್ನಬಹುದು.
ಇನ್ನು, ಈಗಲೂ ಹಳ್ಳಿ ಕಡೆ ಅಧಿಕ ಮಾಸದಲ್ಲಿ ಅನೇಕ ಪೂಜೆ, ಪುನಸ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುತ್ತವೆ. ಏಕೆಂದರೆ ದೇವಾನುದೇವತೆಗಳು ಅಧಿಕ ಮಾಸದಲ್ಲಿ ಭೂಲೋಕದಲ್ಲಿ ಸಂಚರಿಸುತ್ತಾರೆ ಎಂಬ ನಂಬಿಕೆ ನಮ್ಮ ಹಿಂದೂ ಧರ್ಮೀಯರದು.
ಈ ಊರುಗಳ ಹತ್ತಿರದ ಭಕ್ತರು ಪ್ರತಿ ವರ್ಷದ ಶ್ರಾವಣದಲ್ಲೂ ಈ ದೇವಸ್ಥಾನಗಳಿಗೆ ಹೋಗುತ್ತಾರೆ. ದೂರದೂರಿನವರು ಕೇವಲ ಅಧಿಕ ಮಾಸದಲ್ಲಿ ಮಾತ್ರ ಇಲ್ಲಿ ಬರುತ್ತಾರೆ. ಏಕೆಂದರೆ ಇಲ್ಲಿ ಹೋಗಿ ಬಂದರೆ ಕಾಶಿ ಮತ್ತು ರಾಮೇಶ್ವರಕ್ಕೆ ಹೋಗಿ ಬಂದಷ್ಟು ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಆಸ್ತಿಕರದು.
ಇನ್ನು ಇಲ್ಲಿಗೆ ಭೇಟಿ ನೀಡುವ ಕೆಲವರು ಶನಿಕಾಟ ಹೇಳ ಹೆಸರಿಲ್ಲದಂತೆ ಪೇರಿ ಕಿತ್ತುತ್ತದೆ ಎಂಬುದಾಗಿ ಅಪಾರವಾಗಿ ನಂಬಿದ್ದಾರೆ. ಶ್ರಾವಣ ಮತ್ತು ಅಧಿಕ ಮಾಸದ ಶನಿವಾರಗಳಂದು ಇಲ್ಲಿ ಬರುವ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಇರುತ್ತದೆ. ಅನ್ನದಾಸೋಹಕ್ಕೆ ದೇಣಿಗೆ ನೀಡಬೇಕೆನ್ನವವರು ಇಂತಹ ಪುಣ್ಯ ಸ್ಥಳಗಳಲ್ಲಿ ದೇಣಿಗೆ ನೀಡಿ ಪಾವನರಾಗಬಹುದು.
ಇನ್ನೊಂದು ವಿಶೇಷವೆಂದರೆ, ಮೂರು ಅಥವಾ ನಾಲ್ಕು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಲ್ಲಿ ಈ ಮೂರು ದೇವಾಲಯಗಳಿಗೆ ಭೇಟಿ ನೀಡಿ, ಹನುಮನ ದರ್ಶನ ಪಡೆಯುವುದು ತುಂಬಾ ಶುಭ ಎನ್ನುವ ನಂಬಿಕೆ ಚಾಲನೆಯಲ್ಲಿದೆ.
ಮೂರ್ತಿ ಪ್ರತಿಷ್ಠಾಪಿಸುವಾಗ ಕಾಂತೇಶನ ಕಣ್ಣಲ್ಲಿ, ಭ್ರಾಂತೇಶನ ನೆತ್ತಿಯಲ್ಲಿ, ಶಾಂತೇಶನ ಪಾದದಲ್ಲಿ ಅತೀ ಶ್ರೇಷ್ಠವಾದ ಸಾಲಿಗ್ರಾಮವನ್ನು ಸ್ಥಾಪಿಸಲಾಗಿದೆ. ದರ್ಶನ ಮಾಡುವಾಗ ಈ ಸಾಲಿಗ್ರಾಮಗಳನ್ನೂ ಭಕ್ತರು ಕಣ್ತುಂಬಿಕೊಳ್ಳುವುದು ಮಹತ್ವದ್ದು.
No comments:
Post a Comment
If you have any doubts. please let me know...