ದಿನಕ್ಕೊಂದು ಕಥೆ
ತೇನ್ ಸಿಂಗ್ ಚಿಕ್ಕವನಿದ್ದಾಗ, ಹಿಮಾಲಯದ ತಪ್ಪಲಲ್ಲಿ ಕುರಿ ಕಾಯುತ್ತಿದ್ದ. ಅವನು ಇನ್ನೂ ಬಹಳ ಚಿಕ್ಕವನಿದ್ದಾಗಲೇ, ಅವನ ತಂದೆ ತೀರಿಕೊಂಡಿದ್ದರು, ಅವನ ತಾಯಿ ತೇನ್ ಸಿಂಗ್ ಕುರಿಮೇಯಿಸುವಲ್ಲಿಗೆ ಬುತ್ತಿಕಟ್ಟಿಕೊಂಡು ಬರುತ್ತಿದ್ದಳು. ಮಗನಿಗೆ ಪ್ರೀತಿಯಿಂದ ಊಟ ಮಾಡಿಸಿ, ಮಗೂ ಈ ಹಿಮಾಲಯ ಪರ್ವತ ಬಹಳ ಎತ್ತರವಿದೆ ಎಂದು ಎಲ್ಲರೂ ಹೇಳುತ್ತಾರೆ, ಇದುವರೆಗೂ ಇದನ್ನು ಯಾರೂ ಹತ್ತಿಲ್ಲ, ಇದನ್ನು ಒಮ್ಮೆ ನೀನು ಹತ್ತಲು ಪ್ರಯತ್ನಪಡು ನೋಡೋಣ ಎನ್ನುತ್ತಿದ್ದಳು.
ಅವಳ ಮಾತಿನಂತೆ ಒಂದು ದಿನ ತೇನ್ ಸಿಂಗ್ ಹಿಮಾಲಯವನ್ನು ಹತ್ತಿ ಇಳಿದೇ ಬಿಟ್ಟ. ಆಗ ಅವನನ್ನು ಸಂದರ್ಶನ ಮಾಡಲು ಬಹಳ ಜನರು ಬಂದಿದ್ದರು. ಅವರೆಲ್ಲರೂ ಅವನ ಸಾಧನೆ ಬಗ್ಗೆ ಅನೇಕ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು. ಇಷ್ಟು ದೊಡ್ಡ ಹಿಮಾಲಯ ಪರ್ವತವನ್ನು ಇದುವರೆಗೂ ಯಾರೂ ಹತ್ತಿಲ್ಲ, ನೀವು ಹೇಗೆ ಇದನ್ನ ಹತ್ತಿ ಇಳಿದಿರಿ? ಇದರ ಯೋಚನೆ ನಿಮಗೆ ಹೇಗೆ ಬಂತು? ಇದಕ್ಕಾಗಿ ನೀವುಎಷ್ಟು ಸಮಯ ತೆಗೆದುಕೊಂಡಿರಿ, ಹತ್ತುವಾಗ ಏನೇನು ತೊಂದರೆ ಆಯಿತು, ಹೀಗೆಲ್ಲಾ ಅನೇಕ ಪ್ರಶ್ನೆ ಕೇಳಿದರು.
ಆಗ ತೇನ್ ಸಿಂಗ್, ನಾನು ಚಿಕ್ಕವನಿದ್ದಾಗ ನನ್ನ ತಾಯಿ ಈ ಹಿಮಾಲಯವನ್ನು ತೋರಿಸಿ ಇದನ್ನು ಇದುವರೆಗೂ ಯಾರು ಹತ್ತಿಲ್ಲ ನೀನು, ಹತ್ತಲೇಬೇಕು ಎಂದು ನನಗೆ ಆಗಾಗ ಒತ್ತಾಯಿಸಿ ಹೇಳುತ್ತಿದ್ದಳು, ಆಗಲೇ ನನ್ನ ಮನಸ್ಸಿನಲ್ಲೇ, ನಾನು ಹಿಮಾಲಯವನ್ನು ಹತ್ತಿಯಾಗಿತ್ತು, ಈಗ ನನ್ನ ಈ ದೇಹ ಮಾತ್ರ , ಹಿಮಾಲಯವನ್ನು ಹತ್ತಿ ಇಳಿದಿದೆ, ಅಷ್ಟೇ ಎಂದು ಉತ್ತರಿಸಿದ.
ತಾಯಿಯ ಒಂದು ಮಾತು, ಅವರಿಂದ ಇಂತಹ ಸಾಹಸವನ್ನು ಮಾಡಿಸಿದೆ ಎಂದಮೇಲೆ, ಆ ತಾಯಿಯ ಮಾತು ಹೇಗಿರಬೇಕಲ್ಲವೇ! ತಾಯಿ ಹೇಳಿದ ಮಾತ್ರಕ್ಕೆ ಅದನ್ನು ಕೇಳಿ ಸಾಧಿಸಿದ ಈತನ ಮನಸ್ಸು ಕೂಡಾ ಒಂದು ವಿಶಿಷ್ಟವಾದ ಧೃಡ ಸಂಕಲ್ಪದಿಂದ ಕೂಡಿದ್ದು ಅಲ್ಲವೇ?
ಆ ತಾಯಿಯ ಮಾತಿನಲ್ಲಿ ಎಂತಹ ಅದ್ಭುತ, ಸಾಮರ್ಥ್ಯ ಶಕ್ತಿ ಇತ್ತೊ ಹಾಗೆಯೇ ಅದನ್ನು ಸ್ವೀಕರಿಸಿದ ಮಗನ ಮನಸ್ಸಿನಲ್ಲಿಯೂ ಅಷ್ಟೇ ಅದ್ಭುತವಾದ ಧೃಡವಾದ ಸಂಕಲ್ಪವೂ ಇತ್ತು.
ಇದೇ ರೀತಿಯಲ್ಲಿ ಮೊದಲು ಕುರಿ ಕಾಯುವ ಕೆಲಸವನ್ನು ಮಾಡುತ್ತಿದ್ದ ಕಾಳಿದಾಸನನ್ನು ಕೂಡಾ ಅವನ ಮನಸ್ಸೇ ಕವಿರತ್ನ ಕಾಳಿದಾಸನನ್ನಾಗಿ ಮಾರ್ಪಡಿಸಿತು, ದೋಣಿ ಕಟ್ಟುವವನ ಮಗ ಅಬ್ದುಲ್ ಕಲಾಂ ಕೂಡಾ ಇಂತಹಾ ಅದ್ಭುತ ವ್ಯಕ್ತಿ ಆಗಿದ್ದು ಕೂಡಾ ಅವರ ದೃಢ ಮನಸ್ಸಿನಿಂದಲೇ.
ಹೀಗೆ ಎಲ್ಲವುದಕ್ಕೂ, ನಮ್ಮ ಮನಸ್ಸೇ ಕಾರಣ. ಎಲ್ಲವೂ ನಮ್ಮ ಮನಸ್ಸಿನಲ್ಲಿಯೇ ಇರುವುದು. ಮನುಷ್ಯನ ಮನಸ್ಸು ಸುಂದರವಾಗಿರಬೇಕು, ಸಶಕ್ತ ಹಾಗೂ ಸ್ವಚ್ಛವಾಗಿರಬೇಕು. ಆಗ ಮನುಷ್ಯನಲ್ಲಿ ಅಸಾಧ್ಯವಾದದ್ದನ್ನು ಸಾಧ್ಯ ಮಾಡಲು ಸಾಧ್ಯವಾಗುತ್ತದೆ.
ಈ ರೀತಿಯಲ್ಲಿ ಇರಬೇಕೆಂದು ನಾವೆಲ್ಲರೂ ಬಯಸುತ್ತೇವೆ, ಆದರೆ ಈ ರೀತಿಯಾಗಿ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟು ಕೊಳ್ಳುವುದು ತುಂಬಾ ಕಷ್ಟ. ನಮ್ಮ ಮನಸ್ಸನ್ನು ದೋಷ ಮುಕ್ತವಾಗಿ, ತಿಳಿ ನೀರಿನಂತೆ ಮಾಡಿಕೊಂಡಾಗ ಮಾತ್ರ ಮನಸ್ಸಿನಲ್ಲಿರುವ ಬೇಡದ, ಬಗ್ಗಡ, ಕಸವೆಲ್ಲಾ, ಕೊಚ್ಚಿಹೋಗಿ, ಮನಸ್ಸು ತಿಳಿ ನೀರಿನಂತಾಗುವುದು. ಆಗಲೇ ಅದರಲ್ಲಿ ನಮ್ಮ ನಿಜವಾದ ಸ್ವಚ್ಛ ಮುಖ ಕಾಣುವುದು.
No comments:
Post a Comment
If you have any doubts. please let me know...