ದಿನಕ್ಕೊಂದು ಕಥೆ
ಹಳ್ಳಿಯೊಂದಕ್ಕೆ ಬೌದ್ಧ ಭಿಕ್ಷುಗಳೊಭ್ಬರು ಬಂದಿದ್ದರು. ಸಾಮ್ರಾಟ ಅಶೋಕ ಅವರಲ್ಲಿಗೆ ಹೋಗಿ ಭಿಕ್ಷುಗಳ ಚರಣಕ್ಕೆ ಎರಗಿದ. ಇದು ಅಶೋಕನ ಮಂತ್ರಿಯೊಬ್ಬನಿಗೆ ಇಷ್ಟವಾಗಲಿಲ್ಲ. ಅಶೋಕನಂತಹ ಮಹಾ ಸಾಮ್ರಾಟ ಹಳ್ಳಿಯಲ್ಲಿ ಭಿಕ್ಷೆ ಬೇಡುತ್ತಿರುವ ಭಿಕ್ಷುವಿನ ಪಾದಕ್ಕೆ ನಮಿಸುವುದು ಎಂದರೇನು? ಎಂದು ಅವನ ಭಾವನೆ.
ಅರಮನೆಗೆ ಹಿಂತಿರುಗುತ್ತಿದ್ದಂತೆಯೇ, ಅವನು ಸಾಮ್ರಾಟನಿಗೆ ನೀವು ಮಾಡಿದ್ದು ನನಗೆ ಸ್ವಲ್ಪವೂ ಸರಿ ಎನಿಸಲಿಲ್ಲ. ನಿಮ್ಮಂತಹ ದೊಡ್ಡ ಸಾಮ್ರಾಟ, ಹೋಗಿ ,ಹೋಗಿ ಅಂತಹ ಒಬ್ಬ ಸಾಧಾರಣ ಭಿಕಾರಿಯ ಚರಣಕ್ಕೆ ವಂದಿಸುವುದು ಎಂದರೆ, ಇದು ನನಗೆ ಸ್ವಲ್ಪ ಕೂಡಾ ಸರಿ ಕಾಣಲಿಲ್ಲ, ಎಂದು ಹೇಳಿದ. ಆಗ ಅಶೋಕ ಏನೂ ಮಾತನಾಡದೇ ನಕ್ಕು ಸುಮ್ಮನಾದ.
ಸ್ವಲ್ಪ ದಿನಗಳ ನಂತರ ಸಾಮ್ರಾಟ ಅಶೋಕ, ಆ ಮಂತ್ರಿಯನ್ನು ಕರೆದು, ನಾನೊಂದು ಪ್ರಯೋಗವನ್ನು ಮಾಡಬೇಕಿದೆ. , ನಾನು ಕೊಡುವ ಈ ಸಾಮಾನುಗಳನ್ನು ನೀನು ತೆಗೆದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಮಾರಿಕೊಂಡು ಬರಬೇಕು, ಎಂದು ಹೇಳಿದ. ಆ ಸಾಮಾನುಗಳೆಂದರೆ, ಒಂದು ಕುರಿಯ ತಲೆ, ಒಂದು ಹಸುವಿನ ತಲೆ, ಇನ್ನೊಂದು ಮನುಷ್ಯನ ತಲೆ, ಇತರ ಅನೇಕ ಪ್ರಾಣಿಗಳ ತಲೆಗಳಿದ್ದವು. ಇವುಗಳನ್ನು ಮಾರುಕಟ್ಟೆಯಲ್ಲಿ ಮಾರಿಕೊಂಡು ಬಾ ಎಂದು ಹೇಳಿದ ಅಶೋಕ.
ಈ ಸಾಮ್ರಾಟರು ಏನು ಮಾಡಲು ಹೊರಟಿದ್ದಾರೆ? ಎಂದು ಯೋಚಿಸುತ್ತಾ ಮಂತ್ರಿ, ಅವುಗಳನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋದ. ಹಸುವಿನ ತಲೆ , ಕುದುರೆಯ ತಲೆ, ವಿವಿಧ ಪ್ರಾಣಿಗಳ ತಲೆಗಳೆಲ್ಲವೂ ಬೇಗ ಮಾರಾಟವಾದವು. ಆದರೆ ಮನುಷ್ಯನ ತಲೆ ಮಾತ್ರ ಮರಾಟವಾಗಲಿಲ್ಲ,ಯಾರೂ ಅದನ್ನು ಕೊಂಡುಕೊಳ್ಳಲ್ಲಿಲ್ಲ.ಅದರ ಹತ್ತಿರವೂ ಸುಳಿಯಲಿಲ್ಲ . ಅದೊಂದನ್ನು ವಾಪಾಸು ತೆಗೆದುಕೊಂಡು ಸಾಮ್ರಾಟರ ಬಳಿಗೆ ಬಂದ ಮಂತ್ರಿ.
ಆಗ ಸಾಮ್ರಾಟ , ಹೋಗಲಿ ಅದನ್ನು ಉಚಿತವಾಗಿ ಯಾರಿಗಾದರೂ ಕೊಟ್ಟು ಬಾ, ಎಂದು ಮಂತ್ರಿಗೆ ಹೇಳಿದ.
ಮಂತ್ರಿ ಪುನಃ ಹಿಂತುರುಗಿ ಮಾರುಕಟ್ಟೆಗೆ ಹೋಗಿ , ಇದನ್ನು ಪುಕ್ಕಟೆಯಾಗಿ ಕೊಡುತ್ತಿದ್ದೇನೆ, ಯಾರು ಬೇಕಾದರೂ ತೆಗೆದುಕೊಳ್ಳಿ ಎಂದು ಹೇಳಿದ.
ಆಗ ಜನರು , ಕೋಪದಿಂದ ನಿಮಗೇನು ತಲೆಕೆಟ್ಟಿದೆಯೇ? ಈ ಅನಿಷ್ಟವನ್ನು ಯಾರು ಇಟ್ಟು ಕೊಳ್ಳುತ್ತಾರೆ? ಇದನ್ನು ಯಾರು ಕೊಂಡು ಕೊಳ್ಳುತ್ತಾರೆ? ತೆಗೆದುಕೊಂಡು ಹೋಗಿ ,ಸ್ಮಶಾನದಲ್ಲಿ ಬಿಸಾಕಿ! ಈ ಅಸಹ್ಯವನ್ನು ಇದಕ್ಕೆ ಅದೇ ಸರಿಯಾದ ಜಾಗ" ಎಂದು ಮಂತ್ರಿಗೆ ಹೇಳಿದರು. ಮನುಷ್ಯನ ತಲೆಗೆ ಸ್ಮಶಾನವೇ ಸರಿಯಾದ ಜಾಗವೆಂದು ಮಂತ್ರಿಗೆ ಮನವರಿಕೆಯಾಯಿತು.
ಮಂತ್ರಿ ಸಾಮ್ರಾಟನ ಬಳಿಗೆ ಬಂದು, ಇದನ್ನು ಉಚಿತವಾಗಿ ಕೊಟ್ಟರೂ ಸ್ವೀಕರಿಸಲು ಯಾರೂ ಸಿದ್ದರಿಲ್ಲ ಎಂದು ಹೇಳಿದ.
ಆಗ ಅಶೋಕ, ನಾನು ಸತ್ತ ನಂತರ ನನ್ನ ತಲೆಯನ್ನು ನೀನು ಮಾರಲು ಹೋದಲ್ಲಿ ಆಗ ಏನಾದರೂ ವ್ಯತ್ಯಾಸ ಆಗುತ್ತದೆಯೇ? ಎಂದು ಕೇಳಿದ.
ಸಾಮ್ರಾಟನ ಈ ಪ್ರಶ್ನೆಗೆ ಉತ್ತರ ಹೇಗೆ ಹೇಳುವುದೆಂದು ಮಂತ್ರಿಗೆ ಸ್ವಲ್ಪ ಕಸಿವಿಸಿ ಯಾಯಿತು. ಪ್ರಭೂ, ನೀವು ಕ್ಷಮಿಸುವುದಾದರೆ, ನಾನು ಹೇಳಬಲ್ಲೆ, ನಿಮ್ಮ ತಲೆಯನ್ನು ಸಹಾ ಯಾರೂ ಕೊಂಡುಕೊಳ್ಳುವುದಿಲ್ಲ. ಇಂದು ನನಗೆ ಮೊಟ್ಟಮೊದಲ ಬಾರಿಗೆ ಅರಿವಾಯಿತು. ಮನುಷ್ಯನ ತಲೆಗೆ ಯಾವ ಬಿಡಿ ಕಾಸಿನ ಬೆಲೆಯೂ ಇಲ್ಲವೆಂದು, ಎಂದು ಹೇಳಿದ.
ಆಗ ಸಾಮ್ರಾಟ, ಈ ಬೆಲೆ ಇಲ್ಲದ ಶಿರವನ್ನು ನಾನೊಬ್ಬ ಭಿಕ್ಷುವಿನ ಚರಣಗಳಲ್ಲಿ ಇರಿಸಿದಾಗ ನಿನಗೇಕೆ ಅಷ್ಟೊಂದು ಅಸಮಾಧಾನವಾಯಿತು?
ಮನುಷ್ಯನ ಶಿರಕ್ಕೆ ಯಾವ ಬೆಲೆಯೂ ಇಲ್ಲ ಎಂದಾದಮೇಲೆ, ತಲೆಬಾಗಲು ಅಹಂಕಾರವೇಕೆ? ಎಂದು ಕೇಳಿದ.
ಮಂತ್ರಿಗೆ ತನ್ನ ತಪ್ಪಿನ ಅರಿವಾಯಿತು, ತನಗೆ ಬುದ್ಧಿ ಕಲಿಸಲೆಂದೇ , ಸಾಮ್ರಾಟ ಈ ರೀತಿಯ ಆಟ ಕಟ್ಟಿದ ಎಂದು ಅವನಿಗೆ ಅರ್ಥವಾಯಿತು. ಮನುಷ್ಯ ಬದುಕಿದ್ದಾಗ,ಅವನ ತಲೆಗೆ ಇದ್ದ ಬೆಲೆ, ಸತ್ತನಂತರ ಇಲ್ಲ ಎನ್ನುವ ಸತ್ಯ ತಿಳಿಯಿತು.ಎಷ್ಟು ದೊಡ್ಡ ಅಧಿಕಾರದಲ್ಲಿರುವ ವ್ಯಕ್ತಿಗಳ, ಶ್ರೀಮಂತವ್ಯಕ್ತಿಗಳ ,ತಲೆ ಬುರುಡೆಯಾದರೂ, ಅವರು ಸತ್ತ ನಂತರ, ಅದನ್ನು ಮುಟ್ಟಲಿಕ್ಕೂ ಎಲ್ಲರೂ ಹೆದರುತ್ತಾರೆ, ಅಸಹ್ಯ ಪಡುತ್ತಾರೆ, ಜೀವಂತವಾಗಿದ್ದಾಗಲಷ್ಟೇ ಅದರ ಬೆಲೆ, ಅಹಂಕಾರ ,ಹಾರಾಟ ಅಷ್ಟೇ. ಸತ್ತ ನಂತರ ಅದೊಂದು ಕಸವಷ್ಟೇ.
No comments:
Post a Comment
If you have any doubts. please let me know...