October 11, 2024

ನಮಸ್ಕಾರಗಳಲ್ಲಿ ಏಳು ವಿಧ

ತ್ರಿಕೋಣಮಥ ಷಟ್ಕೋಣಮರ್ಧಚಂದ್ರಂ ಪ್ರದಕ್ಷಿಣಂ |

ದಂಡಮಷ್ಟಾಂಗಮುಗ್ರಂ ಚ ಸಪ್ತಧಾ ನತಿಲಕ್ಷಣಂ ||

ತ್ರಿಕೋಣ, ಷಟ್ಕೋಣ, ಅರ್ಧಚಂದ್ರ, ಪ್ರದಕ್ಷಿಣ, ದಂಡ, ಅಷ್ಟಾಂಗ, ಉಗ್ರ ಎಂಬುದಾಗಿ ನಮಸ್ಕಾರ ಕ್ರಮವು ಏಳು ವಿಧವಾಗಿರುವುದು. 

ತ್ರಿಕೋಣ ನಮಸ್ಕಾರ ಕ್ರಮ- ಸಾಧಕನು ಪೂರ್ವಾಭಿಮುಖವಾಗಿ ಕುಳಿತುಕೊಂಡು ಪೂಜೆ ಮಾಡುವಾಗ ಪಶ್ಚಿಮ ದಿಕ್ಕಿನಿಂದ ಹೊರಟು, ಈಶಾನ್ಯ ದಿಕ್ಕಿನ ಕಡೆಗೆ ಹೋಗಿ ನಮಸ್ಕಾರ ಮಾಡುವುದು. ಉತ್ತರಾಭಿಮುಖವಾಗಿ ಕುಳಿತುಕೊಂಡು ಪೂಜೆ ಮಾಡಿದಲ್ಲಿ ದಕ್ಷಿಣ ದಿಕ್ಕಿನಿಂದ ವಾಯುವ್ಯ ದಿಕ್ಕಿನ ಕಡೆಗೆ ನಮಸ್ಕಾರ ಮಾಡಬೇಕು ಇದು ತ್ರಿಕೋಣ ನಮಸ್ಕಾರ ಕ್ರಮ. 

ದಕ್ಷಿಣ ದಿಕ್ಕಿನಿಂದ ವಾಯುವ್ಯ ದಿಕ್ಕಿಗೆ ಬಂದು ಅಲ್ಲಿಂದ ಈಶಾನ್ಯ ದಿಕ್ಕಿಗೆ ಬಂದು ಅಲ್ಲಿಂದ ತಾನು ಮೊದಲು ಹೊರಟ ದಕ್ಷಿಣ ದಿಕ್ಕಿಗೆ ಬಂದು ಸೇರಿ, ತ್ರಿಕೋಣಾಕಾರದಂತೆ ಮಾಡುವುದು ತ್ರಿಕೋಣ ನಮಸ್ಕಾರ ಕ್ರಮ. ಈ ವಿಧವಾದ ನಮಸ್ಕಾರ ಕ್ರಮವು ತ್ರಿಪುರಾದೇವಿಗೆ ಅತ್ಯಂತ ಪ್ರೀತಿಕರವಾದುದು.

ಷಟ್ಕೋಣ ನಮಸ್ಕಾರ - ಸಾಧಕನು ದಕ್ಷಿಣ ದಿಕ್ಕಿನ ಕೋಣದಿಂದ ಹೊರಟು, ವಾಯುವ್ಯ ಕೋಣವನ್ನು ಸೇರಿ, ಅಲ್ಲಿಂದ ಈಶಾನ್ಯಕ್ಕೆ ಬಂದು (ಇಲ್ಲಿಗೆ ಒಂದು ತ್ರಿಕೋಣವಾಯಿತು) ಪುನಃ ಅಲ್ಲಿಂದ ಹೊರಟು ಆಗ್ನೇಯ ದಿಕ್ಕಿಗೆ ಬಂದು, ಅಲ್ಲಿಂದ ನೈಋತ್ಯ ದಿಕ್ಕಿಗೆ ಬಂದು, ಅಲ್ಲಿಂದ ಉತ್ತರ ದಿಕ್ಕಿಗೆ ಬಂದು, ಅಲ್ಲಿಂದ ಪುನಃ ಆಗ್ನೇಯ ದಿಕ್ಕಿಗೆ ಬಂದು ಸೇರಬೇಕು ( ಇದು ಎರಡನೆಯ ತ್ರಿಕೋಣವು) ಈ ಎರಡು ಎರಡು ತ್ರಿಕೋಣದಿಂದ ಷಟ್ಕೋಣ ಆಯಿತು. ಈ ಷಟ್ಕೋಣವನ್ನು ಪ್ರದಕ್ಷಿಣೆ ಮಾಡಿ ಬಂದು ನಮಸ್ಕಾರ ಮಾಡಿದರೆ, ಶಿವನಿಗೂ ಮತ್ತು ದೇವಿಗೂ ಅತ್ಯಂತ ಪ್ರೀತಿಕರವಾದುದು. ಇದು ಷಟ್ಕೋಣ ನಮಸ್ಕಾರ ಕ್ರಮವು.

ಅರ್ಧಚಂದ್ರ ನಮಸ್ಕಾರ- ಸಾಧಕನು ದಕ್ಷಿಣ ದಿಕ್ಕಿನಿಂದ ಹೊರಟು ವಾಯುವ್ಯ ದಿಕ್ಕಿಗೆ ಹೋಗಿ ಅಲ್ಲಿಂದ ಹಿಂತಿರುಗಿ ಪುನಃ ದಕ್ಷಿಣ ದಿಕ್ಕಿಗೆ ಬಂದು ಸೇರಿ, ನಮಸ್ಕಾರ ಮಾಡುವುದು ಅರ್ಧಚಂದ್ರ ನಮಸ್ಕಾರವೆನಿಸುವುದು. 

ಪ್ರದಕ್ಷಿಣ - ಸಾಧಕನು ಒಂದಾವರ್ತಿ ವರ್ತುಲಾಕಾರವಾಗಿ ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡಿದಲ್ಲಿ ಆ ನಮಸ್ಕಾರವು ಪ್ರದಕ್ಷಿಣ ಕ್ರಮವಾಗುವುದು. 

ದಂಡ- ಸಾಧಕನು ತಾನು ಕುಳಿತಿರುವ ಆಸನವನ್ನು ಬಿಟ್ಟೆದ್ದು, ದುರ್ಗಾದೇವಿಗೆ ಪ್ರದಕ್ಷಿಣೆ ಮಾಡದೇ ಹಾಗೇ ಸುಮ್ಮನೇ ದಂಡದಂತೆ ಭೂಮಿಯ ಮೇಲೆ ಬಿದ್ದಲ್ಲಿ, ಆ ನಮಸ್ಕಾರವು ದಂಡ ಎಂದು ಹೇಳುವರು. 

ಅಷ್ಟಾಂಗ -

ಪೂರ್ವವದ್ದಂಡವದ್ಭೂಮೌ ನಿಪತ್ಯ ಹೃದಯೇನ ತು | ಚಿಬುಕೇನ ಮುಖೇನಾಥ ನಾಸಯಾ ಹನುಕೇನ ಚ ||

ಬ್ರಹ್ಮರಂದ್ರೇಣ ಕರ್ಣಾಭ್ಯಾಂ ಯದ್ಭೂಮಿಸ್ಪರ್ಶನಂ ಕ್ರಮಾತ್ | ಸ ಚಾಷ್ಟಾಂಗ ಇತಿ ಪ್ರೋಕ್ತೋ ನಮಸ್ಕಾರೋ ಮನೀಷಿಭಿಃ || 

 ಸಾಧಕನು ಪೂರ್ವದಂತೆ ಭೂಮಿಯ ಮೇಲೆ ಮಲಗಿ, ಹೃದಯವನ್ನೂ, ಗಲ್ಲವನ್ನೂ, ಮುಖವನ್ನೂ, ಮೂಗನ್ನೂ, ಕೆಳತುಟಿಯನ್ನೂ, ಭೂಮಿಗೆ ಸೋಕಿಸಿ, ಬಳಿಕ ಬ್ರಹ್ಮರಂದ್ರವನ್ನೂ, ಎರಡು ಕಿವಿಗಳನ್ನೂ ಭೂಮಿಗೆ ಸ್ಪರ್ಶಮಾಡುವಂತೆ ಚಲಿಸದೇ ನಮಸ್ಕಾರ ಮಾಡಿದಲ್ಲಿ ಅದು ಅಷ್ಟಾಂಗ ನಮಸ್ಕಾರವಾಗುದು. 

ಉಗ್ರ ನಮಸ್ಕಾರ- ಸಾಧಕನು ವರ್ತುಲಾಕಾರವಾಗಿ ಮೂರು ಪ್ರದಕ್ಷಿಣೆಯನ್ನು ಮಾಡಿ, ಬಳಿಕ ಶಿರಸ್ಸನ್ನು ಭೂಮಿಯ ಮೇಲೆ ಬ್ರಹ್ಮರಂದ್ರವು(ನೆತ್ತಿ) ತಗಲುವಂತೆ, ದಂಡಾಕಾರವಾಗಿ ನಮಸ್ಕಾರ ಮಾಡಿದರೆ ಅದು ಉಗ್ರ ನಮಸ್ಕಾರವಾಗುದು. ಇದು ವಿಷ್ಣುವಿಗೆ ಪ್ರೀತಿಕರ ಎಂದು ಹೇಳುವರು. 

ದೇವಿಗೆ ಯಾವಾಗಲೂ ಅತ್ಯಂತ ಪ್ರೀತಿಯ‌ನ್ನುಂಟು ಮಾಡುವ ಉಗ್ರವೆಂಬ ಸಮಸ್ಕಾರವು ಎಲ್ಲಾ ನಮಸ್ಕಾರಗಳಲ್ಲಿ ಅತ್ಯಂತ ಉತ್ತಮವಾದುದು. ಈ ನಮಸ್ಕಾರ ಮಹಾಯಜ್ಞ ಸ್ವರೂಪವಾದುದು. 

ಸಂ: ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ. ಹಿರೇಕೆರೂರ(ಹೊಸಹಳ್ಳಿ)

No comments:

Post a Comment

If you have any doubts. please let me know...