October 22, 2024

ಶರಣ ಸತಿ ಲಿಂಗ ಪತಿ

  ಸಂಪೂರ್ಣವಾಗಿ ಶಿವನನ್ನೇ ಶರಣು ಹೋದ ಸಾಧಕನಿಗೆ 'ಶರಣ' ಎಂದು ಕರೆಯಲಾಗುತ್ತದೆ. ಶರಣಾಗತಿಯೇ 'ಈ ಶರಣನ ಜೀವಾಳ. ತನ್ನ ಎಲ್ಲ ಜವಾಬ್ದಾರಿಯನ್ನು ಭಗವಂತನಿಗೆ ಸಮರ್ಪಿಸಿ ತಾನು ನೆಮ್ಮದಿಯಿಂದ ಬದುಕುತ್ತಾನೆ ಈ ಶರಣ.

ಎನ್ನ ನಾಮ ಕ್ಷೇಮ ನಿಮ್ಮದಯ್ಯ
ಎನ್ನ ಹಾನಿ ವೃದ್ಧಿ ನಿಮ್ಮದಯ್ಯ" 
ಎನ್ನ ಮಾನಾಪಮಾನ ನಿಮ್ಮದಯ್ಯ 
ಬಳ್ಳಿಗೆ ಕಾಯಿ ದಿಮ್ಮಿ ಕೂಡಲಸಂಗಮದೇವ 
ಇದು ಶರಣನ ಭಾವ. ಈ ಸಾಧಕನಿಗೆ ನಿಶ್ಚಿಂತತೆ ಆಳವಟ್ಟು ಸುಖವು ಪ್ರಾಪ್ತವಾಗುವುದರಿಂದ ನನ್ನ ಬಗ್ಗೆ ನಾನೇಕೆ ಚಿಂತಿಸಬೇಕು. ಶಿವನಿಲ್ಲವೆ ಎಲ್ಲದಕ್ಕೂ? ಎಂದು ಭಾವಿಸಿ ಎಲ್ಲವನ್ನು ಶಿವನಿಗೆ ಸಮರ್ಪಿಸುತ್ತಾನೆ. ತಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಂತೆಯೆ ಸಿದ್ಧಾಂತ ಶಿಖಾಮಣಿಯಲ್ಲಿ...

ಅಂಗಲಿಂಗೀ ಜ್ಞಾನರೂಪಃ ಸತೀ ಜೇಯಃ ಶಿವಃ ಪತಿಃ । ಯತೌಖ್ಯಂ ತತ್ಸಮಾವೇಶೇ ತದ್ವಾನ್ ಶರಣನಾಮವಾನ್ | ಸತೀವ ರಮಣೀ ಯಸ್ತು ಶಿವೇ ಶಕ್ತಿಂ ವಿಭಾವಯನ್ । ತದನ್ಯವಿಮುಖ: ಸೋಯಂ ಜ್ಞಾತಃ ಶರಣನಾಮಾನ್ || ಎಂದಿದೆ.

ಶಿವನನ್ನು ಪತಿಯೆಂದು ತನ್ನನ್ನು ಸತಿ ಎಂದು ಭಾವಿಸಿ ಸತಿಪತಿಗಳ ಸಮಾಗಮದಿಂದ ಲಭಿಸುವ ಸುಖವನ್ನೇ ಆಧ್ಯಾತ್ಮಿಕವಾಗಿ ಈ ಸಾಧನೆಯಲ್ಲಿ ಅನುಭವಿಸುವ ಸಾಧಕನೇ ಶರಣ ಎಂದು ಹೇಳಲಾಗಿದೆ. ಸತಿಯು ತನ್ನದೆಲ್ಲವನ್ನು ತನ್ನ ಪತಿಗೆ ಸಮರ್ಪಿಸಿ ನಿಶ್ಚಿಂತಳಾಗುವಂತೆ ಎಲ್ಲವನ್ನು ಶಿವನಿಗೆ ಸಮರ್ಪಿಸುವ ಸಾಧಕನೇ ಶರಣ ಎಂಬುದಾಗಿ ತಿಳಿಸಿದ್ದಾರೆ.ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಮಹಿಳೆಯರು ನಿಶ್ಚಿಂತರಾಗಿರುತ್ತಾರೆ. ತಮ್ಮ ಜೀವನ ನಿರ್ವಹಣದೆ ಪೂರ್ಣ ಜವಾಬ್ದಾರಿಯನ್ನು ತಮ್ಮ ಪತಿಗೆ ಸಮರ್ಪಿಸಿರುವುದೆ ಅದಕ್ಕೆ ಕಾರಣ. ಪುರುಷರು ಅಷ್ಟು ನಿಶ್ಚಿಂತರಾಗಿರುವುದು ಕಂಡು ಬರುವುದಿಲ್ಲ. ಅವನ ಮೇಲೆ ಎಲ್ಲ ಜವಾಬ್ದಾರಿಯಿರುವುದರಿಂದ ಅದನ್ನು ನಿರ್ವಹಿಸುವುದಕ್ಕಾಗಿ ಒಂದಿಷ್ಟು ಓಡಾಡಬೇಕಾಗುತ್ತದೆ. ಗಳಿಸಬೇಕು, ಉಳಿಸಬೇಕು, ಬೆಳೆಸಬೇಕು ಈ ಎಲ್ಲ ಹಲವಾರು ಚಿಂತೆಗಳು ಪುರುಷರ ಮನದಲ್ಲಿ ತುಂಬಿರುತ್ತವೆ. ಮಹಿಳೆಗೆ ಮಾತ್ರ ಇದಾವುದರ ಕಡೆ ಗಮನ ಹರಿಸದೆ ತಂದದ್ದರಲ್ಲಿ ಒಂದಿಷ್ಟು ಅಡುಗೆ ಮಾಡಿ ಪತಿಗೆ ಉಣಿಸಿ ತಾನೂ ಉಂಡು ನೆಮ್ಮದಿಯಿಂದಿರುತ್ತಾಳೆ,

ಇದರಂತೆ ಶರಣನು ತಾನು ಪತಿಯೆಂದು ಭಾವಿಸಿದ ಶಿವನಿಗೆ ಎಲ್ಲವನ್ನು ಸಮರ್ಪಿಸಿ ತಾನು ನಿಶ್ಚಿಂತನಾಗುತ್ತಾನೆ. ಹೆಂಡತಿಯು ಗಂಡನ ಮನೆಗೆ ಬರುವಾಗ ಹುಟ್ಟಿ ಬೆಳೆದ ಮನೆ, ಕೂಡಿ ಆಡಿದ ಗೆಳತಿ, ಜನ್ಮಕೊಟ್ಟ ತಂದೆ-ತಾಯಿ, ಪ್ರೀತಿಸುವ ಬಂಧು-ಬಳಗ ಎಲ್ಲವನ್ನು ಬಿಟ್ಟು ಪತಿಯೇ ಪರದೈವ, ಅವನೇ ಅನನ್ಯಗತಿ ಎಂದು ಭಾವಿಸಿ ಪತಿಯ ಮನೆಯನ್ನು ಪ್ರವೇಶಿಸುತ್ತಾಳೆ. ಇದರಂತೆ ಪೂರ್ವಾಶ್ರಮದ ಎಲ್ಲವನ್ನು ಪರಿತ್ಯಜಿಸಿ ಶಿವನೇ ಸರ್ವಸ್ವವೆಂದು ಶರಣಾಗತನಾದ ಸಾಧಕನನ್ನೇ ಶರಣನೆಂದು ಕರೆಯಲಾಗಿದೆ. ಒಡೆತನ ಭಾವ ಮನುಷ್ಯನಿಗೆ ದುಃಖವನ್ನು ಕೊಡುತ್ತದೆ. ಅದನ್ನು ಬದಿಗಿರಿಸಿ ಸಹಜವಾಗಿ ಬದುಕುವುದರಿಂದ ನಿತ್ಯ ನೆಮ್ಮದಿ ದೊರೆಯುತ್ತದೆ. ಅಂಗಡಿಯಲ್ಲಿ ಒಂದೆಡೆ ಮಾಲಕ, ಇನ್ನೊಂದೆಡೆ ನೌಕರ ಕುಳಿತುಕೊಂಡಿರುತ್ತಾರೆ. ಮಾಲಕ ಗಲ್ಲಾಪೆಟ್ಟಿಗೆಯ ಬಳಿ ಸುಮ್ಮನೆ ಕುಳಿತಿರುವನು. ನೌಕರ ಮಾಲಿಕನ ಅಪ್ಪಣೆಯನ್ನು ಚಾಚೂ ತಪ್ಪದೆ ನಡೆಸುತ್ತ ಕೆಲಸದಲ್ಲಿ ತೊಡಗಿಕೊಂಡಿರುತ್ತಾನೆ. ಅಂಗಡಿಯ ಜವಾಬ್ದಾರಿ ಮತ್ತು ಒಡೆತನ ಮಾಲಕನಿಗಿರುವುದರಿಂದ ಗಲ್ಲಾಪೆಟ್ಟಿಗೆಯಲ್ಲಿ ಹಣ ಬಂದರೆ ಸಂತೋಷವು, ಬರದಿದ್ದರೆ ದುಃಖವೂ ಉಂಟಾಗುತ್ತದೆ. ಆದರೆ ಸೇವಕ ಮಾತ್ರ ಹಣ ಬಂದಾಗಲೂ ಅಷ್ಟೇ, ಬರದಿದ್ದಾಗಲೂ ಅಷ್ಟೇ ತನ್ನ ಕರ್ತವ್ಯವನ್ನು ನಿರ್ವಹಿಸುತ್ತ ನಿಶ್ಚಿಂತನಾಗಿರುತ್ತಾನೆ. ಏಕೆಂದರೆ ಅವನಲ್ಲಿ ಒಡೆತನವಾಗಲಿ ಅಂಗಡಿಯ ಜವಾಬ್ದಾರಿಯಾಗಲಿ ಇರುವುದಿಲ್ಲ. ಹಣ ಬಂದಾಗ ಅವನಿಗೆ ಲಾಭವೂ ಇಲ್ಲ ಬಾರದಿದ್ದಾಗ ಹಾನಿಯೂ ಇಲ್ಲ. ಅವನಿಗೆ ಬರುವ ವೇತನ ಬಂದೇ ಬರುತ್ತದೆ.
ಶ್ರೀ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು. ಶ್ರೀಶೈಲ ಪೀಠ.


No comments:

Post a Comment

If you have any doubts. please let me know...